ADVERTISEMENT

ಒಳನೋಟ | ಪೈರಸಿ ಅಪಾರ, ದೂರು ವಿರಳ

ಅಭಿಲಾಷ್ ಪಿ.ಎಸ್‌.
Published 16 ನವೆಂಬರ್ 2024, 22:49 IST
Last Updated 16 ನವೆಂಬರ್ 2024, 22:49 IST
   

‘ನಮ್ಮ ಸಿನಿಮಾ ರಿಲೀಸ್‌ ಆದ ದಿನವೇ ಸುಮಾರು 4 ಸಾವಿರ ಪೈರಸಿ ಲಿಂಕ್ಸ್‌ ಟೆಲಿಗ್ರಾಂ, ತಮಿಳ್ ರಾಕರ್ಸ್‌ನಲ್ಲಿ ಬಂದಿದ್ದವು. ಇದನ್ನು ತೆಗೆಯಲು ನಾವು ಮೊದಲೇ ಆ್ಯಂಟಿ ಪೈರಸಿ ಕಂಪನಿಯೊಂದನ್ನು ನೇಮಿಸಿಕೊಂಡಿದ್ದೆವು. ಇವರಿಗೆ 15 ದಿನಕ್ಕೆ ₹1.5 ಲಕ್ಷ ನೀಡಬೇಕು. ಇಲ್ಲಿಯವರೆಗೆ ಅಂದಾಜು 35 ಸಾವಿರ ಲಿಂಕ್‌ಗಳನ್ನು ತೆಗೆದಿದ್ದು, ಇದರಲ್ಲಿ ಹೆಚ್ಚಿನ ಲಿಂಕ್‌ಗಳು ಟೆಲಿಗ್ರಾಂ ಆ್ಯಪ್‌ನಲ್ಲಿದ್ದವು. ಪೈರಸಿಯಿಂದ ನಾವು ಅಂದಾಜು ₹5 ಕೋಟಿ ಆದಾಯವನ್ನು ಕಳೆದುಕೊಂಡಿದ್ದೇವೆ’.  

ಇದು ಕಳೆದ ಆಗಸ್ಟ್‌ನಲ್ಲಿ ಬಿಡುಗಡೆಗೊಂಡ ‘ದುನಿಯಾ’ ವಿಜಯ್‌ ನಟನೆಯ ‘ಭೀಮ’ ಸಿನಿಮಾದ ನಿರ್ಮಾಪಕ ಕೃಷ್ಣ ಸಾರ್ಥಕ್‌ ನೀಡಿದ ಪೈರಸಿಯ ಪರಿಣಾಮದ ಅಂಕಿ ಅಂಶ.

ಕಳೆದ ಅಕ್ಟೋಬರ್‌ 31ರಂದು ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾ ಬಿಡುಗಡೆಯಾಗಿತ್ತು. ಇದಾಗಿ ವಾರ ಕಳೆಯುವಷ್ಟರಲ್ಲಿ ಅಂದರೆ ನ.7ರ ವೇಳೆಗೆ ಈ ಸಿನಿಮಾದ 5,878 ಪೈರಸಿ ಲಿಂಕ್‌ಗಳು ಮೊಬೈಲ್‌ಗಳಿಗೆ ಲಗ್ಗೆ ಇಟ್ಟಿದ್ದವು. ಈ ಪೈಕಿ ಟೆಲಿಗ್ರಾಂ ಆ್ಯಪ್‌ ಮೂಲಕವೇ 4,380 ಲಿಂಕ್‌ಗಳು ಹರಿದಾಡಿದ್ದವು. ಇವುಗಳಲ್ಲಿ ಶೇ 90ರಷ್ಟು ಲಿಂಕ್‌ಗಳಲ್ಲಿ ಇಡೀ ಸಿನಿಮಾವಿತ್ತು. ಹೊಂಬಾಳೆ ಫಿಲ್ಮ್ಸ್‌ ‘ಬ್ಲಾಕ್‌ ಎಕ್ಸ್‌’ ಕಂಪನಿಯ ಮೂಲಕ 5,659 ಲಿಂಕ್‌ಗಳನ್ನು ತೆಗೆಸಿದೆ.

ADVERTISEMENT

ಇವೆರಡು ಅಂಶಗಳು ರಾಜ್ಯದಲ್ಲಿ ಪೈರಸಿ ಸಕ್ರಿಯ ಆಗಿರುವುದಕ್ಕೆ ಇರುವ ಸಾಕ್ಷಿಗಳು. ಚಿತ್ರರಂಗಕ್ಕೆ ಪೈರಸಿಯ ಏಟು ಹೊಸದೇನಲ್ಲ. ಈ ಪೆಡಂಭೂತದ ಕೈಗೆ ಸಿಲುಕಿ ನಲುಗದ ಚಿತ್ರೋದ್ಯಮವಿಲ್ಲ. ಹಿಂದೆ ಚಿತ್ರಮಂದಿ ರಗಳಲ್ಲಿ ಕ್ಯಾಮೆರಾವಿಟ್ಟು ಚಿತ್ರೀಕರಿಸಿಕೊಂಡು, ಅವುಗಳನ್ನು ಸಿ.ಡಿ.ಗಳಲ್ಲಿ ಹಾಕಿ ಮಾರಾಟ ಮಾಡಲಾಗುತ್ತಿತ್ತು. ಇದು ಇಂಟರ್‌ನೆಟ್‌ ಯುಗ. ಈಗಿರುವ ಅನಿಯಮಿತ 5ಜಿ ಕಾಲದಲ್ಲಿ ಇಂತಹ ಪೈರಸಿಯಾದ ಸಿನಿಮಾಗಳು ನೇರವಾಗಿ ಜನರ ಅಂಗೈಗೇ ಮೊಬೈಲ್‌ ಮೂಲಕ ಕ್ಷಣಮಾತ್ರದಲ್ಲಿ ತಲುಪುತ್ತಿವೆ. ಸಿನಿಮಾಗಳು ಚಿತ್ರಮಂದಿರಗಳಲ್ಲಿ ಇರುವ ಸಂದರ್ಭದಲ್ಲೇ ಮೊಬೈಲ್‌ ಫೋನ್‌ಗಳಲ್ಲಿ ಅವುಗಳು ಹರಿದಾಡುತ್ತಿರುತ್ತವೆ. ಉದಾಹರಣೆಗೆ ಕಳೆದ ಜನವರಿಯಲ್ಲಿ ರಾಯಚೂರಿನ ದೇವದುರ್ಗ ತಾಲ್ಲೂಕಿನ ಯುವಕನೊಬ್ಬ ₹40 ಪಡೆದು ‘ಕಾಟೇರ’ ಸಿನಿಮಾದ ಪೈರಸಿ ಲಿಂಕ್‌ ಅನ್ನು ಟೆಲಿಗ್ರಾಂ ಆ್ಯಪ್‌ ಮೂಲಕ ಹಂಚುತ್ತಿದ್ದ. ಆತನನ್ನು ಪೊಲೀಸರು ಬಂಧಿಸಿದ್ದರು. ಮೊನ್ನೆಯಷ್ಟೇ(ನ.15) ಬಿಡುಗಡೆಯಾದ ‘ಭೈರತಿ ರಣಗಲ್‌’ ಸಿನಿಮಾದ ಪೈರಸಿ ಲಿಂಕ್‌ಗಳು ಟೆಲಿಗ್ರಾಂಗೆ ಲಗ್ಗೆ ಇಟ್ಟಾಗಿದೆ.

ಆದರೆ ಈ ಲಿಂಕ್‌ಗಳು ಹುಟ್ಟಿಕೊಳ್ಳುವ ಮೂಲ ಹುಡುಕುವುದೇ ಸದ್ಯ ಪೊಲೀಸರಿಗೂ, ಚಿತ್ರರಂಗಕ್ಕೂ ಇರುವ ಸವಾಲಾಗಿದೆ.

ಟೆಲಿಗ್ರಾಂ ಆ್ಯಪ್‌ ನಿಷೇಧಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಕೇಂದ್ರ ಸರ್ಕಾರ ಚೀನಾ ಆ್ಯಪ್‌ಗಳನ್ನು ನಿಷೇಧಿಸಿದಂತೆ ಇಂತಹ ಆ್ಯಪ್‌ ನಿಯಂತ್ರಣಕ್ಕೆ ಸೂಕ್ತ ಮಾರ್ಗಸೂಚಿ ನೀಡಬೇಕು.
ಉಮೇಶ್‌ ಬಣಕಾರ್‌, ನಿರ್ಮಾಪಕರ ಸಂಘದ ಅಧ್ಯಕ್ಷ

ಇತ್ತೀಚೆಗೆ ಇವೈ ಮತ್ತು ಇಂಟರ್‌ನೆಟ್‌ ಆ್ಯಂಡ್‌ ಮೊಬೈಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ‘ದಿ ರಾಬ್‌ ರಿಪೋರ್ಟ್‌’ ಎಂಬ ವರದಿ ಬಿಡುಗಡೆ ಮಾಡಿತು. ಇದರ ಪ್ರಕಾರ 2023ರಲ್ಲಿ ಪೈರಸಿಯಿಂದಾಗಿ ಭಾರತೀಯ ಮನರಂಜನಾ ಉದ್ಯಮವು ₹22,400 ಕೋಟಿ ನಷ್ಟ ಅನುಭವಿಸಿದೆ. ಶೇ 51ರಷ್ಟು ಮಾಧ್ಯಮ ಗ್ರಾಹಕರು ಪೈರಸಿ ಮೂಲಗಳಿಂದಲೇ ಕಂಟೆಂಟ್‌ ಪಡೆಯುತ್ತಿದ್ದಾರೆ. ಚಿತ್ರಮಂದಿರಗಳ ಪೈರಸಿ ಕಂಟೆಂಟ್‌ನಿಂದ ₹13,700 ಕೋಟಿ ಹಾಗೂ ಒಟಿಟಿ ವೇದಿಕೆಗಳ ಕಂಟೆಂಟ್‌ನಿಂದ ₹8,700 ಕೋಟಿ ನಷ್ಟವಾಗಿದೆ. ಇದರಿಂದ ₹4,300 ಕೋಟಿ ಜಿಎಸ್‌ಟಿ ವರಮಾನ ನಷ್ಟವಾಗಿದೆ ಎಂಬ ಅಂಶ ವರದಿಯಲ್ಲಿದೆ. 

ಕನ್ನಡ ಚಿತ್ರರಂಗಕ್ಕೆಷ್ಟು ನಷ್ಟ? 

‘ಪ್ರತಿ ವರ್ಷ ಅಂದಾಜು 200–250 ಕನ್ನಡ ಸಿನಿಮಾಗಳು ತೆರೆಕಾಣುತ್ತಿವೆ. ಪೈರಸಿಯಿಂದಾಗಿ ಕನ್ನಡ ಚಿತ್ರರಂಗ ವರ್ಷಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ₹300–₹400 ಕೋಟಿಯವರೆಗೆ ನಷ್ಟ ಅನುಭವಿಸುತ್ತಿದೆ ಎನ್ನುತ್ತಾರೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌. ವರ್ಷಕ್ಕೆ ಸರಿಸುಮಾರು 400 ಸಿನಿಮಾಗಳು ಸೆನ್ಸಾರ್‌ ಆಗುತ್ತಿದ್ದು, ಇವುಗಳಲ್ಲಿ ಸುಮಾರು ಮುನ್ನೂರು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಹೇಗಿದ್ದರೂ ಪೈರಸಿ ಮೂಲಕ ಚಿತ್ರ ಬಂದೇ ಬರುತ್ತದೆ ಎಂದು ನಿರೀಕ್ಷೆ ಇರುವವರು ಚಿತ್ರಮಂದಿರದತ್ತ ಮುಖ ಹಾಕುವುದಿಲ್ಲ’ ಎನ್ನುತ್ತಾರೆ ಬಣಕಾರ್‌. 

ದೂರಿನಿಂದ ಬಲು ದೂರ! 

ಹಿಂದೆ ಪೈರಸಿಯ ಸಾಕ್ಷ್ಯ ರೂಪದಲ್ಲಿ ಸಿ.ಡಿಗಳು ದೊರೆಯುತ್ತಿದ್ದವು. ಇದೀಗ ಪೈರಸಿ ಜಾಲವು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಆನ್‌ಲೈನ್‌ನಲ್ಲೇ ಕಾರ್ಯನಿರ್ವಹಿಸುತ್ತಿರುವ ಕಾರಣ, ಮೂಲ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ತಮಿಳ್‌ ರಾಕರ್ಸ್‌, ಮೂವಿ ರೂಲ್ಜ್‌, 1337 ಎಕ್ಸ್‌, ಟೊರೆಂಟ್‌ ಮೂಲಕ ಟೆಲಿಗ್ರಾಂ, ಇನ್‌ಸ್ಟಾಗ್ರಾಂ ಜೊತೆಗೆ ವಾಟ್ಸ್‌ಆ್ಯಪ್‌ನಲ್ಲೂ ಇದೀಗ ಪೈರಸಿಯಾದ ಸಿನಿಮಾಗಳ ಲಿಂಕ್‌ಗಳು, ಸಿನಿಮಾದ ದೃಶ್ಯಗಳು ಹರಿದಾಡುತ್ತಿವೆ. 

3ಜಿ–4ಜಿ ಇಂಟರ್‌ನೆಟ್‌ ಯುಗಕ್ಕಿಂತ ಮುನ್ನ ನಿರ್ಮಾಪಕರು ತಮ್ಮ ಸಿನಿಮಾ ಪೈರಸಿಯಾದಾಗ, ಸೈಬರ್‌ ಪೊಲೀಸರ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ಆದರೆ ಇದೀಗ ತಮ್ಮ ಸಿನಿಮಾಗಳು ಪೈರಸಿಯಾದರೆ ನಿರ್ಮಾಪಕರು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಸೈಬರ್‌ ಪೊಲೀಸರಿಗೆ ದೂರು ನೀಡಿ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವತ್ತಲೂ ಅವರ ಚಿತ್ತವಿಲ್ಲ. ಕಾರಣವಿಷ್ಟೇ ದೂರು ನೀಡಿ ಸಮಯ ವ್ಯರ್ಥ ಮಾಡುವುದಕ್ಕಿಂತ ಪೈರಸಿ ತಡೆಯುವ ಕಂಪನಿಗಳಿಗೆ ಹಣ ನೀಡಿ ವೆಬ್‌ ಲಿಂಕ್ಸ್‌ ತೆಗೆಯುವ ಕೆಲಸಕ್ಕೇ ನಿರ್ಮಾಪಕರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಮೊದಲ ಮೂರು ದಿನ ಅಥವಾ ಮೊದಲ ವಾರ ಬಾಕ್ಸ್‌ ಆಫೀಸ್‌ ಗಳಿಕೆ ಚಿತ್ರತಂಡಗಳಿಗೆ ಮುಖ್ಯವಾಗಿರುವ ಕಾರಣ ಆ ಅವಧಿಯಲ್ಲಿ ಪೈರಸಿ ಲಿಂಕ್ಸ್‌ ತೆಗೆಯುವುದಕ್ಕೇ ಅವರು ಆದ್ಯತೆ ನೀಡುತ್ತಿದ್ದಾರೆ.   

ಕೆಲ ಕನ್ನಡ ಸಿನಿಮಾ ನಿರ್ಮಾಪಕರಷ್ಟೇ ಸೈಬರ್‌ ಪೊಲೀಸರಿಗೆ ದೂರು ನೀಡಿದ ಉದಾಹರಣೆಗಳು ಸಿಗುತ್ತವೆ. ‘ನಿನ್ನ ಸನಿಹಕೆ’, ‘ಕೃಷ್ಣ ಟಾಕೀಸ್‌’, ‘ಪೈಲ್ವಾನ್‌’, ‘ಕೋಟಿಗೊಬ್ಬ–3’, ‘ಏಕ್‌ ಲವ್‌ ಯಾ’, ‘ಪೊಗರು’ ಸೇರಿದಂತೆ ಕೆಲ ಚಿತ್ರದ ನಿರ್ಮಾಪಕರಷ್ಟೇ ದೂರು ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡ ಕನ್ನಡದ ಹಿಟ್‌ ಸಿನಿಮಾಗಳ ನಿರ್ಮಾಪಕರನ್ನು ಪ್ರಶ್ನಿಸಿದರೆ ‘ಪೈರಸಿ ವಿರುದ್ಧ ನಾವು ದೂರು ನೀಡಿಲ್ಲ’ ಎನ್ನುವ ಉತ್ತರ ದೊರಕುತ್ತಿದೆ. ತಮಿಳುನಾಡು, ಕೇರಳದಲ್ಲಿ ನಿರ್ಮಾಪಕರು ಪೈರಸಿಯ ದೂರುಗಳನ್ನು ದಾಖಲಿಸಿರುವುದು ವರದಿಯಾಗಿದೆ. 

ಪೈರಸಿ ಸಂಬಂಧ ಚಿತ್ರರಂಗದಿಂದ ಬರುತ್ತಿರುವ ದೂರುಗಳ ಸಂಖ್ಯೆಯೂ ಕಡಿಮೆ ಆಗಿದೆ. ದೂರು ಬಂದರೆ ಹಕ್ಕು ಸ್ವಾಮ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತೇವೆ.
ಬಿ.ದಯಾನಂದ, ಬೆಂಗಳೂರು ನಗರ ಪೊಲೀಸ್ ಕಮಿಷನರ್

‘ಪೈರಸಿ ಕುರಿತಾದ ದೂರು ನೀಡಲು ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘದಲ್ಲಿ ಯಾವುದೇ ಪ್ರತ್ಯೇಕ ಘಟಕವಿಲ್ಲ. ಈ ಹಿಂದೆ ದೂರುಗಳನ್ನು ತುಂಬಾ ನೀಡಲಾಗಿದೆ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪೈರಸಿ ಜಾಲ ಇರುವ ಕಾರಣ ಕಾನೂನು ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಹೇಳುತ್ತಾರೆ. ಇಡೀ ದೇಶದಲ್ಲಿ ಪೈರಸಿ ಮಾಡಿದವರಿಗೆ ಕಠಿಣ ಶಿಕ್ಷೆಯಾದ ಹೆಚ್ಚಿನ ಉದಾಹರಣೆಗಳೇ ಸಿಗುವುದಿಲ್ಲ. ಏನೂ ಆಗುವುದಿಲ್ಲ ಎಂದು ತಿಳಿದ ನಿರ್ಮಾಪಕರು ದೂರು ನೀಡುವುದನ್ನೇ ನಿಲ್ಲಿಸಿದ್ದಾರೆ’ ಎಂಬುವುದು ಉಮೇಶ್‌ ಬಣಕಾರ್‌ ಅಭಿಮತ.  

ಖರ್ಚು ಮಾಡುತ್ತಿರುವುದೆಷ್ಟು?

ರಾಜ್ಯದಲ್ಲಿ ಈ ವರ್ಷ ಇಲ್ಲಿಯವರೆಗೆ 177 ಸಿನಿಮಾಗಳು ಬಿಡುಗಡೆಯಾಗಿವೆ. ಇವುಗಳಲ್ಲಿ ಪ್ರಮುಖ ಸಿನಿಮಾಗಳ ನಿರ್ಮಾಪಕರು ₹5–₹10 ಲಕ್ಷವನ್ನು ಪೈರಸಿ ತಡೆಯುವ ನಿಟ್ಟಿನಲ್ಲಿ ಆ್ಯಂಟಿ ಪೈರಸಿ ಏಜೆನ್ಸಿಗಳಿಗಾಗಿ ಖರ್ಚು ಮಾಡುತ್ತಿದ್ದಾರೆ. ‘ನಾವು ಪೈರಸಿ ತಡೆಯಲು ಬ್ಲಾಕ್‌ಎಕ್ಸ್‌ ಸೇರಿದಂತೆ ಎರಡು ಮೂರು ಆ್ಯಂಟಿ ಪೈರಸಿ ಏಜೆನ್ಸಿಗಳನ್ನು ನಿಯೋಜಿಸಿಕೊಂಡಿದ್ದೇವೆ. ಪೈರಸಿ ತಡೆಯಲು ಪ್ರತಿ ಸಿನಿಮಾಗೂ ₹10–₹15 ಲಕ್ಷ ಖರ್ಚು ಮಾಡುತ್ತೇವೆ. ಪೈರಸಿಯಿಂದ ಆದಾಯದ ಮೇಲೆ ಪರಿಣಾಮ ಬೀರಿದೆ. ಶೇ 5–10 ಆದಾಯ ನಷ್ಟವಾಗಿದೆ’ ಎನ್ನುತ್ತಾರೆ ‘ಕೆಜಿಎಫ್‌’, ‘ಸಲಾರ್‌’, ಕಾಂತಾರ’, ‘ಬಘೀರ’ ಮುಂತಾದ ಹಿಟ್‌ ಸಿನಿಮಾಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್‌ನ ಸಹ ಸಂಸ್ಥಾಪಕ ಚಲುವೇಗೌಡ.   

ನೆರೆರಾಜ್ಯಗಳಲ್ಲಿ ಪೈರಸಿ ಹೆಚ್ಚು

ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳ ಸಿನಿಮಾಗಳು ಹೆಚ್ಚು ಪೈರಸಿಗೆ ಒಳಗಾಗುತ್ತಿವೆ. ಏಕೆಂದರೆ ಇವುಗಳನ್ನು ಬೇರೆ ರಾಜ್ಯಗಳಲ್ಲಿ ನೋಡುವ ಜನರ ಸಂಖ್ಯೆ ಹೆಚ್ಚು ಇದೆ. ಈ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ಹೆಚ್ಚು ಗಳಿಕೆ ಮಾಡಿದ್ದ ಪ್ರಭಾಸ್‌ ನಟನೆಯ ‘ಕಲ್ಕಿ 2898 ಎಡಿ’, ಬಾಲಿವುಡ್‌ನ ‘ಸ್ತ್ರೀ–2’ ಸಿನಿಮಾಗಳು ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಲೀಕ್‌ ಆಗಿದ್ದವು. ವಾರದ ಹಿಂದೆ ಬಿಡುಗಡೆಗೊಂಡ ಅಜಯ್‌ ದೇವಗನ್‌ ನಟನೆಯ ‘ಸಿಂಗಂ ಅಗೈನ್‌’, ‘ಭೂಲ್‌ ಬುಲೈಯ್ಯ 3’ ಚಿತ್ರ ಬಿಡುಗಡೆಗೊಂಡ ದಿನವೇ ಆ ಸಿನಿಮಾಗಳ ಪೈರಸಿ ಲಿಂಕ್‌ಗಳು ಹಲವು ವೆಬ್‌ಸೈಟ್‌ಗಳಲ್ಲಿ ಹರಿದಾಡಿದ್ದವು. ರಜನಿಕಾಂತ್‌ ನಟನೆಯ ‘ವೇಟ್ಟಯನ್‌’, ಮಲಯಾಳದ ಟೊವಿನೊ ಥಾಮಸ್‌ ನಟನೆಯ ‘ಅಜಯಂಡೆ ರಂಡಾಂ ಮೋಷಣಮ್‌–ಎಆರ್‌ಎಂ’ ಸಿನಿಮಾ ಪೈರಸಿ ಮಾಡಿದ ಸಂಬಂಧ ಕೊಚ್ಚಿ ನಗರ ಸೈಬರ್‌ ಪೊಲೀಸರು ಬೆಂಗಳೂರಿನಲ್ಲಿ ಇಬ್ಬರನ್ನು ಬಂಧಿಸಿ ಕರೆದೊಯ್ದಿದ್ದರು. ಕೊಯಮತ್ತೂರಿನ ಚಿತ್ರಮಂದಿರವೊಂದರಲ್ಲಿ ಈ ಸಿನಿಮಾಗಳನ್ನು ಆರೋಪಿಗಳು ಚಿತ್ರೀಕರಿಸಿದ್ದರು. 

ಪೈರಸಿ ತಡೆಗೆ ಕಾನೂನು ಏನಿದೆ?

‘ದಿ ಸಿನಿಮಾಟೋಗ್ರಾಫ್‌(ತಿದ್ದುಪಡಿ)ಮಸೂದೆ –2023’ರ ಅಡಿ ಸಿನಿಮಾದ ಪೈರಸಿ ಮಾಡುವ ವ್ಯಕ್ತಿಗೆ ಗರಿಷ್ಠ 3 ವರ್ಷ ಜೈಲು ಶಿಕ್ಷೆ ಮತ್ತು ನಿರ್ಮಾಣ ವೆಚ್ಚದ ಶೇ 5ರಷ್ಟು ದಂಡ ವಿಧಿಸಬಹುದು. ಕೇಂದ್ರ ಸರ್ಕಾರವು ಪೈರಸಿಯನ್ನು ತಡೆಯಲು ವಾರ್ತಾ ಮತ್ತು ಪ್ರಸಾರ ಇಲಾಖೆ ಹಾಗೂ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ)ಯಲ್ಲಿ 12 ನೋಡಲ್‌ ಅಧಿಕಾರಿಗಳನ್ನು ನೇಮಿಸಿದೆ. ಇವರ ಬಳಿ ಪೈರಸಿಗೆ ಸಂಬಂಧಿಸಿದ ದೂರು ನೀಡಿದರೆ, 48 ಗಂಟೆಗಳೊಳಗಾಗಿ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಸರ್ಕಾರ ನೀಡಿದೆ. ಈ ಹಾದಿಗಿಂತ ಖಾಸಗಿ ಕಂಪನಿಗಳ ಮೂಲಕವೇ ಪೈರಸಿ ಲಿಂಕ್ಸ್‌ ತೆಗೆಯುವ ಹಾದಿ ಚಿತ್ರತಂಡಗಳಿಗೆ ಸುಲಭವಾಗಿ ತೋರುತ್ತಿದೆ. ‘ಮೊದಲ ಮೂರು ವಾರ ನಮ್ಮ ಸಿನಿಮಾಗಳಿಗೆ ಒಂದು ಮುಖ್ಯ ಅವಧಿ. ಈ ಸಮಯದಲ್ಲಿ ದೂರು ನೀಡುತ್ತಾ ಕುಳಿತರೆ ಸಮಯ ವ್ಯರ್ಥ. ಹೀಗಾಗಿ ಏಜೆನ್ಸಿಗಳ ಮೊರೆ ಹೋಗುತ್ತೇವೆ’ ಎನ್ನುತ್ತಾರೆ ನಿರ್ಮಾಪಕ ಚಲುವೇಗೌಡ.   

ಪೈರಸಿ ಮಾಡುವಲ್ಲಿ ಹೆಸರುವಾಸಿಯಾಗಿರುವ ತಮಿಳ್‌ ರಾಕರ್ಸ್‌ ಮಲ್ಟಿಪಲ್‌ ಡೊಮೈನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಪತ್ತೆ ಅಸಾಧ್ಯವಾಗಿದೆ. ಇವುಗಳ ಮೂಲಕ ಹರಿದಾಡುವ ಲಿಂಕ್‌ಗಳು ಟೆಲಿಗ್ರಾಂ ಆ್ಯಪ್‌ನ ಹಲವು ಚಾನೆಲ್‌ಗಳಲ್ಲಿ ಸಿಗುತ್ತವೆ. ‘ನ್ಯೂ ಕನ್ನಡ ಮೂವೀಸ್‌’, ‘2024 ಫಿಲ್ಮ್ಸ್‌’ ಹೀಗೆ ದಿನಕ್ಕೊಂದು ಚಾನಲ್‌ಗಳು ಟೆಲಿಗ್ರಾಂನಲ್ಲಿ ಹುಟ್ಟಿಕೊಳ್ಳುತ್ತಿವೆ.       

‘ಟೆಲಿಗ್ರಾಂ ಆ್ಯಪ್‌ ನಿಯಂತ್ರಿಸಲು ಸರ್ಕಾರ ಕಠಿಣವಾದ ಕ್ರಮ ಕೈಗೊಳ್ಳುವ ಅಗತ್ಯವಿದೆ. ಸಿನಿಮಾ ರಿಲೀಸ್‌ ಆದ ಒಂದೆರಡು ದಿನಗಳಲ್ಲಿ ಸಿನಿಮಾಗಳು ಮೊಬೈಲ್‌ನಲ್ಲಿ ಹರಿದಾಡುತ್ತಿರುತ್ತವೆ. ಪೈರಸಿ ವಿರುದ್ಧ ಗೂಂಡಾ ಕಾಯ್ದೆ ಇದೆ. ಇದು ಸೂಕ್ತವಾಗಿ ಜಾರಿಯಾಗಬೇಕು. ಕೆಎಫ್‌ಸಿಸಿಯಲ್ಲಿ ಪೈರಸಿಯ ದೂರು ನೀಡಲು ಪ್ರತ್ಯೇಕ ಘಟಕವಿಲ್ಲ. ಇದನ್ನು ಮಾಡುವ ಯೋಚನೆ ಇದೆ. ನಮಗೆ ದೂರು ಬಂದರೆ ಅದನ್ನು ಪೊಲೀಸರಿಗೆ ತಿಳಿಸುತ್ತೇವೆ. ಹಿಟ್‌ ಆಗುವ ಮುನ್ಸೂಚನೆ ಇರುವ ಸಿನಿಮಾಗಳ ಪೈರಸಿ ಹೆಚ್ಚು ಆಗುತ್ತಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್‌ಸಿಸಿ) ಅಧ್ಯಕ್ಷ ಎನ್‌.ಎಂ.ಸುರೇಶ್‌ ಬೇಸರದಿಂದ ಹೇಳಿದರು. 

‘ಕಳೆದ ಐದು ವರ್ಷಗಳ ಹಿಂದೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹೆಚ್ಚಿನ ಪೈರಸಿ ಪ್ರಕರಣಗಳು ದಾಖಲಾಗುತ್ತಿದ್ದವು. ಪೊಲೀಸರೂ ಪೈರಸಿ ಮಾಡುತ್ತಿದ್ದವರನ್ನು ವಿಳಂಬವಾದರೂ ಪತ್ತೆಹಚ್ಚಿ ಬಂಧಿಸುತ್ತಿದ್ದರು. ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳು ಪ್ರಬಲವಾಗಿದ್ದು, ಸಿನಿಮಾ ಬಿಡುಗಡೆಯಾದ ದಿನದಂದು ಸಂಜೆ ವೇಳೆಗೇ ಟೆಲಿಗ್ರಾಂ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಲಿಂಕ್‌ಗಳು ಹರಿದಾಡುತ್ತಿವೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ವೇಳೆಗೆ ಅದು ಲಕ್ಷಾಂತರ ಮೊಬೈಲ್‌ ಫೋನ್‌ಗಳಲ್ಲಿ ಹೋಗಿಯಾಗಿರುತ್ತವೆ. ಇದೇ ಕಾರಣದಿಂದ ಪೊಲೀಸ್‌ ಠಾಣೆಗೆ ಬರುವ ನಿರ್ಮಾಪಕರ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗಿದ್ದು ಅವರೇ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ’ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಯೊಬ್ಬರು.

ಜಾಲ ಹೇಗೆ ಕಾರ್ಯನಿರ್ವಹಿಸುತ್ತದೆ?

ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ಚಿತ್ರೀಕರಿಸುತ್ತಿದ್ದ ತಮಿಳುನಾಡು ಮೂಲದ ಓರ್ವನನ್ನು ಕೇರಳ ಸೈಬರ್‌ ಪೊಲೀಸರು ಕಳೆದ ಜುಲೈನಲ್ಲಿ ಕೊಚ್ಚಿಯಲ್ಲಿ ಬಂಧಿಸಿದ್ದರು. ಆತ ಪೈರಸಿ ತಂಡ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಪೊಲೀಸರಿಗೆ ವಿವರಿಸಿದ್ದ. ಪೈರಸಿ ಮಾಡುವ ತಂಡದ ಸದಸ್ಯರು ತಮಿಳುನಾಡು, ಕೇರಳ, ಕರ್ನಾಟಕದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ದಿನ ಹೆಚ್ಚಿನ ದರವಿರುವ ಐದು ಸೀಟುಗಳ ಟಿಕೆಟ್‌ಗಳನ್ನು ಖರೀದಿಸುತ್ತಾರೆ. ಇವರಲ್ಲಿ ನಡುವಿನಲ್ಲಿ ಕುಳಿತವನು ರಹಸ್ಯವಾಗಿ ಕ್ಯಾಮೆರಾ ಇಟ್ಟುಕೊಂಡು ಪೂರ್ತಿಯಾಗಿ ತನ್ನನ್ನು ಒಂದು ಹೊದಿಕೆಯಿಂದ ಮುಚ್ಚಿಕೊಂಡು ಇಡೀ ಸಿನಿಮಾವನ್ನು ರೆಕಾರ್ಡ್‌ ಮಾಡಿಕೊಳ್ಳುತ್ತಾನೆ. ಇದಕ್ಕೆ ₹5000ದವರೆಗೆ ಆತ ಹಣ ಪಡೆಯುತ್ತಾನೆ. ಈ ಸಿನಿಮಾ ಲಿಂಕ್‌ ಅನ್ನು ತನ್ನನ್ನು ಗೊತ್ತು ಮಾಡಿದವನಿಗೆ ಕಳುಹಿಸಿಕೊಡುತ್ತಾನೆ ಎಂದು ಆತ ಕಾರ್ಯಾಚರಣೆಯ ವಿಧಾನವನ್ನು ತಿಳಿಸಿದ್ದ. 

ಹೀಗೆ ಸೃಷ್ಟಿಯಾಗುವ ಲಿಂಕ್‌ಗಳನ್ನು ತೆಗೆಯಲು ಆ್ಯಂಟಿ ಪೈರಸಿ ಏಜೆನ್ಸಿಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತಿವೆ. ‘ಶೇ 85ರಷ್ಟು ಪೈರಸಿ ಲಿಂಕ್‌ಗಳು, ಕಂಟೆಂಟ್‌ಗಳು ಟೆಲಿಗ್ರಾಂ, ಇನ್‌ಸ್ಟಾಗ್ರಾಂ, ಟ್ವಿಟರ್‌ನಂತಹ ವೇದಿಕೆಗಳಲ್ಲಿ ಬರುತ್ತವೆ. ಚಿತ್ರತಂಡದ ಕಾಪಿರೈಟ್‌ ಕುರಿತು ನ್ಯಾಯಾಲಯದ ಆದೇಶವಿಟ್ಟುಕೊಂಡು ನಾವು ಈ ಕಂಟೆಂಟ್‌ಗಳನ್ನು ನೇರವಾಗಿ ಬ್ಲಾಕ್‌ ಮಾಡುತ್ತೇವೆ. ಕಾಪಿರೈಟ್‌ ಕಾನೂನು ಬಹಳ ಕ್ಷೀಣವಿರುವ ನೆದರ್‌ಲ್ಯಾಂಡ್‌ನಂತಹ ದೇಶಗಳಲ್ಲಿ ತಮಿಳ್‌ ರಾಕರ್ಸ್‌ನಂಥ ವೆಬ್‌ಸೈಟ್‌ಗಳ ಹೋಸ್ಟಿಂಗ್‌ ಪ್ರೊವೈಡರ್‌ಗಳು ಇರುತ್ತವೆ. ಇಂತಹ ವೆಬ್‌ಸೈಟ್‌ಗಳಿಂದ ಕಂಟೆಂಟ್‌ ತೆಗೆಯಲು ನ್ಯಾಯಾಲಯದ ಮೂಲಕ ಆದೇಶ ಪಡೆದುಕೊಂಡು ಇಂಟರ್‌ನೆಟ್‌ ಪ್ರೊವೈಡರ್‌ಗಳಿಗೆ ನೋಟಿಸ್‌ ಕಳುಹಿಸುತ್ತೇವೆ’ ಎಂದು ತಮ್ಮ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು ಆ್ಯಂಟಿ ಪೈರಸಿ ಏಜೆನ್ಸಿಯಾದ ‘ಬ್ಲಾಕ್‌ಎಕ್ಸ್‌’ ಸಂಸ್ಥಾಪಕ ಶಿವ ಧರ್ಮ.   

ಈ ತಂಡಗಳು ಟೆಲಿಗ್ರಾಂ, ಯುಟ್ಯೂಬ್‌, ವಲ್ಡ್‌ ವೈಡ್‌ ವೆಬ್‌ ಸೇರಿ ಎಲ್ಲ ವೇದಿಕೆಗಳಲ್ಲಿ ಸಿನಿಮಾದ ಹೆಸರನ್ನು, ಹೀರೊ, ನಿರ್ದೇಶಕರ ಹೆಸರನ್ನು ಬೇರೆ ಬೇರೆ ರೀತಿಯಲ್ಲಿ ಹುಡುಕಿ, ನ್ಯೂ ಕನ್ನಡ ಫಿಲ್ಮ್‌, 2024 ಕನ್ನಡ ಫಿಲ್ಮ್ಸ್‌ ಹೀಗೆ ಹಲವು ಪದಗಳನ್ನು ಸರ್ಚ್‌ಗೆ ಹಾಕಿ, ಪೈರಸಿ ಲಿಂಕ್‌ಗಳನ್ನು ತೆಗೆಯುತ್ತಿವೆ. ‘ಬ್ಲಾಕ್‌ಎಕ್ಸ್‌’ ಕಂಪನಿಯು ಕೆಜಿಎಫ್‌ ಚಾಪ್ಟರ್‌– 2 ಸಿನಿಮಾದ 4 ಲಕ್ಷ ಲಿಂಕ್‌ಗಳನ್ನು ಬ್ಲಾಕ್‌ ಮಾಡಿದ್ದು, ಈ ಪೈಕಿ ಇಡೀ ಸಿನಿಮಾವಿದ್ದ 75 ಸಾವಿರ ಲಿಂಕ್‌ಗಳಿದ್ದವು. ಉಳಿದವು ಚಿತ್ರಮಂದಿರದಲ್ಲಿ ಪ್ರೇಕ್ಷಕರು ರೆಕಾರ್ಡ್‌ ಮಾಡಿದ ಕ್ಲಿಪ್ಸ್‌ ಆಗಿದ್ದವು.  

ಮೊಬೈಲ್‌ ಬಳಕೆ ಸಾಮಾನ್ಯ 

ಚಿತ್ರಮಂದಿರಗಳಲ್ಲಿ ಮೊಬೈಲ್‌ ಬಳಕೆ ಇತ್ತೀಚೆಗೆ ಸಾಮಾನ್ಯವಾಗುತ್ತಿವೆ. ಏಕಪರದೆ ಚಿತ್ರಮಂದಿರಗಳಲ್ಲಿ ಫ್ಯಾನ್ಸ್‌ ಶೋ ಸಂದರ್ಭದಲ್ಲಿ ಸಿನಿಮಾದ ಮೊದಲ 5–10 ನಿಮಿಷಗಳು ಯಾರ ನಿರ್ಬಂಧವೂ ಇಲ್ಲದೆ ಮೊಬೈಲ್‌ನಲ್ಲಿ ಸೆರೆಯಾಗುತ್ತಿವೆ. ಇತ್ತೀಚೆಗೆ ‘ಉಪೇಂದ್ರ’ ಸಿನಿಮಾ ರೀರಿಲೀಸ್‌ ಆಗಿತ್ತು. ‘ಬೆಂಗಳೂರು ಬ್ಯಾಂಟರ್‌’ ಎನ್ನುವ ಯುಟ್ಯೂಬ್‌ ಚಾನೆಲ್‌ನಲ್ಲಿ ಮೊಬೈಲ್‌ನಲ್ಲೇ ಚಿತ್ರೀಕರಿಸಿದ ಈ ಸಿನಿಮಾದ ಹಾಡುಗಳ 9 ನಿಮಿಷದ ವಿಡಿಯೊ ಅಪ್‌ಲೋಡ್‌ ಆಗಿದೆ. ಇದನ್ನು 90 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.  

ಒಟಿಟಿ ಆದಾಯವೂ ಇಳಿಕೆ 

ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಜನರನ್ನು ಸೆಳೆದ ಸಿನಿಮಾಗಳನ್ನು ರೆವೆನ್ಯೂ ಶೇರ್‌ (ಹಣ ಹಂಚಿಕೆ ಆಧಾರದ ಮೇಲೆ–PVOD) ಮೂಲಕ ಒಟಿಟಿ ವೇದಿಕೆಗಳು ಪಡೆಯುತ್ತಿವೆ. ‌ಸಿನಿಮಾವೊಂದಕ್ಕೆ ಗಂಟೆಗೆ ₹4–₹6 ನಿರ್ಮಾಪಕರ ಕೈಸೇರುತ್ತಿದೆ. ಇತ್ತೀಚೆಗೆ ಒಟಿಟಿಯಲ್ಲಿ ಸಿನಿಮಾಗಳು ಬಿಡುಗಡೆಯಾದ ಬೆನ್ನಲ್ಲೇ ಅವುಗಳ ಪೈರಸಿಯಾಗುತ್ತಿದ್ದು, ಒಂದೆರಡು ದಿನಗಳ ಅಂತರದಲ್ಲಿ ವೀಕ್ಷಣೆಯ ಅವಧಿಯಲ್ಲಿ ಗಣನೀಯವಾದ ಇಳಿಕೆಯನ್ನು ನಿರ್ಮಾಪಕರು ಗಮನಿಸಿದ್ದಾರೆ. 

‘ನಮ್ಮ ‘ಭೀಮ’ ಸಿನಿಮಾ ಒಟಿಟಿಯಲ್ಲಿ ಬಂದ ಬಳಿಕ ಹೈಡೆಫಿನೇಷನ್‌ ಕಾಪಿಯನ್ನು ಒಬ್ಬರು ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಇದು ಕೇವಲ ಒಂದು ಗಂಟೆಯಲ್ಲಿ 1 ಲಕ್ಷ ವ್ಯೂಸ್‌ ಪಡೆದಿತ್ತು. ಅದನ್ನು ತಕ್ಷಣದಲ್ಲೇ ಬ್ಲಾಕ್‌ ಮಾಡಿದೆವು. ಇಷ್ಟು ದಿನಗಳ ಬಳಿಕ ಒಂದು ಗಂಟೆಯಲ್ಲಿ 1 ಲಕ್ಷ ವ್ಯೂಸ್‌ ಬಂದಿದೆ ಎಂದರೆ ಸಿನಿಮಾ ಬಿಡುಗಡೆಯ ದಿನವೇ ಪೈರಸಿ ಲಿಂಕ್‌ ಸಿಕ್ಕಿದರೆ ಎಷ್ಟು ಲಕ್ಷ ಡೌನ್‌ಲೋಡ್‌ ಆಗಿರಬಹುದು ಯೋಚಿಸಿ. ಯುಟ್ಯೂಬ್‌ನಲ್ಲಿ ಎಷ್ಟು ಜನ ನೋಡಿದ್ದಾರೆ ಎಂದು ಲೆಕ್ಕ ಸಿಗುತ್ತದೆ ಆದರೆ ಟೆಲಿಗ್ರಾಂ ಆ್ಯಪ್‌ ಮೂಲಕ ಸಿನಿಮಾ ಡೌನ್‌ಲೋಡ್‌ ಮಾಡಿಕೊಂಡವರ ಸಂಖ್ಯೆ ಲೆಕ್ಕಕ್ಕೆ ಸಿಗುವುದಿಲ್ಲ. ನಾವು ವಾಣಿಜ್ಯ ಮಂಡಳಿಯ ಮೂಲಕ ಪೈರಸಿ ವಿರುದ್ಧ ದೂರು ನೀಡಿದರೆ ಅದರ ಪ್ರಕ್ರಿಯೆ ಮುಗಿಯುವ ಹೊತ್ತಿಗೆ ಇನ್ನೂ ಸಾವಿರಾರು ಲಿಂಕ್‌ಗಳು ಮೊಬೈಲ್‌ಗೆ ಬಂದಿರುತ್ತವೆ’ ಎನ್ನುತ್ತಾರೆ ನಿರ್ಮಾಪಕ ಕೃಷ್ಣ ಸಾರ್ಥಕ್‌.

ಅಧಿಕ ಟಿಕೆಟ್‌ ದರವೂ ಪೈರಸಿಗೆ ಕಾರಣ
ರಾಜ್ಯದ ಏಕಪರದೆ ಚಿತ್ರಮಂದಿರಗಳಲ್ಲಿ ಕನಿಷ್ಠ ₹100ರಿಂದ ಗರಿಷ್ಠ ₹300ರವರೆಗೆ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನಿಷ್ಠ ₹160ರಿಂದ ಗರಿಷ್ಠ ₹1800ರವರೆಗೆ ಟಿಕೆಟ್‌ ದರವಿದೆ. ತಮಿಳುನಾಡು ಆಂಧ್ರಪ್ರದೇಶ ರಾಜ್ಯಗಳಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನಿಷ್ಠ ದರ ₹60ರಿಂದ ಗರಿಷ್ಠ ₹200ರವರೆಗಿದೆ. ರಜನಿಕಾಂತ್‌ ನಟನೆಯ ‘ವೇಟ್ಟಯನ್‌’ ಸಿನಿಮಾವನ್ನು ತಮಿಳುನಾಡಿನ ಮಲ್ಟಿಪ್ಲೆಕ್ಸ್‌ ಒಂದರಲ್ಲಿ ₹60ಕ್ಕೆ ವೀಕ್ಷಿಸಬಹುದು. ಅದೇ ಬೆಂಗಳೂರಿನಲ್ಲಿ ಇದಕ್ಕೆ ₹1000ದ ಮೇಲೆ ನೀಡಬೇಕು. ಇಂತಹ ಟಿಕೆಟ್‌ ದರ ವ್ಯತ್ಯಾಸವೂ ಪೈರಸಿ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಜೊತೆಗೆ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿನ ತಿಂಡಿಗಳ ದರವೂ ಇದಕ್ಕೆ ಇಂಬು ನೀಡಿದೆ. ನಾಲ್ವರ ಕುಟುಂಬವೊಂದು ಏಕಪರದೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕಾದರೆ ಕನಿಷ್ಠ ₹1500 ಖರ್ಚು ಮಾಡಬೇಕು. ಪೈರಸಿ ಮೂಲಕ ಸಿನಿಮಾವೊಂದು ಖರ್ಚಿಲ್ಲದೆ ಅಂಗೈಗೇ ತಲುಪುತ್ತಿರುವಾಗ ಈ ದಾರಿಯನ್ನು ಹಿಡಿಯುವವರೇ ಹೆಚ್ಚಾಗಿದ್ದಾರೆ.  

‘ಗಂಭೀರ ಕ್ರಮದ ಅಗತ್ಯ’

ನಾವು ಪೈರಸಿ ತಡೆಯಲು ₹3 ಲಕ್ಷ ಖರ್ಚು ಮಾಡಿದ್ದೇವೆ. 500ಕ್ಕೂ ಅಧಿಕ ಲಿಂಕ್ಸ್‌ ತೆಗಿಸಿದ್ದೇವೆ. ಇಂತಹ ಕೆಲ ಏಜೆನ್ಸಿಗಳೇ ಪೈರಸಿ ಲಿಂಕ್ಸ್‌ ಸೃಷ್ಠಿ ಮಾಡಿ ಅವುಗಳನ್ನು ತೆಗೆಯುತ್ತಿವೆ ಎನ್ನುವ ವದಂತಿಯಿದೆ. ಆದರೂ ನಮ್ಮ ಸಿನಿಮಾಗೆ ಯಾವುದೇ ತೊಂದರೆಯಾಗಬಾರದು ಎಂದು ಇಂತಹ ಏಜೆನ್ಸಿಗಳನ್ನು ನೇಮಿಸಿಕೊಳ್ಳುತ್ತೇವೆ. ಪೈರಸಿ ಲಿಂಕ್‌ಗಳನ್ನು ಇಟ್ಟುಕೊಂಡು ದೂರು ಕೊಡುವುದು ಕಷ್ಟದ ಕೆಲಸವೇನಲ್ಲ. ಆದರೆ ಒಂದು ಪ್ರತ್ಯೇಕ ಘಟಕ ರಾಜ್ಯದಲ್ಲಿ ಇಲ್ಲ. ಇಂತಹ ಕೃತ್ಯಗಳಿಗೆ ಒಂದು ಗಂಭೀರವಾದ ಕ್ರಮ ಆಗುವಂತಿದ್ದರೆ ಖಂಡಿತವಾಗಿಯೇ ನಾನೇ ಮೊದಲು ದೂರು ನೀಡುತ್ತೇನೆ –ಶ್ರೀನಿವಾಸ ರಾಜು ‘ಕೃಷ್ಣಂ ಪ್ರಣಯ ಸಖಿ’ ನಿರ್ದೇಶಕ

‘ವರಮಾನ ಇಳಿಕೆ’

ಕೆಲವು ಆಡಿಯೊ ಕಂಪನಿಗಳು ತಮ್ಮ ಯುಟ್ಯೂಬ್‌ ಚಾನಲ್‌ಗಳಲ್ಲಿ ಮೊದಲು ಹಾಡಿನ ಲಿರಿಕಲ್‌ ವಿಡಿಯೊ ಬಿಡುಗಡೆ ಮಾಡಿ ಸಿನಿಮಾ ರಿಲೀಸ್‌ ಆದ ಬಳಿಕ ಅದರ ಹಾಡಿನ ವಿಡಿಯೊ ಬಿಡುಗಡೆ ಮಾಡುತ್ತವೆ. ಕೆಲವರು ಚಿತ್ರಮಂದಿರಗಳಲ್ಲೇ ಕುಳಿತು ಈ ಹಾಡುಗಳನ್ನು ಚಿತ್ರೀಕರಿಸಿಕೊಂಡು ಹರಿಯಬಿಡುತ್ತಾರೆ. ಇದರಿಂದ ಆಡಿಯೊ ಕಂಪನಿ ಯುಟ್ಯೂಬ್‌ ವರಮಾನ ಇಳಿಕೆಯಾಗುತ್ತಿದೆ. ಎಲ್ಲಾ ಚಿತ್ರೋದ್ಯಮಗಳಿಗೂ ಪೈರಸಿ ಏಟು ಒಂದೇ ರೀತಿ ಇದೆ –ಲಹರಿ ವೇಲು ನಿರ್ಮಾಪಕ ಲಹರಿ ಮ್ಯೂಸಿಕ್‌ ಮುಖ್ಯಸ್ಥ

‘ಲಿಂಕ್‌ ತೆಗೆಯುವುದೇ ಸರಳ’ 

ದೂರು ನೀಡುವ ವ್ಯವಸ್ಥೆ ಸಮರ್ಪಕವಾಗಿಲ್ಲ. ಹೀಗೆ ದೂರುಗಳನ್ನು ನೀಡುವುದಕ್ಕಿಂತ ಲಿಂಕ್‌ಗಳನ್ನು ತೆಗೆಯುವುದೇ ಸರಳವಾಗಿದೆ. ನಮ್ಮ ಸಿನಿಮಾ ದೊಡ್ಡ ಮಟ್ಟಿಗೆ ಹಿಟ್‌ ಆಯಿತು. ನಾವೇ ಇಷ್ಟು ತಲೆಕೆಡಿಸಿಕೊಳ್ಳುತ್ತಿದ್ದೇವೆ ಎಂದರೆ ಮೊದಲನೇ ಬಾರಿ ನಿರ್ಮಾಣ ಮಾಡುತ್ತಿರುವ ನಿರ್ಮಾಪಕರ ಗತಿ ಏನು. ಆದಷ್ಟು ಮಟ್ಟಿಗೆ ಪೈರಸಿ ಕಾಪಿಗಳು ಸಿಗಬಾರದು ಎನ್ನುವುದಕ್ಕೇ ನಾವು ಹಣ ಖರ್ಚು ಮಾಡುತ್ತಿದ್ದೇವೆ– ಕೃಷ್ಣ ಸಾರ್ಥಕ್‌ ನಿರ್ಮಾಪಕ

‘ಆದಾಯದ ಶೇ 20 ಖೋತ! ’

ಇವೈ ಸಂಸ್ಥೆ ನೀಡಿರುವ ಅಂಕಿ ಅಂಶ ಸತ್ಯಕ್ಕೆ ಹತ್ತಿರವಾಗಿದೆ. ಸರ್ಕಾರಕ್ಕೆ ಈ ಕುರಿತು ಮೂರ್ನಾಲ್ಕು ದಶಕದಿಂದ ದೂರು ನೀಡುತ್ತಲೇ ಇದ್ದೇವೆ. ಹೀಗಿದ್ದರೂ ಪೈರಸಿ ಚಾಲ್ತಿಯಲ್ಲಿದೆ. ಚಿತ್ರರಂಗವನ್ನು ಕಡೆಗಣಿಸುತ್ತಿರುವುದಕ್ಕೆ ಇದು ಉದಾಹರಣೆ. ನಾವು ದೂರು ದಾಖಲಿಸಿ ಇನ್ನೂ ಕೋರ್ಟ್‌ ಕೇಸ್‌ ಎಂದು ಓಡಾಡುತ್ತಿದ್ದೇವೆ. ಇದೀಗ ದೂರು ನೀಡಿ ಯಾವ ಪ್ರಯೋಜನವೂ ಇಲ್ಲವೆಂತಾಗಿದೆ. ‘ಕಾಟೇರ’ ಬಿಡುಗಡೆ ಸಂದರ್ಭದಲ್ಲಿ 70 ಜನರ ತಂಡವಿಟ್ಟುಕೊಂಡು ಪೈರಸಿ ಲಿಂಕ್‌ ತೆಗೆಸಿದ್ದೆವು. ಪೈರಸಿ ತಡೆಯಲು ದೊಡ್ಡ ಸಿನಿಮಾ ನಿರ್ಮಾಪಕರು ಸುಮಾರು ₹15–20 ಲಕ್ಷ ಖರ್ಚು ಮಾಡುತ್ತಾರೆ. ಇದೂ ನಮಗೆ ಹೊರೆಯಾಗಿದೆ. ಪೈರಸಿಯಿಂದ ಆದಾಯದ ಸುಮಾರು ಶೇ 20ರಷ್ಟು ಕಳೆದುಕೊಂಡಿದ್ದೇನೆ. ಸ್ಟಾರ್‌ ಫ್ಯಾನ್‌ ವಾರ್‌ ಹೆಸರಿನಲ್ಲೂ ಇಂದು ಪೈರಸಿ ನಡೆಯುತ್ತಿರುವುದು ಸಿನಿಮಾ ನೋಡದೇ ಇರುವುದು ಆಘಾತಕಾರಿ –ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಪಕ    

‘ಚಿತ್ರಮಂದಿರದ ಮಾಲೀಕರಿಗೂ ನಷ್ಟ’ 

ಸಿನಿಮಾಗಳು ಆನ್‌ಲೈನ್‌ನಲ್ಲಿ ವಿತರಣೆಯಾಗುವ ಸಂದರ್ಭದಲ್ಲೇ ಹ್ಯಾಕ್‌ ಮಾಡಿ ಪೈರಸಿ ಮಾಡುತ್ತಿದ್ದಾರೆ. ಸಿನಿಮಾ ಹಿಟ್‌ ಆದರಷ್ಟೇ ಪೈರಸಿ ಕಂಟೆಂಟ್‌ಗಳನ್ನು ಹೆಚ್ಚಿನ ಮೊತ್ತಕ್ಕೆ ಮಾರುತ್ತಿದ್ದಾರೆ. ಇಂಟರ್‌ನೆಟ್‌ ವ್ಯಾಪ್ತಿ ಹೆಚ್ಚಾದಂತೆ ಪೈರಸಿಯೂ ಅಧಿಕವಾಗಿದೆ. ಒಂದು ಸಿನಿಮಾ ಚಿತ್ರಮಂದಿರದಲ್ಲಿ ಗಳಿಸಿದ ಮೊತ್ತದ ಶೇ 20–30ರಷ್ಟೇ ಚಿತ್ರಮಂದಿರದ ಮಾಲೀಕರ ಕೈಗೆ ಸಿಗುತ್ತದೆ. ಪೈರಸಿಯಿಂದಾಗಿ ನಿರ್ಮಾಪಕರು ವಿತರಕರಿಗಷ್ಟೇ ಅಲ್ಲ ಚಿತ್ರಮಂದಿರದ ಮಾಲೀಕರಿಗೂ ನಷ್ಟ. ಇದೀಗ ಸಿನಿಮಾಗಳು 350 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ರಿಲೀಸ್‌ ಆಗುತ್ತಿವೆ. 850 ಜನ ಒಳಗೆ ಕುಳಿತಿರುವಾಗ ಎಲ್ಲರ ಮೇಲೆ ನಿಗಾವಹಿಸುವುದು ಕಷ್ಟ. ಕೆಲವರು ಹೀರೊ ಎಂಟ್ರಿಯನ್ನು ಕೆಲವರು ಹಾಡುಗಳನ್ನು ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಿರುತ್ತಾರೆ. ಹೀಗೆ ಒಬ್ಬೊಬ್ಬರು 5–10 ನಿಮಿಷ ರೆಕಾರ್ಡ್‌ ಮಾಡಿಕೊಂಡರೆ ಇಡೀ ಸಿನಿಮಾವೇ ಆನ್‌ಲೈನ್‌ನಲ್ಲಿ ಸಿಗುವ ಸ್ಥಿತಿ ಎದುರಾಗುತ್ತದೆ – ಕೆ.ವಿ.ಚಂದ್ರಶೇಖರ್‌ ಪ್ರದರ್ಶಕರ ಸಂಘದ ಅಧ್ಯಕ್ಷ ಮತ್ತು ವೀರೇಶ್‌ ಚಿತ್ರಮಂದಿರದ ಮಾಲೀಕ

ಸಿನಿಮಾ ಒಟಿಟಿಗೆ ಬಂದ ಮೇಲೆ ಹೆಚ್ಚಿನ ಪೈರಸಿ ಆಗಿದೆ. ನಾವು ಪೇ ಪರ್‌ ವ್ಯೂ ಆಧಾರದಲ್ಲಿ ಸಿನಿಮಾ ನೀಡಿರುವುದರಿಂದ ನಮ್ಮ ಆದಾಯವೂ ಇಳಿಕೆಯಾಗಿರುವುದನ್ನು ಗಮನಿಸಿದ್ದೇನೆ.
ಚಂದ್ರಜಿತ್‌ ಬೆಳ್ಯಪ್ಪ, ‘ಇಬ್ಬನಿ ತಬ್ಬಿದ ಇಳೆಯಲಿ’ ನಿರ್ದೇಶಕ 
ಕನ್ನಡ ತೆಲುಗಿನಲ್ಲಿ ಪೈರಸಿ ನಿಯಂತ್ರಣಕ್ಕೆ ಎರಡು ಕಂಪನಿಗಳಿಗೆ ₹5 ಲಕ್ಷ ಖರ್ಚು ಮಾಡಿದ್ದೇನೆ. ಶೇ 75ರಷ್ಟು ಪೈರಸಿ ಲಿಂಕ್‌ಗಳನ್ನು ಅವರು ಬ್ಲಾಕ್‌ ಮಾಡಿದ್ದಾರೆ. ದೂರು ನೀಡಿದರೆ ಅದಕ್ಕೆ ಕ್ರಮವಾಗುವ ಸಮಯದಲ್ಲಿ ಎಲ್ಲರ ಕೈಗೆ ಪೈರಸಿಯಾದ ಸಿನಿಮಾ ತಲುಪಿರುತ್ತದೆ.
ನಿತಿನ್‌ ಕೃಷ್ಣಮೂರ್ತಿ, ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ನಿರ್ದೇಶಕ
ಪೈರಸಿ ತಡೆಯಲು ಪ್ರತಿ ಸಿನಿಮಾಗೂ ₹2–₹3 ಲಕ್ಷ ಖರ್ಚು ಮಾಡುತ್ತಿದ್ದೇವೆ. ಆದರೆ ಪೈರಸಿ ವಿರುದ್ಧ ದೂರು ನೀಡಿಲ್ಲ. ಜನರಿಂದಲೇ ಪೈರಸಿ ತಡೆಯಲು ಸಾಧ್ಯ. ಪೈರೇಟೆಡ್‌ ಕಾಪಿ ನೋಡಲ್ಲ ಎನ್ನುವುದನ್ನು ಜನರೇ ನಿರ್ಧರಿಸಬೇಕು. ಸಿನಿಮಾ ಎನ್ನುವುದು ಪ್ರತಿಯೊಬ್ಬರಿಗೂ ನಿಲುಕುವಂತಹ ದರದಲ್ಲಿ ಸಿಗುವಂತೆ ಮಾಡಲು ಚಿತ್ರರಂಗವೂ ಜೊತೆಯಾಗಿ ಯೋಚಿಸಬೇಕು.
ಕಾರ್ತಿಕ್‌ ಗೌಡ , ನಿರ್ಮಾಪಕ ವಿತರಕ– ಕೆಆರ್‌ಜಿ ಸ್ಟುಡಿಯೋಸ್‌

ಪೂರಕ ಮಾಹಿತಿ: ಆದಿತ್ಯ ಕೆ.ಎ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.