ದೇಶವು ಸ್ವಾತಂತ್ರ್ಯಗೊಂಡ ಕೆಲವೇ ತಿಂಗಳಲ್ಲಿ ಹುಟ್ಟಿಕೊಂಡ ಪ್ರಜಾವಾಣಿ ಪತ್ರಿಕೆಯು, ಕರ್ನಾಟಕ ಏಕೀಕರಣ ಹೋರಾಟದ ಸಂದರ್ಭದಲ್ಲಿ ಅಂಬೆಗಾಲಿಕ್ಕಿ ಮುಂದಕ್ಕೆ ಸಾಗುತ್ತಿತ್ತು. ಏಕೀಕರಣ ಚಳವಳಿಯ ಸಂದರ್ಭದಲ್ಲಿ ಹೋರಾಟದ ಬಗೆಗಿನ ಸುದ್ದಿಯನ್ನು ಹೆಚ್ಚು ಮಹತ್ವ ಕೊಟ್ಟು ಪತ್ರಿಕೆಯು ಪ್ರಕಟಿಸಿದೆ. ಸುತ್ತಲಿನ ರಾಜ್ಯಗಳಲ್ಲಿ ಚದುರಿ ಹೋಗಿದ್ದ, ಕನ್ನಡ ಭಾಷೆ ಮಾತನಾಡುವ ಪ್ರದೇಶಗಳು ಒಂದಾಗಬೇಕಾದ ಕುರಿತು ಜನಜಾಗೃತಿ ಮೂಡಿಸುವ ಕೆಲಸವನ್ನು ಪತ್ರಿಕೆಯು ಆ ದಿನಗಳಲ್ಲಿ ಮಾಡಿತ್ತು. ಹೋರಾಟ ಆರಂಭಗೊಂಡ ಕೆಲವೇ ತಿಂಗಳಲ್ಲಿ ಹೋರಾಟಕ್ಕೆ ಯಶಸ್ಸು ದೊರೆಯಲು ಜನರಲ್ಲಿ ಮೂಡಿದ್ದ ಜಾಗೃತಿಯೂ ಒಂದು ಕಾರಣ. 1956ರ ನವೆಂಬರ್ 1ರಂದು ‘ಚೆಲುವ ಕನ್ನಡ ನಾಡಿನ ಉದಯ’ವಾಯಿತು. ‘ಚೆಲುವ ಕನ್ನಡ ನಾಡಿನ ಉದಯವಾಯಿತು’ ಎಂಬುದೇ ಅಂದಿನ ಪತ್ರಿಕೆಯ ಮುಖಪುಟದ ಸುದ್ದಿಯ ಶೀರ್ಷಿಕೆಯಾಗಿತ್ತು.
ಕನ್ನಡ ರಾಜ್ಯೋತ್ಸವದ ಮೊದಲ ವಾರ್ಷಿಕೋತ್ಸವವನ್ನು 1957ರಲ್ಲಿ ಪ್ರಜಾವಾಣಿ ಕಚೇರಿಯಲ್ಲಿ ಸಡಗರದಿಂದಲೇ ಆಚರಿಸಿದ್ದು ಕನ್ನಡದ ಕುರಿತು ಪತ್ರಿಕೆಯು ಇರಿಸಿದ್ದ ಕಕ್ಕುಲಾತಿಯ ಪ್ರತೀಕವಷ್ಟೇ ಅಲ್ಲ, ಸರ್ಕಾರವು ಅದನ್ನು ಆಚರಿಸಿಲ್ಲ ಎಂಬುದರ ವಿರುದ್ಧದ ಪ್ರತಿಭಟನೆಯೂ ಆಗಿತ್ತು. ‘ಕನ್ನಡ ರಾಜ್ಯೋದಯ ವಾರ್ಷಿಕೋತ್ಸವ ರಾಜ್ಯದ ಎಲ್ಲೆಲ್ಲೂ ಭಾರಿ ಉತ್ಸಾಹದಿಂದ ಮತ್ತು ಅಧಿಕೃತವಾಗಿ ನಡೆಯಬೇಕಿತ್ತೆಂದೂ, ಆದರೆ ಆ ರೀತಿ ಉತ್ಸವ ನಡೆಯುತ್ತಿಲ್ಲವೆಂದೂ’ ಆಗ ಸಂಪಾದಕರಾಗಿದ್ದ ಟಿ.ಎಸ್. ರಾಮಚಂದ್ರರಾವ್ ಅವರು ಸಮಾರಂಭದಲ್ಲಿ ಬೇಸರ ವ್ಯಕ್ತಪಡಿಸಿದ್ದು ಪತ್ರಿಕೆಯಲ್ಲಿ ವರದಿಯಾಗಿತ್ತು.
ನಾಡು ನುಡಿಯ ಪರವಾದ ಚಳವಳಿ, ಹೋರಾಟಗಳಿಗೆ ನಾಡಿನ ಪತ್ರಿಕೆಗಳು ಧ್ವನಿಯಾಗಲೇಬೇಕು. ಈ ಹೊಣೆಗಾರಿಕೆಯನ್ನು ನಿರ್ವಹಿಸುವಲ್ಲಿ ಪ್ರಜಾವಾಣಿಯು ಎಂದೂ ಹಿಂಜರಿದದ್ದೇ ಇಲ್ಲ. ಅತೀವ ಎಚ್ಚರದಲ್ಲಿಯೇ ಹೋರಾಟ ಮತ್ತು ಚಳವಳಿಗಳನ್ನು ಮುಖಾಮುಖಿಯಾಗಿದೆ. ಎಚ್ಚರಿಕೆಯ ಮಾತುಗಳ ಮೂಲಕ ಚಳವಳಿಯ ಬೌದ್ಧಿಕ ಎಚ್ಚರವು ಸದಾ ಎತ್ತರದಲ್ಲಿಯೇ ಇರಲು ನೆರವಾಗಿದೆ. ಕನ್ನಡದ ಇತಿಹಾಸದಲ್ಲಿ ಗೋಕಾಕ ಚಳವಳಿಯದ್ದು ಅಚ್ಚಳಿಯದ ಪಾತ್ರ. ಶಾಲಾ ಶಿಕ್ಷಣದಲ್ಲಿ ಸಂಸ್ಕೃತ ಹೇರಿಕೆಯ ವಿರುದ್ಧ ಮತ್ತು ಕನ್ನಡಕ್ಕೆ ಮೊದಲ ಸ್ಥಾನ ನೀಡುವುದಕ್ಕಾಗಿ 1982ರ ಏಪ್ರಿಲ್ 2ರಂದು ಚಳವಳಿ ಆರಂಭಗೊಂಡಿತು. ಚಳವಳಿ ಆರಂಭದ ಮುನ್ನಾದಿನವಾದ ಏಪ್ರಿಲ್ 1ರ ಪ್ರಜಾವಾಣಿಯಲ್ಲಿ ಚಳವಳಿ ಕುರಿತು ಮೂರು ಸುದ್ದಿಗಳು ಪ್ರಕಟವಾಗಿದ್ದವು.
ಗೋಕಾಕ ಚಳವಳಿಯ ಸಂದರ್ಭದಲ್ಲಿ, ಕೆ.ಎನ್. ಹರಿಕುಮಾರ್ ಅವರು ‘ಭಾಷೆ ಮತ್ತು ಪ್ರಜಾಪ್ರಭುತ್ವ’ ಎಂಬ ಶೀರ್ಷಿಕೆಯ ಲೇಖನವನ್ನು ಬರೆದು ಮೂರು ಕಂತುಗಳಲ್ಲಿ ಪ್ರಕಟಿಸಿದ್ದರು. ಭಾಷೆಗೆ ಸಂಬಂಧಿಸಿದ ಚಳವಳಿಯು ಭಾಷಾ ದುರಭಿಮಾನ ಆಗಬಾರದು ಎಂಬ ಎಚ್ಚರದ ಧ್ವನಿಯು ಈ ಲೇಖನದಲ್ಲಿ ಇತ್ತು. ಭಾಷೆಯ ಕುರಿತು ಸುದೀರ್ಘ ಚರ್ಚೆಗೆ ಈ ಲೇಖನವು ಕಾರಣವಾಯಿತು. ಆಗ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿದ್ದ ಹಂಪ ನಾಗರಾಜಯ್ಯ ಅವರು ಬರೆದ ‘ಸಮಂಜಸವಲ್ಲದ ಸಂದೇಹಗಳು’ ಎಂಬ ದೀರ್ಘ ಪತ್ರವು ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ಹರಿಕುಮಾರ್ ಅವರ ಲೇಖನದಲ್ಲಿ ಇದ್ದ ಸಂದೇಹಗಳಿಗೆ ನಾಗರಾಜಯ್ಯ ಅವರು ಸ್ಪಷ್ಟೀಕರಣಗಳನ್ನು ನೀಡಿದ್ದರು.
ಆದರೆ, ಹರಿಕುಮಾರ್ ವ್ಯಕ್ತಪಡಿಸಿದ್ದ ಅಭಿಪ್ರಾಯಗಳಿಗೆ ದೊಡ್ಡಮಟ್ಟದ ಬೆಂಬಲವೂ ವ್ಯಕ್ತವಾಗಿತ್ತು.
ಸಾಹಿತಿ ಯು.ಆರ್. ಅನಂತಮೂರ್ತಿ ಅವರು ಬರೆದ ‘ಭಾಷೆ ಮತ್ತು ಸಂಸ್ಕೃತಿ’ ಎಂಬ ಲೇಖನವು ಸಂಪಾದಕೀಯ ಪುಟದಲ್ಲಿ ಏಪ್ರಿಲ್ 10ರಂದು ಪ್ರಕಟವಾಗಿ ಹರಿಕುಮಾರ್ ಅವರು ಎತ್ತಿದ್ದ ಕಳವಳಗಳ ಕುರಿತ ಚರ್ಚೆಯು ಎಷ್ಟು ಅಗತ್ಯವಾಗಿದೆ ಎಂಬುದರತ್ತ ಬೆಳಕು ಚೆಲ್ಲಿತು. ‘ಗೋಕಾಕ ವರದಿಯಿಂದ ವಿವಾದ ಎದ್ದಿರುವುದಕ್ಕೆ ಮುಖ್ಯ ಕಾರಣವೆಂದರೆ ಭಾಷಾ ಅಲ್ಪಸಂಖ್ಯಾತರಿಗೆ ತಾವು ಇಂಗ್ಲಿಷ್ ಕಲಿಕೆಯಿಂದ ವಂಚಿತರಾಗಿಬಿಡಬಹುದೆಂಬ ಆತಂಕ. ಇದು ಸಹಜವಾದ ಆತಂಕವೇ’ ಎಂದು ಅನಂತಮೂರ್ತಿ ಬರೆದಿದ್ದರು.
‘ಗೋಕಾಕ ಸಮಿತಿಯ ವರದಿಯನ್ನು ಬೆಂಬಲಿಸುತ್ತಿರುವ ಸಾಹಿತಿ ಮಿತ್ರರು ನಾಡಿನ ಸಾಂಸ್ಕೃತಿಕ ಸಮಸ್ಯೆಗಳನ್ನು ಕಡೆಗಣಿಸಿದ್ದಾರೆ. ಚಳವಳಿ ಮೇಲುನೋಟಕ್ಕೆ ಆಕರ್ಷಕವಾಗಿ ತೋರುತ್ತಿದ್ದರೂ ಆಂತರ್ಯದಲ್ಲಿ ಭಾಷಾ ವಿದ್ವೇಷಕ್ಕೂ ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗೆ ವಿರೋಧವಾಗಿರುವುದನ್ನು ಸಂವೇದನಾಶೀಲರೆಲ್ಲರೂ ಆಲೋಚಿಸುವುದಕ್ಕೆ ತಕ್ಕುದಾಗಿದೆ’ ಎಂಬ ವಾದವನ್ನು ಮುಂದಿಟ್ಟ ಸುದೀರ್ಘ ಪತ್ರವನ್ನು ಕನ್ನಡ ಲೇಖಕರ ಗುಂಪೊಂದು ಬರೆದಿತ್ತು. ಈ ಪತ್ರವು 1982ರ ಏಪ್ರಿಲ್ 18ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ರಾಮಚಂದ್ರ ದೇವ, ಬಸವರಾಜ ಕಲ್ಗುಡಿ, ಡಿ.ಆರ್.ನಾಗರಾಜ್, ಕಿ.ರಂ.ನಾಗರಾಜ್, ಕೆ. ಸತ್ಯನಾರಾಯಣ ಮತ್ತು ಶೂದ್ರ ಶ್ರೀನಿವಾಸ ಅವರು ಈ ಪತ್ರಕ್ಕೆ ಸಹಿ ಹಾಕಿದ್ದರು. ಗೋಕಾಕ ವರದಿಯ ಜಾರಿಯು ಸಂವಿಧಾನದ ಉಲ್ಲಂಘನೆ ಅಲ್ಲ ಎಂದು ಸಿ.ಎಸ್. ಶ್ರೀಧರಮೂರ್ತಿ ಅವರು ಬರೆದ ಲೇಖನವೂ ಅದೇ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ‘ಗೋಕಾಕ ವರದಿ ವಿಚಾರ ವೇದಿಕೆ’ ಎಂಬ ಶೀರ್ಷಿಕೆಯಲ್ಲಿ ಸುಮಾರು ಮುಕ್ಕಾಲು ಪುಟದ ಪ್ಯಾಕೇಜ್‌ನಲ್ಲಿ ವಿವಿಧ ರೀತಿಯ ಚಿಂತನೆಗಳೆಲ್ಲವೂ ಇದ್ದವು.
ಗೋಕಾಕ ಚಳವಳಿ ನಡೆಯುತ್ತಿದ್ದ ಬಹುಪಾಲು ದಿನಗಳಲ್ಲಿ ಚಳವಳಿಯ ಸುದ್ದಿಯನ್ನು ಮುಖಪುಟದ ಮುಖ್ಯ ಸುದ್ದಿಯಾಗಿಯೇ ಪತ್ರಿಕೆ ಪ್ರಕಟಿಸಿದೆ. ಏಪ್ರಿಲ್ 17ರಂದು ಚಿತ್ರದುರ್ಗದಲ್ಲಿ ಹೋರಾಟಗಾರರ ಮೇಲೆ ಗೋಲಿಬಾರ್ ಮಾಡಿ, ಮೂವರ ಹತ್ಯೆ ಆಗಿತ್ತು. 18ರ ಸಂಚಿಕೆಯ ಮುಖಪುಟದಲ್ಲಿ ‘ಚಿತ್ರದುರ್ಗ ಗೋಲಿಬಾರ್: ಮೂರು ಸಾವು’ ಎಂಬ ಎಂಟು ಕಾಲಂ ಬ್ಯಾನರ್ ಹೆಡ್‌ಲೈನ್‌ನಲ್ಲಿ ಸುದ್ದಿ ಪ್ರಕಟವಾಗಿತ್ತು. ಹೀಗೆ ಎಲ್ಲ ಕನ್ನಡ ಹೋರಾಟಗಳಿಗೆ ಪ್ರಜಾವಾಣಿ ಸದಾ ಒತ್ತಾಸೆಯಾಗಿ ನಿಂತಿದೆ.
ಇಗೋ ಕನ್ನಡ: ಜಿ.ವೆಂಕಟಸುಬ್ಬಯ್ಯ
ಯಾವುದೇ ಭಾಷೆಯಲ್ಲಿನ ಓದು ವಿಸ್ತಾರವಾದಂತೆ ಹೊಸ ಹೊಸ ಪ್ರಯೋಗಗಳು, ನುಡಿಕಟ್ಟುಗಳು, ಪದಗಳು ಎದುರಾಗುತ್ತವೆ. ಭಾಷಾ ಬಳಕೆಯ ಕುರಿತಂತೆ, ಅರ್ಥವ್ಯಾಪ್ತಿಯ ಕುರಿತಂತೆ ಅನುಮಾನಗಳು ಮೂಡುತ್ತವೆ. ಇಂತಹ ಎಲ್ಲ ಅನುಮಾನಗಳಿಗೂ ಪದಕೋಶದಲ್ಲಿ ಪರಿಹಾರ ದೊರೆಯಬಹುದು ಎಂದು ಹೇಳಲಾಗದು. ಇಂತಹ ಅನುಮಾನಗಳನ್ನು ಪರಿಹರಿಸುವುದಕ್ಕಾಗಿಯೇ ‘ಇಗೋ ಕನ್ನಡ’ ಎಂಬ ಅಂಕಣವನ್ನು ಪ್ರಜಾವಾಣಿಯು ಆರಂಭಿಸಿತು.
‘ಇಗೋ ಕನ್ನಡ’ ಎಂಬುದು ನಿಘಂಟು ತಜ್ಞ ಮತ್ತು ವಿದ್ವಾಂಸ ಪ್ರೊ. ಜಿ. ವೆಂಕಟಸುಬ್ಬಯ್ಯನವರು ‘ಪ್ರಜಾವಾಣಿ’ಗಾಗಿ ಬರೆದ ಅಂಕಣ. 1991ರ ಮೇ 12ರಂದು ಆರಂಭವಾದ ಈ ಅಂಕಣವು 18 ವರ್ಷಕ್ಕೂ ಹೆಚ್ಚು ಕಾಲ ಪ್ರತಿ ಭಾನುವಾರ ಪ್ರಕಟವಾಗಿದೆ.
ಈ ಅಂಕಣವು ಇತರ ಅಂಕಣಗಳಂತೆ ಇರಲಿಲ್ಲ. ಇದು ಓದುಗರ ಕೇಳಿದ ಪ್ರಶ್ನೆಗಳಿಗೆ ಉತ್ತರದ ರೂಪದಲ್ಲಿತ್ತು. ಪ್ರೌಢಶಾಲೆಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಈ ಅಂಕಣವನ್ನು ಆರಂಭಿಸಲಾಗಿತ್ತು. ಅಂಕಣ ಪ್ರಾರಂಭವಾದ ಕೆಲವೇ ವಾರಗಳಲ್ಲಿ ಅದರ ಪಾಡಿಗೆ ಅದು ತನ್ನ ವ್ಯಾಪ್ತಿಯನ್ನು ಅಪಾರವಾಗಿ ವಿಸ್ತರಿಸಿಕೊಂಡಿತು.
‘ಅಂಕಣವು ಬಹುಬೇಗ ಜನಪ್ರಿಯವಾಯಿತು. ಓದುಗರೇ ತಮಗೆ ತೋರುವ ಸಂದೇಹಗಳನ್ನು ಕುರಿತು ಪ್ರಶ್ನೆಗಳನ್ನು ಕಳುಹಿಸಲು ಮೊದಲು ಮಾಡಿದರು. ನಾನು ನೀಡಿದ ಉತ್ತರದಿಂದ ಸಂದೇಹಗಳು ನಿವಾರಣೆಯಾದ ಬಗ್ಗೆ ಕೃತಜ್ಞತೆಯ ಪತ್ರಗಳೂ ಬಂದವು. ಕೆಲವು ವಿವರಗಳ ಬಗ್ಗೆ ಸ್ಪಷ್ಟತೆಯನ್ನು ನಿರೀಕ್ಷಿಸಿ ವೈಯಕ್ತಿಕ ಪತ್ರಗಳನ್ನೂ ನನ್ನ ವಿದ್ವಾಂಸ ಮಿತ್ರರು ಬರೆದರು. ಕನ್ನಡ ನಾಡಿನ ಎಲ್ಲ ಜಿಲ್ಲೆಗಳಿಂದಲೂ, ಹೊರನಾಡಿನ ಬೊಂಬಾಯಿ, ದೆಹಲಿ, ಮದರಾಸುಗಳಿಂದಲೂ ಪ್ರಶ್ನೆಗಳು ಬಂದವು’ ಎಂದು ಅಂಕಣದ ಕುರಿತು ವೆಂಕಟಸುಬ್ಬಯ್ಯನವರು ಬರೆದುಕೊಂಡಿದ್ದಾರೆ.
ವೆಂಕಟಸುಬ್ಬಯ್ಯನವರ ವಿದ್ವತ್ತು ಮತ್ತು ಪ್ರಶ್ನೆಗಳಿಗೆ ಅವರು ನೀಡುತ್ತಿದ್ದ ವಿಶಿಷ್ಟ ಉತ್ತರಗಳೇ ಅಂಕಣವು ಪಡೆದುಕೊಂಡ ಅಪಾರ ಜನಪ್ರಿಯತೆಗೆ ಕಾರಣ. ಅವರು ಹೇಗೆ ಉತ್ತರಗಳನ್ನು ನೀಡುತ್ತಿದ್ದರು ಎಂಬುದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ: ‘ಧಾರಾವಾಹಿ ಎಂಬುದು ಸಂಸ್ಕೃತದ ಧಾರಾವಾಹಿನ್ ಶಬ್ದದ ತದ್ಭವ. ಎಡೆಬಿಡದೆ ಮುಂದುವರಿಯುವುದು ಎಂದರ್ಥ. ‘ಧಾರಾಕಾರವಾಗಿ ಮಳೆ ಸುರಿಯುತ್ತಿದೆ’ ಎಂಬ ವಾಕ್ಯವನ್ನು ನೋಡಿ. ಧಾರಾವರ್ಷ ಅಂದರೆ ಎಡೆಬಿಡದೆ ನೀರು ಸುರಿಯುವುದು ಎಂದರ್ಥ. ಧಾರಾವಾಹಿ ಎನ್ನುವುದು ಈ ಎರಡು ಅರ್ಥಗಳನ್ನೂ ಒಳಗೊಂಡಿದೆ. ಇದನ್ನು ಅನುಸರಿಸಿ ಯಾವ ಭಾನುವಾರವನ್ನೂ ಬಿಡದೆ ವಾರಪತ್ರಿಕೆಗಳಲ್ಲಿ ಧಾರಾವಾಹಿ ಕಾದಂಬರಿಗಳು ಪ್ರಕಟವಾಗುತ್ತಿವೆ. ದಿನಪತ್ರಿಕೆಗಳಲ್ಲಿ ಬರುವ ಧಾರಾವಾಹಿಗಳೂ ಉಂಟು. ಎರಡನ್ನೂ ಬಿಡದೆ ಓದುವ ಜನ ಒಂದು ಕಥೆಯ ನಾಯಕನನ್ನು ಇನ್ನೊಂದು ಕಥೆಯ ನಾಯಕಿಯೊಡನೆ ಬೆಸೆದು ಬೇಸ್ತು ಬೀಳುವುದೂ ಉಂಟು. ಧಾರವಾಹಿ ಎಂಬುದು ತಪ್ಪು ಶಬ್ದ. ಅದನ್ನು ಉಪಯೋಗಿಸಬಾರದು’.
ಈ ವಿಶಿಷ್ಟ ಶೈಲಿಯೇ ಜನರನ್ನು ಸೆಳೆದ ಅಂಶ. ಪ್ರತಿ ಪದದ ಅರ್ಥ, ಮೂಲ, ಪ್ರಯೋಗ, ತಪ್ಪು ಪ್ರಯೋಗ ಎಲ್ಲವನ್ನು ಲವಲವಿಕೆಯಿಂದಲೇ ವಿವರಿಸಲಾಗಿದೆ.
ಈ ನಿಘಂಟು ಮೂರು ಸಂಪುಟಗಳಲ್ಲಿ ಮುದ್ರಣಗೊಂಡು, ಅವು ಮೂರು ಮುದ್ರಣ ಕಂಡಿವೆ. ಬಳಿಕ, ಮೂರೂ ಸಂಪುಟಗಳನ್ನು ಒಟ್ಟು ಸೇರಿಸಿ ಒಂದು ಸಂಪುಟದಲ್ಲಿಯೂ ಮುದ್ರಿಸಲಾಗಿದೆ. ಕನ್ನಡದ ಸರಿಯಾದ ಬಳಕೆಗೆ ‘ಇಗೋ ಕನ್ನಡ’ ಕೊಟ್ಟ ಕೊಡುಗೆ ದೊಡ್ಡದು.
ನುಡಿಯೊಳಗಾಗಿ:ಓ.ಎಲ್. ನಾಗಭೂಷಣ ಸ್ವಾಮಿ
‘ಇಗೋ ಕನ್ನಡ’ ಮತ್ತು ‘ಪದಸಂಪದ’ಕ್ಕಿಂತ ಭಿನ್ನವಾದ ಅಂಕಣ ಓ.ಎಲ್. ನಾಗಭೂಷಣ ಸ್ವಾಮಿ ಅವರು ‘ನುಡಿಯೊಳಗಾಗಿ’. ಇದು 2012 ಜನವರಿಯಿಂದ 2013 ಜನವರಿವರೆಗೆ ಪ್ರಕಟವಾಗಿದೆ. ಇದು ಪ್ರಶ್ನೋತ್ತರ ರೂಪದ ಅಂಕಣ ಆಗಿರಲಿಲ್ಲ, ಬದಲಿಗೆ ‘ಭಾಷಾ ಚಿಂತನೆ’ಯ ಬರಹಗಳು. ಈ ಕೃತಿಯನ್ನು ಅಭಿನವ ಪ್ರಕಾಶನವು ಪುಸ್ತಕವಾಗಿ ಪ್ರಕಟಿಸಿದೆ. ‘ನನಗೆ ತಿಳಿದ ಮಟ್ಟಿಗೆ ದಿನಪತ್ರಿಕೆಯೊಂದರಲ್ಲಿ ಮನುಕುಲದ ನುಡಿಯನ್ನು ಈ ಬಗೆಯಲ್ಲಿ ಧೇನಿಸುವ ಬರಹಗಳ ಸರಣಿಯೊಂದು ಇಷ್ಟೊಂದು ವಾರಗಳ ಕಾಲ, ಇಷ್ಟೊಂದು ಸರಸವಾಗಿ ಬಂದದ್ದು ಇದೇ ಮೊದಲು’ ಎಂದು ಕೃತಿಯಕುರಿತು ರಘುನಂದನ ಅವರು ವ್ಯಕ್ತಪಡಿಸಿರುವ ಅಭಿಪ್ರಾಯವು ಕೃತಿಯಲ್ಲಿ ಇದೆ.
ಪದಸಂಪದ: ಕೆ.ವಿ. ನಾರಾಯಣ
ಇಗೋ ಕನ್ನಡ ಅಂಕಣ ನಿಂತ ಮೇಲೆ ಅದೇ ಸ್ವರೂಪದ ಅಂಕಣವನ್ನು ಭಾಷಾ ವಿದ್ವಾಂಸ ಕೆ.ವಿ. ನಾರಾಯಣ ಆರಂಭಿಸಿದರು. 2007ರಿಂದ ಮೂರು ವರ್ಷಕ್ಕೂ ಹೆಚ್ಚು ಕಾಲ ಈ ಅಂಕಣ ಪ್ರಕಟವಾಯಿತು. ‘ಮುಖ್ಯವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂದೇಹ ಪರಿಹಾರ ಈ ಅಂಕಣದ ಉದ್ದೇಶವಾಗಿತ್ತು’ ಎಂಬುದನ್ನು ಕೆ.ವಿ.ನಾರಾಯಣ ಅವರು ನೆನಪಿಸಿಕೊಳ್ಳುತ್ತಾರೆ. ‘ನನ್ನದೇ ಇ–ಮೇಲ್ ವಿಳಾಸವನ್ನು ಕೊಟ್ಟಿದ್ದರು. ಹಾಗಾಗಿ ಪ್ರಶ್ನೆಗಳು ನೇರವಾಗಿ ನನಗೇ ಬರುತ್ತಿದ್ದವು. ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚು ಪ್ರಸ್ತುತ ಎನಿಸುವ ಪ್ರಶ್ನೆಗಳನ್ನು ಆಯ್ದುಕೊಳ್ಳುತ್ತಿದ್ದೆ. ವ್ಯಾಕರಣದ ಸಂದೇಹಕ್ಕಿಂತ ಪದ, ನುಡಿಕಟ್ಟು ಬಳಕೆ, ಸರಿಯಾದ ಕಾಗುಣಿತ ಹೇಗೆ ಎಂಬ ಪ್ರಶ್ನೆಗಳೇ ಹೆಚ್ಚು ಬರುತ್ತಿದ್ದವು’ ಎಂದು ಕೆ.ವಿ. ನಾರಾಯಣ ಹೇಳುತ್ತಾರೆ.
ಓದು ಕಲಿಸಿದ ಪತ್ರಿಕೆ
75ನೇ ವರ್ಷಕ್ಕೆ ಕಾಲಿಟ್ಟ ಪ‍್ರಜಾವಾಣಿಯ ಕುರಿತು ಜನರು ವ್ಯಕ್ತಪಡಿಸಿದ ಅಭಿಪ್ರಾಯಗಳು ಹಲವು ವಿಚಾರಗಳತ್ತ ಬೆಳಕು ಚೆಲ್ಲಿವೆ. ಅವುಗಳಲ್ಲಿ ಮುಖ್ಯವೆಂದು ಅನಿಸಿದ್ದು ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಪತ್ರಿಕೆಯು ವಹಿಸಿದ ಪಾತ್ರ. ಪತ್ರಿಕೆ ಆರಂಭವಾದಾಗಿನಿಂದ ಇಂದಿಗೂ ಪತ್ರಿಕೆ ಓದುತ್ತಿರುವವರು, 30 ವರ್ಷ, 40 ವರ್ಷ, 50 ವರ್ಷ, 60 ವರ್ಷಗಳಿಂದ ಪತ್ರಿಕೆ ಓದುತ್ತಿರುವವರು, ಇತ್ತೀಚಿನ ವರ್ಷಗಳಲ್ಲಿ ಪತ್ರಿಕೆ ಓದಲು ಆರಂಭಿಸಿದವರು... ಹೀಗೆ ವಿವಿಧ ರೀತಿಯಲ್ಲಿ ಪತ್ರಿಕೆಯೊಂದಿಗೆ ಒಡನಾಟ ಇಟ್ಟುಕೊಂಡವರು ಪತ್ರ ಬರೆದು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
‘ನಾನು ಪ್ರಜಾವಾಣಿ ನೋಡಿದ್ದು 1968ರಲ್ಲಿ. ಅಂದೊಂದು ದಿನ ನಮ್ಮ ಹೆಡ್‌ಮಾಸ್ಟರ್ ವೈ.ಜಿ.ಸತ್ಯನಾರಾಯಣ ಅವರು ಪತ್ರಿಕೆ ತೋರಿಸಿ ಅದರ ಮುಖ್ಯ ವಿಷಯಗಳನ್ನು ಪ್ರಾರ್ಥನೆ ಮಾಡುವ ಮುನ್ನ ಓದಿಸಿ ನಂತರ ಸ್ಕೂಲ್ ಜಗುಲಿಯ ಟೇಬಲ್ ಮೇಲೆ ಹಾಸಿ ಓದಲು ಹೇಳಿದ್ದರು. ಕ್ಲಾಸಿನಲ್ಲಿ ‘ಛೂ ಬಾಣ’ ಓದಲು ಹೇಳಿದ್ದರು. ಅಂದಿನಿಂದ ಪ್ರಜಾವಾಣಿ ಬದುಕಿನ ಭಾಗವಾಗಿದೆ’ ಎಂದು ಪತ್ರಿಕೆಯ ಕುರಿತು ಹೇಳಿದವರು ಶಿವಮೊಗ್ಗದ ಬಿ.ಚಂದ್ರೇಗೌಡ.
‘ಪ್ರಜಾವಾಣಿ ಓದು’ ಎಂಬುದು ಕನ್ನಡ ಕಲಿಯುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಸಾಮಾನ್ಯವಾಗಿ ಹೇಳುತ್ತಿದ್ದ ಮಾತು. ಶಾಲೆಯಲ್ಲಿ ಬೆಳಿಗ್ಗಿನ ಪ್ರಾರ್ಥನೆಯ ಬಳಿಕ ಪತ್ರಿಕೆಯಲ್ಲಿರುವ ಸುದ್ದಿಗಳ ಶೀರ್ಷಿಕೆ ಓದುವುದು ಹಲವು ಶಾಲೆಗಳಲ್ಲಿ ಇದ್ದ ಮತ್ತು ಈಗಲೂ ಇರುವ ಪರಿಪಾಟ. ಅಸಂಖ್ಯ ಮನೆಗಳಲ್ಲಿ ಹೆತ್ತವರು ಕೂಡ ಮಕ್ಕಳಿಗೆ ಪ್ರಜಾವಾಣಿ ಓದುವ ಹವ್ಯಾಸವನ್ನು ಚಿಕ್ಕಂದಿನಿಂದಲೇ ಬೆಳೆಸಿದ್ದಾರೆ. ಹಾಗಾಗಿಯೇ ಪತ್ರಿಕೆಯು ತಮಗೆ ಕನ್ನಡ ಕಲಿಸಿದೆ, ಕನ್ನಡದ ಓದು ಕಲಿಸಿದೆ ಮತ್ತು ಬರೆಯುವುದನ್ನೂ ಕಲಿಸಿದೆ ಎಂಬ ಅಭಿಪ್ರಾಯವನ್ನು ನೂರಾರು ಜನರು ಹಂಚಿಕೊಂಡಿದ್ದಾರೆ.
ಆಧಾರ: ಪ್ರಜಾವಾಣಿ ಸಂಚಿಕೆಗಳು, ಇಗೋ ಕನ್ನಡ, ನುಡಿಯೊಳಗಾಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.