ADVERTISEMENT

ಒಳನೋಟ: ಬೇಕು ಎಂದಾಗ ಸಿಗದ ಬೆಳೆ ವಿಮೆ ಪರಿಹಾರ

ಮಾಹಿತಿ, ಪ್ರಚಾರದ ಕೊರತೆ, ಬೆಳೆ ನಷ್ಟ ಸಮೀಕ್ಷಾ ವಿಧಾನದ ಬಗ್ಗೆಯೂ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 19:30 IST
Last Updated 9 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಗೆ ರಾಜ್ಯದಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ಸಿಕ್ಕಿಲ್ಲ. ಯೋಜನೆ ಆರಂಭಗೊಂಡ2016 ಹಾಗೂ ಮರು ವರ್ಷ 2017ರಲ್ಲಷ್ಟೇ ಹೆಚ್ಚಿನ ರೈತರು ನೋಂದಾಯಿಸಿದ್ದರು. ನಂತರ ಆಸಕ್ತಿ ತೋರಿಲ್ಲ.

ಪ್ರಚಾರ–ಮಾಹಿತಿ ಕೊರತೆ, ಸಕಾಲಕ್ಕೆ ಪರಿಹಾರ ದೊರಕದಿರು ವುದು, ಅವೈಜ್ಞಾನಿಕ ಬೆಳೆ ಸಮೀಕ್ಷೆ, ದಾಖಲೆಗಳನ್ನು ಸಂಗ್ರಹಿಸುವ ಸವಾಲು–ಇವು ನಿರಾಸಕ್ತಿಗೆ ರೈತರು ಕೊಡುವ ಕಾರಣಗಳು.

ಕೃಷಿ ಇಲಾಖೆಯು ಯೋಜನೆಯ ಬಗ್ಗೆ ತಿಳಿ ಹೇಳುತ್ತಿಲ್ಲ. ವಿಮೆಯ ಪ್ರಯೋಜನದ ಬಗ್ಗೆ ರೈತರಿಗೆ ಅರಿವಿಲ್ಲ ಎಂಬುದು ಕೆಲವು ಕೃಷಿಕರ ಆರೋಪ. ಆದರೆ, ಅಧಿಕಾರಿಗಳು ಅದನ್ನು ನಿರಾಕರಿಸುತ್ತಾರೆ.

ADVERTISEMENT

‘ಮಾಧ್ಯಮಗಳ ಮೂಲಕ ಸಾಕಷ್ಟು ಪ್ರಚಾರ ಮಾಡಲಾಗುತ್ತದೆ. ಹಳ್ಳಿಗಳಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರನ್ನು ಸಂಪರ್ಕಿಸಿ ತಿಳಿ ಹೇಳಲಾಗುತ್ತದೆ. ಕರಪತ್ರ ಹಂಚಲಾಗುತ್ತದೆ, ಡಂಗೂರ ಹೊಡೆಸುವುದು, ‌ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತದೆ’ ಎನ್ನುತ್ತಾರೆ.

‘ಬಹುತೇಕ ರೈತರು ಹವಾಮಾನ ಪರಿಸ್ಥಿತಿ ನೋಡಿಕೊಂಡು ವಿಮೆ ಬಗ್ಗೆ ನಿರ್ಧರಿಸುತ್ತಾರೆ. ಉತ್ತಮ ಮಳೆಯಾಗಿ, ಬೆಳೆ ಚೆನ್ನಾಗಿ ಬರುವಂತಿದ್ದರೆ ವಿಮೆಗೆ ನೋಂದಾಯಿಸಲು ಮುಂದಾಗುವುದಿಲ್ಲ’ ಎಂಬುದು ನೋಂದಣಿ ಕಡಿಮೆಯಾಗುತ್ತಿರುವುದಕ್ಕೆ ಅಧಿಕಾರಿಗಳು ನೀಡುವ ಕಾರಣ. ಆದರೆ ಇದು ಪೂರ್ಣ ನಿಜವಲ್ಲ.

ವಿಳಂಬ ಪಾವತಿ: ಅಗತ್ಯವಿದ್ದಾಗ ವಿಮೆ ಮೊತ್ತ ಪಾವತಿಯಾಗದಿರುವುದು ರೈತರು ವಿಮೆ ಮೇಲೆ ನಿರಾಸಕ್ತಿ ಹೊಂದಲು ಪ್ರಮುಖ ಕಾರಣ.

ತಾಂತ್ರಿಕ ಕಾರಣಗಳ ನೆಪ‍ದಲ್ಲಿ ರೈತರು ವರ್ಷಾನುಗಟ್ಟಲೆ ವಿಮೆ ಪರಿಹಾರದಿಂದ ವಂಚಿತರಾದ ನಿದರ್ಶನಗಳಿವೆ. ಚಾಮರಾಜನಗರದಲ್ಲಿ 27 ಸಾವಿರಕ್ಕೂ ಹೆಚ್ಚು ರೈತರು ವಿಮೆ ಪರಿಹಾರಕ್ಕಾಗಿ ಐದು ವರ್ಷ ಕಾದಿದ್ದಾರೆ.

ಜಿಲ್ಲೆಯಲ್ಲಿ 2016ರ ಹಿಂಗಾರು ಹಂಗಾಮಿನಲ್ಲಿ 27,467 ರೈತರು ವಿಮೆಗೆ ನೋಂದಾಯಿಸಿದ್ದರು. ಆ ಪೈಕಿ 27,108 ಮಂದಿಗೆ ₹ 12.77 ಕೋಟಿಗಳಷ್ಟು ವಿಮೆ ಪರಿಹಾರ ಬಂದಿರಲಿಲ್ಲ. ಇದಕ್ಕೆ ತಾಂತ್ರಿಕ ಕಾರಣವನ್ನು ನೀಡಲಾಗಿತ್ತು. ಕಳೆದ ವರ್ಷಾರಂಭದಲ್ಲಿ ಪಾವತಿಯಾಗಿದೆ. ಇದಾದ ನಂತರ ಸಕಾಲಕ್ಕೆ ಪರಿಹಾರ ಮೊತ್ತ ಬರುವುದಿಲ್ಲ ಎಂಬ ಭಾವನೆ ರೈತರಲ್ಲಿ ಬೇರೂರಿದ್ದು, 2017ರಿಂದ ವಿಮೆಗೆ ನೋಂದಣಿ ಮಾಡುವವರು ಕಡಿಮೆಯಾಗಿದ್ದಾರೆ.

ಕಳೆದ ವರ್ಷದ ಮುಂಗಾರು ಅವಧಿಯ ವಿಮೆ ಪರಿಹಾರ ಬಹುತೇಕ ರೈತರಿಗೆ ಪಾವತಿಯಾಗಿದೆ. ಹಿಂಗಾರು ಅವಧಿಯ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.

ಬೆಳೆ ನಷ್ಟವಾದಾಗ ಇಲಾಖೆ ಅನುಸರಿಸುವ ಸಮೀಕ್ಷೆ ವಿಧಾನದ ಬಗ್ಗೆ ಬಹುತೇಕ ರೈತರು ಆಕ್ಷೇಪಿಸುತ್ತಾರೆ. ‘ನಷ್ಟದ ಅಂದಾಜು ಮಾಡುವಾಗ ಹೋಬಳಿ, ವ್ಯಾಪ್ತಿಯನ್ನು ಪರಿಗಣಿಸಲಾಗುತ್ತದೆ. ಹೀಗಾಗಿ ನಷ್ಟ ಅನುಭವಿಸಿದ ನಿಜವಾದ ರೈತರಿಗೆ ಪರಿಹಾರ ಸಿಗುವುದಿಲ್ಲ’ ಎಂಬುದು ಅವರ ದೂರು.

‘ಈಗ ಮೊಬೈಲ್‌ ಆ್ಯಪ್‌ ಮೂಲಕವೇ ಸಮೀಕ್ಷೆ ನಡೆಸಲಾಗುತ್ತಿದ್ದು, ವೈಜ್ಞಾನಿಕವಾಗಿಯೇ ನಷ್ಟವನ್ನು ಗುರುತಿಸಲಾಗುತ್ತದೆ’ ಎಂಬುದು ಇಲಾಖೆಯ ಸಮಜಾಯಿಷಿ.

‘ಜಾಗೃತಿ ಮೂಡಿಸಲಾಗುತ್ತಿದೆ’

ಮುಂಗಾರಿನಲ್ಲಿ ಬೆಳೆವಿಮೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹಳ್ಳಿಗಳಲ್ಲಿ ಡಂಗೂರ ಬಾರಿಸಿ, ಕರಪತ್ರ ಹಂಚಲಾಗುತ್ತಿದೆ. ಬಿತ್ತನೆ ನಂತರವೇ ರೈತರ ಪ್ರತಿಕ್ರಿಯೆ ಗೊತ್ತಾಗಲಿದೆ. ಒಣ ಬೇಸಾಯ ಪ್ರದೇಶದ ರೈತರು ಚೆನ್ನಾಗಿ ಸ್ಪಂದಿಸುತ್ತಾರೆ

– ಮಲ್ಲಿಕಾರ್ಜುನ,ಕೃಷಿ ಇಲಾಖೆ ಜಂಟಿ ನಿರ್ದೇಶಕ, ಬಳ್ಳಾರಿ ಜಿಲ್ಲೆ

ಅಧಿಕಾರಿಗಳು ಬೆಳೆ ವಿಮೆ ಎನ್ನುತ್ತಿರುತ್ತಾರೆ. ನನಗೆ ಅದರ ಬಗ್ಗೆ ಸ್ವಲ್ಪವೂ ಮಾಹಿತಿ ಇಲ್ಲ. ನಾನು ಮಾಡಿಸಿಲ್ಲ

ಪುನೀತ್‌, ಯುವ ರೈತ, ಚಾಮರಾಜನಗರ

ಬೆಳೆ ನಷ್ಟ ಸಮೀಕ್ಷೆ ಅವೈಜ್ಞಾನಿಕವಾಗಿದೆ. ನಷ್ಟ ಅನುಭವಿಸಿದವರಿಗೆ ವೈಜ್ಞಾನಿಕ ಪರಿಹಾರ ಸಿಗುವುದಿಲ್ಲ. ರೈತರು ವಿಮೆ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ

ಸೋಮಶೇಖರ್‌,ರೈತ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.