ಜಪಾನ್ ಪ್ರಧಾನಿ ಶಿಂಜೊ ಅಬೆ ಅವರಿಗೀಗ 66ರ ಹರೆಯ. 26ನೇ ಡಿಸೆಂಬರ್ 2012ರಿಂದ ಪ್ರಧಾನಿ ಗಾದಿಯಲ್ಲಿರುವ ಅಬೆ, ಅನಾರೋಗ್ಯದ ಕಾರಣ ಮುಂದೊಡ್ಡಿ ಶುಕ್ರವಾರ ರಾಜೀನಾಮೆ ನೀಡಿರುವುದು ತಿಳಿದಿರುವ ವಿಷಯವೇ ಸರಿ. ಒಂದು ವಾರದಲ್ಲಿ ಎರಡು ಬಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ನಂತರ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಈಚೆಗಷ್ಟೇ ಅಬೆ ಅವರು ಜಪಾನ್‌ನಲ್ಲಿ ದೀರ್ಘಕಾಲ ಆಳ್ವಿಕೆ ನಡೆಸಿದ ಪ್ರಧಾನಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. 1964ರಿಂದ 1972ರವರೆಗೆ ಜಪಾನ್‌ನಲ್ಲಿ ಆಳ್ವಿಕೆ ನಡೆಸಿದ್ದ ಇಸಾಕು ಸಾಟೊ ಈವರೆಗೆ ಜಪಾನ್‌ನಲ್ಲಿ ದೀರ್ಘಕಾಲ ಆಳ್ವಿಕೆ ನಡೆಸಿದ ಪ್ರಧಾನಿ ಎಂಬ ಶ್ರೇಯ ಹೊಂದಿದ್ದರು.
ಅಬೆ ಅವರ ಆರೋಗ್ಯ ಮತ್ತು ಅವರು ಇನ್ನೆಷ್ಟು ಕಾಲ ಉನ್ನತ ಸ್ಥಾನದಲ್ಲಿದ್ದು ಆಳ್ವಿಕೆ ನಡೆಸಲು ಸಾಧ್ಯ ಎಂಬ ಬಗ್ಗೆ ಕಳೆದ ಕೆಲ ವಾರಗಳಿಂದ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿತ್ತು. ಆದರೆ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷವು ಇವೆಲ್ಲವೂ ಆಧಾರರಹಿತ ಗಾಳಿಮಾತು ಎಂದು ತಳ್ಳಿಹಾಕಿತ್ತು. ಅಬೆ ಪೂರ್ಣಾವಧಿಅಧಿಕಾರ ನಡೆಸುತ್ತಾರೆ ಎಂದು ಹೇಳಿತ್ತು. 2021ರ ಸೆಪ್ಟೆಂಬರ್‌ಗೆ ಅವರ ಅಧಿಕಾರ ಅವಧಿ ಮುಗಿಯುತ್ತಿತ್ತು.
ಜಪಾನ್ ಪ್ರಧಾನಿ ಶಿಂಜೊ ಅಬೆ ರಾಜೀನಾಮೆ ನೀಡಿದ್ದೇಕೆ?
ಸ್ಥಳೀಯ ವರದಿಗಳ ಪ್ರಕಾರ ಅಬೆ ಅವರಿಗೆ 'ಅಲ್ಸರ್ ಕೊಲಿಟಿಸ್' ಹೆಸರಿನ ಕಾಯಿಲೆಯಿದೆ. ದೊಡ್ಡಕರುಳಿನ ಒಳಗೋಡೆಯಲ್ಲಿಹುಣ್ಣು ಕಾಣಿಸಿಕೊಳ್ಳುವ ಈ ಕಾಯಿಲೆಯು ಅಬೆ ಅವರಿಗೆ ಹದಿಹರೆಯಲ್ಲಿಯೇ ಶುರುವಾಗಿತ್ತು. ಆದರೆ ಈಚಿನ ದಿನಗಳಲ್ಲಿ ಕಾಯಿಲೆ ಉಲ್ಬಣಿಸಿತ್ತು. ಈ ಬಾರಿ ಅಬೆ ರಾಜೀನಾಮೆ ನೀಡಲು ಇದು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.
ಪ್ರಧಾನಿಯಾಗಿದ್ದ ಮೊದಲ ಅವಧಿಯಲ್ಲಿ ಅಧಿಕಾರ ಸ್ವೀಕರಿಸಿದ ಕೇವಲ ಒಂದು ವರ್ಷದ ನಂತರ, ಅಂದರೆ 2007ರಲ್ಲಿ ಅಬೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಆಗ ಅಬೆ ಅವರು ರಾಜೀನಾಮೆ ನೀಡಲು ವಿದೇಶ ಮತ್ತು ಸ್ವದೇಶದ ಹಲವು ವಿದ್ಯಮಾನಗಳು ಕಾರಣ ಎಂದು ರಾಜಕೀಯ ಚಿಂತಕರು ವಿಶ್ಲೇಷಿಸಿದ್ದರು. ಅಫ್ಗಾನಿಸ್ತಾನದ ಮೇಲೆ ಅಮೆರಿಕ ನಡೆಸಿದ ಆಕ್ರಮಣಕ್ಕೆ ಜಪಾನ್ ಸಹಕರಿಸಿದ್ದ ವಿಚಾರ ದೇಶದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದರ ಜೊತೆಗೆ ಅಬೆ ಅವರ ಕೆಲ ರಾಜಕೀಯ ಸಹವರ್ತಿಗಳು ಹಗರಣಗಳಲ್ಲಿ ಸಿಲುಕಿದ್ದರು. ಚುನಾವಣೆಗಳಲ್ಲಿ ಅಬೆ ಅವರ ಲಿಬರಲ್ ಡೆಮಾಕ್ರಟಿಕ್ ಪಕ್ಷಕ್ಕೆ ವ್ಯಾಪಕ ಹಿನ್ನಡೆಯಾಗಿತ್ತು.
ಈ ಸವಾಲುಗಳ ಜೊತೆಗೆ ಅಬೆ ಅವರ ಆರೋಗ್ಯ ಸ್ಥಿತಿಯೂ ರಾಜೀನಾಮೆ ನಿರ್ಧಾರಕ್ಕೆ ಕಾರಣ ಎಂದು ಕೆಲ ವರ್ಷಗಳ ನಂತರ ವಿಶ್ಲೇಷಕರು ಅಂದಾಜಿಸಿದರು. ರಾಜೀನಾಮೆ ಹೇಳಿಕೆ ನೀಡುವ ಸಂದರ್ಭ ಅಬೆ ಅವರು ಬಳಸಿದ್ದ 'ಸುಸ್ತಾಗಿದ್ದೇನೆ' (ಟೈರ್ಡ್) ಪದವನ್ನು ವಿಶ್ಲೇಷಕರು ವಿಶೇಷ ಗಮನಕೊಟ್ಟು ಗಮನಿಸಿದ್ದರು.
ಇದನ್ನೂ ಓದಿ:ಚೀನಾ ಪ್ರಾಬಲ್ಯಕ್ಕೆ ಕಡಿವಾಣ-ಶಿಂಜೊ, ಮೋದಿ ಚಿಂತನೆ
ಅಬೆ ಅವರ ಆಡಳಿತಾವಧಿ ಹೇಗಿತ್ತು?
ಯಥಾಸ್ಥಿತಿವಾದದ ಮನಃಸ್ಥಿತಿಯಿದ್ದ ರಾಜಕಾರಿಣಿ ಎಂದು ಅಬೆ ಅವರನ್ನು ಗುರುತಿಸುತ್ತಾರೆ. ರಾಷ್ಟ್ರೀಯವಾದ ಅವರಿಗೆ ಪ್ರಿಯವಾಗಿತ್ತು. ಇತಿಹಾಸ ಮರುಕಳಿಸುವ ಚಿಂತನೆಯನ್ನೂ ಆಗಾಗ ಬಿಂಬಿಸುತ್ತಿದ್ದರು.
ಅಬೆ ಅವರ ಈ ಚಿಂತನೆಗಳು ದೇಶೀಯ ಮತ್ತು ವಿದೇಶಿ ನೀತಿ ನಿರೂಪಣೆ ಸಂದರ್ಭದಲ್ಲಿ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳಲ್ಲಿಯೂ ಸಹಜವಾಗಿಯೇ ಇಣುಕುತ್ತಿದ್ದವು. ಜಪಾನ್‌ನ ವಸಾಹತುಶಾಹಿ ಇತಿಹಾಸದ ಬಗ್ಗೆ, ಯುದ್ಧಕಾಲದಲ್ಲಿ ಜಪಾನ್ ಸೈನಿಕರು ನಡೆಸಿದ ಲೈಂಗಿಕ ದೌರ್ಜನ್ಯಗಳು ಹಿಂಸೆಗಳ ಬಗ್ಗೆ ಅವರು ಗಾಢ ವಿಷಾದವನ್ನೇನು ವ್ಯಕ್ತಪಡಿಸಿರಲಿಲ್ಲ.ಅವರ ಇಂಥ ವರ್ತನೆಯನ್ನು ಅವರುಮೊದಲ ಬಾರಿಗೆ ಪ್ರಧಾನಿಯಾದ 2012ರಿಂದಲೂ ಗುರುತಿಸಬಹುದು.
ಅಬೆ ಆಡಳಿತಾವಧಿಯಲ್ಲಿ ಜಪಾನ್‌ನಲ್ಲಿ ಆರ್ಥಿಕ ಸುಧಾರಣೆಗಳೂ ವೇಗ ಪಡೆದುಕೊಂಡವು. ಅವರ ಆರ್ಥಿಕ ನೀತಿಯನ್ನು'ಅಬೆನಾಮಿಕ್ಸ್' ಎಂದೇ ಕರೆಯಲಾಗುತ್ತದೆ. ಜಪಾನ್‌ನ ಆರ್ಥಿಕ ಪುನರುಜ್ಜೀವನ, ಆರ್ಥಿಕತೆಯ ವಿನ್ಯಾಸದಲ್ಲಿಯೇ ಸುಧಾರಣೆಗಳಿಗೆ ಒತ್ತು, ಜನರ ಕೈಗೆ ಸುಲಭವಾಗಿ ಹಣ ಸಿಗುವಂತೆ ಮಾಡುವ ಯತ್ನ, ವಿತ್ತೀಯ ಸಾಮರ್ಥ್ಯದ ಹೆಚ್ಚಳಗಳ ಹಿಂದೆ ದೇಶೀಯ ಬೇಡಿಕೆ ಸುಧಾರಿಸುವ ಉದ್ದೇಶವೂ ಇತ್ತು.
ಅಬೆ ಅವರ ವಿದೇಶಾಂಗ ನೀತಿಯಲ್ಲಿ ಗಮನ ಸೆಳೆವ ಅಂಶ ಅವರು ಉತ್ತರ ಕೋರಿಯಾವನ್ನು ನಿರ್ವಹಿಸಿದ ರೀತಿ. ಹಿಂದಿನ ಆಡಳಿತಗಾರರಿಗಿಂತಲೂ ಹೆಚ್ಚು ಬಿಗುವಾಗಿ ಅವರು ಉತ್ತರ ಕೋರಿಯಾ ಜೊತೆಗೆ ವ್ಯವಹರಿಸಿದ್ದರು.ಭಾರತ, ಆಸ್ಟ್ರೇಲಿಯಾ ಮತ್ತುಆಸಿಯಾನ್ ದೇಶಗಳಾದ ಇಂಡೊನೇಷ್ಯಾ, ಮಲೇಷ್ಯಾ, ಪಿಲಿಪ್ಪೀನ್ಸ್, ಸಿಂಗಪುರ, ಥಾಯ್ಲೆಂಡ್‌ಗಳೊಂದಿಗೆ ರಾಜತಾಂತ್ರಿಕ ಸಂಬಂಧ ಸುಧಾರಿಸಲು ಅವಿರತ ಶ್ರಮಿಸಿದರು.ಈ ವಲಯದಲ್ಲಿ ಚೀನಾದ ಪ್ರಭಾವ ತಗ್ಗಿಸುವ ಉದ್ದೇಶ ಇಂಥ ಯತ್ನಗಳ ಹಿಂದೆ ಇತ್ತು. ದಕ್ಷಿಣ ಕೊರಿಯಾದೊಂದಿಗೆ ಗಡಿ ಮತ್ತು ಕೆಲ ರಾಜತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅಬೆ ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಸಂಬಂಧ ಹಳಸದಂತೆ ಜಾಗರೂಕತೆಯಿಂದ ನಡೆದುಕೊಂಡಿದ್ದು ವಿಶೇಷ.
ಅಬೆ ಅವಧಿಯಲ್ಲಿ ಭಾರತದೊಂದಿಗೂ ಜಪಾನ್ ಸಂಬಂಧ ಗಮನಾರ್ಹ ಪ್ರಮಾಣದಲ್ಲಿ ಸುಧಾರಿಸಿತು. ಭಾರತದ ಗಣರಾಜ್ಯೋತ್ಸವಕ್ಕೆ ಭೇಟಿ ನೀಡಿದ ಮೊದಲ ಜಪಾನ್ ಪ್ರಧಾನಿ ಎಂಬ ಶ್ರೇಯವೂ ಅಬೆ ಅವರದ್ದಾಗಿತ್ತು.
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಜೊತೆಗೆ ಸಂಘರ್ಷಗಳಿದ್ದರೂ ಸಂಬಂಧ ಸುಧಾರಣೆಗೆ ಅಬೆ ತಮ್ಮದೇ ಆದ ರೀತಿಯಲ್ಲಿ ಯತ್ನಿಸಿದ್ದರು. 2014ರ ನಂತರ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಸಂದರ್ಭ ಟೋಕಿಯೊ ಮತ್ತು ಬೀಜಿಂಗ್ ನಡುವೆ ಹಾಟ್‌ಲೈನ್ ಸಂಪರ್ಕ ಸ್ಥಾಪಿಸುವ ಪ್ರಸ್ತಾವವನ್ನೂ ಮುಂದಿಟ್ಟಿದ್ದರು. ಸಮುದ್ರದ ಗಡಿ ವಿಚಾರದಲ್ಲಿ ಇರುವ ತಕರಾರುಗಳನ್ನು ಚರ್ಚೆಯ ಮೂಲಕ ಪರಿಹರಿಸಿಕೊಳ್ಳಬೇಕು ಎನ್ನುವುದು ಅಬೆ ಅವರ ಉದ್ದೇಶವಾಗಿತ್ತು.
ಕೊರೊನಾ ವೈರಸ್ ಪಿಡುಗನ್ನು ಅಬೆ ನಿರ್ವಹಿಸಿದ ರೀತಿಯ ಬಗ್ಗೆ ಜಪಾನ್‌ನಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದವು. 2020ರ ಒಲಿಂಪಿಕ್ಸ್ ಜಪಾನ್‌ನಲ್ಲಿಯೇ ನಡೆಯಬೇಕಿತ್ತು. ಆದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ಕ್ರೀಡಾಕೂಟವನ್ನು 2021ರ ಬೇಸಿಗೆಗೆ ಮುಂದೂಡಬೇಕಾಯಿತು. ಅಬೆ ಮತ್ತು ಅವರ ಆಡಳಿತದ ಹಿರಿಯ ಅಧಿಕಾರಿಗಳಿಗೆ ಜಪಾನ್‌ನಲ್ಲಿಒಲಿಂಪಿಕ್ಸ್ ಕ್ರೀಡಾಕೂಟ ನಡೆಸುವುದು ಪ್ರತಿಷ್ಠೆಯ ವಿಚಾರವಾಗಿತ್ತು.ನಿಗದಿಯಾಗಿರುವ ಸಮಯದ ಒಳಗೆ ಕೊರೊನಾಗೆ ಲಸಿಕೆ ಸಿಕ್ಕರೆ ಮಾತ್ರ ಜಪಾನ್‌ನ ಕನಸು ನನಸಾದೀತು.
ಜಪಾನ್ ಸಂವಿಧಾನದ 9ನೇ ಪರಿಚ್ಛೇದದ ಬಗ್ಗೆ ಅಬೆ ಅವರ ನಿಲುವು ಏನಿತ್ತು?
ಜಪಾನ್ ಸಂವಿಧಾನದ9ನೇ ಪರಿಚ್ಛೇದವು ದೇಶದ ಭದ್ರತೆ ಮತ್ತು ರಕ್ಷಣೆಯ ವಿಚಾರಗಳನ್ನು ನಿರ್ದೇಶಿಸುತ್ತದೆ. 2ನೇ ಮಹಾಯುದ್ಧದಲ್ಲಿ ಜಪಾನ್ ಸೋತಿದ್ದ ಅವಧಿಯಲ್ಲಿ ಅಮೆರಿಕದ ನಿರ್ದೇಶನದ ಮೇರೆಗೆ ರೂಪುಗೊಂಡಈ ಪರಿಚ್ಛೇದ 1947ರ ಮೇ ತಿಂಗಳಲ್ಲಿ ಜಪಾನ್ ಸಂವಿಧಾನಕ್ಕೆ ಸೇರ್ಪಡೆಯಾಗಿತ್ತು. ಈ ಪರಿಚ್ಛೇದವನ್ನುಜಪಾನ್‌ನ ಹಿತಕ್ಕೆ ಪೂರಕವಾಗಿ ಬದಲಿಸಲುತಮ್ಮ ಆಡಳಿತ ಅವಧಿಯುದ್ದಕ್ಕೂ ಅಬೆ ಶ್ರಮಿಸಿದರು.
'ನ್ಯಾಯಸಮ್ಮತ ಮತ್ತು ಸುವ್ಯವಸ್ಥೆಗೆ ಅನುಗುಣವಾಗಿ ವಿಶ್ವಶಾಂತಿ ಬಯಸುವ ರಾಷ್ಟ್ರವಾದ ಜಪಾನಿನ ಜನರು ಎಂದಿಗೂ ಯಾವುದೇ ದೇಶದ ಮೇಲೆ ಯುದ್ಧ ಘೋಷಿಸುವುದನ್ನು ದೇಶದ ಪರಮಾಧಿಕಾರ ಎಂದು ಭಾವಿಸುವುದಿಲ್ಲ. ಅಂತರರಾಷ್ಟ್ರೀಯ ವಿವಾದಗಳನ್ನು ಪರಿಹರಿಸಲು ಎಂದಿಗೂ ಬಲಪ್ರಯೋಗ ಮಾಡುವುದಿಲ್ಲ' ಎಂದು ಜಪಾನ್ ಸಂವಿಧಾನದ 9ನೇ ಪರಿಚ್ಛೇದ ಹೇಳುತ್ತದೆ.
ಈ ಪರಿಚ್ಛೇದವು ಊರ್ಜಿತದಲ್ಲಿರುವಷ್ಟು ಕಾಲವೂ ಜಪಾನ್‌ಗೆ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯನ್ನು ಅಧಿಕೃತವಾಗಿ ಹೊಂದಲು ಅವಕಾಶವಿರುವುದಿಲ್ಲ. ಆದರೆ ಸ್ವಯಂ ರಕ್ಷಣೆಗಾಗಿ ಭದ್ರತಾ ಪಡೆ ಹೊಂದುವ ಅವಕಾಶ ಜಪಾನ್‌ಗೆ ಇದ್ದೇಇದೆ. ಈ ಸ್ವಯಂ ರಕ್ಷಣಾ ಪಡೆಯೇ ಸದ್ಯದ ಮಟ್ಟಿಗೆ ಜಪಾನ್‌ನ ಮಿಲಿಟರಿ ಶಕ್ತಿಯೂ ಹೌದು ಎಂದು ಟೀಕಾಕಾರರು ಹೇಳುತ್ತಾರೆ. ವಿಶ್ವದಲ್ಲಿ ರಕ್ಷಣೆಗೆ ಅತಿಹೆಚ್ಚು ವ್ಯಯಿಸುವ ದೇಶಗಳ ಪಟ್ಟಿಯಲ್ಲಿ ಜಪಾನ್ ಮುಂಚೂಣಿಯಲ್ಲಿದೆ.
ಈ ಪರಿಚ್ಛೇದ ಬದಲಿಸುವ ಅಬೆ ಪ್ರಯತ್ನಕ್ಕೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಆದರೆ 2014ರಲ್ಲಿ ಇದೇ ಪರಿಚ್ಛೇದವನ್ನು ಹೊಸ ರೀತಿಯಲ್ಲಿ ವ್ಯಾಖ್ಯಾನಿಸುವ ಮೂಲಕ ಸ್ವಯಂ ಭದ್ರತಾ ಪಡೆಗಳಿಗೆ ಹೆಚ್ಚಿನ ಅಧಿಕಾರ ಸಿಗುವ ಅವಕಾಶವನ್ನು ಅಬೆ ದಕ್ಕಿಸಿಕೊಂಡರು. ಅಬೆ ಅವರ ಈ ಯತ್ನಕ್ಕೆ ಒತ್ತಾಸೆಯಾಗಿ ನಿಂತಿದ್ದು ಅಮೆರಿಕ. ಆದರೆ ಜಪಾನ್‌ನ ಈ ಬೆಳವಣಿಗೆಗಳಿಗೆ ನೆರೆಯ ದಕ್ಷಿಣ ಕೊರಿಯಾ, ಉತ್ತರ ಕೊರಿಯಾ ಮತ್ತು ಚೀನಾಗಳ ತೀವ್ರ ವಿರೋಧವಿತ್ತು.
ಜಪಾನ್ ರಾಜಕಾರಣದ ಮುಂದಿನ ನಡೆ
ಬಿಬಿಸಿಯ ವರದಿಯೊಂದು ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ ಶಿಂಜೊ ಅಬೆ ಅಧಿಕಾರದಿಂದ ಕೆಳಗಿಳಿದ ನಂತರ ಹಂಗಾಮಿ ಪ್ರಧಾನಿಯೊಬ್ಬರು ಅಧಿಕಾರಕ್ಕೆ ಬರಬೇಕು. ಹಂಗಾಮಿ ಪ್ರಧಾನಿಯ ಅಧಿಕಾರ ಅವಧಿ ನಿರ್ದಿಷ್ಟವಾಗಿ ಇಷ್ಟೇ ದಿನ ಎಂದು ಹೇಳಲು ಸಾಧ್ಯವಿಲ್ಲ. ಜಪಾನ್‌ನ ಹಣಕಾಸು ಸಚಿವರೂ ಆಗಿರುವ ಉಪ ಪ್ರಧಾನಿ ಟಾರೊ ಅಸೊ ಅವರು ಶಿಂಜೊ ಅಬೆ ಉತ್ತರಾಧಿಕಾರಿ ಆಗಬಹುದು ಎಂದು ಹೇಳಲಾಗುತ್ತಿದೆ. ಸಂಪುಟ ಕಾರ್ಯದರ್ಶಿ ಯೊಶಿಹಿಡೆ ಸುಗ ಅವರ ಹೆಸರು ಸಹಕೇಳಿಬರುತ್ತಿದೆ.
ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯಲಿದೆ. ಅಲ್ಲಿ ಆಯ್ಕೆಯಾಗುವ ಹೊಸ ನಾಯಕ ಮುಂದಿನ ದಿನಗಳಲ್ಲಿ ಹಂಗಾಮಿ ಪ್ರಧಾನಿ ಆಗಬಹುದು. ಹಂಗಾಮಿ ಪ್ರಧಾನಿಗೆ ಸಾರ್ವತ್ರಿಕ ಚುನಾವಣೆ ಮುಂದೂಡಲು ಅಧಿಕಾರ ಇಲ್ಲ. ಆದರೆ ಅಂತರರಾಷ್ಟ್ರೀಯ ಒಪ್ಪಂದಗಳು ಮತ್ತು ಬಜೆಟ್‌ಗಳಿಗೆ ಅಂಕಿತ ಹಾಕುವ ಅಧಿಕಾರ ಇರುತ್ತದೆ.
(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು, ಬರಹ: ಡಿ.ಎಂ.ಘನಶ್ಯಾಮ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.