ADVERTISEMENT

ಒಳನೋಟ: ಗೋಡಂಬಿಗೆ ‘ಆಪತ್ತಿನ’ ಕಾಲ

ರಾಜ್ಯದಲ್ಲಿ ಶತಮಾನೋತ್ಸವ ಅಂಚಿನಲ್ಲಿರುವ ಗೇರು ಸಂಸ್ಕರಣೆ

ಗಣೇಶ ಚಂದನಶಿವ
Published 23 ನವೆಂಬರ್ 2024, 23:00 IST
Last Updated 23 ನವೆಂಬರ್ 2024, 23:00 IST
<div class="paragraphs"><p>ಮಂಗಳೂರಿನ ಕಾರ್ಖಾನೆಯೊಂದರಲ್ಲಿ ಗೋಡಂಬಿ ಸಂಸ್ಕರಣೆಯಲ್ಲಿ ತೊಡಗಿರುವ ಕಾರ್ಮಿಕರು &nbsp;</p></div>

ಮಂಗಳೂರಿನ ಕಾರ್ಖಾನೆಯೊಂದರಲ್ಲಿ ಗೋಡಂಬಿ ಸಂಸ್ಕರಣೆಯಲ್ಲಿ ತೊಡಗಿರುವ ಕಾರ್ಮಿಕರು  

   

ಪ್ರಜಾವಾಣಿ ಚಿತ್ರಗಳು: ಫಕ್ರುದ್ದೀನ್‌ ಎಚ್‌.

ಮಂಗಳೂರು: ‘ರಾಜ್ಯದಲ್ಲಿ ಗೇರು ಸಂಸ್ಕರಣಾ ಉದ್ಯಮ ಆರಂಭವಾಗಿದ್ದು 1925–26ರ ಅವಧಿಯಲ್ಲಿ. ಮಂಗಳೂರಿನಲ್ಲಿ ಆರಂಭವಾಗಿ ಶತಮಾನೋತ್ಸವ ಹೊಸ್ತಿಲಲ್ಲಿರುವ ಈ ಉದ್ಯಮ ಈಗ ಸಂಕಷ್ಟಕ್ಕೆ ಸಿಲುಕಿದೆ. ಕಚ್ಚಾ ಗೇರು ಬೀಜದ ಕೊರತೆ ಅತಿಯಾಗಿ ಕಾಡುತ್ತಿದೆ. ಯಾಂತ್ರೀಕರಣಕ್ಕೆ ಹೂಡಿಕೆ, ಬ್ಯಾಂಕ್‌ ಸಾಲದ ಹೊರೆ... ಮತ್ತಿತರ ಕಾರಣಗಳಿಂದ ಒಂದೊಂದೇ ಘಟಕ ಮುಚ್ಚುತ್ತಿವೆ...’ ಎಂದು ದೊಡ್ಡ ಪಟ್ಟಿಯನ್ನೇ ಮುಂದಿಟ್ಟರು ಕರ್ನಾಟಕ ಗೇರು ಉತ್ಪಾದಕರ ಸಂಘದ (ಕೆಸಿಎಂಎ) ಅಧ್ಯಕ್ಷ ಎಸ್‌. ಅನಂತ ಕೃಷ್ಣ ರಾವ್‌.

ADVERTISEMENT

‘ಕರ್ನಾಟಕದಲ್ಲಿ ಈ ಉದ್ಯಮ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರತ್ಯಕ್ಷ–ಪರೋಕ್ಷ ಉದ್ಯೋಗ ನೀಡಿದೆ. ಅವರಲ್ಲಿ ಮಹಿಳೆಯರ ಸಂಖ್ಯೆ ಶೇ 80. ದೇಶದ ಒಟ್ಟು ಸಂಸ್ಕರಿತ ಗೇರು ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 25ರಿಂದ 30ರಷ್ಟಿದೆ. ನಮ್ಮ ರಾಜ್ಯವೊಂದರಿಂದಲೇ ಪ್ರತಿ ವರ್ಷ ಸರಾಸರಿ ₹10 ಸಾವಿರ ಕೋಟಿ ವಹಿವಾಟು ನಡೆಯುತ್ತಿದ್ದು, ಸರ್ಕಾರಕ್ಕೆ ₹500 ಕೋಟಿ ಜಿಎಸ್‌ಟಿ ಪಾವತಿಸುತ್ತಿದ್ದೇವೆ. 18ಕ್ಕೂ ಹೆಚ್ಚು ಇಲಾಖೆಗಳೊಂದಿಗೆ ನಾವು ವ್ಯವಹರಿಸಬೇಕು. ಇಲಾಖೆಗಳು ಹೆಚ್ಚಿದಂತೆ ಕಿರಿಕಿರಿಯೂ ಹೆಚ್ಚು. ಇದರ ಬದಲು ಏಕಗವಾಕ್ಷಿ ಯೋಜನೆ ಜಾರಿಗೆ ತರಲು ಸಾಧ್ಯ ಇಲ್ಲವೇ. ಬಹುಪಾಲು ಉದ್ಯಮಿಗಳು ಬೀದಿಪಾಲಾಗಿದ್ದು, ಉದ್ಯೋಗದಾತರಿಗೂ ಪಿಂಚಣಿ ಸೌಲಭ್ಯ ಕೊಡಿ ಎಂದು ಕೇಳುವ ಕೆಟ್ಟ ಪರಿಸ್ಥಿತಿ ಬಂದಿದೆ' ಎನ್ನುತ್ತ ಮೌನಕ್ಕೆ ಜಾರಿದರು.

ಗೇರು ಉತ್ಪನ್ನಕ್ಕೆ ಬಂದರೆ ಭಾರತ, ಆಫ್ರಿಕಾ ಮತ್ತು ವಿಯೆಟ್ನಾಂ ಇವು ಜಗತ್ತಿನ ಮುಂಚೂಣಿ ದೇಶಗಳು. ಆಫ್ರಿಕಾದಲ್ಲಿ ಗೇರು ಹೆಚ್ಚಾಗಿ ಬೆಳೆಯುತ್ತಿದೆ. ‌ಜಾಗತಿಕವಾಗಿ ಅಂದಾಜು 50 ಲಕ್ಷ ಟನ್‌ ಕಚ್ಚಾ ಗೇರು ಬೀಜಕ್ಕೆ ಬೇಡಿಕೆ ಇದ್ದರೆ, ಆ ಪೈಕಿ 35ರಿಂದ 38 ಲಕ್ಷ ಟನ್‌ ಕಚ್ಚಾ ಗೇರು ಬೆಳೆಯುವುದು ಆ ಖಂಡದಲ್ಲಿಯೇ. ಗೇರು ಸಂಸ್ಕರಣೆಗೆ ವಿಯೆಟ್ನಾಂ ಹೆಸರು ಮಾಡಿದೆ. ಆದರೆ, ಈ ಎರಡೂ ದೇಶಗಳಲ್ಲಿ ಇದರ ದೇಶೀಯ ಬಳಕೆ ಕಡಿಮೆ. ಭಾರತದಲ್ಲಿ ಬಳಕೆಯ ಪ್ರಮಾಣ ಪ್ರತಿ ವರ್ಷ ಶೇ 8ರಿಂದ 10ರಷ್ಟು ಹೆಚ್ಚುತ್ತಲೇ ಇದೆ. ಕಚ್ಚಾ ಗೇರು ಬೀಜ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದರೆ ಈ ಉತ್ಪನ್ನದ ವಿಷಯದಲ್ಲಿ ನಮ್ಮ ದೇಶ ಜಗತ್ತಿಗೇ ರಾಜನಾಗಬಹುದು ಎಂಬುದು ಗೇರು ಸಂಸ್ಕರಣಾ ಉದ್ಯಮಿ ಕೆ. ಪ್ರಕಾಶ್ ಕಲ್ಬಾವಿ ಅವರ ಆಶಾವಾದ.

ಕಚ್ಚಾ ಗೇರು ಬೀಜವನ್ನು ಭಾರತ, ವಿಯೆಟ್ನಾಂಗೆ ರಫ್ತು ಮಾಡುವ ಬದಲು, ಶೇ 30ರಿಂದ ಶೇ 40ರಷ್ಟಾದರೂ ತನ್ನಲ್ಲೇ ಸಂಸ್ಕರಣೆ ಮಾಡಿ ರಫ್ತು ಮಾಡಬೇಕು ಎಂಬ ಚರ್ಚೆ ಆಫ್ರಿಕಾದಲ್ಲಿಯೂ ಮುನ್ನೆಲೆಗೆ ಬಂದಿದೆ. ಇದು ಕಾರ್ಯರೂಪಕ್ಕೆ ಬಂದರೆ ಭಾರತದ ಈ ಸಂಸ್ಕರಣಾ ಉದ್ಯಮಕ್ಕೆ ಹೊಡೆತ ಬೀಳಲಿದೆ ಎಂಬುದು ಅವರ ಆತಂಕ.

‘ಭಾರತದ ಸಂಸ್ಕರಣಾ ಉದ್ಯಮಕ್ಕೆ 20 ಲಕ್ಷ ಟನ್‌ ಕಚ್ಚಾ ಗೇರು ಬೀಜ ಬೇಕು. ಆದರೆ, ನಮ್ಮ ದೇಶದಲ್ಲಿ ಬೆಳೆಯುವುದು ಸರಾಸರಿ 5 ಲಕ್ಷ ಟನ್‌ ಮಾತ್ರ. ನಮಗೆ ಬೇಕಿರುವ ಕಚ್ಚಾ ಗೇರು ಬೀಜಗಳ ಪೈಕಿ ಶೇ 25ರಷ್ಟು ಮಾತ್ರ ದೇಶೀಯವಾಗಿ ಬೆಳೆದರೆ, ಶೇ 75ರಷ್ಟು ಹೊರದೇಶಗಳನ್ನೇ ಅವಲಂಬಿಸಿದ್ದೇವೆ. ಜಗತ್ತಿನ ಒಟ್ಟಾರೆ ಗೇರು ಬಳಕೆಯಲ್ಲಿ ಭಾರತದ ಪಾಲು ಶೇ 30ರಿಂದ 32ರಷ್ಟಿದೆ. ಕರ್ನಾಟಕದಲ್ಲಿ ಸುಮಾರು 5 ಲಕ್ಷ ಟನ್‌ ಕಚ್ಚಾ ಗೇರು ಬೀಜ ಸಂಸ್ಕರಣೆ ಮಾಡಲಾಗುತ್ತದೆ. ಆದರೆ, ಇಲ್ಲಿ ಬೆಳೆಯುವ ಕಚ್ಚಾ ಗೇರಿನ ಪ್ರಮಾಣ 50 ಸಾವಿರ ಟನ್‌ನಷ್ಟು ಮಾತ್ರ. ಅಂದರೆ ಬೇಡಿಕೆಯ ಶೇ 10ರಷ್ಟು ಸಹ ಇಲ್ಲಿ ಬೆಳೆಯುವುದಿಲ್ಲ. ಕೇರಳ, ಒಡಿಶಾ, ತಮಿಳುನಾಡು, ಗೋವಾಗಳಿಂದ ಶೇ 10ರಷ್ಟು ಕಚ್ಚಾ ಗೇರು ತರಿಸಿಕೊಂಡರೂ, ಕರ್ನಾಟಕದ ಈ ಉದ್ಯಮ ಶೇ 80ರಷ್ಟು ಕಚ್ಚಾ ಗೇರು ಬೀಜದ ಕೊರತೆ ಎದುರಿಸುತ್ತಿದೆ’ ಎಂಬ ಲೆಕ್ಕ ಮುಂದಿಟ್ಟರು ಕೆಸಿಎಂಎ ಅಧ್ಯಕ್ಷ ಎಸ್‌. ಅನಂತ ಕೃಷ್ಣ ರಾವ್‌.

ಭಾರತದಲ್ಲಿ ಬೇಡಿಕೆ ಹೆಚ್ಚಿದ್ದು, ರಫ್ತು ಮಾಡುವುದರಿಂದ ಸಿಗುವ ದರಕ್ಕಿಂತ ದೇಶೀಯ ಮಾರುಕಟ್ಟೆಯಲ್ಲಿಯೇ ಸ್ಪರ್ಧಾತ್ಮಕ ದರ ಸಿಗುತ್ತಿದೆ. ಹೀಗಾಗಿ ದಶಕದ ಹಿಂದೆ 1.25 ಲಕ್ಷ ಟನ್‌ ಇದ್ದ ಸಂಸ್ಕರಿಸಿದ ಗೋಡಂಬಿ ರಫ್ತು ಈಗ ಸುಮಾರು 15 ಸಾವಿರ ಟನ್‌ಗೆ ಕುಸಿದಿದೆ.

ವಿಯೆಟ್ನಾಂ ನಮಗೆ ಕಚ್ಚಾ ಗೇರು ಬೀಜ ಪೂರೈಸುತ್ತಿತ್ತು. 10 ವರ್ಷಗಳಿಂದ ಅವರು ಕಚ್ಚಾ ಗೇರು ಪೂರೈಕೆ ನಿಲ್ಲಿಸಿ, ತಮ್ಮಲ್ಲಿಯೇ ಸಂಸ್ಕರಣೆ ಆರಂಭಿಸಿದ್ದಾರೆ. ಮೇಲಾಗಿ ಅಲ್ಲಿ ಹಾಗೂ ಕಾಂಬೋಡಿಯಾದಲ್ಲಿ ಗೇರು ಬೆಳೆಯನ್ನು 5 ಲಕ್ಷ ಟನ್‌ ಇಳುವರಿ ಬರುವಷ್ಟು ಹೆಚ್ಚಿಸಿದ್ದಾರೆ. ಗೇರು ಬೆಳೆ ಹೆಚ್ಚಳ ಅವರಿಗೆ ಸಾಧ್ಯವಾಗಿದ್ದರೆ ನಮ್ಮ ದೇಶದಲ್ಲಿ ಇದು ಏಕೆ ಸಾಧ್ಯವಿಲ್ಲ ಎಂಬುದು ಕರ್ನಾಟಕ ಗೇರು ಉತ್ಪಾದಕರ ಸಂಘ ಉಪಾಧ್ಯಕ್ಷ ಎಂ. ತುಕಾರಾಮ ಪ್ರಭು, ಕೋಶಾಧಿಕಾರಿ ಗಣೇಶ ಕಾಮತ್‌ ಅವರ ಪ್ರಶ್ನೆ. 

ಗೇರು ಕೃಷಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ 1978ರಲ್ಲಿಯೇ ಕರ್ನಾಟಕ ಗೇರು ಅಭಿವೃದ್ಧಿ ಮಂಡಳಿ ಸ್ಥಾಪಿಸಿದೆ. ಅದರ ಕೇಂದ್ರ ಕಚೇರಿ ಮಂಗಳೂರಿನಲ್ಲಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಗೇರು ಸಂಶೋಧನಾ ಸಂಸ್ಥೆಯ ಶಾಖೆಯೂ ಪುತ್ತೂರಿನಲ್ಲಿದೆ. ಆದರೆ ಲಾಭ ಇಲ್ಲ ಎಂಬ ಕಾರಣಕ್ಕಾಗಿ ಬಹುತೇಕ ರೈತರು ಗೇರು ಕೃಷಿಯಿಂದ ವಿಮುಖರಾಗಿದ್ದಾರೆ. ರಬ್ಬರ್‌, ಅಡಿಕೆ ಮತ್ತಿತರ ಬೆಳೆ ಆ ಜಮೀನನ್ನು ಆವರಿಸಿಕೊಂಡಿವೆ.

‘ಗೇರು ಕೃಷಿ ನಮ್ಮಲ್ಲಿ ಆರಂಭ ಮಾಡುವಾಗಲೇ ಇದೊಂದು ಪಾಳು ಭೂಮಿಯಲ್ಲಿ ಬೆಳೆಯುವ ಕೃಷಿ ಎಂದು ಬಿಂಬಿಸಲಾಯಿತು. ಇತರ ಬೆಳೆಗಳಂತೆ ಗೊಬ್ಬರ, ಕೀಟನಾಶಕ–ಪೌಷ್ಟಿಕಾಂಶ ಬೇಕಿಲ್ಲ ಎಂಬ ಭಾವನೆ ರೈತರಲ್ಲಿ ಬೇರೂರುವಂತೆ ಮಾಡಲಾಯಿತು. ಹೀಗಾಗಿ ಇದೊಂದು ನಿರ್ಲಕ್ಷಿತ ಬೆಳೆಯಾಗಿಯೇ ಉಳಿಯಿತು. ವಿಯೆಟ್ನಾಂನಲ್ಲಿ 1 ಹೆಕ್ಟೇರ್‌ಗೆ ಸರಾಸರಿ 2 ಟನ್‌ ಕಚ್ಚಾ ಗೇರು ಬೀಜದ ಇಳುವರಿ ಇದೆ. ಭಾರತದಲ್ಲಿ ಇದರ ಪ್ರಮಾಣ ಕೇವಲ 450ರಿಂದ 500 ಕೆ.ಜಿ. ಮಾತ್ರ.  ಹೀಗಾಗಿ ಅಡಿಕೆ, ತೆಂಗು ಮತ್ತಿತರ ಬೆಳೆಯಂತೆ ಇದು ಲಾಭದಾಯಕ ಬೆಳೆ ಎಂದು ನಮ್ಮ ರೈತರಿಗೆ ಅನಿಸುತ್ತಲೇ ಇಲ್ಲ. ವಿಜ್ಞಾನಿಗಳು ಹೊಸ ಹೊಸ ಗೇರು ತಳಿ ಅಭಿವೃದ್ಧಿ ಪಡಿಸಿದ್ದರೂ, ಅದು ರೈತರ ಜಮೀನಿಗೆ ಹೋಗಿ ಕೃಷಿಯ ರೂಪ ಪಡೆಯಲಿಲ್ಲ. ಇದು ಸರ್ಕಾರಿ ಬೆಳೆಯಾಗಿ ಉಳಿದಿದೆಯೇ ವಿನಾ, ರೈತರ ಬೆಳೆ ಆಗಲಿಲ್ಲ’ ಎಂದು ವಿಷಾದದಿಂದ ಹೇಳಿದರು ಗೇರು ಸಂಸ್ಕರಣಾ ಉದ್ಯಮಿ ಕೆ. ಪ್ರಕಾಶ್ ಕಲ್ಬಾವಿ.

‘ವಿಯೆಟ್ನಾಂ ಮಾದರಿಯಲ್ಲಿ ನಮ್ಮಲ್ಲಿಯೂ ಈ ಬೆಳೆಯನ್ನು ರೈತರಿಗೆ ಲಾಭದಾಯಕವಾಗಿ ಮಾಡಬೇಕು. ರೈತರಿಗೆ ಕೆ.ಜಿಗೆ ₹140 ದರವಾದರೂ ಸಿಗಬೇಕು. ಆದರೆ, ಇಷ್ಟು ದರ ಕೊಟ್ಟು ಖರೀದಿಸುವ ಸಾಮರ್ಥ್ಯ ಸಂಸ್ಕರಣಾ ಘಟಕಗಳಿಗೆ ಇಲ್ಲ. ಏಕೆಂದರೆ, ವಿದೇಶದಿಂದ ಆಮದಾಗುವ ಗೇರು ಬೀಜದ ಮಾರಾಟದ ದರದೊಂದಿಗೆ ಸ್ಪರ್ಧಿಸಲು ನಮ್ಮ ಘಟಕಗಳಿಗೆ ಸಾಧ್ಯವಾಗುವುದಿಲ್ಲ’ ಎನ್ನುತ್ತಾರೆ ಇಲ್ಲಿಯ ಉದ್ಯಮಿಗಳು.

ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೋಲಾರ, ಶಿವಮೊಗ್ಗ, ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ಗೇರು ಕೃಷಿ ಇದೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ಗೇರು ಬೀಜ ಸಂಸ್ಕರಣಾ ಉದ್ಯಮಗಳಿವೆ. ಆ ಪೈಕಿ ಹೆಚ್ಚಿನವು ಇರುವುದು ಕರಾವಳಿ ಭಾಗದಲ್ಲಿ.

‘ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಒಟ್ಟು 25,696 ಹೆಕ್ಟೇರ್‌ಗಳಷ್ಟು ಗೇರುಬೀಜದ ನೆಡುತೋಪು ಹೊಂದಿದೆ. ಇವುಗಳ ಹರಾಜಿನಿಂದ ನಿಗಮವು ಐದಾರು ವರ್ಷಗಳ ಹಿಂದೆ ₹6 ಕೋಟಿಗೂ ಹೆಚ್ಚು ವರಮಾನ ಗಳಿಸುತ್ತಿತ್ತು. 2023–24ರಲ್ಲಿ  ಈ ವರಮಾನ ₹3.35 ಕೋಟಿಗೆ ಕುಸಿದಿದೆ. ಕಚ್ಚಾ ಗೇರುಬೀಜದ ಧಾರಣೆ ಕುಸಿತ, ಹವಾಮಾನ ವೈಪರೀತ್ಯಗಳಿಂದಾಗಿ ನಿಗಮವೇ ನಷ್ಟದ ಹಾದಿಯಲ್ಲಿದೆ’ ಎನ್ನುತ್ತಾರೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕರಿಕಾಳನ್‌.

ಕಚ್ಚಾ ಗೇರು ಬೀಜದ ಧಾರಣೆ ಕೆಲವು ವರ್ಷಗಳಿಂದ ಏರಿದ್ದೇ ಕಡಿಮೆ. ಕೆ.ಜಿ.ಗೆ ₹80ರಿಂದ ₹90 ಮಾತ್ರ ಇತ್ತು. ಈಗ ಒಳ್ಳೆಯ ಗೇರುಬೀಜದ ಧಾರಣೆ ತುಸು ಏರಿಕೆ ಕಂಡಿದ್ದು, ಕೆ.ಜಿ.ಗೆ ₹145ರಿಂದ ₹150 ದರ ಇದೆ. ಇದೂ ಕಡಿಮೆಯೇ. ದರ ಇಷ್ಟೊಂದು ಕಡಿಮೆ ಇರುವಾಗ ನಿಗಮದ ಗೇರು ನೆಡುತೋಪುಗಳನ್ನು ಭೋಗ್ಯಕ್ಕೆ ಪಡೆಯಲು ಹಿಂದೇಟು ಹಾಕುತ್ತಾರೆ. ಅಲ್ಲದೇ ಹವಾಮಾನ ವೈಪರೀತ್ಯವೂ ಗೇರು ಕೃಷಿಗೆ ದೊಡ್ಡ ಹೊಡೆತ ನೀಡುತ್ತಿದೆ. ಡಿಸೆಂಬರ್‌ ತಿಂಗಳಲ್ಲಿ ಗೇರು ಬೀಜದ ಮರಗಳು ಹೂ ಬಿಡುವ ಕಾಲ. ಕೆಲ ವರ್ಷಗಳಿಂದ ಈ ತಿಂಗಳಲ್ಲೂ ಮಳೆಯಾಗುತ್ತಿದೆ. ಆಗ ಹೂವೆಲ್ಲ ಹಾಳಾಗುತ್ತದೆ‌ ಎನ್ನುವುದು ಅವರ ವಿವರಣೆ.

‘ಸಾಮಾನ್ಯವಾಗಿ ಫೆಬ್ರುವರಿಯಿಂದ ಮೇ ತಿಂಗಳಲ್ಲಿ ಗೇರು ಮರಗಳಿಂದ ಹಣ್ಣುಗಳು ಉದುರುತ್ತವೆ. ಅವನ್ನು ಹೆಕ್ಕಬೇಕು. ಹೀಗಾಗಿ ಕೃಷಿ ಕಾರ್ಮಿಕರು ಹೆಚ್ಚು ಬೇಕು. ಗೇರು ಗಿಡ ನಾಟಿ ಮಾಡಿದ ನಂತರ 3–4 ವರ್ಷಕ್ಕೆ ಇಳುವರಿ ಶುರುವಾಗುತ್ತದೆ. ಒಂದು ಗೇರು ಮರದ ಆಯಸ್ಸು ಕನಿಷ್ಠ 20 ವರ್ಷ. ಕೆಲ ರೈತರು ಸಾವಯವ ಗೊಬ್ಬರ ಕೊಡುತ್ತಾರೆ. ಹೂವು ಬಿಡುವಾಗ ಅದು ಉದುರುವುದನ್ನು ತಡೆಯಲು ಮದ್ದು ಸಿಂಪಡಿಸಬೇಕಾಗುತ್ತದೆ. ಒಂದು ಎಕರೆಗೆ ನಾಟಿ ಮಾಡಲು ಸರಾಸರಿ ₹60 ಸಾವಿರ ಮತ್ತು ಪ್ರತಿ ವರ್ಷದ ನಿರ್ವಹಣೆಗೆ ₹50 ಸಾವಿರ ವೆಚ್ಚವಾಗುತ್ತದೆ. ಕಚ್ಚಾಗೇರು ಬೀಜ ಮಾರುವುದು ರೈತರಿಗೆ ಲಾಭದಾಯಕವಲ್ಲ. ಕೆ.ಜಿಗೆ ಕನಿಷ್ಠ ಕೆ.ಜಿಗೆ 150 ಬೆಂಬಲ ಬೆಲೆ ನೀಡಬೇಕು’ ಎನ್ನುತ್ತಾರೆ ಪೈವಳಿಕೆಯ ಪ್ರಗತಿಪರ ಗೇರು ಕೃಷಿಕ ವಿಶ್ವಕೇಶವ ಕೆ. ಇದು ಬಹುಪಾಲು ರೈತರ ಬೇಡಿಕೆಯೂ ಹೌದು.

ಗ್ರಾಮೀಣ ಪ್ರದೇಶದ ಸಾವಿರಾರು ಮಂದಿ ಬದುಕು ಕಟ್ಟಿಕೊಳ್ಳಲು ಇದು ಆಸರೆಯಾಗಿದೆ. ಗೇರು ಬೀಜವನ್ನು ಕಾಯಿಸಿ, ಹೊರಗಿನ ಕವಚದಿಂದ ಸಿಪ್ಪೆಸಹಿತ ಗೋಡಂಬಿಯನ್ನು ಬೇರ್ಪಡಿಸುವುದು, ಗೋಡಂಬಿಯ ಸಿಪ್ಪೆಯನ್ನು ಸುಲಿಯುವುದು, ಸಿಪ್ಪೆ ಸುಲಿದ ಗೋಡಂಬಿಯನ್ನು ಬೇರೆ ಬೇರೆ ಗ್ರೇಡ್‌ಗಳಾಗಿ ವಿಂಗಡಿಸುವ ಕಾರ್ಯಕ್ಕೆ ಮಹಿಳಾ ಕಾರ್ಮಿಕರನ್ನೇ ನೆಚ್ಚಿಕೊಳ್ಳಲಾಗಿದೆ. ಈ ಕಾಯಕದ ಮೂಲಕ ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ಒದಗಿಸಿ, ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ.

ಉಡುಪಿ ತಾಲ್ಲೂಕಿನ ಪೆರ್ಡೂರು ಗ್ರಾಮದ ಗೇರುಬೀಜ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿರುವ ಸುಕನ್ಯಾ, ‘ಈಚಿನ ಕೆಲ ವರ್ಷಗಳಿಂದ ನಮಗೂ ಇಎಸ್‌ಐ/ಪಿಎಫ್‌ ಸೌಲಭ್ಯ ಸಿಗುತ್ತಿವೆ. ನಮ್ಮ ಕಂಪನಿಯಲ್ಲಿ ವರ್ಷಕ್ಕೊಮ್ಮೆ ಬೋನಸ್‌ ಸಹ ಕೊಡುತ್ತಾರೆ’ ಎಂದು ಸಂತಸದಿಂದಲೇ ಹೇಳುತ್ತಾರೆ.

‘ಕೆಲವು ಕಾರ್ಖಾನೆಗಳಲ್ಲಿ ಕೆ.ಜಿ. ಕಚ್ಚಾ ಗೇರುಬೀಜವನ್ನು ಕಟ್ಟಿಂಗ್ ಮಾಡಿದ್ದಕ್ಕೆ ₹30ರಿಂದ ₹32ರವರೆಗೆ ನೀಡಲಾಗುತ್ತದೆ. ಈ ಕೆಲಸಕ್ಕೆ ಹೋಗುವ ಕೆಲವು ಮಹಿಳೆಯರು ದಿನದಲ್ಲಿ ₹ 700ರವರೆಗೂ ದುಡಿಯುತ್ತಾರೆ. ಅವರ ಕೆಲಸದ ಸಾಮರ್ಥ್ಯಕ್ಕೆ ತಕ್ಕಂತೆ ಸಂಬಳ ಪಡೆಯಲು ಅವಕಾಶವಿದೆ’ ಎನ್ನುತ್ತಾರೆ ಇನ್ನೊಂದು ಗೇರು ಬೀಜ ಕಾರ್ಖಾನೆಯ ಕಾರ್ಮಿಕರಾದ ಮೋಹಿನಿ.

‘ಗೇರು ಬೀಜ ಸಂಸ್ಕರಣೆಯ ಕಾರ್ಖಾನೆಗಳು ನಷ್ಟಕ್ಕೀಡಾಗಲು ಮಾಲೀಕರ ಅತಿ ಆಸೆಯೂ ಕಾರಣ’ ಎನ್ನುತ್ತಾರೆ ಉಡುಪಿ ಜಿಲ್ಲೆ ಉಪ್ಪುಂದದ ಗೇರು ಬೀಜ ಕಾರ್ಖಾನೆಯ ಮಾಲೀಕ ಪ್ರಕಾಶ್‌ ಭಟ್‌.

‘ಕಾರ್ಮಿಕರನ್ನು ಬಳಸಿ ಒಂದು ಕಾರ್ಖಾನೆಯಲ್ಲಿ ದಿನಕ್ಕೆ 20 ಚೀಲ ಸಂಸ್ಕರಿಸಿದ ಗೇರುಬೀಜ ಸಿದ್ಧಪಡಿಸಬಹುದಾದರೆ, ಕೋಟ್ಯಂತರ ರೂಪಾಯಿ ಖರ್ಚುಮಾಡಿ ಯಂತ್ರೋಪಕರಣ ಖರೀದಿಸಿ ಅದನ್ನು ಬಳಸಿ ದಿನಕ್ಕೆ 200 ಚೀಲ ಉತ್ಪಾದನೆ ಮಾಡಲಾಗುತ್ತದೆ. ಕೋಟ್ಯಂತರ ಸಾಲ ಮಾಡಿ ಯಂತ್ರೋಪಕರಣ ಖರೀದಿಸಿರುವ ಕೆಲ ಕಂಪನಿಗಳು, ಸಾಲಕಟ್ಟಲಾಗದೆ ಬಾಗಿಲು ಮುಚ್ಚಿವೆ. ಕಾರ್ಖಾನೆಗಳ ನಡುವೆ ಆರೋಗ್ಯಕರವಲ್ಲದ ಪೈಪೋಟಿಯೂ ನಷ್ಟಕ್ಕೆ ಕಾರಣ. ನಮ್ಮ ಕಾರ್ಖಾನೆಯಲ್ಲಿ 60 ಕಾರ್ಮಿಕರಿದ್ದಾರೆ. ನಾವು ಯಂತ್ರ ಬಳಸುತ್ತಿಲ್ಲ. ಹೀಗಾಗಿ ನಮ್ಮ ಕಾರ್ಖಾನೆಗೆ ಯಾವುದೇ ಸಮಸ್ಯೆಯಾಗಿಲ್ಲ’ ಎಂದೂ ಅವರು ಹೇಳುತ್ತಾರೆ.

ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಆರ್ಥಿಕ ಬುನಾದಿ ಹಾಕಿದ್ದು ಹೆಂಚು, ಬೀಡಿ ಹಾಗೂ ಗೇರು ಉದ್ಯಮ. ಹೆಂಚು– ಬೀಡಿ ಉದ್ಯಮ ನೆಲಕಚ್ಚಿವೆ. ಕೈ ಹಿಡಿದಿರುವುದು ಗೇರು ಉದ್ಯಮ ಮಾತ್ರ. ನಷ್ಟದ ಹಾದಿಯನ್ನು ತುಳಿದಿರುವ ಇದಕ್ಕೆ ಪುನಶ್ಚೇತನ ಸಿಗದಿದ್ದರೆ ಕರಾವಳಿಯ ಪುರಾತನ ಉದ್ಯಮಗಳು ನೆನಪಿನಲ್ಲಿ ಮಾತ್ರ ಉಳಿಯುತ್ತದೆ.

ಗೇರು ಬೀಜ ಸಂಸ್ಕರಣೆಯಲ್ಲಿ ತೊಡಗಿರುವ ಕಾರ್ಮಿಕರು  ಪ್ರಜಾವಾಣಿ ಚಿತ್ರ: ಫಕ್ರುದ್ದೀನ್‌ ಎಚ್‌.
 ನೇತ್ರ ಜಂಬೊ ತಳಿಯ ಗೇರುಬೀಜ
ಕಾರ್ಖಾನೆಯಲ್ಲಿ ಗೋಡಂಬಿ ಸಂಸ್ಕರಣೆ ಪ್ರಜಾವಾಣಿ ಚಿತ್ರ: ಫಕ್ರುದ್ದೀನ್‌ ಎಚ್‌.
ಮಾರಾಟಕ್ಕೆ ಸಿದ್ಧವಾಗಿರುವ ಗೋಡಂಬಿ ಪ್ರಜಾವಾಣಿ ಚಿತ್ರ: ಫಕ್ರುದ್ದೀನ್‌ ಎಚ್‌.

ಗೇರು ಕೃಷಿ ವಿಸ್ತರಿಸದೆ ಉಳಿಗಾಲವಿಲ್ಲ

ಕರ್ನಾಟಕದಲ್ಲಿ ಗೇರು ಕೃಷಿಗೆ ಉತ್ತೇಜನ ನೀಡುವ ಕೆಲಸವನ್ನು ನಾವು 20 ವರ್ಷಗಳ ಹಿಂದೆಯೇ ಮಾಡಬೇಕಿತ್ತು. ರಾಜ್ಯದ 26 ಜಿಲ್ಲೆಗಳ ಹವಾಮಾನ (18ರಿಂದ 40 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ಸೂಕ್ತ. ಹೆಚ್ಚು ಚಳಿ ಅತಿಯಾದ ಉಷ್ಣತೆ ಪೂರಕವಲ್ಲ) ಗೇರು ಕೃಷಿಗೆ ಪೂರಕವಾಗಿದೆ ಎಂದು ಸಂಶೋಧನಾ ವರದಿ ಹೇಳಿವೆ. ಕರಾವಳಿಗೆ ಸೀಮಿತವಾಗಿರುವ ಗೇರು ಮಂಡಳಿ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿ ಗೇರು ಬೆಳೆ ಹೆಚ್ಚಿಸಬೇಕು. ಗೇರು ಮರಕ್ಕೆ ಕಾಳುಮೆಣಸಿನ ಬಳ್ಳಿಯನ್ನು ಬೆಳೆಸಬಹುದು. ಮರ ದೊಡ್ಡವಾದರೆ ಅದರ ಕೆಳಗೆ ಮಿಶ್ರ ಬೇಸಾಯ ಸಹ ಮಾಡಬಹುದು. ಗೇರು ಕೃಷಿ ಮಾಡಿದರೆ ವಾತಾವರಣವೂ ತಂಪಾಗುತ್ತದೆ. ಆಫ್ರಿಕಾದಲ್ಲಿ ಇದು ಸಾಬೀತಾಗಿದೆ.  ನಮ್ಮ ಹಂತದಲ್ಲಿ ಪೇಜಾವರ ಮಠ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವಿಜಯಲಕ್ಷ್ಮಿ ಫೌಂಡೇಷನ್‌ ಕೆಸಿಎಂಎ ಸಹಯೋಗದಲ್ಲಿ 2015ರಿಂದ ಗೇರು ಕೃಷಿಗೆ ಉತ್ತೇಜನ ನೀಡುವ ಕೆಲಸ ಮಾಡುತ್ತಿದ್ದೇವೆ.  ಕಸಿ ಮಾಡಿದ ಗೇರು ಸಸಿಯನ್ನು ‘ವೃಕ್ಷ ರಕ್ಷಾ ವಿಶ್ವ ರಕ್ಷಾ’ ಯೋಜನೆಯಡಿ ಉಚಿತವಾಗಿ ನೀಡುತ್ತಿದ್ದೇವೆ. ಈ ವರೆಗೆ 13 ಲಕ್ಷ ಸಸಿ ವಿತರಿಸಿದ್ದೇವೆ. ರಾಜ್ಯದಲ್ಲಿ 4.5 ಕೋಟಿ ಗಿಡ ನೆಟ್ಟರೆ ಮುಂದಿನ 810 ವರ್ಷಗಳಲ್ಲಿ ಇಂದಿನ ಅಗತ್ಯದ ಕಚ್ಚಾ ಗೇರು ಪೂರೈಸಬಹುದು. ಒಂದು ಗಿಡ ನೆಡಲು ₹100 ಖರ್ಚು ಹಿಡಿದರೂ 4.5 ಕೋಟಿ ಗಿಡ ನೆಡಲು ₹450 ಕೋಟಿ ಬೇಕು. 1 ಗಿಡಕ್ಕೆ ವರ್ಷಕ್ಕೆ 10 ಕೆ.ಜಿ. ಕಚ್ಚಾ ಗೇರು ಉತ್ಪಾದನೆಯಾಗುತ್ತದೆ. ಹೀಗಾಗಿ ಇವುಗಳಿಂದ 4.5 ಲಕ್ಷ ಟನ್‌ ಉತ್ಪಾದನೆಯಾದರೆ 810 ವರ್ಷಗಳಲ್ಲಿ ರೈತರಿಗೆ ₹6500 ಕೋಟಿ ಆದಾಯ ಬರುತ್ತದೆ. ಸಂಸ್ಕರಿಸಿದ ಗೇರಿಗೆ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದ್ದು ಸರ್ಕಾರಕ್ಕೆ ಒಂದು ದಶಕದಲ್ಲಿ ಹೂಡಿಕೆ ಹಣ ವಾಪಸ್‌ ಬರುತ್ತದೆ. ಉದ್ಯೊಗ ಸೃಜನೆಯೂ ಆಗುತ್ತದೆ.
-ಎಸ್. ಅನಂತ ಕೃಷ್ಣ ರಾವ್‌ ಅಧ್ಯಕ್ಷ ಕರ್ನಾಟಕ ಗೇರು ಉತ್ಪಾದಕರ ಸಂಘ

ಉಪ ಉತ್ಪನ್ನಕ್ಕೆ ಸಿಗಬೇಕಿದೆ ಒತ್ತು

ಗೇರು ಹಣ್ಣಿನಿಂದ ಕಚ್ಚಾ ಗೇರು ಬೀಜ ಹೊರ ತೆಗೆದ ನಂತರ ಆ ಹಣ್ಣು (ಹಣ್ಣಿನ ಶೇ 80ರಷ್ಟು ಭಾಗ) ಈಗ ಸಂಪೂರ್ಣ ವ್ಯರ್ಥವಾಗುತ್ತಿದೆ. ಇದರಿಂದ ಜ್ಯೂಸ್‌ ಎಥೆನಾಲ್‌ ಫೆನ್ನಿ (ಮದ್ಯ) ತಯಾರಿಸಲು ಅವಕಾಶ ಇದೆ. ಇದು ಸಾಧ್ಯವಾದರೆ ಹೀಗೆ ವ್ಯರ್ಥವಾಗುವ ಗೇರು ಹಣ್ಣಿಗೆ ಕೆ.ಜಿಗೆ ₹10 ದೊರೆತರೂ ರೈತರಿಗೆ ಇದು ಲಾಭದಾಯಕ ಕೃಷಿ ಆಗುತ್ತದೆ. ಗೋವಾದಲ್ಲಿ ತೆರಿಗೆ ವಿಧಿಸದೇ ಫೆನ್ನಿ ತಯಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಇದಕ್ಕೆ ಅಬಕಾರಿ ಸುಂಕ ವಿಧಿಸಲಾಗುತ್ತದೆ. ಗೇರು ಕೃಷಿಕರು ಹಾಗೂ ಸಂಸ್ಕರಣಾ ಘಟಕಗಳ ನೆರವಿಗೆ ಸರ್ಕಾರ ಬರಬೇಕು. ಸಣ್ಣ ಘಟಕಗಳಿಗೆ ಸಬ್ಸಿಡಿ ನೀಡುವ ಯೋಜನೆ ರೂಪಿಸಬೇಕು. ಕೆಲ ಕಾನೂನು ಸರಳೀಕರಣಗೊಳಿಸಿ ತೆರಿಗೆ ಕಡಿಮೆ ಮಾಡಬೇಕು.
-ಕೆ.ಪ್ರಕಾಶ್‌ ಕಲ್ಬಾವಿ ಗೇರು ಸಂಸ್ಕರಣಾ ಉದ್ಯಮಿ ಮಂಗಳೂರು

ಎಪಿಎಂಸಿ ಶುಲ್ಕದ ಹೊರೆ

ಮಂಗಳೂರಿನ ನವಮಂಗಳೂರು ಬಂದರಿನಲ್ಲಿ ಆಮದು– ರಫ್ತು ದಟ್ಟಣೆ ಇಲ್ಲ. ಹೀಗಾಗಿ ಆಫ್ರಿಕಾ ಖಂಡದಿಂದ ಇಲ್ಲಿಗೆ ಹಡಗಿನಲ್ಲಿ ಕಚ್ಚಾ ಗೇರು ಬೀಜ ತರಿಸಿಕೊಂಡು ಅದನ್ನು ಕೇರಳ ಮತ್ತಿತರ ರಾಜ್ಯಗಳ ಸಂಸ್ಕರಣಾ ಘಟಕಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಮಂಗಳೂರು ಕಚ್ಚಾ ಗೇರು ಬೀಜ ಮಾರಾಟದ ಹಬ್‌ ಆಗಿಯೂ ಬೆಳೆಯುತ್ತಿತ್ತು. ಎಪಿಎಂಸಿ ಕಾಯ್ದೆ ರದ್ದಾಗಿದ್ದರಿಂದಾಗಿ ರಾಜ್ಯದಲ್ಲಿ ಐದಾರು ವರ್ಷ ಎಪಿಎಂಸಿ ಶುಲ್ಕ ಇರಲಿಲ್ಲ. ಈ ಕಾರಣ ವರ್ಷಕ್ಕೆ ಸರಾಸರಿ 5 ಲಕ್ಷ ಟನ್‌ ಕಚ್ಚಾ ಗೇರು ಬೀಜ ಮಂಗಳೂರು ಬಂದರಿಗೆ ಬರುತ್ತಿತ್ತು. ಆದರೆ ಈಗ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ಮರುಜಾರಿಗೊಳಿಸಿದ್ದು ಅಧಿಸೂಚಿತ ಉತ್ಪನ್ನ ಎಂಬ ಕಾರಣಕ್ಕೆ ಟ್ರೇಡಿಂಗ್‌ ಮಾಡುವ ಕಚ್ಚಾ ಗೇರುಬೀಜಕ್ಕೂ ಎಪಿಎಂಸಿ ಸೆಸ್‌ ವಿಧಿಸಲಾಗುತ್ತಿದೆ. ಇದರ ಪರಿಣಾಮ ಹೊರರಾಜ್ಯದವರು ಇಲ್ಲಿಂದ ಖರೀದಿಸುವುದನ್ನು ನಿಲ್ಲಿಸಿದ್ದರಿಂದ ಈ ವರ್ಷ ಮಂಗಳೂರಿನ ಬಂದರಿಗೆ ಆಮದಾಗುವ ಕಚ್ಚಾ ಗೇರು 2 ಲಕ್ಷ ಟನ್‌ಗೆ ಕುಸಿದಿದೆ. ಅಂದರೆ ₹3000 ಕೋಟಿ ಮೌಲ್ಯದ ಕಚ್ಚಾ ಮಾಲು ಆಮದು ಕಡಿಮೆಯಾಗಿದೆ. ಇದರಿಂದ ₹150 ಕೋಟಿ ಜಿಎಸ್‌ಟಿ ಖೋತಾ ಆಗಿದೆ. ಎಪಿಎಂಸಿಯ (ಶೇ 0.6) ಸೆಸ್‌ನ ₹18 ಕೋಟಿಯ ಆಸೆಗಾಗಿ ₹150 ಕೋಟಿಯ ತೆರಿಗೆಯನ್ನು ಸರ್ಕಾರ ಕಳೆದುಕೊಂಡಿದೆ. 
–ಎಂ. ತುಕಾರಾಮ ಪ್ರಭು ಉಪಾಧ್ಯಕ್ಷ ಕರ್ನಾಟಕ ಗೇರು ಉತ್ಪಾದಕರ ಸಂಘ 

ಗೇರು ನಿಗಮಕ್ಕೆ ₹60 ಕೋಟಿಗೆ ಬೇಡಿಕೆ

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ನಿಗಮವು ಸುಮಾರು 1 ಸಾವಿರ ಹೆಕ್ಟೇರ್‌ಗಳಷ್ಟು ಗೇರು ತೋಪು ಪುನರುಜ್ಜಿವನಕ್ಕೆ ಕ್ರಮ ಕೈಗೊಂಡಿದೆ. ಗೇರು ಸಸಿ ನರ್ಸರಿ ಅಭಿವೃದ್ಧಿ ಗೇರು ಗಿಡಗಳ ನಾಟಿ ಹಾಗೂ ಹೊಸ ಕಸಿ ಗಿಡಗಳನ್ನು ಬೆಳೆಸಿ ಹಳೆ ಗೇರು ತೋಪುಗಳ ಪುನರುಜ್ಜಿವನಗೊಳಿಸಲು ಒಟ್ಟು ₹ 50 ಕೋಟಿ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ. ರಾಷ್ಟ್ರೀಯ ತೋಟಗಾರಿಕಾ ಅಭಿಯಾನದಡಿ ₹ 10 ಕೋಟಿ ಒದಗಿಸುವಂತೆ ಕೋರಿದ್ದೇವೆ.
–ಕಮಲಾ ಕರಿಕಾಳನ್ ವ್ಯವಸ್ಥಾಪಕ ನಿರ್ದೇಶಕಿ ಕರ್ನಾಕ ಗೇರು ಅಭಿವೃದ್ಧಿ ನಿಗಮ

ಹೊಸ ತಳಿ ಅಭಿವೃದ್ಧಿ

ಪುತ್ತೂರು ಗೇರು ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿರುವ ಗೇರು ಗಿಡಗಳಾದ ಭಾಸ್ಕರ ವಿಆರ್ ಐ-3 ಉಳ್ಳಾಲ -3 ತಳಿಗಳು ಪ್ರಸ್ತುತ ಬಳಕೆಯಲ್ಲಿವೆ. ಈಚೆಗೆ ನೇತ್ರಾ ಜಂಬೊ-1 ಮತ್ತು ನೇತ್ರಾ ಗಂಗಾ ತಳಿಗಳನ್ನೂ ಕೇಂದ್ರವು ಪರಿಚಯಿಸಿದೆ. ಇವು ಒಣಭೂಮಿಯ ಗೇರು ಕೃಷಿಯಲ್ಲಿ ಕೃಷಿಯಲ್ಲಿ ಹೊಸ ಭರವಸೆ ಮೂಡಿಸಿವೆ. ಸಂಶೋಧನಾ ಕೇಂದ್ರವು ಗೇರು ಬೀಜದಿಂದ ಸಿಪ್ಪೆ ಬೇರ್ಪಡಿಸುವ ತಂತ್ರ ಗೇರು ಕೃಷಿ ಹಾಗೂ ಅದಕ್ಕೆ ಬಳಸುವ ಪೋಷಕಾಂಶಗಳ ಸಮಗ್ರ ಮಾಹಿತಿ ನೀಡುವ ಆ್ಯಪ್‌ ಗೇರುಗಿಡಗಳ ಟ್ರ್ಯಾಕ್‌ ಮಾಡುವ ತಂತ್ರಜ್ಞಾನಗಳನ್ನೂ ಅಭಿವೃದ್ಧಿಪಡಿಸಿದೆ. ಗೇರುಕೃಷಿಗೆ ಪುನಶ್ಚೇತನ ನೀಡಬೇಕಾದರೆ ರೈತೋತ್ಪಾದಕ ಕಂಪನಿಗಳು ಸ್ವಸಹಾಯ ಸಂಘಗಳ ಮೂಲಕ ಗೇರುಬೀಜದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಬೇಕು. ಗೇರು ಹಣ್ಣು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ. ಅದರಿಂದ ಜೆಲ್ಲಿ ಸೈಡರ್‌ ಪಾನೀಯ ಜಾಮ್‌ ಅದರ ಚರಟದಿಂದ ಬಿಸ್ಕತ್‌ ತಯಾರಿಸುವ ತಂತ್ರಜ್ಞಾನಗಳು ಲಭ್ಯ. ಅವುಗಳನ್ನು ಜನಪ್ರಿಯಗೊಳಿಸಬೇಕು ಎನ್ನುವುದು ಈ ಕೇಂದ್ರದ ಮೂಲಗಳ ಸಲಹೆ.

ಪರಿಕಲ್ಪನೆ: ಯತೀಶ್‌ ಕುಮಾರ್ ಜಿ.ಡಿ

ಪೂರಕ ಮಾಹಿತಿ: ಪ್ರವೀಣ್‌ ಕುಮಾರ್‌ ಪಿ.ವಿ., ನವೀನ್‌ ಕುಮಾರ್‌ ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.