ಬೆಂಗಳೂರು: ‘ನೋ ವಾಟರ್, ನೋ ಮನಿ’ (ನೀರಿಲ್ಲದಿದ್ದರೆ ಹಣವಿಲ್ಲ)– ಸಣ್ಣ, ಅತಿಸಣ್ಣ ರೈತರ ಕೃಷಿ ಜಮೀನಿನಲ್ಲಿ ಕೊಳವೆಬಾವಿ ಕೊರೆದು, ಪಂಪ್ ಸೆಟ್ ಅಳವಡಿಸಿ ‘ಗಂಗೆ’ಯನ್ನು ಒದಗಿಸುವ ಮಹತ್ವಾಕಾಂಕ್ಷೆಯ ‘ಗಂಗಾ ಕಲ್ಯಾಣ’ ಯೋಜನೆಯ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರಿಗೆ ಸರ್ಕಾರ ವಿಧಿಸಿದ ಷರತ್ತಿದು. ವಿವಿಧ ನಿಗಮಗಳು ಅನುಷ್ಠಾನಗೊಳಿಸುವ ಈ ಯೋಜನೆಗೆ ಬೊಕ್ಕಸದಿಂದ ₹2,600 ಕೋಟಿಗೂ ಹೆಚ್ಚು ಅನುದಾನ ಹರಿದುಹೋಗಿದೆ. ಆದರೆ, ಅನುಷ್ಠಾನದಲ್ಲಾಗುತ್ತಿರುವ ಲೋಪ, ಭ್ರಷ್ಟಾಚಾರವೆಂಬ ತೊರೆಗಳಲ್ಲಿ ಈ ಹಣ ಯಥೇಚ್ಚವಾಗಿ ಹರಿದಿದೆ. ಆದರೆ, ಆ ಪ್ರಮಾಣ ಎಷ್ಟೆಂಬ ಲೆಕ್ಕ ಮಾತ್ರ ಸಿಗುತ್ತಿಲ್ಲ!
ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳು 2015ರಿಂದ 2020ರವರೆಗಿನ ಐದು ವರ್ಷಗಳ ಅವಧಿಯಲ್ಲಿ ಈ ಯೋಜನೆಯಡಿ ಒಟ್ಟು 89,510 ಕೊಳವೆಬಾವಿಗಳನ್ನು ಕೊರೆದಿವೆ. ಆ ಪೈಕಿ, ಅನೇಕ ಕೊಳವೆಬಾವಿಗಳಲ್ಲಿ ನೀರು ಸಿಕ್ಕಿಲ್ಲ. ಅದರಲ್ಲೂ ಬಯಲುಸೀಮೆ ಪ್ರದೇಶದಲ್ಲಿ ಶೇ 20ರಿಂದ 40ರಷ್ಟು ಕೊಳವೆಬಾವಿಗಳು ವಿಫಲವಾಗಿವೆ.
ವಿಫಲವಾದ ಕೊಳವೆಬಾವಿಗಳ ಲೆಕ್ಕ ಯಾವ ನಿಗಮದ ಬಳಿಯೂ ಇಲ್ಲ. ಆದರೆ, ಕೊರೆದ ಕೊಳವೆಬಾವಿಗಳೆಲ್ಲ ‘ಸಫಲ’ ಎಂದು ಬಿಂಬಿಸಿ ಅಧಿಕಾರಿಗಳು, ಮಧ್ಯವರ್ತಿಗಳು, ಗುತ್ತಿಗೆದಾರರು, ಏಜೆನ್ಸಿಯವರು ಕೋಟಿ ಕೋಟಿ ಹಣ ನುಂಗಿದ್ದಾರೆ. ಕೊರೆದ ಆಳಕ್ಕಿಂತ ಹೆಚ್ಚು ಆಳದ ಲೆಕ್ಕ ತೋರಿಸಿ, ಹೆಚ್ಚು ಅಳತೆಯ ಕೇಸಿಂಗ್ ಕೊಳವೆಯ ನಕಲಿ ದಾಖಲೆ ಸಲ್ಲಿಸಿ ಬಿಲ್ ಮಾಡಲಾಗಿದೆ. ಇಡೀ ‘ವ್ಯವಸ್ಥೆ’ ಈ ಅಕ್ರಮಕ್ಕೆ ಕೈಜೋಡಿಸಿರುವುದು ವಿಪರ್ಯಾಸ.
ಈ ಯೋಜನೆಯಡಿ ನಡೆದಿರುವ ಅಕ್ರಮ– ಅವ್ಯವಹಾರಗಳ ಬಗ್ಗೆ ಫಲಾನುಭವಿಗಳು, ವಿವಿಧ ಸಂಘಟನೆ
ಗಳು ಸಂಬಂಧಪಟ್ಟ ನಿಗಮಗಳ ಅಧಿಕಾರಿಗಳಿಗೆ ಹಲವಾರು ಬಾರಿ ದೂರುಗಳನ್ನು ನೀಡಿದ್ದಾರೆ. ಇವುಗಳ ವಿಚಾರಣೆಗೆ ಸರ್ಕಾರ ಸಮಿತಿಗಳನ್ನೂ ರಚಿಸಿದೆ. ಆದರೆ, ವಿಚಾರಣೆ ನಡೆದು, ದೂರುಗಳು ತಾರ್ಕಿಕ ಅಂತ್ಯ ಕಂಡಿಲ್ಲ. ಹೀಗಾಗಿ, ಗುತ್ತಿಗೆದಾರರು ಯಾರೂ ಕಪ್ಪುಪಟ್ಟಿ ಸೇರಿಲ್ಲ. ಯಾವುದೇ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಂಡಿಲ್ಲ.
‘2015–16ರಿಂದ 2019–20ರ ಅವಧಿಯಲ್ಲಿ ಯೋಜನೆಯ ಕಾಮಗಾರಿ
ಗಳಲ್ಲಿ ಟೆಂಡರ್‌ರಹಿತ ಅನುಷ್ಠಾನ, ಭ್ರಷ್ಟಾಚಾರ ನಡೆದಿವೆ. ಸುಮಾರು
₹250 ಕೋಟಿಗೂ ಹೆಚ್ಚು ಮೊತ್ತದ ಭ್ರಷ್ಟಾಚಾರ ನಡೆದಿದೆ’ ಎಂದು ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಧ್ವನಿ ಎತ್ತಿದ್ದರು. ಈ ಬಗ್ಗೆ ಪರಿಶೀಲಿಸಲು ಅವರ ನೇತೃತ್ವದಲ್ಲಿಯೇ ಪರಿಷತ್ತಿನ ಎಂಟು ಸದಸ್ಯರನ್ನು ಒಳಗೊಂಡ ವಿಶೇಷ ಸದನ ಸಮಿತಿಯನ್ನು 2021ರ ಜನವರಿ 22ರಂದು ರಚಿಸಲಾಗಿತ್ತು. ಈ ಸಮಿತಿ ರಾಯಚೂರು, ಬಳ್ಳಾರಿ, ಹಾಸನ, ಮಡಿಕೇರಿ, ಮೈಸೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಭೇಟಿ ನೀಡಿ, ಯೋಜನೆ ಅನುಷ್ಠಾನದಲ್ಲಿನ ಲೋಪಗಳ ಕುರಿತಂತೆ ದಾಖಲೆ, ಸಾಕ್ಷ್ಯಗಳ ಸಹಿತ ವಿಧಾನಪರಿಷತ್‌ಗೆ ಇದೇ ಸೆಪ್ಟೆಂಬರ್ 20ರಂದು ಮಧ್ಯಂತರ ವರದಿ ಸಲ್ಲಿಸಿದೆ.
ಕಳೆದ ಮುಂಗಾರು ಅಧಿವೇಶನದಲ್ಲಿ ವಿಧಾನಸಭೆಯಲ್ಲೂ ‘ಗಂಗಾ ಕಲ್ಯಾಣ’ ಅವ್ಯವಹಾರ ಪ್ರತಿಧ್ವನಿ
ಸಿದೆ. ವಿರೋಧ ಪಕ್ಷಗಳ ಗಟ್ಟಿ ಧ್ವನಿಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 2018ರಿಂದ ಈವರೆಗೆ ಕೊರೆದ ಕೊಳವೆಬಾವಿಗಳ ಅಕ್ರಮಗಳ ಕುರಿತಂತೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಆಯ್ಕೆ ಹಂತದಿಂದಲೇ ಅಕ್ರಮ: ಯೋಜನೆಯಡಿ ಫಲಾನುಭವಿಗಳ ಆಯ್ಕೆ ಹಂತದಿಂದಲೇ ಅಕ್ರಮಗಳು ಆರಂಭವಾಗುತ್ತವೆ. ತಾಲ್ಲೂಕು ಮಟ್ಟದಲ್ಲಿ ಸಚಿವರ ಮತ್ತು ನಿಗಮದ ಪದಾಧಿಕಾರಿಗಳಿಗೆ ವಿವೇಚನಾ ಕೋಟಾದಡಿ ಶೇ 20ರಷ್ಟನ್ನು ಕೊಳವೆಬಾವಿ ಹಂಚಿಕೆ ನಿಗದಿಪಡಿಸಲಾಗಿದೆ. ಆದರೆ, ಅವುಗಳ ಹಂಚಿಕೆಗೆ ಅನುಸರಿಸಬೇಕಾದ ಮಾನದಂಡಗಳನ್ನು ನಿಗದಿಪಡಿಸಲಾಗಿಲ್ಲ. ಹೀಗಾಗಿ, ಈ ಕೋಟಾದಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ಮಧ್ಯವರ್ತಿಗಳದ್ದೇ ದರ್ಬಾರು.
‘ಸಫಲ’ ಕೊಳವೆಬಾವಿಗಳೆಂದು ಪರಿಗಣಿಸಿ ಹಣ ಪಾವತಿಸಿದ ಹಲವು ಕೊಳವೆಬಾವಿಗಳಲ್ಲಿ ನಿಗದಿತ ಪ್ರಮಾಣದಲ್ಲಿ ನೀರು (1,000 ಜಿಪಿಎಚ್–ಗ್ಯಾಲನ್ ಪರ್ ಅವರ್) ಚಿಮ್ಮುತ್ತಿಲ್ಲ. ಮೂರನೇ ವ್ಯಕ್ತಿ ಪರಿಶೀಲನಾ ಸಂಸ್ಥೆಯವರು ಅಥವಾ ಸಂಬಂಧಪಟ್ಟ ಅಧಿಕಾರಿ ನೀರಿನ ಲಭ್ಯತೆ ಪ್ರಮಾಣ ಖುದ್ದು ಪರಿಶೀಲಿಸಿ ದೃಢೀಕರಿಸಿದ ಬಳಿಕ ಗುತ್ತಿಗೆದಾರರಿಗೆ ಹಣ ಪಾವತಿಸಬೇಕೆನ್ನುವುದು ನಿಯಮ. ಆದರೆ, ಇಲ್ಲಿ ಗುತ್ತಿಗೆದಾರರೇ ನೇಮಿಸಿದ ಭೂ ವಿಜ್ಞಾನಿಗಳು (ಜಿಯಾಲಜಿಸ್ಟ್) ದೃಢೀಕರಿಸಿದ ಆಧಾರದಲ್ಲಿ ಬಿಲ್ ಪಾವತಿಸಲಾಗಿದೆ. ಆ ಮೂಲಕ, ‘ನೋ ವಾಟರ್, ನೋ ಮನಿ’ ದಾಖಲೆಗಷ್ಟೇ ಸೀಮಿತವಾಗಿದೆ.
ಯೋಜನೆಯನ್ನು ಅನುಷ್ಠಾನಗೊಳಿಸುವ ಹೊಣೆ ಹೊತ್ತಿದ್ದ ವಿವಿಧ ನಿಗಮಗಳು ಪ್ರಮಾಣಿತ ಕಾರ್ಯವಿಧಾನ ಅನುಸರಿಸಿಲ್ಲ. ಪ್ರತಿ ಪ್ಯಾಕೇಜ್ ಕಾಮಗಾರಿ ಗುತ್ತಿಗೆ, ಮೂರನೇ ವ್ಯಕ್ತಿ ಪರಿಶೀಲನಾ ಸಂಸ್ಥೆಗಳ ಸೇವೆ ಪಡೆಯುವ ಬಗ್ಗೆ ವಿವರವಾದ ಅಂದಾಜು ಪಟ್ಟಿ ಸಿದ್ಧಪಡಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿಲ್ಲ. ಅನುಮೋದಿತ ಅಂದಾಜು ಪಟ್ಟಿಯೇ ಇಲ್ಲದಿರುವುದರಿಂದ ಟೆಂಡರ್ ದಾಖಲೆಗಳನ್ನುಇ–ಪೋರ್ಟಲ್‌ನಲ್ಲಿ ಅರ್ಹ ಗುತ್ತಿಗೆದಾರರಿಗೆ ಒದಗಿಸಲು ಸಾಧ್ಯವಾಗಿಲ್ಲ. ಟೆಂಡರ್ ಪ್ರಕ್ರಿಯೆ ಹಂತದಲ್ಲಿಯೂ ನಿಯಮಪಾಲನೆ ಆಗಿಲ್ಲ. ಜೊತೆಗೆ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ (ಕೆಟಿಪಿಪಿ) ಕಾಯ್ದೆಯೂ ಉಲ್ಲಂಘನೆಯಾಗಿದೆ. ಪರಿಣಾಮ, ಕಾಮಗಾರಿಗಳು ಅರ್ಹ ಗುತ್ತಿಗೆದಾರರು ಅವಕಾಶವಂಚಿತರಾಗಿ, ಅಸಮರ್ಥರ ಪಾಲಾಗಿವೆ. ಕೆಲವು ಗುತ್ತಿಗೆದಾರರರಿಗೆ ಅನುಕೂಲ ಆಗುವಂತೆ ಟೆಂಡರ್ ಪ್ರಕ್ರಿಯೆ ನಿರ್ವಹಿಸಿದ ನಿದರ್ಶನಗಳೂ ಇವೆ. ಯೋಜನೆಯಲ್ಲಿ ನೇಮಿಸಿದ ಭೂ ವಿಜ್ಞಾನಿಗಳು ಕೊಳವೆಬಾವಿ ಕೊರೆಯುವ ಸ್ಥಳವನ್ನು ಗುರುತಿಸಿ, ಲಭ್ಯ ನೀರಿನ ಪ್ರಮಾಣವನ್ನು ದೃಢೀಕರಿಸಿದ್ದಾರೆ. ಎಲ್ಲ ಕೊಳವೆಬಾವಿಗಳು ‘ಸಫಲ’ವೆಂದು ದೃಢೀಕರಿಸಿ ಹಣ ಪಾವತಿಸಿರುವುದಕ್ಕೆ ನಿಗಮಗಳಲ್ಲಿರುವ ದಾಖಲೆಗಳೇ ಸಾಕ್ಷ್ಯ ನೀಡುತ್ತವೆ!
ಗುತ್ತಿಗೆ ಕರಾರಿನ ಉಲ್ಲಂಘನೆ: ಯೋಜನೆಯ ಅನುಷ್ಠಾನದ ಕಾರ್ಯಾದೇಶ ಪಡೆದ ಹಲವು ಗುತ್ತಿಗೆದಾರರು, ಏಜೆನ್ಸಿಗಳು ಕರಾರಿನ ಅನ್ವಯ ಕಾರ್ಯನಿರ್ವಹಿಸಿಲ್ಲ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಕೊಳವೆ ಬಾವಿ ಕೊರೆಯುವ ಗುತ್ತಿಗೆ ಪಡೆದು 2016ರಲ್ಲಿಯೇ ಒಪ್ಪಂದಮಾಡಿಕೊಂಡಿದ್ದ ಜಿಯೋ ಕನ್ಸಲ್ಟೆನ್ಸಿ ಸರ್ವಿಸ್ ಕಂಪನಿಯವರು ಇದುವರೆಗೂ ಯಾವುದೇ ಕೊಳವೆ ಬಾವಿ ಕೊರೆದಿಲ್ಲ. ಮಾಲೂರು ತಾಲ್ಲೂಕಿನಲ್ಲಿ 2015–16ನೇ ಸಾಲಿನಿಂದ ಸುಮಾರು 600 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಈ ಪೈಕಿ, 300ಕ್ಕೆ ಪಂಪ್‌ಸೆಟ್ ಅಳವಡಿಸಿಲ್ಲ. 2010ರಲ್ಲಿ ಮಂಜೂರಾದ ಕೊಳವೆ ಬಾವಿಯನ್ನು 2012ರಲ್ಲಿ ಕೊರೆದು, 10 ವರ್ಷ ಕಳೆದರೂ ಪಂಪ್‌ಸೆಟ್ ಅಳವಡಿಸದ ಪ್ರಕರಣವನ್ನು ವಿಶೇಷ ಸದನ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
₹130 ಕೋಟಿಗೂ ಹೆಚ್ಚು ಅವ್ಯವಹಾರ: ‘ಗಂಗಾ ಕಲ್ಯಾಣ ಯೋಜನೆಯಲ್ಲಿ ₹130 ಕೋಟಿಗೂ ಹೆಚ್ಚು ಮೊತ್ತದ ಅವ್ಯವಹಾರ ನಡೆದಿದೆ. ನಕಲಿ ದಾಖಲಾತಿ ಸಲ್ಲಿಸಿರುವ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಇದರಿಂದ ದರಗಳನ್ನು ನಿಗದಿಪಡಿಸುವುದರಲ್ಲಿ ಬಿಡ್ ಮೊತ್ತವನ್ನು ವಹಿವಾಟಿಗಿಂತ ನಾಲ್ಕು ಪಟ್ಟು ಹೆಚ್ಚಿಸಲಾಗಿದೆ. ಇಲಾಖೆಯ
ಅಧಿಕಾರಿಗಳು ಗುತ್ತಿಗೆದಾರರ ಜೊತೆ ಶಾಮೀಲಾದ ಪರಿಣಾಮ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದು ಕಂಡುಬರುತ್ತಿದೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ದಾಖಲೆಗಳ ಸಹಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಳೆದ ಮಾರ್ಚ್‌ನಲ್ಲೇ ಪತ್ರ ಬರೆದಿದ್ದಾರೆ.t
‘ಅಕ್ರಮ’ದ ನಾನಾ ಮುಖಗಳು
* ಯಾರದ್ದೊ ಸರ್ವೆ ನಂಬರ್, ಇನ್ಯಾರದ್ದೋ ಸರ್ವೆ ನಂಬರ್‌ನ ಜಾಗದಲ್ಲಿ ಕೊಳವೆ ಬಾವಿ.
* ಕೊಳೆವೆ ಬಾವಿಯ ಆಳ ಮತ್ತು ಗುತ್ತಿಗೆದಾರರಿಗೆ ಬಿಲ್ ಮಾಡಿರುವ ಆಳ, ಅಳವಡಿಸಿದ ಕೇಸಿಂಗ್ ಹಾಗೂ ದಾಖಲೆಗಳಲ್ಲಿರುವ ಕೇಸಿಂಗ್ ಅಳತೆಗೆ ಹೊಂದಿಕೆಯೇ ಇಲ್ಲ.
* ಕೊಳವೆ ಬಾವಿಯಲ್ಲಿ ನೀರಿನ ಲಭ್ಯತೆ 1,000 ಜಿಪಿಎಚ್ (ಗ್ಯಾಲನ್ ಪರ್ ಅವರ್) ಕಡಿಮೆ ಇದ್ದರೂ ‘ಸಫಲ’ ಕೊಳವೆ ಬಾವಿ ಎಂದು ನಮೂದಿಸಿ, ಹೆಚ್ಚಿನ ನೀರು ಇದೆ ಎಂದು ಬಿಲ್ ಪಾವತಿಸಲಾಗಿದೆ.
* ಕೊಳವೆ ಬಾವಿ ಕೊರೆಯದೇ ಬಿಲ್ ಪಾವತಿ.
* ಹಲವು ಕಡೆಗಳಲ್ಲಿ ಕೊಳವೆ ಬಾವಿ ಕೊರೆದು ವರ್ಷಗಳೇ ಕಳೆದಿದೆ. ಆದರೆ, ಪಂಪ್ ಸೆಟ್ ಅಳವಡಿಸಿಲ್ಲ. ಪಂಪ್ ಸೆಟ್ ಅಳವಡಿಸಿದ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ನೀಡಿಲ್ಲ.
* ಪಂಪ್ ಸೆಟ್‌ಗಳಿಗೆ ‘ಸ್ಟಾರ್ ರೇಟಿಂಗ್’ ಇಲ್ಲ. ಅಳವಡಿಸಿದ ಪಂಪ್ ಸೆಟ್‌ಗಳಲ್ಲಿ ಕೆಲವು ಅತಿ ಕಡಿಮೆ ಸಮಯದಲ್ಲಿ ದುರಸ್ತಿಗೆ ಬಂದಿದ್ದರೆ, ಇನ್ನೂ ಕೆಲವು ಸಂಪೂರ್ಣ ಕೆಟ್ಟು ಹೋಗಿವೆ.
* ಬಿಲ್ ಪಾವತಿಗೂ ಮೊದಲು ನಿಗಮದ ಅಧಿಕಾರಿಗಳು ಕಾಮಗಾರಿ ಪರಿಶೀಲಿಸುವುದು ಕಡ್ಡಾಯ. ಆದರೆ, ಪರಿಶೀಲಿಸದೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗಿದೆ.
* ಕೊಳವೆ ಬಾವಿಗೆ ಪಂಪ್ ಸೆಟ್ ಸರಬರಾಜು ಮಾಡಿ ಅಳವಡಿಸಿರುವ ಗುತ್ತಿಗೆದಾರರು ವಿವಿಧ ಕಾರಣಗಳನ್ನು ಮುಂದಿಟ್ಟು ಫಲಾನುಭವಿಗಳಿಂದ ₹ 10 ಸಾವಿರದಿಂದ ₹ 25 ಸಾವಿರವರಗೆ ಹೆಚ್ಚುವರಿ ಹಣ ವಸೂಲು ಮಾಡಿದ್ದಾರೆ.
* ಕೋಲಾರ ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯುವ ಮೊದಲೇ ಗುತ್ತಿಗೆದಾರರು, ಫಲಾನುಭವಿಗಳಿಂದ ₹ 25 ಸಾವಿರ ಪಡೆದಿದ್ದಾರೆ.
* ಹಿಂದೆ ಕೊರೆದ ಕೊಳವೆ ಬಾವಿಗಳನ್ನೇ ‘ಗಂಗಾ ಕಲ್ಯಾಣ’ ಯೋಜನೆಯಡಿ ಕೊರೆದ ಕೊಳವೆ ಬಾವಿ ಎಂದು ಬಿಂಬಿಸಿ ಹಣ ಲಪಟಾವಣೆ.
ದೂರಿಗಷ್ಟೆ ಸೀಮಿತ!
‘ಗಂಗಾ ಕಲ್ಯಾಣ’ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಿಂದ ಬಂದಿರುವ ದೂರುಗಳನ್ನು ವಿಚಾರಣೆ ನಡೆಸಿ ವರದಿ ನೀಡಲು ನಿವೃತ್ತ ಐಎಎಸ್ ಅಧಿಕಾರಿ ಇ. ವೆಂಕಟಯ್ಯ ಅಧ್ಯಕ್ಷತೆಯಲ್ಲಿ ನಾಲ್ವರ ಸಮಿತಿಯನ್ನು 2019ರ ಮಾರ್ಚ್ 13ರಂದು ರಚಿಸಲಾಗಿತ್ತು. ಆದರೆ, ಈ ಸಮಿತಿ ಯಾವುದೇ ವರದಿ ಸಲ್ಲಿಸಿಲ್ಲ. ವಿಶೇಷ ಸದನ ಸಮಿತಿ ರಚಿಸಿದ ಬಳಿಕ ಆ ಸಮಿತಿಯನ್ನು ರದ್ದುಪಡಿಸಲಾಗಿದೆ. ದಲಿತ ಸಂಘಟನೆ ನೀಡಿದ ದೂರಿನ ಬಗ್ಗೆ ತನಿಖೆ ನಡೆಸಲು ಇಲಾಖೆಯ ಹೆಚ್ಚುವರಿ ನಿರ್ದೇಶಕರ (ಅಭಿವೃದ್ಧಿ) ನೇತೃತ್ವದಲ್ಲಿ ನಾಲ್ವರ ತನಿಖಾ ತಂಡವನ್ನು 2020 ಸೆ.14ರಂದು ರಚಿಸಲಾಗಿತ್ತು. ಈ ಸಮಿತಿ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ 2021ರ ಫೆ. 17ರಂದು ಆ ಸಮಿತಿಯನ್ನೂ ಹಿಂಪಡೆಯಲಾಗಿದೆ. ಕೋಲಾರ, ರಾಮನಗರ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಯೋಜನೆಯ ಕಾಮಗಾರಿಯಲ್ಲಿನ ಲೋಪಗಳಿಗೆ ಸಂಬಂಧಿಸಿದಂತೆ ಬಂದ ದೂರುಗಳ ಪರಿಶೀಲನೆಗೆ ಪ್ರತಿ ಜಿಲ್ಲೆಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿತ್ತು. ಒಂದೂವರೆ ವರ್ಷ ಕಳೆದರೂ ನೋಡಲ್ ಅಧಿಕಾರಿಗಳು ಯಾವುದೇ ವರದಿ ನೀಡಿಲ್ಲ. ಹೀಗಾಗಿ, ಈ ನೋಡಲ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ವಿಶೇಷ ಸದನ ಸಮಿತಿ ಶಿಫಾರಸು ಮಾಡಿದೆ.
‘ಇನ್ನು ಡಿಬಿಟಿ ವ್ಯವಸ್ಥೆ’
‘ವಿಶೇಷ ಸದನ ಸಮಿತಿಯ ವರದಿ ಇನ್ನೂ ನನ್ನ ಕೈ ಸೇರಿಲ್ಲ. ಆದರೆ, ಟೆಂಡರ್ ಪ್ರಕ್ರಿಯೆಯೂ ಸೇರಿದಂತೆ ಒಟ್ಟು ಯೋಜನೆಯ ಅನುಷ್ಠಾನದಲ್ಲಿ ದಾಖಲೆಗಳನ್ನು ಕೊಟ್ಟಿಲ್ಲ, ಗುತ್ತಿಗೆ ಅನರ್ಹರ ಪಾಲಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಮೂಲಕ ತನಿಖೆ ನಡೆಸಲಾಗಿದೆ. ಗುತ್ತಿಗೆದಾರರು ಸಮರ್ಪಕವಾದ ದಾಖಲೆಗಳನ್ನು ಸಲ್ಲಿಸಿಲ್ಲ ಸೇರಿದಂತೆ ಸಣ್ಣಪುಟ್ಟ ಲೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಇನ್ನು ಮುಂದೆ ಇಂಥ ಲೋಪಗಳಿಗೆ ಅವಕಾಶ ನೀಡಬಾರದೆಂದು 2022–23ನೇ ಸಾಲಿನಿಂದ ಖಾತೆಗೆ ನೇರವಾಗಿ ಹಣ ವರ್ಗಾವಣೆ (ಡಿಬಿಟಿ) ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
‘ಯೋಜನೆಯ ಅನುಷ್ಠಾನದಲ್ಲಿನ ಲೋಪಗಳ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಆದಾಗ, ವಿರೋಧ ಪಕ್ಷಗಳ ಸದಸ್ಯರ ಆಗ್ರಹಕ್ಕೆ ಒತ್ತು ನೀಡಿದ್ದ ಮುಖ್ಯಮಂತ್ರಿ, ಈ ಬಗ್ಗೆ ವಿಶೇಷ ಸಭೆ ಕರೆಯುವುದಾಗಿ ಮಾತು ಕೊಟ್ಟಿದ್ದಾರೆ. ಅವರು ಆ ಸಭೆಗೆ ಇನ್ನೂ ಸಮಯ ಕೊಟ್ಟಿಲ್ಲ. ಆದಷ್ಟು ಶೀಘ್ರ ಮುಖ್ಯಮಂತ್ರಿ ಸಭೆ ಕರೆಯಬಹುದು’ ಎಂದೂ ಹೇಳಿದರು.
ಶಾಸಕರ ಆಪ್ತರಿಗೇ ‘ಕಲ್ಯಾಣ’
ಹಲವು ಕಡೆ ಕೊರೆಸಿದ ಕೊಳವೆ ಬಾವಿಗಳಿಗೆ ಪಂಪ್‌ಸೆಟ್ ಅಳವಡಿಸದೇ ಹಾಗೆ ಬಿಟ್ಟಿದ್ದು, ಯಾರ ಉಪಯೋಗಕ್ಕೂ ಬಾರದಂತಾಗಿವೆ. ಸೂಕ್ತ ಸಮಯಕ್ಕೆ ಪಂಪ್‌ಸೆಟ್ ಪೂರೈಸದೇ ಹಲವು ಕೊಳವೆಬಾವಿಗಳು ಬತ್ತುವ ಹಂತಕ್ಕೆ ತಲುಪಿವೆ. ಸುಮಾರು ಒಂದೂವರೆ ವರ್ಷದಿಂದ ವಿದ್ಯುತ್ ಸಂಪರ್ಕ ಮತ್ತು ಪಂಪ್‌ಸೆಟ್ ಅಳವಡಿಕೆಗಾಗಿ ರೈತರು ಕಾಯುತ್ತಿದ್ದಾರೆ. ವಿತರಿಸಿದ ಪಂಪ್‌ಸೆಟ್ ಗುಣಮಟ್ಟದಿಂದ ಕೂಡಿಲ್ಲ ಎಂಬುದೂ ಫಲಾನುಭವಿಗಳ ಆರೋಪ. 2018ರಲ್ಲಿ ಕೊರೆದ ಕೊಳವೆ ಬಾವಿಗೆ ಈಗ ಪಂಪ್‌ಸೆಟ್ ಕೊಡಲಾಗುತ್ತಿದೆ. ಹಲವು ಜಮೀನುಗಳಲ್ಲಿ ಕೊಳವೆ ಬಾವಿ ವಿಫಲವಾಗಿದ್ದರೂ ಬಿಲ್ ಪಾವತಿಸಲಾಗಿದೆ. ಪರಿಶಿಷ್ಟರ ಜಮೀನಿಗೆ ಹಾಕಬೇಕಾದ ಕೊಳವೆ ಬಾವಿಯನ್ನು ಸಾಮಾನ್ಯ ವರ್ಗದವರ ಜಮೀನಿನಲ್ಲೂ ಕೊರೆಸಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.
‘ಆರು ತಿಂಗಳು ಕಳೆದರೂ ಪಂಪ್‌ಸೆಟ್ ನೀಡಿಲ್ಲ’
ಆರು ತಿಂಗಳ ಹಿಂದೆ ಕೊಳವೆಬಾವಿ ಕೊರೆಸಿದ್ದು, ಇದುವರೆಗೆ ಪಂಪ್‌ಸೆಟ್ ವಿತರಿಸಿಲ್ಲ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಗೆ ಅಲೆದಾಡಿ ಸಾಕಾಗಿದೆ. ಕೃಷಿ ಕಾರ್ಯಗಳಿಗೆ ನೆರವಾಗಬಹುದು ಎಂಬ ಉದ್ದೇಶದಿಂದ ಸರ್ಕಾರದ ಸೌಲಭ್ಯ ಪಡೆಯಲಾಗುತ್ತಿದೆ. ಆದರೆ, ಅದು ಸರಿಯಾದ ಸಮಯಕ್ಕೆ ದೊರೆತರೆ ಉತ್ತಮ. ಆದಷ್ಟು ಬೇಗ ಕೊಡಬೇಕು.</p>
– ತಿಮ್ಮಯ್ಯ,ಅಮ್ಮನಘಟ್ಟ, ಗುಬ್ಬಿ ತಾಲ್ಲೂಕು
‘ಗುಣಮಟ್ಟದ ಪಂಪ್‌ಸೆಟ್ ನೀಡಿ’
ಆರೇಳು ವರ್ಷಗಳ ಹಿಂದೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಲಾಗಿತ್ತು. ಈ ಹಿಂದೆಯೇ ಮೋಟರ್ ಪಂಪ್ ನೀಡಲಾಗಿದೆ. ಕಡಿಮೆ ಸಾಮರ್ಥ್ಯ ಇರುವ ಸಾಧನ ಸಲಕರಣೆಗಳನ್ನು ನೀಡಿದರೂ, ಗುಣಮಟ್ಟದ, ಬಾಳಿಕೆ ಬರುವಂಥವುಗಳನ್ನು ವಿತರಿಸಬೇಕು. ಕೆಲವೇ ವರ್ಷಗಳಲ್ಲಿ ಮೋಟರ್ ರಿಪೇರಿಗೆ ಬರುವುದರಿಂದ ರೈತರು ಗುಜರಿ ಅಂಗಡಿಗಳಿಗೆ ಅಲೆಯುವ ಕೆಲಸ ಮಾಡುತ್ತಿದ್ದಾರೆ.
–ಬೋರಯ್ಯ, ಚೌಕೇನಹಳ್ಳಿ, ಗುಬ್ಬಿ ತಾಲ್ಲೂಕು
‘ಮುಖಂಡರ ಜಮೀನಿಗೆ ಯೋಜನೆ’
ಶಾಸಕರೇ ಆಯ್ಕೆ ಸಮಿತಿ ಅಧ್ಯಕ್ಷರಾಗಿರುವುದರಿಂದ ಯೋಜನೆ ಹಳ್ಳ ಹಿಡಿದಿದೆ. ಪಕ್ಷದ ಪ್ರಮುಖ ಮುಖಂಡರ ಜಮೀನಿಗೆ ಮಾತ್ರ ಈ ಯೋಜನೆ ಎನ್ನುವಂತಾಗಿದೆ.
–ಗುರಣ್ಣ ಬಡಿಗೇರ, ಐನಾಪುರ, ಕಲಬುರಗಿ ಜಿಲ್ಲೆ
‘ಸಹಿ ಹಾಕಿಸಿಕೊಂಡಿದ್ದಾರೆ’
ನನ್ನ ಜಮೀನಿನಲ್ಲಿ ಕೊಳವೆಬಾವಿ ಕೊರೆದು ವರ್ಷ ಕಳೆದಿದೆ. ವಿದ್ಯುತ್ ಸಂಪರ್ಕಕ್ಕಾಗಿ ಕಂಬಗಳನ್ನು ಹಾಕಿ ತಂತಿ ಬಿಗಿದಿದ್ದಾರೆ. ಆದರೆ, ಕೊಳವೆಬಾವಿಗೆ ಮೋಟರ್ ಅಳವಡಿಸಿಲ್ಲ. ವಿಚಿತ್ರ ಎಂದರೆ 300 ಅಡಿವರೆಗೆ ಕೊಳವೆ ಬಾವಿ ಕೊರೆದಿದ್ದು, ಹನಿನೀರೂ ಬಂದಿಲ್ಲ. ಕೊಳವೆ ಬಾವಿ ಕೊರೆಸಿದವರು ಸಹಿ ಮಾಡಿಸಿಕೊಂಡಿದ್ದಾರೆ. ಆದರೆ, ನೀರಾವರಿಯ ಕನಸು ಈಡೇರಿಲ್ಲ
–ನಾಗೇಂದ್ರಪ್ಪ ಕಟ್ಟೊಳ್ಳಿ, ನೀಮಾಹೊಸಳ್ಳಿ
‘ವಿದ್ಯುತ್ ಸಂಪರ್ಕ ಕಲ್ಪಿಸಬೇಕು’
ನಮ್ಮ ಹೊಲದಲ್ಲಿ ಕೊಳವೆ ಬಾವಿ ಕೊರೆದು ಎರಡು ವರ್ಷಗಳಾದವು. ಆದರೆ ದೀರ್ಘ ಕಾಲದಿಂದ ವಿದ್ಯುತ್ ಸಂಪರ್ಕ ಕಲ್ಪಿಸಿರಲಿಲ್ಲ. ನಾನು ಸ್ವಂತ ಹಣದಿಂದ, <br/>ತೆಲಂಗಾಣದ ತಾಂಡೂರಿನಲ್ಲಿರುವ ಪರಿಚಯಸ್ಥರ ಜಮೀನಿನಲ್ಲಿದ್ದ ವಿದ್ಯುತ್ ಕಂಬದಿಂದ 600 ಅಡಿ ದೂರದ ನನ್ನ ಜಮೀನಿಗೆ ವೈರ್ ಎಳೆದುಕೊಂಡೆ. ಆ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದೇನೆ. ಕೊಳವೆಬಾವಿಯಿಂದ ಅನುಕೂಲವಾಗಿದೆ. ಆದರೆ ವಿದ್ಯುತ್ ಸಂಪರ್ಕವನ್ನು ಸರ್ಕಾರವೇ ಕಲ್ಪಿಸಬೇಕಿತ್ತು</p>
–ದೇವಲಿಬಾಯಿ ದೇವಜಿ, ಕಲಭಾವಿ ತಾಂಡಾ, ಕಲಬುರಗಿ ಜಿಲ್ಲೆ
‘ಮಂಜೂರಾಗಿದೆ, ಕೊರೆದಿಲ್ಲ’
2020–21ನೇ ಸಾಲಿನಲ್ಲಿ ಕೊಳವೆ ಬಾವಿಗೆ ಆಯ್ಕೆಯಾಗಿದ್ದು, ಇಲ್ಲಿಯವರೆಗೆ ಕೊರೆಸಿಲ್ಲ. ಏನಾಗಿದೆ ಎಂಬುವುದು ಅಧಿಕಾರಿಗಳು ನಮ್ಮ ಗಮನಕ್ಕೆ ತಂದಿಲ್ಲ.
–ಶಾಂತಬಾಯಿ ಹಂಗರಗಾ, ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.