ADVERTISEMENT

ಒಳನೋಟ: ಬಾಡಿಗೆಯಲ್ಲಿ ಎಪಿಎಂಸಿ ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 22:30 IST
Last Updated 6 ನವೆಂಬರ್ 2021, 22:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದಾವಣಗೆರೆ: 2020–21ನೇ ಸಾಲಿನಲ್ಲಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗೆ ₹ 6 ಕೋಟಿ ಮಾರುಕಟ್ಟೆ ಶುಲ್ಕ ಸಂಗ್ರಹಿಸುವ ಗುರಿ ಇದ್ದು, ₹ 5.73 ಕೋಟಿ ಸಂಗ್ರಹವಾಗಿತ್ತು. ಪ್ರಸಕ್ತ ಸಾಲಿನಲ್ಲಿ ₹ 6 ಕೋಟಿಗೆ ₹ 80 ಲಕ್ಷ ಮಾತ್ರ ಸಂಗ್ರಹವಾಗಿದೆ.

ಎಪಿಎಂಸಿಗಳ ವಹಿವಾಟು ಕುಸಿದಿರುವುದಕ್ಕೆ ಮೇಲಿನ ಅಂಕಿ ಅಂಶಗಳೇ ಸಾಕು. ತಿಂಗಳಿಗೆ ₹ 10 ಲಕ್ಷ ಬಾಡಿಗೆ ಬರುವುದರಿಂದ ಇಲ್ಲಿನ ಎಪಿಎಂಸಿ ಹೇಗೋ ನಿರ್ವಹಣೆ ಮಾಡಿಕೊಂಡು ಹೋಗುತ್ತಿದೆ.

ಎಪಿಎಂಸಿ ತಿದ್ದುಪಡಿ ಕಾಯ್ದೆ ಬರುವುದಕ್ಕೂ ಮುನ್ನ ಶೇ 92ರಷ್ಟು ಮಾರುಕಟ್ಟೆಯ ಹೊರಗೆ ಹಾಗೂ ಶೇ 8ರಷ್ಟು ಹೊರಗೆ ವಹಿವಾಟು ನಡೆಯುತ್ತಿತ್ತು. ಹೊರಗಡೆ ವಹಿವಾಟು ನಡೆದರೂ ಮಾರುಕಟ್ಟೆಯ ಶುಲ್ಕ ಸಂಗ್ರಹವಾಗುತ್ತಿತ್ತು. ಕಾಯ್ದೆಯ ತಿದ್ದುಪಡಿ ಬಳಿಕ ವಹಿವಾಟು ಕುಸಿದಿದೆ. ಕಾಯ್ದೆಗೂ ಮೊದಲು ತಿಂಗಳಿಗೆ ₹ 2 ಕೋಟಿಯಿಂದ ₹ 3 ಕೋಟಿ ಸಂಗ್ರವಾಗುತ್ತಿದ್ದ ಶುಲ್ಕ ಈಗ ₹15 ಲಕ್ಷಕ್ಕೆ ಕುಸಿದಿದೆ.

ADVERTISEMENT

ವಿಶೇಷವಾಗಿ ಮೆಕ್ಕೆಜೋಳ ಹಾಗೂ ಭತ್ತದ ವಹಿವಾಟು ಹೊರಗಡೆಯೇ ಹೆಚ್ಚಾಗಿ ನಡೆಯುತ್ತಿದೆ. ಖಾಸಗಿ ಕಂಪನಿಗಳು ಮೆಕ್ಕೆಜೋಳವನ್ನು ಹೊರಗಡೆಯೇ ಹೆಚ್ಚಾಗಿ ಖರೀದಿಸುತ್ತಿವೆ. ಭದ್ರತೆ, ನಿರ್ವಹಣೆ ಹಾಗೂ ಸ್ವಚ್ಛತೆಗೆ ₹15 ಲಕ್ಷ ವೆಚ್ಚವಾಗುತ್ತಿದ್ದು, ಅಭಿವೃದ್ಧಿಗೆ ಹಣ ಉಳಿಯುತ್ತಿಲ್ಲ.

ಜಗಳೂರು, ಹೊನ್ನಾಳಿ ಹಾಗೂ ಹರಿಹರ ತಾಲ್ಲೂಕುಗಳ ಎಪಿಎಂಸಿಗಳಲ್ಲಿ ಮಾರುಕಟ್ಟೆ ಶುಲ್ಕ ಸಂಗ್ರಹ ಕ್ಷೀಣಿಸುತ್ತಿದ್ದು, ನಿರ್ವಹಣೆ ಕಷ್ಟವಾಗಿದೆ. ಚನ್ನಗಿರಿ ಎಪಿಎಂಸಿಯಲ್ಲಿ ತೋಟ ಉತ್ಪನ್ನಗಳ ಅಡಿಕೆ ಮಾರುಕಟ್ಟೆ ಸಂಘ ಹಾಗೂ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ಇರುವುದರಿಂದ ಸೆಸ್ ಸಂಗ್ರಹದಲ್ಲಿ ಜಿಲ್ಲೆಯಲ್ಲೇ 2ನೇ ಸ್ಥಾನದಲ್ಲಿದೆ.

ಕೊಬ್ಬರಿ ವಹಿವಾಟು ಕುಸಿತ

ತುಮಕೂರು: ಏಷ್ಯಾದಲ್ಲೇ ಅತಿ ದೊಡ್ಡದಾದ ತಿಪಟೂರು ಕೊಬ್ಬರಿ ಮಾರುಕಟ್ಟೆ ಎನ್ನುವ ಗರಿಮೆಗೆ ಹೊಸ ಕಾಯ್ದೆ ಪೆಟ್ಟು ನೀಡಿದ್ದು, ವಹಿವಾಟು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

ಕೃಷಿ ಉತ್ಪನ್ನಗಳ ಮುಕ್ತ ಮಾರಾಟಕ್ಕೆ ಅವಕಾಶ ನೀಡಿದ ನಂತರ ಕೊಬ್ಬರಿ ಆವಕ ತಗ್ಗಿದ್ದು, ವಹಿವಾಟಿನ ಚಿತ್ರಣ ಸಿಗದಾಗಿದೆ. ಎಪಿಎಂಸಿ ವ್ಯಾಪ್ತಿಯಲ್ಲಿ 576 ವರ್ತಕರು (ಖರೀದಿದಾರರು), 324 ದಲ್ಲಾಳಿಗಳು, ಮೂವರು ರಫ್ತುದಾರರು ಇದ್ದಾರೆ. 2 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಮಾರುಕಟ್ಟೆಗೆ ಕೊಬ್ಬರಿ ಬರುವುದು ಕಡಿಮೆಯಾದಂತೆ ವರ್ತಕರು ಹಳ್ಳಿಗಳಿಗೆ ಹೋಗಿ ಖರೀದಿಸುತ್ತಿದ್ದಾರೆ. ದಲ್ಲಾಳಿಗಳು ಎಪಿಎಂಸಿ ಬಿಟ್ಟು ಊರು ಸುತ್ತುತ್ತಿದ್ದಾರೆ. ಎಷ್ಟು ಬೆಲೆ? ಯಾವ ಗುಣಮಟ್ಟಕ್ಕೆ ಯಾವ ದರ ಸಿಗುತ್ತಿದೆ? ಕಡಿಮೆ ಬೆಲೆಗೆ ಮಾರಾಟ ಮಾಡಿ ಮೋಸ ಹೋಗಿದ್ದಾರೆಯೇ ಎಂಬ ಮಾಹಿತಿಯೂ ಗೊತ್ತಾಗುವುದಿಲ್ಲ. ಎಪಿಎಂಸಿ ಒಳಗೆ ನಡೆಯುವ ವಹಿವಾಟು ಮಾತ್ರ ಲೆಕ್ಕಕ್ಕೆ ಸಿಗುತ್ತಿದೆ.

‘ಕೃಷಿ ಉತ್ಪನ್ನಗಳನ್ನು ಜಿಎಸ್‍ಟಿಯಿಂದ ಮುಕ್ತಗೊಳಿಸಬೇಕು. ಇದರಿಂದ ಕೇವಲ ಅಧಿಕಾರಿಗಳಿಗೆ ಲಾಭವಾಗುತ್ತಿದ್ದು, ರೈತರು–ವರ್ತಕರು ತೊಂದರೆಗೆ ಸಿಲುಕಿದ್ದಾರೆ’ ಎನ್ನುತ್ತಾರೆ ತಿಪಟೂರು ಎಪಿಎಂಸಿ ಅಧ್ಯಕ್ಷ ಎಚ್.ಬಿ. ದಿವಾಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.