ದಾವಣಗೆರೆ: ಜಮೀನಿನಲ್ಲಿ ವರ್ಷವಿಡೀ ಬೆವರು ಹರಿಸಿದರೂ ಬದುಕಿನ ಬಂಡಿಯನ್ನು ಎಳೆಯಲು ಬೇಕಾದ ಕನಿಷ್ಠ ಆದಾಯವೂ ಕೈಗೆಟುಕದೆ ಬಯಲುಸೀಮೆ ಭಾಗದ ರೈತರು ಹತಾಶರಾಗಿ ಸಾಂಪ್ರದಾಯಿಕ ಕೃಷಿ ಬೆಳೆಗಳಿಂದ ವಿಮುಖರಾಗುತ್ತಿದ್ದಾರೆ. ಅಡಿಕೆ ಬೆಳೆಗಾರರ ಬದುಕಿನಲ್ಲಾಗುತ್ತಿರುವ ‘ಆರ್ಥಿಕ’ ಹಾಗೂ ‘ಸಾಮಾಜಿಕ’ ಬದಲಾವಣೆಗಳಿಂದ ಪ್ರಭಾವಿತರಾಗುತ್ತಿರುವ ಈ ಭಾಗದ ರೈತರು, ‘ಹೆಚ್ಚು ಆದಾಯ ಪಡೆಯಬೇಕು’ ಎಂಬ ಕನಸಿನ ಬೆನ್ನೇರಿ ಅಡಿಕೆ ತೋಟ ಮಾಡುತ್ತಿದ್ದಾರೆ.
ಇದರ ಪರಿಣಾಮವೇ ಬಯಲು ಸೀಮೆಯ ಹಲವು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯುವ ಪ್ರದೇಶ ಐದಾರು ವರ್ಷಗ ಳಲ್ಲೇ ದುಪ್ಪಟ್ಟಾಗಿದ್ದು, ಅಲ್ಲೂ ಅಡಿಕೆಯ ಘಮಲು ಪಸರಿಸುತ್ತಿದೆ.
ಕರಾವಳಿ– ಮಲೆನಾಡಿನ ಪ್ರಮುಖ ಬೆಳೆಯಾಗಿದ್ದ ಅಡಿ ಕೆಗೆ ಸಿಗುತ್ತಿರುವ ‘ಚಿನ್ನದ ಬೆಲೆ’ಯು ಬಯಲು ಸೀಮೆಯ ರೈತರನ್ನು ಬೆರಗುಗೊಳಿಸಿದೆ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಗದಗ, ಬಳ್ಳಾರಿ ಜಿಲ್ಲೆಗಳ ರೈತರು ಅಲ್ಲಿರುವ ಅಲ್ಪಸ್ವಲ್ಪ ನೀರಾವರಿ ಸೌಲಭ್ಯ ಬಳಸಿಕೊಂಡು ಅಡಿಕೆ ತೋಟ ನಿರ್ಮಿಸುತ್ತಿದ್ದಾರೆ. ಕರಾವಳಿ–ಮಲೆನಾಡಿನ ಅಡಿಕೆ ಬೆಳೆಗಾರರೊಂದಿಗೆ ಅಲ್ಲಿನ ರೈತರು ಪೈಪೋಟಿಗೆ ಇಳಿದಿದ್ದಾರೆ.
ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ 2021ರ ಅಂತ್ಯಕ್ಕೆ 5.63 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವಾರ್ಷಿಕ ಅಂದಾಜು 8.64 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ.
2017–18ರಿಂದ 2021–22ವರೆಗಿನ ಐದು ವರ್ಷಗಳ ಅವಧಿಯಲ್ಲಿ ತುಮಕೂರು ಜಿಲ್ಲೆಯಲ್ಲಿ 34,839 ಹೆಕ್ಟೇರ್ (ಶೇ 99), ಚಿತ್ರದುರ್ಗ ಜಿಲ್ಲೆಯಲ್ಲಿ 20,061 ಹೆಕ್ಟೇರ್ (ಶೇ 85), ದಾವಣಗೆರೆ ಜಿಲ್ಲೆಯಲ್ಲಿ 28,811 ಹೆಕ್ಟೇರ್ (ಶೇ 60) ಹಾಗೂ ಹಾವೇರಿ ಜಿಲ್ಲೆಯಲ್ಲಿ 5,901 ಹೆಕ್ಟೇರ್‌ನಷ್ಟು (ಶೇ 301) ಅಡಿಕೆ ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 24,214 ಹೆಕ್ಟೇರ್ (ಶೇ 109) ಏರಿಕೆಯಾಗಿದೆ.
ಐದು ವರ್ಷಗಳ ಹಿಂದೆ ಗದಗ ಜಿಲ್ಲೆಯಲ್ಲಿ ಕೇವಲ 22 ಎಕರೆಯಷ್ಟಿದ್ದ ಅಡಿಕೆ ಕ್ಷೇತ್ರ ಇದೀಗ 250 ಎಕರೆಗೆ ವಿಸ್ತರಣೆಗೊಂಡಿದೆ. ಮುಂಡರಗಿ, ಶಿರಹಟ್ಟಿ ಮತ್ತು ಲಕ್ಷೇಶ್ವರ ತಾಲ್ಲೂಕಿನ ರೈತರು ಅಡಿಕೆ ಬೆಳೆಯತ್ತ ಒಲವು ತೋರಿಸುತ್ತಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಹೂವಿನಹಡಗಲಿ, ಹೊಸಪೇಟೆ ಹಾಗೂ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕುಗಳಲ್ಲೂ ಅಡಿಕೆ ತೋಟಗಳು ತಲೆ ಎತ್ತುತ್ತಿವೆ.
ಒಂದು ಎಕರೆ ಅಡಿಕೆ ತೋಟದಿಂದ ಖರ್ಚೆಲ್ಲ ತೆಗೆದು ವರ್ಷಕ್ಕೆ ₹ 3.5 ಲಕ್ಷ ಲಾಭ ಸಿಗುತ್ತಿದೆ. ಈ ತೋಟದ ಪಕ್ಕದಲ್ಲೇ ಮೆಕ್ಕೆಜೋಳ ಮತ್ತಿತರ ಬೆಳೆ ಬೆಳೆಯುತ್ತಿರುವ ರೈತರಿಗೆ ಎಕರೆಗೆ ₹ 20,000 ಲಾಭ ಸಿಕ್ಕರೇ ಹೆಚ್ಚು ಎಂಬ ಸ್ಥಿತಿ ಇದೆ. ಅಡಿಕೆ ಬೆಳೆಗಾರರು ನಡೆಸುತ್ತಿರುವ ಐಷಾರಾಮಿ ಜೀವನ ಬೇರೆ ಬೆಳೆ ನೆಚ್ಚಿಕೊಂಡ ರೈತರನ್ನು ಆಕರ್ಷಿಸುತ್ತಿದೆ. ‘ವರ್ಷವಿಡೀ ದುಡಿದರೂ ಕೈಗೆ ‘ಬಿಡಿಗಾಸು’ ಸಿಗುವುದಾದರೆ, ನಾವೇಕೆ ಇನ್ನೂ ಕೃಷಿ ಬೆಳೆಯನ್ನೇ ನಂಬಿಕೊಂಡು ಬದುಕಬೇಕು’ ಎಂಬ ಭಾವನೆಯೊಂದಿಗೆ ಅಡಿಕೆ ತೋಟದತ್ತ ಮುಖಮಾಡುತ್ತಿದ್ದಾರೆ.
ಕಣ್ಣು ಕುಕ್ಕುತ್ತಿರುವ ದರ: ಏಳೆಂಟು ವರ್ಷಗಳ ಹಿಂದೆ ಅಡಿಕೆ ದರವು ಒಂದು ಕ್ವಿಂಟಲ್‌ಗೆ ₹ 80,000ದ ಗಡಿ ದಾಟಿತ್ತು. ಕಡಿಮೆ ಖರ್ಚು ಹಾಗೂ ಅಧಿಕ ಲಾಭ ತಂದುಕೊಡುವ ಅಡಿಕೆಗೆ ಕೆಲವು ವರ್ಷಗಳಿಂದ ಒಳ್ಳೆಯ ದರ ಇದೆ. ಕಳೆದ ಅಕ್ಟೋಬರ್‌ನಲ್ಲಿ ದರ ₹ 53,000 ಇತ್ತು. ಕೇಂದ್ರ ಸರ್ಕಾರ ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಅನುಮತಿ ನೀಡಿದ್ದರಿಂದ ದರ ತುಸು ಕಸಿದಿದ್ದರೂ ಕನಿಷ್ಠ ₹ 45,000 ಬೆಲೆ ಈಗಲೂ ಸಿಗುತ್ತಿದೆ. ಅಡಿಕೆಗೆ ಸಿಗುತ್ತಿರುವ ‘ಬಂಗಾರದ ಬೆಲೆ’ಯು ಭತ್ತ, ಮೆಕ್ಕೆಜೋಳ, ತರಕಾರಿ, ದಾಳಿಂಬೆ, ಕಬ್ಬು ಬೆಳೆಯುವ ರೈತರ ಕಣ್ಣು ಕುಕ್ಕುತ್ತಿದ್ದು, ನಾಲ್ಕೈದು ಎಕರೆ ಭೂಮಿಯಲ್ಲಿ ಅಡಿಕೆ ಸಸಿ ನೆಡಲು ಆರಂಭಿಸಿದ್ದಾರೆ. ಈಗಾಗಲೇ ಅಡಿಕೆ ಬೆಳೆದವರೂ ಕ್ಷೇತ್ರ ವಿಸ್ತರಣೆಗೆ ಒತ್ತು ನೀಡುತ್ತಿದ್ದಾರೆ.
‘ಕೆಲ ವರ್ಷಗಳ ಹಿಂದೆ ಭತ್ತಕ್ಕೆ ಒಳ್ಳೆಯ ದರ ಬಂದಾಗ ದಾವಣಗೆರೆ ಜಿಲ್ಲೆಯಲ್ಲಿ ತೆಂಗಿನ ತೋಟ ತೆಗೆದು ಭತ್ತ ಬೆಳೆದಿದ್ದರು. ಈಗ ಅಡಿಕೆಯ ಸರದಿ. ಮುಂದಿನ 20–30 ವರ್ಷಗಳ ಕಾಲ ಅಡಿಕೆ ತೋಟದಿಂದ ಕನಿಷ್ಠ ಲಾಭ ಸಿಕ್ಕೇ ಸಿಗುತ್ತದೆ ಎಂಬುದು ರೈತರ ನಂಬಿಕೆಯಾಗಿದೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಹೇಳುತ್ತಾರೆ.
‘ಒಂದು ಎಕರೆ ತೋಟ ನಿರ್ವಹಣೆಗೆ ವರ್ಷಕ್ಕೆ ಗರಿಷ್ಠ ₹ 75,000 ಖರ್ಚಾಗಬಹುದು. ಎಕರೆಗೆ 8ರಿಂದ 10 ಕ್ವಿಂಟಲ್ ಇಳುವರಿ ಪಕ್ಕಾ. ₹ 45,000ಕ್ಕಿಂತಲೂ ಹೆಚ್ಚು ದರ ಇರುವುದರಿಂದ ಎಕರೆಗೆ ಕನಿಷ್ಠ ₹ 3 ಲಕ್ಷ ಲಾಭ ಸಿಗುತ್ತದೆ. ನಾವೇ ಅಡಿಕೆ ಸುಲಿಸಿ, ಒಣಗಿಸಿ ಮಾರಿದರೆ ಒಂದು ಎಕರೆಗೆ ಖೇಣಿ (ಫಸಲು ಗುತ್ತಿಗೆ) ನೀಡುವುದಕ್ಕಿಂತ ₹ 50,000 ಹೆಚ್ಚು ಲಾಭ ಸಿಗಲಿದೆ’ ಎಂಬುದು ಚನ್ನಗಿರಿ ತಾಲ್ಲೂಕು ಕಾರಿಗನೂರಿನ ರೈತ ಗುಂಟನೂರು ಮುರಗೇಶ್ ಅವರ ಲೆಕ್ಕಾಚಾರ.
‘ದಾವಣಗೆರೆಯವರೂ ಅಡಿಕೆ ಬೆಳೆಯಬಹುದಾದರೆ ನಮಗೇಕೆ ಅಸಾಧ್ಯ ಎಂಬ ಪ್ರಶ್ನೆಯೇ ಅಡಿಕೆ ಬೆಳೆಯಲು ಸ್ಫೂರ್ತಿಯಾಯಿತು. ಆರಂಭದಲ್ಲಿ ನಾಲ್ಕು ಎಕರೆಯಲ್ಲಿ ಅಡಿಕೆ ಬೆಳೆದೆ. ಈಗ 14 ಎಕರೆಗೆ ವಿಸ್ತರಿಸಿದ್ದೇನೆ. ಕಳೆದ ವರ್ಷ ₹ 13 ಲಕ್ಷ ಆದಾಯ ಬಂದಿದೆ’ ಎಂದು ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ರೈತ ರಾಮಾಂಜನೇಯ ರಾಜು ತಿಳಿಸಿದರು.
‘ಕೃಷಿ ಬೆಳೆಯನ್ನೇ ನಂಬಿಕೊಂಡಿರುವ ರೈತರು ಎಕರೆಗೆ ಅಬ್ಬಬ್ಬಾ ಎಂದರೆ ₹ 40,000 ಗಳಿಸಬಹುದು. ಅಂತೆಯೇ ಸಾಲ ಮಾಡಿ ಅಡಿಕೆ ಬೆಳೆಯುವ ‘ರಿಸ್ಕ್’ ತೆಗೆದುಕೊಳ್ಳುತ್ತಿದ್ದಾರೆ. ಬೆಳೆ ಕೈಕೊಟ್ಟರೆ ನಿರ್ವಹಿಸುವ ಸಾಮರ್ಥ್ಯವಿಲ್ಲದೆ, ಭಾರಿ ಲಾಭವಾದಾಗಿನ ಆರ್ಥಿಕ, ಸಾಮಾಜಿಕ ಅಸಮತೋಲನ ನಿಭಾಯಿಸುವ ಜಾಣ್ಮೆಯೂ ಇರುವುದಿಲ್ಲ. ಈ ಕಾರಣದಿಂದ ಇತಿಮಿತಿಯಲ್ಲೇ ಅಡಿಕೆ ಬೆಳೆಯುವುದು ಒಳಿತು’ ಎಂಬುದು ಕೃಷಿ ಇಲಾಖೆಯ ದಾವಣಗೆರೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಕಿವಿಮಾತು.
‘ಕರಾವಳಿ–ಮಲೆನಾಡಿಗೆ ಹೋಲಿಸಿದರೆ ಬಯಲುಸೀಮೆಯ ಅಡಿಕೆ ಬೆಳೆಗೆ ರೋಗಬಾಧೆ ಕಡಿಮೆ. ಮಲೆನಾಡಿನಲ್ಲಿ ರೋಗ ಕಾಣಿಸಿಕೊಂಡರೆ ಭಾರಿ ಪ್ರಮಾಣದಲ್ಲಿ ಫಸಲು ನಷ್ಟವಾಗುತ್ತದೆ. ಬಯಲು ಸೀಮೆಯಲ್ಲಿ ರೋಗದಿಂದ ಸ್ವಲ್ಪ ಇಳುವರಿ ಕಡಿಮೆಯಾದರೂ ಲಾಭ ಸಿಗುವುದರಲ್ಲಿ ಸಂದೇಹವಿಲ್ಲ. ಅಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಾಗ ಕೀಟಬಾಧೆಯಿಂದ ಇಳುವರಿ ಕುಸಿದು ಬೆಲೆ ಸ್ಥಿರವಾಗಿರುವ ಸಾಧ್ಯತೆಯೂ ಇದೆ’ ಎಂದು ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ಅಭಿಪ್ರಾಯಪಡುತ್ತಾರೆ.
ಉಷ್ಣಾಂಶ ಹೆಚ್ಚಾದರೆ ಇಳುವರಿ ಕುಸಿತ: ‘ಬಯಲು ಸೀಮೆಯ ಅಡಿಕೆ ತೋಟಗಳಲ್ಲಿ ಸವಳು– ಜವಳು ಸಮಸ್ಯೆ ಕಾಣಿಸಿಕೊಂಡಿಲ್ಲ. ಭತ್ತದ ಗದ್ದೆಯನ್ನು ಅಡಿಕೆ ತೋಟ ಮಾಡಿದಾಗ ಬಸಿಗಾಲುವೆಗಳನ್ನು ನಿರ್ಮಿಸದಿದ್ದರೆ ಬೇರುಗಳಿಗೆ ಸರಿಯಾಗಿ ಗಾಳಿ ಸಿಗದೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ಉಷ್ಣಾಂಶವುನಿರಂತರ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದ್ದರೆ ಅಡಿಕೆ ಕಾಯಿ ಸ್ವಲ್ಪ ಉದುರುತ್ತದೆ. ಅಡಿಕೆಗೆ ಒಳ್ಳೆಯ ಬೆಲೆ ಇರುವುದರಿಂದ ಹೆಚ್ಚಿನ ನಷ್ಟವೇನೂ ಆಗುವುದಿಲ್ಲ’ ಎಂದು ತೋಟಗಾರಿಕೆ ಇಲಾಖೆಯ ದಾವಣಗೆರೆ ಜಿಲ್ಲೆಯ ಉಪನಿರ್ದೇಶಕ ಜಿ.ಸಿ. ರಾಘವೇಂದ್ರ ಪ್ರಸಾದ್ ಅಭಿಪ್ರಾಯಪಡುತ್ತಾರೆ.
ಗರಿಗೆದರಿದ ನರ್ಸರಿ ಉದ್ಯಮ: ‘ಈ ಹಿಂದೆ ಸಾಗರ, ತೀರ್ಥಹಳ್ಳಿ ಭಾಗದ ನರ್ಸರಿಗಳಿಂದ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ರೈತರು ಅಡಿಕೆ ಸಸಿ ಖರೀದಿಸುತ್ತಿದ್ದರು. ಈಗ ದಾವಣಗೆರೆಯ ಚನ್ನಗಿರಿಯಲ್ಲೇ ಹಲವು ನರ್ಸರಿಗಳಲ್ಲಿ ಅಡಿಕೆ ಸಸಿ ಸಿಗುತ್ತಿದೆ. ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲೂ ಹಲವು ರೈತರು ತಮ್ಮ ತೋಟಗಳಲ್ಲೇ ಅಡಿಕೆ ಸಸಿ ಬೆಳೆಸಿ ಮಾರುತ್ತಿದ್ದಾರೆ. ಏಳೆಂಟು ವರ್ಷಗಳ ಹಿಂದೆ ವರ್ಷಕ್ಕೆ 5,000 ಅಡಿಕೆ ಸಸಿ ಬೆಳೆಸುತ್ತಿದ್ದೆವು. ಈಗ 2.50 ಲಕ್ಷ ಸಸಿ ಬೆಳೆಸಿದರೂ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ’ ಎಂದು ಸಾಗರದ ಸಹ್ಯಾದ್ರಿ ನರ್ಸರಿಯ ಮಾಲೀಕ ಗಿರೀಶ್ ಹಕ್ರೆ ತಿಳಿಸಿದರು.
ಕರಾವಳಿ–ಮಲೆನಾಡಿನಲ್ಲೂ ಬೆಳೆ ವಿಸ್ತರಣೆ: ಕಳೆದ ಐದಾರು ವರ್ಷಗಳಲ್ಲಿ ಕರಾವಳಿ–ಮಲೆನಾಡಿನ ಭಾಗದಲ್ಲೂ ಅಡಿಕೆ ಬೆಳೆಯುವ ಪ್ರದೇಶ ಗಣನೀಯವಾಗಿ ಏರಿಕೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 2016ರಲ್ಲಿ 70,111 ಹೆಕ್ಟೇರ್ ಪ್ರದೇಶದಲ್ಲಿದ್ದ ಅಡಿಕೆ ಬೆಳೆಯುತ್ತಿದ್ದ ಪ್ರದೇಶ ಈಗ 1.20 ಲಕ್ಷ ಹೆಕ್ಟೇರ್ ಮುಟ್ಟಿದೆ. ಶುಂಠಿ, ಅನಾನಸ್ ಬೆಳೆಯಲು ಮೂರು ವರ್ಷಗಳ ಗುತ್ತಿಗೆ ನೀಡುತ್ತಿರುವ ಮಲೆನಾಡಿನ ರೈತರು, ಈ ಅವಧಿಯಲ್ಲಿ ಅಡಿಕೆ ಸಸಿ ಬೆಳೆಸಿ ತೋಟ ಮಾಡುತ್ತಿದ್ದಾರೆ. ಬಗರ್‌ಹುಕುಂ ಭೂಮಿಯಲ್ಲೂ ದೊಡ್ಡ ಪ್ರಮಾಣದಲ್ಲಿ ಅಡಿಕೆ ತೋಟ ಎಲೆ ಎತ್ತುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 2016ರಲ್ಲಿ 18,527 ಹೆಕ್ಟೇರ್ ಇದ್ದ ಅಡಿಕೆ ಪ್ರದೇಶ, ಈಗ 33,365 ಹೆಕ್ಟೇರ್‌ಗೆ ಏರಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 4,300 ಹೆಕ್ಟೇರ್‌ನಷ್ಟು ಅಡಿಕೆ ಪ್ರದೇಶ ಹೆಚ್ಚಾಗಿದೆ.
ಅಡಿಕೆಗೂ ನರೇಗಾ ಬಲ: ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಸಣ್ಣ–ಅತಿ ಸಣ್ಣ ರೈತರಿಗೆ ಅಡಿಕೆ ತೋಟ ನಿರ್ಮಿಸಲು ಒಂದು ಹೆಕ್ಟೇರ್‌ಗೆ ₹ 80,000ದವರೆಗೆ ಸಹಾಯಧನ ನೀಡಲಾಗುತ್ತಿದೆ. ಅರೆ ಮಲೆನಾಡು ಪ್ರದೇಶಗಳಾದ ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಹಾನಗಲ್ ತಾಲ್ಲೂಕುಗಳಲ್ಲಿ ಈ ಸೌಲಭ್ಯ ಪಡೆದು ಅಡಿಕೆ ತೋಟ ಎಬ್ಬಿಸಲು ರೈತರು ಪೈಪೋಟಿಗೆ ಇಳಿದಿದ್ದಾರೆ. ಇದರ ಬೆನ್ನಲ್ಲೇ ಬಯಲುಸೀಮೆಯ ತಾಲ್ಲೂಕುಗಳಿಗೂ ನರೇಗಾದಡಿ ನೆರವು ನೀಡಬೇಕು ಎಂಬ ಕೂಗು ರೈತರಿಂದ ಕೇಳಿಬರುತ್ತಿದೆ.
ರೈತಸ್ನೇಹಿ ಸಹಕಾರಿ ಮಾರುಕಟ್ಟೆ
‘ಅಡಿಕೆ ಬೆಳೆಗೆ ಇರುವಷ್ಟು ವ್ಯವಸ್ಥಿತವಾದ ರೈತಸ್ನೇಹಿ ಸಹಕಾರಿ ಮಾರುಕಟ್ಟೆ ವ್ಯವಸ್ಥೆ ಉಳಿದ ಬೆಳೆಗಳಿಗೆ ಇಲ್ಲ. ಎರಡು ವರ್ಷ ಇಟ್ಟರೂ ಅಡಿಕೆ ಹಾಳಾಗುವುದಿಲ್ಲ. ದರ ಕುಸಿದರೆ ರೈತರು ಅಡಿಕೆಯನ್ನು ಮಾರಾಟ ಮಾಡದೇ ನಮ್ಮ ಗೋದಾಮಿನಲ್ಲಿ ಇಟ್ಟು ಅಡಮಾನ ಸಾಲ ಪಡೆದುಕೊಳ್ಳಬಹುದಾಗಿದೆ. ಒಳ್ಳೆಯ ಬೆಲೆ ಇದ್ದಾಗ ಮಾರಲು ಅವಕಾಶ ಇರುವುದರಿಂದ ಅಡಿಕೆ ಬೆಳೆಗಾರರು ನೆಮ್ಮದಿಯಿಂದ ಇದ್ದಾರೆ’ ಎಂದು ಚನ್ನಗಿರಿಯ ತುಮ್ಕೋಸ್ ಅಧ್ಯಕ್ಷ ಆರ್.ಎಂ. ರವಿ ಅಭಿಪ್ರಾಯಪಡುತ್ತಾರೆ.
‘ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಂಡಿದ್ದರಿಂದ ಹೆಚ್ಚಿನ ಪ್ರಮಾಣದಲ್ಲೇನೂ ಬೆಲೆ ಕುಸಿತವಾಗಿಲ್ಲ. ನಮ್ಮ ಬಹುಪಾಲು ಅಡಿಕೆ ನಮ್ಮಲ್ಲೇ ಬಳಕೆಯಾಗುತ್ತಿರುವುದೇ ಇದಕ್ಕೆ ಕಾರಣ. ಅಡಿಕೆ ತೋಟಗಳು ಹೆಚ್ಚುತ್ತಿರುವುದರಿಂದ ದರದ ಮೇಲೆ ಪರಿಣಾಮ ಬೀರಲು ಇನ್ನೂ ನಾಲ್ಕೈದು ವರ್ಷಗಳಾದರೂ ಬೇಕಾಗಬಹುದು. ಭವಿಷ್ಯದಲ್ಲೂ ಅಡಿಕೆಗೆ ಉತ್ತಮ ದರ ಕಾಯ್ದುಕೊಳ್ಳಲು ಉಪ ಉತ್ಪನ್ನಗಳ ಬಗ್ಗೆ ಸರ್ಕಾರ, ಸಹಕಾರ ಸೊಸೈಟಿಗಳು, ಬೆಳೆಗಾರರು ಸಂಶೋಧನೆ ನಡೆಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.
ತುಮ್ಕೋಸ್, ದಾವಣಗೆರೆಯ ದ್ಯಾಮ್ಕೋಸ್, ಭದ್ರಾವತಿಯ ರ‍್ಯಾಮ್ಕೊ, ಸಾಗರದ ಆಪ್ಕೋಸ್, ಶಿವಮೊಗ್ಗದ ಮ್ಯಾಮ್ಕೋಸ್, ದಕ್ಷಿಣ ಕನ್ನಡದ ಕ್ಯಾಂಪ್ಕೊ, ಶಿರಸಿಯ ತೋಟಗಾರ ಸೊಸೈಟಿ... ಹೀಗೆ ಹಲವು ಸಹಕಾರ ಮಾರುಕಟ್ಟೆಗಳು ವ್ಯವಸ್ಥಿತವಾಗಿ ಅಡಿಕೆ ವಹಿವಾಟು ನಡೆಸುತ್ತಿದ್ದು, ಬೆಳೆಗಾರರ ಹಿತವನ್ನು ಕಾಯುತ್ತಿದೆ.
ತೋಟವನ್ನು ಖೇಣಿ (ಫಸಲು ಗುತ್ತಿಗೆ) ನೀಡುವ ಪದ್ಧತಿಯೂ ಬಯಲುಸೀಮೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಜೊತೆಗೆ ಹಸಿ ಅಡಿಕೆಯನ್ನು ಕೊಯ್ದು, ಸುಲಿದು, ಒಣಗಿಸಿ ಮಾರಾಟಕ್ಕೆ ಸಿದ್ಧಮಾಡಿ ವಾಪಸ್ ಕೊಡುವ ಪದ್ಧತಿಯೂ ಚಾಲ್ತಿಯಲ್ಲಿದೆ. ಹಸಿ ಅಡಿಕೆ ಮಾರಾಟ ಮಾಡಲೂ ಅವಕಾಶವಿದ್ದು, ಒಂದು ಕ್ವಿಂಟಲ್ ಹಸಿ ಅಡಿಕೆಗೆ ಸದ್ಯ ₹ 6,4000ವರೆಗೂ ದರ ಇದೆ.
ಅಡಿಕೆಗೆ ನೀರೆರೆದ ಯೋಜನೆ
ಭದ್ರಾ ಮೇಲ್ದಂಡೆ, ತುಂಗಾ ಮೇಲ್ದಂಡೆ ಹಾಗೂ ಕೆರೆ ತುಂಬಿಸುವ ಯೋಜನೆಗಳಿಂದಾಗಿ ಮಳೆಯಾಶ್ರಿತ ಪ್ರದೇಶಗಳಿಗೂ ನೀರಾವರಿ ಸೌಲಭ್ಯ ಸಿಗುತ್ತಿರುವುದರಿಂದ ಪಾಳುಬಿದ್ದಿದ್ದ ಜಮೀನಿನಲ್ಲೂ ಅಡಿಕೆ ತೋಟ ತಲೆ ಎತ್ತುತ್ತಿದೆ.
ಎರಡು ವರ್ಷಗಳಿಂದ ಉತ್ತಮ ಮಳೆಯಾಗಿದ್ದು, ಬಯಲುಸೀಮೆಯ ಜಿಲ್ಲೆಗಳ ಹಲವು ಕೆರೆಗಳು ತುಂಬಿ, ಅಂತರ್ಜಲ ಮಟ್ಟ ಹೆಚ್ಚಾಗಿದೆ. ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಮೂರ್ನಾಲ್ಕು ವರ್ಷ ನೀರಿಗೆ ‘ಬರ’ ಉಂಟಾಗುವುದಿಲ್ಲ ಎಂಬ ವಿಶ್ವಾಸದಿಂದ ರೈತರು ಅಡಿಕೆ ಬೆಳೆಯ ಕಡೆ ಒಲವು ತೋರಿದ್ದಾರೆ.
ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ನಂಬಿಕೊಂಡು ತುಮಕೂರು ಜಿಲ್ಲೆಯಲ್ಲಿ ರೈತರು ಈಗಿನಿಂದಲೇ ಅಡಿಕೆಯತ್ತ ಪೈಪೋಟಿಗೆ ಇಳಿದಿದ್ದಾರೆ. ಒಂದೆರಡು ವರ್ಷಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಲಿದೆ ಎಂಬ ಕಾರಣಕ್ಕೆ ಚಿತ್ರದುರ್ಗ ಜಿಲ್ಲೆಯಲ್ಲೂ ನಾಲೆ ಪಕ್ಕದ ಎರಡೂ ಬದಿಯ ಜಮೀನುಗಳಲ್ಲಿ ಅಡಿಕೆ ಸಸಿಗಳು ಮೇಲೇಳುತ್ತಿವೆ. ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯ 89 ವರ್ಷಗಳ ಬಳಿಕ ಭರ್ತಿಯಾಗಿರುವುದೂ ರೈತರಲ್ಲಿ ಭರವಸೆ ಮೂಡಿಸಿದೆ.
ದಾಳಿಂಬೆ ಬೆಳೆಗಾರರೂ ಅಡಿಕೆ ಸೆಳೆತಕ್ಕೆ ಒಳಗಾಗುತ್ತಿದ್ದಾರೆ. ಈರುಳ್ಳಿ, ಮೆಕ್ಕೆಜೋಳ, ಶೇಂಗಾ, ಸಿರಿಧಾನ್ಯ ಬೆಳೆಯುತ್ತಿದ್ದ ಜಮೀನುಗಳಲ್ಲಿ ಅಡಿಕೆ ಕಾಣುತ್ತಿದೆ. ಕೆರೆ ತುಂಬಿಸುವ ಯೋಜನೆಯಿಂದಾಗಿ ಬರಪೀಡಿತ ಜಗಳೂರು ತಾಲ್ಲೂಕಿನ ರೈತರ ಮನದಲ್ಲೂ ಅಡಿಕೆ ತೋಟ ನಿರ್ಮಿಸಬೇಕೆಂಬ ಕನಸು ಚಿಗುರೊಡೆದಿದೆ.
**
ಪರಿಸರ ಸಮತೋಲನ ಕಾಯ್ದುಕೊಳ್ಳಲಿ
ಅಡಿಕೆ ಪ್ರದೇಶ ಹೆಚ್ಚುತ್ತಿದ್ದರೂ ಆಹಾರ ಭದ್ರತೆ ಇನ್ನೂ ಆತಂಕದ ಸ್ಥಿತಿ ತಲುಪಿಲ್ಲ. ಹವಾಮಾನ ವೈಪರಿತ್ಯ ವಿಷಮ ಸ್ಥಿತಿ ತಲುಪಿಸಿದ್ದು, ಮುಂದಿನ 10 ವರ್ಷಗಳಲ್ಲಿ ಏನಾಗುತ್ತದೆ ಎಂಬುದನ್ನು ಊಹಿಸಲಸಾಧ್ಯ. ಅಡಿಕೆಯೊಂದಿಗೆ ಬೇಕಾದ ಆಹಾರ ಧಾನ್ಯಗಳನ್ನೂ ಬೆಳೆದುಕೊಳ್ಳಲಿ. ಪರಿಸರ ಸಮತೋಲನ ಕಾಯ್ದುಕೊಂಡರೆ ಮಾತ್ರ ತೋಟ ಬಹುಕಾಲ ಉಳಿಯಲು ಸಾಧ್ಯ.
–ಶ್ರೀನಿವಾಸ್ ಚಿಂತಾಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕ, ದಾವಣಗೆರೆ
**
ಬೆಳೆ ವಿಸ್ತರಣೆಗಿಂತ ಬೆಳೆ ವೈವಿಧ್ಯ ಮುಖ್ಯ
ಮಲೆನಾಡಿನಲ್ಲಿ ಈಗ ಅಡಿಕೆಗೆ ಎಲೆಚುಕ್ಕಿ ರೋಗ ಬಾಧಿಸಿದಂತೆ ಎರಡು ವರ್ಷಗಳ ಹಿಂದೆ ಬಯಲುಸೀಮೆಯಲ್ಲಿ ಮೆಕ್ಕೆಜೋಳಕ್ಕೆ ಲದ್ದಿಹುಳು ಬಾಧೆ ತೀವ್ರವಾಗಿ ಕಾಣಿಸಿಕೊಂಡಿತ್ತು. ಭಾರಿ ಮಳೆ ಹಾಗೂ ಬಿಸಿಲಿನಿಂದ ಅಡಿಕೆಗೆ ತೊಂದರೆ ಆಗಲಿದೆ. 2016–17ರಲ್ಲಿ ಬರಗಾಲ ಬಂದಾಗ ಕಡೂರು–ಅಜ್ಜಂಪುರ ಭಾಗದಲ್ಲಿ ಶೇ 30ರಷ್ಟು ಅಡಿಕೆ ತೋಟಗಳು ನಾಶವಾಗಿದ್ದವು. ಅಡಿಕೆಗಿಂತ ಕಾಳುಮೆಣಸು, ಕೊಕ್ಕೊ, ಲವಂಗ, ಜಾಯಿಕಾಯಿ, ತೆಂಗು ಬೆಳೆ ವೈವಿಧ್ಯ ಕಾಪಾಡಿಕೊಂಡರೆ ಆರ್ಥಿಕವಾಗಿಯೂ ಲಾಭವಾಗಲಿದೆ.
–ಡಾ. ನಾಗರಾಜಪ್ಪ ಅಡಿವಪ್ಪರ್, ಮುಖ್ಯಸ್ಥರು, ಅಡಿಕೆ ಸಂಶೋಧನಾ ಕೇಂದ್ರ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
**
ಅಡಿಕೆ ಬೆಳೆ ಅವಲಂಬನೆ ತಗ್ಗಿಸಲಿ
ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಜೊತೆಗೆ ಕಬ್ಬನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಕಟಾವು, ದರದ ಸಮಸ್ಯೆಯಿಂದಾಗಿ ಕಬ್ಬಿನ ಜಾಗವನ್ನು ಅಡಿಕೆ ಆಕ್ರಮಿಸುತ್ತಿದೆ. ಭಾರತವು ಖಾದ್ಯ ತೈಲವನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಲು ಸರ್ಕಾರ ತಾಳೆ ಬೆಳೆಗೆ ಪ್ರೋತ್ಸಾಹ ನೀಡಿದ್ದರೆ ಅಡಿಕೆಯ ಅವಲಂಬನೆ ತಗ್ಗಿಸಲು ಸಾಧ್ಯ.
–ತೇಜಸ್ವಿ ಪಟೇಲ್, ಉಪಾಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ
**
ಹಣಕಾಸಿನ ಪರಿಸ್ಥಿತಿ ಸುಧಾರಣೆ
ಆಹಾರ ಧಾನ್ಯ ಬೆಳೆಯ ವೆಚ್ಚ ಹೆಚ್ಚುತ್ತಿದ್ದು, ಕೃಷಿ ಕೂಲಿ ಕಾರ್ಮಿಕರ ಕೊರತೆಯೂ ಇರುವುದರಿಂದ ನೀರಾವರಿ ಸೌಲಭ್ಯಕ್ಕೆ ತಕ್ಕಂತೆ ಅಡಿಕೆ ಬೆಳೆಯುತ್ತಿದ್ದೇವೆ. ಅಡಿಕೆಗೆ ಉತ್ತಮ ಧಾರಣೆ ಇರುವುದರಿಂದ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ.
–ನಾಗರಾಜು, ಇಡಕನಹಳ್ಳಿ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ
**
ಹಾಕಿದ ಬಂಡವಾಳವೂ ಬರುತ್ತಿರಲಿಲ್ಲ
ಈರುಳ್ಳಿ, ಮೆಕ್ಕೆಜೋಳ ಬೆಳೆಯುತ್ತಿದ್ದೆ. ಹಾಕಿದ ಬಂಡವಾಳವೂ ಬರುತ್ತಿರಲಿಲ್ಲ. ಮೂರು ವರ್ಷಗಳಿಂದ ಕೆರೆಗಳು ಭರ್ತಿಯಾಗಿವೆ. ಕೊಳವೆಬಾವಿಯಲ್ಲಿ ನೀರು ಬರುತ್ತಿದೆ. ಎಂಟು ತಿಂಗಳ ಹಿಂದೆ ಮೂರು ಎಕರೆಯಲ್ಲಿ ಅಡಿಕೆ ಸಸಿ ಹಾಕಿದ್ದೇನೆ.
–ಎಚ್.ಆಂಜನೇಯ, ರೈತ, ಕಮ್ಮತ್ತ ಮರಿಕುಂಟೆ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
**
ಬೆಳೆ ವಿಸ್ತರಣೆಯಿಂದ ದರ ಕುಸಿತದ ಆತಂಕ
ಮುಂದೆ ಅಡಿಕೆ ಬೆಳೆ ಪ್ರದೇಶ ವಿಸ್ತರಣೆಯಾದಂತೆ ಬೆಲೆ ಕುಸಿಯಲಿದೆ. ಭೂತಾನ್‌ನಿಂದ ಅಡಿಕೆ ಆಮದು ಆರಂಭವಾಗುತ್ತಿದ್ದಂತೆಯೇ ದೇಸಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹ 2,000 ಬೆಲೆ ಕಡಿಮೆ ಆಗಿದೆ. ಪ್ರದೇಶ ಹೆಚ್ಚಾದರೆ ಸಹಜವಾಗಿಯೇ ಬೆಲೆಯ ಮೇಲೆ ಪರಿಣಾಮ ಬೀರಲಿದೆ.
–ರಮೇಶ ಹೆಗ್ಡೆ, ಅಧ್ಯಕ್ಷ, ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘ
**
(ಪೂರಕ ಮಾಹಿತಿ: ಕೆ.ಜೆ. ಮರಿಯಪ್ಪ, ಜಿ.ಬಿ. ನಾಗರಾಜ್, ವೆಂಕಟೇಶ್ ಜಿ.ಎಚ್., ಕೆ.ಎಂ. ಸತೀಶ್ ಬೆಳ್ಳಕ್ಕಿ, ಸಿದ್ದು ಆರ್.ಜಿ. ಹಳ್ಳಿ, ಬಿ.ಜೆ. ಧನ್ಯಪ್ರಸಾದ್, ಸಂಧ್ಯಾ ಹೆಗಡೆ, ಗಣಪತಿ ಹೆಗಡೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.