ADVERTISEMENT

ಒಳನೋಟ | ಕೃಷಿ ಸಾಲ, ಜಟಿಲ ವರ್ತುಲ

ವಿಶಾಖ ಎನ್.
Published 26 ಜೂನ್ 2021, 20:11 IST
Last Updated 26 ಜೂನ್ 2021, 20:11 IST
ದಾವಣಗೆರೆ ಜಿಲ್ಲೆಯಾದ್ಯಂತ ಮುಂಗಾರು ಮಳೆಯಾಗುತ್ತಿರುವುದರಿಂದ ರೈತರು ದಾವಣಗೆರೆ ತಾಲೂಕಿನ ಬೋರಗೊಂಡನಹಳ್ಳಿ ಗ್ರಾಮದ ಜಮೀನಿನಲ್ಲಿ ಭಿತ್ತನೆ ಮಾಡುತ್ತಿರುವುದು ಕಂಡು ಬಂತು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ
ದಾವಣಗೆರೆ ಜಿಲ್ಲೆಯಾದ್ಯಂತ ಮುಂಗಾರು ಮಳೆಯಾಗುತ್ತಿರುವುದರಿಂದ ರೈತರು ದಾವಣಗೆರೆ ತಾಲೂಕಿನ ಬೋರಗೊಂಡನಹಳ್ಳಿ ಗ್ರಾಮದ ಜಮೀನಿನಲ್ಲಿ ಭಿತ್ತನೆ ಮಾಡುತ್ತಿರುವುದು ಕಂಡು ಬಂತು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ   

ದಾವಣಗೆರೆ: ಮೊದಲೇ ಬಹುಸಂಖ್ಯಾತ ರೈತರಿಗೆ ಬೆಳೆ ಸಾಲ ಎನ್ನುವುದು ವರ್ತುಲದೊಳಗೆ ಸಿಲುಕಿಕೊಂಡು ಉಸಿರುಗಟ್ಟುವ ಭಾವ ಮೂಡಿಸಿತ್ತು. ಈಗ ಅಲ್ಪಾವಧಿ ಕೃಷಿ ಸಾಲಕ್ಕೆ ಸರ್ಕಾರ ವಿಧಿಸಿರುವ ಹೊಸ ಷರತ್ತುಗಳಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿವೆ.

ರೈತರು ಪಡೆಯುವ ಶೂನ್ಯ ಬಡ್ಡಿದರದ ₹ 3 ಲಕ್ಷದವರೆಗಿನ ಅಲ್ಪಾವಧಿ ಕೃಷಿ ಸಾಲ ಯೋಜನೆಯಲ್ಲಿ ಒಂದು ಕುಟುಂಬ ಗರಿಷ್ಠ ₹ 3 ಲಕ್ಷದವರೆಗೆ ಸಾಲ ಪಡೆಯಬಹುದು. ಪಹಣಿ ಇಬ್ಬರ ಹೆಸರಿನಲ್ಲಿದ್ದು, ಅವರ ಹೆಸರುಗಳು ಒಂದೇ ಪಡಿತರ ಚೀಟಿಯಲ್ಲಿದ್ದರೆ, ಅಂತಹ ಕುಟುಂಬದ ಒಬ್ಬರಿಗೆ ಮಾತ್ರ ಸಾಲ ದೊರೆಯಲಿದೆ. ಇದಲ್ಲದೆ, ಹೊಸ ನಿಯಮದಂತೆ ಮಾಸಿಕ ವೇತನ ಅಥವಾ ತಿಂಗಳಿಗೆ ₹ 20 ಸಾವಿರಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರುವ ಅಥವಾ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿಸಿದ ರೈತರಿಗೆ ಶೂನ್ಯ ಬಡ್ಡಿ ಸಾಲ ದೊರೆಯುವುದಿಲ್ಲ. ಏಪ್ರಿಲ್ ನಂತರ ಕೃಷಿ ಸಾಲಗಳ ಮರುಪಾವತಿಯ ವೇಳೆ ಹೊಸ ಷರತ್ತು ವಿಧಿಸಿರುವುದು ರೈತರ ಗಮನಕ್ಕೆ ಬಂದಿದೆ.

2004ರಿಂದ ಸರ್ಕಾರವು ಸಹಕಾರ ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿದರದ ಸಾಲ ನೀಡುತ್ತಿದೆ. ಈವರೆಗೆ ಹಿಡುವಳಿ ಹೊಂದಿರುವ ಎಲ್ಲ ಕೃಷಿಕರು ಈ ಸಾಲ ಪಡೆಯಲು ಅವಕಾಶವಿತ್ತು. ಈಗ ಹೊಸ ಷರತ್ತಿಗೆ ಒಳಪಡುವವರು ಮಾತ್ರ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯಬಹುದು. ಉಳಿದವರು ಸಾಲಕ್ಕೆ ಶೇ 7ರಷ್ಟು ಬಡ್ಡಿ ಪಾವತಿಸಬೇಕು.

ADVERTISEMENT

ಶೂನ್ಯ ಬಡ್ಡಿದರದ ಅಲ್ಪಾವಧಿ ಕೃಷಿ ಸಾಲಕ್ಕೆ ಷರತ್ತು ವಿಧಿಸದಂತೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ ಅವರಿಗೆ ಮನವಿ ಮಾಡಲಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

‘ಈ ಬಗ್ಗೆ ಸಹಕಾರ ಸಚಿವರಿಗೆ ಮನವಿ ಮಾಡಲಾಗಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇಂತಹ ಷರತ್ತು ವಿಧಿಸುವುದು ಸಲ್ಲ’ ಎನ್ನುವುದು ರಾಜ್ಯ ರೈತ ಸಂಘ–ಹಸಿರು ಸೇನೆ ಸಂಘಟನಾ ಕಾರ್ಯದರ್ಶಿ ರವಿಕಿರಣ ಪುಣಚ ಅವರ ಅಭಿಪ್ರಾಯ.

ಅಂಕಿಅಂಶ


ರಾಜಕೀಯ ಚಿಂತಕರೂ ರೈತರೂ ಆಗಿರುವ ದಾವಣಗೆರೆ ಜಿಲ್ಲೆಯ ಕಾರಿಗನೂರಿನ ತೇಜಸ್ವಿ ವಿ. ಪಟೇಲ್, ಕೃಷಿ ಸಾಲದ ವರ್ತುಲದ ಒಳಸುಳಿಗಳನ್ನು ಸೂಕ್ಷ್ಮವಾಗಿ ತೆರೆದಿಡುವುದು ಹೀಗೆ: ‘ಬೆಳೆ ಬೆಳೆಯಲು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಸಾಲ ಸಿಗುತ್ತಿಲ್ಲ.

ವಾರ್ಷಿಕ ಉತ್ಪಾದನೆ, ಕೊಟ್ಟ ಸಾಲ, ಬೆಳೆ ಪ್ರಮಾಣ ಇವೆಲ್ಲವೂ ಸಮರ್ಪಕವಾಗಿ ತುಲನೆಯಾಗುತ್ತಿಲ್ಲ. ಇದಲ್ಲದೆ ಶೇ 50ರಷ್ಟು ರೈತರು ಎಲ್ಲ ಬಗೆಯ ಸಾಲ ಪಡೆಯುವುದರಿಂದ ಸದಾ ಹೊರಗೇ ಉಳಿಯುತ್ತಾರೆ’.

ಔಷಧ, ಗೊಬ್ಬರದ ಅಂಗಡಿಯವರು ಕೈಸಾಲ ಕೊಡುತ್ತಾರೆ. ಗೊಬ್ಬರದ ವ್ಯವಹಾರವೂ ಬಡ್ಡಿಯ ಲೆಕ್ಕದಲ್ಲಿಯೇ ನಡೆಯುತ್ತಿದೆ. ಟ್ರ್ಯಾಕ್ಟರ್ ಹೊಡೆಯುವ ಇನ್ನೊಬ್ಬ ರೈತಮಿತ್ರ ಮಾತ್ರ ಯಾವುದೇ ಬಡ್ಡಿ ಇಲ್ಲದೆ ಹೊಲ ಉತ್ತಿಕೊಟ್ಟು, ಫಲ ಬಂದಮೇಲೆ ತನ್ನ ಬಾಡಿಗೆ ಪಡೆಯುತ್ತಾನೆ. ಒಂದು ಕಡೆ ಬಡ್ಡಿ ವ್ಯವಹಾರ, ಇನ್ನೊಂದೆಡೆ ಸಹಬಾಳ್ವೆ. ಹಿಂದೆ ಅವಿಭಕ್ತ ಕುಟುಂಬಗಳ ಸದಸ್ಯರೆಲ್ಲ ಕೃಷಿಯಲ್ಲಿ ತೊಡಗಿಕೊಂಡಿದ್ದರಿಂದ, ಕೂಲಿ ಕಾರ್ಮಿಕರ ಅಗತ್ಯ ಇರಲಿಲ್ಲ. ಈಗ ಎಲ್ಲವೂ ಖರ್ಚಿನ ಬಾಬತ್ತಾಗಿದೆ ಎನ್ನುವುದು ತೇಜಸ್ವಿ ಪಟೇಲ್ ಬಿಚ್ಚಿಡುವ ವಸ್ತುಸ್ಥಿತಿ.

ಶಿವಮೊಗ್ಗದ ರೈತ ಹೋರಾಟಗಾರ ಕೆ.ಟಿ. ಗಂಗಾಧರ್ ಇನ್ನಷ್ಟು ವಿಸ್ತೃತವಾಗಿ ಕೃಷಿ ಸಾಲದ ಒಳಸುಳಿಗಳನ್ನು ಬಿಚ್ಚಿಡುತ್ತಾರೆ. ಹಸಿರು ಕ್ರಾಂತಿಯ ನಂತರ ಸಹಕಾರ ಕ್ಷೇತ್ರದ ಮೂಲಕ ಕೃಷಿ ಸಾಲ ನೀಡುವ ಪರಿಪಾಟ ಶುರುವಾಯಿತು. 1980ರಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣವಾದ ನಂತರ ಕೃಷಿ ಕ್ಷೇತ್ರಕ್ಕೆ ಒಟ್ಟು ಸಾಲದ ಶೇ 17ರಷ್ಟು ಆದ್ಯತೆಯಾಗಿ ನೀಡಲು ಪರಿಗಣಿಸಲಾಯಿತು. ಪ್ರೈಮರಿ ಲ್ಯಾಂಡ್ ಡೆವಲಪ್‌ಮೆಂಟ್‌ ಬ್ಯಾಂಕ್ (ಪಿಎಲ್‌ಡಿ) ಮೂಲಕವೂ ಸಾಲ ಸಿಗತೊಡಗಿತು. ನಬಾರ್ಡ್‌ ಮಾರ್ಗಸೂಚಿ ಪ್ರಕಾರ ಎಲ್ಲ ಬಗೆಯ ಸಾಲಗಳನ್ನು ನೀಡಲಾಗುತ್ತಿದೆ. ಸಲಹಾ ಸಮಿತಿಯೊಂದು ಮಾರ್ಗಸೂಚಿಗಳನ್ನು ನಿರ್ಧರಿಸುತ್ತದೆ. ಸಾಲ ನೀಡಿಕೆ ಪ್ರಮಾಣವನ್ನು ಅದು ನಿರ್ಧರಿಸುವ ಪದ್ಧತಿಯೇ ಅವೈಜ್ಞಾನಿಕವಾಗಿದೆ ಎನ್ನುತ್ತಾರೆ ಗಂಗಾಧರ್.

ಇದಲ್ಲದೆ ಸಾಲ ಕೊಡುವ, ವಸೂಲು ಮಾಡುವ ಕ್ರಮಗಳೂ ಬದಲಾಗಬೇಕು. ಹಳ್ಳಿಗಳಲ್ಲಿ ಟಾಂಟಾಂ ಹೊಡೆಸಿ, ಮನೆ ಮುಂದೆ ಸಾಲ ಕೊಟ್ಟಿಲ್ಲ ಎಂದು ಬೋರ್ಡ್ ಬರೆಸಿ ರೈತರ ಮರ್ಯಾದೆ ತೆಗೆಯುತ್ತಾರೆ. ಆತ್ಮಹತ್ಯೆಗೆ ಇದೇ ಕಾರಣ ಎನ್ನುವುದು ಅವರ ಅಭಿಪ್ರಾಯ.

ಕೈಗಾರಿಕೆಗಳಿಗೆ ಸಾಲವನ್ನು ಉದಾರವಾಗಿ ನೀಡುವ ಸರ್ಕಾರ, ರೈತರ ಎಕರೆ ಭೂಮಿ ಮಾರ್ಟ್‌ಗೇಜ್‌ ಮಾಡಿಯೂ ಯಾಕೆ ಬರೀ ಒಂದೂವರೆ ಲಕ್ಷ ರೂಪಾಯಿ ಕೊಡುತ್ತದೆ ಎನ್ನುವುದು ಅವರೆತ್ತುವ ಪ್ರಶ್ನೆ.

ಶುಂಠಿಯಂತಹ ವಾಣಿಜ್ಯ ಬೆಳೆಗೆ ಕೈಹಾಕಿರುವ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ರೈತರೊಬ್ಬರು ಈಚೆಗೆ ಆತ್ಮಹತ್ಯೆ ಮಾಡಿಕೊಂಡರು. 14 ತಿಂಗಳ ಬೆಳೆ ಶುಂಠಿ. ಎಕರೆಗೆ ಕನಿಷ್ಠ 5 ಲಕ್ಷ ರೂಪಾಯಿ ಹೂಡಬೇಕು. ಕೋವಿಡ್‌ ನಂತರ ರಫ್ತು ಮಾರುಕಟ್ಟೆ ಸಂಪೂರ್ಣ ಇಲ್ಲವಾಗಿರುವುದರಿಂದ ಅತಿ ಲಾಭದಾಯಕವಾಗಿದ್ದ ಈ ಬೆಳೆಯೂ ಹೊಡೆತ ಕೊಟ್ಟಿದೆ ಎಂದು ಹೆಸರು ಹೇಳಲು ಇಚ್ಛಿಸದ ಆ ಪ್ರದೇಶದ ರೈತರೊಬ್ಬರು ಹೇಳುತ್ತಾರೆ. ಭೂ ಅಭಿವೃದ್ಧಿಗಾಗಿ ನೀಡುವ ದೊಡ್ಡ ಮೊತ್ತದ ಸಾಲವನ್ನು ಪಡೆದು, ಅದನ್ನು ಶುಂಠಿಯಂತಹ ಬೆಳೆ ಮೇಲೆ ವಿನಿಯೋಗಿಸುವ ರೈತರೂ ಇದ್ದಾರೆ ಎಂಬ ಅವರ ಮಾತು ವಸ್ತುಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.

ಕೃಷಿ ಸಾಲ ಪ್ರಮಾಣ ನಿಗದಿ ಅವೈಜ್ಞಾನಿಕವಾಗಿರುವುದು ಒಂದು ಸಮಸ್ಯೆಯಾದರೆ, ರೈತರು ಪಡೆದ ಸಾಲವನ್ನು ಅಶಿಸ್ತಿನಿಂದ ಯಾವ ಯಾವುದಕ್ಕೋ ವಿನಿಯೋಗಿಸುತ್ತಿರುವುದು ಇನ್ನೊಂದು ಚಾಳಿಯಂತಾಗಿದೆ.

ಒಬ್ಬರು ಕಂಗಾಲು, ಮತ್ತೊಬ್ಬರು ಜಾಣರು

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಕೋವೇರ ಹಟ್ಟಿಯ ಶಿವಣ್ಣ ಮೂರು ಬ್ಯಾಂಕ್‌ಗಳಲ್ಲಿ ಕೃಷಿ ಸಾಲ ಮಾಡಿದರು. 12 ಎಕರೆಯಲ್ಲಿ ಈರುಳ್ಳಿ, 15 ಎಕರೆಯಲ್ಲಿ ಟೊಮೆಟೊ ಬೆಳೆದರು. ಕಳೆದ ವರ್ಷ ಸೆಪ್ಟೆಂಬರ್‌ ನಂತರ ಸುರಿದ ಅಕಾಲಿಕ ಮಳೆಯಿಂದ ಬೆಳೆ ಹಾಳಾಯಿತು. ಗುತ್ತಿಗೆ ಜಮೀನಿಗೆ ಬ್ಯಾಂಕ್‌ಗಳು ಸಾಲ ನೀಡುವುದಿಲ್ಲ. ಹೀಗಿದ್ದರೂ ಗುತ್ತಿಗೆಗೆ ಜಮೀನು ಪಡೆದು, ತಿಂಗಳಿಗೆ ಶೇ 2ರಷ್ಟು ಬಡ್ಡಿದರಕ್ಕೆ ಇನ್ನಷ್ಟು ಕೈಸಾಲ ಮಾಡಿದ್ದರು. ಅವರೀಗ ಕಂಗಾಲಾಗಿ 28 ಎಕರೆ ಜಮೀನನ್ನು ಮಾರಾಟಕ್ಕೆ ಇಟ್ಟಿದ್ದಾರೆ.

ಚಿತ್ರದುರ್ಗದ ಡಿ.ಎಸ್‌. ಹಳ್ಳಿ ಮಲ್ಲಿಕಾರ್ಜುನ ಅವರದ್ದು ಯಶೋಪಥ. 2013ರಲ್ಲಿ ಅವರು 20 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದು ₹1 ಕೋಟಿ ಸಂಪಾದಿಸಿ ಸುದ್ದಿಯಾಗಿದ್ದರು. ‘ರೈತರು ಕೃಷಿ ಸಾಲವನ್ನು ಶಿಸ್ತಿನಿಂದ ಬಳಸಬೇಕು. ಅದನ್ನು ಮದುವೆಯೋ, ಒಡವೆ ಖರೀದಿಗೋ ಬಳಸಕೂಡದು. ಹಿತಮಿತವಾಗಿ ಖರ್ಚು ಮಾಡಬೇಕು. ನಾನು 2010ರಲ್ಲಿ ₹15 ಲಕ್ಷ ಸಾಲ ಮಾಡಿದ್ದೆ. ಆಗ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಐದಾರು ವರ್ಷಗಳಿಂದ ನಾನು ಕೃಷಿ ಸಾಲವನ್ನೇ ಮಾಡಿಲ್ಲ. ಒಂದು ವರ್ಷ ಬೆಳೆ ಲಾಭ ತಂದುಕೊಟ್ಟರೆ, ಇನ್ನೊಂದು ವರ್ಷ ಕೈಕೊಡುತ್ತದೆ. ಇದನ್ನು ಅರಿತು ರೈತರು ಬದುಕಬೇಕು’ ಎನ್ನುವುದು ಅವರ ಅನುಭವ ಮಾತು ಹಾಗೂ ಸಲಹೆ.

‘ನಷ್ಟದ ಮೊತ್ತ ರೈತರಿಗೇ ನೀಡಲಿ’

‘ಕೇಂದ್ರ–ರಾಜ್ಯ ಸರ್ಕಾರಗಳು ನೀಡುವ ವಿಮೆ ಕಂತಿನ ಮೊತ್ತ ಕಂಪನಿಗೆ ಸೇರುತ್ತದೆ. ಬೆಳೆ ನಷ್ಟ ಆಗದಿದ್ದರೆ ವಿಮೆ ಕಂಪನಿಗೆ ಲಾಭ. ಬೆಳೆ ನಷ್ಟವಾದಾಗ ಅರ್ಜಿ ಸಲ್ಲಿಸಬೇಕೆಂದು ಬಹಳಷ್ಟು ರೈತರಿಗೆ ಗೊತ್ತಿಲ್ಲದೆ, ಪರಿಹಾರ ಮೊತ್ತದಿಂದ ವಂಚಿತರಾಗುತ್ತಾರೆ. ಸರ್ಕಾರ ವಿಮಾ ಕಂಪನಿಗೆ ಕೊಡುವ ಈ ಮೊತ್ತವನ್ನು ಬೆಳೆ ನಷ್ಟ ಆದಾಗ ನೇರವಾಗಿ ರೈತರಿಗೆ ನೀಡಿದರೆ, ವಿಮೆಯ ಅಗತ್ಯವೇ ಇಲ್ಲ’ ಎಂದು ಗದಗ ತಾಲ್ಲೂಕು ಹೊಂಬ‌ಳ ಗ್ರಾಮದ ರೈತ ಚೆನ್ನವೀರಪ್ಪ ಹುಣಸಿಕಟ್ಟಿ ಅಭಿಪ್ರಾಯಪಟ್ಟರು.

ಇತರೆ ಅಂಶಗಳು:

*ಕೇಂದ್ರ ಸರ್ಕಾರದ ಆತ್ಮ ನಿರ್ಭರ್‌ ಪ್ಯಾಕೇಜ್ ಅಡಿ ನಬಾರ್ಡ್‌ ಸಾಮಾನ್ಯವಾಗಿ ನೀಡುವ ₹5500 ಕೋಟಿ ಸಾಲದ ಜತೆಯಲ್ಲಿ ₹1700 ಕೋಟಿ ಸಾಲವನ್ನು ಸಹಕಾರ ಸಂಘಗಳ ಬೆಳೆ ಸಾಲ ನೀಡಲು ಒದಗಿಸಿದೆ. ಇದರಿಂದ ಶೇ 100 ರಷ್ಟು ಸಾಲ ವಿತರಣೆ ಮಾಡಲು ಸಾಧ್ಯವಾಗಿದೆ.

*ಈ ಸಾಲಿನಲ್ಲಿ ಕೋವಿಡ್‌ ಸಂಕಷ್ಟದ ಕಾರಣ ರೈತರಿಗೆ ಹೆಚ್ಚಿನ ಸಾಲ ಒದಗಿಸಲು 30.26 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹19,370 ಕೋಟಿ ಅಲ್ಪಾವಧಿ ಬೆಳೆ ಸಾಲ ಮತ್ತು 0.60 ಲಕ್ಷ ರೈತರಿಗೆ ಶೇ 3 ರ ಬಡ್ಡಿ ದರದಲ್ಲಿ ₹1440 ಕೋಟಿ ಮಧ್ಯಮಾವಧಿ/ದೀರ್ಘಾವಧಿ ಸಾಲ ವಿತರಣೆ ಗುರಿ ಹಾಕಿಕೊಳ್ಳಲಾಗಿದೆ. ಈ ಸಾಲಿಗೂ ಕೇಂದ್ರ ಸರ್ಕಾರ ಆತ್ಮ ನಿರ್ಭರ್‌ ಪ್ಯಾಕೇಜ್‌ ಅಡಿ ಮೊದಲ ಹಂತದಲ್ಲಿ ₹1450 ಕೋಟಿ ವಿಶೇಷ ಸಾಲ ಒದಗಿಸಿದೆ.

*ಆತ್ಮ ನಿರ್ಭರ್‌ ಯೋಜನೆಯಡಿ ರೈತರಿಗೆ ಕೊಯ್ಲು ನಂತರದ ಮೂಲಸೌಕರ್ಯ ಒದಗಿಸುವ ಯೋಜನೆಯಲ್ಲಿ 930 ಸಹಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಗೋದಾಮು ನಿರ್ಮಿಸಲು ನಬಾರ್ಡ್‌ ಮೂಲಕ ₹316.72 ಕೋಟಿ ಸಾಲ ಶೇ 4ರ ಬಡ್ಡಿ ದರದಲ್ಲಿ ದೊರೆಯಲಿದ್ದು, ಸಹಕಾರ ಸಂಘಗಳು ಶೇ 1 ಬಡ್ಡಿ ಪಾವತಿಸಿದರೆ ಸಾಕು.

*ರಾಜ್ಯದಲ್ಲಿನ ಸಹಕಾರ ಸಂಘಗಳಲ್ಲಿ ಅಲ್ಪಾವಧಿ ಕೃಷಿ ಸಾಲ ಪಡೆದ 5,32,305, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ಪಡೆದ 85,500 ಹೀಗೆ ಒಟ್ಟು 61,7,805 ರೈತರು ಮತ್ತು 65,500 ಸ್ವಹಾಯ ಗುಂಪುಗಳ ಅಂದಾಜು 8.51 ಲಕ್ಷ ಜನರಿಗೆ ಅನುಕೂಲವಾಗುತ್ತದೆ.

******

ಡಿಸಿಸಿ ಬ್ಯಾಂಕ್‌ನಲ್ಲಿ ಹಗರಣಗಳು ತುಂಬಿವೆ. ರೈತ ಸಾಲ ತೀರಿಸದಿದ್ದರೂ ಪುನರ್‌ನವೀಕರಣದ ಹೆಸರಿನಲ್ಲಿ ದಲ್ಲಾಳಿಗಳು ವ್ಯವಹಾರ ಮಾಡುತ್ತಿದ್ದಾರೆ.

-ಕೆ.ಟಿ. ಗಂಗಾಧರ್, ರೈತ ಹೋರಾಟಗಾರ, ಶಿವಮೊಗ್ಗ

***********

ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಮರುಪಾವತಿ ಪ್ರಮಾಣ ಶೇ 99.95ರಷ್ಟಿದೆ. ಕಳೆದ ಹಣಕಾಸು ವರ್ಷದಲ್ಲಿ ₹770 ಕೋಟಿ ಸಾಲ ನೀಡಿದ್ದೆವು. ಈ ವರ್ಷ ₹ 1000 ಕೋಟಿ ನೀಡುವ ಗುರಿ ಇದೆ.

- ಚನ್ನವೀರಪ್ಪ ಎಂ.ಬಿ.,ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.