ADVERTISEMENT

ಒಳನೋಟ: ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಉಳಿದ ₹ 683.61 ಕೋಟಿ!

ರಾಜೇಶ್ ರೈ ಚಟ್ಲ
Published 28 ನವೆಂಬರ್ 2020, 20:15 IST
Last Updated 28 ನವೆಂಬರ್ 2020, 20:15 IST
.
.   

ಬೆಂಗಳೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪಿ.ಡಿ (ವೈಯಕ್ತಿಕ ಠೇವಣಿ) ಖಾತೆಯಲ್ಲಿ ಇದೇ ಅಕ್ಟೋಬರ್‌ ಅಂತ್ಯದ ವೇಳೆಗೆ ₹ 683.61 ಕೋಟಿ ಉಳಿದಿದೆ. ಈ ಮೊತ್ತದಲ್ಲಿ ಪ್ರಸಕ್ತ ಸಾಲಿನ (2020–21) ₹ 141 ಕೋಟಿ ಹೊರತುಪಡಿಸಿ, ಉಳಿದದ್ದು ಹಿಂದಿನ ವರ್ಷಗಳಿಂದ ವೆಚ್ಚವಾಗದೆ ಕೊಳೆಯುತ್ತಿರುವ ಮೊತ್ತ!

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ ವಾರ್ಷಿಕ ₹ 2 ಕೋಟಿ ನಿಗದಿಪಡಿಸಲಾಗಿದೆ. ಆದರೆ, ಈ ಯೋಜನೆಯಡಿ 2018–19ರಲ್ಲಿ ಪ್ರತಿ ಕ್ಷೇತ್ರಕ್ಕೆ ತಲಾ ₹ 1.50 ಕೋಟಿ, 2019–20ರಲ್ಲಿ ತಲಾ ₹ 1 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ.

ಪ್ರಸಕ್ತ ಸಾಲಿನಲ್ಲೂ ಪ್ರತಿ ಶಾಸಕರಿಗೆ ತಲಾ ₹ 1 ಕೋಟಿಯಂತೆ ಅನುದಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದರಂತೆ ಮೊದಲ ಕಂತಿನ ಅನುದಾನ ₹ 142.47 ಕೋಟಿ ಸೆ. 18ರಂದು ಬಿಡುಗಡೆ ಆಗಿ, ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಗೆ ಈಗಾಗಲೇ ಜಮೆ ಆಗಿದೆ. ಎರಡನೇ ಕಂತಿನ ಅನುದಾನ ₹ 154.80 ಕೋಟಿಯನ್ನು ಸರ್ಕಾರ ನ. 9ರಂದು ಬಿಡುಗಡೆ ಮಾಡಿದೆ.

ADVERTISEMENT

ಪ್ರಸಕ್ತ ಸಾಲಿನಲ್ಲಿ ಎಲ್ಲ ಶಾಸಕರಿಗೆ ಸೇರಿ ಒಟ್ಟು ₹ 300 ಕೋಟಿಯಲ್ಲಿ ಹೊಸ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಲು ರಾಜ್ಯ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಯೋಜನೆಯಡಿ, ಹಿಂದಿನ ಸಾಲಿನಲ್ಲಿ ಅನುಮೋದಿಸಿದ ಕಾಮಗಾರಿಗಳನ್ನು ಮೊದಲು ಪೂರ್ಣಗೊಳಿಸಬೇಕು. 2019–20ನೇ ಸಾಲಿನ ಕಾಮಗಾರಿಗಳನ್ನು ₹ 2 ಕೋಟಿವರೆಗೆ ಮುಂದುವರಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ, ಈಗಾಗಲೇ ಆರಂಭಿಸಿರುವ ಮತ್ತು ಮುಂದುವರಿಸಿರುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳ ಮತ್ತು ಉಪ ವಿಭಾಗಾಧಿಕಾರಿಗಳ ಪಿಡಿ ಖಾತೆಯಲ್ಲಿರುವ ಅನುದಾನದಿಂದ ವೆಚ್ಚ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಪ್ರತಿ ಶಾಸಕರಿಗೆ ತಲಾ ₹ 1 ಕೋಟಿಗೆ ರೂಪಿಸಿರುವ ಕ್ರಿಯಾ ಯೋಜನೆಗಳ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲೇ ಅನುಷ್ಠಾನಗೊಳಿಸಲು ಸರ್ಕಾರ ನಿರ್ದೇಶನ ನೀಡಿದೆ.

ವೆಚ್ಚವಾಗದೆ ಉಳಿಕೆ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2019–20ನೇ ಸಾಲಿನಲ್ಲಿ ಶೇ 48ರಷ್ಟು ಅನುದಾನ ಮಾತ್ರ ವೆಚ್ಚವಾಗಿದೆ. ಈ ಸಾಲಿನಲ್ಲಿ ಈ ಯೋಜನೆಯಡಿ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆ (ಟಿಎಸ್‌ಪಿ) ಅಡಿ 11 ಜಿಲ್ಲೆಗಳಲ್ಲಿ 73 ವಿಧಾನಸಭಾ ಕ್ಷೇತ್ರಗಳ ಶಾಸಕರು ಮತ್ತು 16 ಜಿಲ್ಲೆಗಳಲ್ಲಿ 36 ವಿಧಾನಪರಿಷತ್‌ ಸದಸ್ಯರು ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಇದು ‘ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಕಾಯ್ದೆ–2013’ರ ಉಲ್ಲಂಘನೆಯಾಗಿದೆ.

ಈ ಬಗ್ಗೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ‘ಎಸ್‌ಸಿಪಿ, ಟಿಎಸ್‌ಪಿ ಅಡಿ ಕಾಮಗಾರಿಗಳನ್ನು ಕೈಗೊಳ್ಳಲೇ ಬೇಕು. 2020–21ನೇ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕು’ ಎಂದು ಸೂಚಿಸಿದ್ದಾರೆ.

‘ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಕಾಮಗಾರಿಗಳನ್ನು ಜಿಲ್ಲಾಧಿಕಾರಿಗಳಿಂದ ಉಪ ವಿಭಾಗಾಧಿಕಾರಿಗಳಿಗೆ ವರ್ಗಾಯಿಸಿ 2020 ಜ.30ರಂದು ಆದೇಶ ಹೊರಡಿಸಲಾಗಿದೆ. ಹೀಗಾಗಿ, ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿರುವ ವಿಧಾನಸಭಾ ಸದಸ್ಯರ ಅನುದಾನವನ್ನು ಕಾಮಗಾರಿಗಳಿಗೆ ಅನುಗುಣವಾಗಿ ವಿಂಗಡಿಸಿ ಉಪ ವಿಭಾಗಾಧಿಕಾರಿಗಳಿಗೆ ವರ್ಗಾಯಿಸಬೇಕು. ಆದರೆ, ವಿಧಾನಪರಿಷತ್‌ ಸದಸ್ಯರ ಕಾಮಗಾರಿಗಳನ್ನು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಎಂಪಿ ಲ್ಯಾಡ್ಸ್‌) ಜೊತೆಗೆ ಜಿಲ್ಲಾಧಿಕಾರಿಗಳೇ ನಿರ್ವಹಿಸಬೇಕು’ ಎಂದೂ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.

ನಿಧಿ ಬಿಡುಗಡೆ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯನ್ನು ಬಳಕೆ ಮಾಡುವ ಕುರಿತು ರಾಜ್ಯ ಸರ್ಕಾರ 2014ರಲ್ಲಿ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಈ ಯೋಜನೆಯಡಿ 2001–02ರಲ್ಲಿ ಪ್ರತಿ ಕ್ಷೇತ್ರಕ್ಕೆ ₹ 25 ಲಕ್ಷ ನಿಗದಿಪಡಿಸಲಾಗಿತ್ತು. 2006–07ರ ಸಾಲಿನಿಂದ ಈ ಮೊತ್ತವನ್ನು ₹ 1 ಕೋಟಿಗೆ, 2013–14 ಸಾಲಿನಿಂದ ₹2 ಕೋಟಿಗೆ ಹೆಚ್ಚಿಸಲಾಗಿದೆ. ಶಾಸಕರ ಅವಧಿ ಮೂರು ತಿಂಗಳಿಗಿಂತ ಕಡಿಮೆ ಇದ್ದರೆ ಅನುದಾನ ಇಲ್ಲ. ಒಂಬತ್ತು ತಿಂಗಳವರೆಗೆ ಇದ್ದರೆ ವಾರ್ಷಿಕ ಅನುದಾನದ ಅರ್ಧದಷ್ಟು ಮತ್ತು ಅದಕ್ಕಿಂತ ಹೆಚ್ಚಿನ ಅವಧಿ ಇದ್ದರೆ ಶೇಕಡಾ 100ರಷ್ಟು ಅನುದಾನ ನಿಗದಿಪಡಿಸಲಾಗಿದೆ.

ವರ್ಷಕ್ಕೆ ಎರಡು ಕಂತುಗಳಲ್ಲಿ ಶಾಸಕರ ನಿಧಿ ಬಿಡುಗಡೆ ಮಾಡಬೇಕಿದೆ. ನಿರ್ದಿಷ್ಟ ವರ್ಷದಲ್ಲಿ ಬಿಡುಗಡೆಯಾದ ನಿಧಿಯಲ್ಲಿ ಬಳಕೆಯಾಗದೆ ಉಳಿದ ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಉಳಿದರೆ ಅದನ್ನು ಮುಂದಿನ ವರ್ಷಕ್ಕೆ ಮಾತ್ರ ಉಪಯೋಗಿಸಬಹುದಾಗಿದೆ. ಮುಂದಿನ ವರ್ಷದ ಕೊನೆಯಲ್ಲಿಯೂ ಖರ್ಚಾಗದೆ ಉಳಿದರೆ, ಆ ಮೊತ್ತವನ್ನು ರದ್ದುಪಡಿಸಲಾಗುತ್ತದೆ. ಅಲ್ಲದೆ, ಆ ವರ್ಷದಲ್ಲಿ ನಿಧಿಯನ್ನು ಕ್ಲೇಮ್‌ ಮಾಡದೇ ಇದ್ದರೆ, ಆರ್ಥಿಕ ವರ್ಷದ ಕೊನೆಯಲ್ಲಿ ಹಂಚಿಕೆಯನ್ನು ರದ್ದುಪಡಿಸಬೇಕು ಎಂದೂ ಮಾರ್ಗಸೂಚಿಯಲ್ಲಿದೆ.

ಆದರೆ, ಮಾರ್ಗಸೂಚಿಯಲ್ಲಿರುವ ನಿಯಮಗಳ ಪಾಲನೆ ಆಗುತ್ತಿಲ್ಲ. ಹೀಗಾಗಿ, ಕಳೆದ 8–10 ವರ್ಷಗಳಿಂದ ಶಾಸಕರ ಉಳಿಕೆ ನಿಧಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಉಳಿಕೆಯಾಗುತ್ತಲೇ ಬಂದಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

**

ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ಶಾಸಕರಿಗೆ ಅನುದಾನ
ವರ್ಷ: ಮೊತ್ತ

2018–19: ₹ 1.50 ಕೋಟಿ (₹ 50 ಲಕ್ಷದಂತೆ ಮೂರು ಕಂತು)
2019–20: ₹ 1.00 ಕೋಟಿ (₹ 50 ಲಕ್ಷದಂತೆ ಎರಡು ಕಂತು)
2020–21: ₹ 1.00 ಕೋಟಿ (₹ 50 ಲಕ್ಷದಂತೆ ಎರಡು ಕಂತು)

* ಪ್ರತಿವರ್ಷ ಶಾಸಕರಿಗೆ ನಿಗದಿಯಾಗಿರುವ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ₹ 2 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.