ADVERTISEMENT

ಆಳ –ಅಗಲ: ಮಣಿಪುರ ಮೀಸಲು ಸಮರ

ಪ್ರಜಾವಾಣಿ ವಿಶೇಷ
Published 8 ಮೇ 2023, 19:32 IST
Last Updated 8 ಮೇ 2023, 19:32 IST
ಹಿಂಸಾಪೀಡಿತ ಪ್ರದೇಶದಲ್ಲಿದ್ದ ಜನರನ್ನು ಸೇನಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದರು
ಹಿಂಸಾಪೀಡಿತ ಪ್ರದೇಶದಲ್ಲಿದ್ದ ಜನರನ್ನು ಸೇನಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದರು   –ಎಎಫ್‌ಪಿ ಚಿತ್ರ

ಈಶಾನ್ಯ ಭಾರತದ ಅತ್ಯಂತ ಚಿಕ್ಕ ರಾಜ್ಯಗಳಲ್ಲಿ ಒಂದಾದ ಮಣಿಪುರ ಬಹುಪಾಲು ಪರ್ವತ ಪ್ರದೇಶಗಳಿಂದಲೇ ಕೂಡಿದೆ. ರಾಜ್ಯದಲ್ಲಿ ಬಯಲು ಪ್ರದೇಶ ಇರುವುದು ಇಂಫಾಲ್‌ ನದಿಯ ಇಕ್ಕೆಲಗಳಲ್ಲಿ ಮಾತ್ರ. ರಾಜ್ಯದ ಒಟ್ಟು ಭೂವಿಸ್ತೀರ್ಣದಲ್ಲಿ ಈ ಬಯಲು ಪ್ರದೇಶದ ಪಾಲು ಶೇ 10ರಷ್ಟು ಮಾತ್ರ. ಪಶ್ಚಿಮ ಇಂಫಾಲ್‌, ಪೂರ್ವ ಇಂಫಾಲ್‌, ವಿಷ್ಣುಪುರ ಮತ್ತು ಥೌಬಾಲ್‌ ಜಿಲ್ಲೆಗಳಲ್ಲಿ ಹರಡಿರುವ ಈ ಪ್ರದೇಶವನ್ನು ‘ಮಣಿಪುರ ಕಣಿವೆ’, ‘ಇಂಫಾಲ್‌ ಕಣಿವೆ’ ಎಂದು ಕರೆಯಲಾಗುತ್ತದೆ.

ಈ ಪ್ರದೇಶದ ನಿವಾಸಿಗಳನ್ನು ‘ಕಣಿವೆ ಜನರು’ ಎಂದು ಕರೆಯಲಾಗುತ್ತದೆ. ಈ ಕಣಿವೆ ಪ್ರದೇಶದಲ್ಲಿ ನೆಲೆಸಿರುವ ಜನರಲ್ಲಿ ಶೇ 99ರಷ್ಟು ಜನರು ‘ಮೈತೇಯಿ’ ಸಮುದಾಯಕ್ಕೆ ಸೇರಿದವರು. ಮೈತೇಯಿ ಜನರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಒತ್ತಾಯಿಸುತ್ತಿದ್ದಾರೆ. ರಾಜ್ಯ ವಿಧಾನಸಭೆಯ 60 ಶಾಸಕರಲ್ಲಿ 50 ಶಾಸಕರು ಇದೇ ಸಮುದಾಯದವರು. ಹೀಗಾಗಿ ಸರ್ಕಾರವೂ ಮೈತೇಯಿ ಜನರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಉತ್ಸುಕವಾಗಿದೆ. ಆದರೆ, ಒಂದು ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರಕ್ಕೆ ಇದು ಸೀಮಿತವಲ್ಲ. ಈ ಕಾರಣದಿಂದಲೇ ಮಣಿಪುರದಲ್ಲಿ ಸಂಘರ್ಷ ಭುಗಿಲೆದ್ದಿದೆ. 

ದಟ್ಟಾರಣ್ಯದಿಂದ ಕೂಡಿರುವ ಗುಡ್ಡಗಾಡು ಪ್ರದೇಶದ ಬಹುತೇಕ ನಿವಾಸಿಗಳು ಬುಡಕಟ್ಟು ಸಮುದಾಯಗಳಿಗೆ ಸೇರಿದವರೇ ಆಗಿದ್ದಾರೆ. ಈ  ಸಮುದಾಯಗಳನ್ನು ನಾಗಾ ಜನರು ಮತ್ತು ಕುಕಿ ಜನರು ಎಂದು ಎರಡು ಪ್ರಧಾನ ಪಂಗಡಗಳಾಗಿ ವಿಂಗಡಣೆ ಮಾಡಲಾಗಿದೆ. ಈ ಎರಡೂ ವಿಂಗಡಣೆಗಳ ಅಡಿಯಲ್ಲಿ ಒಟ್ಟು 34 ಬುಡಕಟ್ಟು ಸಮುದಾಯ ಗಳನ್ನು ಕೇಂದ್ರ ಸರ್ಕಾರವು ಗುರುತಿಸಿದ್ದು, ಅವಕ್ಕೆ ಮಾನ್ಯತೆ ನೀಡಿದೆ. ಸಂವಿಧಾನದ 371ಸಿ ವಿಧಿಯ ಅಡಿ ಈ 34 ಸಮುದಾಯಗಳಿಗೆ ಮಾತ್ರ ಅರಣ್ಯದ ಮೇಲೆ ವಿಶೇಷ ಹಕ್ಕು ನೀಡಲಾಗಿದೆ. ಕೇಂದ್ರದ ಯುಪಿಎ ಸರ್ಕಾರವು 2006ರಲ್ಲಿ ಜಾರಿಗೆ ತಂದಿದ್ದ ‘ಅರಣ್ಯ ಹಕ್ಕುಗಳ ಕಾಯ್ದೆ’ಯಲ್ಲಿಯೂ ಮಣಿಪುರದ ಬುಡಕಟ್ಟು ಜನರ ಈ ಹಕ್ಕುಗಳನ್ನು ಎತ್ತಿಹಿಡಿಯಲಾಗಿತ್ತು.

ADVERTISEMENT

ಈ 34 ಬುಡಕಟ್ಟು ಸಮುದಾಯಗಳು ಅಲ್ಲಿನ ಅರಣ್ಯ ಪ್ರದೇಶದ ಮೇಲೆ ಪಾರಂಪರಿಕ ಹಕ್ಕು ಹೊಂದಿವೆ. ಈ ಸಮುದಾಯಗಳು ಇರುವ ಅರಣ್ಯ ಪ್ರದೇಶಗಳನ್ನು ‘ಸಮುದಾಯ ಅರಣ್ಯ ಪ್ರದೇಶ’ಗಳು ಎಂದು ಗುರುತಿಸಲಾಗಿದೆ. 1968ರಲ್ಲಿ ಕೇಂದ್ರ ಸರ್ಕಾರವು ಇವುಗಳನ್ನು ‘ಮೀಸಲು ಅರಣ್ಯ ಪ್ರದೇಶ’ ಎಂದು ಘೋಷಿಸಿತ್ತು. ವಿರೋಧ ವ್ಯಕ್ತವಾದ ಕಾರಣ, ಘೋಷಣೆಯನ್ನು ಅನುಷ್ಠಾನಕ್ಕೆ ತಂದಿರಲಿಲ್ಲ. ಆನಂತರದಲ್ಲಿ ಈ ಜನರ ಹಕ್ಕುಗಳನ್ನು ಕಾಯ್ದುಕೊಳ್ಳಲು ರಾಜ್ಯ ವಿಧಾನಸಭೆಯಲ್ಲಿ ಗುಡ್ಡಗಾಡು ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯಲ್ಲಿ ಗುಡ್ಡಗಾಡು ಪ್ರದೇಶ ಮತ್ತು ಬುಡಕಟ್ಟು ಜನರನ್ನು ಪ್ರತಿನಿಧಿಸುವ ಶಾಸಕರು ಇರಬೇಕು. ಸಂವಿಧಾನದ ಆರನೇ ಪರಿಚ್ಛೇದ ಅಡಿಯಲ್ಲಿ ಈ ಜನರಿಗೆ ವಿಶೇಷ ಅಧಿಕಾರವಿದೆ. ಈ ಪರಿಚ್ಛೇದದ ಅನ್ವಯ ಮಣಿಪುರದ ಆರು ಜಿಲ್ಲೆಗಳನ್ನು ಸ್ವಾಯತ್ತ ಜಿಲ್ಲಾ ಮಂಡಳಿಗಳು ಎಂದು ಘೋಷಿಸಲಾಗಿದೆ. ಈ ಪ್ರದೇಶಕ್ಕೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಗಳನ್ನು ತರುವ ಮುನ್ನ ಈ ಸಮಿತಿಯ ಮತ್ತು ಸ್ವಾಯತ್ತ ಜಿಲ್ಲಾ ಮಂಡಳಿಗಳ ಒಪ್ಪಿಗೆ ಅತ್ಯಗತ್ಯ. 

ಆದರೆ, ಬುಡಕಟ್ಟು ಸಮುದಾಯಗಳಿಗೆ ಸಂವಿಧಾನಬದ್ಧವಾಗಿ ದತ್ತವಾಗಿರುವ ಅರಣ್ಯ ಹಕ್ಕುಗಳನ್ನು ರಾಜ್ಯ ಸರ್ಕಾರ ಹತ್ತಿಕ್ಕುತ್ತಿದೆ. ಹಲವು ಸಮುದಾಯ ಅರಣ್ಯ ಪ್ರದೇಶಗಳನ್ನು ‘ಮೀಸಲು ಅರಣ್ಯ ಪ್ರದೇಶ’ ಎಂದು ಏಕಪಕ್ಷೀಯವಾಗಿ ಘೋಷಿಸಿದೆ. ಮೈತೇಯಿ ಸಮುದಾಯದ ಮುಖಂಡ ಮತ್ತು ಮುಖ್ಯಮಂತ್ರಿ ಬಿರೆನ್‌ ಸಿಂಗ್‌ ಅವರು, ‘ರಾಜ್ಯದ ಎಲ್ಲಾ ಜಾಗವೂ ಸರ್ಕಾರದ್ದು’ ಎಂದು ಘೋಷಿಸಿರುವುದು ಸಂವಿಧಾನಬಾಹಿರ ಎಂಬುದು ಕುಕಿ ವಿದ್ಯಾರ್ಥಿ ಸಂಘಟನೆಯ ಆರೋಪ. ಬುಡಕಟ್ಟು ಜನರನ್ನು ಅರಣ್ಯ ಪ್ರದೇಶದಿಂದ ವ್ಯವಸ್ಥಿತವಾಗಿ ಹೊರಹಾಕಲು ಸರ್ಕಾರ ಮುಂದಾಗಿದೆ. ಈ ಕಾರಣದಿಂದಲೇ ಕುಕಿ ಬಂಡುಕೋರರ ಸಂಘಟನೆಗಳ ಜತೆಗಿನ ಕದನ ವಿರಾಮವನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ ಎಂದು ಸಂಘಟನೆ  ಆರೋಪಿಸಿದೆ.

ಈಗ ಮೈತೇಯಿ ಜನರಿಗೆ ಪರಿಶಿಷ್ಟ ಪಂಗಡದ ಸ್ಥಾನ ನೀಡಲು ಸರ್ಕಾರ ಒಲವು ತೋರಿರುವುದು ಕುಕಿ ಮತ್ತು ನಾಗಾ ಬುಡಕಟ್ಟು ಜನರನ್ನು ಕೆರಳಿಸಿದೆ. ಸರ್ಕಾರದ ನಡೆ ಮತ್ತು ಹೈಕೋರ್ಟ್‌ನ ಆದೇಶವನ್ನು ಖಂಡಿಸಿ ಕುಕಿ ಮತ್ತು ನಾಗಾ ಜನರು ಇಂಫಾಲ್‌ನಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದ್ದರು. ಮೆರವಣಿಗೆ ವೇಳೆ ಹಿಂಸಾಚಾರ ನಡೆದಿದೆ. ಹಿಂಸಾಚಾರ ನಿಯಂತ್ರಣಕ್ಕೆ ಬಂದಿದೆಯಾದರೂ, ಸಂಘರ್ಷ ಮತ್ತೆ ಭುಗಿಲೇಳುವ ಸಾಧ್ಯತೆಗಳಿವೆ ಇವೆ ಎಂದು ಭದ್ರತಾ ಪಡೆಗಳು ಹೇಳಿವೆ.

ಮೈತೇಯಿ ಬೇಡಿಕೆಗೆ ಕಾರಣಗಳು

ಪರಿಶಿಷ್ಟ ಪಂಗಡದ ಪಟ್ಟಿಗೆ ತಮ್ಮನ್ನು ಸೇರಿಸುವಂತೆ ಮೈತೇಯಿ ಸಮುದಾಯವು 10 ವರ್ಷಗಳ ಹಿಂದೆಯೇ ಸರ್ಕಾರದ ಮುಂದೆ ಬೇಡಿಕೆಯಿಟ್ಟಿದೆ. ತಮಗೆ ಎಸ್‌.ಟಿ ಮೀಸಲಾತಿಯೇ ಬೇಕು ಎಂದು ಸಮುದಾಯ ಪಟ್ಟು ಹಿಡಿದಿರುವುದಕ್ಕೆ ನೀಡುತ್ತಿರುವ ಕಾರಣಗಳಿವು

* 1949ರಲ್ಲಿ ಭಾರತದ ಒಕ್ಕೂಟಕ್ಕೆ ಮಣಿಪುರವು ಸೇರ್ಪಡೆಯಾಗುವ ಮುನ್ನ ತಮ್ಮ ಸಮುದಾಯವನ್ನು ‘ಬುಡಕಟ್ಟು’ ಎಂದೇ ಪರಿಗಣಿಸಲಾಗಿತ್ತು. ಆದರೆ, ಒಕ್ಕೂಟಕ್ಕೆ ಸೇರ್ಪಡೆಯಾದ ಬಳಿಕ ಈ ಸ್ಥಾನಮಾನ ತೆಗೆದುಹಾಕಲಾಗಿತ್ತು. ಇದರಿಂದ ನಮ್ಮ ಪಾರಂಪರಿಕ ಹಕ್ಕುಗಳಿಗೆ ಧಕ್ಕೆಯಾಗಿದೆ. ನಮ್ಮ ಸಮುದಾಯದ ಸಂಸ್ಕೃತಿ, ಭಾಷೆ ಹಾಗೂ ಪೂರ್ವಜರ ಭೂಮಿಯನ್ನು ಸಂರಕ್ಷಿಸಿಕೊಳ್ಳಬೇಕಾದರೆ ಎಸ್‌.ಟಿ ಮೀಸಲು ಬೇಕು 

* ರಾಜ್ಯದ ಗುಡ್ಡಗಾಡು ಮತ್ತು ಪರ್ವತ ಪ್ರದೇಶದಲ್ಲಿ ಮೈತೇಯಿ ಜನರು ಭೂಮಿ ಖರೀದಿಸಲು ಸಾಧ್ಯವಿಲ್ಲ. ಕಣಿವೆ ಪ್ರದೇಶದಲ್ಲಿ ಭೂಮಿ ಲಭ್ಯವಿಲ್ಲ. ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ, ಗುಡ್ಡಗಾಡು ಮತ್ತು ಪರ್ವತ ಪ್ರದೇಶದಲ್ಲಿ ನಾವೂ ಭೂಮಿ ಖರೀದಿಸಲು ಸಾಧ್ಯವಾಗುತ್ತದೆ

* ಸಾಂವಿಧಾನಿಕ ರಕ್ಷಣೆಯಿಂದ ಸಮುದಾಯ ವಿಮುಖವಾಗಿದ್ದು, ಸಮಾಜದ ಅಂಚಿಗೆ ತಳ್ಳಲಾಗಿದೆ ಎಂಬ ಭಾವವು ಜನರಲ್ಲಿ ಮೂಡಿದೆ. ನಮ್ಮನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವುದರಿಂದ ಮಾತ್ರ ನಮ್ಮ ಅಭಿವೃದ್ಧಿ ಸಾಧ್ಯ

ಬೇಡಿಕೆ ವಿರೋಧಕ್ಕೆ ಸಮರ್ಥನೆಗಳು

ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಮೈತೇಯಿ ಜನರ ಬೇಡಿಕೆಯನ್ನು ನಾಗಾ ಮತ್ತು ಕುಕಿ ಬುಡಕಟ್ಟು ಜನರು ವಿರೋಧಿಸುತ್ತಲೇ ಇದ್ದಾರೆ. ಈ ವಿರೋಧಕ್ಕೆ ಬುಡಕಟ್ಟು ಸಮುದಾಯಗಳು ನೀಡುತ್ತಿರುವ ಸಮರ್ಥನೆಗಳು ಇಂತಿವೆ

* ಯಾವುದೇ ಸಮುದಾಯವನ್ನು ಬುಡಕಟ್ಟು ಸಮುದಾಯ ಎಂದು ಪರಿಗಣಿಸಬೇಕಾದ ಯಾವ ಮಾನದಂಡವೂ ಮೈತೇಯಿ ಜನರಿಗೆ ಅನ್ವಯವಾಗುವುದಿಲ್ಲ. ಅರಣ್ಯವನ್ನೇ ನಂಬಿ ಬದುಕುವ ಸಮುದಾಯಗಳನ್ನು ಮಾತ್ರ ಅರಣ್ಯವಾಸಿ ಬುಡಕಟ್ಟು ಸಮುದಾಯ ಎಂದು ಕರೆಯಲಾಗುತ್ತದೆ. ಸಾವಿರಾರು ವರ್ಷಗಳಿಂದ ಪಟ್ಟಣ ಪ್ರದೇಶದಲ್ಲೇ ಇದ್ದು–ರೂಪುಗೊಂಡಿರುವ, ಅರಣ್ಯವಾಸಿಗಳಲ್ಲದ ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮಾನ್ಯತೆ ನೀಡುವುದು ಸಂವಿಧಾನ ಬಾಹಿರ. ಹೀಗಾಗಿಯೇ ಸ್ವಾತಂತ್ರ್ಯಾನಂತರ ಅವರನ್ನು ಪರಿಶಿಷ್ಟ ಪಂಗಡದ ಪಟ್ಟಿಯಿಂದ ಹೊರಗಿಡಲಾಗಿತ್ತು. 

* ಅರಣ್ಯಗಳನ್ನು ಸಂರಕ್ಷಿಸಿಕೊಂಡು ಹೋಗುತ್ತವೆ ಎಂಬ ಕಾರಣದಿಂದಲೇ ಅರಣ್ಯವಾಸಿ ಬುಡಕಟ್ಟು ಸಮುದಾಯಗಳಿಗೆ ಅರಣ್ಯ ಪ್ರದೇಶಗಳ  ಪಾರಂಪರಿಕ ಹಕ್ಕನ್ನು ಸಂವಿಧಾನಬದ್ಧವಾಗಿ ನೀಡಲಾಗಿದೆ. ಪರಿಶಿಷ್ಟ ಪಂಗಡದ ಸ್ಥಾನ ನೀಡಿದರೆ ತಾವೂ ಇಲ್ಲಿ ಭೂಮಿ ಖರೀದಿಸಬಹುದು ಎಂಬ ಒಂದೇ ಕಾರಣದಿಂದ ಮೈತೇಯಿ ಜನರು ಈ ಬೇಡಿಕೆ ಇಡುತ್ತಿದ್ದಾರೆ. ಅರಣ್ಯದ ಬಗ್ಗೆ ಗೌರವ ಇಲ್ಲದವರಿಗೆ ಈ ಹಕ್ಕು ನೀಡಿದರೆ, ಅರಣ್ಯ ಪ್ರದೇಶಗಳು ನಾಶವಾಗುತ್ತವೆ. ಸರ್ಕಾರ ಮೀಸಲು ಅರಣ್ಯ ಎಂದು ಘೋಷಿಸಿರುವಲ್ಲಿ ಈಗಾಗಲೇ ಹಲವು ಅಭಿವೃದ್ಧಿ ಚಟುವಟಿಕೆಗಳನ್ನು ಆರಂಭಿಸಲಾಗಿದೆ. 

* ಮೈತೇಯಿ ಜನರಿಗೆ ಸಂವಿಧಾನಬದ್ಧವಾಗಿ ಈಗಾಗಲೇ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಮೈತೇಯಿ ಸಮುದಾಯದಲ್ಲಿ ಹಲವು ಜಾತಿಗಳಿವೆ. ಈ ಜಾತಿಗಳಿಗೆ ವಿವಿಧ ಪಂಗಡಗಳ ಅಡಿಯಲ್ಲಿ ಈಗಾಗಲೇ ಮೀಸಲಾತಿ ನೀಡಲಾಗುತ್ತಿದೆ. ಇತರೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಶೇ 17ರಷ್ಟು, ಪರಿಶಿಷ್ಟ ಜಾತಿಗಳ ಅಡಿಯಲ್ಲಿ ಶೇ 2ರಷ್ಟು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಡಿಯಲ್ಲಿ ಶೇ 10ರಷ್ಟು ಮೀಸಲಾತಿಯನ್ನು ಮೈತೇಯಿ ಸಮುದಾಯ ಪಡೆಯುತ್ತಿದೆ. ಪರಿಶಿಷ್ಟ ಪಂಗಡಗಳಿಗೆ ಶೇ 31ರಷ್ಟು ಮೀಸಲಾತಿ ಇದ್ದು, ಮೈತೇಯಿ ಜನರಿಗೆ ಪರಿಶಿಷ್ಟ ಪಂಗಡದ ಸ್ಥಾನ ನೀಡಿದರೆ ನಿಜವಾದ ಬುಡಕಟ್ಟು ಸಮುದಾಯಗಳಿಗೆ ಮೀಸಲಾತಿಯ ಲಾಭ ದೊರೆಯುವುದಿಲ್ಲ 

* ರಾಜ್ಯದಲ್ಲಿ ಶೇ 70ರಷ್ಟು ಶಾಸಕರು ಮೈತೇಯಿ ಸಮುದಾಯದವರು. ಆ ಸಮುದಾಯವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದಿದೆ. ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂಬ ಅವರ ಆರೋಪದಲ್ಲಿ ಹುರುಳಿಲ್ಲ

ಸರ್ಕಾರದ ವಿರುದ್ಧ ಆರೋಪಗಳು

ಮಣಿಪುರ ವಿಧಾನಸಭೆಯ ಬಹುಸಂಖ್ಯಾತ ಸದಸ್ಯರು ಮೈತೇಯಿ ಸಮುದಾಯಕ್ಕೆ ಸೇರಿದವರು. ಮುಖ್ಯಮಂತ್ರಿ ಬಿರೆನ್‌ ಸಿಂಗ್‌ ಸಹ ಮೈತೇಯಿ ಸಮುದಾಯದವರು. ಹೀಗಾಗಿ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರವು, ಬುಡಕಟ್ಟು ಜನರ ವಿರುದ್ಧವೇ ಕೆಲಸ ಮಾಡುತ್ತಿದೆ ಎಂಬುದು ಕುಕಿ ವಿದ್ಯಾರ್ಥಿ ಸಂಘಟನೆಯ ಆರೋಪ. ಸರ್ಕಾರವು ಈಚೆಗೆ ತೆಗೆದುಕೊಂಡ ಕೆಲವು ಕ್ರಮಗಳನ್ನು ಕುಕಿ ಜನರು ಇದಕ್ಕೆ ಉದಾಹರಿಸುತ್ತಾರೆ

*  ಇಂಫಾಲ್‌ನಲ್ಲಿ ಇದ್ದ ಮೂರು ಚರ್ಚ್‌ಗಳನ್ನು ರಾಜ್ಯ ಸರ್ಕಾರವು ಇದೇ ಏಪ್ರಿಲ್‌ನಲ್ಲಿ ನೆಲಸಮ ಮಾಡಿತ್ತು. ಆ ಚರ್ಚ್‌ಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು. ಹೀಗಾಗಿ ಅವನ್ನು ನೆಲಸಮ ಮಾಡಲಾಯಿತು ಎಂದು ಮುಖ್ಯಮಂತ್ರಿ ಬಿರೆನ್‌ ಸಿಂಗ್‌ ಹೇಳಿದ್ದರು.

ಮೈತೇಯಿ ಸಮುದಾಯದವರು ಹಿಂದೂಗಳು. ನಾಗಾ ಮತ್ತು ಕುಕಿ ಜನರು ಪ್ರಧಾನವಾಗಿ ಕ್ರೈಸ್ತ ಸಮುದಾಯದವರು. ಇಂಫಾಲ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಹಲವು ದೇವಾಲಯಗಳಿವೆ. ಹೀಗಿದ್ದೂ ಚರ್ಚ್‌ಗಳನ್ನು ಮಾತ್ರ ನೆಲಸಮ ಮಾಡಲಾಗಿದೆ. ಇದು ಬುಡಕಟ್ಟು ಜನರನ್ನು ಗುರಿಯಾಗಿಸಿಕೊಂಡು ತೆಗೆದುಕೊಂಡ ಕ್ರಮ ಎಂದು ಕುಕಿ ವಿದ್ಯಾರ್ಥಿ ಸಂಘಟನೆಯು ಆರೋಪಿಸಿದೆ.

* ಕಾಂಗ್‌ಪೋಪ್ಕಿ ಜಿಲ್ಲೆಯಲ್ಲಿರುವ ಕೌಬ್ರು ಪರ್ವತ ಶ್ರೇಣಿಯನ್ನು ರಾಜ್ಯ ಸರ್ಕಾರವು ಈಚೆಗಷ್ಟೇ ‘ಮೀಸಲು ಅರಣ್ಯ ಪ್ರದೇಶ’ ಎಂದು ಘೋಷಿಸಿದೆ. 

ಕೌಬ್ರು ಪರ್ವತ ಶ್ರೇಣಿಯು ಕುಕಿ ಬುಡಕಟ್ಟಿನ ಪ್ರಾಬಲ್ಯವಿರುವ ಪ್ರದೇಶದಲ್ಲಿ ಬರುತ್ತದೆ. ಆದರೆ, ನಾಗಾ ಬುಡಕಟ್ಟಿನ ಒಳಪಂಗಡವಾದ ‘ಲಾಯಿಂಗ್‌ಮಾಯ್ ನಾಗಾ’ ಸಮುದಾಯವು ಕೌಬ್ರು ಪರ್ವತ ಪ್ರದೇಶ ಮತ್ತು ಅರಣ್ಯ ಪ್ರದೇಶದ ಒಡೆತನ ಹೊಂದಿದೆ ಎಂದು ಸರ್ಕಾರದ ದಾಖಲೆಗಳು ಹೇಳುತ್ತವೆ. 2008ರಲ್ಲಿ ಅರಣ್ಯ ಹಕ್ಕುಗಳ ಕಾಯ್ದೆಯನ್ನು ಅನ್ವಯ ಮಾಡುವಾಗ ಮಣಿಪುರ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲೂ ಇದನ್ನೇ ಉಲ್ಲೇಖಿಸಲಾಗಿದೆ. ಇದು ಸಮುದಾಯ ಒಡೆತನದ ಅರಣ್ಯ ಪ್ರದೇಶವಾಗಿದ್ದು, ಇದನ್ನು ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

‘ಕಾನೂನಿನ ಪ್ರಕಾರ ಈ ಪರ್ವತದ ಒಡೆಯರು ನಾವೇ. ಆದರೆ, ನಮ್ಮೊಂದಿಗೆ ಸಮಾಲೋಚನೆ ನಡೆಸದೆ ಮತ್ತು ನಮ್ಮ ಅನುಮತಿ ಪಡೆಯದೇ, ರಾಜ್ಯ ಸರ್ಕಾರವು ಕೌಬ್ರು ಪರ್ವತ ಪ್ರದೇಶವನ್ನು ಮೀಸಲು ಅರಣ್ಯ ಪ್ರದೇಶ ಎಂದು ಏಕಪಕ್ಷೀಯವಾಗಿ ಘೋಷಿಸಿದೆ. ಇದು ಸಂವಿಧಾನದ ಉಲ್ಲಂಘನೆ’ ಎಂದು ಲಾಯಿಂಗ್‌ಮಾಯ್ ನಾಗಾ ಬುಡಕಟ್ಟು ಸಮುದಾಯವು ಆರೋಪಿಸಿದೆ.

ಆಧಾರ: ಸಂವಿಧಾನದ 371ಸಿ ವಿಧಿ, ಸಂವಿಧಾನದ ಆರನೇ ಪರಿಚ್ಛೇದ, ಅರಣ್ಯ ಹಕ್ಕುಗಳ ಕಾಯ್ದೆ, ಬುಡಕಟ್ಟು ವ್ಯವಹಾರಗಳ ಸಚಿವಾಲಯದ ವರದಿಗಳು, ಕುಕಿ ವಿದ್ಯಾರ್ಥಿ ಸಂಘಟನೆಯ ಪ್ರಕಟಣೆಗಳು, ಮೈತೇಯಿ ಪರಿಶಿಷ್ಟ ಪಂಗಡ ಒತ್ತಾಯ ಸಮಿತಿಯ ಪ್ರಕಟಣೆಗಳು, 2011ರ ಜನಗಣತಿ ವರದಿ, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.