ADVERTISEMENT

ಆಳ–ಅಗಲ: ಮಕ್ಕಳ ಪೌಷ್ಟಿಕ ಆಹಾರಕ್ಕೂ ಆಧಾರ್‌ ಕಡ್ಡಾಯ

ರಿಪೋರ್ಟರ್ಸ್ ಕಲೆಕ್ಟಿವ್‌ ವರದಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 2:07 IST
Last Updated 4 ಜುಲೈ 2022, 2:07 IST
ಅಂಗನವಾಡಿ
ಅಂಗನವಾಡಿ   

ಪೂರಕ ಪೌಷ್ಟಿಕ ಆಹಾರ ಪಡೆದುಕೊಳ್ಳುತ್ತಿರುವ ಮಕ್ಕಳು ಮತ್ತು ತಾಯಂದಿರ ಆಧಾರ್‌ ನೋಂದಣಿಯ ಆಧಾರದಲ್ಲಿಯೇ ರಾಜ್ಯಗಳಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರವು ಹೇಳಿದೆ. ಇದರಿಂದಾಗಿ ಬಡ ಕುಟುಂಬಗಳ ಲಕ್ಷಾಂತರ ಮಕ್ಕಳು ಪೌಷ್ಟಿಕ ಆಹಾರದಿಂದ ವಂಚಿತರಾಗುವ ಅಪಾಯ ಎದುರಾಗಿದೆ. ಆಧಾರ್ ಸಂಖ್ಯೆ ಇಲ್ಲ ಎಂಬ ಕಾರಣಕ್ಕೆ ಯಾರಿಗೂ ಸಹಾಯಧನ ಅಥವಾ ಸವಲತ್ತು ನೀಡಿಕೆಯನ್ನು ನಿರಾಕರಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಿದ್ದರೂ ಆಧಾರ್‌ ಜೋಡಣೆಗೆ ಒತ್ತಡ ಹೇರಲಾಗುತ್ತಿದೆ.

ದಕ್ಷಿಣ ದೆಹಲಿಯ ನಿವಾಸಿ ಸಮಿಧಾ ಖಾತೂನ್‌ (20), ಆರು ತಿಂಗಳು ಮತ್ತು 18 ತಿಂಗಳ ತಮ್ಮ ಎರಡು ಹಸುಳೆಗಳ ಪೌಷ್ಟಿಕ ಆಹಾರಕ್ಕೆ ಅಂಗನವಾಡಿಯನ್ನೇ ಆಶ್ರಯಿಸಿದ್ದರು. ಸಮಿಧಾ ಗಂಡ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅವರ ಇಬ್ಬರೂ ಮಕ್ಕಳ ಆಧಾರ್‌ ನೋಂದಣಿ ಆಗಿಲ್ಲ. ಪೌಷ್ಟಿಕ ಆಹಾರ ಪಡೆಯಲು ಆಧಾರ್‌ ನೋಂದಣಿ ಕಡ್ಡಾಯವಾದರೆ ಈ ಎರಡೂ ಮಕ್ಕಳು ಪೌಷ್ಟಿಕ ಆಹಾರ ವಂಚಿತರಾಗುತ್ತಾರೆ. ಆಧಾರ್‌ ಅನ್ನು ಕಡ್ಡಾಯಗೊಳಿಸುವ ಕ್ರಮವು ಅತ್ಯಂತ ಬಡ ಮಕ್ಕಳು ಮತ್ತು ಮಹಿಳೆಯರ ಪೌಷ್ಟಿಕ ಆಹಾರ ಲಭ್ಯತೆಗೆ ಕುತ್ತು ತರುತ್ತದೆ ಎಂದು ಪರಿಣತರು ಹೇಳುತ್ತಾರೆ.

ಪೌಷ್ಟಿಕ ಆಹಾರ ಪಡೆಯಲು ಆಧಾರ್ ನೋಂದಣಿಯನ್ನು ಕೇಂದ್ರ ಸರ್ಕಾರವು 2022ರ ಮಾರ್ಚ್‌ನಲ್ಲಿ ಕಡ್ಡಾಯಗೊಳಿಸಿದೆ ಎಂಬುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳು ಮತ್ತು ಪತ್ರಗಳಿಂದ ದೃಢಪಟ್ಟಿದೆ. ಈ ಪತ್ರಗಳು ರಿಪೋರ್ಟರ್ಸ್‌ ಕಲೆಕ್ಟಿವ್‌ಗೆ ಲಭ್ಯವಾಗಿವೆ. ಈವರೆಗೆ ಈ ವಿಚಾರವನ್ನು ಬಹಿರಂಗಪಡಿಸಿರಲಿಲ್ಲ. ಆಧಾರ್‌ ಸಂಖ್ಯೆಯ ಮೂಲಕ ದೃಢಪಡಿಸಿಕೊಳ್ಳಲಾದ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ಒದಗಿಸುವುದಕ್ಕೆ ಅಗತ್ಯವಾದ ನಿಧಿಯನ್ನು ಮಾತ್ರ ನೀಡಲಾಗುವುದು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ 2021ರ ನವೆಂಬರ್‌ನಲ್ಲಿ ತಿಳಿಸಿತ್ತು. ಫಲಾನುಭವಿಗಳ ಗುರುತನ್ನು ಆಧಾರ್ ಮೂಲಕ ದೃಢಪಡಿಸಿಕೊಳ್ಳುವುದನ್ನು ತ್ವರಿತಪಡಿಸಿ ಎಂದು ಜೂನ್‌ 23ರಂದು ರಾಜ್ಯಗಳಿಗೆ ಕೇಂದ್ರ ಸೂಚಿಸಿತ್ತು.

ADVERTISEMENT

ನಕಲಿ ಫಲಾನುಭವಿಗಳನ್ನು ಗುರುತಿಸುವುದು, ಫಲಾನುಭವಿಗಳು ಮತ್ತು ಅಂಗನವಾಡಿ ಮೂಲಕ ಅವರಿಗೆ ದೊರೆಯುವ ಸೇವೆಗಳ ಮೇಲೆ ನಿಗಾ ಇರಿಸುವ ಮೊಬೈಲ್‌ ಆ್ಯಪ್‌ ಬಳಕೆಯನ್ನು ಹೆಚ್ಚಿಸುವುದು ಇದರ ಉದ್ದೇಶ. ಆರು ತಿಂಗಳಿನಿಂದ ಆರು ವರ್ಷದವರೆಗಿನ 7.9 ಕೋಟಿ ಮಕ್ಕಳು ಪೌಷ್ಟಿಕ ಆಹಾರ ಯೋಜನೆಯ ಪ್ರಯೋಜನವನ್ನು ಈಗ ಪಡೆಯುತ್ತಿದ್ದಾರೆ. ಆದರೆ, ಇವರಲ್ಲಿ ಶೇ 23ರಷ್ಟು ಮಕ್ಕಳ ಆಧಾರ್ ನೋಂದಣಿ ಮಾತ್ರ ಆಗಿದೆ. ಹಾಗಾಗಿ, ಆಧಾರ್ ಕಡ್ಡಾಯಗೊಳಿಸಿದರೆ ಕಾನೂನುಬದ್ಧವಾಗಿ ದೊರೆಯಬೇಕಾದ ಸವಲತ್ತು ಹಲವು ಮಕ್ಕಳಿಗೆ ದೊರೆಯದೇ ಹೋಗಬಹುದು (ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯನ್ನು 2013ರಲ್ಲಿ ಅಂಗೀಕರಿಸಿದಾಗ ಪೂರಕ ಪೌಷ್ಟಿಕ ಆಹಾರ ಪೂರೈಕೆಯನ್ನು ಕಾನೂನುಬದ್ಧ ಹಕ್ಕಾಗಿಸಲಾಗಿದೆ).

ಮಕ್ಕಳಿಗೆ ನೀಡಲಾಗುವ ಯಾವುದೇ ಸವಲತ್ತನ್ನುಆಧಾರ್ ನೋಂದಣಿ ಆಗಿಲ್ಲ ಎಂಬ ಕಾರಣಕ್ಕೆ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ 2018ರಲ್ಲಿ ಹೇಳಿತ್ತು.

‘ಮಕ್ಕಳ ಅಭಿವೃದ್ಧಿಗಾಗಿ ಸಾಕಷ್ಟು ನಿಧಿ ಇರುವ ಮತ್ತು ಸೇವೆ ಪೂರೈಕೆಗೆ ಉತ್ತಮ ಚೌಕಟ್ಟು ಹೊಂದಿರುವ ತಮಿಳುನಾಡಿನಂತಹ ರಾಜ್ಯಗಳು ಆಧಾರ್‌ ಇಲ್ಲದ ಫಲಾನುಭವಿಗಳಿಗೂ ಸವಲತ್ತು ನೀಡಬಹುದು. ಆದರೆ, ಪೌಷ್ಟಿಕ ಆಹಾರ ಪೂರೈಕೆಗಾಗಿ ಕೇಂದ್ರದ ನಿಧಿಯನ್ನೇ ಅವಲಂಬಿಸಿರುವ ಬಡ ರಾಜ್ಯಗಳ ಪರಿಸ್ಥಿತಿ ಹೀಗೆ ಇಲ್ಲ’ ಎನ್ನುತ್ತಾರೆದೆಹಲಿಯ ಅಂಬೇಡ್ಕರ್‌ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ದೀಪಾ ಸಿನ್ಹಾ.

ಪೌಷ್ಟಿಕ ಆಹಾರ ಪೂರೈಕೆ ಕಾರ್ಯಕ್ರಮದ ಅಡಿಯಲ್ಲಿ ಪೂರೈಸುವ ಆಹಾರದ ವೆಚ್ಚದ ಅರ್ಧದಷ್ಟನ್ನು ಹಲವು ರಾಜ್ಯಗಳಿಗೆ ಕೇಂದ್ರವು ನೀಡುತ್ತದೆ. ಈಶಾನ್ಯ ಮತ್ತು ಹಿಮಾಲಯ ಸಮೀಪದ ರಾಜ್ಯಗಳಿಗೆ ಶೇ 90ರಷ್ಟನ್ನು‍ ಮತ್ತು ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ ಶೇ ನೂರರಷ್ಟು ಮೊತ್ತವನ್ನು ಕೇಂದ್ರವೇ ನೀಡುತ್ತದೆ.

ಪೌಷ್ಟಿಕತೆಗೆ ಆಧಾರ್‌

ಫಲಾನುಭವಿಗಳಿಗೆ ಆಧಾರ್‌ ಕಡ್ಡಾಯಗೊಳಿಸಬೇಕು ಎಂಬ ಉದ್ದೇಶವನ್ನು ಕೇಂದ್ರವು ಹೊಂದಿದೆ ಎಂಬ ವಿಚಾರವು 2021ರಲ್ಲಿಯೇ ನಿಚ್ಚಳವಾಗಿತ್ತು.

ಪೂರಕ ಪೌಷ್ಟಿಕ ಆಹಾರ ಪೂರೈಕೆ ಕಾರ್ಯಕ್ರಮವು ಈಗಿನ ರೂಪದಲ್ಲಿ 2006ರಿಂದ ಜಾರಿಯಲ್ಲಿದೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ಐಸಿಡಿಎಸ್‌) ಯೋಜನೆ ಅಡಿಯಲ್ಲಿ ಇದನ್ನು ಅನುಷ್ಠಾನಗೊಳಿಸುತ್ತಿದೆ. 1975ರಲ್ಲಿಯೇ ಈ ಯೋಜನೆ ಜಾರಿಗೆ ಬಂದಿದೆ. ಜಗತ್ತಿನಲ್ಲಿಯೇ ಇಂತಹ ಅತ್ಯಂತ ದೊಡ್ಡ ಯೋಜನೆ ಇದು.

ವಿವಿಧ ಸಚಿವಾಲಯಗಳು ಅನುಷ್ಠಾನಗೊಳಿಸುತ್ತಿರುವ ಪೌಷ್ಟಿಕತೆ ಸಂಬಂಧಿ ಯೋಜನೆಗಳ ಮೇಲಿನ ನಿಗಾ, ನಿಯಂತ್ರಣ ಮತ್ತು ಅನುಷ್ಠಾನಕ್ಕೆ ಪೋಷಣ್‌ ಅಭಿಯಾನ್‌ ಎಂಬ ಕಾರ್ಯಕ್ರಮವನ್ನು 2018ರಲ್ಲಿ ಆರಂಭಿಸಲಾಗಿದೆ. ಪೂರಕ ಪೌಷ್ಟಿಕತೆ ಕಾರ್ಯಕ್ರಮವನ್ನು ಇದರಲ್ಲಿ ವಿಲೀನಗೊಳಿಸಲಾಗಿದೆ.

ಭಾರತದ ಒಂದು ಖಾಸಗಿ ಸಂಸ್ಥೆ ಹಾಗೂ ಬಿಲ್‌ ಮತ್ತು ಮೆಲಿಂಡಾ ಗೇಟ್ಸ್‌ ಪ್ರತಿಷ್ಠಾನವು ಜಂಟಿಯಾಗಿ ಅಭಿವೃದ್ಧಿಪಡಿಸಿದ ಐಸಿಡಿಎಸ್‌–ಸಿಎಎಸ್‌ (ಕಾಮನ್‌ ಅಪ್ಲಿಕೇಷನ್‌ ಸಾಫ್ಟ್‌ವೇರ್‌) ಎಂಬ ಸಾಫ್ಟ್‌ವೇರ್ ಅನ್ನು 2018ರಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪೌಷ್ಟಿಕತೆ ಯೋಜನೆಗಳ ಪರಿಣಾಮದ ಮೇಲೆ ನಿಗಾ ಇರಿಸುವುದಕ್ಕೆ ಈ ಸಾಫ್ಟ್‌ವೇರ್‌ಗೆ ಪೋಷಣ್‌ ಅಭಿಯಾನ್‌ ಅಡಿಯಲ್ಲಿ ಚಾಲನೆ ಕೊಡಲಾಗಿತ್ತು. ಆದರೆ, ಇದು ವಿಫಲವಾದ ಕಾರಣ ಮತ್ತೊಂದು ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಪೋಷಣ್‌ ಟ್ರ್ಯಾಕರ್ ಎಂಬ ಹೆಸರಿನ ಈ ಆ್ಯಪ್ ಆನ್ನು ಕೇಂದ್ರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಭಿವೃದ್ಧಿಪಡಿಸಿದೆ.

ಐಸಿಡಿಎಸ್‌ ಅಡಿಯಲ್ಲಿ ಪೂರಕ ಆಹಾರ ಪೂರೈಸುವ ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳ ವಿವರಗಳು, ಅವರ ಆರೋಗ್ಯ ಸ್ಥಿತಿ, ಅವರಿಗೆ ಒದಗಿಸಲಾದ ಸೇವೆಗಳು ಮುಂತಾದವುಗಳನ್ನು ಟ್ರ್ಯಾಕರ್‌ನಲ್ಲಿ ದಾಖಲಿಸಬೇಕು. ಅಂಗನವಾಡಿಯ ಮೂಲಕ ಒದಗಿಸಲಾಗುವ ಎಲ್ಲ ಸೇವೆಗಳ ಮೇಲೆ ಟ್ರ್ಯಾಕರ್ ಮೂಲಕ ಸರ್ಕಾರ ಕಣ್ಣಿರಿಸಿದೆ.

ಫಲಾನುಭವಿಗಳ ಆಧಾರ್‌ ವಿವರಗಳನ್ನು ಪೋಷಣ್‌ ಟ್ರ್ಯಾಕರ್‌ಗೆ ಡಿಸೆಂಬರ್‌ 15ರೊಳಗೆ ಜೋಡಿಸಬೇಕು ಎಂದು ಕೇಂದ್ರವು ರಾಜ್ಯಗಳಿಗೆ 2021ರ ನವೆಂಬರ್‌ನಲ್ಲಿ ಸೂಚಿಸಿತ್ತು. ಪೂರಕ ಆಹಾರ ಪೂರೈಕೆಗೆ ಕೇಂದ್ರವು ನೀಡುವ ಅನುದಾನವು ಟ್ರ್ಯಾಕರ್‌ನಲ್ಲಿ ನೀಡುವ ದತ್ತಾಂಶ ಆಧರಿಸಿರುತ್ತದೆ ಎಂದು ಕೇಂದ್ರ ತಿಳಿಸಿತ್ತು.

Caption

ವಿವರವಾದ ಮಾರ್ಗಸೂಚಿಯನ್ನು ಸಚಿವಾಲಯವು ರಾಜ್ಯಗಳಿಗೆ 2022ರ ಮಾರ್ಚ್‌ನಲ್ಲಿ ಕಳುಹಿಸಿತ್ತು.

‘ಅಂಗನವಾಡಿಯಲ್ಲಿ ನೋಂದಣಿಯಾದ ಫಲಾನುಭವಿಗಳು ಮಾತ್ರ ಪೂರಕ ಪೌಷ್ಟಿಕ ಆಹಾರ ಪಡೆಯಲು ಅರ್ಹರು. ಫಲಾನುಭವಿಗಳು ಆಧಾರ್‌ ಕಾರ್ಡ್‌ ಹೊಂದಿರುವುದು ಕಡ್ಡಾಯ. ನೋಂದಣಿಯ ಸಂದರ್ಭದಲ್ಲಿ ಆಧಾರ್‌ ಸಂಖ್ಯೆಯನ್ನು ನೀಡಬೇಕು’ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.


ಅಂದರೆ, ಮಕ್ಕಳು ಸೇರಿದಂತೆ ಆಧಾರ್‌ ಸಂಖ್ಯೆ ಹೊಂದಿರುವವರು ಮಾತ್ರ ಪೌಷ್ಟಿಕ ಆಹಾರ ಪಡೆಯಲು ಅರ್ಹರು.

ಪ್ರತಿ ಬಾರಿ ಪೌಷ್ಟಿಕ ಆಹಾರ ಪಡೆದುಕೊಳ್ಳಲು ಹೋದಾಗಲೂ ಆಧಾರ್ ಕಾರ್ಡ್ ಒಯ್ಯಬೇಕು ಎಂದೂ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಅಂಗನವಾಡಿಯಲ್ಲಿ ನೋಂದಣಿ ಆಗಿರುವ ಎಲ್ಲ ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಟ್ರ್ಯಾಕರ್‌ಗೆ ಜೋಡಿಸಿ ಎಂದು ಜೂನ್‌ 23ರಂದು ಕೂಡ ಕೇಂದ್ರವು ಸೂಚಿಸಿತ್ತು.

ಪರಿಣತರ ಪ್ರಕಾರ, ವ್ಯಕ್ತಿಯೊಬ್ಬರ ಗುರುತು ದೃಢೀಕರಣಕ್ಕೆ ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆಯಷ್ಟೇ ಸಾಲದು ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವೇ (ಯುಐಡಿಎಐ) ಎಚ್ಚರಿಕೆ ನೀಡಿದೆ. ಹಾಗಾಗಿ, ಫಲಾನುಭವಿಯು ಯುಐಡಿಎಐಗೆ ಕಳುಹಿಸಿದ ಬಯೊಮೆಟ್ರಿಕ್‌ ಮಾಹಿತಿ ಅಥವಾ ವ್ಯಕ್ತಿಯ ಇತರ ವಿವರಗಳನ್ನು ಅಂಗನವಾಡಿ ಕಾರ್ಯಕರ್ತೆಯು ದೃಢೀಕರಿಸಬೇಕಾಗುತ್ತದೆ. ವ್ಯಕ್ತಿಯ ವಿವರಗಳು ಎಂದರೆ, ಹೆಸರು, ಜನನ ದಿನಾಂಕ, ವಿಳಾಸ ಮತ್ತು ಲಿಂಗ. ಬಯೊಮೆಟ್ರಿಕ್‌ ಮಾಹಿತಿಯಲ್ಲಿ ಮುಖದ ಚಿತ್ರ, ಬೆರಳಚ್ಚು ಮತ್ತು ಕಣ್ಣು ಪಾಪೆಯ ಚಿತ್ರ ಇರುತ್ತದೆ.

ಫಲಾನುಭವಿಯು ಪ್ರತಿ ಬಾರಿ ಆಹಾರ ಪಡೆಯಲು ಬಂದಾಗಲೂ ಅವರ ಆಧಾರ್‌ ಸಂಖ್ಯೆಯನ್ನು ದೃಢೀಕರಿಸುವುದು ವಾಸ್ತವಿಕವಾಗಿ ಕಾರ್ಯಸಾಧ್ಯವಲ್ಲ ಎಂದು ನಾವು ಮಾತನಾಡಿಸಿದ ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತರು ಹೇಳಿದ್ದಾರೆ.

ಮಹಾಲೇಖಪಾಲರ ಎಚ್ಚರಿಕೆ

ಆಧಾರ್ ಸಂಖ್ಯೆಯೊಂದು ಮಾತ್ರ ಆಧಾರ್‌ ಕಾರ್ಡ್‌ದಾರರ ಗುರುತನ್ನು ದೃಢೀಕರಿಸುವುದಿಲ್ಲ ಎಂದು ಯುಐಡಿಎಐ ಹೇಳಿದೆ. ಕೇಂದ್ರೀಯ ದತ್ತಾಂಶಕೋಶದಲ್ಲಿ ಸಂಗ್ರಹವಾಗಿರುವ ಕಾರ್ಡ್‌ದಾರರ ಮಾಹಿತಿಯೊಂದಿಗೆ ನೋಂದಣಿ ಸಂಖ್ಯೆಯನ್ನು ದೃಢೀಕರಿಸಬೇಕು.

ಐದು ವರ್ಷದೊಳಗಿನ ಮಕ್ಕಳ ಬಯೊಮೆಟ್ರಿಕ್‌ ದತ್ತಾಂಶ ಸಂಗ್ರಹಿಸಲಾಗುವುದಿಲ್ಲ. ಏಕೆಂದರೆ, ಅವರಲ್ಲಿ ಬೆರಳಚ್ಚು ಸ್ಪಷ್ಟವಾಗಿ ಮೂಡಿರುವುದಿಲ್ಲ. ಆಧಾರ್‌ ಸಂಖ್ಯೆಯೊಂದಿಗೆ ಮಕ್ಕಳ ಇತರ ವಿವರಗಳು ಮತ್ತು ಮುಖದ ಚಿತ್ರ ಅಥವಾ ಹೆತ್ತವರ ಆಧಾರ್‌ ಸಂಖ್ಯೆಯನ್ನು ಜೋಡಿಸಲಾಗಿರುತ್ತದೆ.

ಯುಐಡಿಎಐನ ಕಾರ್ಯವಿಧಾನದ ಬಗ್ಗೆ ಮಹಾಲೇಖಪಾಲರು (ಸಿಎಜಿ) 2022ರ ಏಪ್ರಿಲ್‌ನಲ್ಲಿ ವರದಿಯೊಂದನ್ನು ಸಿದ್ಧಪಡಿಸಿದ್ದರು. ಐದು ವರ್ಷದ ಒಳಗಿನ ಮಕ್ಕಳ ಬಯೊಮೆಟ್ರಿಕ್‌ ವಿವರ ಸಂಗ್ರಹಿಸಲಾಗದು. ವಿಶಿಷ್ಟ ಗುರುತಿನ ಆಧಾರದಲ್ಲಿ ಆಧಾರ್ ನೋಂದಣಿಗೆ ಬಯೊಮೆಟ್ರಿಕ್‌ ವಿವರಗಳೇ ಮೂಲ. ಆದರೆ, ಮಕ್ಕಳ ನೋಂದಣಿ ಸಂದರ್ಭದಲ್ಲಿ ಈ ಮೂಲ ಅಗತ್ಯವನ್ನೇ ಪೂರೈಸಲಾಗದು ಎಂದು ವರದಿಯಲ್ಲಿ ಹೇಳಲಾಗಿದೆ.

ಬಯೊಮೆಟ್ರಿಕ್‌ ದತ್ತಾಂಶದ ಬದಲಿಗೆ ಸಂಗ್ರಹಿಸಲಾಗುವ ಇತರ ವಿವರಗಳು ಅಥವಾ ಭಾವಚಿತ್ರದ ಆಧಾರದಲ್ಲಿ ನಕಲಿ ಆಧಾರ್‌ ನೋಂದಣಿಯನ್ನು ಪತ್ತೆ ಮಾಡುವುದು ಸಾಧ್ಯವಿಲ್ಲ ಎಂಬುದನ್ನು ಯುಐಡಿಎಐ ಒಪ್ಪಿಕೊಂಡಿದೆ.

ಐದು ವರ್ಷದೊಳಗಿನ ಮಕ್ಕಳ ಆಧಾರ್‌ ನೋಂದಣಿಯಿಂದ ಹೆಚ್ಚಿನ ಪ್ರಯೋಜನ ಇಲ್ಲ ಎಂಬುದನ್ನು ಸಿಎಜಿ ವರದಿಯಲ್ಲಿಯೇ ಹೇಳಲಾಗಿದೆ. ಹಾಗಿದ್ದರೂ ಫಲಾನುಭವಿ ಮಕ್ಕಳ ಆಧಾರ್‌ ಜೋಡಣೆ ಕಡ್ಡಾಯ ಎಂದು ಸರ್ಕಾರ ಹೇಳುತ್ತಲೇ ಇದೆ.

ಮಕ್ಕಳ ಆಹಾರದ ಹಕ್ಕಿಗಿಂತ ಆಧಾರ್‌ಗೆ ಮಣೆ

ಶಿಶು ಮತ್ತು ಮಕ್ಕಳ ಆಧಾರ್ ನೋಂದಣಿ ಮಾಡಿಸುವುದು ಬಡ ಕುಟುಂಬಗಳಿಗೆ ದೊಡ್ಡ ಸವಾಲಿನ ಕೆಲಸ.ಮಕ್ಕಳ ಆಧಾರ್ ನೋಂದಣಿ ಮಾಡಿಸಲು ದಿನಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗುತ್ತದೆ. ಹಾಗೆ ನಿಂತರೆ, ದಿನಗೂಲಿ ಕಳೆದುಕೊಳ್ಳಬೇಕಾಗುತ್ತದೆ. ಈ ಸ್ಥಿತಿಯಲ್ಲಿರುವ ಕುಟುಂಬಗಳು ಒಂದು ದಿನದ ಕೂಲಿ ಅಥವಾ ಆಧಾರ್ ನೋಂದಣಿಗೆ ಸರದಿಯಲ್ಲಿ ನಿಲ್ಲುವುದು, ಇವರೆಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಬಯೋಮೆಟ್ರಿಕ್‌ ಮತ್ತು ಇತರ ಮಾಹಿತಿಗಳನ್ನು ಅಪ್‌ಡೇಟ್‌ ಮಾಡಲು ಕ್ರಮವಾಗಿ ₹50 ಮತ್ತು ₹100ರ ಶುಲ್ಕ ವಿಧಿಸಲಾಗುತ್ತದೆ. ಆದರೆ, ಅಪ್‌ಡೇಟ್‌ಗಳನ್ನು ಮಾಡಿಸಿಕೊಳ್ಳಲು ಹಲವು ಹಂತದ ಪ್ರಕ್ರಿಯೆಗಳನ್ನು ಪೂರೈಸಬೇಕಿರುವುದರಿಂದ ಬಹುತೇಕ ಫಲಾನುಭವಿಗಳು ಮಧ್ಯವರ್ತಿಗಳ ಮೊರೆ ಹೋಗಬೇಕಾಗುತ್ತದೆ. ಅದಕ್ಕಾಗಿ ಅವರು ಹೆಚ್ಚಿನ ಹಣ ತೆರಬೇಕಾಗುತ್ತದೆ.

‘ನನ್ನ ಗಂಡ ದಿನಗೂಲಿಗೆ ಹೋಗುತ್ತಾರೆ. ನಾನು ಮಕ್ಕಳನ್ನು ನೋಡಿಕೊಳ್ಳಬೇಕು. ನಾನೊಬ್ಬಳೇ ಹೋಗಿ ಆಧಾರ್ ನೋಂದಣಿ ಮಾಡಿಸಲು ಸಾಧ್ಯವಿಲ್ಲ. ಅದಕ್ಕೆ ಬೇಕಿರುವ ಹಣವೂ ನಮ್ಮ ಬಳಿ ಇಲ್ಲ’ ಎನ್ನುತ್ತಾರೆ ದೆಹಲಿಯ ಸಮಿಧಾ. ದೇಶದ ರಾಜಧಾನಿ ದೆಹಲಿಯಲ್ಲಿಯೇ ಇಂತಹ ಸ್ಥಿತಿ ಇದೆ.

‘ಆಧಾರ್ ಇಲ್ಲದಿರುವ ಮಕ್ಕಳಿಗೂ ನಾವು ಆಹಾರ ನೀಡುತ್ತಿದ್ದೇವೆ. ಆದರೆ, ಇನ್ನು ಮುಂದೆ ಅಧಾರ್ ಇದ್ದ ಮಕ್ಕಳಿಗಷ್ಟೇ ಆಹಾರ ನೀಡಿ ಎಂದು ಮೇಲ್ವಿಚಾರಕರು ಸೂಚನೆ ನೀಡಿದ್ದಾರೆ’ ಎನ್ನುತ್ತಾರೆ ದಕ್ಷಿಣ ದೆಹಲಿಯ ಅಂಗನವಾಡಿ ಕೇಂದ್ರವೊಂದರ ಕಾರ್ಯಕರ್ತೆ.

ಫಲಾನುಭವಿಗಳ ಆಧಾರ್ ನೋಂದಣಿ ಮಾಡಿಸುವುದರ ಜತೆಗೆ ಪೋಷಣ್‌ ಅಭಿಯಾನದಲ್ಲಿ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳುವ ಹೊಣೆಯನ್ನು ರಾಜ್ಯದ ಅಧಿಕಾರಿಗಳ ಹೆಗಲಿಗೆ ಕೇಂದ್ರ ಸರ್ಕಾರ ಹೊರಿಸಿದೆ. ಆಧಾರ್ ಇಲ್ಲದ ಫಲಾನುಭವಿಗಳು ಆಧಾರ್ ಮಾಡಿಸಿಕೊಳ್ಳುವಲ್ಲಿ ನೆರವಾಗಿ ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ.

‘ಸರ್ಕಾರದ ಯೋಜನೆಯನ್ನು ವ್ಯವಸ್ಥಿತಗೊಳಿಸಲು ಆಧಾರ್ ನೆರವಾಗುತ್ತದೆ. ಆದರೆ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳ ಆಧಾರ್ ವಿವರವನ್ನು ನೋಂದಣಿ ಮಾಡಿಸುವುದು ಸವಾಲಿನ ಕೆಲಸ. ಈ ವಯಸ್ಸಿನ ಮಕ್ಕಳಲ್ಲಿ ಆಧಾರ್ ಹೊಂದಿರುವವರ ಪ್ರಮಾಣ ತೀರಾ ಕಡಿಮೆ ಇದೆ’ ಎಂದಿದ್ದಾರೆ ಐಎಎಸ್‌ ಅಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ವಿಶೇಷ ಕಾರ್ಯದರ್ಶಿಯಾಗಿದ್ದ ರಶ್ಮಿ ಸಿಂಗ್‌. ‘ನಾವು ಯಾವ ಮಗುವಿಗೂ ಪೌಷ್ಟಿಕ ಆಹಾರವನ್ನು ನಿರಾಕರಿಸುತ್ತಿಲ್ಲ. ಆಧಾರ್ ವಿವರ ಇಲ್ಲದೆಯೇ ಪೋಷಣ್‌ ಟ್ರ್ಯಾಕರ್‌ನಲ್ಲಿ ನೋಂದಣಿ ಮಾಡಬಹುದು. ಆದರೆ, ಆಧಾರ್ ಅನ್ನು ಗರಿಷ್ಠ ಪ್ರಮಾಣದಲ್ಲಿ ಸೇರಿಸಲು ಯತ್ನಿಸುತ್ತಿದ್ದೇವೆ’ ಎಂದು ಹೇಳಿದ್ದರು.

ಕೋಟ್ಯಂತರ ಮಕ್ಕಳಿಗೆ ತೊಂದರೆಯಾಗುವ, ಆಧಾರ್ ಕಡ್ಡಾಯದ ನಿರ್ಧಾರವನ್ನು ತೆಗೆದುಕೊಂಡದ್ದು ಏಕೆ ಎಂಬ ಪ್ರಶ್ನೆಯನ್ನು ಸಚಿವಾಲಯದ ಈಗಿನ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಆದರೆ, ಇನ್ನೂ ಉತ್ತರ ಬಂದಿಲ್ಲ.

ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಒತ್ತಡ

2011ರ ಜನಗಣತಿ ದತ್ತಾಂಶಗಳು, 2021–22ರಲ್ಲಿ ಅಂಗನವಾಡಿಯಲ್ಲಿ ಆದ ನೋಂದಣಿಗಳು ಮತ್ತು ಫಲಾನುಭವಿಗಳ ಸಂಖ್ಯೆಯ ಆಧಾರದ ಮೇಲೆ ಆ ಸಾಲಿನ ಅನುದಾನವನ್ನು ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. 2022–23ನೇ ಸಾಲಿಗೂ ಇದನ್ನು ಅನ್ವಯಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಆಧಾರ್ ದತ್ತಾಂಶ ಇಲ್ಲದೇ ಈ ಯೋಜನೆಯ ಅನುದಾನವನ್ನು ಕಡಿತ ಮಾಡುವ ಬೆದರಿಕೆಯನ್ನಷ್ಟೇ ಕೇಂದ್ರ ಸರ್ಕಾರ ಒಡ್ಡುತ್ತಿಲ್ಲ. ಜತೆಗೆ, ಅಂಗನವಾಡಿ ಕಾರ್ಯಕರ್ತೆಯರ ಭತ್ಯೆಗಳನ್ನು ಕಡಿತ ಮಾಡುವ ಎಚ್ಚರಿಕೆಯನ್ನೂ ಪರೋಕ್ಷವಾಗಿ ನೀಡಿದೆ.

ಅಂಗನವಾಡಿ ಕಾರ್ಯಕರ್ತೆಯರ ಭತ್ಯೆಯು,ಪೋಷಣ್ ಟ್ರ್ಯಾಕರ್‌ನಲ್ಲಿ ನಮೂದಾಗುವ ದತ್ತಾಂಶಗಳನ್ನು ಆಧರಿಸಿದೆ. ‘ಎಲ್ಲಾ ಫಲಾನುಭವಿಗಳ ಆಧಾರ್ ವಿವರವನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ’ ಎಂದು ದೆಹಲಿಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಅವರ ಹಿರಿಯ ಅಧಿಕಾರಿಗಳು ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ಕಳುಹಿಸಿರುವ ಸೂಚನೆಯನ್ನು ಅವರು ತೋರಿಸಿದರು. ‘ಎಲ್ಲರ ಆಧಾರ್ ವಿವರ ಪರಿಶೀಲನೆಯಾಗಬೇಕು. ಆಧಾರ್ ಇಲ್ಲದೆ, ಯಾರಿಗೂ ಪಡಿತರ (ಟೇಕ್‌ ಹೋಂ ರೇಷನ್– ಟಿಎಚ್‌ಆರ್‌) ನೀಡಬಾರದು’ ಎಂದು ಸಂದೇಶದಲ್ಲಿ ಸೂಚಿಸಲಾಗಿದೆ.

ಈ ಸ್ವರೂಪದ ಸೂಚನೆಗಳು ಮತ್ತು ಆಧಾರ್ ಇಲ್ಲದೇ ಇದ್ದರೆ ಟಿಎಚ್‌ಆರ್‌ ನಿರಾಕರಿಸುವ ಬಗ್ಗೆ ಬೇರೆ ರಾಜ್ಯಗಳಲ್ಲಿ ಸಂಬಂಧಿತ ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಲಾಯಿತು. ‘ನಮ್ಮ ರಾಜ್ಯದ ಹಲವು ಗ್ರಾಮಗಳಲ್ಲಿ ಇಂಟರ್‌ನೆಟ್‌ ಸಂಪರ್ಕವೇ ಸಿಗುವುದಿಲ್ಲ. ಜತೆಗೆ ದೇಶದ ಪ್ರತಿ ನಾಲ್ವರಲ್ಲಿ ಒಂದು ಮಗು ಮಾತ್ರ ಆಧಾರ್ ಹೊಂದಿದೆ. ಹೀಗಿದ್ದಾಗ ಎಲ್ಲರ ಆಧಾರ್ ವಿವರ ನಮೂದಿಸುವುದು ಹೇಗೆ ಸಾಧ್ಯ’ ಎಂದು ಒಬ್ಬ ಅಧಿಕಾರಿ ಹೇಳಿದ್ದಾರೆ.

ಈಶಾನ್ಯ ಭಾರತ ರಾಜ್ಯವೊಂದರ ಅಧಿಕಾರಿಯೊಬ್ಬರು, ‘ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರಗಳು ಪರಿಹಾರವನ್ನು ಕಂಡುಕೊಳ್ಳಬೇಕು. ಇಲ್ಲದೇ ಇದ್ದಲ್ಲಿ, ಕೇಂದ್ರ ಸರ್ಕಾರದ ಈ ನಿರ್ದೇಶನದಿಂದ ಟಿಎಚ್‌ಆರ್ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಆದರೆ ಸರ್ಕಾರ ಗಮನಹರಿಸಬೇಕಾದ ಸಮಸ್ಯೆಗಳು ಬೇರೆ ಇವೆ.

ಈ ವ್ಯವಸ್ಥೆಯಲ್ಲಿ ಎರಡು ರೀತಿಯ ಸಮಸ್ಯೆಗಳಿವೆ. ಅನರ್ಹರಾದವರು ಯೋಜನೆಯ ಫಲಾನುಭವಿಗಳಾಗುವುದು ಮೊದಲ ರೀತಿಯ ಸಮಸ್ಯೆ. ಆದರೆ ಆಧಾರ್‌ನಂತಹ ದಾಖಲೆ ಇಲ್ಲ ಎಂಬ ಕಾರಣಕ್ಕೆ ಅರ್ಹರಿಗೆ ಸವಲತ್ತು ನಿರಾಕರಿಸುವುದು ಎರಡನೇ ಸ್ವರೂಪದ ಸಮಸ್ಯೆ. ಇವೆರಡರಲ್ಲಿ ಎರಡನೆಯ ಸಮಸ್ಯೆಯೇ ಮುಖ್ಯವಾದುದು. ಏಕೆಂದರೆ ಅಲ್ಲಿ ನಿಜವಾದ ಫಲಾನುಭವಿ ಯೋಜನೆಯಿಂದ ವಂಚಿತನಾಗುತ್ತಾನೆ’ ಎನ್ನುತ್ತಾರೆ ಪೌಷ್ಟಿಕಾಂಶ ಕಾರ್ಯಕರ್ತ ಯೋಗೇಶ್ ರಂಗನಾಥ.

‘ಪೌಷ್ಟಿಕಾಂಶಯುಕ್ತ ಆಹಾರವನ್ನು ಪೂರೈಸುವಲ್ಲಿ ಇರುವ ಅಡೆತಡೆಗಳನ್ನು ಪರಿಹರಿಸುವುದರತ್ತ ಸರ್ಕಾರ ಗಮನಹರಿಸಬೇಕು. ಪೋಷಣ್‌ ಟ್ರ್ಯಾಕರ್‌ಗೆ ಆಧಾರ್ ದತ್ತಾಂಶ ನಮೂದಿಸುವುದರಿಂದ, ಈ ಯೋಜನೆಯ ಮೂಲ ಉದ್ದೇಶ ಈಡೇರಿಕೆಗೆ ಯಾವುದೇ ಅನುಕೂಲವಾಗುವುದಿಲ್ಲ. ಬೇರೆ ಬೇರೆ ಯೋಜನೆಗಳಲ್ಲಿ ಆಧಾರ್‌ ವಿಫಲವಾಗಿರುವುದರ ನಿದರ್ಶನ ನಮ್ಮ ಮುಂದೆ ಇದೆ’ ಎನ್ನುತ್ತಾರೆ ಅಂಬೇಡ್ಕರ್ ವಿಶ್ವವಿದ್ಯಾಲಯದ ದೀಪಾ ಸಿನ್ಹಾ.

(ಲೇಖಕಿ: ರಿಪೋರ್ಟರ್ಸ್ ಕಲೆಕ್ಟಿವ್‌ನ ಸದಸ್ಯೆ)

ಇಂಗ್ಲಿಷ್‌ ಲೇಖನವು ‘ಆರ್ಟಿಕಲ್‌ 14’ ಪೋರ್ಟಲ್‌ನಲ್ಲಿ ಪ್ರಕಟವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.