ADVERTISEMENT

ಒಳಒಪ್ಪಂದದ ಏಟು: ಹೊರಗೇ ವಹಿವಾಟು

ಎಂ.ಎನ್.ಯೋಗೇಶ್‌
Published 27 ಏಪ್ರಿಲ್ 2019, 20:15 IST
Last Updated 27 ಏಪ್ರಿಲ್ 2019, 20:15 IST
   

ಮಂಡ್ಯ: ಏಷ್ಯಾ ಖಂಡದಲ್ಲೇ ಅತೀ ದೊಡ್ಡದಾದ ಮದ್ದೂರು ಎಳನೀರು ಮಾರುಕಟ್ಟೆಯಲ್ಲಿ ರೈತರ ಮೇಲೆ ನಡೆಯುವ ಶೋಷಣೆಗೆ ಹಲವು ಮುಖಗಳಿವೆ. ಹೆಸರಿಗಷ್ಟೇ ಮಾರುಕಟ್ಟೆ ಪ್ರಾಂಗಣ ದೊಡ್ಡದಿದೆ, ಆದರೆ ಸಕಲ ವಹಿವಾಟು ಮಾರುಕಟ್ಟೆಯ ಹೊರಭಾಗದಲ್ಲೇ ನಡೆಯುತ್ತದೆ.

ಮಾರುಕಟ್ಟೆಯಲ್ಲಿರುವ ಪ್ರತಿಯೊಬ್ಬ ವರ್ತಕ ಹತ್ತಾರು ಮಂದಿ ಮಧ್ಯವರ್ತಿಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಮಧ್ಯವರ್ತಿ ನಿಗದಿ ಮಾಡಿದ ಬೆಲೆಯೇ ಅಂತಿಮ, ಹೆಚ್ಚಿನ ಬೆಲೆ ಕೇಳುವ ಅವಕಾಶವೂ ರೈತರಿಗೆ ಇಲ್ಲ. ರೈತ ಮಾರುಕಟ್ಟೆಗೆ ಎಳನೀರು ತಂದರೆ ಗೇಟ್‌ನಲ್ಲೇ ಕಾಯುತ್ತಾ ನಿಂತಿರುವ ಮಧ್ಯವರ್ತಿಗಳಲ್ಲೊಬ್ಬ ಗಾಡಿಯೊಳಗಿಂದ ಒಂದು ಎಳನೀರು ಕಿತ್ತುಕೊಂಡು ಚೀಟಿಯೊಂದನ್ನು ಕೊಡುತ್ತಾನೆ. ಅಲ್ಲಿಗೆ ಮುಗಿಯಿತು, ಆತ ನಿಗದಿ ಮಾಡಿದಷ್ಟು ಹಣವನ್ನು ರೈತ ಪಡೆಯಬೇಕು. ರೈತನಿಗೆ ಬೇರೆ ಆಯ್ಕೆಯೇ ಸಿಗುವುದಿಲ್ಲ.

ಆ ಬೆಲೆಯನ್ನು ನಿರಾಕರಿಸಿ ರೈತ ಮಾರುಕಟ್ಟೆಯೊಳಕ್ಕೆ ಹೋದರೆ ಎಳನೀರನ್ನು ಯಾವ ವರ್ತಕರೂ ಮುಟ್ಟುವುದಿಲ್ಲ. ಒಬ್ಬರು ಮುಟ್ಟಿದ ಮೇಲೆ ಮತ್ತೊಬ್ಬ ವರ್ತಕ ಅದನ್ನು ಖರೀದಿ ಮಾಡುವುದಿಲ್ಲ. ದಲ್ಲಾಳಿ, ವರ್ತಕರು ಹಾಗೂ ಎಪಿಎಂಸಿ ಅಧಿಕಾರಿಗಳ ನಡುವಿನ ಒಳಒಪ್ಪಂದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ. ಹೀಗಾಗಿ ರೈತರು ಮಾರುಕಟ್ಟೆಗೆ ಎಳನೀರು ಕೊಂಡೊಯ್ಯಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಕಡೆಗೆ ವರ್ತಕರು ಎಳನೀರು ಖರೀದಿ ಹಣ ನೀಡುವಾಗ ಮಧ್ಯವರ್ತಿಗಳ ಕಮಿಷನ್‌ ಹಿಡಿದುಕೊಂಡೇ ಕೊಡುತ್ತಾರೆ. ಮಾರುಕಟ್ಟೆಯಲ್ಲಿ ಮಾರುವವರು, ಕೊಳ್ಳುವವರಿಗಿಂತ ಮಧ್ಯವರ್ತಿಗಳೇ ರಾಜರಂತೆ ಮೆರೆಯುತ್ತಾರೆ.

ADVERTISEMENT

ನಿಯಮದ ಪ್ರಕಾರ, ಮಾರುಕಟ್ಟೆಯ ಪ್ರಾಂಗಣದಲ್ಲಿ ಎಳನೀರನ್ನು ಗುಣಮಟ್ಟಕ್ಕೆ ಅನುಗುಣವಾಗಿ ರಾಶಿ ಹಾಕಿ ಎಪಿಎಂಸಿ ಅಧಿಕಾರಿಗಳು, ವರ್ತಕರು ಹಾಗೂ ರೈತರ ಸಮ್ಮುಖದಲ್ಲಿ ಬೆಲೆ ನಿಗದಿ ಮಾಡಬೇಕು. ಆದರೆ ನಿಯಮಗಳು ಕಾಗದದಲ್ಲಿ ಮಾತ್ರವೇ ಉಳಿದಿದ್ದು ಎಲ್ಲವೂ ದಲ್ಲಾಳಿಗಳ ಮೂಗಿನ ನೇರಕ್ಕೆ ನಡೆಯುತ್ತಿವೆ. ವರ್ತಕರು ಹಾಗೂ ದಲ್ಲಾಳಿಗಳ ಮೋಸದಾಟಕ್ಕೆ ಬಲಿಯಾಗುತ್ತಿರುವ ರೈತರು ತೋಟದಲ್ಲೇ ಎಳನೀರು ಮಾರಾಟ ಮಾಡುತ್ತಿದ್ದಾರೆ.

ಎಳನೀರು ಎಣಿಕೆಯಲ್ಲೂ ರೈತರಿಗೆ ಮೋಸವಾಗುತ್ತಿದೆ. ನೂರಕ್ಕೆ ಇಂತಿಷ್ಟು ಎಳನೀರು ಬಿಡುವುದು ಕಡ್ಡಾಯವಾಗಿದೆ. ಆದರೆ ಎಳನೀರು ಬಿಡಬೇಕು ಎಂಬುದು ನಿಯಮವಲ್ಲ, ವರ್ತಕರು ಸೃಷ್ಟಿಮಾಡಿಕೊಂಡಿರುವ ನಿಯಮವನ್ನು ಕಡ್ಡಾಯ ವಾಗಿ ಪಾಲನೆ ಮಾಡಲಾಗುತ್ತಿದೆ.

ಮುಂಬೈ, ಹೈದರಾಬಾದ್‌, ಚೆನ್ನೈ ಮುಂತಾದ ನಗರಗಳಿಗೆ ನಿತ್ಯ ಇಲ್ಲಿಂದ ನೂರಾರು ಎಳನೀರು ಲಾರಿಗಳು ತೆರಳುತ್ತವೆ. ಎಳನೀರು ಹತ್ತಾರು ಟನ್‌ ತೂಕ ಬಂದರೂ ಅಧಿಕಾರಿಗಳು ಕಮೀಷನ್‌ ಪಡೆದು ಕಡಿಮೆ ತೂಕದ ರಶೀದಿ ಕೊಡುತ್ತಾರೆ. ಇದರಿಂದ ಸರ್ಕಾರಕ್ಕೆ ತೆರಿಗೆ ನಷ್ಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.