ಶಿವಮೊಗ್ಗ: ಮಲೆನಾಡಿನ ಗುಣಮಟ್ಟದ ಕೆಂಪಡಿಕೆ ಜತೆ ಹೊರ ರಾಜ್ಯ, ವಿದೇಶದ ಕಳಪೆ ಅಡಿಕೆ ಮಿಶ್ರಣ ಮಾಡುವುದು, ತೆರಿಗೆ ವಂಚಿಸಲು ಮಾರುಕಟ್ಟೆಯ ಹೊರಗಿನಿಂದಲೇ ಗುಟ್ಕಾ, ಪಾನ್‌ಮಸಾಲಾ ಕಂಪನಿ ಗಳಿಗೆ ಅಡಿಕೆ ಸಾಗಿಸುವುದು ಜಿಲ್ಲೆಯಲ್ಲಿ ಈಚೆಗೆ ಸದ್ದು ಮಾಡಿದ ಎರಡು ಪ್ರಕರಣಗಳು.
ಶಿವಮೊಗ್ಗ ಜಿಲ್ಲೆಯಲ್ಲಿ 5 ವರ್ಷಗಳ ಹಿಂದೆ 26 ಸಾವಿರ ಹೆಕ್ಟೇರ್ ಇದ್ದ ಅಡಿಕೆ ಬೆಳೆ ಕ್ಷೇತ್ರ ಇಂದು 80 ಸಾವಿರ ಹೆಕ್ಟೇರ್ ದಾಟಿದೆ. ಇಲ್ಲಿನ ಕೆಂಪಡಿಕೆಗೆ ಎಲ್ಲೆಡೆ ಬೇಡಿಕೆ ಇದೆ. ಇಂತಹ ಗುಣಮಟ್ಟದ ಅಡಿಕೆ ಖರೀದಿಸುವ ಮಂಡಿ ವರ್ತಕರು ಅಸ್ಸಾಂ, ಕೇರಳ ಹಾಗೂ ಪಶ್ಚಿಮ ಬಂಗಾಳದಿಂದ ಅಗ್ಗದ ದರದ ಅಡಿಕೆ ತಂದು ಮಿಶ್ರಣ ಮಾಡುತ್ತಾರೆ. ಮಿಶ್ರಣಕ್ಕಾಗಿ ಎಪಿಎಂಸಿ ಆವರಣದ ಮಳಿಗೆಗಳಲ್ಲೇ ಯಂತ್ರಗಳನ್ನು ಇಟ್ಟುಕೊಂಡಿದ್ದಾರೆ. ಕೆಲವು ವರ್ತಕರು ಕಳಪೆ ಗುಣಮಟ್ಟದ ಅಡಿಕೆಗೆ ರೆಡ್ ಆಕ್ಸೈಡ್ ಹಚ್ಚಿ ರೈತರಿಂದ ಖರೀದಿಸಿದ ಅಡಿಕೆ ಜತೆ ಬೆರೆಸುತ್ತಾರೆ. ಇಲ್ಲಿನ ಎಪಿಎಂಸಿ ಆವರಣದಲ್ಲಿ ಇಂತಹ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ರೈತರು ಪ್ರತಿಭಟನೆಗೆ ಇಳಿದಾಗ ಲಾರಿಗಳನ್ನು ವಶಕ್ಕೆ ಪಡೆದು ದಂಡ ವಿಧಿಸುತ್ತಾರೆ.
ಕಳಪೆ ಗುಣಮಟ್ಟದ ಅಡಿಕೆ ವಿರುದ್ಧ ಕ್ರಮಕ್ಕೆ ಮುಂದಾಗಿದ್ದ ಎಪಿಎಂಸಿ ಅಧ್ಯಕ್ಷ ದುಗ್ಗಪ್ಪ ಗೌಡ ಅವರ ಮೇಲೆಕೆಲವುವರ್ತಕರು ಈಚೆಗೆ ಬೆದರಿಕೆ ಹಾಕಿದ್ದರು. ಶಿವಮೊಗ್ಗ ಮಾರುಕಟ್ಟೆಯಲ್ಲೇ ಪರವಾನಗಿ ಪಡೆದ 1,211 ವ್ಯಾಪಾರಿಗಳು ಇದ್ದಾರೆ.ವಾರ್ಷಿಕ ಮೂರು ಲಕ್ಷ ಕ್ವಿಂಟಲ್ ಅಡಿಕೆ ಮಾರಾಟ ಮಾಡಲಾಗುತ್ತದೆ.
ರೈತರಿಗೆ ಹೆಚ್ಚು ಹಣದ ಆಮಿಷ ಒಡ್ಡಿ ಎಪಿಎಂಸಿ ಹೊರಗೆ ಅಡಿಕೆ ಖರೀದಿಸುವ ಜಾಲದ ಮೇಲೆ ಈಚೆಗೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ ಪಡೆದಿದ್ದರು.
ಕೈಬರಹದ ವ್ಯಾಪಾರಿಗಳ ಕರಾಮತ್ತು...
ದಾವಣಗೆರೆ: ಅಡಿಕೆ ಖರೀದಿಗೆ ಚನ್ನಗಿರಿಯಲ್ಲಿ ‘ತುಮ್‌ಕೋಸ್’, ಜಿಲ್ಲೆಯ ಗಡಿಗೆ ಅಂಟಿಕೊಂಡಿರುವ ಚಿತ್ರದುರ್ಗದ ಭೀಮಸಮುದ್ರದಲ್ಲಿ ಸುವ್ಯವಸ್ಥಿತ ಅಡಿಕೆ ಮಂಡಿ, ಶಿವಮೊಗ್ಗದ ‘ಮ್ಯಾಮ್‌ಕೋಸ್’ ಎಂಬ ಅಡಿಕೆ ಸಹಕಾರ ಸಂಘಗಳಿದ್ದರೂ ಕೈ ಬರಹದ ವ್ಯಾಪಾರ ನಿಂತಿಲ್ಲ. ರೈತರ ಶೋಷಣೆ ತಪ್ಪಿಲ್ಲ.
ಈ ಭಾಗದಲ್ಲಿರುವ ಅಡಿಕೆ ಸಹಕಾರ ಸಂಘಗಳು ರೈತರ ವಿಶ್ವಾಸ ಗಳಿಸುತ್ತ ವ್ಯಾಪಾರ–ವಹಿವಾಟು ನಡೆಸಿಕೊಂಡು ಬಂದಿವೆ. ಆದರೆ, ಇವುಗಳಿಗೆ ಸವಾಲು ಒಡ್ಡುವ ರೀತಿಯಲ್ಲಿ ಕೈ ಬರಹದ ವ್ಯಾಪಾರಸ್ಥರು ರೈತರೊಂದಿಗೆ ಬಾಂಧವ್ಯ ಬೆಳೆಸಿಕೊಂಡಿದ್ದಾರೆ.
ಮನೆ ಬಾಗಿಲಿಗೇ ಬರುವ ಕೈ ಬರಹದ ವ್ಯಾಪಾರಸ್ಥರು ಖರೀದಿಸಿದ ಅಡಿಕೆಗೆ ತಕ್ಷಣ ಹಣ ನೀಡುತ್ತಾರೆ. ಈ ಹಣ ಸಹಕಾರ ಸಂಘಗಳು ನಿಗದಿಪಡಿಸಿದಕ್ಕಿಂತ ತುಸು ಹೆಚ್ಚೇ ಇರುತ್ತದೆ. ಅಲ್ಲದೇ ಗುಣಮಟ್ಟ ಇಲ್ಲದ ಅಡಿಕೆಯನ್ನೂ ಈ ಕೈ ಬರಹದ ವ್ಯಾಪಾರಿಗಳು ರೈತರಿಂದ ಖರೀದಿಸುತ್ತಾರೆ. ಈ ರೀತಿಯ ಒಡನಾಟದಿಂದ ಇಬ್ಬರ ನಡುವೆ ವಿಶ್ವಾಸ ಬೆಳೆಯುತ್ತದೆ. ಈ ವಿಶ್ವಾಸವನ್ನೇ ಗಟ್ಟಿ ಮಾಡಿಕೊಳ್ಳುವ ವ್ಯಾಪಾರಸ್ಥರು, ಮರುವರ್ಷ ರೈತರಿಂದ ಅಡಿಕೆ ಖರೀದಿಸುತ್ತಾರೆ. ಆದರೆ, ತಕ್ಷಣ ಹಣ ನೀಡುವುದಿಲ್ಲ. ರೈತರು ಒತ್ತಾಯ ಮಾಡಿದರೆ ಅಲ್ವ–ಸ್ವಲ್ಪ ನೀಡಿ ಒಂದು ದಿನ ಇದ್ದಕಿದ್ದಂತೆ ಕಣ್ಮರೆಯಾಗುತ್ತಾರೆ. ಹೀಗೆ ವ್ಯಾಪಾರಸ್ಥರು, ರೈತರಿಗೆ ಮೋಸ ಮಾಡುವ ಪ್ರಕರಣಗಳು ಈ ಭಾಗದಲ್ಲಿ ಪ್ರತಿ ವರ್ಷ ವರದಿಯಾಗುತ್ತಲೇ ಇವೆ.
ಇವನ್ನೂ ಓದಿ
ಒಳಒಪ್ಪಂದದ ಏಟು: ಹೊರಗೇ ವಹಿವಾಟು
ಕೊಬ್ಬರಿ: ಅರಳಿ ಮರದ ಕೆಳಗೆ ಪಿಸುಗುಡುವ ಬೆಲೆ!
ಹೊರ ಭಾಗದ ರೈತರೇ ಇಲ್ಲಿ ಟಾರ್ಗೆಟ್!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.