ಹುಬ್ಬಳ್ಳಿ: ಎಪಿಎಂಸಿ ಕಾಯ್ದೆಗೆ 2020ರ ಆಗಸ್ಟ್‌ನಲ್ಲಿ ತಿದ್ದುಪಡಿ ಮಾಡಿ, ಮಾರುಕಟ್ಟೆ ಪ್ರಾಂಗಣದ ಹೊರಗೆ ಮುಕ್ತ ವಹಿವಾಟಿಗೆ ಅವಕಾಶ ಕಲ್ಪಿಸಿದ ನಂತರ ಅವುಗಳ ನಿರ್ವಹಣಾ ವೆಚ್ಚಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಇದರ ಜತೆಗೆ ₹100ಕ್ಕೆ ₹1.60 ಇದ್ದ ಸೆಸ್ ಅನ್ನು ಈಗ 60 ಪೈಸೆಗೆ ಇಳಿಸಿರುವುದು ಎಪಿಎಂಸಿಗಳ ಆದಾಯಕ್ಕೆಗಾಯದ ಮೇಲೆ ಬರೆ ಎಳೆದಂತಾಗಿದೆ. ಅದನ್ನೇ ನಂಬಿಕೊಂಡಿದ್ದ ರೈತರ, ಎಪಿಎಂಸಿ ಹಮಾಲಿಗಳ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.
ಹೊಸ ಕಾಯ್ದೆ ತಂದು ವರ್ಷ ಕಳೆದಿದ್ದು, ರಾಜ್ಯದಲ್ಲಿರುವ ಶೇ 60ಕ್ಕೂ ಹೆಚ್ಚು ಎಪಿಎಂಸಿಗಳು ನಿತ್ಯದ ನಿರ್ವಹಣೆ, ಭದ್ರತಾ ಖರ್ಚು ನಿಭಾಯಿಸುವುದಕ್ಕೂ ಕಷ್ಟ ಪಡುತ್ತಿವೆ. ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸುತ್ತಿದ್ದ ಎಪಿಎಂಸಿಗಳ ಆದಾಯ ಅರ್ಧಕ್ಕೆ ಇಳಿದಿದೆ. ಇನ್ನೆರಡು ವರ್ಷಗಳಲ್ಲಿ ಅವುಗಳ ಆದಾಯವೂ ನಿಂತು ಹೋಗಲಿದೆ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.
‘ಹುಬ್ಬಳ್ಳಿಯ ಎಪಿಎಂಸಿಗೆ ನಿತ್ಯ 150 ರಿಂದ 200 ಲಾರಿಗಳು ಬರುತ್ತಿದ್ದವು. ಈಗ 50 ರಿಂದ 60 ಲಾರಿಗಳು ಬರುತ್ತಿವೆ. ಲೈಸೆನ್ಸ್ ಹೊಂದಿದ 1,200 ಮಂದಿ ಕಾರ್ಮಿಕರಿದ್ದೇವೆ. ಇತ್ತೀಚೆಗೆ ಕೆಲಸವೇ ಇಲ್ಲದಂತಾಗಿದೆ. ವರ್ಷದಲ್ಲಿ 3 ರಿಂದ 4 ತಿಂಗಳು ಮಾತ್ರ ಪರವಾಗಿಲ್ಲ ಎನ್ನುವಷ್ಟು ಕೆಲಸ ಇರುತ್ತದೆ. ಉಳಿದ ದಿನ ಖಾಲಿ ಕುಳಿತುಕೊಳ್ಳಬೇಕಾದ ಸ್ಥಿತಿ ಇದೆ’ ಎಂದು ಸಂಕಷ್ಟ ಬಿಚ್ಚಿಡುತ್ತಾರೆ ಎಪಿಎಂಸಿ ಹಮಾಲಿ ಕಾರ್ಮಿಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಅಂಬಿಗೇರ.
ಕೃಷಿ ಉತ್ಪನ್ನ ಮಾರುಕಟ್ಟೆಗಿಂತ ಉತ್ತಮ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ತಿದ್ದುಪಡಿ ತರಲಾಗಿದೆ ಎನ್ನು
ವುದು ಸರ್ಕಾರದ ವಾದ. ಆದರೆ, ವಾಸ್ತವದಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ಬೆಲೆ ದೊರೆಯುತ್ತಿದೆ. ಹೊರಗಡೆ ಖರೀದಿ ಮಾಡುವ ವ್ಯಾಪಾರಸ್ಥರು ರೈತರಿಗೆ ಹಣ ಪಾವತಿಸದೆ ಓಡಿ ಹೋದ ಪ್ರಕರಣಗಳು ಆಗಾಗ ದಾಖಲಾಗುತ್ತಲೇ ಇವೆ.
ಎಪಿಎಂಸಿಯಲ್ಲಿ ಖರೀದಿ ಮಾಡಿದರೆ ₹100 ಕ್ಕೆ 60 ಪೈಸೆ ಸೆಸ್ ಕಟ್ಟಬೇಕು. ಈ ಮೊದಲು ಹೊರಗಡೆ ಖರೀದಿ ನಡೆಯುತ್ತಿತ್ತು. ಆದರೆ, ಸೆಸ್ ಪಾವತಿಸಬೇಕಿತ್ತು. ಈಗ ಹೊರಗಡೆ ಖರೀದಿಸಿದರೆ, ಸೆಸ್ ಕಟ್ಟಬೇಕಿಲ್ಲ. ವ್ಯಾಪಾರಿಗಳು ಎಪಿಎಂಸಿಯಿಂದ ಕಾಲು ಕೀಳಲಾರಂಭಿಸದ್ದಾರೆ. ಇನ್ನೂ ಎಪಿಎಂಸಿಯಲ್ಲಿರುವವರು ಬಾಡಿಗೆ, ವಿದ್ಯುತ್ ಬಿಲ್, ನೌಕರರಿಗೆ ವೇತನ ನೀಡಲೂ ತೊಂದರೆ ಎದುರಿಸುವಂತಾಗಿದೆ. ಹೊರಗಡೆ ಹೋಗಿ ಕೆಲಸ ಮಾಡಲಾಗದ ಹಮಾಲಿ ಕಾರ್ಮಿಕರ ಕುಟುಂಬಗಳು ಆದಾಯವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.
ಹೊರಗಡೆ ನಡೆಯುತ್ತಿದ್ದ ವಹಿವಾಟಿನಿಂದ ಬರುತ್ತಿದ್ದ ಆದಾಯ ನಿಂತು ಹೋಗಿದೆ. ಜೊತೆಗೆ ಈ ಮೊದಲು ಎಪಿಎಂಸಿಯ ಒಳಗೆ ವ್ಯಾಪಾರಸ್ಥರಿಂದ ಪ್ರತಿ ₹100 ವಹಿವಾಟಿಗೆ ಒಂದೂವರೆ ರೂಪಾಯಿ ಸೆಸ್ ಸಂಗ್ರಹಿಸಲಾಗುತ್ತಿತ್ತು. ಅದನ್ನು ಈಗ 60 ಪೈಸೆಗೆ ಇಳಿಸಿರುವುದೂ ಆದಾಯ ಕುಸಿತಕ್ಕೆ ಕಾರಣವಾಗಿದೆ.
ಸೌಲಭ್ಯಕ್ಕೆ ಆದಾಯದ ಕೊರತೆ: ಎಪಿಎಂಸಿಗಳಿಗೆ ಸೆಸ್‌ನಿಂದ ಬರುವ ಆದಾಯದಲ್ಲಿ ಶೇ 0.01ರಷ್ಟನ್ನು ಸಾಫ್ಟ್‌ವೇರ್ ಒದಗಿಸಿರುವ ರಿಮ್ಸ್‌ಗೆ, ಶೇ 10 ಅನ್ನು ಆವರ್ತ ನಿಧಿಗೆ, ಶೇ 0.05 ರಷ್ಟನ್ನು ಕೃಷಿ ಮಾರಾಟ ಮಂಡಳಿಗೆ ನೀಡಬೇಕು. ಉಳಿದ ಮೊತ್ತವನ್ನು ನಿರ್ವಹಣೆಯ ವೆಚ್ಚಗಳ ಜತೆಗೆ ಎಪಿಎಂಸಿಗಳ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಆದಾಯ ಕುಸಿತದಿಂದಾಗಿ ಮುಂದಿನ ದಿನಗಳಲ್ಲಿ ಎಪಿಎಂಸಿಗಳಲ್ಲಿ ಸೌಲಭ್ಯ ಒದಗಿಸಲು ಸಾಧ್ಯವಾಗುವುದಿಲ್ಲ.
ಡ್ರೈವರ್ ಇಲ್ಲದ್ದಕ್ಕೆ ಶೆಡ್ ಸೇರಿದ ಜೀಪ್:
ಹುಬ್ಬಳ್ಳಿ: ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುತ್ತಿಗೆಯಡಿ ಕಾರ್ಯ ನಿರ್ವಹಿಸುತ್ತಿದ್ದ ಒಂಬತ್ತು ಮಂದಿಯಲ್ಲಿ ಏಳು ಮಂದಿಯನ್ನು ಉದ್ಯೋಗದಿಂದ ತೆಗೆದು ಹಾಕಲಾಗಿದೆ.
ಅಧ್ಯಕ್ಷರ ವಾಹನದ ಚಾಲಕನನ್ನು ಮಾತ್ರ ಉಳಿಸಿಕೊಂಡು, ಕಾರ್ಯದರ್ಶಿ ಜೀಪ್ ಚಾಲಕನನ್ನು ಕೆಲಸದಿಂದ ತೆಗೆಯಲಾಗಿದೆ. ಹೀಗಾಗಿ, ಜೀಪ್ ಈಗ ಶೆಡ್ ಸೇರಿದೆ. ಕೆಲವು ಎಪಿಎಂಸಿಗಳಲ್ಲಿನ ವಾಹನಗಳನ್ನು ಬೇರೆ ಇಲಾಖೆಗಳಿಗೆ ನೀಡುವ ಪ್ರಕ್ರಿಯೆಗೂ ಚಾಲನೆ ಸಿಕ್ಕಿದೆ.
ವಿದ್ಯುತ್ ಬಿಲ್, ನಿರ್ವಹಣಾ ವೆಚ್ಚ ನಿಭಾಯಿಸಲೂ ಸಂಕಷ್ಟ:
ಹುಬ್ಬಳ್ಳಿ: ತಾಲ್ಲೂಕು ಹಾಗೂ ಪಟ್ಟಣಗಳಲ್ಲಿದ್ದ ಎಪಿಎಂಸಿಗಳ ಆದಾಯದಲ್ಲಿ ತೀವ್ರ ಕುಸಿತವಾಗಿದೆ. ರಾಜ್ಯದಲ್ಲಿರುವ ಎಪಿಎಂಸಿಗಳ ಪೈಕಿ ಶೇ 55ರಷ್ಟು ಎಪಿಎಂಸಿಗಳ ಆದಾಯ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ 10ಕ್ಕೆ ಕುಸಿದಿದ್ದರೆ, ಶೇ 30 ರಷ್ಟು ಎಪಿಎಂಸಿಗಳ ಆದಾಯ ಶೇ 30ಕ್ಕೆ, ಉಳಿದ ಎಪಿಎಂಸಿಗಳದ್ದು ಅರ್ಧಕ್ಕೆ ಇಳಿದಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ಎಪಿಎಂಸಿ ಆದಾಯ ₹60 ಲಕ್ಷದಿಂದ ₹4 ಲಕ್ಷಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ಎಪಿಎಂಸಿಗಳ ವಿದ್ಯುತ್ ಬಿಲ್, ನಿರ್ವಹಣಾ ವೆಚ್ಚ ಭರಿಸುವುದು ಕಷ್ಟವಾಗಿದೆ.
ಮುಕ್ತ ಮಾರುಕಟ್ಟೆ: ವಂಚನೆಗಿಲ್ಲ ಕಡಿವಾಣ?
ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಅಂಕಲಗಿಯಲ್ಲಿ 10 ಲಾರಿ ಸೋಯಾಬಿನ್ ವಹಿವಾಟು ಎಪಿಎಂಸಿ ಹೊರಗಡೆ ನಡೆದಿತ್ತು. ಆರಂಭದಲ್ಲಿ ರೈತರಿಗೆ ಹಣ ಪಾವತಿಸಿದ್ದ ವಿಶ್ವಾಸ ಗಳಿಸಿದ್ದ ವ್ಯಾಪಾರಿ, ನಂತರ ರಾತ್ರೋರಾತ್ರಿ ಪರಾರಿಯಾದ. ವಂಚನೆ ದೂರು ದಾಖಲಾಯಿತು. ಆದರೆ, ರೈತರಿಗೆ ಮಾತ್ರ ಪರಿಶ್ರಮದ ಫಲ ದೊರೆತಿಲ್ಲ. ರಾಜ್ಯದ ಹಲವೆಡೆ ಇಂತಹ ಪ್ರಕರಣಗಳು ನಡೆದಿವೆ.
ಎಪಿಎಂಸಿ ಹೊರಗಡೆಯ ವ್ಯವಹಾರ ಚೀಟಿಯಲ್ಲಿ ನಡೆಯುತ್ತದೆ. ಮೋಸ ಮಾಡಿ ಹೋದರೆ, ದಾಖಲೆಗಳೂ ಇರುವುದಿಲ್ಲ. ಮಾರುಕಟ್ಟೆಗಿಂತ ₹100 ಹೆಚ್ಚಿನ ಬೆಲೆ ಆಮಿಷ ತೋರಿಸಿ ಖರೀದಿಸಿ, ಪರಾರಿಯಾಗುತ್ತಾರೆ.
ದಾವಣಗೆರೆ ಎಪಿಎಂಸಿ ಯಾರ್ಡ್‌ನಲ್ಲಿ ರೈತರು ಹಾಗೂ ವರ್ತಕರಿಂದ ಖರೀದಿಸಿದ್ದ ಮೆಕ್ಕೆಜೋಳಕ್ಕೆ ಹಣ ನೀಡದೇ ವಂಚಿಸಿದ ಪ್ರಕರಣ ನಡೆದಿದೆ. 96 ರೈತರು ಹಾಗೂ 29 ವರ್ತಕರಿಗೆ ₹ 2.68 ಕೋಟಿ ವಂಚಿಸಲಾಗಿತ್ತು. ಡಿಸಿಆರ್‌ಬಿ ಪೊಲೀಸರು ಆರೋಪಿಗಳಿಂದ ಅಷ್ಟೂ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಎಚ್.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕಿನ ಹಲವು ರೈತರಿಗೆ ಅಂದಾಜು ₹ 10ರಿಂದ ₹ 15 ಲಕ್ಷ ಹಣ ಪಾವತಿಸದೆ ಖರೀದಿದಾರರು ವಂಚಿಸಿದ್ದಾರೆ. ಹತ್ತಿ, ಚಿಯಾ ಹಾಗೂ ಶುಂಠಿಯನ್ನು ಖರೀದಿಸಿ, 2 ತಿಂಗಳಾದರೂ ಹಣ ಪಾವತಿಸಿಲ್ಲ ಎಂದು ರೈತರು ದೂರುತ್ತಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ‘ಈ ಹಿಂದೆ ಹಣ ನೀಡದೇ ಹೋದರೆ ಲೈಸೆನ್ಸ್ ರದ್ದಾಗುತ್ತದೆ, ಎಪಿಎಂಸಿಗಳು ಕಾನೂನು ಕ್ರಮ ಕೈಗೊಳ್ಳುತ್ತವೆ ಎಂಬ ಅಂಜಿಕೆ ಖರೀದಿದಾರರಲ್ಲಿ ಇತ್ತು. ಆದರೆ, ಈಗ ಅದು ಇಲ್ಲವಾಗಿದೆ. ಹೀಗಾಗಿಯೇ ಖರೀದಿದಾರರು ರೈತರನ್ನು ಸತಾಯಿಸುತ್ತಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.