ರಾಜ್ಯದಲ್ಲಿ ಐತಿಹಾಸಿಕ ನಾಯಕರ, ಸಾಮಾಜಿಕ ಸುಧಾರಕರ ಪ್ರತಿಮೆ ಸ್ಥಾಪನೆ ತೀವ್ರತೆ ಪಡೆದಿದೆ. ರಾಜ್ಯದ ಜಾತಿ ಮತ್ತು ಧಾರ್ಮಿಕ ಸಮುದಾಯಗಳ ಜನರು, ಆ ಸಮುದಾಯಗಳ ನಾಯಕರ ಅಥವಾ ನಾಯಕಿಯರ ಪ್ರತಿಮೆ ಸ್ಥಾಪನೆಗೆ ಆಗ್ರಹಿಸುತ್ತಿದ್ದಾರೆ. ಸರ್ಕಾರವೂ ರಾಜ್ಯದ ಹಲವೆಡೆ ಪ್ರತಿಮೆ ಸ್ಥಾಪನೆಗೆ ಮುಂದಾಗಿದೆ, ಕೆಲವೆಡೆ ಈಗಾಗಲೇ ಪ್ರತಿಮೆ ಸ್ಥಾಪನೆಯಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವಂತೆ ಪ್ರತಿಮೆ ರಾಜಕಾರಣ ಮುನ್ನೆಲೆಗೆ ಬರುತ್ತಿವೆ.
ಈಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡಿದ್ದು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿ ಅನಾವರಣ ಮಾಡಲಾದ ಕೆಂಪೇಗೌಡ ಪ್ರತಿಮೆ. ಇದನ್ನು ಪ್ರಗತಿಯ ಪ್ರತಿಮೆ ಎಂದೂ ಕರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿ ಸರ್ಕಾರ ಈ ಪ್ರತಿಮೆಯನ್ನು ಸ್ಥಾಪಿಸಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಆಹ್ವಾನಿಸಿಲ್ಲ ಎಂದು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಪ್ರತಿಮೆ ಅನಾವರಣದ ನಂತರ ರಾಜ್ಯದಲ್ಲಿ ಮತ್ತಷ್ಟು ಪ್ರತಿಮೆಗಳ ಸ್ಥಾಪನೆಗೆ ಬೇಡಿಕೆ ವ್ಯಕ್ತವಾಗಿದೆ.
ಟಿಪ್ಪು ಸುಲ್ತಾನ್ ಅವರ ಬೃಹತ್ ಪ್ರತಿಮೆ ಸ್ಥಾಪಿಸುತ್ತೇವೆ ಎಂದು ಕಾಂಗ್ರೆಸ್‌ನ ತನ್ವೀರ್ ಸೇಠ್ ಘೋಷಿಸಿದ್ದರು. ಇದಕ್ಕೆ ಬಿಜೆಪಿ, ಬಜರಂಗ ದಳದ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ತನ್ವೀರ್ ಸೇಠ್ ಅವರ ಘೋಷಣೆ ವಿವಾದವನ್ನು ಹುಟ್ಟುಹಾಕಿತ್ತು. ಅವರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿಯ ನಾಯಕರು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ತನ್ವೀರ್ ಸೇಠ್, ಬ್ರಿಟಿಷರ ವಿರುದ್ಧ ಹೋರಾಡಿದ ಮತ್ತು ದೇಶಕ್ಕಾಗಿ ಹುತಾತ್ಮನಾದ ಟಿಪ್ಪು ಸಲ್ತಾನ್‌ನ ಹೆಸರಿಗೆ ಮಸಿ ಬಳಿಯಲು ಬಿಜೆಪಿ ಮತ್ತು ಸಂಘ ಪರಿವಾರವು ಯತ್ನಿಸುತ್ತಿದೆ. ಪ್ರತಿಮೆಯನ್ನು ಇಸ್ಲಾಂ ಧರ್ಮ ಒಪ್ಪುವುದಿಲ್ಲವಾದರೂ, ಇಂತಹ ಸಂದರ್ಭದಲ್ಲಿ ಪ್ರತಿಮೆಯ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ್ದರು.
ಕಾರ್ಕಳದ ಉಮಿಕಲ್ ಬೆಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿರುವ ಪರಶುರಾಮ ಥೀಂ ಪಾರ್ಕ್ ಅನ್ನು ಜನವರಿಯಲ್ಲಷ್ಟೇ ಉದ್ಘಾಟನೆ ಮಾಡಲಾಗಿದೆ. ಈ ಥೀಂಪಾರ್ಕ್‌ನಲ್ಲಿ ಇರುವ ಫಲಕವೊಂದರಲ್ಲಿ ತುಳುನಾಡಿನ ದೈವಗಳಿಗೆ ಅವಮಾನ ಮಾಡಲಾಗಿದೆ ಎಂದು ಕೆಲವು ಸುದ್ದಿಜಾಲತಾಣಗಳು ವರದಿ ಮಾಡಿವೆ. ಪರಶುರಾಮನು ಮೇಲೆ ಇರುವಂತೆ ಮತ್ತು ದೈವಗಳು ಪರಶುರಾಮನ ಕಾಲ ಬಳಿ ಇರುವಂತೆ ಚಿತ್ರಿಸಲಾಗಿದೆ. ಈ ಮೂಲಕ ತುಳುನಾಡಿನ ದೈವಗಳಿಗೆ ಅವಮಾನ ಮಾಡಲಾಗಿದೆ ಎಂದು ಈ ವರದಿಗಳಲ್ಲಿ ಆರೋಪಿಸಲಾಗಿದೆ.
ಬೆಳಗಾವಿಯ ರಾಜಹಂಸಗಡ ಕೋಟೆಯಲ್ಲಿ ಶಿವಾಜಿಯ ಪ್ರತಿಮೆಯನ್ನು ಸ್ಥಾಪಿಸಿ, ಈಗಾಗಲೇ ಲೋಕಾರ್ಪಣೆ ಮಾಡಲಾಗಿದೆ. ಆದರೆ, ಬೆಳಗಾವಿಯಲ್ಲಿ ಮರಾಠಿ ರಾಜನ ಪ್ರತಿಮೆ ಏಕೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಹಲವು ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕನ್ನಡದ ರಾಜಮನೆತನಗಳ ಮೇಲೆ, ಕನ್ನಡನಾಡಿನ ಮೇಲೆ ಪದೇ ಪದೇ ದಾಳಿ ನಡೆಸಿದ್ದ ಶಿವಾಜಿಯ ಪ್ರತಿಮೆಯನ್ನು ಕರ್ನಾಟಕದಲ್ಲಿ ಸ್ಥಾಪಿಸುತ್ತಿರುವುದು ಕನ್ನಡಕ್ಕೆ ಮಾಡುತ್ತಿರುವ ಅಪಮಾನ ಎಂದು ಈ ಸಂಘಟನೆಗಳು ಆರೋಪಿಸಿವೆ. ಶಿವಾಜಿಯ ಬದಲಿಗೆ ಕನ್ನಡನಾಡಿನ ರಾಜರು, ರಾಣಿಯರು ಮತ್ತು ಹೋರಾಟಗಾರರ ಪ್ರತಿಮೆಗಳನ್ನು ಸ್ಥಾಪಿಸಿ ಎಂದು ಆಗ್ರಹಿಸಿವೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳನ್ನೂ ನಡೆಸಿವೆ.
ಪ್ರತಿಮೆ ನಿರ್ಮಾಣವು ಪಕ್ಷಗಳ ನಡುವಣ ಜಟಾಪಟಿಗೂ ಕಾರಣವಾಗಿದೆ. ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಪೈಪೋಟಿಗೆ ಬಿದ್ದಿದ್ದರಿಂದ ಪ್ರತಿಮೆಯು ಎರಡು ಬಾರಿ ಉದ್ಘಾಟನೆಯಾಗಿದೆ. ಬೆಳಗಾವಿಯ ಸುವರ್ಣಸೌಧದ ಎದುರು ರಾಯಣ್ಣ ಹಾಗೂ ಚನ್ನಮ್ಮನ ಪ್ರತಿಮೆ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಕಳೆದ ಡಿಸೆಂಬರ್‌ನಲ್ಲಿ ಹೇಳಿದ್ದರು.
‘ಕೋಟಿ–ಚೆನ್ನಯರ ಪ್ರತಿಮೆ ಸ್ಥಾಪಿಸಿ’
ಮಂಗಳೂರಿನ ಮಹಾವೀರ ವೃತ್ತದಲ್ಲಿ ಛತ್ರಪತಿ ಶಿವಾಜಿಯ ಪ್ರತಿಮೆ ಸ್ಥಾಪಿಸಬೇಕು ಎಂದು ಅಲ್ಲಿನ ಛತ್ರಪತಿ ಶಿವಾಜಿ ಮರಾಠಾ ಸಂಘವು, ಮಂಗಳೂರು ಪಾಲಿಕೆಗೆ ಪ್ರಸ್ತಾವ ಸಲ್ಲಿಸಿತ್ತು. ಪಾಲಿಕೆಯಲ್ಲಿ ಈ ಪ್ರಸ್ತಾವವು ಚರ್ಚೆಗೂ ಬಂದಿತ್ತು. ಕಾಂಗ್ರೆಸ್ ಸದಸ್ಯರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಮಹಾರಾಷ್ಟ್ರ ಸರ್ಕಾರ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನಾ, ಕರ್ನಾಟಕದ ಜೊತೆಗೆ ಗಡಿ ತಂಟೆ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ಮರಾಠಿ ರಾಜನ ಪ್ರತಿಮೆಯನ್ನುಕರ್ನಾಟಕದಲ್ಲಿ ಏಕೆ ಸ್ಥಾಪಿಸಬೇಕು ಎಂದು ಕಾಂಗ್ರೆಸ್ ಸದಸ್ಯ ನವೀನ್ ಡಿಸೋಜಾ ಆಕ್ಷೇಪ ವ್ಯಕ್ತಪಡಿಸಿ ದ್ದರು. ಆನಂತರ ಮಂಗಳೂರಿನ ಮಹಾವೀರ ವೃತ್ತದಲ್ಲಿ ಕೋಟಿ– ಚೆನ್ನಯರ ಪ್ರತಿಮೆ ಸ್ಥಾಪಿಸಬೇಕು ಎಂದು ಕಾಂಗ್ರೆಸ್‌ನ ನಾಯಕರು, ಕಾರ್ಯಕರ್ತರು ಆಗ್ರಹಿಸಿದ್ದರು.
ಬೆಳವಡಿ ಮಲ್ಲಮ್ಮನ ಪ್ರತಿಮೆಗೆ ಬೇಡಿಕೆ
ಹೊರ ರಾಜ್ಯದ ರಾಜರು ಮತ್ತು ಸಂಸ್ಥಾನಗಳು ಕನ್ನಡನಾಡಿನ ಮೇಲೆ ನಡೆಸಿದ ಅತಿಕ್ರಮಣಗಳ ವಿರುದ್ಧ ಹೋರಾಡಿದ ನಾಯಕಿಯರಲ್ಲಿ ಬೆಳವಡಿ ಮಲ್ಲಮ್ಮ ಅಗ್ರರು. ಬೆಳಗಾವಿಯಲ್ಲಿ ಶಿವಾಜಿಯ ಪ್ರತಿಮೆ ಸ್ಥಾಪನೆಗೆ ಮುಂದಾದಾಗ, ಅದರ ಬದಲಿಗೆ ಬೆಳವಡಿ ಮಲ್ಲಮ್ಮನ ಪ್ರತಿಮೆ ಸ್ಥಾಪಿಸಿ ಎಂಬ ಕೂಗು ಎದ್ದಿತ್ತು.
17ನೇ ಶತಮಾನದಲ್ಲಿ ಬೆಳವಡಿ ಸಂಸ್ಥಾನದ ರಾಣಿಯಾಗಿದ್ದ ಮಲ್ಲಮ್ಮ, ಮಹಿಳೆಯರದ್ದೇ ಸೇನೆಯೊಂದನ್ನು ಕಟ್ಟಿದ್ದರು. ಈ ಸೇನೆಯಲ್ಲಿದ್ದ ಮಹಿಳಾ ಸೈನಿಕರೆಲ್ಲರೂ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದರು. ಸಂಸ್ಥಾನದ ಮೇಲೆ ಹಲವು ಬಾರಿ ಅತಿಕ್ರಮಣ ನಡೆಸಿದ್ದ ಮರಾಠಿ ರಾಜರ ದಾಳಿಗಳನ್ನು ಈ ಸೇನೆಯು ಸಮರ್ಥವಾಗಿ ಎದುರಿಸಿತ್ತು. ಹೀಗೆ ಮರಾಠಿಗರ ವಿರುದ್ಧ ಹೋರಾಡಿದ್ದ ಬೆಳವಡಿ ಮಲ್ಲಮ್ಮನ ಪ್ರತಿಮೆಯನ್ನು ಸ್ಥಾಪಿಸಿ ಎಂಬ ಆಗ್ರಹ ಈಗಲೂ ಚಾಲ್ತಿಯಲ್ಲಿದೆ. ‘ಬೆಳಗಾವಿ ರಾಯಣ್ಣ’ ಮತ್ತು ‘ಬೆಳವಡಿ ಮಲ್ಲಮ್ಮ’ ಫೇಸ್‌ಬುಕ್ ಪುಟಗಳಲ್ಲಿ ಈ ಆಗ್ರಹವನ್ನು ಮುಂದುವರಿಸಲಾಗಿದೆ. ಜತೆಗೆ #ಬೆಳವಡಿಮಲ್ಲಮ್ಮ ಎಂಬ ಹ್ಯಾಷ್‌ಟ್ಯಾಗ್ ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ.
ಪೀರನವಾಡಿಯಲ್ಲಿ ರಾಯಣ್ಣ ಪುತ್ಥಳಿ
ಬೆಳಗಾವಿ ತಾಲ್ಲೂಕಿನ ಪೀರನವಾಡಿ ಗ್ರಾಮವು ರಾಯಣ್ಣನ ಪ್ರತಿಮೆಯ ವಿಚಾರಕ್ಕೆ 2020ರಲ್ಲಿ ಸಾಕಷ್ಟು ಸುದ್ದಿಯಲ್ಲಿತ್ತು. ಗ್ರಾಮದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪಿಸಬೇಕು ಹಾಗೂ ಪ್ರತಿಮೆ ಇರುವ ಜಾಗಕ್ಕೆ ರಾಯಣ್ಣ ವೃತ್ತ ಎಂದು ಹೆಸರಿಡಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇತ್ತು. ಆದರೆ ಮರಾಠಿ ಭಾಷಿಕರ ಒಂದು ಗುಂಪು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಪ್ರತಿಮೆ ಸ್ಥಾಪಿಸಲು ಗುರುತು ಮಾಡಿದ್ದ ಸ್ಥಳವು ರಸ್ತೆ ಮಧ್ಯೆ ಸೇರಿಕೊಂಡಿತು. ಮರಾಠಿಗರ ವಿರೋಧ ಹಾಗೂ ಭಾಷಾ ಸೂಕ್ಷ್ಮ ಪ್ರದೇಶವಾಗಿದ್ದ ಕಾರಣ, ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ಅನುಮತಿ ನೀಡಲಿಲ್ಲ.
ಪದೇ ಪದೇ ಮನವಿ ಸಲ್ಲಿಸಿ ಬೇಸತ್ತಿದ್ದ ರಾಯಣ್ಣ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳು ರಾಯಣ್ಣ ಜಯಂತಿ ದಿನವಾದ ಆಗಸ್ಟ್ 15ರ ನಸುಕಿನಲ್ಲಿ ಅದೇ ಜಾಗದಲ್ಲಿ ಪ್ರತಿಮೆ ಸ್ಥಾಪಿಸಿಬಿಟ್ಟರು. ಇದು ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಿತು. ಮಧ್ಯಪ್ರವೇಶಿಸಿದ ಪೊಲೀಸರು, ಪರಿಸ್ಥಿತಿ ಕೈಮೀರುವುದನ್ನು ತಡೆಯುವ ಉದ್ದೇಶದಿಂದ ಪ್ರತಿಮೆಯನ್ನು ಸ್ಥಳದಿಂದ ತೆರವುಗೊಳಿಸಿ ತಮ್ಮ ವಶಕ್ಕೆ ಪಡೆದರು. ಪೋಲೀಸರ ನಡೆ ಖಂಡಿಸಿ ರಾಯಣ್ಣ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳ ಸದಸ್ಯರು ಹೋರಾಟ ನಡೆಸಿದರು.
ಪೊಲೀಸರು ಸಂಧಾನ ಸಭೆ ನಡೆಸಿ, ಬೇರೊಂದು ಸ್ಥಳದಲ್ಲಿ ಪ್ರತಿಮೆ ನಿರ್ಮಿಸುವ ಭರವಸೆ ನೀಡಿದರು. ಆದರೆ, ಈ ಪ್ರಸ್ತಾವವನ್ನು ಒಪ್ಪಲು ಅವರು ಸಿದ್ಧರಿರಲಿಲ್ಲ. ವಿವಾದ ತಣ್ಣಗಾಗಿಸಲು ರಾಜಕೀಯ ಮುಖಂಡರು ಮಾಡಿದ ಯತ್ನಗಳು ಸಫಲವಾಗಲಿಲ್ಲ. ಈ ಎಲ್ಲ ಬೆಳವಣಿಗೆಗಳ ನಡುವೆ, ಮತ್ತೊಮ್ಮೆ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ನೆರವೇರಿತು. ಪ್ರತಿಮೆ ತೆರವುಗೊಂಡಿದ್ದ ಸ್ಥಳದಲ್ಲೇ ಅದನ್ನು ಪ್ರತಿಷ್ಠಾಪನೆ ಮಾಡಿ, ಕನ್ನಡಪರ ಸಂಘಟನೆ ಸದಸ್ಯರು ಹಾಗೂ ರಾಯಣ್ಣನ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಮರಾಠಿ ಭಾಷಿಕರು ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ಆಗ್ರಹಿಸಿದ್ದರು. ‘ರಾಯಣ್ಣ ಪ್ರತಿಮೆ ಸ್ಥಾಪಿಸಿರುವ ಜಾಗದಿಂದ ನೂರು ಮೀಟರ್ ದೂರದಲ್ಲಿ ಶಿವಾಜಿ ಪ್ರತಿಮೆ ಈಗಾಗಲೇ ಇದೆ. ಹೀಗಿರುವಾಗ, ರಾಯಣ್ಣ ಪ್ರತಿಮೆಯ ಸ್ಥಳದಲ್ಲೇ ಮತ್ತೊಂದು ಶಿವಾಜಿ ಪ್ರತಿಮೆ ನಿರ್ಮಿಸುವ ಔಚಿತ್ಯವನ್ನು ಸಂಘಟನೆಗಳು ಪ್ರಶ್ನಿಸಿದ್ದವು.
ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಎಡಿಜಿಪಿ ಸಮ್ಮುಖದಲ್ಲಿ ಎರಡು ಗುಂಪಿನವರ ಸಂಧಾನಸಭೆ ಕರೆಯಲಾಯಿತು. ‘ವಿವಾದಿತ ಸ್ಥಳದಲ್ಲಿ ರಾಯಣ್ಣ ಪ್ರತಿಮೆ ಉಳಿಸಿಕೊಳ್ಳುವುದು ಹಾಗೂ ಪ್ರತಿಮೆ ಇರುವ ಜಾಗಕ್ಕೆ ಶಿವಾಜಿ ವೃತ್ತ ಎಂದು ನಾಮಕರಣ ಮಾಡುವ ಪ್ರಸ್ತಾವ’ಕ್ಕೆ ಎರಡೂ ಕಡೆಯಿಂದ ಒಪ್ಪಿಗೆ ಸಿಕ್ಕಿತು. ವೃತ್ತಕ್ಕೆ ಶಿವಾಜಿ ಹೆಸರಿನ ಫಲಕ ಅಳವಡಿಸುವುದರೊಂದಿಗೆ ವಿವಾದ ಬಹುತೇಕ ತಣ್ಣಗಾಯಿತು. ಆದರೆ, ಫಲಕ ತೆರವುಗೊಳಿಸಬೇಕು ಎಂದು ಕೆಲವು ಸಂಘಟನೆಗಳು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿವೆ.
ಆಧಾರ: ಪ್ರಜಾವಾಣಿ ವರದಿಗಳು ಮತ್ತು ಇತರ ಮೂಲಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.