ADVERTISEMENT

ಜಲಸಾಹಸ ಕ್ರೀಡೆಗಳಿಗೆ ಬೇಕಿದೆ ಉತ್ತೇಜನ

ಮಹೇಶ ಕನ್ನೇಶ್ವರ
Published 8 ಜೂನ್ 2019, 19:48 IST
Last Updated 8 ಜೂನ್ 2019, 19:48 IST
ಪಣಂಬೂರಿನಲ್ಲಿ ಈಚೆಗೆ ನಡೆದ ಸರ್ಫಿಂಗ್‌ ಸ್ಪರ್ಧೆಯ ದೃಶ್ಯ. ಚಿತ್ರ: ಗೋವಿಂದರಾಜ ಜವಳಿ
ಪಣಂಬೂರಿನಲ್ಲಿ ಈಚೆಗೆ ನಡೆದ ಸರ್ಫಿಂಗ್‌ ಸ್ಪರ್ಧೆಯ ದೃಶ್ಯ. ಚಿತ್ರ: ಗೋವಿಂದರಾಜ ಜವಳಿ   

ಮಂಗಳೂರು: ಕರಾವಳಿ ಕಡಲ ಕಿನಾರೆ ಜಲ ಸಾಹಸ ಕ್ರೀಡೆಗಳಿಗೆ ಹೇಳಿ ಮಾಡಿಸಿದಂತಹವು.

ಕರಾವಳಿ ಕಿನಾರೆಯಲ್ಲಿ ಹಿಂದೆಯೇ ಕ್ರೀಡಾ ಕೇಂದ್ರ ಸ್ಥಾಪಿಸಿ ಸಾಹಸ ಪ್ರಿಯರು, ಕ್ರೀಡಾಪಟುಗಳಿಗೆ ಹಾಗೂ ಪ್ರವಾಸಿಗಳಿಗೆ ವೇದಿಕೆ ಒದಗಿಸಲಾಗಿತ್ತು. ಆದರೆ, ಅದು ಅಷ್ಟೊಂದು ಪರಿಣಾಮಕಾರಿ ಆಗದೇ ಇರುವುದು ಜಲ ಸಾಹಸ ಕ್ರೀಡೆಗಳ ಹಿನ್ನಡೆಗೆ ಕಾರಣ.

20 ವರ್ಷಗಳ ಹಿಂದೆ ಕುಳೂರು ಜಂಕ್ಷನ್‌ ಬಳಿಯಲ್ಲಿದ್ದ ಬೋಟ್‌ ಕ್ಲಬ್‌ ಜಲ ಸಾಹಸ ಕೇಂದ್ರ ಸ್ಥಾಪಿಸಿ, ಕ್ರೀಡೆಗಳಿಗೆ ಉತ್ತೇಜನ ನೀಡಲಾಗುತ್ತಿತ್ತು. ಆದರೆ, ಸಮೀಪದಲ್ಲೇ ವಿದ್ಯುತ್‌ ಟವರ್‌ ಅಳವಡಿಸಿದ್ದರಿಂದ ಅಲ್ಲಿಂದ ಸ್ಥಳಾಂತರಗೊಳ್ಳಬೇಕಾಯಿತು. ಬೀಚ್‌ಗಳಿಗೆ ಬರುವ ಪ್ರವಾಸಿಗರು, ಸಾಹಸ ಕ್ರೀಡೆಗಳ ಬಗ್ಗೆ ಒಲವು ಇದ್ದವರ ಸಂಖ್ಯೆ ತೀರ ಕಡಿಮೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತಿರಲಿಲ್ಲ. ಸುರಕ್ಷತಾ ಕ್ರಮಗಳು ಕೂಡಾ ಹೆಚ್ಚು ಇರದೇ ಇರುವ ಕಾರಣದಿಂದ ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆಯೂ ಕಡಿಮೆ ಇತ್ತು.

ADVERTISEMENT

ಈಗ ಕರಾವಳಿ ಭಾಗದ ಸಸಿಹಿತ್ಲು, ಚಿತ್ರಾಪುರ, ಪಣಂಬೂರು, ಸೋಮೇಶ್ವರ, ತಣ್ಣೀರುಬಾವಿ ಬೀಚ್‌ಗಳು ಹಾಗೂ ಗುರುಪುರ, ನೇತ್ರಾವತಿ ನದಿ ದಂಡೆಗಳು ಜಲ ಸಾಹಸ ಕ್ರೀಡೆಗಳ ಆಕರ್ಷಣೀಯ ಕೇಂದ್ರ ಆಗಿವೆ. ಸಸಿಹಿತ್ಲು ಹಾಗೂ ಪಣಂಬೂರು, ತಣ್ಣೀರುಬಾವಿ ಬೀಚ್‌ಗ ಳಲ್ಲಿ ಜಲ ಸಾಹಸ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಸರ್ಫಿಂಗ್‌ ಸ್ಪರ್ಧೆಗಳು ಹೆಚ್ಚು ಇಲ್ಲಿ ನಡೆಯುತ್ತವೆ. ಪ್ಯಾರಾಸೇಲಿಂಗ್‌, ವಾಟರ್‌ ಜೆಟ್‌, ಫ್ಲೋಟಿಂಗ್‌ ಜೆಟ್‌, ಕೆನೊಯಿಂಗ್‌, ವಿಂಡ್‌ ಸರ್ಫಿಂಗ್‌, ಜೆಟ್‌ಸ್ಕೀ, ಸ್ಪೀಡ್‌ ಬೋಟ್‌ ಹಾಗೂ ಬನಾನ ರೈಡ್‌, ಸ್ಕೈ ಡೈವಿಂಗ್‌ ಜಲ ಸಾಹಸ ಕ್ರೀಡೆಗಳನ್ನು ಆಯಾ ಕಾಲಮಾನಕ್ಕೆ ಅನುಗುಣವಾಗಿ ಆಯೋಜಿಸಲಾಗುತ್ತಿದೆ.

ದೇಶ ವಿದೇಶಗಳಿಂದ ಪ್ರವಾಸಿಗರು ಕರಾವಳಿ ಕಡಲ ತೀರಕ್ಕೆ ಬರುತ್ತಿದ್ದು, ಇಂತಹ ವಿಭಿನ್ನ ಕ್ರೀಡೆಗಳು ಅವರನ್ನು ಆಕರ್ಷಿಸುತ್ತಿವೆ. ಬೀಚ್‌ಗಳತ್ತ ಮುಖ ಮಾಡಿ ಬರುವ ಸಂಸ್ಕೃತಿ ಜನರಲ್ಲಿ ಬೆಳೆಯುತ್ತಿರುವುದರಿಂದ ಜಿಲ್ಲಾಡಳಿತವು ಹೋಟೆಲ್‌, ರೆಸ್ಟೊರೆಂಟ್‌ಗಳ ಆರಂಭಕ್ಕೆ ಪರವಾನಗಿ ಹಾಗೂ ಪ್ರವಾಸೋದ್ಯಮ ಉತ್ತೇಜನಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.