ADVERTISEMENT

ಪದಕಗಳ ಗೆದ್ದರೂ ಸಿಗದ ಸೌಕರ್ಯ

ವಿಶಾಖ ಎನ್.
Published 8 ಜೂನ್ 2019, 19:48 IST
Last Updated 8 ಜೂನ್ 2019, 19:48 IST

ರಫಿಕ್ ಹೊಳಿ, ಅರ್ಜುನ್‌ ಡಿ. ಹಲಕುರ್ಕಿ ಈ ಎರಡು ಹೆಸರುಗಳು ದೇಶದ ಕುಸ್ತಿಪ್ರಿಯರಿಗೆ ಪರಿಚಿತ. ದಾವಣಗೆರೆ ಕ್ರೀಡಾ ಹಾಸ್ಟೆಲ್‌ನ ‘ಪ್ರಾಡಕ್ಟ್‌’ಗಳು ಇವರು. ಸತತವಾಗಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆಲ್ಲುವಂಥ ಹುರಿಯಾಳುಗಳನ್ನು ತಯಾರು ಮಾಡುತ್ತಿದ್ದರೂ ಈ ಹಾಸ್ಟೆಲ್‌ನಲ್ಲಿ ಒಂದು ಮಲ್ಟಿ ಜಿಮ್‌ ಕೂಡ ಇಲ್ಲ.

ಮಧ್ಯ ಕರ್ನಾಟಕದ ಕ್ರೀಡಾಕ್ಷೇತ್ರದ ಮೇಲೆ ಕಣ್ಣಾಡಿಸಿದರೆ ಕುಸ್ತಿ ಹಾಗೂ ಪವರ್‌ಲಿಫ್ಟಿಂಗ್‌ನಲ್ಲಿ ಪದಕಗಳಿಗೆ ಕೊರಳೊಡ್ಡಿದ ಸಾಧಕರ ಹೆಸರುಗಳು ಕಣ್ಣಿಗೆ ರಾಚುತ್ತವೆ. ಅವರಲ್ಲಿ ಅನೇಕರು ದಾವಣಗೆರೆಯ ಕ್ರೀಡಾ ಹಾಸ್ಟೆಲ್‌ನಲ್ಲೇ ತರಬೇತಿ ಪಡೆದವರು. ಅಂಥ ಸಾಧಕರಿಗೆ ಸಾಣೆ ಹಿಡಿಯುತ್ತಾ ಬಂದಿರುವ ಕೋಚ್ ಶಿವಾನಂದ ಒಂದು ಮಲ್ಟಿ ಜಿಮ್‌ ಮಾಡಿಕೊಡಿ ಎಂದು ಹತ್ತು ವರ್ಷಗಳಿಂದ ಕೇಳುತ್ತಾ ಬಂದಿದ್ದರೂ ಸಾಕಾರಗೊಂಡಿಲ್ಲ.

ಚಿತ್ರದುರ್ಗ ಹಾಗೂ ಹಾವೇರಿ ಗಳಲ್ಲೂ ಕ್ರೀಡಾ ಹಾಸ್ಟೆಲ್‌ಗಳಿವೆ. ಚಿತ್ರದುರ್ಗದಲ್ಲಿ ಅಥ್ಲೀಟ್‌ಗಳಿಗೆ ಅನುಕೂಲವಾಗುವಂಥ ಸಿಂಥೆಟಿಕ್‌ ಟ್ರ್ಯಾಕ್‌ ಇದೆ. ಸುಸಜ್ಜಿತ ಈಜುಕೊಳವೂ ಇದೆ. ದಾವಣಗೆರೆ ಹಾಗೂ ಹಾವೇರಿ ಸೌಕರ್ಯ ಗಳ ವಿಷಯದಲ್ಲಿ ಅಲ್ಲಿ ಗಿಂತಲೂ ಹಿಂದೆ. ಪದಕಗಳ ಕಾಣ್ಕೆ ಕೊಟ್ಟ ಕ್ರೀಡಾ ಹಾಸ್ಟೆಲ್‌ಗೇ ಈ ಗತಿಯಾಗದರೆ ಹೇಗೆ ಎನ್ನುವುದು ಶಿವಾನಂದ್‌ ಅವರ ಪ್ರಶ್ನೆ.

ADVERTISEMENT

ಎಸ್‌.ಎಂ. ಕೃಷ್ಣ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದ ಎಸ್‌.ಎಸ್‌. ಮಲ್ಲಿಕಾರ್ಜುನ ದಾವಣಗೆರೆಯವರು. ಅವರಿಂದಲೂ ಸೌಕರ್ಯ ಕೊಡಿಸಲು ಸಾಧ್ಯವಾಗಿಲ್ಲ.

‘ಒಂದು ಮಲ್ಟಿ ಜಿಮ್‌ ವ್ಯವಸ್ಥೆ ಒದಗಿಸಲು ಐದಾರು ಲಕ್ಷ ರೂಪಾಯಿ ಬೇಕಷ್ಟೇ. ಅದನ್ನು ತರುವ ನನ್ನ ಪ್ರಯತ್ನ ಇನ್ನೂ ಫಲಿಸಿಲ್ಲ. ಭಾರತ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್‌ಎಐ) ಪ್ರತಿ ಅಥ್ಲೀಟ್‌ಗೆ ದಿನಕ್ಕೆ ₹ 250 ಸಹಾಯಧನವನ್ನು ಪೌಷ್ಟಿಕ ಆಹಾರಕ್ಕೆಂದು ನೀಡುತ್ತಾರೆ. ಇಲ್ಲಿ ₹ 200 ಮಾತ್ರ ಸಿಗುತ್ತಿದೆ. ಕನಿಷ್ಠ ₹ 250 ಕೊಟ್ಟರೆ ಇಲ್ಲಿನ ಪ್ರತಿಭಾವಂತರಿಗೆ ಎಷ್ಟೋ ಅನುಕೂಲವಾಗುತ್ತದೆ. ಪ್ರತಿ ಸ್ಪರ್ಧಿಯೂ ತಿಂಗಳಿಗೆ ಐದಾರು ಸಾವಿರ ಖರ್ಚು ಮಾಡುವುದು ಅನಿವಾರ್ಯವಾಗಿದೆ. ಅವರಲ್ಲಿ ಎಷ್ಟೋ ಜನ ರೈತರ ಮಕ್ಕಳಿದ್ದಾರೆ. ಒಣಹಣ್ಣುಗಳು, ಮಾಂಸಾಹಾರ, ಹಣ್ಣು–ಹಂಪಲಿಗೆ ದಿನೇ ದಿನೇ ಬೆಲೆ ಜಾಸ್ತಿ ಆಗುತ್ತಿರುವುದರಿಂದ ಸ್ಪರ್ಧೆಗಳಿಗೆ ಸಜ್ಜಾಗುವುದೇ ಕೆಲವರಿಗೆ ಕಷ್ಟವಾಗಿದೆ’ ಎಂದು ಶಿವಾನಂದ ಪ್ರತಿಕ್ರಿಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.