ರೈತ ಮುಖಂಡ ಎಂದು ಹೆಸರಾಗಿರುವ ಬಿ.ಎಸ್. ಯಡಿಯೂರಪ್ಪ ಅವರೇ ನೇತೃತ್ವ ವಹಿಸಿಕೊಂಡಿರುವ ಸರ್ಕಾರವೊಂದು ಇತ್ತೀಚೆಗೆ ಮಾಡಿರುವ ಹಾಗೂ ಮಾಡಲು ಹೊರಟಿರುವ ಕೆಲವು ಕಾಯ್ದೆಗಳ ಮಾರ್ಪಾಡುಗಳು ಬಲು ಸೋಜಿಗವನ್ನು ಉಂಟುಮಾಡಿವೆ.
ಕೃಷಿಕರಲ್ಲದವರೂ ಕೃಷಿಭೂಮಿಯನ್ನು ಖರೀದಿಸಲು ಹಾಗೂ ಉಳ್ಳವರು ಭಾರಿ ಪ್ರಮಾಣದ ಕೃಷಿ ಹಿಡುವಳಿಯನ್ನು ಹೊಂದಲು ಅನುವಾಗುವಂತೆ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು, ಕೃಷಿ ಮಾರುಕಟ್ಟೆಯನ್ನು ಕಾರ್ಪೊರೇಟ್ ವಲಯಕ್ಕೆನೇರವಾಗಿ ತೆರೆದಿಡಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಮತ್ತು 30 ದಿನಗಳಲ್ಲೇ ಭೂಪರಿವರ್ತನೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನಿಯಮಗಳನ್ನು ಸರಳಗೊಳಿಸಿರುವುದು ಅವುಗಳಲ್ಲಿ ತುಂಬಾ ಮುಖ್ಯವಾದವು.
ಮೂರೂ ಬದಲಾವಣೆಗಳ ಮುಖ್ಯ ಉದ್ದೇಶ ಕೈಗಾರಿಕೆಗಳ ಓಲೈಕೆ ಮತ್ತು ರೈತನ ಹಿತಾಸಕ್ತಿಯ ಬಲಿ ಎನ್ನುವುದು ಮೇಲ್ನೋಟಕ್ಕೇ ಎದ್ದು ಕಾಣುತ್ತಿರುವಂತಹ ಸತ್ಯ.
ಹೇಳಿಕೇಳಿ ಇದು ಹವಾಮಾನ ವೈಪರೀತ್ಯದ ಸಂದರ್ಭ. ಭೂ ಸುಧಾರಣೆ ಕಾಯ್ದೆಯ ತಿದ್ದುಪಡಿಯು ಪಶ್ಚಿಮ ಘಟ್ಟದಂತಹ ಸೂಕ್ಷ್ಮ ಪರಿಸರದ ಮೇಲೆ ಇನ್ನಷ್ಟು ಒತ್ತಡವನ್ನು ಹಾಕಿ, ಅನಾಹುತವನ್ನು ಸೃಷ್ಟಿಸುವ ಅಪಾಯ ಮತ್ತೂ ದಟ್ಟವಾಗಿದೆ. ನಾಲ್ಕು ದಶಕಗಳ ಅವಧಿಯಲ್ಲಿ ಘಟ್ಟ ಪ್ರದೇಶದಲ್ಲಿ ಕೃಷಿಭೂಮಿಯು ಶೇ 4ರಷ್ಟು ಹೆಚ್ಚಾಗಿದೆ. ಕೃಷಿಕರಲ್ಲದವರೂ ಕೃಷಿಭೂಮಿಯನ್ನು ಹೊಂದುವ ಅವಕಾಶ
ಸಿಗಲಿರುವುದರಿಂದ ಇನ್ನುಮುಂದೆ ಸಣ್ಣ ಹಿಡುವಳಿದಾರರಿಂದ ಕೃಷಿಭೂಮಿಯನ್ನು ಖರೀದಿಸಿ, ಅರಣ್ಯವನ್ನು ಅತಿಕ್ರಮಿಸುವುದು ಪ್ರಭಾವಿಗಳಿಗೆ ಕಷ್ಟವೇನೂ ಆಗದು.
ಅಪರೂಪದ ಜೀವವೈವಿಧ್ಯದ ತಾಣವಾದ ಪಶ್ಚಿಮಘಟ್ಟ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ಈ ಜಿಲ್ಲೆಗಳ ಘಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಇನ್ನಷ್ಟು ಚಟುವಟಿಕೆಗಳು ಹೆಚ್ಚುವಲ್ಲಿ ಸಂಶಯವಿಲ್ಲ. ಇಂತಹ ಚಟುವಟಿಕೆಗಳ ವಿರುದ್ಧ ಸ್ಥಳೀಯರಲ್ಲಿ ಈಗಾಗಲೇ ಆಕ್ರೋಶ ಮಡುವುಗಟ್ಟಿದೆ. ಸರ್ಕಾರದ ನೀತಿಗಳು ಅವರ ಸಹನೆಯ ಕಟ್ಟೆಯನ್ನು ಒಡೆಯುವಂತೆ ಮಾಡಿದರೂ ಅಚ್ಚರಿಯಿಲ್ಲ.
ಪಶ್ಚಿಮಘಟ್ಟದ ರಕ್ಷಣೆಗಾಗಿ ಅಧ್ಯಯನ ನಡೆಸಿ, ವರದಿ ಸಲ್ಲಿಸಲು ಕೇಂದ್ರ ಸರ್ಕಾರ ರಚಿಸಿದ್ದ ಡಾ. ಕೆ. ಕಸ್ತೂರಿರಂಗನ್ ಸಮಿತಿಯು ರಾಜ್ಯದ 1,438 ಗ್ರಾಮಗಳು ಸೂಕ್ಷ್ಮ ಪರಿಸರಪ್ರದೇಶದಲ್ಲಿವೆ ಎಂದು ಗುರುತಿಸಿದೆ. 153 ಗ್ರಾಮಗಳನ್ನಷ್ಟೇ ಈ ವಲಯಕ್ಕೆ ಸೇರಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಆ 153 ಗ್ರಾಮಗಳು ಈಗಾಗಲೇ ರಕ್ಷಿತ ಅರಣ್ಯ ಅಥವಾ ರಾಷ್ಟ್ರೀಯ ಉದ್ಯಾನಗಳ ವ್ಯಾಪ್ತಿಯಲ್ಲಿದ್ದು, ಅವುಗಳಿಗೆ ಅರಣ್ಯ ಕಾಯ್ದೆಗಳು ಅನ್ವಯವಾಗುತ್ತವೆ. ಉಳಿದ 1,285 ಗ್ರಾಮಗಳನ್ನು ಸೂಕ್ಷ್ಮ ಪರಿಸರ ಪ್ರದೇಶದಿಂದ ಹೊರಗೆ ಇಡಬೇಕೆಂಬ ರಾಜ್ಯ ಸರ್ಕಾರದ ಬೇಡಿಕೆಗೂ ಮನ್ನಣೆ ಸಿಕ್ಕು, ಪ್ರಸ್ತಾವಿತ ಬದಲಾವಣೆಗಳ ರೂಪದಲ್ಲಿ ಭೂಸುಧಾರಣೆ ಕಾಯ್ದೆಯೂ ಜಾರಿಯಾದರೆ ಆ ಗ್ರಾಮಗಳ ಕಾಡಿನ ಸರಹದ್ದಿನಲ್ಲಿ ದೊಡ್ಡ ಅಪಾಯ ಕಟ್ಟಿಟ್ಟಬುತ್ತಿ.
ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಅರಣ್ಯದ ಪ್ರಮಾಣ ನಾಲ್ಕು ದಶಕಗಳಲ್ಲಿ ಶೇ 62ರಿಂದ ಶೇ 29ಕ್ಕೆ ಇಳಿದಿದೆ. ಈ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲೂ ಕಾಡಿನ ಪ್ರಮಾಣಶೇ 50ರಷ್ಟು ಕಡಿಮೆಯಾಗಿದೆ. ಕೊಡಗಿನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಚಟುವಟಿಕೆಗಳು ಹೆಚ್ಚಬಾರದು. ವಾಣಿಜ್ಯ ಚಟುವಟಿಕೆಗಳಂತೂ ನಡೆಯಲೇಬಾರದು. ಆದರೆ, ಇನ್ನುಮುಂದೆ ಯಾರು ಬೇಕಾದರೂ ಭೂಮಿ ಖರೀದಿ ಮಾಡುವ ಅವಕಾಶ ಸಿಗಲಿದೆ. ಕೃಷಿಭೂಮಿಯ ಸ್ವರೂಪವೂ ಬದಲಾಗಲಿದೆ.
ಕೃಷಿಭೂಮಿಯನ್ನು ಯಾರೂ ಬಲವಂತಾಗಿ ಕಿತ್ತಕೊಳ್ಳುವುದಿಲ್ಲ ಎನ್ನುವ ವಾದವನ್ನು ಸರ್ಕಾರ ಮಾಡಬಹುದು. ಆದರೆ, ರೈತ ತನ್ನ ಭೂಮಿಯಿಂದಲೇ ಬಲವಂತವಾಗಿ ಹೊರಬೀಳುವ ಸನ್ನಿವೇಶ ಸೃಷ್ಟಿಯಾಗುವಲ್ಲಿ ಸಂಶಯವಿಲ್ಲ. ನಿಮ್ಮ ಭೂಮಿಯ ಪಕ್ಕದ ಭೂಮಿಯನ್ನು ಉದ್ಯಮಿಯೊಬ್ಬ ಖರೀದಿಸಿ, ಅಲ್ಲಿ ಕೈಗಾರಿಕಾ ಘಟಕ ಹಾಕಿದರೆ, ನೀವು ಅಲ್ಲಿ ಕೃಷಿ ಚಟುವಟಿಕೆಯನ್ನು ನಡೆಸಲು ಸಾಧ್ಯವಾದೀತೆ? ಹಾಗೆಯೇ ಕೈಗಾರಿಕಾ ಘಟಕದ ತ್ಯಾಜ್ಯವನ್ನು ನಿಮ್ಮ ಜಮೀನಿನ ಪಕ್ಕದಲ್ಲೇ ಸುರಿಯತೊಡಗಿದರೆ ಏನು ಮಾಡುತ್ತೀರಿ? ಕಾಯ್ದೆಗೆ ತರುವ ತಿದ್ದುಪಡಿ ಮನುಷ್ಯ, ಮನುಷ್ಯರ ನಡುವೆ ಸಂಘರ್ಷವನ್ನೂ ಸೃಷ್ಟಿಸುತ್ತದೆ.
ಕೃಷಿಭೂಮಿಯಿಂದ ಉತ್ಪಾದನೆ ಹೆಚ್ಚಬೇಕು ಎನ್ನುವುದೇನೋ ನಿಜ. ಆದರೆ, ಅದಕ್ಕೆ ನಾವು ತೆರಲು ಹೊರಟಿರು ಬೆಲೆ ಎಂತಹದ್ದು? ಪಶ್ಚಿಮ ಘಟ್ಟದಲ್ಲಿ ಮೊದಲು 40 ದಿನಗಳಲ್ಲಿ ಸುರಿಯುತ್ತಿದ್ದ ಪ್ರಮಾಣದಷ್ಟು ಮಳೆ ಈಗೀಗ ನಾಲ್ಕೇ ದಿನಗಳಲ್ಲಿ ಸುರಿಯುತ್ತಿದೆ. ಮಹಾಪೂರಗಳು ಮೇಲಿಂದ ಮೇಲೆ ಉಂಟಾಗುತ್ತಿವೆ. ಕೊಡಗಿನಲ್ಲಂತೂ ಗುಡ್ಡಗಳೇ ಕುಸಿದಿವೆ. ಪರಿಸರದ ಈ ಅವಘಡಗಳು ನಮಗೆ ಇನ್ನೂ ಪಾಠವಾಗಿಲ್ಲ ಎನ್ನುವುದನ್ನು ಸರ್ಕಾರದ ನೀತಿಗಳು ಹೇಳುತ್ತಿವೆ.
ಘಟ್ಟ ಪ್ರದೇಶದ ಹಲವೆಡೆ ನಿತ್ಯ ಹರಿದ್ವರ್ಣ ಕಾಡು ಮಾಯವಾಗಿ ನೆಡುತೋಪುಗಳು ಹೆಚ್ಚಾಗಿವೆ. ನಮ್ಮ ತಂಡ ಘಟ್ಟ ಪ್ರದೇಶದ ಕೃಷಿ ಚಟುವಟಿಕೆ ಕುರಿತು ಅಧ್ಯಯನಒಂದನ್ನು ಮಾಡಿತ್ತು. ನೈಸರ್ಗಿಕ ಕಾಡು ಇರುವ ಪ್ರದೇಶದಲ್ಲಿದ್ದ ಹಳ್ಳಿಯ ರೈತ ಪ್ರತಿ ಎಕರೆಗೆ ₹ 1.52 ಲಕ್ಷದಷ್ಟು ಆದಾಯ ಗಳಿಸಿದ್ದ. ನೈಸರ್ಗಿಕ ಕಾಡಿನ ಸುತ್ತ ಮಳೆ ಪ್ರಮಾಣ ಹೆಚ್ಚಾಗಿದ್ದು, ವರ್ಷದುದ್ದಕ್ಕೂ ನೀರಿನ ಲಭ್ಯತೆ ಇದ್ದುದರಿಂದ ಅವನು ಮೂರು ಬೆಳೆ ತೆಗೆದಿದ್ದ.
ಅದೇ ನೆಡುತೋಪು ಇದ್ದ ಪ್ರದೇಶದ ಕೃಷಿಕ ಪ್ರತಿ ಎಕರೆಗೆ ₹32 ಸಾವಿರ ಆದಾಯವನ್ನಷ್ಟೆ ಸಂಪಾದಿಸಿದ್ದ. ನೆಡುತೋಪು ಪ್ರದೇಶದ ಸುತ್ತ ಮಳೆ ಪ್ರಮಾಣ ಕಡಿಮೆಯಾಗಿ, ನೀರಿನ ಲಭ್ಯತೆ ಇಲ್ಲದಿದ್ದುದೇ ಕೃಷಿ ಆದಾಯದ ಕುಸಿತಕ್ಕೆ ಕಾರಣವಾಗಿತ್ತು. ಕೊಡಗಿನಲ್ಲಿ ನಾವು ರೈತರನ್ನು ಮಾತನಾಡಿಸಿದಾಗ ಅವರು ಕೃಷಿಭೂಮಿ ಮಾರಲು ಸಿದ್ಧರಿಲ್ಲದಿರುವುದು ಎದ್ದುಕಂಡಿತು. ಭೂಪರಿವರ್ತನೆ ನಿಯಮ ಸರಳೀಕರಣವಾಗಿದ್ದರಿಂದ ಕೈತುಂಬಾ ಹಣ ಸಂಪಾದಿಸುವ ಆಸೆ, ಯಾರನ್ನೇ ಆದರೂ ಭೂಮಿ ಮಾರಾಟಕ್ಕೆ ಮುಂದಾಗುವಂತೆ ಮಾಡುವ ಸಾಧ್ಯತೆ ಇಲ್ಲದಿಲ್ಲ.
‘ಘಟ್ಟ ಪ್ರದೇಶದಲ್ಲಿ ಈಗ ರೈತರೂ ಕಾಡು ಪ್ರದೇಶವನ್ನು ಅತಿಕ್ರಮಣ ಮಾಡಿಲ್ಲವೇ’ ಎಂಬ ವಾದವೂ ಭೂ ಸುಧಾರಣೆ ಕಾಯ್ದೆಯ ತಿದ್ದುಪಡಿ ಪರವಾಗಿ ಕೇಳಿ ಬರುತ್ತಿದೆ. ಅವರಿಗೆ ನನ್ನದು ತುಂಬಾ ಸರಳವಾದ ಪ್ರಶ್ನೆ: ಆಗಿರುವ ತಪ್ಪನ್ನು ತಿದ್ದುವ ಬದಲು ಹೊಸ ಪ್ರಮಾದವನ್ನು ಎಸಗಬೇಕೇ?
ರೈತರ ಮೇಲೆ ಸರ್ಕಾರಕ್ಕೆ ನಿಜಕ್ಕೂ ಕಕ್ಕುಲಾತಿ ಇದ್ದರೆ ಎಲ್ಲ ರೈತರಿಗೂ ನೀರು ಲಭ್ಯತೆ ಆಗುವಂತೆ ಮಾಡಬೇಕು. ಕೆರೆ–ಕುಂಟೆಗಳ ರೂಪದಲ್ಲಿ ಈ ಹಿಂದೆ ಅಂತಹ ನೀರಿನ ಮೂಲಗಳು ಇದ್ದವು. ನಮ್ಮ ಪೂರ್ವಜರು ರೂಪಿಸಿದ್ದ ವ್ಯವಸ್ಥಿತ ವಿಕೇಂದ್ರೀಕೃತ ಸೌಲಭ್ಯವದು. ಆದರೆ, ಬ್ರಿಟಿಷರು ಬಂದ ಮೇಲೆ ಪೈಪ್ ಮೂಲಕ ನೀರು ಪೂರೈಕೆ ಆರಂಭಿಸಲಾಯಿತು. ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ಬಂತು. ಇದು ರೈತರನ್ನು ಪರಾವಲಂಬಿ ಮಾಡುವ ಜತೆಗೆ ಭ್ರಷ್ಟಾಚಾರಕ್ಕೂ ದಾರಿ ತೆರೆಯಿತು.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಕಾರ್ಪೊರೇಟ್ ವಲಯಕ್ಕೆ ಅನುಕೂಲವೇ ಹೊರತು ರೈತನಿಗೆ ಏನೇನೂ ಪ್ರಯೋಜನವಿಲ್ಲ. ಆತನಿಗೆ ಸಿಗುವ ಆದಾಯದಲ್ಲಿ ಏನೂ ಬದಲಾವಣೆಯಾಗದು. ಇತ್ತ ಗ್ರಾಹಕನಿಗೂ ಅದರ ಲಾಭ ಸಿಗದು. ಮಧ್ಯವರ್ತಿಗಳಾದ ಖಾಸಗಿ ಕಂಪನಿಗಳು ಭರಪೂರ ಲಾಭ ಗಿಟ್ಟಿಸುವಲ್ಲಿ ಸಂಶಯವಿಲ್ಲ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಬದಲು, ಕೃಷಿ ಬೆಳೆಗೆ ಅನುಗುಣವಾಗಿ ಸುತ್ತಲಿನ ಹಳ್ಳಿಗಳನ್ನು ಒಂದೊಂದು ಘಟಕ ಮಾಡಿ, ಮಾರುಕಟ್ಟೆ ಅಭಿವೃದ್ಧಿಪಡಿಸುವ, ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ, ಮಾರಾಟ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರೆ ಚೆನ್ನಾಗಿತ್ತು. ಕೃಷಿ ದೃಷ್ಟಿಕೋನದ ನೀತಿ ನಿರೂಪಣೆಗೆ ನಿಂತಾಗ ಇಂತಹ ಹಾದಿಗಳು ಹೊಳೆಯಬಲ್ಲವು. ಕೈಗಾರಿಕೆ ಉತ್ತೇಜನವೊಂದೇ ಕಣ್ಣ ಮುಂದಿದ್ದಾಗ?
ಲೇಖಕ: ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ
ಅರಣ್ಯ ಕಾಯ್ದೆಗಳ ಗುರಾಣಿ ಇದೆ
ಭೂಸುಧಾರಣೆ ಕಾಯ್ದೆಯ ಪ್ರಸ್ತಾವಿತ ತಿದ್ದುಪಡಿಯಿಂದ ಪರಿಸರದ ಮೇಲಾಗುವ ಪರಿಣಾಮದ ಕುರಿತು ಪರಿಸರವಾದಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಯ್ದೆಯ ಹೊಸ ಸ್ವರೂಪದಿಂದ ಅನಾಹುತ ತಪ್ಪಿದ್ದಲ್ಲ ಎನ್ನುವುದು ಒಂದು ವಾದವಾದರೆ, ಕಾಡಿನಂಚಿನ ಕೃಷಿಭೂಮಿಯನ್ನು ಯಾರೇ ಖರೀದಿಸಿದರೂ ಅಲ್ಲಿ ಅನ್ಯ ಚಟುವಟಿಕೆಗಳಿಗೆ ಆಸ್ಪದವಿಲ್ಲ. ಅರಣ್ಯ ಕಾಯ್ದೆಗಳ ಗುರಾಣಿ ಇದೆ ಎನ್ನುವುದು ಇನ್ನೊಂದು ವಾದ.
ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ –ಬೆಳಗಾವಿ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಮೈಸೂರು, ಕೊಡಗು ಮತ್ತು ಚಾಮರಾಜನಗರದಲ್ಲಿ– ಪಶ್ಚಿಮಘಟ್ಟ ವ್ಯಾಪಿಸಿದೆ. 1994ರಲ್ಲಿ ಕಾಫಿ ಬೆಳೆಯ ಮೇಲಿನ ನಿಯಂತ್ರಣ ತೆರವಾದ ನಂತರ ಕೊಡಗು ಜಿಲ್ಲೆಯಲ್ಲಿ ಇಳುವರಿ 60 ಸಾವಿರ ಟನ್‌ನಿಂದ 1.3 ಲಕ್ಷ ಟನ್‌ಗೆ ಏರಿದೆ. ಇದಕ್ಕೆ ಒಳ್ಳೆಯ ಇಳುವರಿ ತರುವ ತಳಿಯ ಕಾಫಿ ಗಿಡಗಳಲ್ಲದೆ, ತೋಟಗಳ ವಿಸ್ತರಣೆ ಕೂಡ ಕಾರಣವಾಗಿದೆ. ತೋಟಗಳ ವಿಸ್ತರಣೆಯ ಹಪಹಪಿ ಹೆಚ್ಚಿದ್ದರಿಂದ ಜಿಲ್ಲೆಯ ದೇವರಕಾಡು ಸಹ ತನ್ನಮೂಲಸ್ವರೂಪವನ್ನು ಕಳೆದುಕೊಂಡಿದೆ ಎನ್ನುತ್ತಾರೆ ಪರಿಸರತಜ್ಞರು.
‘ಹಣ ಇರುವ ರಾಜಕೀಯ ಮುಖಂಡರಿಗೆ ತೋಟ ಖರೀದಿಸುವ ಆಸೆ. ಅವರಿಗೆ ತೋಟ ಹುಡುಕಿಕೊಡುವ ದಲ್ಲಾಳಿಗಳು ಸೃಷ್ಟಿಯಾಗಿದ್ದಾರೆ. ಖರೀದಿ ಮಾಡಿದ ತೋಟಕ್ಕೆ ಹೊಂದಿಕೊಂಡ ಅರಣ್ಯಕ್ಕೂ ಬೇಲಿ ಹಾಕಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಕಾಡು, ಸೂಕ್ಷ್ಮ ಪರಿಸರ ಉಳಿಸುವ ಕಾನೂನುಗಳು ಯಾವುವೂ ಅವರಿಗೆ ಲೆಕ್ಕಕ್ಕಿಲ್ಲ. ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಆಗುತ್ತಿರುವುದು ಅವರ ಭೂಮಿಯ ಹಸಿವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ’ ಎಂದು ಪರಿಸರವಾದಿ ತಮ್ಮು ಪೂವಯ್ಯ ಆಕ್ರೋಶ ವ್ಯಕ್ತಪಡಿಸುತ್ತಾರೆ.
‘ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸರ್ಕಾರವು ಮಹಾತ್ಮ ಗಾಂಧೀಜಿ ಅವರು ಕಂಡ ಕನಸು ನುಚ್ಚು ನೂರು ಮಾಡುತ್ತಿದೆ. 2004ರಲ್ಲಿ ಅಂದಿನ ಸರ್ಕಾರ ಈ ದುರಂತಕ್ಕೆ ಮುನ್ನುಡಿ ಬರೆದಿತ್ತು. ಭ್ರಷ್ಟ ರಾಜಕಾರಣಿಗಳು ಹಾಗೂ ಭ್ರಷ್ಟ ಅಧಿಕಾರಿಗಳು ಅಕ್ರಮದಿಂದ ಸಂಪಾದಿಸಿದ್ದ ಹಣದಿಂದ ಬೇನಾಮಿ ಹೆಸರಿನಲ್ಲಿ ಆಸ್ತಿ ಖರೀದಿಸಿದ್ದರು. ಅದನ್ನು ಸಕ್ರಮ ಮಾಡಿ
ಕೊಳ್ಳಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ’ ಎಂದು ಅವರು ದೂರುತ್ತಾರೆ.
‘ತಿದ್ದುಪಡಿಯಾದ ಕಾಯ್ದೆ ಜಾರಿಯಾದರೆ ಕೊಡಗಿನ ರೈತರಿಗೆ ತೊಂದರೆಯಾಗಲಿದೆ. ಮೊದಲೇ ಭೂಕುಸಿತದಿಂದ ಜಮೀನು ಕಳೆದುಕೊಂಡಿರುವ ಜಿಲ್ಲೆಯ ರೈತರು ಜಮೀನು ಮಾರಾಟ ಮಾಡುವ ಅಪಾಯವಿದೆ. ಅಲ್ಲಿ ರೆಸಾರ್ಟ್ ನಿರ್ಮಾಣವಾದರೆ ರೈತರು ಅಲ್ಲಿಯೇ ಕೂಲಿ ಮಾಡಬೇಕಾದ ಪರಿಸ್ಥಿತಿ ಬರಲಿದೆ’ ಎಂದೂ ಪೂವಯ್ಯ ಎಚ್ಚರಿಸುತ್ತಾರೆ.
‘ಪರಿಸರ ಸೂಕ್ಷ್ಮ ವಲಯದಲ್ಲಿ ಕೃಷಿಭೂಮಿಯನ್ನು ಖರೀದಿ ಮಾಡಿದಾಕ್ಷಣ ಅಲ್ಲಿ ರೆಸಾರ್ಟ್, ಹೋಮ್ ಸ್ಟೇಗಳು ಹೆಚ್ಚುತ್ತವೆ ಎಂದಾಗಲಿ, ವಾಣಿಜ್ಯ ಚಟುವಟಿಕೆ ಗಳು ತೀವ್ರಗೊಳ್ಳುತ್ತವೆ ಎಂದಾಗಲಿ ಹೇಳಲಾಗದು. ಏಕೆಂದರೆ, ಅಲ್ಲಿ ಏನೇ ಚಟುವಟಿಕೆಗಳನ್ನು ನಡೆಸ
ಬೇಕಿದ್ದರೂ ಕಾನೂನಿಗೆ ಅನುಗುಣವಾಗಿ ಅನುಮತಿ ಪಡೆಯಬೇಕಾಗುತ್ತದೆ. ವನ್ಯಜೀವಿ ಮಂಡಳಿಯಒಪ್ಪಿಗೆಯಿಲ್ಲದೆ ಅಲ್ಲಿ ಯಾವುದೇ ಅನ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ’ ಎಂದು ಅಭಿಪ್ರಾಯಪಡುತ್ತಾರೆವೈಲ್ಡ್ ಲೈಫ್ ಫಸ್ಟ್‌ನ ಟ್ರಸ್ಟಿ ಪ್ರವೀಣ್ ಭಾರ್ಗವ್.
‘ಘಟ್ಟಗಳಲ್ಲಿ ಮಳೆ ಬಿದ್ದರೆ ಮಾತ್ರವೇ ಬಯಲು ಪ್ರದೇಶದಲ್ಲಿ ಕೃಷಿ ನಡೆಯಲು ಸಾಧ್ಯ. ಆಯಾ ಅಣೆಕಟ್ಟೆಗಳಿಗೆ ನೀರು ಬಂದರೆ ಮಾತ್ರವೇ ಅಚ್ಚುಕಟ್ಟಿಗೆ ನೀರು ಹರಿಯುತ್ತದೆ. ಅಂದರೆ ಘಟ್ಟ ಪ್ರದೇಶದಲ್ಲಿ ಸಸ್ಯ ಸಂಪತ್ತು ಉಳಿದರೆ ಮಾತ್ರ ಮಳೆ ಬರುತ್ತದೆ. ಆ ಪ್ರದೇಶದಲ್ಲಿ ಕೃಷಿ ಹೆಸರಿನಲ್ಲಿಬೇಕಾಬಿಟ್ಟಿ ಅನ್ಯ ಚಟುವಟಿಕೆಗಳನ್ನು ನಡೆಸುವುದು ಒಳ್ಳೆಯ ಪ್ರವೃತ್ತಿಯಲ್ಲ’ ಎಂದು ಅವರು ವಿವರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.