ಯಾವುದೇ ಹೊಸ ಯೊಜನೆಯು ಪರಿಸರದ ಮೇಲೆ ಪರಿಣಾಮ ಬೀರುವಂತಿದ್ದರೆ ಅದರ ಆರಂಭದ ಮುನ್ನ ಪೂರೈಸಬೇಕಾಗಿರುವ ಕಾನೂನು ಪ್ರಕ್ರಿಯೆಗಳಿಗೆ ಕೆಲವೊಂದು ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದ. ಈ ಬದಲಾವಣೆಗಳ ಕುರಿತು ಪರ–ವಿರೋಧದ ಚರ್ಚೆಗಳು ಜೋರಾಗಿವೆ. ತಜ್ಞರು ಮಂಡಿಸಿದ ಎರಡು ಭಿನ್ನ ನೋಟಗಳ ಬರಹಗಳು ಇಲ್ಲಿವೆ. ಸಂರಕ್ಷಣೆಯ ನಿಯಮಾವಳಿಯಲ್ಲಿ ಬದಲಾವಣೆ ಆಗುತ್ತಿರುವುದು ನಮ್ಮಪರಿಸರದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವುದು ಶತಃಸಿದ್ಧ ಎನ್ನುವುದು ಒಂದು ವಾದವಾದರೆ, ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಸ್ವರೂಪದಲ್ಲಿ ಆಗಲಿರುವ ಬದಲಾವಣೆಗಳಿಂದ ಆತಂಕ ಪಡಬೇಕಾದ ಅಗತ್ಯವೇನೂ ಇಲ್ಲ ಎನ್ನುವುದು ಇನ್ನೊಂದು ವಾದ...
ಒಂದೆಡೆ ಪರಿಸರ, ಕಾಡಿನ ಸಂರಕ್ಷಣೆ ಕುರಿತು ಮಾತನಾಡುವ ಸರ್ಕಾರದ ಸೂತ್ರಧಾರರೇ, ಇನ್ನೊಂದು ಕಡೆ ಪರಿಸರದ ಹಿತ ಕಡೆಗಣಿಸಿ ಕೈಗಾರಿಕೆಗಳ ಸವಲತ್ತಿಗೆ ಬೇಕಾದ ರೀತಿಯಲ್ಲಿ ಪರವಾನಗಿ ನೀಡುತ್ತಿರುವುದು ನೋವಿನ ವಿಚಾರ. ನಮ್ಮ ನೆಲ, ಜಲ, ಗಿರಿ, ಅಡವಿ, ವನ್ಯಸಂಕುಲದ ಸಂರಕ್ಷಣೆಗೆ ರೂಪಿಸಿದ ಕಾಯ್ದೆಗಳು ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ಬಂದಿವೆ ಎಂಬುದನ್ನು ಸರ್ಕಾರ ನಡೆಸುವವರೇ ಹೇಳಬೇಕು.
ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಪರಿಸರದಂತಹ ಬಲು ಸೂಕ್ಷ್ಮ ವಿಚಾರಗಳು ಅವಗಣನೆಗೆ ಒಳಗಾದಂತಿವೆ. ನೀರಾವರಿ, ಗಣಿಗಾರಿಕೆ ಎಂಬ ನೆಪದಲ್ಲಿ ಈಗಾಗಲೇ ಪಶ್ಚಿಮಘಟ್ಟ ಮಾತ್ರವಲ್ಲದೆ ರಾಜ್ಯದ ಇತರ ಸೂಕ್ಷ್ಮ ಪರಿಸರ ವಲಯಗಳ ಎಷ್ಟೊಂದು ನದಿ, ಶಿಖರ, ಅಡವಿ, ವನ್ಯಸಂಕುಲಕ್ಕೆ ಧಕ್ಕೆ ಉಂಟು ಮಾಡಲಾಗಿದೆ.
ಬರ, ಚಂಡಮಾರುತ, ಜಲಸ್ಫೋಟ, ಭೂಕುಸಿತ... ಇವುಗಳೆಲ್ಲ ಪ್ರಕೃತಿ ಮೇಲೆ ಮಾನವರು ನಡೆಸಿದ ಮಿತಿಮೀರಿದ ಹಸ್ತಕ್ಷೇಪದ ಪರಿಣಾಮ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕಿ, ಪರಿಸರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದ್ದ ಕೇಂದ್ರ ಸರ್ಕಾರ ಭಿನ್ನ ದಾರಿಯಲ್ಲಿ ಹೆಜ್ಜೆ ಹಾಕುತ್ತಿದೆ.
‘ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಅಧಿಸೂಚನೆ 2006’ ಬದಲಾವಣೆಯ ಪ್ರಸ್ತಾವಗಳನ್ನು ನೋಡಿದರೆ ಅದರಲ್ಲಿ ಜನಹಿತಕ್ಕಿಂತ ಉದ್ಯಮಿ ಸ್ನೇಹಿಯಾದ ನಡೆಯೇ ಮುಖ್ಯವಾಗಿದೆ ಎನಿಸುತ್ತದೆ.. ಜನ ವಸತಿ , ಕೃಷಿ, ಅರಣ್ಯ ವ್ಯಾಪ್ತಿ, ನದಿ, ಸಾಗರಗಳ ಕಿನಾರೆಗಳಲ್ಲೂ ಉದ್ಯಮಿಗಳಿಗೆ ಅವರ ಅನುಕೂಲಕ್ಕೆ ತಕ್ಕಂತೆ ಸ್ಥಳಾವಕಾಶ ಮಾಡಿಕೊಡುವ ಪ್ರಯತ್ನಗಳು ನಡೆದಿವೆ.
‘ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಅಧಿಸೂಚನೆ 2006’ಕ್ಕೆ ಕೇವಲ ಬಂಡವಾಳಶಾಹಿ ಮತ್ತು ಸ್ಥಾಪಿತ ಹಿತಾಸಕ್ತಿಗೋಸ್ಕರ ತಿದ್ದುಪಡಿ ಮಾಡಲು ಹೊರಟಿದೆ ಕೇಂದ್ರ ಸರ್ಕಾರ. ಜನ ವಸತಿ, ಕೃಷಿ, ಅರಣ್ಯ ವ್ಯಾಪ್ತಿ, ನದಿ, ಸಾಗರ ಕಿನಾರೆಗಳಲ್ಲೂ ಉದ್ಯಮಿಗಳಿಗೆ ಅವರ ಅನುಕೂಲಕ್ಕೆ ತಕ್ಕಂತೆ ಸ್ಥಳಾವಕಾಶ ಮಾಡಿಕೊಡುವ ಹುನ್ನಾರ ನಡೆದಿದೆ. ಪರಿಸರ ವಲಯದಲ್ಲಿ ಅಣೆಕಟ್ಟೆ, ಗಣಿಗಾರಿಕೆ, ಕಾರ್ಖಾನೆ ಮೊದಲಾದ ಯೋಜನೆಗಳಿಗೆ ಒಪ್ಪಿಗೆ ಪಡೆ ಯುವುದು ಇನ್ನು ಮುಂದೆ ಸಲೀಸಾಗು ವಂತೆಯೂ ಪ್ರಸ್ತಾವ ಸಿದ್ಧಪಡಿಸಲಾಗಿದೆ.
2006ರಲ್ಲಿ ರೂಪಿಸಿದ ನಿಯ ಮಾವಳಿ ಪ್ರಕಾರ, ಯಾವುದೇ ಯೋಜನೆಯು ಪರಿಸರದ ಹಿತಾಸಕ್ತಿ ಪ್ರಶ್ನೆಯನ್ನು ಹೊಂದಿದ್ದರೆ ಕೇಂದ್ರ ಪರಿಸರ ಮಂಡಳಿಯು ಯೋಜನೆಯ ಪರಿಣಾ ಮಗಳ ಕುರಿತು ಜನರ ಗಮನಕ್ಕೆ ತರುವುದಲ್ಲದೆ, ಜನಾಭಿಪ್ರಾಯವನ್ನೂ ಸಂಗ್ರಹಿಸಬೇಕಿತ್ತು. ಕೆಂಪು, ಕಿತ್ತಳೆ ವಲಯದ ಕಾರ್ಖಾನೆಗಳನ್ನು ‘ಎ’ ಶ್ರೇಣಿಯ ಉದ್ಯಮಗಳೆಂದು ಗುರುತಿಸಲಾಗಿತ್ತು. ಆದರೆ, ಹೊಸ ತಿದ್ದುಪಡಿ ಅದನ್ನು ಕೈಬಿಡಲು ಹೊರಟಿದೆ.
ಅಲೆಂಬಿಕ್ ಫಾರ್ಮಾ ಕಂಪನಿಯು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕಾಗಿ ಕಂಪನಿಯು ಗುಜರಾತ್‌ನಲ್ಲಿ ಹೊಂದಿದ್ದ ಕಾರ್ಖಾನೆಯ ಸ್ಥಾಪನೋತ್ತರ ಅನುಮತಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರದ್ದು ಮಾಡಿದ್ದು ಇನ್ನೂ ಹಸಿರಾಗಿದೆ. ಸದ್ಯದ ನಿಯಮಾವಳಿಯಲ್ಲಿ ಅದಕ್ಕೆ ಅವಕಾಶವಿದೆ. ಆದರೆ, ಹೊಸ ಅಧಿಸೂಚನೆಯಂತೆ ತಿದ್ದುಪಡಿಯಾದರೆ ಪೂರ್ವಾನುಮತಿ ಪಡೆಯದ ಕಾರ್ಖಾನೆಗಳಿಗೂ ಕಾನೂನಿನ ರಕ್ಷಣೆ ಸಿಗಲಿದೆ. ಏಕೆಂದರೆ, ಮೊದಲು ಕಾರ್ಖಾನೆ ಸ್ಥಾಪಿಸಿ, ಬಳಿಕ ಪರಿಸರ ಅನುಮತಿ ಪ್ರಕ್ರಿಯೆ ಪೂರೈಸುವುದಕ್ಕೂ ಅವಕಾಶ ನೀಡಲಾಗುತ್ತಿದೆ. ಕೆಲವು ಯೋಜನೆಗಳ 30 ವರ್ಷಗಳ ಅನುಮತಿಯ ಮಿತಿಯನ್ನು 50 ವರ್ಷಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ.
ಇಲ್ಲಿಯವರೆಗೆ ಐದು ಹೆಕ್ಟೇರ್‌ಗಿಂತ ಕಡಿಮೆ ಜಾಗದಲ್ಲಿ ಸ್ಥಳೀಯ ಜನಾಭಿಪ್ರಾಯದ ವಿರುದ್ಧ ಗಣಿಗಾರಿಕೆ ಮಾಡುವಂತಿರಲಿಲ್ಲ. ತಿದ್ದುಪಡಿ ಪ್ರಸ್ತಾವದ ಪ್ರಕಾರ, ನಿರಾಕ್ಷೇಪಣಾ ಪತ್ರ ಇಲ್ಲದೆ ಐದು ಹೆಕ್ಟೇರ್‌ಗಿಂತ ಕಡಿಮೆ ಜಾಗದಲ್ಲೂ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತದೆ. ಪರಿಸರಕ್ಕೆ ಮಾರಕ ಅನ್ನುವ ಕಾರಣ ಈ ತನಕ ‘ಎ’ ಶ್ರೇಣಿಯಲ್ಲಿದ್ದ ಕೆಂಪು, ಕಿತ್ತಳೆ ಶ್ರೇಣಿಯ 25ಕ್ಕೂ ಹೆಚ್ಚು ಉದ್ಯಮಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅವುಗಳ ಶ್ರೇಣಿಯನ್ನು ಬಿ 1, ಬಿ 2ಗೆ ಬದಲಿಸಲಾಗಿದೆ (ಅದರಲ್ಲಿ ಅಪಾಯಕಾರಿ ರಾಸಾಯನಿಕ ಕಾರ್ಖಾನೆಗಳು, ಆ್ಯಸಿಡ್ ತಯಾರಿಕಾ ಘಟಕಗಳು ಸಹ ಸೇರಿವೆ).
ಜನವಸತಿ ಪ್ರದೇಶ ಹಾಗೂ ಸಂರಕ್ಷಿತ ಪ್ರದೇಶದ ಸರಹದ್ದಿನಲ್ಲಿರುವ ಕೈಗಾರಿಕೆಗಳು ತಮ್ಮ ಘಟಕಗಳಲ್ಲಿ ವಾರ್ಷಿಕ 2.5 ಲಕ್ಷ ಟನ್‌ಗಿಂತ ಹೆಚ್ಚು ಕಲ್ಲಿದ್ದಲು ಉರಿಸಲು ಅವಕಾಶ ಇರಲಿಲ್ಲ. ಈಗ ಅದರ ಪ್ರಮಾಣವನ್ನು 8 ಲಕ್ಷ ಟನ್‌ಗೆ ಹೆಚ್ಚಿಸಲು ಉದ್ದೇಶಿಸ ಲಾಗಿದೆ. ಕೆಂಪು ಮತ್ತು ಕಿತ್ತಳೆ ಶ್ರೇಣಿಯಲ್ಲಿ ಬರುವ ಕೈಗಾರಿಕೆಗಳೂ ಸೇರಿದಂತೆ 40 ಕೈಗಾರಿ ಕೆಗಳನ್ನು ಪೂರ್ವ ಪರಿಸರ ಅನುಮತಿ ಪಡೆಯುವ ಪಟ್ಟಿಯಿಂದ ಕೈಬಿಡಲು ಸಹ ಉದ್ದೇಶಿಸಲಾಗಿದೆ (ಇದಕ್ಕಾಗಿ ಅಧಿಸೂಚನೆಯ ಸೆಕ್ಷನ್ 26ಅನ್ನು ತೆಗೆದುಹಾಕುವ ಪ್ರಸ್ತಾವ ಇದೆ).
ಕೆಂಪು ಹಾಗೂ ಕಿತ್ತಳೆ ಶ್ರೇಣಿಯ ಉದ್ಯಮಗಳನ್ನು ಪರಿಸರ ಸೂಕ್ಷ್ಮ ವಲಯದ ಪಕ್ಕದಲ್ಲೇ ಸ್ಥಾಪಿಸಲು ಅನುಮತಿ ನೀಡುವುದರಿಂದ ನೆಲ, ಜಲ, ಗಾಳಿ, ನದಿ, ಅಡವಿಯ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಹುಟ್ಟುತ್ತವೆ. ಈ ಹಿಂದೆ ಪರಿಸರ ಸೂಕ್ಷ್ಮ ವಲಯಗಳಿಂದ 5 ಕಿ.ಮೀ. ಅಂತರದಲ್ಲಿ ಯಾವುದೇ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಇರಲಿಲ್ಲ. ಈ ಹೊಸ ತಿದ್ದುಪಡಿ ಪ್ರಕಾರ ಇನ್ನಷ್ಟು ಪ್ರಾಕೃತಿಕ ದುರಂತಗಳಿಗೆ ನಾವೇ ಆಮಂತ್ರಿಸಿದಂತೆ ಆಗಬಹುದು.
ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ಹಲವು ಪೆಟ್ಟುಗಳನ್ನು ತಿಂದು ನೋವು ಅನುಭವಿಸಿರುವ ಪರಿಸರಕ್ಕೆ ಪ್ರಸ್ತಾವಿತ ತಿದ್ದುಪಡಿ ಮಾರಣಾಂತಿಕ ಎನಿಸಲಿದೆ. ಹೀಗಾಗಿ ಸರ್ಕಾರ ಈ ಕುರಿತು ಮರು ಆಲೋಚನೆ ನಡೆಸುವುದು ಒಳಿತು. ಅದರ ಬದಲು ಪರಿಸರ ಸಂರಕ್ಷಣೆ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸುವತ್ತ ಗಮನಹರಿಸಬೇಕು.
ಲೇಖಕ: ಪರಿಸರ ಕಾರ್ಯಕರ್ತ
***
ಭಯವೇಕೆ? ಇರಲಿ ಎಚ್ಚರ
ಡಾ. ಪ್ರಕಾಶ ಭಟ್
ಪರಿಸರದ ಮೇಲೆ ಪರಿಣಾಮ ಬೀರುವಂತಹ ನೀತಿ ನಿರೂಪಣೆಗಳ ಕುರಿತು ಸರ್ಕಾರಗಳು ಕೈಗೊಂಡ ತೀರ್ಮಾನಗಳು ಹೊರಬಿದ್ದಾಗ ನನ್ನಂತಹ ಪರಿಸರಾಸಕ್ತರಿಗೆ ಏನೋ ಕುತೂಹಲ; ಆತಂಕವೂ ಇರುತ್ತದೆ. ಪರಿಸರಕ್ಕೆ ಗಂಡಾಂತರ ಉಂಟು ಮಾಡುವಂತಹ ಹೊಸ ಅವಕಾಶಗಳು ಏನಾದರೂ ಸೃಷ್ಟಿಯಾದಾವು ಎನ್ನುವ ಆತಂಕ ಅದು.
‘ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಅಧಿಸೂಚನೆ 2006’ಅನ್ನು ರದ್ದುಪಡಿಸಿ, ಹೊಸ ಅಧಿಸೂಚನೆಯನ್ನು ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿರುವುದನ್ನು ಗಮನಿಸಿದ್ದೇನೆ. ಹೊಸ ಅಧಿಸೂಚನೆ ಹೊರಡಿಸಿದರೆ ಸದ್ಯ ಚಾಲ್ತಿಯಲ್ಲಿರುವ ನಿಯಮಗಳ ಬದಲಿಗೆ ಹೊಸ ನಿಯಮಗಳು ಜಾರಿಗೆ ಬರಲಿವೆ.
ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣಾ ವರದಿ ಸಲ್ಲಿಕೆಯಾದ ಏಳು ದಿನಗಳ ಒಳಗೆ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಬೇಕು ಎನ್ನುವುದು ಸದ್ಯದ ನಿಯಮ. ಅದನ್ನು ಹತ್ತು ದಿನಕ್ಕೆ ಏರಿಕೆ ಮಾಡುವ ಪ್ರಸ್ತಾವ ಇದೆ. ಮೂರು ದಿನಗಳ ಕಾಲಾವಕಾಶ ಏರಿಕೆ ಮಾಡಿದ್ದರಿಂದ ಪರಿಸರಕ್ಕೆ ಪ್ರತಿಕೂಲ ಆಗುವಂಥದ್ದು ನಡೆಯಬಹುದೆಂಬ ಭಯಪಡುವ ಕಾರಣ ಕಾಣುವುದಿಲ್ಲ. ಸಾರ್ವಜನಿಕ ಅಭಿಪ್ರಾಯ ಪಡೆಯುವ ಪ್ರಕ್ರಿಯೆಯನ್ನು ಮೊಟಕುಗೊಳಿಸುವ ಪ್ರಯತ್ನ ನಡೆದಿದ್ದರೆ ಅದನ್ನು ಖಂಡಿತವಾಗಿ ಪ್ರಶ್ನೆ ಮಾಡಬೇಕು. ಅಂತಹದ್ದು ಕಾಣಲಿಲ್ಲ.
ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಆಕ್ಷೇಪ ಸಲ್ಲಿಸಲು ಸದ್ಯ ಇರುವ 30 ದಿನಗಳ ಕಾಲಾವಕಾಶವನ್ನು 20 ದಿನಗಳಿಗೆ ಇಳಿಕೆಮಾಡುವ ಪ್ರಸ್ತಾವವನ್ನೂ ಮಾಡಲಾಗಿದೆ. ಕೆಲವೊಮ್ಮೆ ಪೂರಕ ಮಾಹಿತಿಯನ್ನು ಕಲೆಹಾಕಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎನ್ನುವು ದರಲ್ಲಿ ಎರಡು ಮಾತಿಲ್ಲ. ಆದರೆ, ನಮ್ಮ ಆಕ್ಷೇಪಗಳನ್ನು ಸಲ್ಲಿಸಲು 20 ದಿನ ತೀರಾ ಕಡಿಮೆ ಅವಧಿ ಏನಲ್ಲ. ಇಡೀ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸಲು ಸರ್ಕಾರ ಈ ನಿರ್ಧಾರಕ್ಕೆ ಬಂದಿರಬಹುದು. ಈ ನಿಯಮದಲ್ಲೂ ಆಕ್ಷೇಪಕ್ಕೆ ಕಾರಣವಾಗುವಂಥದ್ದು ಏನೂ ಕಾಣುತ್ತಿಲ್ಲ.
ಸಾರ್ವಜನಿಕ ಅಭಿಪ್ರಾಯ ಕೇಳುವ ಪ್ರಕ್ರಿಯೆಯಲ್ಲೂ ಕೆಲವು ಮಾರ್ಪಾಡುಗಳನ್ನು ಮಾಡಲು ಉದ್ದೇಶಿಸಲಾಗಿದೆ. ಸಾರ್ವಜನಿಕ ಅಭಿಪ್ರಾಯವನ್ನು ಕೇಳುವ ಪ್ರಕ್ರಿಯೆಯ ಅಧ್ಯಕ್ಷತೆಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್/ಜಿಲ್ಲಾಧಿಕಾರಿ ಅಥವಾ ಅವರ ಪ್ರತಿನಿಧಿ ನಡೆಸಬೇಕು ಎಂಬ ನಿಯಮದಲ್ಲಿ ತುಸು ಸಡಿಲಿಕೆ ಮಾಡಲಾಗಿದೆ. ‘ಎ’ ವರ್ಗದ ಯೋಜನೆಗಳಿಗೆ ಇದೇ ನಿಯಮ ಅನ್ವಯವಾದರೆ ‘ಬಿ’ ವರ್ಗದ ಯೋಜನೆಗಳಿಗೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರ‍್ಯಾಂಕ್‌ನ ಅಧಿಕಾರಿಯು ಅಧ್ಯಕ್ಷತೆ ವಹಿಸಬಹುದು ಎಂಬ ಮಾರ್ಪಾಡು ತರಲಾಗುತ್ತಿದೆ.
ಜಿಲ್ಲಾಧಿಕಾರಿಗಳಿಗಾಗಿ ಹತ್ತು–ಹಲವು ಹೊಣೆಗಳು ಸರದಿಯಲ್ಲಿ ನಿಂತಿರುವಾಗ ಆಗುವ ವಿಳಂಬ ತಪ್ಪಿಸಲು ಅವರ ಕೆಳಗಿನ ಹಂತದ ಅಧಿಕಾರಿಗೆ ಈ ಹೊಣೆಯನ್ನು ವಹಿಸುವುದರಲ್ಲಿ ಅಪಾಯ ಇರಲಿಕ್ಕಿಲ್ಲ. ಜಿಲ್ಲಾಧಿಕಾರಿಗಳಂತೆಯೇ ಅವರೂ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಬಲ್ಲರು.
ಅನುಪಾಲನಾ ವರದಿಯನ್ನು ಈಗ ವರ್ಷಕ್ಕೆ ಎರಡೆರಡು ಬಾರಿ ಏಕೆ ಕೊಡಬೇಕೋ ಗೊತ್ತಿಲ್ಲ. ವರ್ಷಕ್ಕೆ ಎರಡು ಬಾರಿ ಅಪೂರ್ಣ ವರದಿಗಳನ್ನು ಸಲ್ಲಿಸುವುದಕ್ಕಿಂತ ಒಂದು ಬಾರಿ ಪೂರ್ಣ ವರದಿ ಕೊಟ್ಟರೆ ಸಾಕು ಎನ್ನುವುದು ನಿಯಮ ಬದಲಾವಣೆ ಹಿಂದಿರುವ ಉದ್ದೇಶ ಆಗಿರಬಹುದು. ತಿದ್ದುಪಡಿಯಲ್ಲಿ ಕಾರಣ ಹೇಳಿಲ್ಲ.
ರಾಷ್ಟ್ರೀಯ ಭದ್ರತೆ ಹಾಗೂ ಯುದ್ಧತಂತ್ರದ ಭಾಗವಾಗಿ ಗುರುತಿಸುವ ಯೋಜನೆಗಳಿಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದರಿಂದ ಮೊದಲಿದ್ದ ವಿನಾಯಿತಿಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಭದ್ರತೆ ವಿಚಾರ ಇದಾಗಿದ್ದರಿಂದ ಸರ್ಕಾರದ ಈ ತೀರ್ಮಾನವನ್ನು ಯಾರೂ ಪ್ರಶ್ನೆ ಮಾಡಲಾರರು. ಆದರೆ, ಈ ಯೋಜನೆಗಳಿಗೆ ಸಂಬಂಧಿಸಿದ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗಗೊಳಿಸುವಂತಿಲ್ಲ ಎಂಬ ಹೊಸ ನಿಯಮವನ್ನೂ ಸೇರ್ಪಡೆ ಮಾಡಲು ಉದ್ದೇಶಿ ಸಲಾಗಿದೆ. ತುಂಬಾ ಸೂಕ್ಷ್ಮ ವಿಚಾರ ಇದಾಗಿದ್ದರಿಂದ ಸರಿ–ತಪ್ಪು ಎಂದು ಬಿಡುಬೀಸಾಗಿ ವ್ಯಾಖ್ಯಾನ ಮಾಡಲಾರೆ.
ಅಣೆಕಟ್ಟು, ಗಣಿಗಾರಿಕೆ, ಹೆದ್ದಾರಿ, ಕೈಗಾರಿಕೆ, ವಿಮಾನ ನಿಲ್ದಾಣ ನಿರ್ಮಾಣದಂತಹ ಯೋಜನೆಗಳಿಗೆ ಪೂರ್ವ ಪರಿಸರ ಅನುಮತಿಯಿಂದ ವಿನಾಯಿತಿ ನೀಡುವ ಪ್ರಸ್ತಾಪ ಸಹ ಇದೆಯೆಂದು ಕೇಳಿದ್ದೇನೆ. ಈ ರೀತಿ ವಿನಾಯಿತಿ ಪಡೆಯುವಂತಹ 40 ಯೋಜನೆಗಳ ಪಟ್ಟಿ ಮಾಡಲಾಗಿದೆಯಂತೆ. 40 ಸಂಖ್ಯೆ ನನಗೆ ತುಂಬಾ ದೊಡ್ಡದಾಗಿ ಕಾಣುತ್ತದೆ. ಇಷ್ಟೊಂದು ಯೋಜನೆಗಳಿಗೆ ಪೂರ್ವ ಪರಿಸರ ಅನುಮತಿಯಿಂದ ವಿನಾಯಿತಿ ನೀಡುವುದು ಪ್ರಶ್ನಾರ್ಹವಾಗಿದೆ.
ಕರಡು ಅಧಿಸೂಚನೆಗೆ ಸರ್ಕಾರ ಅಂತಿಮ ಸ್ವರೂಪ ನೀಡುವಾಗ ಈ ತೀರ್ಮಾನದ ಕುರಿತು ಮರು ಅವಲೋಕನ ನಡೆಸಬೇಕು. ನಮಗೆ ಅಭಿವೃದ್ಧಿ ಬೇಕು. ಆದರೆ, ಅದಕ್ಕೆ ಪರಿಸರದ ರೂಪದಲ್ಲಿ ಭಾರಿ ಬೆಲೆ ತೆರುವಂತಾಗಬಾರದು. ಪರಿಸರಕ್ಕೆ ಪೂರಕವಾದ ಹೆಜ್ಜೆ ಇಡುವತ್ತ ನಾವು ಗಮನಹರಿಸಬೇಕು. ಯೋಜನೆಗಳ ಅನುಷ್ಠಾನದಲ್ಲಿ ಸಣ್ಣ ಮಟ್ಟಿಗಿನ ‘ತ್ಯಾಗ’ವೂ ಅನಿವಾರ್ಯವೇನೋ. ಹೆದ್ದಾರಿಗಳ ನಿರ್ಮಾಣಕ್ಕಾಗಿ ಸಾವಿರ, ಸಾವಿರ ಸಂಖ್ಯೆಯಲ್ಲಿ ಮರಗಳನ್ನು ಕತ್ತರಿಸಲಾಗಿದೆ. ಅದಕ್ಕೆ ಪರ್ಯಾಯವಾಗಿ ಪ್ರಾಧಿಕಾರ ಎಲ್ಲಿ ಮರಗಳನ್ನು ಬೆಳೆಸಿದೆ? ಪರಿಸರ ಸಂಬಂಧಿಯಾದ ಇಂತಹ ವಿಷಯಗಳಲ್ಲಿ ಉತ್ತರ ದಾಯಿತ್ವ ಅತ್ಯಗತ್ಯವಾಗಿ ಬೇಕು.
ಲೇಖಕ: ಸುಸ್ಥಿರಾಭಿವೃದ್ಧಿ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.