ADVERTISEMENT

ಒಳನೋಟ | ಅಂಗನವಾಡಿ: ಸಮಸ್ಯೆ ನೂರು!

ಮಂಜುಶ್ರೀ ಎಂ.ಕಡಕೋಳ
Published 6 ಜುಲೈ 2024, 19:55 IST
Last Updated 6 ಜುಲೈ 2024, 19:55 IST
ಶಿರಸಿಯ ರಾಜೀವ ನಗರದಲ್ಲಿರುವ ಅಂಗನವಾಡಿ ಕೇಂದ್ರ
ಶಿರಸಿಯ ರಾಜೀವ ನಗರದಲ್ಲಿರುವ ಅಂಗನವಾಡಿ ಕೇಂದ್ರ    

ಬೆಂಗಳೂರು: ಸುತ್ತಲೂ ನಾಲ್ಕು ತಗಡಿನ ಶೀಟ್‌, ಮೇಲೂ ತಗಡಿನ ಸೂರು, ಬಿದಿರಿನ ತುಂಡುಗಳ ಬಾಗಿಲು. ಬಾಗಿಲು ತೆರೆದರಷ್ಟೇ ಗಾಳಿ, ಬೆಳಕು. ಬೇಸಿಗೆಯಲ್ಲಿ ಉಸಿರುಗಟ್ಟಿಸುವ ವಾತಾವರಣ, ಮಳೆಗಾಲದಲ್ಲಿ ತಗಡಿನ ಶೆಡ್‌ ಮೇಲೆ ಬೀಳುವ ಮಳೆಹನಿಗಳ ಸದ್ದು... ಕೋಳಿ ಗೂಡಿಗೂ ಇದಕ್ಕೂ ಹೆಚ್ಚಿನ ವ್ಯತ್ಯಾಸ ಇಲ್ಲ.

– ಇದು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ಟಿನ್‌ ಶೆಡ್‌ನಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರದ ಸ್ಥಿತಿ.

ಇರುವುದು ಒಂದೇ ಕೋಣೆ. ಅದರಲ್ಲೇ ಹದಿನೈದರಿಂದ ಇಪ್ಪತ್ತು ಮಕ್ಕಳು ಆಡಬೇಕು, ಕಲಿಯಬೇಕು. ಮಕ್ಕಳ ಆಟಿಕೆಗಳ ಜತೆಗೆ ರೇಷನ್ ದಾಸ್ತಾನು ಕೂಡಾ ಅದೇ ಕೋಣೆಯಲ್ಲೇ. ಗರ್ಭಿಣಿ–ಬಾಣಂತಿಯರು ಬಂದರೆ ಅವರೂ ಇಕ್ಕಟ್ಟಾದ ಜಾಗದಲ್ಲೇ ಕೂರಬೇಕು. ಇದು ರಾಜಧಾನಿ ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಸಣ್ಣ ರೈಲ್ವೆ ಬೋಗಿಯಂತಿರುವ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಯೊಂದರ ಚಿತ್ರಣ.

ADVERTISEMENT

ಈ ಉದಾಹರಣೆಗಳು ಬೆಂಗಳೂರು, ರಾಯಚೂರು ಜಿಲ್ಲೆಗಳ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳದ್ದು ಮಾತ್ರವಲ್ಲ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿರುವ ಅಂಗನವಾಡಿ ಕೇಂದ್ರಗಳದ್ದೂ ಹೆಚ್ಚು ಕಡಿಮೆ ಇದೇ ರೂಪದಲ್ಲಿದೆ.

ತಾತ್ಕಾಲಿಕವಾಗಿ ತಗಡಿನ ಶೆಡ್‌ನಲ್ಲಿಯೇ ನಡೆಯುತ್ತಿರುವ ಸುಂಕೇಶ್ವರಹಾಳ ಗ್ರಾಮದ ಬಾಡಿಗೆ ಅಂಗನವಾಡಿಯ ಸ್ಥಿತಿ ಮಳೆಗಾಲದಲ್ಲಿ ಮತ್ತಷ್ಟು ಭೀಕರ. ಬೇಸಿಗೆಯಲ್ಲಿ ಮಕ್ಕಳನ್ನು ತಗಡಿನ ಶೆಡ್‌ನಿಂದ ಹೊರಗೆ ಆಡಲು ಬಿಡುವ ಕಾರ್ಯಕರ್ತೆ, ಮಳೆಗಾಲದಲ್ಲಿ ಇಕ್ಕಟ್ಟಾದ ಶೆಡ್‌ನಲ್ಲೇ ಮಕ್ಕಳನ್ನು ಕೂರಿಸುತ್ತಾರೆ. ಅಲ್ಲೇ ಅಡುಗೆ ಮಾಡಬೇಕಾದ ಸ್ಥಿತಿ. ಇಕ್ಕಟ್ಟಾದ ಸ್ಥಳ. ಗಾಳಿ, ಬೆಳಕಿನ ಕೊರತೆ ಒಂದೆಡೆಯಾದರೆ, ಶೌಚಾಲಯದ ಕೊರತೆ ಮತ್ತೊಂದೆಡೆ. ಇಂಥ ಬಾಡಿಗೆ ಅಂಗನವಾಡಿಗಳಿಗೆ ಕಾಂಪೌಂಡ್‌, ಆಟದ ಮೈದಾನ, ಶುದ್ಧ ಕುಡಿಯುವ ನೀರು, ಫ್ಯಾನ್ ಗಗನ ಕುಸುಮ. ಆರು ವರ್ಷದೊಳಗಿನ ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯ ಭದ್ರ ಅಡಿಪಾಯಕ್ಕಾಗಿ 1975ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ (ಐಸಿಡಿಎಸ್) ಅಂಗನವಾಡಿ ಕೇಂದ್ರಗಳದ್ದೇ ಮುಖ್ಯ ಪಾತ್ರ.

ರೂಢಿಗತವಲ್ಲದ ಶಾಲಾ ಪೂರ್ವ ಶಿಕ್ಷಣ, ಬಾಲ್ಯಾವಸ್ಥೆಯ ಪಾಲನೆ, ಅಪೌಷ್ಟಿಕತೆ ನಿವಾರಣೆ, ತಾಯಿ ಮತ್ತು ಮಕ್ಕಳ ಆರೋಗ್ಯ, ಗರ್ಭಿಣಿ, ಬಾಣಂತಿಯರ ಕಾಳಜಿ, ಶಾಲೆ ತೊರೆಯುವಿಕೆ ಹಾಗೂ ಮರಣದ ಪ್ರಮಾಣ ಕಡಿಮೆ ಮಾಡುವ ಉದ್ದೇಶ, ತಾಯಂದಿರಲ್ಲಿ ತಮ್ಮ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯ ಅಗತ್ಯಗಳನ್ನು ಸರಿಯಾಗಿ ನೋಡಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು, ಹೀಗೆ ಒಟ್ಟಾರೆ ತಾಯಿ, ಮಕ್ಕಳ ಸಮಗ್ರ ಆರೋಗ್ಯ ಕಾಪಾಡುವಲ್ಲಿ ಅಂಗನವಾಡಿಗಳ ಜವಾಬ್ದಾರಿ ದೊಡ್ಡದು.

2022ರಲ್ಲಿ ಐಸಿಡಿಎಸ್‌ನ ಹೆಸರನ್ನು ಕೇಂದ್ರ ಸರ್ಕಾರವು ‘ಸಕ್ಷಮ್ ಅಂಗನವಾಡಿ: ಪೋಷಣ್‌ 2.0’ ಎಂದು ಬದಲಾಯಿಸಿ ಸುಮ್ಮನಾಯಿತೇ ಹೊರತು, ಅವುಗಳ ಸ್ವರೂಪ ಬದಲಾಯಿಸಲಿಲ್ಲ. ಯೋಜನೆಗೆ ಬಲ ತುಂಬಬೇಕಿದ್ದ ಸರ್ಕಾರ, ಅನುದಾನದ ಮೊತ್ತವನ್ನು ವರ್ಷದಿಂದ ವರ್ಷಕ್ಕೆ ಕಡಿತಗೊಳಿಸಿ ಅಂಗನವಾಡಿ ವ್ಯವಸ್ಥೆಯ ಕತ್ತುಹಿಸುಕುತ್ತಿದೆ. ಅಂಗನವಾಡಿ ಕೇಂದ್ರಗಳು ಬಾಡಿಗೆ ಮನೆ, ಸಮುದಾಯ ಭವನ, ಸರ್ಕಾರಿ ಶಾಲೆ ಕಟ್ಟಡ, ಯುವಕ –ಯುವತಿ ಮಂಡಳಿಗಳ ಕಚೇರಿ, ದೇವಾಲಯದ ಅಂಗಳ, ಗ್ರಾಮ ಪಂಚಾಯಿತಿಯ ಕಟ್ಟಡ, ಇಲ್ಲವೇ ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ.‌

ಬೆಂಗಳೂರು ದಕ್ಷಿಣಭಾಗದ ಬಾಡಿಗೆ ಅಂಗನವಾಡಿ ಕೇಂದ್ರವೊಂದರ ಇಕ್ಕಟ್ಟು ಜಾಗದಲ್ಲೇ ಮಕ್ಕಳಿಗೆ ಊಟ

ಇಕ್ಕಟ್ಟಿನಲ್ಲೇ ಮಕ್ಕಳ ಆಟ–ಪಾಠ: ಸುಮಾರು 20ರಿಂದ 25 ಮಕ್ಕಳಿರುವ ಒಂದು ಗುಂಪಿಗೆ ವಿಸ್ತಾರವಾದ ಕೊಠಡಿ ಬೇಕು. ಹಾಗೆಯೇ ಹೊರಾಂಗಣವೂ ಇರಬೇಕು. ಅಂಗನವಾಡಿ ಕೇಂದ್ರಗಳು ವೈಜ್ಞಾನಿಕವಾಗಿ ಮಕ್ಕಳನ್ನು ಆಕರ್ಷಿಸುವ ಕೇಂದ್ರವಾಗಿರಬೇಕು. ವಿಶಾಲವಾದ ಹಾಲ್ (ನಡುಮನೆ), ಅಡುಗೆ ಮನೆ, ಶುದ್ಧ ಕುಡಿಯುವ ನೀರು, ವಿದ್ಯುತ್, ಪ್ರತ್ಯೇಕ ಶೌಚಾಲಯ, ಅಂಗವಿಕಲ ಮಕ್ಕಳಿದ್ದರೆ ಅವರಿಗೆ ಉಪಯೋಗಿಸಲು ಅನುಕೂಲವಾಗುವಂಥ ಶೌಚಾಲಯ, ಅಡುಗೆ ಮತ್ತು ಮಕ್ಕಳ ಆಟೋಟ ಸಾಮಗ್ರಿಗಳ ದಾಸ್ತಾನಿಗೆ ಪ್ರತ್ಯೇಕ ಕೊಠಡಿ ಇರಬೇಕೆಂಬುದು ನ್ಯಾಯಮೂರ್ತಿ ಎನ್‌.ಕೆ.ಪಾಟೀಲ್ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ.

ಆದರೆ, ಕೆಲವು ಜಿಲ್ಲೆಗಳಲ್ಲಿ ಕೋಳಿ ಗೂಡುಗಳಂತಿರುವ ಇಕ್ಕಟ್ಟಾದ ಅಂಗನವಾಡಿಗಳಲ್ಲಿ ಮಕ್ಕಳನ್ನು ಕೂರಿಸಿ ಪಾಠ ಹೇಳಿಕೊಡಲಾಗುತ್ತಿದೆ. ಶೌಚಾಲಯ, ಅಡುಗೆ ಕೋಣೆಯಂತಹ ಯಾವುದೇ ಮೂಲಸೌಲಭ್ಯಗಳಿಲ್ಲದ ಬಾಡಿಗೆ ಕೊಠಡಿಗಳಲ್ಲಿ ಮಕ್ಕಳಿಗೆ ಕೈಕಾಲು ಆಡಿಸಲು ಜಾಗವೇ ಸಾಕಾಗದು. ಇನ್ನು ಆಟ ದೂರದ ಮಾತು. ಇತ್ತೀಚೆಗಷ್ಟೇ ಬೆಂಗಳೂರಿನ ನಾಲ್ಕು ಅಂಗನವಾಡಿ ಕೇಂದ್ರಗಳಿಗೆ ಭೇಟಿ ಕೊಟ್ಟಿದ್ದ ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲಗೌಡ ನೇತೃತ್ವದ ಸಮಿತಿಯು, ಅಲ್ಲಿನ ದುಃಸ್ಥಿತಿ ಕಂಡು ಹೌಹಾರಿತ್ತು. ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದ ಅವರು, ರಾಜ್ಯದಲ್ಲಿರುವ ಬಹುತೇಕ ಅಂಗನವಾಡಿಗಳ ಸ್ಥಿತಿ ಶೋಚನೀಯವಾಗಿದೆ. ಸರ್ಕಾರ ಇದನ್ನು ಸರಿಪಡಿಸಬೇಕು ಎಂದು ಸೂಚಿಸಿದ್ದರು. ಅಷ್ಟೇ ಅಲ್ಲ, ರಾಜ್ಯದೆಲ್ಲೆಡೆ ಅಂಗನವಾಡಿಗಳ ಸ್ಥಿತಿ ಪರಿಶೀಲನೆಗೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಅಪೌಷ್ಟಿಕ ನಿವಾರಣಾ ರಾಜ್ಯ ಸಲಹಾ ಸಮಿತಿಗೆ ಸೂಚನೆಯನ್ನೂ ನೀಡಿದ್ದಾರೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ಬಾಡಿಗೆ ಟಿನ್‌ ಶೆಡ್‌ನಲ್ಲಿ ನಡೆಯುತ್ತಿರುವ 3ನೇ ಅಂಗನವಾಡಿ ಕೇಂದ್ರ

ಬಾಡಿಗೆ ಕಟ್ಟಡಗಳಿಗೆ ಮುಂಗಡ ಹಣದ್ದೇ ಸಮಸ್ಯೆ: ಅಂಗನವಾಡಿಗಾಗಿ ಕಟ್ಟಡ ಇಲ್ಲವೇ ಮನೆಯನ್ನು ಬಾಡಿಗೆ ಪಡೆಯಬೇಕಾದರೆ, ಆ ಕಟ್ಟಡದ ಮಾಲೀಕ ಮುಂಗಡ ಹಣ (ಅಡ್ವಾನ್ಸ್‌) ಕೇಳುತ್ತಾನೆ. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಟ್ಟಡದ ಬಾಡಿಗೆಗಷ್ಟೇ ಅನುದಾನ ನೀಡುತ್ತದೆ ಹೊರತು ಮುಂಗಡ ಹಣವಲ್ಲ. ಹಾಗಾಗಿ, ಬಾಡಿಗೆ ಅಂಗನವಾಡಿ ಕಟ್ಟಡಗಳಿಗೆ ಅಂಗನವಾಡಿ ಕಾರ್ಯಕರ್ತೆಯರೇ ಮುಂಗಡ ಹಣ ಹೊಂದಿಸಬೇಕಾದ ಅನಿವಾರ್ಯತೆ ಇದೆ.

ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿಗಳಿಗೆ ರಾಜ್ಯ ಸರ್ಕಾರ ಸಕಾಲಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಮೂರ್ನಾಲ್ಕು ತಿಂಗಳ ಬಾಡಿಗೆ ಬಾಕಿ ಉಳಿಸಿಕೊಂಡ ಕಾರಣ ಕಟ್ಟಡ ಮಾಲೀಕರು ಅನಿವಾರ್ಯವಾಗಿ ಅಂಗನವಾಡಿಗಳನ್ನು ಖಾಲಿ ಮಾಡುವಂತೆ ಒತ್ತಡ ಹೇರುತ್ತಾರೆ.

‘ಕಟ್ಟಡದ ಬಾಡಿಗೆಗೆ ಹಣ ಪ್ರತಿ ತಿಂಗಳು ಬರುವುದಿಲ್ಲ. ಮೂರ್ನಾಲ್ಕು ತಿಂಗಳಿಗೊಮ್ಮೆ ಬಾಡಿಗೆ ನೀಡಿದರೆ ಅದರ ಮಾಲೀಕರು ಕೇಳುತ್ತಾರೆಯೇ’ ಎಂಬ ಪ್ರಶ್ನೆ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ನ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷೆ ಮಮತಾಜ್ ಬೇಗಂ ಕಂದಗಲ್‌ ಅವರದ್ದು.

ಇದರಿಂದ ಬಾಡಿಗೆ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ನಡೆಸುವುದೇ ದುಸ್ತರವಾಗುತ್ತಿದೆ. ಬಳ್ಳಾರಿಯಲ್ಲಿ ಕಾರ್ಯಕರ್ತೆಯೊಬ್ಬರು ತಮ್ಮ ಕರಿಮಣಿ ಸರವನ್ನೇ ಅಡವಿಟ್ಟು ಬಾಡಿಗೆ ಕಟ್ಟಿದ್ದ ನಿದರ್ಶನವೂ ಇದೆ. ‘2023ರಲ್ಲಿ ಹತ್ತು ತಿಂಗಳು ಬಾಡಿಗೆ ಹಣ ಬಿಡುಗಡೆಯಾಗಿರಲಿಲ್ಲ. ಆಗ ನಮ್ಮ ಒಡವೆಗಳನ್ನು ಅಡವಿಟ್ಟು ಬಾಡಿಗೆ ನೀಡಿದ್ದೇವೆ. ನಗರ ಪ್ರದೇಶಗಳಲ್ಲಿ ಬಾಡಿಗೆ ಕನಿಷ್ಠ ₹ 5000ಕ್ಕಿಂತ ಕಡಿಮೆ ಬಾಡಿಗೆಗೆ ಕೊಠಡಿ ನೀಡುವುದಿಲ್ಲ. ಬರುವ ಅಲ್ಪ ಗೌರವಧನದಲ್ಲಿ ಕಟ್ಟಡದ ಬಾಡಿಗೆ ಕಟ್ಟಿದರೆ, ನಾವು ಜೀವನ ನಡೆಸುವುದು ಹೇಗೆ’ ಎಂಬ ಪ್ರಶ್ನೆ ದಾವಣಗೆರೆಯ ಅಂಗನವಾಡಿ ಕಾರ್ಯಕರ್ತೆಯರದ್ದು.

‘ಒಂದು ಅಂಗನವಾಡಿ ಕೇಂದ್ರದಲ್ಲಿ ಕನಿಷ್ಠ 25 ಮಕ್ಕಳು ಇರುತ್ತಾರೆ. ಅವರಿಗೆ ಪೌಷ್ಟಿಕ ಆಹಾರ ತಯಾರಿಸಿ, ಶಾಲಾ ಪೂರ್ವ ಶಿಕ್ಷಣ ನೀಡಬೇಕು. ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ನೀಡಬೇಕು. ಸ್ತ್ರೀ ಶಕ್ತಿ ಯೋಜನೆ, ಭಾಗ್ಯಲಕ್ಷ್ಮಿ, ಮಾತೃ ವಂದನಾ, ಮಾತೃಪೂರ್ಣ, ಮಾತೃಶ್ರೀ ಯೋಜನೆಗಳ ಫಲಾನುಭವಿಗಳ ಹೆಸರು ನೋಂದಣಿ, ವರದಿ ತಯಾರಿಸಬೇಕು– ಇಷ್ಟೆಲ್ಲಾ ಕಾರ್ಯ ನಿರ್ವಹಣೆಗೆ ಸೂಕ್ತ ಕಟ್ಟಡ ಹಾಗೂ ಸಿಬ್ಬಂದಿ ಸೌಲಭ್ಯವೂ ಬೇಕು’ ಎನ್ನುತ್ತಾರೆ ಕಾರ್ಯಕರ್ತೆಯರು.

‘ಗ್ರಾಮೀಣ ಭಾಗದಲ್ಲಿ, ನಗರಗಳಲ್ಲಿ ಕಾಣುವಂತೆ ಕಿಂಡರ್ ಗಾರ್ಡನ್, ‘ಕ್ರಶ್‌’ಗಳಿರುವುದಿಲ್ಲ. ಇದ್ದರೂ ದುಬಾರಿ ಫೀಜು ತೆತ್ತು ಪುಟ್ಟ ಮಕ್ಕಳನ್ನು ಕಳಿಸಲಾಗದ ಎಷ್ಟೋ ಪೋಷಕರಿರುತ್ತಾರೆ. ರೈತರು, ಕೃಷಿ ಕಾರ್ಮಿಕರು, ಬಡವರು, ಅಸಂಘಟಿತ ಕಾರ್ಮಿಕರ ಮಕ್ಕಳ ಬಾಲ್ಯ ಅರಳುವುದೇ ಅಂಗನವಾಡಿಗಳಲ್ಲಿ. ಗರ್ಭಿಣಿ, ಬಾಣಂತಿಯರೂ ಇಲ್ಲೇ ಪೌಷ್ಟಿಕ ಆಹಾರ ಪಡೆಯುವರು. ಇಂಥ ಸ್ಥಳ ಸ್ವಚ್ಛ ಹಾಗೂ ವಿಶಾಲವಾಗಿರಬೇಕು. ಆದರೆ ಅಂತಹ ಸ್ಥಿತಿ ನಮ್ಮ ಬಾಡಿಗೆ ಅಂಗನವಾಡಿಗಳಲ್ಲಿ ಇಲ್ಲ. ಎಲ್ಲಾ ಅಂಗನವಾಡಿಗಳಿಗೆ ಸ್ವಂತ ಕಟ್ಟಡದ ಅಗತ್ಯವಿದೆ. ಕನಿಷ್ಠ 30X40 ಅಳತೆಯಲ್ಲಿ ಅಂಗನವಾಡಿ ಕಟ್ಟಡಗಳಿದ್ದರೆ ಅನುಕೂಲ. ಸರ್ಕಾರ ಈ ಬಗ್ಗೆ ಖಚಿತ ನಿರ್ಧಾರ ತೆಗೆದುಕೊಳ್ಳಬೇಕು’ ಎನ್ನುವುದು ಸಿಐಟಿಯು ಅಧ್ಯಕ್ಷೆ ಎಸ್. ವರಲಕ್ಷ್ಮಿ ಅವರ ಅಭಿಪ್ರಾಯ.

ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗವಿಲ್ಲ: ಈಚೆಗಷ್ಟೇ ಸ್ವಂತ ಅಂಗನವಾಡಿ ಕಟ್ಟಲು ಸರ್ಕಾರ ₹20 ಲಕ್ಷ  (ಇಲಾಖೆ ಪಾಲು ₹ 15 ಲಕ್ಷ,  ನರೇಗಾ ಪಾಲು ₹ 5 ಲಕ್ಷ) ಅನುದಾನ ನಿಗದಿಪಡಿಸಿದೆ. ಆದರೆ, ಸ್ವಂತ ಕಟ್ಟಡ ನಿರ್ಮಾಣಕ್ಕೆ ಕೆಲ ಗ್ರಾಮೀಣ ಪ್ರದೇಶ ಹಾಗೂ ನಗರಗಳಲ್ಲಿ ಜಾಗದ್ದೇ ದೊಡ್ಡ ಸಮಸ್ಯೆ. ಸ್ಥಳೀಯ ಸಂಸ್ಥೆಗಳು ಮನಸು ಮಾಡಿದರೆ ಜಾಗದ ಸಮಸ್ಯೆ ಸಮಸ್ಯೆಯೇ ಅಲ್ಲ. ‘ಎಷ್ಟೋ ಕಡೆಗಳಲ್ಲಿ ಊರ ಹೊರಗೆ ಜಾಗ ಕೊಡ್ತೀವಿ ಅಂತಾರೆ. ಅಷ್ಟು ದೂರ ಅಂಗನವಾಡಿ ತೆರೆದರೆ ಮಕ್ಕಳು ಬರುವುದಿಲ್ಲ. ನಗರಗಳಲ್ಲಿ ಕೇಂದ್ರ ಸ್ಥಳಗಳಲ್ಲಿ ಜಾಗವಿದ್ದರೂ ಅವುಗಳನ್ನು ಸ್ಥಳೀಯ ಸಂಸ್ಥೆಗಳು ಅಂಗನಾಡಿ ಕಟ್ಟಡಕ್ಕೆ ಕೊಡಲು ಹಿಂದೇಟು ಹಾಕುವುದೇ ಹೆಚ್ಚು. ಏಕೆಂದರೆ ಆ ಸ್ಥಳಗಳಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಿದರೆ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚು ಆದಾಯ ಬರುತ್ತದೆ ಎನ್ನುವ ಲೆಕ್ಕಾಚಾರ. ಹೀಗಾಗಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸ್ಥಳದ್ದೇ ದೊಡ್ಡ ಸಮಸ್ಯೆಯಾಗಿದೆ‘ ಎನ್ನುತ್ತಾರೆ ಅಂಗನವಾಡಿ ಪರ ಹೋರಾಟಗಾರರು.

‘ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಬಿಡುಗಡೆಯಾಗುವ ₹ 20 ಲಕ್ಷದಲ್ಲಿ ಶೇ 18 ಜಿಎಸ್‌ಟಿಗೆ ಹೋಗುತ್ತದೆ. ಸರ್ವೀಸ್‌ಗೆ ಶೇ 3, ಥರ್ಡ್‌ ಪಾರ್ಟಿ ಇನ್‌ಸ್ಪೆಕ್ಷನ್‌ಗೆ ಶೇ 1 ವೆಚ್ಚವಾಗುತ್ತದೆ. ಕೊನೆಗೆ ಉಳಿಯುವುದೇ ಸುಮಾರು ₹15 ಲಕ್ಷದಷ್ಟು ಮಾತ್ರ. ಅಷ್ಟು ಮೊತ್ತದಲ್ಲಿ ಗುಣಮಟ್ಟದ, ಸಕಲ ಸೌಲಭ್ಯವುಳ್ಳ ಕಟ್ಟಡ ನಿರ್ಮಾಣ ಹೇಗೆ ಸಾಧ್ಯ. ಇಂಥ ಕಟ್ಟಡಗಳ ಕನಿಷ್ಠ 5 ವರ್ಷವೂ ಬಾಳಿಕೆ ಬರುವುದಿಲ್ಲ’ ಎನ್ನುತ್ತಾರೆ ಕಟ್ಟಡ ನಿರ್ಮಾಣಗಾರರು.

10 ಸಾವಿರ ಅಂಗನವಾಡಿ ಮೇಲ್ದರ್ಜೆಗೆ
ರಾಜ್ಯದಲ್ಲಿ ಮೊದಲ ಹಂತದಲ್ಲಿ 10 ಸಾವಿರ ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ವಿವಿಧೆಡೆ ತಲಾ ₹ 20 ಲಕ್ಷ ವೆಚ್ಚದಲ್ಲಿ ಒಂದು ಸಾವಿರ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಿಸಲಾಗುವುದು. ಅಂಗನವಾಡಿಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನದ ನೆರವು ಅಗತ್ಯವಿದೆ. ಹಾಗಾಗಿ ಜರೂರಾಗಿ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.
–ಲಕ್ಷ್ಮಿ ಹೆಬ್ಬಾಳಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ
ಬೆಂಗಳೂರು ದಕ್ಷಿಣಭಾಗದ ಬಾಡಿಗೆ ಅಂಗನವಾಡಿ ಕೇಂದ್ರೊವೊಂದರ ಕೊಠಡಿಯಲ್ಲಿ ಮಕ್ಕಳ ವಿಶ್ರಾಂತಿ ಆಹಾರ ದಾಸ್ತಾನು
‘ಬಾಡಿಗೆ ಇರಲಿ ಸ್ವಂತ ಇರಲಿ ಅಂಗನವಾಡಿಗಳಲ್ಲಿ ಮೂಲಸೌಕರ್ಯದ ಕೊರತೆ ಬಗ್ಗೆ ಹೇಳಲು ಕಾರ್ಯಕರ್ತೆಯರು ಹೆದರುತ್ತಾರೆ. ಇಲಾಖೆಯವರು ಕ್ರಮ ಕೈಗೊಳ್ಳುತ್ತಾರೆಂಬ ಭಯ ಅವರದ್ದು. ಕೆಲಸ ಹೋಗುವ ಆತಂಕ. ರಾಜ್ಯದಲ್ಲಿ ಹೊಸದಾಗಿ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಗಿರುವ ಅಂಗನವಾಡಿಗಳಿಗೆ ಆರು ತಿಂಗಳಿಂದ ಬಾಡಿಗೆ ಹಣ ಬಿಡುಗಡೆಯಾಗಿಲ್ಲ.
–ಎಂ. ಜಯಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಐಟಿಯುಸಿ

ಕಾರ್ಯಕರ್ತೆಯರ ವಿರುದ್ಧ ಕ್ರಮದ ತೂಗುಕತ್ತಿ: ‘ಅಂಗನವಾಡಿಗಳಲ್ಲಿ ಇರುವ ಸಮಸ್ಯೆಗಳನ್ನು ಕಾರ್ಯಕರ್ತೆಯರು ಮಾಧ್ಯಮಗಳ ಮುಂದೆ ಹೇಳಿಕೊಂಡರೆ, ಅಂಥವರ ವಿರುದ್ಧ ಇಲಾಖೆಯ ಅಧಿಕಾರಿಗಳು ನಿಂದನೆ, ಇಲ್ಲವೇ ನೋಟಿಸ್‌ ನೀಡಿ ಕ್ರಮ ಕೈಗೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಅಂಗನವಾಡಿ ಪರ ಹೋರಾಟಗಾರ್ತಿಯರಾದ ವರಲಕ್ಷ್ಮಿ ಮತ್ತು ಜಯಮ್ಮ.

‘ಬಡವರು, ವಿಧವೆಯರು, ಮಾಜಿ ದೇವದಾಸಿಯರು ಇಲ್ಲವೇ ಆರ್ಥಿಕವಾಗಿ ದುಃಸ್ಥಿತಿಯಲ್ಲಿರುವ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿದ್ದಾರೆ. ಜೀವನ ನಿರ್ವಹಣೆಗೆ ಇರುವ ಕೆಲಸ ಕಳೆದುಕೊಂಡರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಹಾಗಾಗಿ, ಬಹುತೇಕ ಕಾರ್ಯಕರ್ತೆಯರು ತಮ್ಮ ಅಂಗನವಾಡಿಗಳಲ್ಲಿ ಸಮಸ್ಯೆಗಳಿದ್ದರೂ ಯಾವುದನ್ನೂ ಹೇಳಿಕೊಳ್ಳದೇ ಸುಮ್ಮನಿದ್ದಾರೆ. ಕಟ್ಟಡಕ್ಕೆ ಬಾಡಿಗೆ ಬಂದಿಲ್ಲ, ಮೂಲಸೌಕರ್ಯ ಇಲ್ಲ, ತಮ್ಮ ಪಾಲಿನ ಸಂಬಳ ಬಂದಿಲ್ಲ ಎಂದು ಕೇಳುವುದು ತಪ್ಪೇ’ ಎಂಬುದು ಹೋರಾಟಗಾರ್ತಿಯರ ಪ್ರಶ್ನೆ.

‘ಹೊಸಪೇಟೆಯಲ್ಲಿ ಈ ಹಿಂದೆ ಅಂಗನವಾಡಿ ಕಟ್ಟಡದ ಬಾಡಿಗೆ ಕಟ್ಟಿಲ್ಲ. ಸಂಬಳ ಬಂದಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಪತ್ರಿಕಾಗೋಷ್ಠಿಯಲ್ಲಿ ದೂರಿದ್ದರು. ಇದಕ್ಕೆ ಪ್ರತೀಕಾರವಾಗಿ ಅಲ್ಲಿಯ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾಧಿಕಾರಿ ಆ ಕಾರ್ಯಕರ್ತೆಯರಿಗೆ ನೋಟಿಸ್ ನೀಡಿದ್ದರು. ಬಾಡಿಗೆ ನೀಡದ ಕಾರಣಕ್ಕೆ ಮಾಲೀಕರು ಗಲಾಟೆ ಮಾಡಿ ಸಾಮಗ್ರಿಗಳನ್ನು ಹೊರಗೆ ಹಾಕಿದ ನಿದರ್ಶನಗಳೂ ಇವೆ’ ಎನ್ನುತ್ತಾರೆ ವರಲಕ್ಷ್ಮಿ.

‘ಬೆಂಗಳೂರಿನಲ್ಲಿ ಸರ್ಕಾರ ನಿಗದಿ ಮಾಡಿರುವ ಕಡಿಮೆ ಮೊತ್ತಕ್ಕೆ ಯಾರೂ ಕಟ್ಟಡ ಬಾಡಿಗೆ ಕೊಡುವುದಿಲ್ಲ. ಬೆಂಗಳೂರಿನ ಕೊಳೆಗೇರಿಗಳಲ್ಲಿ ಇರುವ ಅಂಗನವಾಡಿಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ’ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ಅಧ್ಯಕ್ಷ ಶಿವಶಂಕರ್.

ವಿದ್ಯುತ್ ಬಿಲ್ ಹೊರೆ ತಗ್ಗಿಸಲಿ: ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ ಜಾರಿಗೆ ತಂದಿದೆ. ಅಂತೆಯೇ ಶಾಲಾ, ಕಾಲೇಜುಗಳಿಗೂ ಉಚಿತ ವಿದ್ಯುತ್  ಪೂರೈಸುತ್ತಿದೆ. ಆದರೆ, ಅಂಗನವಾಡಿಗಳಿಗೆ ಏಕೆ ಉಚಿತ ವಿದ್ಯುತ್ ಕಲ್ಪಿಸಿಲ್ಲ. ಅಂಗನವಾಡಿ ಕಾರ್ಯಕರ್ತೆಯರೇ ಎಷ್ಟೋ ಬಾರಿ ವಿದ್ಯುತ್ ಬಿಲ್ ಕಟ್ಟಿದ ಉದಾಹರಣೆಗಳಿವೆ. ಕಾರ್ಯಕರ್ತೆಯರ ಬದ್ಧತೆಯಿಂದಾಗಿಯೇ ಐಸಿಡಿಎಸ್ ಯೋಜನೆ ಇನ್ನೂ ಉಸಿರಾಡುತ್ತಿದೆ. ಹೀಗಿರುವಾಗ ಸ್ಥಳೀಯ ಸಂಸ್ಥೆಗಳು ವಿದ್ಯುತ್ ಬಿಲ್ ಕಟ್ಟುವಂತಾಗಬೇಕು. ಇಲ್ಲವೇ ಸರ್ಕಾರ ಅಂಗನವಾಡಿ ಕೇಂದ್ರಗಳಿಗೂ ‘ಗೃಹ ಜ್ಯೋತಿ’ ಯೋಜನೆ ವಿಸ್ತರಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಮನಸ್ಸು ಮಾಡಿದರೆ ಪ್ರತಿ ತಿಂಗಳೂ ಸಕಾಲಕ್ಕೆ ಬಾಡಿಗೆ ಹಣ, ಕಾರ್ಯಕರ್ತೆಯರ ಸಂಬಳ ನೀಡಬಹುದು. ಆದರೆ, ಇದಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಹಾಗಾಗಿ, ಉತ್ತಮ ಪ್ರಜೆಗಳನ್ನು ರೂಪಿಸುವುದಕ್ಕಾಗಿ ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಅಡಿಪಾಯ ಹಾಕಬೇಕು. ಅಂಥ ಅಡಿಪಾಯ ಹಾಕುವ ಅಂಗನವಾಡಿಗಳು ಸಬಲೀಕರಣಗೊಳ್ಳಬೇಕಾದ ತುರ್ತು ಅಗತ್ಯವಿದೆ.

ಎಷ್ಟೋ ಅಂಗನವಾಡಿಗಳಿಗೆ ಕಾಂಪೌಂಡ್‌ ಇಲ್ಲ. ಮಕ್ಕಳಿಗೆ ಆಡಲು ಮೈದಾನವಿಲ್ಲ. ಫ್ಯಾನ್ ಶೌಚಾಲಯ ಶುದ್ಧ ಕುಡಿಯುವ ನೀರಿನ ಸೌಲಭ್ಯವೂ ಮರೀಚಿಕೆ. ಅಡುಗೆ ಕೋಣೆ ಊಟದ ಕೋಣೆ ಮಕ್ಕಳ ಆಟ ಪಾಠ ಎಲ್ಲವೂ ಒಂದೇ ಕೊಠಡಿಯಲ್ಲೇ ಮಾಡಬೇಕಾದ ಅನಿವಾರ್ಯತೆ. ಇಂಥ ಸ್ಥಳಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರದ್ದು ಮೈಯೆಲ್ಲ ಕಣ್ಣಾಗಿ ಮಕ್ಕಳನ್ನು ಕಾಯುವ ಹೊಣೆಗಾರಿಕೆ ಹೊರಿಸಲಾಗಿದೆ.
–ವರಲಕ್ಷ್ಮಿಎಸ್. ಸಿಐಟಿಯು ಅಧ್ಯಕ್ಷೆ

ಸಿಎಸ್‌ಆರ್‌ ಅಡಿಯಲ್ಲಿ ಸ್ಮಾರ್ಟ್ ಅಂಗನವಾಡಿ

ರಾಜ್ಯದ ಆನೇಕಲ್, ದೊಡ್ಡಬಳ್ಳಾಪುರ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಅನೇಕ ಕಡೆ ಖಾಸಗಿ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿ ಅಡಿಯಲ್ಲಿ ಸ್ಮಾರ್ಟ್ ಅಂಗನವಾಡಿಗಳನ್ನು ರೂಪಿಸಿವೆ.

ಇಲಾಖೆಯ ಅಧಿಕಾರಿಗಳ ಆಸಕ್ತಿ, ಸ್ಥಳೀಯರ ನೆರವಿನಿಂದ ಸ್ಮಾರ್ಟ್ ಅಂಗನವಾಡಿಗಳು ರೂಪುಗೊಂಡಿವೆ. ಆದರೆ, ಇದೇ ವಾತಾವರಣ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇಲ್ಲ. ಸ್ಥಳದ ಸೌಲಭ್ಯ ಕಲ್ಪಿಸಿದರೆ ಸಿಎಸ್‌ಆರ್‌ ನಿಧಿ ಅಡಿ ಅನೇಕ ಕಂಪನಿಗಳು ಅಂಗನವಾಡಿ ಕಟ್ಟಡ ಕಟ್ಟಿಸಿಕೊಡಲು ಸಿದ್ಧವಾಗಿವೆ. ಆದರೆ, ಜಾಗದ್ದೇ ಕೊರತೆಯಾಗಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಯೊಬ್ಬರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಲ್ಕೊ ಸೋಲಾರ್ ಫೌಂಡೇಷನ್ ನೆರವಿನಲ್ಲಿ ಕೇವಲ ₹1.10 ಲಕ್ಷ ವೆಚ್ಚದಲ್ಲಿ 10 ಅಂಗನವಾಡಿಗಳನ್ನು ಸ್ಮಾರ್ಟ್ ಕೇಂದ್ರಗಳಾಗಿ ರೂಪಿಸಲಾಗಿದೆ. ಇದರಲ್ಲಿ ಶೇ 50ರಷ್ಟು ಪಾಲನ್ನು ಸ್ಥಳೀಯರು ಭರಿಸಿದ್ದಾರೆ ಎನ್ನುತ್ತಾರೆ ಸ್ಮಾರ್ಟ್ ಅಂಗನವಾಡಿ ಕೇಂದ್ರಕ್ಕೆ ಶ್ರಮಿಸಿದ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ.

ದೊಡ್ಡಬಳ್ಳಾಪುರ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಖಾಸಗಿ ಕಂಪನಿಯೊಂದು ಇಗ್ಲೂ ಮಾದರಿಯಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರ

ಮಾದರಿ ಅಂಗನವಾಡಿ

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಣಿ ಹಾಗೂ ಕಾರ್ಕಳ ತಾಲ್ಲೂಕಿನ ಶ್ರೀದುರ್ಗದಲ್ಲಿರುವ ಮಾದರಿ ಅಂಗನವಾಡಿ ಕೇಂದ್ರಗಳು ರಾಜ್ಯಕ್ಕೆ ಮಾದರಿಯಾಗಿ ಗುರುತಿಸಿಕೊಂಡಿವೆ. ಎರಡೂ ಅಂಗನವಾಡಿ ಕೇಂದ್ರಗಳಲ್ಲಿ ಹೊರಾಂಗಣ ಆಟದ ಮೈದಾನ, ಗೋಡೆಗಳ ಮೇಲೆ ಮಕ್ಕಳ ಸ್ನೇಹಿ ಚಿತ್ರಕಲೆ, ಆಹಾರ ಪದಾರ್ಥಗಳ ದಾಸ್ತಾನಿಗೆ ಪ್ರತ್ಯೇಕ ಕೋಣೆ, ಆಟಿಕೆ, ಕಾಂಪೌಂಡ್‌ ಹಾಗೂ ಇಂಟರ್‌ನೆಟ್‌ ಸೌಲಭ್ಯ ಆಧಾರಿತ ಸ್ಮಾರ್ಟ್‌ ಟಿ.ವಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಮಕ್ಕಳು ಆಟವಾಡುತ್ತ ಕಲಿಯಲು ಪೂರಕ ವಾತಾವರಣ ನಿರ್ಮಾಣ ಮಾಡಲಾಗಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ಎಜಾಕ್ಸ್‌ ಎಂಜಿನಿಯರಿಂಗ್‌ ಪ್ರೈವೆಟ್‌ ಲಿಮಿಟೆಡ್‌ ಸಿಎಸ್‌ಆರ್‌ ನಿಧಿಯಡಿ ₹ 23 ಲಕ್ಷ ವೆಚ್ಚದಲ್ಲಿ ಇಗ್ಲೂ ಮಾದರಿಯ (ಹಿಮಾಚ್ಛಾದಿತ ಧ್ರುವ ಪ್ರದೇಶದಲ್ಲಿ ಅರ್ಧ ವೃತ್ತಾಕಾರವಾಗಿರುವ ಮನೆ) ನೂತನ ವಿನ್ಯಾಸದಲ್ಲಿ ನಿರ್ಮಿಸಿರುವ ಆಕರ್ಷಕ ವಿನ್ಯಾಸದ ಅಂಗನವಾಡಿ ಕಟ್ಟಡ ಗಮನ ಸೆಳೆಯುತ್ತಿದೆ.

ಒಂದೇ ಸೂರಿನಡಿ ಪುಟ್ಟ ಮಕ್ಕಳ ಕಲಿಕೆ, ಆಟ, ಶೌಚಾಲಯ, ಅಡುಗೆ ಮನೆ, ಊಟದ ಮನೆ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ.

ಪೂರಕ ಮಾಹಿತಿ: ಸಂಧ್ಯಾ ಹೆಗಡೆ, ಮಂಜುನಾಥ ಎಲ್., ಬಾಲಚಂದ್ರ ಎಚ್‌., ಅನಿತಾ ಎಚ್., ಮಲ್ಲಿಕಾರ್ಜುನ ನಾಲವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.