ADVERTISEMENT

ಆಳ-ಅಗಲ: ಸಾಮಾಜಿಕ ಮಾಧ್ಯಮಗಳಿಗೆ ಮೂಗುದಾರ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 21:00 IST
Last Updated 2 ಜೂನ್ 2021, 21:00 IST
ಸಾಮಾಜಿಕ ಜಾಲ ತಾಣ
ಸಾಮಾಜಿಕ ಜಾಲ ತಾಣ   

‘ಹೊಸ ಐಟಿ ನಿಯಮ–2021’ ಎಂದೇ ಗುರುತಿಸಲಾಗುವ, ‘ಮಧ್ಯವರ್ತಿ ಸಂಸ್ಥೆಗಳ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ನೈತಿಕ ನಿಯಮಗಳು– 2021’ ಮೇ 26ರಿಂದ ಜಾರಿಯಾಗಿವೆ. ಡಿಜಿಟಲ್‌ ಮಾಧ್ಯಮಗಳು, ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳನ್ನು ಗಮನದಲ್ಲಿಟ್ಟು ಫೆಬ್ರುವರಿಯಲ್ಲಿ ರೂಪಿಸಲಾಗಿದ್ದ ಈ ನಿಯಮಗಳ ಜಾರಿಗೆ ಮೂರು ತಿಂಗಳ ಕಾಲಾವಕಾಶವನ್ನು ಸಂಸ್ಥೆಗಳಿಗೆ ನೀಡಲಾಗಿತ್ತು.

50 ಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವ ಸಂಸ್ಥೆಗಳು ಹೊಸ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್‌ ಆ್ಯಪ್‌, ಕೂ ಮುಂತಾದ ಜಾಲತಾಣಗಳು ಇದರ ವ್ಯಾಪ್ತಿಗೆ ಬರುತ್ತವೆ.

ಏನು ಹೇಳುತ್ತದೆ ಹೊಸ ಕಾನೂನು?

ADVERTISEMENT

* ದೇಶದ ಸಮಗ್ರತೆ, ಭದ್ರತೆ ಅಥವಾ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ಪೋಸ್ಟ್‌ಗಳ ಮೂಲ ಯಾವುದು ಎಂದು ಪತ್ತೆ ಮಾಡಲು ಮಾಧ್ಯಮಗಳು ಸರ್ಕಾರಕ್ಕೆ ನೆರವು ನೀಡಬೇಕಾಗುತ್ತದೆ. ಜತೆಗೆ, ಕುಂದುಕೊರತೆ ನಿವಾರಣೆಯ ದೊಡ್ಡ ಜವಾಬ್ದಾರಿಯನ್ನೂ ನಿರ್ವಹಿಸಬೇಕು

*ಎಲ್ಲಾ ಸಂಸ್ಥೆಗಳು ಸ್ವಯಂ ನಿಯಂತ್ರಣದ ವಿಧಾನವನ್ನು ರೂಪಿಸಿಕೊಳ್ಳಬೇಕು

* ಪ್ರತಿ ಸಂಸ್ಥೆಯೂ ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ನಿವಾಸಿ ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕು. ಇವರ ಮಾಹಿತಿಯನ್ನು ತಮ್ಮ ಆ್ಯಪ್‌, ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಿ, ದೂರು ನೀಡುವ ವಿಧಾನದ ಬಗ್ಗೆಯೂ ತಿಳಿಸಬೇಕು

* ಪ್ರತಿ ಮಾಧ್ಯಮ ಸಂಸ್ಥೆಯೂ ಭಾರತದಲ್ಲಿರುವ ತನ್ನ ಕಚೇರಿಯ ವಿಳಾಸವನ್ನು ವೆಬ್‌ಸೈಟ್‌ ಅಥವಾ ಮೊಬೈಲ್‌ ಆ್ಯಪ್‌ ಅಥವಾ ಎರಡೂ ಕಡೆ ಪ್ರಕಟಿಸಬೇಕು

* ಪ್ರಕಟವಾದ ಯಾವುದೇ ವಿಷಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರೆ, ದೂರು ದಾಖಲಾಗಿ 36 ಗಂಟೆಗಳೊಳಗೆ ಅದನ್ನು ತೆಗೆದುಹಾಕಬೇಕು

* ಸ್ವೀಕರಿಸಿದ ದೂರುಗಳು, ತೆಗೆದುಕೊಂಡಿರುವ ಕ್ರಮ ಹಾಗೂ ತೆಗೆದುಹಾಕಲಾಗಿರುವ ಪೋಸ್ಟ್‌ನಲ್ಲಿದ್ದ ವಿಷಯದ ಬಗ್ಗೆ ಡಿಜಿಟಲ್‌ ಮಾಧ್ಯಮ ಸಂಸ್ಥೆಗಳು ಪ್ರತಿ ತಿಂಗಳೂ ವರದಿ ನೀಡಬೇಕು

* ನಗ್ನತೆ, ತಿರುಚಿದ ಚಿತ್ರಗಳನ್ನು ಹೊಂದಿರುವ ಪೋಸ್ಟ್‌ಗಳ ಬಗ್ಗೆ ದೂರು ಬಂದ 24 ಗಂಟೆಗಳೊಳಗೆ ಅವುಗಳನ್ನು ತೆಗೆದುಹಾಕಬೇಕು

* ಬಳಕೆದಾರರಿಂದ ಬರುವ ದೂರಿಗೆ 24 ಗಂಟೆಯೊಳಗೆ ಪ್ರತಿಕ್ರಿಯೆ ನೀಡಬೇಕು ಮತ್ತು ದೂರು ಸ್ವೀಕರಿಸಿದ ದಿನದಿಂದ 15 ದಿನಗಳೊಳಗೆ ಕ್ರಮ ಕೈಗೊಳ್ಳಬೇಕು

* ಸರ್ಕಾರದ ಯಾವುದೇ ನೋಟಿಸ್‌ ಅಥವಾ ನ್ಯಾಯಾಲಯದ ತೀರ್ಪನ್ನು ತಕ್ಷಣವೇ ಜಾರಿಗೊಳಿಸಬೇಕು

* ಟ್ವಿಟರ್‌, ವಾಟ್ಸ್ಆ್ಯಪ್‌, ಯೂಟ್ಯೂಬ್‌ನಂಥ ಮಾಧ್ಯಮದಲ್ಲಿ ಹೊರಗಿನ ವ್ಯಕ್ತಿ ಹಾಕಿದ ಪೋಸ್ಟ್‌, ದತ್ತಾಂಶ ಅಥವಾ ಲಿಂಕ್‌ಗೆ ಆಯಾ ಸಂಸ್ಥೆಯನ್ನು ಹೊಣೆಗಾರನಾಗಿಸುವುದಿಲ್ಲ. ಹೊಸ ನಿಯಮಗಳ ಸೆಕ್ಷನ್‌ 79ರ ಅಡಿ ಈ ರಿಯಾಯಿತಿಯನ್ನು ನೀಡಲಾಗುತ್ತದೆ. ಆದರೆ, ಐಟಿ ನಿಯಮಗಳನ್ನು ಪಾಲಿಸಲು ಸಂಸ್ಥೆಯು ವಿಫಲವಾದರೆ, ಈ ರಿಯಾಯಿತಿ ತಾನಾಗಿಯೇ ರದ್ದಾಗುತ್ತದೆ ಮತ್ತು ಆಯಾ ಸಂಸ್ಥೆಯನ್ನೇ ಹೊಣೆಯಾಗಿಸಲಾಗುತ್ತದೆ

ಸುಳ್ಳು ಸುದ್ದಿ, ಅಶ್ಲೀಲ ಕಂಟೆಂಟ್‌ಗೆ ತಡೆ

ಸಾಮಾಜಿಕ ಜಾಲತಾಣ, ಆನ್‌ಲೈನ್ ಸುದ್ದಿ ಪೋರ್ಟಲ್‌ಗಳು ಸೇರಿದಂತೆ ಸುದ್ದಿ ಮತ್ತು ಪ್ರಚಲಿತ ವಿಷಯಗಳನ್ನು ಪ್ರಸಾರ ಮಾಡುವ ಎಲ್ಲಾ ವೇದಿಕೆಗಳಲ್ಲೂ ಸುಳ್ಳು ಸುದ್ದಿಗಳು ಪ್ರಸಾರವಾಗುವ ಸಾಧ್ಯತೆ ಇರುತ್ತದೆ. ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೊಸ ನಿಯಮಗಳು ಸುಳ್ಳು ಸುದ್ದಿಗಳು ಹರಡುವುದನ್ನು ತಡೆಯಲು ಒಂದು ವ್ಯವಸ್ಥೆಯನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ಮೂಲ ಕರ್ತೃ ಯಾರು ಎಂಬುದನ್ನು ಪತ್ತೆ ಮಾಡಲು ಈ ನಿಯಮಗಳು ಅವಕಾಶ ಮಾಡಿಕೊಡುತ್ತವೆ. 13 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ವೀಕ್ಷಿಸುವಂತಹ ಕಂಟೆಂಟ್‌ಗಳನ್ನು ಪೋಷಕರು ಲಾಕ್‌ ಮಾಡಲು ಅವಕಾಶ ದೊರೆಯಲಿದೆ. ಇಂತಹ ದೃಶ್ಯಗಳನ್ನು ಸಣ್ಣ ಮಕ್ಕಳು ನೋಡುವುದನ್ನು ತಪ್ಪಿಸಲು ಈ ನಿಯಮಗಳು ಅವಕಾಶ ಮಾಡಿಕೊಡುತ್ತವೆ. ಅತ್ಯಾಚಾರಕ್ಕೆ ಸಂಬಂಧಿಸಿದ ವಿಡಿಯೊ/ಚಿತ್ರಗಳು ಮತ್ತು ಮಕ್ಕಳ ಲೈಂಗಿಕ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗದಂತೆ ಸ್ವಯಂಚಾಲಿತ ವ್ಯವಸ್ಥೆಯನ್ನು ಸಾಮಾಜಿಕ ಮಾಧ್ಯಮ ಮಧ್ಯಸ್ಥ ಸಂಸ್ಥೆಗಳು ಅಭಿವೃದ್ಧಿಪಡಿಸಬೇಕು ಎಂದು ಸರ್ಕಾರ ಹೇಳಿದೆ.

ಖಾಸಗಿತನಕ್ಕೆ ಧಕ್ಕೆ, ಸರ್ಕಾರಕ್ಕೆ ಅನುಕೂಲ

ಈ ನಿಯಮಗಳಿಂದ ಜನರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಮತ್ತು ಇದರಿಂದ ಸರ್ಕಾರಕ್ಕೆ ಮಾತ್ರ ಅನುಕೂಲವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ

* ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಸುಳ್ಳು ಸುದ್ದಿಗಳ ಸೃಷ್ಟಿಕರ್ತನನ್ನು ಪತ್ತೆ ಮಾಡಲು ಎಲ್ಲಾ ಸಂದೇಶಗಳನ್ನು ಪರಿಶೀಲಿಸಬೇಕಾಗುತ್ತದೆ. ಈಗ ಈ ಸಂದೇಶಗಳು ಮತ್ತು ದತ್ತಾಂಶಗಳು ಬಳಕೆದಾರರ ಡಿವೈಸ್‌ನಲ್ಲಿಯೇ ಸಂಗ್ರಹವಾಗುತ್ತವೆ. ಗೂಢಲಿಪಿ/ಕೋಡ್‌ನಲ್ಲಿರುವ ಈ ಸಂದೇಶವನ್ನು ಪರಿಶೀಲಿಸಲು, ಸಾಮಾಜಿಕ ಮಾಧ್ಯಮ ಮಧ್ಯಸ್ಥ ಸಂಸ್ಥೆಯು ಈ ಎಲ್ಲಾ ದತ್ತಾಂಶಗಳನ್ನು ತನ್ನ ಸರ್ವರ್‌ನಲ್ಲಿ ಸಂಗ್ರಹಿಸಬೇಕಾಗುತ್ತದೆ. ಇವುಗಳನ್ನು ಪರಿಶೀಲಿಸಲು ಡಿಸ್ಕ್ರಿಪ್ಟ್‌ (ಗೂಢಲಿಪಿಯನ್ನು ಲಿಪಿಯಾಗಿ ಪರಿವರ್ತಿಸಿದರೆ) ಮಾಡಿದರೆ, ಬಳಕೆದಾರರ ಖಾಸಗಿ ಸಂದೇಶ ಮತ್ತು ದತ್ತಾಂಶಗಳು ಬಹಿರಂಗವಾಗುತ್ತದೆ. ಈ ವಿವರಗಳು ಸರ್ಕಾರಕ್ಕೆ ಲಭ್ಯವಾಗುತ್ತವೆ. ಸರ್ಕಾರವು ಈ ವಿವರಗಳನ್ನು ಪಡೆದುಕೊಂಡಿದೆ ಎಂಬುದನ್ನು ಬಳಕೆದಾರರಿಗೆ ತಿಳಿಸುವ ಅವಶ್ಯಕತೆಯೇ ಇಲ್ಲ ಎಂದು ನೂತನ ನಿಯಮ ಹೇಳುತ್ತದೆ. ಇದು ಬಳಕೆದಾರರ ಅರಿವಿಲ್ಲದೇ ಅವರ ಖಾಸಗಿ ವಿವರಗಳನ್ನು ಸರ್ಕಾರ ಪಡೆದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ

* ‘ರಾಷ್ಟ್ರೀಯ ಏಕತೆ, ಸಾರ್ವಭೌಮತೆ, ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧ, ಕಾನೂನು ಸುವ್ಯವಸ್ಥೆ ಪಾಲನೆಗೆ ಧಕ್ಕೆ ತರುವಂತಹ ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹ ಕಂಟೆಂಟ್‌ಗಳಿಗೆ ಸಂಬಂಧಿಸಿದಂತೆ ಈ ನಿಯಮ ಅನ್ವಯ’ ಎಂದು ನೂತನ ನಿಯಮ ಹೇಳುತ್ತದೆ. ಆದರೆ, ಇವುಗಳಲ್ಲಿ ಬಹುತೇಕ ಅಂಶಗಳಿಗೆ ಸರಿಯಾದ ವ್ಯಾಖ್ಯಾನ ಇಲ್ಲ. ಸುಳ್ಳುಸುದ್ದಿ ಎಂದರೇನು ಎಂಬುದಕ್ಕೆ ಭಾರತದಲ್ಲಿ ಕಾನೂನುಬದ್ಧವಾದ ವ್ಯಾಖ್ಯಾನ ಇಲ್ಲ. ಸರ್ಕಾರ, ‘ಸುಳ್ಳು’ ಎಂದು ಹೇಳಿದ ಸುದ್ದಿಗಳೆಲ್ಲವೂ ಸುಳ್ಳುಸುದ್ದಿ ಎಂಬ ವರ್ಗೀಕರಣದಲ್ಲಿ ಬರುವ ಸಾಧ್ಯತೆ ಇದೆ. ಇವುಗಳನ್ನು ತೆಗೆದುಹಾಕಿ ಎಂದು ಸರ್ಕಾರವು ಆದೇಶ ನೀಡಿದರೆ ಅವುಗಳನ್ನು ತೆಗೆದುಹಾಕಬೇಕಾಗುತ್ತದೆ. ಸರ್ಕಾರವು ತನ್ನ ವಿರುದ್ಧದ ದನಿಗಳನ್ನು, ಭಿನ್ನಾಭಿಪ್ರಾಯ ಹತ್ತಿಕ್ಕಲು ಈ ನಿಯಮ ಬಳಸಿಕೊಳ್ಳುವ ಅಪಾಯವಿದೆ ಎಂದು ಪರಿಣತರು ಹೇಳುತ್ತಾರೆ

* ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಸುದ್ದಿಗಳು ಮತ್ತು ಕಂಟೆಂಟ್‌ಗಳು ಸರ್ಕಾರದ ಸೆನ್ಸಾರ್‌ಶಿಪ್‌ಗೆ ಒಳಪಡುವ ಅಪಾಯವಿದೆ. ಆನ್‌ಲೈನ್‌ನಲ್ಲಿ ಪ್ರಕಟವಾಗುವ ಸುದ್ದಿಗಳಿಗೆ ಆಯಾ ಸಂಸ್ಥೆಗಳೇ ಸ್ವಯಂನಿಯಂತ್ರಣ ಹಾಕಿಕೊಳ್ಳಬೇಕು. ಇವುಗಳ ಮೇಲೆ ಹಲವು ಸಂಸ್ಥೆಗಳು ಒಟ್ಟುಗೂಡಿ ರಚಿಸಿಕೊಂಡ ಸ್ವಯಂ ನಿಯಂತ್ರಣ ಮಂಡಳಿ ಇರುತ್ತದೆ. ಇವುಗಳ ಮೇಲ್ವಿಚಾರಣೆಯನ್ನು ಸರ್ಕಾರದ ಮೇಲ್ವಿಚಾರಣಾ ಮಂಡಳಿ ನಡೆಸುತ್ತದೆ. ಅಂತಿಮವಾಗಿ ಸರ್ಕಾರದ ಮೇಲ್ವಿಚಾರಣಾ ಮಂಡಳಿ ಹೇಳುವ ಕಂಟೆಂಟ್‌ಗಳನ್ನು ಆನ್‌ಲೈನ್‌ನಿಂದ ತೆಗೆದುಹಾಕಬೇಕಾಗುತ್ತದೆ. ತನ್ನ ವಿರುದ್ಧದ ದನಿ ಮತ್ತು ಭಿನ್ನಾಭಿಪ್ರಾಯ ಹತ್ತಿಕ್ಕಲು ಸರ್ಕಾರವು ಇದನ್ನು ಬಳಸಿಕೊಳ್ಳಲು ಅವಕಾಶವಿದೆ. ಇದೇ ಈ ನಿಯಮಗಳ ಅತ್ಯಂತ ದೊಡ್ಡ ಅಪಾಯ ಎಂಬ ಕಳವಳ ವ್ಯಕ್ತವಾಗಿದೆ

ಸಂಸ್ಥೆಗಳಿಗೆ ಬಿಸಿ ತುಪ್ಪ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಾಹಿತಿ ತಂತ್ರಜ್ಞಾನ ಹೊಸ ನಿಯಮಗಳು ಸಾಮಾಜಿಕ ಜಾಲತಾಣ ಸಂಸ್ಥೆಗಳ ನಿದ್ದೆಗೆಡಿಸಿವೆ. ಅವುಗಳನ್ನು ನಿರಾಕರಿಸುವಂತೆಯೂ ಇಲ್ಲ, ಅನುಸರಿಸುವಂತೆಯೂ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆ್ಯಪ್ ಮೊದಲಾದ ವೇದಿಕೆಗಳಲ್ಲಿ ಬಳಕೆದಾರರು ಪೋಸ್ಟ್ ಮಾಡುವ ಯಾವುದೇ ‘ಮಾಹಿತಿಯ ಮೂಲ’ವನ್ನು ಸರ್ಕಾರ ಕೇಳಿದರೆ ಒದಗಿಸಬೇಕು ಎಂದು ಕಾಯ್ದೆ ಹೇಳುತ್ತದೆ. ಇದಕ್ಕೆ ವಾಟ್ಸ್‌ಆ್ಯಪ್ ಭಾರಿ ಆಕ್ಷೇಪ ವ್ಯಕ್ತಪಡಿಸಿದ್ದು, ಇದನ್ನು ಪ್ರಶ್ನಿಸಿ ಕೋರ್ಟ್‌ನಲ್ಲಿ ದಾವೆಯನ್ನೂ ಹೂಡಿದೆ.

ಸಂದೇಶದ ಮೂಲವನ್ನು ಹುಡುಕಿಕೊಟ್ಟರೆ, ಬಳಕೆದಾರರ ಖಾಸಗಿತನದ ಉಲ್ಲಂಘನೆಯಾಗುತ್ತದೆ ಎಂಬುದು ವಾಟ್ಸ್‌ಆ್ಯಪ್ ಸೇರಿದಂತೆ ವಿವಿಧ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಆರೋಪ. ಬಳಕೆದಾರರ ಗೋಪ್ಯತೆ ತಮಗೆ ಮುಖ್ಯ ಎಂದಿರುವ ಸಂಸ್ಥೆಗಳು, ಸರ್ಕಾರದ ಈ ನಿಯಮವನ್ನು ಒಪ್ಪಿಲ್ಲ. ರಾಷ್ಟ್ರೀಯ ಭದ್ರತೆಯಂತಹ ವಿಚಾರಗಳಲ್ಲಿ ಮಾತ್ರ ಸಂದೇಶಗಳ ಮೂಲವನ್ನು ಕೇಳಲಾಗುವುದು ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಆದರೆ ಒಂದೊಮ್ಮೆ ಈ ನಿಯಮಗಳನ್ನು ಪಾಲಿಸಲು ಒಪ್ಪಿಕೊಂಡರೆ, ಸರ್ಕಾರದ ಕೇಳಿದ ಎಲ್ಲ ಮಾಹಿತಿಯನ್ನು ನೀಡುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಲಿದೆ ಎಂಬುದು ಸಂಸ್ಥೆಗಳ ದಿಗಿಲು.

ತಮ್ಮ ವೇದಿಕೆಗಳಲ್ಲಿ ಬಳಕೆದಾರರು ಪೋಸ್ಟ್ ಮಾಡುವ ‘ಕಂಟೆಂಟ್’ ಏನೇ ಆಗಿದ್ದರೂ ಸಂಸ್ಥೆಗಳು ಅದಕ್ಕೆ ಜವಾಬ್ದಾರವಲ್ಲ ಎಂಬುದು ಈ ಹಿಂದೆ ಇದ್ದ ನಿಯಮ. ಈಗಿನ ಹೊಸ ನಿಯಮದ ಪ್ರಕಾರ, ಸಾಮಾಜಿಕ ಜಾಲತಾಣಗಳಿಗೆ ಇದ್ದ ಈ ‘ವಿನಾಯಿತಿ’ ಕಡಿತಗೊಳ್ಳಲಿದ್ದು, ತಮ್ಮ ವೇದಿಕೆಯಲ್ಲಿ ಪ್ರಕಟವಾಗುವ ಎಲ್ಲ ಸಂದೇಶ, ಮಾಹಿತಿಗಳ ಹೊಣೆಯನ್ನೂ ಸಂಸ್ಥೆಗಳೇ ಹೊರಬೇಕಾಗುತ್ತದೆ. ಈ ನಿಯಮ ಸಂಸ್ಥೆಗಳಲ್ಲಿ ಭೀತಿ ಮೂಡಿಸಿದೆ.

ಕೋರ್ಟ್ ಕಟಕಟೆ: 2021ರ ಫೆಬ್ರುವರಿ 25ರಂದು ಕೇಂದ್ರ ಸರ್ಕಾರವು ಹೊಸ ಕಾಯ್ದೆಗಳನ್ನು ಪ್ರಕಟಿಸಿ, ಜಾರಿಗೆ ಮೂರು ತಿಂಗಳ ಸಮಯ ನೀಡಿತ್ತು. ಈ ನಿಯಮಾವಳಿಗಳನ್ನು ವಿರೋಧಿಸಿ ಹಲವು ದೂರುಗಳು ನ್ಯಾಯಾಲಯದಲ್ಲಿ ದಾಖಲಾಗಿವೆ.

ಇಂಡಿಪೆಂಡೆಂಟ್ ಜರ್ನಲಿಸಂ ಫೌಂಡೇಷನ್,ಐ.ಟಿ. ಕಾಯ್ದೆಗಳನ್ನು ಪ್ರಶ್ನಿಸಿ ಕಳೆದ ಮಾರ್ಚ್‌ನಲ್ಲಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತು. ಸಂಸ್ಥೆಯ ನಿರ್ದೇಶಕ ಮತ್ತು ದಿ ವೈರ್ ಸಂಸ್ಥಾಪಕ ಸಂಪಾದಕ ಎಂ.ಕೆ. ವೇಣು ಮತ್ತು ದಿ ನ್ಯೂಸ್ ಮಿನಿಟ್‌ನ ಸಂಪಾದಕಿ ಧನ್ಯಾ ರಾಜೇಂದ್ರನ್ ಅವರು ಅರ್ಜಿ ಸಲ್ಲಿಸಿದ್ದರು. ಮಾರ್ಚ್ 9ರಂದು ಹೈಕೋರ್ಟ್ ನೋಟಿಸ್ ನೀಡಿತು. ಮರುದಿನವೇ ಕೇರಳ ಹೈಕೋರ್ಟ್ ಸಹ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ನೋಟಿಸ್ ನೀಡಿತು. ಈ ಕಾಯ್ದೆಗಳಲ್ಲಿ ತನ್ನ ವಿರುದ್ಧ ಯಾವುದೇ ಕ್ರಮ ಜರುಗಿಸದಂತೆ ಕೇಂದ್ರ ಸರ್ಕಾರವನ್ನು ನಿರ್ಬಂಧಿಸಬೇಕು ಎಂದು ಕೋರಿ ಅರ್ಜಿದಾರ ಸಂಸ್ಥೆ ‘ಲೈವ್‌ಲಾ’ ಕೋರಿತ್ತು.

ದೆಹಲಿ ಹೈಕೋರ್ಟ್‌ನಲ್ಲಿ ‘ದಿ ಕ್ವಿಂಟ್’ ಸಹ ಅರ್ಜಿ ಸಲ್ಲಿಸಿತ್ತು. ದಿ ಟ್ರುಥ್ ಪ್ರೊ ಫೌಂಡೇಷನ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿತ್ತು. ಪ್ರವೀಣ್ ಅರಿಂಬ್ರತೋಡಿಯಿಲ್ ಎಂಬುವರು ಕೇರಳದಲ್ಲಿ ಮತ್ತೊಂದು ದಾವೆ ಹೂಡಿದರು. ಕಾಯ್ದೆ ಜಾರಿಯಾದ ದಿನವೇ ವಾಟ್ಸ್‌ಆ್ಯಪ್ ಸಹ ದೆಹಲಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿತು.

ನೋಡಲ್‌ ಅಧಿಕಾರಿ ನೇಮಿಸದ ಟ್ವಿಟರ್‌?

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಾಹಿತಿ ತಂತ್ರಜ್ಞಾನ ಹೊಸ ನಿಯಮಗಳ ಅನುಸಾರ ಟ್ವಿಟರ್‌ ಸಂಸ್ಥೆಯು ವಕೀಲ ಧರ್ಮೇಂದ್ರ ಚತುರ್‌ ಅವರನ್ನು ಕುಂದು ಕೊರತೆ ಪರಿಹಾರ ಅಧಿಕಾರಿಯನ್ನಾಗಿ ನೇಮಿಸಿದೆ. ಆದರೆ, ನಿಯಮ ಪಾಲನೆ ಮತ್ತು ನೋಡಲ್‌ ಅಧಿಕಾರಿಯ ನೇಮಕ ಆಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೇ 26ರಂದು ಜಾರಿಗೆ ಬಂದ ನಿಯಮಗಳ ಪ್ರಕಾರ, ಈ ಎಲ್ಲ ಹುದ್ದೆಗಳ ನೇಮಕ ಕಡ್ಡಾಯ.

ಸಾಮಾಜಿಕ ಜಾಲತಾಣಗಳಾದ ಗೂಗಲ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಕೂ, ಶೇರ್‌ಚಾಟ್‌, ಟೆಲಿಗ್ರಾಮ್‌, ಲಿಂಕ್ಡ್‌ಇನ್‌ ಸರ್ಕಾರದ ಹೊಸ ನಿಯಮದ ಅನುಸಾರ ಕಂಪನಿಗಳಲ್ಲಿ ಮಾಡಲಾಗಿರುವ ಬದಲಾವಣೆ ಕುರಿತುಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ವರದಿಗಳನ್ನು ನೀಡಿವೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರಕಾರ, ಟ್ವಿಟರ್‌ ಹೊರತುಪಡಿಸಿ ಎಲ್ಲಾ ಸಾಮಾಜಿಕ ಜಾಲತಾಣ ಸಂಸ್ಥೆಗಳೂ ಕುಂದು ಕೊರತೆ ಪರಿಹಾರ ಅಧಿಕಾರಿ ಮತ್ತು ಮುಖ್ಯ ನಿಯಮ ಪಾಲನಾ ಅಧಿಕಾರಿಗಳನ್ನು ನೇಮಿಸಿವೆ.

ಟ್ವಿಟರ್‌, ವಾಟ್ಸ್‌ಆ್ಯಪ್, ಫೇಸ್‌ಬುಕ್‌ ಸೇರಿ ಎಲ್ಲಾ ಸಾಮಾಜಿಕ ಜಾಲತಾಣಗಳೂ ಕೇಂದ್ರ ಸರ್ಕಾರ ಫೆ.24 ರಂದು ಪ್ರಕಟಿಸಿರುವ ಸಾಮಾಜಿಕ ಜಾಲತಾಣಗಳ ಹೊಸ ನಿಯಮಗಳನ್ನು ಪಾಲಿಸಬೇಕು. ಜೊತೆಗೆ. ಆಕ್ಷೇಪಾರ್ಹ ಮಾಹಿತಿಗಳ ನಿರ್ವಹಣೆ, ಮಾಸಿಕ ನಿಯಮ ಪಾಲನಾ ವರದಿ ನಿರ್ವಹಣೆ, ಆಕ್ಷೇಪಾರ್ಹ ಮಾಹಿತಿಗಳನ್ನು ಅಳಿಸುವ ಕಾರ್ಯವಿಧಾನಗಳನ್ನು ಜಾರಿಗೆ ತರಬೇಕು.

ಈ ನಿಯಮಗಳನ್ನು ಪಾಲಿಸದ ಜಾಲತಾಣ ಸಂಸ್ಥೆಗಳು ಭಾರತದಲ್ಲಿ ಮಧ್ಯವರ್ತಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತವೆ. ಇದರಿಂದಾಗಿ ಮೂರನೇ ವ್ಯಕ್ತಿ ಹಂಚಿಕೊಂಡ ದತ್ತಾಂಶ ಮತ್ತು ಮಾಹಿತಿಗಳಿಗೆ ಕಂಪನಿಗಳು ಹೊಣೆಯಾಗುತ್ತವೆ. ಇಂಥ ಸಂದರ್ಭಗಳಲ್ಲಿ ಸಂಸ್ಥೆಗಳ ವಿರುದ್ಧ ದೂರು ಬಂದರೆ ಕ್ರಿಮಿನಲ್‌ ಕ್ರಮಗಳಿಗೂ ಸಂಸ್ಥೆಗಳು ಒಳಗಾಗಬೇಕಾಗುತ್ತದೆ.

ಹೊಸ ನಿಯಮಗಳ ಅನುಸಾರ, ಪರೇಶ್‌ ಬಿ. ಲಾಲ್‌ ಅವರನ್ನು ಕುಂದು ಕೊರತೆ ಪರಿಹಾರ ಅಧಿಕಾರಿಯನ್ನಾಗಿ ವಾಟ್ಸ್‌ಆ್ಯಪ್‌ ನೇಮಿಸಿದೆ.

ಸರ್ಚ್‌ ಎಂಜಿನ್‌ಗೆ ಹೊಸ ನಿಯಮ ಅನ್ವಯಿಸದು: ಗೂಗಲ್‌

ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ನಿಯಮಗಳು ಸರ್ಚ್ ಎಂಜಿನ್ ಆಗಿರುವ ಗೂಗಲ್‌ಗೆ ಅನ್ವಯ ಆಗುವುದಿಲ್ಲ ಎಂದು ಗೂಗಲ್ ಸಂಸ್ಥೆಯು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿಯಲ್ಲಿ ಹೇಳಿದೆ.

‘ಆಕ್ಷೇಪಾರ್ಹವಾದ ಕಂಟೆಂಟ್‌’ ಅನ್ನು ಜಾಗತಿಕವಾಗಿ ಅಳಿಸಿ ಹಾಕಬೇಕು ಎಂದುಹೈಕೋರ್ಟ್‌ನ ಏಕಸದಸ್ಯ ಪೀಠವು ಏಪ್ರಿಲ್‌ 20ರಂದು ಆದೇಶ ನೀಡಿತ್ತು.ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದಲ್ಲಿ ಈ ಆದೇಶ ನೀಡಲಾಗಿತ್ತು. ಈ ಆದೇಶವನ್ನು ರದ್ದುಮಾಡಬೇಕು ಎಂದು ಗೂಗಲ್‌ ಕೋರಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್‌. ಪಟೇಲ್‌ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ಅವರ ಪೀಠವು ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದೆ. ಸಂಬಂಧಪಟ್ಟವರಿಗೆ ನೋಟಿಸ್‌ ನೀಡಲಾಗಿದ್ದು, ಜುಲೈ 25ರೊಳಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿದೆ.

ಗೂಗಲ್‌ ಮಧ್ಯಸ್ಥಿಕೆ ಸಂಸ್ಥೆ ಮಾತ್ರ, ಸಾಮಾಜಿಕ ಮಾಧ್ಯಮ ಮಧ್ಯಸ್ಥಿಕೆ ಸಂಸ್ಥೆ ಅಲ್ಲ ಎಂದು ಗೂಗಲ್‌ ವಾದಿಸಿದೆ. ಗೂಗಲ್‌ ಅನ್ನು ಸಾಮಾಜಿಕ ಮಾಧ್ಯಮ ಮಧ್ಯಸ್ಥಿಕೆ ಸಂಸ್ಥೆ ಎಂದು ತಪ್ಪಾಗಿ ಗ್ರಹಿಸಿಕೊಂಡು ಏಪ್ರಿಲ್‌ 20ರ ಆದೇಶ ನೀಡಲಾಗಿದೆ. ಹಾಗಾಗಿ, ಏಕಸದಸ್ಯ ಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಗೂಗಲ್‌ ಕೋರಿದೆ. ಆದರೆ, ಮಧ್ಯಂತರ ಆದೇಶ ನೀಡಲು ಹೈಕೋರ್ಟ್‌ ಒಪ್ಪಿಲ್ಲ.

ಕೋರ್ಟ್‌ನ ನಿರ್ದೇಶನವನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಕೈಗೊಳ್ಳಬಹುದಾದ ಶಿಸ್ತುಕ್ರಮದಿಂದ ರಕ್ಷಣೆ ಕೊಡಬೇಕು ಎಂದು ಗೂಗಲ್‌ ಕೋರಿದೆ. ಏಕಸದಸ್ಯ ಪೀಠದ ಆದೇಶ ಇದ್ದರೂ ‘ಆಕ್ಷೇಪಾರ್ಹ ಕಂಟೆಂಟ್‌’ ಅನ್ನು ಗೂಗಲ್‌ ಅಳಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.