ADVERTISEMENT

ಚಿರತೆ ಮತ್ತು ಚೀತಾ ನಡುವಿನ ವ್ಯತ್ಯಾಸ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಸೆಪ್ಟೆಂಬರ್ 2022, 9:41 IST
Last Updated 17 ಸೆಪ್ಟೆಂಬರ್ 2022, 9:41 IST
ಚಿರತೆ, ಚೀತಾ
ಚಿರತೆ, ಚೀತಾ   

ದೇಶದಲ್ಲಿ ನಾಶವಾಗಿರುವ ಮಾಂಸಾಹಾರಿ ಪ್ರಾಣಿ ಚೀತಾ ಸಂತತಿಯನ್ನು ಬೆಳೆಸಲು ಕೇಂದ್ರ ಸರ್ಕಾರ ಮುಂದಾಗಿದ್ದು ಚೀತಾಗಳ ಪುನರ್ವಸತಿಗೆ ಅಗತ್ಯ ಯೋಜನೆಗಳನ್ನು ರೂಪಿಸಿದೆ.

‘ಖಂಡಾಂತರ ಸ್ಥಳಾಂತರ ಯೋಜನೆ’ಯ ಭಾಗವಾಗಿ ಎಂಟು ಚೀತಾಗಳನ್ನು ಆಫ್ರಿಕಾದ ನಮೀಬಿಯಾ ದೇಶದಿಂದ ತರಿಸಿಕೊಂಡಿದೆ. ಇವುಗಳನ್ನುಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ-ಪಾಲ್ಪುರ್ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದೆ.

ಚೀತಾ ಭಾರತದಲ್ಲಿ ಸಂಪೂರ್ಣವಾಗಿ ನಾಶಗೊಂಡಿರುವ ಏಕೈಕ ದೊಡ್ಡ ಮಾಂಸಾಹಾರಿ ಪ್ರಾಣಿ. ಮಾನವ–ವನ್ಯಜೀವಿಗಳ ಸಂಘರ್ಷ, ಬೇಟೆ, ಆವಾಸಸ್ಥಾನದ ನಾಶದಿಂದಾಗಿ ಈ ಸಂತತಿ ದೇಶದಿಂದ ಮರೆಯಾಗಿದೆ. ಭಾರತ ಸರ್ಕಾರವು ದೇಶದಲ್ಲಿ ಚೀತಾ ಸಂತತಿ ಸಂಪೂರ್ಣವಾಗಿ ನಾಶವಾಗಿದೆ ಎಂದು 1952 ರಲ್ಲಿ ಅಧಿಕೃತವಾಗಿ ಘೋಷಣೆ ಮಾಡಿತ್ತು.

ನಮ್ಮಲ್ಲಿ ಅನೇಕರು ಚಿರತೆಗಳನ್ನುಚೀತಾಗಳೆಂದು ಭಾವಿಸುತ್ತಾರೆ. ಅವು ನೋಡಲು ಒಂದೇ ರೀತಿ ಕಾಣುತ್ತವೆಯಾದರೂ ಸೂಕ್ಷ್ಮವಾಗಿ ಗಮನಿಸಿದರೆ ವ್ಯತ್ಯಾಸ ತಿಳಿಯುತ್ತದೆ. ಈ ಎರಡು ಪ್ರಾಣಿಗಳು ದೊಡ್ಡ ಬೆಕ್ಕಿನ ಪ್ರಬೇದಕ್ಕೆ (ವೈಜ್ಞಾನಿಕ ಹೆಸರು: ಎಸಿನೋಸಿಕ್ಸ್ ಜುಬಾಟಸ್) ಸೇರಿದ್ದರೂವಿಭಿನ್ನ ವ್ಯತ್ಯಾಸಗಳೊಂದಿಗೆ ಪರಸ್ಪರ ಭಿನ್ನವಾಗಿವೆ.

ಚೀತಾ, ಚಿರತೆ

ವ್ಯತ್ಯಾಸಗಳು...
* ಚಿರತೆಯ ಮೈಮೇಲೆ ಗುಲಾಬಿ ಹೂವಿನಾಕಾರದ ಗುರುತುಗಳಿದ್ದರೆ (ಚುಕ್ಕೆ) ಚೀತಾಗಳ ಮೈಮೇಲೆ ದುಂಡಾದ ಇಲ್ಲವೇ ಮೊಟ್ಟೆಯಾಕಾರದ ಗುರುತುಗಳಿವೆ.

* ಚೀತಾಗಳು ಸಾಮಾನ್ಯವಾಗಿಹಗಲಿನಲ್ಲಿ ಬೇಟೆಯಾಡುತ್ತವೆ. ಆದರೆ ಚಿರತೆಗಳು ಹೆಚ್ಚಾಗಿ ರಾತ್ರಿ ವೇಳೆಯಲ್ಲಿ ಬೇಟೆಯಾಡುತ್ತವೆ. (ಕೆಲವೊಮ್ಮೆ ಹಗಲಿನಲ್ಲೂ ಬೇಟೆಯಾಡುತ್ತವೆ)

* ಚಿರತೆಗಳುತಮ್ಮ ಕಣ್ಣುಗಳಲ್ಲಿ ಹೆಚ್ಚಿನ ಸಂಖ್ಯೆಯ ಬೆಳಕಿನ-ಸಂವೇದನಾಶೀಲ ಕೋಶಗಳನ್ನು ಹೊಂದಿವೆ. ಹಾಗೇ ಅವುಗಳಕಣ್ಣಿನ ಪಾಪೆ ಕೂಡ ದೊಡ್ಡದಾಗಿದೆ. ಇದರಿಂದ ಚಿರತೆಗಳಿಗೆ ರಾತ್ರಿ ವೇಳೆಯೂ ಕಣ್ಣು ಕಾಣಿಸುತ್ತದೆ. ಅವುಕತ್ತಲೆಯಲ್ಲಿ ಚಲನೆ ಮತ್ತು ಆಕಾರವನ್ನು ಗುರುತಿಸಿ ಸುಲಭವಾಗಿ ಬೇಟೆಯಾಡುತ್ತವೆ. ಆದರೆ ಚೀತಾಗಳಿಗೆ ರಾತ್ರಿವೇಳೆ ಕಣ್ಣು ಕಾಣಿಸದಿರುವುದರಿಂದ ಅವು ವಿಶ್ರಾಂತಿ ಪಡೆಯುತ್ತವೆ.

* ಚೀತಾಗಳು ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳಾಗಿವೆ. ಇವು ಗಂಟೆಗೆ120 ಕಿ.ಮೀ (75 ಮೈಲಿ) ವೇಗದಲ್ಲಿ ಓಡುತ್ತವೆ. ಆದರೆ ಚಿರತೆಗಳು ಗಂಟೆಗೆ ಕೇವಲ58 ಕಿ.ಮೀ (37 ಮೈಲಿ) ವೇಗದಲ್ಲಿಓಡುತ್ತವೆ.

* ಚೀತಾಗಳು ಚಿರತೆಗಳಿಗಿಂತಲೂ ಉದ್ದನೆಯ ಬಾಲವನ್ನು ಹೊಂದಿವೆ. ಈ ಎರಡು ಪ್ರಾಣಿಗಳ ಉಗುರು ಮತ್ತು ಪಾದಗಳು ದೊಡ್ಡ ಗಾತ್ರದ ಮರಗಳು, ಬೆಟ್ಟ ಗುಡ್ಡಗಳು, ಕಡಿದಾದ ಹಾಗೂ ಎತ್ತರದ ಪ್ರದೇಶಗಳನ್ನು ಹತ್ತಲು ಅನುಕೂಲಕರವಾಗಿವೆ.

ಚೀತಾ, ಚಿರತೆ

* ಚೀತಾಗಳಕಣ್ಣಿನ ಕೆಳಭಾಗದಿಂದಬಾಯಿಯವರೆಗೂ ಕಪ್ಪು ರೇಖೆಯನ್ನು ಕಾಣಬಹುದು. ಆದರೆ ಚಿರತೆಗಳಲ್ಲಿ ಈ ರೇಖೆ ಕಂಡುಬರುವುದಿಲ್ಲ.

* ಈ ಎರಡೂ ಪ್ರಾಣಿಗಳೂ ಸುಲಭವಾಗಿ ಈಜುತ್ತವೆ.

* ಚೀತಾಗಳು ಗಾತ್ರದಲ್ಲಿ ಚಿರತೆಗಳಿಗಿಂತ ದೊಡ್ಡವು. ಆದರೆ ಇವು ಚಿರತೆಗಳಷ್ಟು ಬಲಶಾಲಿ ಅಲ್ಲ.

* ಚಿರತೆ ಮತ್ತು ಚೀತಾಗಳಿಗೆ ಮರಿ ಹಾಕಲು ನಿರ್ದಿಷ್ಟ ಋತುಮಾನವಿಲ್ಲ.

* ಚಿರತೆಗಳ ಗರ್ಭಧಾರಣೆ ಅವಧಿ 90 ರಿಂದ 105 ದಿನಗಳ ನಡುವೆ ಇರುತ್ತದೆ. ಚಿರತೆಗಳು ಸಾಮಾನ್ಯವಾಗಿ ಎರಡು ಮರಿಗಳಿಗೆ ಜನ್ಮ ನೀಡುತ್ತವೆ.

* ಚೀತಾಗಳು90 ರಿಂದ 98 ದಿನಗಳ ಗರ್ಭಧಾರಣೆಯ ಅವಧಿಯನ್ನು ಹೊಂದಿರುತ್ತವೆ. ಇವು ಸಾಮಾನ್ಯವಾಗಿ ಮೂರರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತವೆ.

* ಚಿರತೆ ಮತ್ತು ಚೀತಾ ಮರಿಗಳು ಜನಿಸಿದ10 ದಿನಗಳಲ್ಲಿ ಕಣ್ಣುಗಳನ್ನು ತೆರೆಯುತ್ತವೆ.

* ಚೀತಾ ಕಾಲುಗಳು ಚಿರತೆ ಕಾಲುಗಳಿಗಿಂತಲೂ ಉದ್ದ ಇವೆ.

ಭಾರತದಲ್ಲಿ ಚೀತಾಗಳು: ಹಿನ್ನೋಟ
1556 ರಿಂದ 1605 ರವರೆಗೆ ಭಾರತದಲ್ಲಿ ಆಳ್ವಿಕೆ ನಡೆಸಿದ ಮೊಘಲ್ ಚಕ್ರವರ್ತಿ ಅಕ್ಬರ್ ಬಳಿ 1,000 ಚೀತಾಗಳಿದ್ದವು ಎನ್ನಲಾಗಿದೆ. ಕೃಷ್ಣಮೃಗಗಳು ಮತ್ತು ಸಾರಂಗಗಳನ್ನು ಬೇಟೆಯಾಡಲು ಅವುಗಳನ್ನು ಬಳಸಲಾಗುತ್ತಿತ್ತು ಎಂದು ‘ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (ಬಿಎನ್‌ಎಚ್‌ಎಸ್)’ ಮಾಜಿ ಉಪಾಧ್ಯಕ್ಷ ದಿವ್ಯಭಾನು ಸಿನ್ಹಾ ಅವರ ‘ದಿ ಎಂಡ್ ಆಫ್ ಎ ಟ್ರಯಲ್ - ದಿ ಚೀತಾ ಇನ್ ಇಂಡಿಯಾದ’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಅಕ್ಬರನ ಮಗ ಜಹಾಂಗೀರನು ಪಾಲಾ ಎಂಬಲ್ಲಿ ಚೀತಾಗಳನ್ನು ಬಳಸಿ 400ಕ್ಕೂ ಹೆಚ್ಚು ಜಿಂಕೆಗಳನ್ನು ಹಿಡಿದಿದ್ದ ಎಂದು ದಿವ್ಯಭಾನು ಸಿನ್ಹಾ ಅವರ ಅದೇ ಪುಸ್ತಕದಲ್ಲಿ ಹೇಳಲಾಗಿದೆ.

ಬೇಟೆಗಾಗಿ ಚೀತಾಗಳನ್ನು ಸೆರೆಹಿಡಿಯುವುದು ಮತ್ತು ಪಂಜರಗಳಲ್ಲಿ ಕೂಡಿ ಹಾಕುವುದರಿಂದ ಅವುಗಳ ಸಂತಾನೋತ್ಪತ್ತಿಗೆ ಅಡಚಣೆ ಉಂಟಾಗುತ್ತದೆ. ಹೀಗಾಗಿಯೇ ದೇಶದಲ್ಲಿ ಅವುಗಳ ಸಂಖ್ಯೆ ಕುಸಿಯಲು ಕಾರಣವಾಯಿತು.

20ನೇ ಶತಮಾನದ ಆರಂಭದ ವೇಳೆಗೆ, ಭಾರತೀಯ ಚೀತಾಗಳ ಸಂಖ್ಯೆ ಕೇವಲ ನೂರಕ್ಕೆ ಕುಸಿದಿತ್ತು. ರಾಜಕುಮಾರರು ಆಫ್ರಿಕಾದಿಂದ ಚೀತಾಗಳನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದರು. 1918 ಮತ್ತು 1945ರ ನಡುವೆ ಸುಮಾರು 200 ಚೀತಾಗಳನ್ನು ಆಮದು ಮಾಡಿಕೊಳ್ಳಲಾಗಿತ್ತು.

‘ಮಧ್ಯ ಭಾರತದಲ್ಲಿ ಚೀತಾರಕ್ಷಣೆಗೆ ವಿಶೇಷ ಆದ್ಯತೆ ನೀಡುವಂತೆ’ 1952 ರಲ್ಲಿ ಭಾರತದಲ್ಲಿ ನಡೆದ ಮೊದಲ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಸರ್ಕಾರ ಕರೆ ನೀಡಿತ್ತು. ಚೀತಾಗಳನ್ನು ಸಂರಕ್ಷಿಸಲು ದಿಟ್ಟ ಕ್ರಮಗಳನ್ನು ಸರ್ಕಾರ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.