ಬೆಂಗಳೂರು: ‘ಬೇಡಿ ತಿನ್ನುವುದೇ ಜೀವನ’ ಎಂದುಕೊಂಡಿದ್ದ 42 ವರ್ಷದ ಆ ವ್ಯಕ್ತಿಗೆ, ಮಾಗಡಿ ರಸ್ತೆಯಲ್ಲಿರುವ ‘ಭಿಕ್ಷುಕರ ಪುನರ್ವಸತಿ ಕೇಂದ್ರ’ ಹೊಸ ಬದುಕು ಕಟ್ಟಿಕೊಟ್ಟಿತು. ಒಂದೂವರೆ ವರ್ಷ ಅಲ್ಲಿದ್ದು ದುಡಿಮೆಯ ಮಹತ್ವ ಅರಿತು ಹೊರಬಂದ ಅವರು, ಈಗ ಆಟೊ ಓಡಿಸಿಕೊಂಡು ನಿತ್ಯ ₹ 600 ರಿಂದ ₹ 800ರವರೆಗೆ ಸಂಪಾದನೆ ಮಾಡುತ್ತಿದ್ದಾರೆ!
‘ಯಾರೂ ಖುಷಿಯಿಂದ ದುಡ್ಡು ಕೊಡಲ್ಲ. ಮುಖ ಮುರಿದುಕೊಂಡೇ ಭಿಕ್ಷೆ ಹಾಕುತ್ತಾರೆ. ಅದಕ್ಕಿಂತ ನಾವೇ ಮೈಮುರಿದು ದುಡಿಯುವುದು ಒಳ್ಳೆಯದಲ್ಲವೇ? ದುಡಿದು ತಿನ್ನುವುದರಲ್ಲೇ ನೆಮ್ಮದಿ ಇದೆ. ಅದು ಅರ್ಥವಾಗುವುದು ನನಗೆ ತಡವಾಯಿತು’ ಎಂದು ಹೇಳುವ ಅವರು ತಮ್ಮ ಆಟೊ ಹಿಂದೆಯೂ ‘ಪ್ರೀತಿ–ವಿಶ್ವಾಸದ ಭಿಕ್ಷೆಯ ಬೇಡು’ ಎಂಬ ಒಕ್ಕಣೆ ಹಾಕಿಸಿಕೊಂಡಿದ್ದಾರೆ.
ಇದನ್ನೂ ಓದಿ:ಬೇಡಿದ್ದು ಸಾವಿರಾರು ದಕ್ಕಿದ್ದು ಚೂರುಪಾರು
ಬದುಕು ಸುಟ್ಟ ದುರಂತ: ‘ಚನ್ನಪಟ್ಟಣ ತಾಲ್ಲೂಕಿನ ನಾನು, 2005ರಲ್ಲಿ ಬೆಂಗಳೂರಿಗೆ ಬಂದು ನಾಗರಬಾವಿಯ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ತಿಂಗಳ ಸಂಬಳ, ಟಿಪ್ಸ್ ಎಲ್ಲ ಸೇರಿ ₹ 9 ಸಾವಿರದವರೆಗೆ ದುಡಿಯುತ್ತಿದ್ದೆ. ಕೆಲಸ ಸಿಕ್ಕಿತೆಂದು ಪೋಷಕರು ಮದುವೆಯನ್ನೂ ಮಾಡಿಬಿಟ್ಟರು. ನಾಲ್ಕು ವರ್ಷ ಎಲ್ಲವೂ ಚೆನ್ನಾಗಿಯೇ ಇತ್ತು. ಒಂದು ರಾತ್ರಿ ಹೋಟೆಲ್‌ಗೆ ಬೆಂಕಿ ಬಿದ್ದು, ಅದರ ಜತೆ ನನ್ನ ಬದುಕೂ ಸುಟ್ಟು ಹೋಯಿತು’ ಎಂದು ಆ ಕರಾಳ ದಿನಗಳನ್ನು ನೆನಪಿಸಿಕೊಂಡರು.
‘ದುರಂತದಲ್ಲಿ ನನ್ನ ಮುಖ, ಕುತ್ತಿಗೆ ಹಾಗೂ ಎಡಗಾಲಿನ ಸ್ವಲ್ಪ ಭಾಗ ಸುಟ್ಟು ಹೋಯಿತು. ನೋಡುವುದಕ್ಕೂ ವಿಕಾರವಾದೆ. ಈ ನೋವಿನಲ್ಲೇ ಪತ್ನಿ ನನ್ನನ್ನು ತೊರೆದುಬಿಟ್ಟಳು. ನಂತರ ಹಲವು ಹೋಟೆಲ್‌ಗಳಿಗೆ ಅಲೆದಾಡಿದರೂ, ಸುಟ್ಟ ಗಾಯಗಳಿದ್ದ ಕಾರಣ ಯಾರೂ ಕೆಲಸ ಕೊಡಲಿಲ್ಲ. ಆಗ ಅವೇ ಗಾಯಗಳನ್ನು ಜನರಿಗೆ ತೋರಿಸಿ ಬೇಡಲು ಪ್ರಾರಂಭಿಸಿದೆ. ಹೊತ್ತಿನ ಊಟಕ್ಕಾಗಿ ಶುರುವಾದ ಭಿಕ್ಷಾಟನೆ, ಕೊನೆಗೆ ವೃತ್ತಿಯಾಗಿಯೇ ಬದಲಾಯಿತು.’
‘2015ರಲ್ಲಿ ಕೋರಮಂಗಲದ ಸೋನಿ ವರ್ಲ್ಡ್ ಜಂಕ್ಷನ್‌ನಲ್ಲಿ ಪೊಲೀಸರು ನನ್ನನ್ನು ಹಿಡಿದು ವ್ಯಾನ್‌ಗೆ ಹತ್ತಿಸಿಕೊಂಡರು. ‘ಭಿಕ್ಷೆ ಬೇಡುವುದೂ ಅಪರಾಧ’ ಎಂದು ಆಗಲೇ ಗೊತ್ತಾಗಿದ್ದು. ನಂತರ ನನ್ನನ್ನು ಪುನರ್ವಸತಿ ಕೇಂದ್ರಕ್ಕೆ ಬಿಟ್ಟರು. ಅಲ್ಲಿ ಊಟ, ವಸತಿ ಎಲ್ಲ ಸಿಕ್ಕರೂ ನನ್ನಿಷ್ಟದಂತೆ ಬದುಕುವ ಸ್ವಾತಂತ್ರ್ಯ ಸಿಗಲಿಲ್ಲ. ಕ್ರಮೇಣ ಅಲ್ಲಿನ ವಾತಾವರಣಕ್ಕೂ ಹೊಂದಿಕೊಂಡೆ. ಅಲ್ಲಿ ದಿನಪೂರ್ತಿ ಕೆಲಸ ಮಾಡಿದರೂ ₹ 8 ರಿಂದ ₹ 10 ಕೂಲಿ ಸಿಗುತ್ತಿತ್ತು. ಆ ಸಂಪಾದನೆ ದುಡ್ಡಿನ ಮಹತ್ವ ತಿಳಿಸಿತು’ ಎಂದರು.
ಸ್ವಾತಂತ್ರ್ಯ ದಿನಾಚರಣೆ ದಿನವೇ ಸ್ವಾತಂತ್ರ್ಯ
‘2016 ಆಗಸ್ಟ್ 15. ಇದು ಪುನರ್ವಸತಿ ಕೇಂದ್ರದಿಂದ ನನಗೆ ಬಿಡುಗಡೆ ಸಿಕ್ಕ ದಿನ. ‘ಇನ್ನೆಂದೂ ಭಿಕ್ಷಾಟನೆ ಮಾಡುವುದಿಲ್ಲ’ ಎಂದು ಮುಚ್ಚಳಿಕೆ ಬರೆದುಕೊಟ್ಟು ಹೊರಬಂದೆ. ಊರಿಗೆ ವಾಪಸ್ ಹೋದರೆ ಕುಟುಂಬ ಸದಸ್ಯರೂ ಹತ್ತಿರ ಸೇರಿಸಲಿಲ್ಲ. ಮತ್ತೆ ಬೆಂಗಳೂರಿಗೆ ಮರಳಿ ಬಾಡಿಗೆ ಆಟೊ ಓಡಿಸಲು ಶುರು ಮಾಡಿದೆ. ಈಗ ಸಿಗ್ನಲ್‌ಗಳಲ್ಲಿ ಭಿಕ್ಷುಕರನ್ನು ನೋಡಿದರೆ ನನ್ನ ಇಡೀ ಜೀವನ ಕಣ್ಮುಂದೆ ಬರುತ್ತದೆ’ ಎನ್ನುತ್ತ ದುಃಖತಪ್ತರಾದರು.
ಕೂಸುಗಳನ್ನು ಕೊಡುವ ‘ಬಲಾಂಗೀರ್’!
18 ಲಕ್ಷ ಜನಸಂಖ್ಯೆವುಳ್ಳ ಒಡಿಶಾ ರಾಜ್ಯದ ಬಲಾಂಗೀರ್ ಜಿಲ್ಲೆಯಲ್ಲೆ 282 ಗ್ರಾಮಗಳಿವೆ. ಪ್ರತಿ ವರ್ಷ 20 ಸಾವಿರದಷ್ಟು ಕಾರ್ಮಿಕರು ಈ ಜಿಲ್ಲೆಯಿಂದ ಗುಳೆ ಹೋಗುತ್ತಾರೆ. ರಾಜ್ಯದ ಇಟ್ಟಿಗೆ ಗೂಡುಗಳಲ್ಲಿ ಹಾಗೂ ಕಟ್ಟಡ ನಿರ್ಮಾಣಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಕಾರ್ಮಿಕರು ಇದೇ ಜಿಲ್ಲೆಯವರು. ಬಡತನದ ಕಾರಣದಿಂದ ಇಲ್ಲಿನ ಜನ ತಮ್ಮ ಮಕ್ಕಳನ್ನು ಜೀತಪದ್ದತಿಗೆ ದೂಡುತ್ತಿದ್ದಾರೆ. ಹಿಂದೆ ಬೆಂಗಳೂರಿನಲ್ಲಿ ಬಾಡಿಗೆ ತಾಯಂದಿರ ಬಳಿ ಸಿಕ್ಕಿದ್ದ 40ಕ್ಕೂ ಹೆಚ್ಚು ಹಸುಗೂಸುಗಳು ಇದೊಂದೇ ಜಿಲ್ಲೆಗೆ ಸೇರಿದವು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.