ADVERTISEMENT

ಬೇಡಿದ್ದು ಸಾವಿರಾರು ದಕ್ಕಿದ್ದು ಚೂರುಪಾರು

ತಾಯಂದಿರು–ಮಕ್ಕಳ ‘ಬಾಡಿಗೆ’ ನಂಟು ಡಿಎನ್‌ಎ ಪರೀಕ್ಷೆಯಿಂದ ಬಹಿರಂಗ

ಎಂ.ಸಿ.ಮಂಜುನಾಥ
Published 20 ಏಪ್ರಿಲ್ 2019, 20:39 IST
Last Updated 20 ಏಪ್ರಿಲ್ 2019, 20:39 IST
Shankar's Gallery
Shankar's Gallery   

ಬೆಂಗಳೂರು: ಪ್ರಮುಖ ನಗರಗಳ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಒಂದು ಮಗು ಭಿಕ್ಷಾಟನೆಯಿಂದಲೇ ದಿನಕ್ಕೆ ₹ 800 ರಿಂದ ₹ 1,200 ಸಂಗ್ರಹಿಸಿದರೆ, ಕಂಕುಳಲ್ಲಿ ಹಸುಗೂಸನ್ನು ಇಟ್ಟುಕೊಂಡು ಧರ್ಮಮಾಡಿ ಸ್ವಾಮಿ ಎಂದು ದಯನೀಯವಾಗಿ ಬೇಡುವ ಬಾಡಿಗೆ ತಾಯಿ ₹ 1,000 ದಿಂದ ₹ 1,400ರವರೆಗೆ ಗಳಿಸು ತ್ತಾಳೆ. ಲೈಂಗಿಕ ಅಲ್ಪಸಂಖ್ಯಾತರು ಪ್ರತಿಯೊಬ್ಬರೂ ₹ 2,000ದವರೆಗೆ ಸಂಪಾದಿಸುತ್ತಾರೆ!

28 ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ನಡೆಸಿರುವ ಅಧ್ಯಯನ ವರದಿಯಲ್ಲಿ ಈ ಅಂಶಗಳಿವೆ. ಭಿಕ್ಷುಕರಿಂದ ತೊಂದರೆ ಆಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಹೆಚ್ಚಾಗಿದ್ದರಿಂದ ಪೊಲೀಸರು ಎನ್‌ಜಿಒಗಳ ಜತೆ ಸೇರಿ ಬೆಂಗಳೂರಿನ 281 ಸಿಗ್ನಲ್‌ಗಳಲ್ಲಿ ಶೋಧ ನಡೆಸಿದ್ದರು. ಆಗ ಮಹಿಳೆಯರು, ಹಸುಗೂಸುಗಳು, 10 ವರ್ಷದೊಳಗಿನ ಮಕ್ಕಳು ಸೇರಿದಂತೆ 630 ಮಂದಿ ಸಿಕ್ಕಿದ್ದರು.

‘40 ಮಹಿಳೆಯರು 40 ಕೂಸುಗಳನ್ನು ಎತ್ತಿಕೊಂಡಿದ್ದರು. ಅವರ‍್ಯಾರು ಅವರ ತಾಯಂದಿರಲ್ಲ ಎಂಬುದು ಡಿಎನ್‌ಎ ಪರೀಕ್ಷೆಯಿಂದ ಗೊತ್ತಾಗಿತ್ತು. ಏಜೆಂಟ್‌ಗಳಿಂದ ಚೆನ್ನಾಗಿ ಪಳಗಿದ್ದ ಅವರು, ದಂಧೆಯ ಬಗ್ಗೆ ಸಣ್ಣ ಮಾಹಿತಿಯನ್ನೂ ಬಾಯ್ಬಿಡಲಿಲ್ಲ. ಪೊಲೀಸರು ವಿಚಾರಣೆ ನಡೆಸಿ ಸುಸ್ತಾದರೂ, ಕಿರುಚಾಟವಷ್ಟೇ ಅವರ ಉತ್ತರವಾಗಿತ್ತು’ ಎಂದು ಚೈಲ್ಡ್‌ಲೈನ್‌ನ ಲಕ್ಷ್ಮೀಪತಿ ಮಾಹಿತಿ ನೀಡಿದರು.

ADVERTISEMENT

ಪಿಕ್ ಅಪ್, ಡ್ರಾಪ್ ವ್ಯವಸ್ಥೆ: ಬೆಳಿಗ್ಗೆ 8.30ಕ್ಕೇ (ದಟ್ಟಣೆ ಹೆಚ್ಚಿರುವ ಸಮಯ) ವ್ಯಾನ್ ಅಥವಾ ಆಟೊದಲ್ಲಿ ಮಹಿಳೆಯರು–ಮಕ್ಕಳನ್ನು ಕರೆತರಯುತ್ತಿದ್ದ ಏಜೆಂಟ್‌ಗಳು, ಪ್ರಮುಖ ಸಿಗ್ನಲ್‌ಗಳು, ಪ್ರವಾಸಿ ತಾಣಗಳು, ಮಾರುಕಟ್ಟೆಗಳು, ಪಾರ್ಕ್‌ಗಳು, ಸಾಫ್ಟ್‌ವೇರ್ ಕಂಪನಿಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಬಳಿ ಬಿಡುತ್ತಾರೆ. ಅವರೂ ಬೆಲ್ಟ್ ಅಥವಾ ಟೋಪಿ ಮಾರುವವರಂತೆ ಅಲ್ಲೇ ನಿಂತು ಎಲ್ಲರ ಚಲನವಲನಗಳನ್ನೂ ವೀಕ್ಷಿಸುತ್ತಿರುತ್ತಾರೆ. ಮಧ್ಯಾಹ್ನ 2 ಗಂಟೆಗೆ ಏಜೆಂಟ್‌ಗಳೇ ಹೋಗಿ ಊಟದ ಪೊಟ್ಟಣಗಳನ್ನು ಕೊಡುತ್ತಾರೆ. ಸಂಜೆ 6.30ಕ್ಕೆ ಅದೇ ವ್ಯಾನ್ ಹಾಗೂ ಆಟೊ ಬಂದು ಅವರನ್ನು ತುಂಬಿಕೊಂಡು ಶೆಡ್‌ಗಳತ್ತ ತೆರಳುತ್ತವೆ.

‘ನಾಲ್ಕು ರಸ್ತೆಗಳು ಕೂಡುವ ಸಿಗ್ನಲ್‌ಗಳನ್ನೇ ಭಿಕ್ಷಾಟನೆಗೆ ಆಯ್ಕೆ ಮಾಡುತ್ತಾರೆ. ಯಾವ ಕಡೆ ಸಿಗ್ನಲ್ ಬೀಳುತ್ತದೋ ಆ ರಸ್ತೆಯತ್ತ ಮಕ್ಕಳು ಓಡುತ್ತವೆ. ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಸಾಮಾನ್ಯವಾಗಿ 90 ರಿಂದ 180 ಸೆಕೆಂಡ್‌ಗಳವರೆಗೆ ಕೆಂಪು ಸಿಗ್ನಲ್ ‌ಬೀಳುತ್ತದೆ. ಒಮ್ಮೆ ಸಿಗ್ನಲ್ ಬಿದ್ದರೆ ದಟ್ಟಣೆ ಅವಧಿಯಲ್ಲಿ ಕನಿಷ್ಠ 120 ವಾಹನಗಳು ನಿಲ್ಲುತ್ತವೆ. ಅವರಲ್ಲಿ ಶೇ 10ರಷ್ಟು ಮಂದಿಯಂತೂ ಭಿಕ್ಷೆ ಹಾಕುತ್ತಾರೆ’ ಎಂದು ಚೈಲ್ಡ್‌ಲೈನ್‌ನ ಸಂಯೋಜಕಿ ವಿಶಾಲಾಕ್ಷ್ಮಿ ವಿಶ್ಲೇಷಿಸಿದರು.

ರಾತ್ರಿ ಎಲ್ಲ ಭಿಕ್ಷುಕರಿಂದಲೂ ಹಣ ಸಂಗ್ರಹಿಸುವ ಏಜೆಂಟ್‌ ಗಳು, ಮಹಿಳೆಗೆ ₹ 100 ಹಾಗೂ ಮಕ್ಕಳಿಗೆ ₹ 60ದಂತೆ ಕೂಲಿ ಕೊಡುತ್ತಾರೆ. ದಿನಕ್ಕೆ ಸಾವಿರಾರು ರೂಪಾಯಿ ಭಿಕ್ಷೆ ಎತ್ತಿದರೂ, ಅವರ ದಿನದ ದುಡಿಮೆ ಭಿಕ್ಷೆಯಂತೆಯೇ ಸಿಗುತ್ತದೆ. ಏಜೆಂಟ್‌ಗಳು ತಮ್ಮ ಕಮಿಷನ್ ಮುರಿದುಕೊಂಡು, ಬಾಕಿ ಹಣವನ್ನು ವಾರಕ್ಕೊಮ್ಮೆ ‘ಸೂತ್ರಧಾರ’ರಿಗೆ ರವಾನಿಸುತ್ತಾರೆ.

‌ಹಬ್ಬಗಳೆಂದರೆ ಸುಗ್ಗಿ: ‘ಹಬ್ಬಗಳ ಸಂದರ್ಭದಲ್ಲಿ ಅನಂತಪುರ, ಪಾವಗಡ ಕಡೆಗಳಿಂದೆಲ್ಲ ಮಹಿಳೆಯರು–ಮಕ್ಕಳನ್ನು ಕರೆದು ಕೊಂಡು ಬರುತ್ತಾರೆ. ಏಜೆಂಟ್‌ಗಳು ಕರೆದಾಗ ಬರುವ ಅರೆಕಾಲಿಕ ಭಿಕ್ಷುಕರ ದಂಡುಗಳೂ ಇವೆ. ಹೀಗೆ, ಗುಂಪು ಗುಂಪಾಗಿ ಬಂದಾಗ ಮಕ್ಕಳನ್ನು ರಕ್ಷಣೆ ಮಾಡುವುದು ಕಷ್ಟ’ ಎಂದು ಪೊಲೀಸರು ಹೇಳಿದರು.

‘ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ಮಕ್ಕಳನ್ನು ಇಟ್ಟುಕೊಳ್ಳುವುದಿಲ್ಲ. ಹೀಗಾಗಿ, ಅವರನ್ನು ಹೊಸೂರು ರಸ್ತೆಯ ಸ್ವೀಕಾರ ಕೇಂದ್ರದಲ್ಲೇ ಇಡಲಾಗುತ್ತದೆ. ಮಕ್ಕಳು ಅಲ್ಲಿಂದ ತಪ್ಪಿಸಿಕೊಳ್ಳಲು ನಡೆಸುವ ಕಸರತ್ತುಗಳಿಂದ ಬೇಸತ್ತು ಎಷ್ಟೋ ಸಲ ಕೇಂದ್ರದ ಸಿಬ್ಬಂದಿ ಗೇಟ್ ತೆರೆದು ಬಿಟ್ಟು ಕಳುಹಿಸಿರುವ ಉದಾಹರಣೆಗಳು ಇವೆ’ ಎಂದೂ ವಿವರಿಸಿದರು.

ಟಾರ್ಗೆಟ್ ತಲುಪಿದರಷ್ಟೇ ಡ್ರಗ್ಸ್: ‘ಮಕ್ಕಳನ್ನು ಮದ್ಯ ಹಾಗೂ ಮಾದಕ ವ್ಯಸನಿಗಳನ್ನಾಗಿ ಮಾಡುವ ದಂಧೆಕೋರರು, ತಾವು ಟಾರ್ಗೆಟ್ ನೀಡಿದಷ್ಟು ಹಣ ತಂದರಷ್ಟೇ ರಾತ್ರಿ ಡ್ರಗ್ಸ್ ಹಾಗೂ ಮದ್ಯ ಕೊಡುತ್ತಾರೆ. ಹೀಗಾಗಿ, ಅವುಗಳಿಗಾಗಿಯೇ ಮಕ್ಕಳು ಶ್ರದ್ಧೆಯಿಂದ ಭಿಕ್ಷೆ ಬೇಡುತ್ತವೆ. ಮಕ್ಕಳು ಬೆಳೆಯುತ್ತ ಹೋದಂತೆ ಅವರನ್ನೇ ಡ್ರಗ್ಸ್ ಪೆಡ್ಲರ್‌ (ಪೂರೈಕೆದಾರ) ಆಗಿಯೂ ಬಳಸಿಕೊಳ್ಳುತ್ತಾರೆ. ಭಿಕ್ಷಾಟನೆಗೆ ತಂದ ಮಕ್ಕಳ ಅಂಗಾಂಗ ಕದ್ದು ಮಾರಿದಂತಹ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿಲ್ಲ. ಆದರೆ, ಮುಂಬೈ ಹಾಗೂ ದೆಹಲಿಯಲ್ಲಿ ಅದೂ ನಡೆದಿದೆ.

‘ಸರ್ಕಾರಕ್ಕೇ ಆಸಕ್ತಿ ಇಲ್ಲ’

ಬೆಂಗಳೂರು: ಹಿಂದೆ ‘ಆಪರೇಷನ್ ರಕ್ಷಾ’, ‘ಆಪರೇಷನ್ ಸ್ಮೈಲ್, ‘ಆಪರೇಷನ್ ಸುರಕ್ಷಾ’ ಹಾಗೂ ‘ಆಪರೇಷನ್ ಮುಸ್ಕಾನ್’ ಹೆಸರುಗಳಲ್ಲಿ ನಡೆಸಿದಂತಹ ಕಾರ್ಯಕ್ರಮಗಳಿಂದ ರಾಜ್ಯದಾದ್ಯಂತ ಸುಮಾರು 400ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಲಾಗಿತ್ತು. ಈಗ ಅಂತಹ ಯಾವುದೇ ಕಾರ್ಯಾಚರಣೆಗೆ ಇಲಾಖೆಗಳು ಆಸಕ್ತಿ ತೋರುತ್ತಿಲ್ಲ ಎಂಬುದು ಸರ್ಕಾರೇತರ ಸಂಸ್ಥೆಗಳ ದೂರು.

‘2014–15ರಲ್ಲಿ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ರಕ್ಷಿಸಿದಾಗ ಸರ್ಕಾರ ಅವರ ಪುನರ್ವಸತಿಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಮತ್ತೆ ಅವು ಬೀದಿಗೆ ಬಿದ್ದು ಭಿಕ್ಷೆ ಬೇಡುತ್ತಿದ್ದವು. ಹೀಗಾಗಿ, ನಾವೂ ಕಾರ್ಯಾಚರಣೆ ಸ್ಥಗಿತಗೊಳಿಸಿದೆವು. ನಾಪತ್ತೆಯಾದ ಮಕ್ಕಳ ಪತ್ತೆಗೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುಂತೆಯೇ, ಮಾನವ ಸಾಗಣೆಯ ‌ಭಾಗವೇ ಆಗಿರುವ ‘ಭಿಕ್ಷಾಟನೆ’ ತಡೆಗೂ ಕಾರ್ಯಾಚರಣೆ ಜರೂರಾಗಿ ಆಗಬೇಕಿದೆ’ ಎಂದು ‘ಅಪ್ಸಾ’ ಸಂಸ್ಥೆ ನಿರ್ದೇಶಕಿ ಶೀಲಾ ದೇವರಾಜ್ ಒತ್ತಾಯಿಸಿದರು.

‘ಭಿಕ್ಷಾಟನೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಆದರೆ, ಈಗ ಮಕ್ಕಳೆಲ್ಲ ಪೆನ್ನು, ಬಲೂನು ಮಾರುತ್ತ ಭಿಕ್ಷೆ ಬೇಡುತ್ತಿರುವುದರಿಂದ ಅವರನ್ನು ಬಾಲ ಕಾರ್ಮಿಕರು ಎನ್ನಲಾಗುತ್ತಿದೆ. ಹಾಗದರೆ, ಇದು ಕಾರ್ಮಿಕ ಇಲಾಖೆ ವ್ಯಾಪ್ತಿ ಸೇರುತ್ತದೆ. ಅವರನ್ನು ರಕ್ಷಿಸುವ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು.. ಹೀಗೆ, ಈ ಮೂರು ಇಲಾಖೆಗಳೂ ರಕ್ಷಣೆ ತಮ್ಮ ಕೆಲಸವಲ್ಲವೆಂದು ಸುಮ್ಮನಾಗಿಬಿಟ್ಟಿವೆ. ಇಂತಹ ಮಿತಿಗಳ ನಡುವೆಯೇ ನಾವು ಕೆಲಸ ಮಾಡುತ್ತಿದ್ದೇವೆ. ಹೀಗಾಗಿ, ಭಿಕ್ಷಾಟನೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗಿಲ್ಲ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಎನ್‌ಜಿಒ ಸದಸ್ಯರೊಬ್ಬರು.

6 ವರ್ಷಗಳಲ್ಲಿ ಆರೇ ಪ್ರಕರಣ: ರಾಜ್ಯ ಪೊಲೀಸರು 2014ರಿಂದ 2019ರ ಮಾರ್ಚ್ 31ರವರ ನಡುವೆ 460 ಕಾರ್ಯಾಚರಣೆಗಳನ್ನು ನಡೆಸಿ, 647 ಭಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಆದರೆ, ಈ ಅವಧಿಯಲ್ಲಿ ದಾಖಲಿಸಿರುವುದು 6 ಪ್ರಕರಣಗಳನ್ನು ಮಾತ್ರ!

ರಾಜ್ಯದಲ್ಲಿ 20,751 ಭಿಕ್ಷುಕರು!

ಕೇಂದ್ರ ಪರಿಹಾರ ಸಮಿತಿಯು ₹ 33 ಲಕ್ಷ ವೆಚ್ಚದಲ್ಲಿ ಮೊದಲ ಗಣತಿ ಮಾಡಿದಾಗ, ರಾಜ್ಯದಲ್ಲಿ 20,751 ಭಿಕ್ಷುಕರು ಇರುವುದು ಗೊತ್ತಾಗಿದೆ. ಅವರಲ್ಲಿ ಶೇ 8ರಷ್ಟು ಮಕ್ಕಳು ಇದ್ದಾರೆ.

ಕೀ ಚೈನ್‌ನಲ್ಲಿ ಒಂದೇ ನಂಬರ್!

‘ಇತ್ತೀಚೆಗೆ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ಜಂಕ್ಷನ್, ಎಂ.ಜಿ.ರಸ್ತೆ, ಕೋರಮಂಗಲದ ಸೋನಿ ವರ್ಲ್ಡ್‌ ಜಂಕ್ಷನ್‌ನಲ್ಲಿ ಮಕ್ಕಳು–ಮಹಿಳೆಯರು ಸೇರಿ 40 ಮಂದಿಯನ್ನು ರಕ್ಷಿಸಲಾಯಿತು. ಪ್ರತಿಯೊಬ್ಬರ ಬಳಿ ಒಂದೊಂದು ಪ್ಲಾಸ್ಟಿಕ್‌ ಕೀ ಚೈನ್ ಇತ್ತು. ಅದರ ಮೇಲೆ ಒಬ್ಬನೇ ವ್ಯಕ್ತಿಯ ಮೊಬೈಲ್ ಸಂಖ್ಯೆ ಇತ್ತು!

‘ಅದು ನಮ್ ಅಂಕಲ್ ನಂಬರ್’ ಎಂದು ಮಹಿಳೆಯರು ಹೇಳಿದ್ದರು. ಆದರೆ, ಅಂದು ಸ್ವಿಚ್ಡ್ ಆಫ್ ಆದ ಆ ಸಂಖ್ಯೆ ಈವರೆಗೂ ಚಾಲೂ ಆಗಿಲ್ಲ. ಪೊಲೀಸರು ತನಿಖೆ ನಡೆಸಿದಾಗ ಆತನೂ ಒಬ್ಬ ಏಜೆಂಟ್ ಎಂಬುದು ಗೊತ್ತಾಗಿತ್ತು’ ಎಂದು ಚೈಲ್ಡ್‌ಲೈನ್‌ನ ಸಿಬ್ಬಂದಿ ಹೇಳಿದರು.

ವಕೀಲರನ್ನು ಇಟ್ಟುಕೊಳ್ಳುವ ತಾಕತ್ತು!

ಪೊಲೀಸರು ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯುಸಿ) ಹಾಜರುಪಡಿಸಿದಾಗ, ಏಜೆಂಟ್‌ಗಳು ಹೋಗಿ ಆ ಮಕ್ಕಳ ತಾಯಂದಿರನ್ನು ಕರೆದುಕೊಂಡು ಬರುತ್ತಾರೆ. ಬಳಿಕ ವಕೀಲರನ್ನು ಬಳಸಿಕೊಂಡು, ‘ತಾಯಿಯೊಂದಿಗೆ ಮಗುವನ್ನು ಕಳುಹಿಸಬೇಕು’ ಎಂದು ನ್ಯಾಯಾಲಯದ ಮೊರೆ ಹೋಗುತ್ತಾರೆ. ‘ಮಗು ತಾಯಿಯ ಬಳಿಯೇ ಇರಬೇಕು’ ಎಂಬ ಅನುಕಂಪವೂ ಇಲ್ಲಿ ದುರ್ಬಳಕೆ ಆಗುತ್ತದೆ. ಕಾನೂನು ಹೋರಾಟ ನಡೆಸಿ ಮಗುವನ್ನು ಪಡೆದುಕೊಳ್ಳುವ ತಾಯಿ, ಮತ್ತೆ ಏಜೆಂಟ್‌ ವಶಕ್ಕೆ ಒಪ್ಪಿಸಿ ಜಿಲ್ಲೆಗೆ ಹೊರಟು ಹೋಗುತ್ತಾಳೆ.

ಟ್ರಸ್ಟ್‌ಗಳ ಕಮಿಷನ್ ಒಪ್ಪಂದ

‘ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕೆಲ ಯುವಕ–ಯುವತಿಯರು ಪ್ರತಿಷ್ಠಿತ ಟ್ರಸ್ಟ್‌ಗಳ, ಆಶ್ರಮಗಳ, ಸಂಸ್ಥೆಗಳ ಹೆಸರುಗಳಲ್ಲಿ ಡಬ್ಬಿಗಳನ್ನು ಹಿಡಿದು ನೆರವು ಕೇಳುತ್ತಿರುತ್ತಾರೆ.

ಆದರೆ, ಅದೂ ಕೂಡ ಭಿಕ್ಷಾಟನೆಯ ಇನ್ನೊಂದು ಆಯಾಮವಷ್ಟೇ. ಟ್ರಸ್ಟ್‌ಗಳು ನಿರುದ್ಯೋಗಿ ಯುವಕ–ಯುವತಿಯರ ಜತೆ ಒಪ್ಪಂದ ಮಾಡಿಕೊಂಡು, ಭಿಕ್ಷಾಟನೆ ಮಾಡಿಸುತ್ತವೆ. ಅವರು ಸಂಗ್ರಹಿಸಿ ತಂದ ಹಣದಲ್ಲಿ ಶೇ 70ರಷ್ಟು ಟ್ರಸ್ಟ್‌ಗೆ ಹೋದರೆ, ಉಳಿದ ಶೇ 30 ಪಾಲು ಆ ನಿರುದ್ಯೋಗಿಗಳ ಪಾಲಾಗುತ್ತದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ರಾತ್ರಿ ಪಾಳಿಯಲ್ಲೂ ಭಿಕ್ಷೆ

ಮಕ್ಕಳನ್ನು ಎರಡು ಪಾಳಿಯಲ್ಲಿ ಭಿಕ್ಷಾಟನೆಗೆ ಬಳಸಿಕೊಳ್ಳಲಾಗುತ್ತಿದೆ. ಬೆಳಿಗ್ಗೆ ಜನನಿಬಿಡ ಪ್ರದೇಶಗಳಲ್ಲಿ ಭಿಕ್ಷೆ ಬೇಡಿದರೆ, ಪ್ರತಿಷ್ಠಿತ ರಸ್ತೆಗಳಲ್ಲಿರುವ ಪಬ್‌ಗಳು, ಕ್ಲಬ್‌ಗಳು ಹೋಟೆಲ್‌ಗಳ ಬಳಿ ರಾತ್ರಿಪಾಳಿಯಲ್ಲಿ ಹೆಣ್ಣು ಮಕ್ಕಳು ಗುಲಾಬಿ ಮಾರುತ್ತ ಭಿಕ್ಷೆ ಎತ್ತುತ್ತಾರೆ. ಅವೆ‌ಲ್ಲ ಸಿರಿವಂತರ ತಾಣಗಳೇ ಆಗಿರುವುದರಿಂದ ಬಹುತೇಕರು ₹ 50, ₹ 100ರ ನೋಟುಗಳನ್ನೇ ಕೊಟ್ಟು ಹೋಗುತ್ತಾರೆ. ಆ ಮಕ್ಕಳು ಅಲ್ಲೇ ನಿಂತು ನೋಡುವ ಏಜೆಂಟ್‌ ಬಳಿ ತಾಸಿಗೆ ಒಮ್ಮೆ ಹೋಗಿ, ಸಂಗ್ರಹವಾಗಿರುವ ಹಣ ಕೊಟ್ಟು ಬರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.