ಬೆಂಗಳೂರು: ಬೆಂಗಳೂರಿನ ರಾಜಕಾಲುವೆಗಳಲ್ಲಿ ಹೂಳು ತೆಗೆಯಲು ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಲಕ್ಷಾಂತರ ಟನ್ ಹೂಳು ತೆಗೆಯಲಾಗಿದೆ ಎಂದು ಹೇಳಲಾಗಿದೆ. ಅಷ್ಟು ಹೂಳು ತೆಗೆದಿದ್ದರೆ, ನಂದಿ ಬೆಟ್ಟದಷ್ಟು ಎತ್ತರದ ನಾಲ್ಕೈದು ದೊಡ್ಡ ಬೆಟ್ಟಗಳನ್ನು ನಗರದ ಸುತ್ತಮುತ್ತ ಕಾಣಬೇಕಿತ್ತು. ಆದರೆ, ಖಾಲಿಯಾದ ಕ್ವಾರಿಗಳೇ ಕಾಣುತ್ತಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜಕಾಲುವೆಯ ಹೂಳು ತೆಗೆಯಲು 2009ರಿಂದ ಈವರೆಗೆ ₹509 ಕೋಟಿ ವೆಚ್ಚ ಮಾಡಿದೆ. ಇದನ್ನು ‘ಮಳೆನೀರಿನ ಚರಂಡಿಯ ಹೂಳೆತ್ತುವಿಕೆ’ ಎಂದು ತೋರಿಸಲಾಗಿದೆ. ಆದರೆ, ಎಷ್ಟು ಹೂಳು ತೆಗೆಯಲಾಗಿದೆ, ಅದನ್ನು ಎಲ್ಲಿ ಹಾಕಲಾಗಿದೆ ಎಂಬ ಮಾಹಿತಿ ಇಲ್ಲ. ಈ ಬಗ್ಗೆ ಮುಖ್ಯ ಆಯುಕ್ತರಿಂದ ಹಿಡಿದು ಹೂಳೆತ್ತುವ ಕಾಮಗಾರಿ ನಿರ್ವಹಿಸುವ ರಾಜಕಾಲುವೆ ವಿಭಾಗದ ಎಲ್ಲ ಮಟ್ಟದ ಎಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಕೇಳಿದರೆ ಯಾರೂ ಆ ಬಗ್ಗೆ ‘ಆ ಮಾಹಿತಿ’ ಇಲ್ಲ ಎಂದೇ ಉತ್ತರಿಸುತ್ತಾರೆ. ಹೂಳು ತೆಗೆಯಲು ವೆಚ್ಚ ಮಾಡಿರುವ ಬಿಲ್‌ಗೆ ಅನುಮೋದನೆ ನೀಡಿರುವ ಎಂಜಿನಿಯರ್, ಅಧಿಕಾರಿಗಳಿಗೂ ಈ ಮಾಹಿತಿ ಇಲ್ಲ ಎಂದರೆ, ಎತ್ತಿದ ಹೂಳು ಹೋಗಿದ್ದಾದರೂ ಎಲ್ಲಿಗೆ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ.
ಮಳೆಗಾಲದಲ್ಲಿ ರಾಜಕಾಲುವೆಗಳಲ್ಲಿ ಹೂಳು ತೆಗೆಯುವ ಕಾಮಗಾರಿ ನಡೆಸುವಂತಿಲ್ಲ ಎಂಬ ಸ್ಪಷ್ಟ ಮಾರ್ಗಸೂಚಿ ಇದ್ದರೂ, ಮಳೆಗಾಲದಲ್ಲೇ ಬಿಬಿಎಂಪಿ ಹೂಳು ತೆಗೆದಿದೆ. 2013ರಿಂದ 2017ರ ಅವಧಿಯಲ್ಲಿ 175 ಸ್ಥಳಗಳಲ್ಲಿ ಮಳೆಗಾಲದಲ್ಲೇ ಹೂಳು ತೆಗೆಯಲಾಗಿದೆ. ಇದಕ್ಕಾಗಿ ₹173.29 ಕೋಟಿ ವೆಚ್ಚ ಮಾಡಲಾಗಿದೆ ಎಂದು 2021ರಲ್ಲಿ ಬಿಡುಗಡೆ ಮಾಡಲಾಗಿರುವ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಮಳೆಯಲ್ಲೇ ಹೂಳು ಮತ್ತು ಹಣ ಎರಡೂ ಕೊಚ್ಚಿಕೊಂಡು ಹೋಗಿದೆ.
ಬಿಬಿಎಂಪಿ ವೆಚ್ಚ ಮಾಡಿರುವ ₹177.29 ಕೋಟಿಯ ಪೈಕಿ ₹17.56 ಕೋಟಿ ವೆಚ್ಚದ 14 ಕಾಮಗಾರಿಗಳ ದಾಖಲೆಯನ್ನು ಮಾತ್ರ ಲೆಕ್ಕಪರಿಶೋಧನೆಗೆ ಒದಗಿಸಲಾಗಿದೆ. ಹೂಳು ತೆಗೆಯುವ ಕಾಮಗಾರಿಗೆ ಮಳೆಗಾಲವೂ ಸೇರಿದಂತೆ 24 ತಿಂಗಳ ಅವಧಿ ನೀಡಲಾಗಿದೆ.
ಜುಲೈ ಮತ್ತು ನವೆಂಬರ್ ನಡುವೆ ಈ ಕಾಮಗಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ. ಮಳೆಗಾದಲ್ಲೂ ಅವಕಾಶ ಕೊಟ್ಟಿದ್ದರಿಂದ ಹೂಳು ತೆಗೆಯುವ ಉದ್ದೇಶವೇ ವಿಫಲವಾಗಿದೆ. ಮಳೆಗಾಲ ಪ್ರಾರಂಭವಾಗುವ ಮೊದಲೇ ರಾಜಕಾಲುವೆಗಳ ಹೂಳು ತೆಗೆಯಲು ಬಿಬಿಎಂಪಿ ಕಾರ್ಯಯೋಜನೆಯನ್ನು ಸಿದ್ಧಪಡಿಸಿರಲಿಲ್ಲ. ಸ್ವಚ್ಛಗೊಳಿಸುವ ಕಾರ್ಯಗಳ ಸರದಿ ಪಟ್ಟಿಯನ್ನೂ ಅನುಸರಿಸಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ರಾಜಕಾಲುವೆ ಸುಧಾರಣೆಗೆ ಸಿದ್ಧಪಡಿಸಿದ್ದ ಸವಿವರ ಯೋಜನಾ ವರದಿಗಳು (ಡಿಪಿಆರ್) ಬಿಬಿಎಂಪಿಯಲ್ಲಿ ಲಭ್ಯವಿಲ್ಲ ಹಾಗೂ ಇದ್ದ ಏಕೈಕ ಪರಿಷ್ಕೃತ ಡಿಪಿಆರ್ ಕೂಡ ದೋಷಪೂರಿತವಾಗಿದೆ. ಇದರ ಪ್ರಕಾರವೂ ಕಾರ್ಯಗತವಾದ ಕಾಮಗಾರಿಗಳು ಅಪೂರ್ಣವಾಗಿದ್ದವು, ಕಳಪೆ ಕಾರ್ಯಕ್ಷಮತೆಯಿಂದ ಸ್ಥಗಿತಗೊಂಡಿದ್ದವು. ಇದರಿಂದ, 2013–14ರಿಂದ 2017–18ರವರೆಗೆ ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಮಿಷನ್‌ನಡಿ (ಜೆ–ನರ್ಮ್) ₹83.59 ಕೋಟಿ ಆರ್ಥಿಕ ನೆರವಿನ ನಷ್ಟವಾಗಿದೆ ಎಂದು ವರದಿ ತಿಳಿಸಿದೆ.
ಐದು ನಂದಿ ಬೆಟ್ಟ: ಬಿಬಿಎಂಪಿ ಎಂಜಿನಿಯರ್‌ಗಳು ತೋರಿಸಿರುವ ವೆಚ್ಚದಲ್ಲಿ ಹೂಳು ಎತ್ತಿದ್ದರೆ ಅದು ಬೃಹತ್ ಬೆಟ್ಟಗಳನ್ನೇ ಸೃಷ್ಟಿಸಬೇಕಿತ್ತು. ಹತ್ತಾರು ವರ್ಷಗಳಾದರೂ ಆ ಬೆಟ್ಟಗಳು ಇರಲೇಬೇಕಿತ್ತು. 2019ರಲ್ಲಿ ಬಿಬಿಎಂಪಿ ಎಂಜಿನಿಯರ್‌ಗಳು ನೀಡಿರುವ ಹೇಳಿಕೆಯಂತೆ, ₹34 ಕೋಟಿ ವೆಚ್ಚದಲ್ಲಿ 6.64 ಲಕ್ಷ ಕ್ಯೂಬಿಕ್ ಮೀಟರ್ (2.3 ಲಕ್ಷ ಟನ್) ಹೂಳು ತೆಗೆಯಲಾಗಿದೆ. ಇದರಿಂದ ಒಂದು ಎಕರೆಯಲ್ಲಿ ಸುಮಾರು 538 ಅಡಿ ಎತ್ತರದ ಬೆಟ್ಟ ಸೃಷ್ಟಿಯಾಗಬೇಕಿತ್ತು. ಇದನ್ನು ಆಧಾರವಾಗಿಟ್ಟುಕೊಂಡು 2009ರಿಂದ ವೆಚ್ಚ ಮಾಡಲಾಗಿರುವ ₹509 ಕೋಟಿಗೆ ಲೆಕ್ಕಾಚಾರ ಮಾಡಿದರೆ, 99.6 ಲಕ್ಷ ಕ್ಯೂಬಿಕ್ ಮೀಟರ್ (35 ಲಕ್ಷ ಟನ್) ಹೂಳು ತೆಗೆದಿರಬೇಕು. ಅಂದರೆ ಒಂದು ಎಕರೆಯಲ್ಲಿ 8,070 ಅಡಿ ಎತ್ತರದ ಬೆಟ್ಟವಾಗಬೇಕಿತ್ತು. ಸರಿಸುಮಾರು ಐದು ನಂದಿಬೆಟ್ಟಗಳಷ್ಟು ಎತ್ತರ.
‘ನಾವು ಯೋಜನೆ, ಸಮೀಕ್ಷೆ ಎಂದು ಸಾಕಷ್ಟು ಕಡೆ ಅಲೆದಾಡುತ್ತೇವೆ. ಎಲ್ಲಿಯೂ ಇಂತಹ ಹೂಳಿನ ಬೆಟ್ಟಗಳನ್ನು ಕಂಡಿಲ್ಲ. ನಾಗರಿಕರೊಂದಿಗೆ ಹೆಚ್ಚು ಒಡನಾಟವಿದ್ದು ಅವರ ಸಮಸ್ಯೆಗಳನ್ನು ನಮ್ಮಲ್ಲಿ ಹೇಳಿಕೊಳ್ಳುತ್ತಾರೆ. ಹೂಳು ಹಾಕಿದ್ದರೆ ಅದರ ಸುತ್ತಮುತ್ತಲಿನ ನೂರಾರು ಮೀಟರ್ ವ್ಯಾಪ್ತಿಯಲ್ಲಿ ವಾಸಿಸಲು ಸಾಧ್ಯವಾಗುವುದಿಲ್ಲ. ಮೋರಿ ನೀರಿನ ವಾಸನೆ ಬಂದಕೂಡಲೇ ಬೆಂಗಳೂರಿಗೆ ಬಂದೆವು ಎಂದು ಬಸ್‌ನಲ್ಲಿ ನಿದ್ದೆ ಮಾಡುವ ನಾವು ಎದ್ದು ಕೂರುತ್ತೇವೆ. ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಒಂದೈದು ನಿಮಿಷ ಹೂಳು ತುಂಬಿರುವ ತೆರೆದ ರಾಜಕಾಲುವೆ ಸಮೀಪ ನಿಂತುಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನು ಅದರ ಹೂಳನ್ನು ಲಕ್ಷಾಂತರ ಟನ್ ಲೆಕ್ಕದಲ್ಲಿ ಸುರಿದಾಗ ಅಲ್ಲಿ ವಾಸಿಸಲು ಸಾಧ್ಯವೇ? ಹೂಳು ಎತ್ತಿ ಹಾಕಿದ್ದೇವೆ ಎಂದು ತೋರಿಸುವುದು ದುಡ್ಡಿಗಾಗಿ. ಹೂಳನ್ನು ತಿಂದಿರುವುದು ಅವರ ಪುಸ್ತಕ, ಅವರ ದಾಖಲೆ. ಹೂಳಿನ ಹಣ ಯಾವ ಯಾವ ಹೊಟ್ಟೆ ತುಂಬಿದೆಯೋ ತಿಂದವರಿಗೇ ಗೊತ್ತು’ ಎಂದು ಪರಿಸರ ಕಾರ್ಯಕರ್ತ ರಾಮ್‌ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.
‘ದಶಕಗಳ ಹಿಂದೆ 15.5 ಲಕ್ಷ ಕ್ಯೂಬಿಕ್ ಅಡಿ ಹೂಳು ತೆಗೆಯಲಾಗಿದೆ ಎಂದು ಅದಕ್ಕೆ ವೆಚ್ಚವನ್ನು ಮಾಡಿದ್ದಾರೆ. ಇದಕ್ಕೆ ಬಿಲ್ ಮಾಡಿಕೊಂಡು ಹಣವನ್ನೂ ತೆಗೆದುಕೊಂಡಿದ್ದಾರೆ. ಅಂದು ಬಿಎಂಪಿ ಆಯುಕ್ತರಾಗಿದ್ದ ಜೈರಾಜ್ ಕಾಲದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅಷ್ಟೊಂದು ಹೂಳು ತೆಗೆದಿದ್ದೀರಲ್ಲಾ ಅದೆನ್ನೆಲ್ಲ ಎಲ್ಲಿ ಹಾಕಿದ್ದೀರಿ ಎಂದು ಕೇಳಲಾಗಿತ್ತು. 15 ಲಕ್ಷ ಕ್ಯೂಬಿಕ್ ಅಡಿ ಎಂದರೆ 1.5 ಲಕ್ಷ ಲಾರಿಗಳ ಹೂಳು. ಇಷ್ಟು ಲಾರಿ ಓಡಾಡಲು ರಸ್ತೆ ಬೇಕು, ಎಲ್ಲಾದರೂ ಹಾಕಿದ್ದರೆ ಅದು ದೊಡ್ಡ ಬೆಟ್ಟವಾಗಿರಬೇಕು. ಅದು ಎಲ್ಲಿದೆ ಎಂದು ಪ್ರಶ್ನಿಸಲಾಗಿತ್ತು. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಯಿತು. ಇವತ್ತಿನವರೆಗೂ ವಿಚಾರಣೆ ನಡೆಯುತ್ತಿದೆ. ಯಾವುದೇ ಅಧಿಕಾರಿ, ನೈಜವಾಗಿ ಎತ್ತಿರುವ ಅಥವಾ ಸಾಗಣೆ ಮಾಡಿರುವ ಹೂಳಿನ ವಿವರ ನೀಡುತ್ತಿಲ್ಲ. ಆದರೆ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.
‘ಬಿಬಿಎಂಪಿಯ ವ್ಯಾಪ್ತಿಯಲ್ಲಿ ಸುಮಾರು 840 ಕಿ.ಮೀ ರಾಜಕಾಲುವೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದು ಇನ್ನಷ್ಟು ಹೆಚ್ಚು ಇದೆ. ಕೆಲವು ಭಾಗದಲ್ಲಿ ಗಣನೆಗೇ ತೆಗೆದುಕೊಳ್ಳದೆ, ಒತ್ತುವರಿಗೆ ಅಧಿಕಾರಿಗಳೇ ನೆರವಾಗಿದ್ದಾರೆ. ಹೂಳು ತೆಗೆಯುವ ಕಾಮಗಾರಿ ಹಣ ಲೂಟಿ ಮಾಡುವಂತಹದ್ದಾಗಿದೆ. ಹೂಳು ತೆಗೆಯದೆ ಹಣ ಮಾಡಿಕೊಳ್ಳುತ್ತಾರೆ. ಇದರಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರೆಲ್ಲರೂ ಶಾಮೀಲು. ಹೈಕೋರ್ಟ್ ಸೂಚನೆ ನೀಡಿದರೂ ಇವರು ಎಚ್ಚೆತ್ತುಕೊಂಡಿಲ್ಲ’ ಎಂದು ರಾಜಕಾಲುವೆ ಒತ್ತುವರಿ ತೆರವಿಗೆ ಹೈಕೋರ್ಟ್‌ನಲ್ಲಿ 2009ರಿಂದ ಪ್ರಕರಣ ದಾಖಲಿಸಿ ಹೋರಾಡುತ್ತಿರುವ ವಕೀಲ ಎಸ್. ಉಮೇಶ್ ಹೇಳಿದರು.
‘ಯಲಹಂಕ ಸಮೀಪದ ಬೆಲ್ಲಹಳ್ಳಿ, ಪೀಣ್ಯ ದಾಸರಹಳ್ಳಿ ಸಮೀಪದ ಮಲ್ಲಸಂದ್ರ, ಗೊಲ್ಲಹಳ್ಳಿ ಕ್ವಾರಿಗಳಲ್ಲಿ ಹೂಳನ್ನು ಹಾಕುತ್ತಿದ್ದೆವು. ಮಲ್ಲಸಂದ್ರ ಕ್ವಾರಿಯಲ್ಲಿ ಹೂಳು ವಿಲೇವಾರಿ ಮಾಡುತ್ತಿದ್ದೆವು. ಆದರೆ, ಆ ಕ್ವಾರಿ ಭರ್ತಿಯಾಗಿದ್ದು, ಅಲ್ಲಿ ಆಟದ ಮೈದಾನ ನಿರ್ಮಿಸಲಾಗಿದೆ. ಬೆಲ್ಲಹಳ್ಳಿ ಕ್ವಾರಿಯಲ್ಲಿ ಕಸ ಹಾಗೂ ಹೂಳನ್ನು ವಿಲೇವಾರಿ ಮಾಡಲು ಸ್ಥಳೀಯರ ವಿರೋಧ ಇದೆ. ನಗರದ 20–30 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲೂ ಕ್ವಾರಿಗಳು ಸಿಗುತ್ತಿಲ್ಲ. ಹೂಳನ್ನು ಎಲ್ಲಿ ಹಾಕಬೇಕು ಎಂಬುದೇ ಸಮಸ್ಯೆಯಾಗಿದೆ’ ಎಂದು ಬಿಬಿಎಂಪಿ ಎಂಜಿನಿಯರ್‌ಗಳೇ ಹಲವು ಬಾರಿ ಅವಲತ್ತುಕೊಂಡಿದ್ದಾರೆ. ಹೀಗಿದ್ದಾಗ, ಲಕ್ಷಾಂತರ ಟನ್ ಹೂಳು ಹಾಕಿರುವುದಾದರೂ ಎಲ್ಲಿ ಎಂಬ ಪ್ರಶ್ನೆಗೆ ಬಿಲ್ ಅನುಮೋದಿಸಿರುವವರು ಸಹ ಉತ್ತರಿಸುವುದಿಲ್ಲ.
‘ಕಮಿಷನ್: ನಾವೂ ಬದುಕಬೇಕಲ್ಲ?’
‘ರಾಜಕಾಲುವೆಯಲ್ಲಿ ಹೂಳು ತೆಗೆಯುವ ಕೆಲಸ ನೈಜವಾಗಿ ನಡೆಯುವುದು ಕೊಂಚ ಪ್ರಮಾಣದಲ್ಲಿ ಮಾತ್ರ. ಹತ್ತಾರು ವರ್ಷಗಳ ಅವಧಿಯಲ್ಲಿ ಸಾಕಷ್ಟು ಗುತ್ತಿಗೆದಾರರುರಾಜಕಾಲುವೆ ನಿರ್ವಹಣೆ ಅಥವಾ ಹೂಳು ತೆಗೆಯುವ ಕಾಮಗಾರಿಯನ್ನು ನಿರ್ವಹಿಸಿದ್ದಾರೆ.
‘ಹೂಳು ತೆಗೆಯಬೇಕು ಎಂದು ಹೇಳುತ್ತಾರೆ, ಎಲ್ಲಿ ಹಾಕಬೇಕು ಎಂದು ಜಾಗ ತೋರಿಸುವುದಿಲ್ಲ. ವರ್ಷದ ಬಹುತೇಕ ತಿಂಗಳು ರಾಜಕಾಲುವೆ ಬಗ್ಗೆ ಯಾರೂ ಪ್ರಶ್ನಿಸುವುದಿಲ್ಲ. ಮಳೆ ಬಂದಾಗ ಮಾತ್ರ ರಾಜಕಾರಣಿಗಳು ಸೇರಿದಂತೆ ಎಲ್ಲರೂ ಎದ್ದುಕೂರುತ್ತಾರೆ. ಹೂಳು ತೆಗೆಯುವುದು ದೊಡ್ಡ ಕೆಲಸವೇ ಸರಿ. ಗುತ್ತಿಗೆದಾರರೂ ಒಂದಷ್ಟು ತೆಗೆದು ಕ್ವಾರಿಗಳನ್ನು ತುಂಬಿರುತ್ತಾರೆ. ಅಷ್ಟೊಂದು ಹೂಳು ತೆಗೆಯುವುದು ಕಷ್ಟ. ಗುತ್ತಿಗೆದಾರರೂ ಬದುಕಬೇಕಲ್ಲ? ಎಲ್ಲರಿಗೂ ಸಾಕಷ್ಟು ಕಮಿಷನ್ ನೀಡಿ ಕೆಲಸ ಮಾಡಬೇಕು. ಎಲ್ಲರಿಗೂ ನೀಡಿದ ಮೇಲೆ ಉಳಿಯುವುದು ಕಡಿಮೆ. ಹೀಗಾಗಿ ಅಲ್ಲೊಂದಷ್ಟು ಕೆಲಸ ಮಳೆಗಾಲದಲ್ಲೇ ನಡೆಯುತ್ತದೆ. ಹೂಳು ಮಳೆ ನೀರಿನಲ್ಲಿ ಕೊಚ್ಚಿಹೋಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗುತ್ತಿಗೆದಾರರು ಅಳಲು ತೋಡಿಕೊಂಡರು.
135 ದಿನಗಳಲ್ಲಿ ತೆಗೆದರು 6 ಲಕ್ಷ ಟನ್ ಹೂಳು!
‘2018–19ರಲ್ಲಿ 440 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ 6.64 ಲಕ್ಷ ಕ್ಯೂಬಿಕ್ ಮೀಟರ್ ಹೂಳನ್ನು 135 ದಿನಗಳಲ್ಲಿ ತೆಗೆಯಲಾಗಿದೆ. ಇದಕ್ಕೆ ₹33.99 ಕೋಟಿ ವೆಚ್ಚ ಮಾಡಲಾಗಿದೆ’ ಎಂದುಬಿಬಿಎಂಪಿ ರಾಜಕಾಲುವೆ ವಿಭಾಗದ ಎಂಜಿನಿಯರ್‌ಗಳು ಮಾಹಿತಿ ನೀಡಿದ್ದರು. ಅದರ ನಂತರ ಪ್ರತಿ ವರ್ಷ ರಾಜಕಾಲುವೆಗಳ ನಿರ್ವಹಣೆಗೆ ಅಂದರೆ ಹೂಳು ಇಲ್ಲದಂತೆ ಕಾರ್ಯನಿರ್ವಹಿಸಲು ಯೋಗಾ ಆ್ಯಂಡ್ ಯೋಗಾ ಕಂಪನಿಗೆ ₹38 ಕೋಟಿಗೆ ಗುತ್ತಿಗೆ ನೀಡಲಾಗಿದೆ.
ಎಂಜಿನಿಯರ್‌ಗಳು ಹೇಳುವ ಪ್ರಕಾರ 6.64 ಲಕ್ಷ ಕ್ಯೂಬಿಕ್ ಮೀಟರ್ ಹೂಳನ್ನು, 20 ಟನ್ ಹೊರುವ 10 ಚಕ್ರಗಳ ಟ್ರಕ್‌ನಲ್ಲಿ ಸಾಗಿಸಲಾಗಿದೆ. 11,733 ಟ್ರಕ್‌ಗಳು ಹೂಳು ತುಂಬಿಕೊಂಡು ಹೋಗಿವೆ. ಪ್ರತಿ ನಿತ್ಯ 86ರಿಂದ 87 ಟ್ರಕ್‌ಗಳು ಹೂಳು ಸಾಗಿಸಿವೆ.
‘ಇಷ್ಟೊಂದು ಹೂಳನ್ನು ತೆಗೆದಿದ್ದಾರೆ ಎಂದಾದರೆ ಆ ಹೂಳು ಹಾಕಿದ ಪ್ರದೇಶ ರಾಮನಗರ ಬೆಟ್ಟದಂತಾಗಬೇಕು. ಸುಮಾರು 500 ಅಡಿ ಎತ್ತರದ ಬೆಟ್ಟವಾಗಬೇಕು. ಆ ಬೆಟ್ಟ ಎಲ್ಲೂ ಕಾಣುತ್ತಲೇ ಇಲ್ಲ. 135 ದಿನಗಳಲ್ಲಿ ಇಷ್ಟು ಪ್ರಮಾಣದ ಹೂಳು ತೆಗೆದಿದ್ದರೆ, ಅಷ್ಟೊಂದು ಟಿಪ್ಪರ್‌ಗಳು ಅಥವಾ ಬೃಹತ್ ಟ್ರಕ್‌ಗಳು ಸಂಚರಿಸಿದ್ದರೆ ರಸ್ತೆಗಳು ಹಾಳಾಗಿರುತ್ತವೆ. ಇದೆಲ್ಲ ಸಾರ್ವಜನಿಕರ ಗಮನಕ್ಕೆ ಬಂದಿರಬೇಕು. ಆದೆರೆ ಇಂತಹ ಪ್ರಕರಣ ಎಲ್ಲೂ ದಾಖಲಾಗಿಲ್ಲ. ಅಂದರೆ ಈ ಹೂಳನ್ನು ಅವರು ತೆಗೆದಿಲ್ಲ. ಕೇವಲ ದಾಖಲೆಯಲ್ಲಿ, ಪುಸ್ತಕದಲ್ಲಿ ಅದನ್ನು ನಮೂದಿಸಿದ್ದಾರೆ ಎಂದೇ ಅರ್ಥ’ ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಎಸ್. ಅಮರೇಶ್ ದೂರುತ್ತಾರೆ.
‘ಒಂದು ವೇಳೆ ಇಷ್ಟೊಂದು ದೊಡ್ಡ ಪ್ರಮಾಣದ ಹೂಳು ಒಂದು ಪ್ರದೇಶದಲ್ಲಿ ಸುರಿದಿದ್ದರೆ ಅದರಿಂದ ದುರ್ವಾಸನೆ ಬಂದಿರುತ್ತದೆ. ಸುತ್ತಮುತ್ತಲಿನವರು ಆಕ್ಷೇಪ ವ್ಯಕ್ತಪಡಿಸಿರುತ್ತಾರೆ. ಹೂಳು ಸುರಿಯುವ ಮುನ್ನ ಸ್ಥಳೀಯರಿಂದ ನಿರಾಕ್ಷೇಪಣೆ ಪತ್ರ ಪಡೆಯಬೇಕಾಗುತ್ತದೆ. ಅಂತಹ ಪತ್ರದ ಮಾಹಿತಿಯೂ ಇಲ್ಲ. ಹೀಗಾಗಿ ನಾನು 2019ರ ಮೇ 20ರಂದು ಎಸಿಬಿಗೆ ದೂರು ನೀಡಿದ್ದೆ. ಈ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಕೋರಲಾಗಿತ್ತು. ನಗರಾಭಿವೃದ್ಧಿ ಇಲಾಖೆಯ ಮುಖ್ಯ ಜಾಗೃತ ಅಧಿಕಾರಿಯಿಂದ ಈ ಪ್ರಕರಣದ ವಿಚಾರಣೆಯೂ ನಡೆದಿತ್ತು. ಆದರೆ ನಂತರ ಪ್ರಕರಣ ಎಸಿಬಿಯಲ್ಲೇ ಉಳಿದಿತ್ತು. ಎಸಿಬಿಯ ಎಲ್ಲ ಪ್ರಕರಣಗಳು ಇದೀಗ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದು, ಅವರು ಮುಂದುವರಿದು ತನಿಖೆ ನಡೆಸುವ ವಿಶ್ವಾಸವಿದೆ’ ಎಂದರು.
ಹೂಳು ತೂಕ ಮಾಡೊಲ್ಲ...
‘ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆಗಳ ನಿರ್ವಹಣೆಗೆ ವಾರ್ಷಿಕವಾಗಿ ₹30 ಕೋಟಿ ನೀಡಲಾಗುತ್ತಿದೆ. ಹೂಳು ತೆಗೆಯುವ ಬಗ್ಗೆ ಅಂಕಿ–ಅಂಶ ಅಥವಾ ಎಷ್ಟು ಟನ್ ತೆಗೆದರು, ಎಲ್ಲಿ ಹಾಕಿದರು ಎಂಬ ಮಾಹಿತಿಯನ್ನು ಗುತ್ತಿಗೆದಾರರು ನೀಡಬೇಕಿಲ್ಲ, ಬಿಬಿಎಂಪಿ ಅದರ ನಿರ್ವಹಣೆಯನ್ನೂ ಮಾಡುವುದಿಲ್ಲ. ಎಷ್ಟು ಹೂಳು ಅವರು ತೆಗೆಯಲಿ ಬಿಡಲಿ. ರಾಜಕಾಲುವೆಯಲ್ಲಿ ಸದಾಕಾಲ ನೀರು ಸರಾಗವಾಗಿ ಹರಿಯುವಂತೆ ಇರಬೇಕು. ಹೂಳು ಎಲ್ಲಿಯೂ ಕಾಣಬಾರದು ಅಷ್ಟೇ. ಅದರಂತೆಯೇ ನಿರ್ವಹಣೆ ಮಾಡಲಾಗುತ್ತಿದೆ. ರಾಜಕಾಲುವೆಯಲ್ಲಿ ಹೂಳು ಇರುವುದಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದವರು ಬಿಬಿಎಂಪಿಯ ರಾಜಕಾಲುವೆಗಳ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್.
‘ಗುತ್ತಿಗೆದಾರರೊಂದಿಗಿನ ಒಪ್ಪಂದದಂತೆ ಇದು ಸೇವಾಮಟ್ಟದ ಕಾಮಗಾರಿ. ಇದರಲ್ಲಿ ಹೂಳಿನ ಪ್ರಮಾಣದ ಲೆಕ್ಕ ಇರಿಸುವುದಿಲ್ಲ. ಆದರೆ, ರಾಜಕಾಲುವೆಗಳು ಕಟ್ಟಡ ತ್ಯಾಜ್ಯ ಸೇರಿದಂತೆ ಎಲ್ಲ ರೀತಿಯ ಕಸ ಹಾಗೂ ಹೂಳಿನಿಂದ ಮುಕ್ತವಾಗಿರಬೇಕು’ ಎನ್ನುವುದು ಬಿಬಿಎಂಪಿ ರಾಜಕಾಲುವೆಗಳ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್ ಅವರ ಹೇಳಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.