ಉಡುಪಿ ಜಿಲ್ಲಾ ಪಂಚಾಯ್ತಿಯು ಹಳ್ಳಿಗಾಡಿನ ಮಹಿಳೆಯರನ್ನು ಒಳಗೊಂಡ ಹೆಬ್ರಿ ಜೇನು ಉತ್ಪಾದನೆ, ಸಣ್ಣ ಹಿಡುವಳಿದಾರರಿಗೆ ನೆರವಾಗಲೆಂದು ಪಾಳು ಭೂಮಿಯಲ್ಲಿ ಭತ್ತದ ಕೃಷಿ ಮಾಡಿ ಬೆಳೆದ ಭತ್ತಕ್ಕೆ ಉಡುಪಿ ಸಂಜೀವಿನಿ ಕಜೆ ಎನ್ನುವ ಕುಚಲಕ್ಕಿ ಬ್ಯ್ರಾಂಡ್ ಮಾಡಿದ್ದಾರೆ. ಇದರ ಜೊತೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸುವ ಬಹುತೇಕ ಉತ್ಪನ್ನಗಳ ಮಾರಾಟಕ್ಕೆ ಸಂಜೀವಿನಿ ಸ್ವಸಹಾಯ ಸಂಘದ ಸೂಪರ್ ಮಾರ್ಕೆಟ್ ಒಂದೆರಡು ತಾಲ್ಲೂಕಿನಲ್ಲಿ ತಲೆಯೆತ್ತಿದೆ...
––––––
ಉಡುಪಿ: ದೊಡ್ಡ ಕಂಪನಿಗಳ ಬ್ರಾಂಡೆಡ್ ಉತ್ಪನ್ನಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವಾಗ ಹಳ್ಳಿಗಾಡಿನ ಮಹಿಳೆಯರು ತಯಾರಿಸಿದ ಜೇನುತುಪ್ಪ ಗ್ರಾಹಕರಿಗೆ ರುಚಿಸುವುದೇ ಎಂಬ ಆತಂಕ ಆರಂಭದಲ್ಲಿ ಕಾಡಿತ್ತು. ಆದರೆ, ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕ ತಿರಸ್ಕರಿಸುವುದಿಲ್ಲ ಎಂಬ ನಂಬಿಕೆ ಹುಸಿಯಾಗಲಿಲ್ಲ. ‘ಹೆಬ್ರಿ ಜೇನಿ’ನ ಸಿಹಿ ಗ್ರಾಹಕರಿಗೆ ಹಿಡಿಸಿತು, ಸ್ವಸಹಾಯ ಸಂಘದ ಮಹಿಳೆಯರ ಕೈಯನ್ನೂ ಹಿಡಿಯಿತು ಎನ್ನುತ್ತ ‘ಹೆಬ್ರಿ ಜೇನಿ’ನ ಯಶೋಗಾಥೆಯನ್ನು ಬಿಚ್ಚಿಟ್ಟರು ಫರಿಹಾ ಬಾನು.
ಈ ‘ಹೆಬ್ರಿ ಜೇನು’ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಕಲ್ಪವೃಕ್ಷ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು ಹುಟ್ಟುಹಾಕಿರುವ ವಿನೂತನ ಜೇನುತುಪ್ಪದ ಬ್ರಾಂಡ್. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಜಿಲ್ಲೆಯಲ್ಲಿ ಸಂಜೀವಿನಿ ಸಂಘದ ಮಹಿಳೆಯರು ಮಾದರಿಯಾದ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದು ಅವುಗಳಲ್ಲಿ ‘ಹೆಬ್ರಿ ಜೇನು’ ಕೂಡ ಒಂದು.
ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಸಮುದಾಯದ ಮಹಿಳೆಯರು ಒಟ್ಟಾಗಿ ಹೆಬ್ರಿ ತಾಲ್ಲೂಕಿನ ಬಚ್ಚೆಪ್ಪು ಗ್ರಾಮದ ಮಧುವನದಲ್ಲಿ ‘ಹೆಬ್ರಿ ಜೇನು’ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಜೇನು ಸಾಕಣೆ, ಸಂಸ್ಕರಣೆ, ಪ್ಯಾಕಿಂಗ್, ಮಾರಾಟ, ಪ್ರಚಾರ ಹೀಗೆ ಪ್ರತಿಯೊಂದು ಜವಾಬ್ದಾರಿಯನ್ನೂ ಮಹಿಳೆಯರೇ ನಿಭಾಯಿಸುತ್ತಿದ್ದಾರೆ.
ಕರಾವಳಿ ಹಾಗೂ ಮಲೆನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಆರಂಭವಾಗಿರುವ ಹೆಬ್ರಿ ಜೇನು ಸಂಸ್ಕರಣಾ ಘಟಕ ಮಹಿಳೆಯರ ಸ್ವಾಭಿಮಾನದ ಬದುಕಿಗೆ ಅವಕಾಶ ಮಾಡಿಕೊಟ್ಟಿದೆ. 2023, ಅ.14ರಂದು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಿದ ‘ಹೆಬ್ರಿ ಜೇನು’ ಮೂರ್ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ.
ಬೆರಳೆಣಿಕೆ ಮಹಿಳೆಯರು ಶ್ರಮ ಹಾಗೂ ಮುತುವರ್ಜಿಯಿಂದ ತಯಾರಿಸುತ್ತಿರುವ ಹೆಬ್ರಿ ಜೇನಿನ ಸಿಹಿ ಮಾರುಕಟ್ಟೆಯ ತುಂಬೆಲ್ಲ ಹರಡುತ್ತಿದ್ದು ಇದುವರೆಗೂ 2.5 ಕ್ವಿಂಟಲ್‌ನಷ್ಟು ಜೇನು ಮಾರಾಟವಾಗಿದೆ.
ಆರಂಭದಲ್ಲಿ ಜಿಲ್ಲೆಯ ಪರಿಧಿಗೆ ಸೀಮಿತವಾಗಿದ್ದ ಜೇನಿನ ಸವಿ ಇದೀಗ ರಾಜ್ಯ, ದೇಶಗಳ ಗಡಿ ದಾಟಿ ವಿದೇಶಗಳಿಗೂ ತಲುಪಿದೆ.
ಹೆಬ್ರಿಯಲ್ಲಿ ಜೇನು ಸಂಸ್ಕರಣಾ ಘಟಕ ಆರಂಭಿಸಲು ಹಲವು ಕಾರಣಗಳಿವೆ. ಪಶ್ಚಿಮ ಘಟ್ಟ ಹಾಗೂ ಕರಾವಳಿಯ ಜತೆ ಬೆಸೆದಿರುವ ಪ್ರಾಕೃತಿಕ ಸೌಂದರ್ಯವನ್ನು ಹೊದ್ದು ನಿಂತಿರುವ ಹೆಬ್ರಿ ತಾಲ್ಲೂಕು ಜೇನು ಕೃಷಿಗೆ ಪೂರಕವಾದ ವಾತಾವರಣ ಇದೆ. ಈ ಭಾಗದಲ್ಲಿ ಯಥೇಚ್ಚವಾಗಿರುವ ಔಷಧೀಯ ಗುಣಗಳಿರುವ ಸಸ್ಯಗಳು ಹಾಗೂ ಮರಗಳಿದ್ದು ಗುಣಮಟ್ಟ ಹಾಗೂ ಔಷಧಯುಕ್ತ ಜೇನು ತಯಾರಿಕೆಗೆ ಪ್ರಶಸ್ತವಾದ ಸ್ಥಳವಾಗಿರುವುದರಿಂದ ಇಲ್ಲಿಯೇ ಜೇನು ಸಂಸ್ಕರಣಾ ಘಟಕ ಆರಂಭಿಸಲಾಗಿದೆ.
ಈ ಹೆಬ್ರಿ ಜೇನು ಸಂಸ್ಕರಣ ಘಟಕ ಆರಂಭವಾಗಿದ್ದು ಕುತೂಹಲಕರ. ದಶಕಗಳ ಹಿಂದೆ ಹೆಬ್ರಿ ತಾಲ್ಲೂಕಿನ ಬೆಚ್ಚಪ್ಪು ಗ್ರಾಮದಲ್ಲಿ 4 ಎಕರೆ ಸರ್ಕಾರಿ ಭೂಮಿಯನ್ನು ಜೇನುಸಾಕಾಣೆ ಮಾಡುವ ಉದ್ದೇಶದಿಂದ ಮಧುವನ ನಿರ್ಮಾಣಕ್ಕೆ ಮೀಸಲಿರಿಸಲಾಗಿತ್ತು. ಆದರೆ, ಜಾಗ ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗಿರಲಿಲ್ಲ.
ವರ್ಷಗಳ ಹಿಂದೆ ಅಂದಿನ ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಪ್ರಸನ್ನ ಅವರು ಗ್ರಾಮ ಪಂಚಾಯಿತಿಗಳಿಗೆ ಭೇಟಿನೀಡಿದಾಗ ಮಧುವನ ಕಣ್ಣಿಗೆ ಬಿದ್ದಿತ್ತು. ಇದೇ ಸಂದರ್ಭದಲ್ಲಿ ಸಂಜೀವಿನಿ ಸಂಘದ ಮಹಿಳೆಯರಿಗೆ ರುಡ್‌ಸೆಟ್‌ನಿಂದ ಜೇನು ಕೃಷಿ ತರಬೇತಿ ನೀಡಲಾಗುತ್ತಿತ್ತು. ತರಬೇತಿ ಪಡೆದ ಮಹಿಳೆಯರಿಗೆ ಜೇನು ಸಂಸ್ಕರಣಾ ಘಟಕ ಆರಂಭಿಸಲು ಮಧುವನವೇ ಸೂಕ್ತ ಎಂದು ನಿರ್ಧರಿಸಿದ ಸಿಇಒ ನಾಲ್ಕು ಎಕರೆ ಜಾಗವನ್ನು ಹೆಬ್ರಿ ಜೇನು ಸಂಸ್ಕರಣಾ ಘಟಕ ಆರಂಭಕ್ಕೆ ನೀಡಿದರು.
ಮಧುವನದಲ್ಲಿ ಪಾಳುಬಿದ್ದಿದ್ದ ಹಳೆಯ ಕಟ್ಟಡವನ್ನು ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ನವೀಕರಿಸಿ ಜೇನು ಸಂಸ್ಕರಣಾ ಘಟಕವನ್ನಾಗಿ ಬದಲಾಯಿಸಲಾಯಿತು. ನರೇಗಾ ಯೋಜನೆ ಅಡಿಯಲ್ಲಿ ಜೇನು ಕೃಷಿಗೆ ಪೂರಕವಾದ ಹೂ, ಹಣ್ಣಿನ ಗಿಡಗಳನ್ನು ನೆಡಲಾಯಿತು. ಸಂಘದ ಮಹಿಳೆಯರಿಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಎನ್‌ಎಲ್‌ಆರ್‌ಎಂ) ಹಾಗೂ ತೋಟಗಾರಿಕಾ ಇಲಾಖೆಯ ಅನುದಾನ ಬಳಸಿಕೊಂಡು ಹೆಚ್ಚುವರಿ ಜೇನು ಪೆಟ್ಟಿಗೆಗಳನ್ನು ವಿತರಿಸಲಾಯಿತು. ಜೇನು ಸಂಸ್ಕರಣೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ಕೊಡಲಾಯಿತು.
ಮಾರುಕಟ್ಟೆಯಲ್ಲಿ ಪ್ರಸಿದ್ಧ ಜೇನಿನ ಬ್ರಾಂಡ್‌ಗಳಿಗೆ ಪೈಪೋಟಿ ನೀಡುವಂತೆ ಆಕರ್ಷಕವಾದ ಬಾಟೆಲ್ ಹಾಗೂ ಲೇಬಲ್‌ಗಳ ತಯಾರಿಕೆ ಜತೆಗೆ ಜೇನಿನ ಮಾರುಕಟ್ಟೆಗೆ ಅಗತ್ಯ ವ್ಯವಸ್ಥೆ ಹಾಗೂ ಆಹಾರ ಸುರಕ್ಷತಾ ಪ್ರಮಾಣ ಪತ್ರವನ್ನೂ ಕೊಡಿಸಿತು. ಜಿಲ್ಲಾ ಪಂಚಾಯಿತಿಯ ಕಾಳಜಿ, ಪ್ರೋತ್ಸಾಹ, ಬೆಂಬಲದ ಪರಿಣಾಮ ‘ಹೆಬ್ರಿ ಜೇನು’ ಸಂಸ್ಥೆ ಜನ್ಮತಾಳಿದ್ದು, ಕಡಿಮೆ ಅವಧಿಯಲ್ಲಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ.
ಹೆಬ್ರಿ ಜೇನು ತಯಾರಿಕೆಯಲ್ಲಿ ತೊಡಗಿರುವ ಮಹಿಳೆಯರ ಜೀವನ ಮಟ್ಟವೂ ಸುಧಾರಿಸಿದೆ. ಹಿಂದೆ ಮನೆ ಖರ್ಚಿಗೆ ಪತಿಯ ಎದುರು ಕೈಚಾಚುವುದು ಅನಿವಾರ್ಯವಾಗಿತ್ತು. ‘ಹೆಬ್ರಿ ಜೇನು’ ಘಟಕ ಆರಂಭವಾದ ಬಳಿಕ ಸ್ವಂತ ಖರ್ಚು ನಿಭಾಯಿಸುವುದರ ಜತೆಗೆ ಕುಟುಂಬದ ನಿರ್ವಹಣೆಗೂ ಹೆಗಲುಕೊಟ್ಟ ಸಮಾಧಾನ ಇದೆ ಎಂದರು ಫರಿಹಾಬಾನು.
ಮಹಿಳಾ ಸ್ವಸಹಾಯ ಸಂಘಗಳು ಎಂದರೆ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಸಾಂಬಾರ್ ಪುಡಿ ತಯಾರಿಸುವ ಕೇಂದ್ರಗಳು ಎಂಬ ಮಾತು ಚಾಲ್ತಿಯಲ್ಲಿರುವಾಗ ಜೇನು ಸಂಸ್ಕರಣಾ ಘಟಕ ಆರಂಭಿಸಿದ್ದು ಹೆಚ್ಚು ಖುಷಿ ಕೊಟ್ಟಿದೆ. ಮಾರುಕಟ್ಟೆಯ ತಂತ್ರ, ಕೌಶಲಗಳನ್ನು ಕಲಿತಿದ್ದೇವೆ. ಮುಖ್ಯವಾಗಿ ಮಹಿಳೆ ಸ್ವತಂತ್ರವಾಗಿ ಬದುಕಬಲ್ಲಳು ಎಂಬ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದರು ಅವರು.
ಹಡಿಲು ಭೂಮಿ ಕೃಷಿ ಅಭಿಯಾನ
‘ಹೆಬ್ರಿ ಹನಿ’ ಸಂಸ್ಥೆ ಹುಟ್ಟುಹಾಕಿದ ಸಂಜೀವಿನಿ ಸಂಘದ ಮಹಿಳೆಯರು ಹಡಿಲು (ಪಾಳು) ಭೂಮಿ ಕೃಷಿ ಅಭಿಯಾನದ ಮೂಲಕವೂ ಗಮನ ಸೆಳೆದಿದ್ದಾರೆ. ಈ ಹಡಿಲುಭೂಮಿ ಅಭಿಯಾನ ಹುಟ್ಟಿಕೊಂಡಿದ್ದು ಕುತೂಹಲಕರ ಸನ್ನಿವೇಶದಲ್ಲಿ. ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರ ಅಲಭ್ಯತೆ, ಸಣ್ಣ ಹಿಡುವಳಿಗಳ ಪ್ರಮಾಣ ಹೆಚ್ಚಳ, ಆರ್ಥಿಕ ನಷ್ಟದ ಪರಿಣಾಮ ರೈತರು ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದರು.
ಯುವಕರು ಕೂಡ ಕೃಷಿಯತ್ತ ಆಸಕ್ತಿ ತೋರದೆ ದೂರದ ನಗರಗಳಲ್ಲಿ ಬದುಕು ಕಟ್ಟಿಕೊಳ್ಳಲು ಉತ್ಸುಕತೆ ತೋರುತ್ತಿದ್ದ ಪರಿಣಾಮ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಭತ್ತದ ಕೃಷಿ ಇಳಿಮುಖವಾಗಿತ್ತು. ಒಂದೆರಡು ದಶಕಗಳಲ್ಲಿ ಭತ್ತದ ಕೃಷಿ ಭೂಮಿಯ ಪ್ರಮಾಣ ಅರ್ಧದಷ್ಟು ಕುಸಿಯಿತು. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೊಂದು ದಿನ ಜಿಲ್ಲೆಯಲ್ಲಿ ಭತ್ತದ ಕೃಷಿಯೇ ಕಣ್ಮರೆಯಾಗಬಹುದು ಎಂಬ ಆತಂಕ ಹಡಿಲು ಭೂಮಿ ಕೃಷಿ ಅಭಿಯಾನ ಆರಂಭಕ್ಕೆ ಪ್ರೇರಣೆಯಾಯಿತು.
ಈ ಹಡಿಲುಭೂಮಿ ಅಭಿಯಾನ ಆರಂಭವಾಗಿದ್ದು ಅಂದಿನ ಜಿಲ್ಲಾ ಪಂಚಾಯಿಸಿ ಸಿಇಒ ನವೀನ್ ಭಟ್ ಅವರ ಅವಧಿಯಲ್ಲಿ. ಅಭಿಯಾನ ವೇಗ ಪಡೆದುಕೊಂಡಿದ್ದು ಹಿಂದಿನ ಸಿಇಒ ಎಚ್.ಪ್ರಸನ್ನ ಅವರ ಅವಧಿಯಲ್ಲಿ. ಕೃಷಿ ಭೂಮಿ ಹಡಿಲುಬೀಳುವುದನ್ನು ತಪ್ಪಿಸಲು ಹಡಿಲು ಭೂಮಿ ಕೃಷಿ ಅಭಿಯಾನದಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರನ್ನು ಬಳಸಿಕೊಳ್ಳಲು ನಿರ್ಧರಿಸಿದ ಜಿಲ್ಲಾ ಪಂಚಾಯಿತಿ, ಮಹಿಳೆಯರಿಗೆ ಭತ್ತದ ಕೃಷಿಯ ತರಬೇತಿ ಕೊಡಿಸಿತು.
ಬಳಿಕ ಜಿಲ್ಲೆಯಾದ್ಯಂತ ಹಡಿಲುಭೂಮಿ ಗುರುತಿಸುವ ಹೊಣೆಗಾರಿಕೆಯನ್ನು ಮಹಿಳೆಯರಿಗೆ ವಹಿಸಿತು. ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳ ಜತೆಗೂಡಿಕೊಂಡ ಮಹಿಳೆಯರು ಗ್ರಾಮೀಣ ಭಾಗಗಳಲ್ಲಿ ಹಡಿಲುಬಿದ್ದಿದ್ದ 1,050 ಎಕರೆ ಕೃಷಿ ಭೂಮಿ ಗುರುತಿಸಿದರು. ಭೂಮಾಲೀಕರ ಮನವೊಲಿಸಿ 900 ಎಕರೆಯಷ್ಟು ಭೂಮಿಯಲ್ಲಿ ಭತ್ತದ ಕೃಷಿ ಮಾಡಲಾಯಿತು.
ಭತ್ತದ ಕೃಷಿಗೆ ಹಣದ ಸಮಸ್ಯೆ ಎದುರಾದಾಗ ಪ್ರತಿ ಎಕರೆಗೆ ಸುತ್ತುನಿಧಿಯಿಂದ ₹25,000 ಬಡ್ಡಿರಹಿತ ಸಾಲ ನೀಡಲಾಯಿತು. ಬೆಳೆದ ಭತ್ತವನ್ನು ದಲ್ಲಾಳಿಗಳಿಗೆ ಮಾರಾಟ ಮಾಡದೆ ಹಲ್ಲಿಂಗ್ ಮಾಡಿಸಿ ‘ಉಡುಪಿ ಸಂಜೀವಿನಿ ಕಜೆ’ ಹೆಸರಿನಲ್ಲಿ ಮಾರುಕಟ್ಟೆಗೆ ಕುಚಲಕ್ಕಿ ಬಿಡುಗಡೆ ಮಾಡಲಾಯಿತು.
ಉತ್ತಮ ಗುಣಮಟ್ಟ ಹಾಗೂ ಸ್ಪರ್ಧಾತ್ಮಕ ಬೆಲೆಯಿಂದಾಗಿ ಸಂಜೀವಿನಿ ಕಜೆ ಅಕ್ಕಿಗೆ ಬೇಡಿಕೆ ಇದ್ದು ಇದುವರೆಗೂ 257 ಕ್ವಿಂಟಲ್ ಮಾರಾಟವಾಗಿದೆ. ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿರುವ ಪ್ರಮುಖ ಮಳಿಗೆಗಳು, ಗ್ರಾಮ ಪಂಚಾಯಿತಿಗಳಲ್ಲಿ ಅಕ್ಕಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹೆಚ್ಚು ಶ್ರಮ ಬೇಡುವ ಭತ್ತದ ಕೃಷಿಯನ್ನು ಮಹಿಳೆಯರು ಮಾಡಲು ಸಾಧ್ಯವೇ ಎಂಬ ಅಳುಕು ಇತ್ತು. ಗದ್ದೆ ಉಳುಮೆಯಿಂದ ಹಿಡಿದು ನಾಟಿ, ಕೊಯಿಲು, ಅಕ್ಕಿ ತಯಾರಿಕೆಯ ಹಂತದವರೆಗೂ ಮಹಿಳೆಯರು ಸಾಂಘಿಕವಾಗಿ ತೊಡಗಿಸಿಕೊಂಡಿದ್ದರಿಂದ ಆತಂಕ ದೂರವಾಯಿತು. ಭತ್ತದ ಕೃಷಿ ಹೇಳಿಕೊಳ್ಳುವಷ್ಟು ಲಾಭ ತಂದುಕೊಡಲಿಲ್ಲವಾದರೂ ಹಡಿಲುಭೂಮಿ ಕೃಷಿಯಾದ ಬಗ್ಗೆ ಸಂತೃಪ್ತಿ ಇದೆ ಎನ್ನುತ್ತಾರೆ ಅಭಿಯಾನದಲ್ಲಿ ಭಾಗವಹಿಸಿದ್ದ ಭಾರತಿ.
ಸೂಪರ್ ಮಾರ್ಕೆಟ್ ತೆರೆದ ಮಹಿಳೆಯರು
ಹಿಂದೆಲ್ಲ ಸಂಜೀವಿನಿ ಸಂಘಗಳ ಮಹಿಳೆಯರು ತಯಾರಿಸುವ ಉತ್ಪನ್ನಗಳ ಮಾರಾಟಕ್ಕೆ ಸಮರ್ಪಕ ವೇದಿಕೆ ಇರಲಿಲ್ಲ. ಅಲ್ಲಲ್ಲಿ ನಡೆಯುವ ಮಾರಾಟ ಮೇಳ, ವಸ್ತು ಪ್ರದರ್ಶನಗಳಿಗೆ ಉತ್ಪನ್ನಗಳನ್ನು ಹೊತ್ತುಕೊಂಡು ತಿರುಗಬೇಕಾದ ಅನಿವಾರ್ಯತೆ ಇತ್ತು. ಮಳಿಗೆ ಬಾಡಿಗೆ, ಕೂಲಿ, ಖರ್ಚು ಕಳೆದರೆ ಮಹಿಳೆಯರ ಕೈಯಲ್ಲಿ ಕೊನೆಗೆ ಉಳಿಯುತ್ತಿದ್ದು ಬಿಡಿಗಾಸಷ್ಟೆ.
ಈಗ ಜಿಲ್ಲೆಯಲ್ಲಿ ಸಂಜೀವಿನಿ ಸಂಘದ ಮಹಿಳೆಯರು ಉತ್ಪಾದಿಸುವ ವಸ್ತುಗಳ ಮಾರಾಟಕ್ಕೆ ಸೂಪರ್ ಮಾರ್ಕೆಟ್ ತೆರೆಯಲಾಗಿದ್ದು ಉಡುಪಿ ಹಾಗೂ ಕಾರ್ಕಳ ತಾಲ್ಲೂಕುಗಳಲ್ಲಿ ಆರಂಭಿಕ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸಂಜೀವಿನಿ ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸುವ ಬಹುತೇಕ ಉತ್ಪನ್ನಗಳು ಈ ಸೂಪರ್ ಮಾರ್ಕೆಟ್‌ಗಳಲ್ಲಿ ಲಭ್ಯ.
ಉಡುಪಿಯ ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿ ಆರಂಭವಾಗಿರುವ ಜಿಲ್ಲೆಯ ಮೊದಲ ಸಂಜೀವಿನಿ ಸೂಪರ್ ಮಾರ್ಕೆಟ್ ದೊಡ್ಡ ಮಾಲ್‌ಗಳ ಪೈಪೋಟಿಯ ಮಧ್ಯೆಯೂ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚೇರ್ಕಾಡಿಯ ಸಮೃದ್ಧಿ ಸ್ವಸಹಾಯ ಸಂಘ ಸೂಪರ್ ಮಾರ್ಕೆಟ್ ನಿರ್ವಹಣೆ ಮಾಡುತ್ತಿದ್ದು ಜಿಲ್ಲೆಯ ಎಲ್ಲ ಸಂಜೀವಿನಿ ಸಂಘಗಳ ಸದಸ್ಯರು ತಯಾರಿಸುವ ಉತ್ಪನ್ನಗಳನ್ನು ಇಲ್ಲಿ ಮಾರಾಟವಾಗುತ್ತಿವೆ.
ಗೃಹಾಲಂಕಾರ ವಸ್ತುಗಳು, ಯಕ್ಷಗಾನದ ಮುಖವಾಡಗಳು, ಕೊರಗ ಸಮುದಾಯ ತಯಾರಿಸುವ ವಿಶೇಷ ಬಿದಿರಿನ ಬುಟ್ಟಿಗಳು, ಮಹಿಳೆಯರ ಹ್ಯಾಂಡ್ ಬ್ಯಾಗ್‌ಗಳು, ಉಡುಪಿಯ ಕೈ ಮಗ್ಗದ ಸೀರೆ, ಮಣ್ಣಿನ ಮಡಕೆ, ಹೆಬ್ರಿ ಜೇನುತುಪ್ಪ, ಸಾವಯವ ಬೆಲ್ಲ, ದೇಸಿ ಗೋ ಉತ್ಪನ್ನಗಳು, ಚಿಕ್ಕಿ, ಚಕ್ಕುಲಿ, ಹಪ್ಪಳ, ಉಪ್ಪಿನಕಾಯಿ ಸೇರಿದಂತೆ 260ಕ್ಕೂ ಹೆಚ್ಚು ಉತ್ಪನ್ನಗಳು ಸೂಪರ್ ಮಾರ್ಕೆಟ್‌ನಲ್ಲಿ ಲಭ್ಯವಿದೆ.
ಸಂಜೀವಿನಿ ಸಂಘಗಳ ಮಹಿಳೆಯರು ತಯಾರಿಸುವ ಉತ್ಪನ್ನಗಳನ್ನು ಸೂಪರ್ ಮಾರ್ಕೆಟ್‌ನಲ್ಲಿ ಮಾರಾಟ ಮಾಡಲು ಅವಕಾಶವಿದ್ದು ಉತ್ಪನ್ನಗಳ ಬೆಲೆಯ ಶೇ 5ರಿಂದ 10ರಷ್ಟನ್ನು ನಿರ್ವಹಣಾ ವೆಚ್ಚವಾಗಿ ಕಡಿತಗೊಳಿಸಿ ಉಳಿದ ಹಣವನ್ನು ಮಹಿಳೆಯರಿಗೆ ನೀಡಲಾಗುತ್ತಿದೆ. ಮುಂದೆ ಎಲ್ಲ ತಾಲ್ಲೂಕುಗಳಲ್ಲಿ, ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಸಂಜೀವಿನಿ ಸೂಪರ್ ಮಾರ್ಕೆಟ್ ಆರಂಭಿಸುವ ಚಿಂತನೆ ಇದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್.
ಸೂಪರ್ ಮಾರ್ಕೆಟ್ ನಿರ್ಮಾಣಕ್ಕೆ ನಬಾರ್ಡ್ 3 ವರ್ಷಗಳ ಆರ್ಥಿಕ ನೆರವು ನೀಡುತ್ತಿದೆ. ಉತ್ಪನ್ನಗಳಿಗೆ ಬ್ರಾಂಡಿಂಗ್, ಲೇಬಲಿಂಗ್ ಸಹಿತ ಮಾರುಕಟ್ಟೆ ತಂತ್ರಗಳ ಕೌಶಲ ತರಬೇತಿಯನ್ನು ಜಿಲ್ಲಾ ಪಂಚಾಯಿತಿ ಒದಗಿಸುತ್ತಿದೆ. ಸಾವಯವ ಉತ್ಪನ್ನಗಳು, ಗೋಮಯದಿಂದ ತಯಾರಾದ ವಸ್ತುಗಳು, ಸ್ಥಳೀಯ ವಿಶೇಷ ಖಾದ್ಯಗಳಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಇದೆ.
ಆರಂಭದಲ್ಲಿ ಸಂಜೀವಿನಿ ಸಂಘದ ಮಹಿಳೆಯರು ಉತ್ಪಾದಿಸುತ್ತಿದ್ದ 30 ಉತ್ಪನ್ನಗಳು ಮಾತ್ರ ಸೂಪರ್ ಮಾರ್ಕೆಟ್‌ನಲ್ಲಿ ಇದ್ದವು. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸದ್ಯ 200ಕ್ಕೂ ಹೆಚ್ಚು ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ಮಾರ್ಕೆಟ್ ಉಸ್ತುವಾರಿ ಸವಿತಾ ಶೆಣೈ.
ಉಡುಪಿ ಜಿಲ್ಲಾ ಪಂಚಾಯ್ತಿಯ ಅಧಿಕಾರಿಗಳ ಮುತುವರ್ಜಿ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರ ಒಳಗೊಳ್ಳುವಿಕೆಯಿಂದಾಗಿ ಹೆಬ್ರಿ ಜೇನು, ಪಾಳು ಭೂಮಿ ಕೃಷಿ ಹಾಗೂ ಸೂಪರ್ ಮಾರ್ಕೆಟ್ ಜಿಲ್ಲೆಯಲ್ಲಿ ಹೆಸರು ಮಾಡುತ್ತಿದೆ. ಸಮುದಾಯದ ಮತ್ತಷ್ಟು ಕಾಳಜಿ ಮತ್ತು ಪ್ರೋತ್ಸಾಹ ದೊರೆತರೆ ಪ್ರತಿ ಜಿಲ್ಲೆಗಳಲ್ಲೂ ಮಹಿಳಾ ಸಹಕಾರ ಸಂಘಗಳು ಇದೇ ರೀತಿ ಹೆಸರು ಮಾಡಬಹುದು.
ಹೆಬ್ರಿ ಜೇನಿನ ವಿಶೇಷ
ಹೆಬ್ರಿ ತಾಲ್ಲೂಕಿನಲ್ಲಿ ಕಸ ವಿಲೇವಾರಿ ಘಟಕ ಆರಂಭಿಸಲು ಸರ್ಕಾರಿ ಜಾಗ ಹುಡುಕುವಾಗ ಮಧುವನ ಕಣ್ಣಿಗೆ ಬಿತ್ತು. ಈ ಜಾಗವನ್ನು ಹಿಂದೆ ಜೇನು ಕೃಷಿಗೆ ಮೀಸಲಿರಿಸಿರುವ ವಿಚಾರ ತಿಳಿದು ಮೂಲ ಉದ್ದೇಶಕ್ಕೆ ಜಾಗ ಬಳಕೆಯಾಗಬೇಕು ಎಂದು ನಿರ್ಧರಿಸಿ ವನಧನ ವಿಕಾಸ ಯೋಜನೆಯಡಿಯ ಅನುದಾನ ಬಳಸಿಕೊಂಡು ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರಿಂದ ‘ಹೆಬ್ರಿ ಜೇನು’ ತಯಾರಿಕಾ ಘಟಕ ಆರಂಭಿಸಲಾಯಿತು.
ಹೆಬ್ರಿ ಜೇನು ಘಟಕ ಸ್ಥಾಪನೆ, ಸಂಜೀವಿನಿ ಸೂಪರ್ ಮಾರ್ಕೆಟ್‌ಗಳ ನಿರ್ಮಾಣ ಹಾಗೂ ಹಡಿಲು ಭೂಮಿ ಕೃಷಿ ಅಭಿಯಾನ ಹೆಚ್ಚು ತೃಪ್ತಿಕೊಟ್ಟ ಕಾರ್ಯಕ್ರಮಗಳು. ಸರ್ಕಾರದ ಯೋಜನೆಗಳನ್ನು ಮಹಿಳಾ ಸಬಲೀಕರಣದ ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಲು ಈ ಕಾರ್ಯಕ್ರಮಗಳಿಂದ ಸಾಧ್ಯವಾಯಿತು. ಹಡಿಲು ಭೂಮಿ ಕೃಷಿ ಅಭಿಯಾನ ಲಾಭದಾಯಕವಲ್ಲದಿದ್ದರೂ ಜಿಲ್ಲೆಯಲ್ಲಿ ದಶಕಗಳಿಂದ ಉಳುಮೆಯಾಗದೆ ಬಿದ್ದಿದ್ದ ಭೂಮಿ ಹಸನಾಯಿತು. ಹೊಸದಾಗಿ ಕೃಷಿ ಮಾಡಲು ಹಲವರಿಗೆ ಪ್ರೇರಣೆ ದೊರೆಯಿತು. ವಿಶೇಷವಾಗಿ ಮಹಿಳೆಯರು ಭತ್ತ ಬೆಳೆದು ಸಮಾಜಕ್ಕೆ ಮಾದರಿಯಾದರು.
–ಎಚ್.ಪ್ರಸನ್ನ, ಉಡುಪಿ ಜಿಲ್ಲಾ ಪಂಚಾಯಿತಿಯ ಹಿಂದಿನ ಸಿಇಒ
ಆನ್‌ಲೈನ್ ಮಾರಾಟ ವೇದಿಕೆ ಸಿದ್ಧ
ಸಂಜೀವಿನಿ ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸುವ ಉತ್ಪನ್ನಗಳ ಮಾರಾಟಕ್ಕೆ ಆನ್‌ಲೈನ್ ವೇದಿಕೆ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಗೊಳ್ಳುತ್ತಿದೆ. ಕರಾವಳಿಯಲ್ಲಿ ಮಾತ್ರ ತಯಾರಾಗುವ ಕೆಲವು ಉತ್ಪನ್ನಗಳಿಗೆ ಜಿಐ ಮಾನ್ಯತೆ ಪಡೆಯುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಹಕರನ್ನು ಸೆಳೆಯಲು ಸಂಜೀವಿನಿ ಸಂಘಗಳ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಆಕರ್ಷಕ ಪ್ಯಾಕಿಂಗ್, ಆಹಾರ ಸುರಕ್ಷತಾ ಪ್ರಮಾಣ ಪತ್ರ, ಗುಣಮಟ್ಟಕ್ಕೆ ಒತ್ತು ನೀಡಲು ತರಬೇತಿ ನೀಡಲಾಗುವುದು.
–ಪ್ರತೀಕ್ ಬಾಯಲ್, ಜಿಲ್ಲಾ ಪಂಚಾಯಿತಿ ಸಿಇಒ.
***********
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.