ಹುಬ್ಬಳ್ಳಿ: ದೇಶದ ಆರ್ಥಿಕ ಚಟುವಟಿಕೆಗೆ ಕೃಷಿ ಬೆನ್ನೆಲುಬಾದರೆ, ಕೃಷಿಗೆ ರೈತ ಹಾಗೂ ಜಾನುವಾರುಗಳೇ ಬೆನ್ನೆಲುಬು. ಜಾನುವಾರುಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟು (ಲಂಪಿಸ್ಕಿನ್) ರೋಗ ಕೇವಲ ಜಾನುವಾರುಗಳನ್ನಷ್ಟೇ ಅಲ್ಲ, ರೈತರ ಬದುಕಿನ ಮೇಲೂ ಗದಾಪ್ರಹಾರ ಮಾಡಿದೆ. ರೋಗಕ್ಕೆ ತುತ್ತಾಗಿ ಸಾವಿಗೀಡಾಗುತ್ತಿರುವ ಜಾನುವಾರುಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
‘ಕ್ಯಾಪ್ರಿಪಾಕ್ಸ್’ ಎನ್ನುವ ವೈರಾಣುವಿನಿಂದ ಹರಡುವ ಈ ರೋಗ, ಆಫ್ರಿಕಾ ದೇಶದಲ್ಲಿ 1929ರಲ್ಲಿ ಮೊದಲು ಕಾಣಿಸಿ
ಕೊಂಡಿತು. ಭಾರತದಲ್ಲಿ 2019ರಲ್ಲಿ ಒಡಿಶಾದಲ್ಲಿ ಮೊದಲ ಬಾರಿ ಪತ್ತೆ ಯಾಗಿತ್ತು. ಅಲ್ಲೊಂದು, ಇಲ್ಲೊಂದು ಎನ್ನುವಂತೆ ಅಪರೂಪಕ್ಕೊಮ್ಮೆ ಕಾಣಿಸಿ ಕೊಳ್ಳುತ್ತಿದ್ದುದ್ದು ಈಗ ವ್ಯಾಪಕವಾಗಿ ಹರಡುತ್ತಿದೆ. ಕರ್ನಾಟಕ ಸೇರಿದಂತೆ ರಾಜಸ್ಥಾನ, ಗುಜರಾತ್, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಜಮ್ಮುವಿನಲ್ಲಿ ಕಂಡುಬಂದಿದೆ.
ದೇಶದಲ್ಲಿ ಇದುವರೆಗೆ 35 ಸಾವಿರ ಜಾನುವಾರು ಮೃತಪಟ್ಟಿವೆ. ಸುಮಾರು 9 ಲಕ್ಷ ಜಾನುವಾರು ರೋಗಪೀಡಿತವಾಗಿವೆ.
ಎರಡು ತಿಂಗಳ ಹಿಂದೆಯಷ್ಟೇ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಮೂಲಕ ರಾಜ್ಯ ಪ್ರವೇಶಿಸಿದ ಈ ಕಾಯಿಲೆ, ಎರಡು ಜಿಲ್ಲೆ ಹೊರತುಪಡಿಸಿ ಇನ್ನುಳಿದ 28 ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದೆ. ಇದುವರೆಗೆ 1,620 ಜಾನುವಾರುಗಳು ಮೃತಪಟ್ಟಿವೆ. 45,451 ಜಾನುವಾರುಗಳು ರೋಗಪೀಡಿತವಾಗಿವೆ. 2,915 ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ ಅಂಕಿಯೇ ರೋಗ ಹರಡುವಿಕೆಯ ತೀವ್ರತೆಯನ್ನು ತೋರಿಸುತ್ತದೆ.
ರೋಗ ತಗುಲಿದ ಪ್ರಾಣಿಯಿಂದ ರಕ್ತ ಹೀರುವ ಸೊಳ್ಳೆ, ಉಣ್ಣೆ, ನೊಣಗಳು ಆರೋಗ್ಯವಂತ ಜಾನುವಾರುಗಳಿಗೆ ಕಚ್ಚಿದಾಗ ಸೋಂಕು ಹರಡುತ್ತದೆ. ಸೋಂಕು ಕಾಣಿಸಿಕೊಂಡ ಜಾನುವಾರುಗಳಲ್ಲಿ ದೇಹದ ತುಂಬ 2ರಿಂದ 5 ಸೆಂ.ಮೀ ಸುತ್ತಳತೆಯ ಗಂಟುಗಳು ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ತಲೆ, ಕುತ್ತಿಗೆ, ಕಾಲುಗಳು, ಕೆಚ್ಚಲು, ಜನನಾಂಗ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ನಂತರ ನಿಧಾನವಾಗಿ ಗಂಟುಗಳು ದೊಡ್ಡದಾಗಿ, ಒಡೆಯುತ್ತವೆ. ರಕ್ತಸ್ರಾವವಾಗುವುದಲ್ಲದೇ, ಚರ್ಮ–ಮಾಂಸ ಕಿತ್ತು ಆಳವಾದ ಗಾಯಗಳು ಉಂಟಾಗುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸ್ರಾವವಾದರೆ ಜಾನುವಾರುಗಳು ಬದುಕುಳಿಯಲಾರವು.
ಮಕ್ಕಳಂತೆ ಸಾಕಿದ ಜಾನುವಾರುಗಳು ತಮ್ಮ ಕಣ್ಮುಂದೆ ಸಾವಿಗೀಡಾಗುತ್ತಿರುವುದನ್ನು ಕಂಡು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಕೃಷಿ ಹಾಗೂ ಕುಟುಂಬದ ನೊಗ ಹೊರುವ ಜಾನುವಾರುಗಳಿಗೆ ಬಂದಿರುವ ಈ ಪರಿಸ್ಥಿತಿ ಕಂಡು ಮಮ್ಮಲಮರುಗುತ್ತಿದ್ದಾರೆ. ಆರ್ಥಿಕ ಆಧಾರ ಸ್ತಂಭವಾಗಿರುವ ಜಾನುವಾರುಗಳು ಕುಸಿದುಬಿದ್ದಾಗ ಕುಟುಂಬವನ್ನು ಮುನ್ನೆಡೆಸುವುದಾದರೂ ಹೇಗೆ ಎನ್ನುವ ಚಿಂತೆಯಲ್ಲಿ ರೈತರಿದ್ದಾರೆ. ಭಾವನಾತ್ಮಕವಾಗಿಯೂ ಜರ್ಝರಿತರಾಗಿದ್ದಾರೆ.
ಅತಿವೃಷ್ಟಿಯಿಂದ ಬೆಳೆ ನಾಶವಾಗಿ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಇದು ಮತ್ತೊಂದು ಹೊಡೆತ ನೀಡಿದೆ. ಕೆಲವು ಕಡೆ ರೋಗದಿಂದ ಮೃತಪಟ್ಟ ಜಾನುವಾರುಗಳ ಅಂತ್ಯಕ್ರಿಯೆ ಮಾಡಲು ಕೂಡ ರೈತರು ಪರದಾಡಿದ್ದಾರೆ. ಕಳೇಬರವನ್ನು ಹೂಳಲು ದೊಡ್ಡ ಗುಂಡಿ ತೆಗೆಸಬೇಕಾಗುತ್ತದೆ. ಇದಕ್ಕಾಗಿ ₹ 4,000ದಿಂದ ₹ 5,000ವರೆಗೆ ಖರ್ಚಾಗುತ್ತದೆ. ಇಷ್ಟು ಹಣ ಭರಿಸಲು ಕೂಡ ತಮ್ಮಿಂದ ಸಾಧ್ಯವಾಗದು ಎಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ರೈತರು, ಜೆಸಿಬಿ ಮೂಲಕ ಗುಂಡಿ ತೆಗೆಸಿಕೊಡುವಂತೆ ಪುರಸಭೆಯ ಮೊರೆಹೋಗಿದ್ದು ಪರಿಸ್ಥಿತಿಗೆ ಕೈಗನ್ನಡಿ ಹಿಡಿದಂತಿದೆ.
ಹೈನೋದ್ಯಮಕ್ಕೆ ಹೊಡೆತ:ಹಸು ಮತ್ತು ಎಮ್ಮೆಗಳಲ್ಲಿ ಈ ರೋಗ ಕಂಡುಬಂದಿರುವುದರಿಂದ ಹೈನೋದ್ಯಮಕ್ಕೆ ಪೆಟ್ಟು ಬಿದ್ದಿದೆ. ಈ ಕಾಯಿಲೆಗೆ ತುತ್ತಾಗುವ ಜಾನುವಾರುಗಳಲ್ಲಿ ಶೇ 20ರಷ್ಟು ಹಾಲು ಉತ್ಪಾದನೆ ಕಡಿಮೆಯಾಗಿದೆ.ವಾರಗಟ್ಟಲೆ ಜ್ವರ ಇರುವುದರೊಂದಿಗೆ ಹಾಲು ನೀಡುವ ಪ್ರಮಾಣವೂ ಕಡಿಮೆಯಾಗುತ್ತಿದ್ದು, ರೈತರು ತತ್ತರಿಸಿ ಹೋಗಿದ್ದಾರೆ. ಇನ್ನೊಂದೆಡೆ, ರೋಗದಿಂದ ಬಳಲುತ್ತಿರುವ ಹಸುವಿನ ಹಾಲು ಕುಡಿಯಬಹುದೇ? ಮಕ್ಕಳು, ಗರ್ಭೀಣಿ ಹಾಗೂ ವೃದ್ಧರಿಗೆ ಯಾವುದಾದರೂ ತೊಂದರೆಯಾಗುತ್ತದೆಯೇ ಎಂದು ಕೆಲವೆಡೆ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದು ಕೆಲವು ಪ್ರದೇಶಗಳಲ್ಲಿ ಹಾಲು ಮಾರಾಟದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.
‘ಹಾಲು ಕಾಯಿಸಿ ಕುಡಿದರೆ ಏನೂ ಸಮಸ್ಯೆ ಇಲ್ಲ’ ಎಂದು ಕೋಲಾರ ಜಿಲ್ಲೆಯ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ರಾಮಯ್ಯ ಹೇಳುತ್ತಾರೆ. ಪಶು ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ.
ಜಾನುವಾರು ಸಂತೆ, ಜಾತ್ರೆ ನಿಷೇಧ: ರೋಗ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಕೆಲವು ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಮುಖ್ಯವಾಗಿ ಜಾನುವಾರುಗಳನ್ನು ಒಂದೇ ಕಡೆ ಒಟ್ಟಾಗಿ ಸೇರಿಸುವುದರ ಮೇಲೆ ನಿಷೇಧ ಹೇರಿದೆ. ಜಾನುವಾರು ಸಂತೆ, ಜಾತ್ರೆಗಳನ್ನು ನಿಷೇಧಿಸಿದೆ. ರಾಸುಗಳ ಸಾಗಾಣಿಕೆಗೆ ನಿರ್ಬಂಧ ವಿಧಿಸಿದೆ. ರೋಗ ಕಾಣಿಸಿಕೊಂಡ 5 ಕಿ.ಮೀ ವ್ಯಾಪ್ತಿಯಲ್ಲಿನ ಎಲ್ಲಾ ರಾಸುಗಳ ಪರೀಕ್ಷೆ ಮಾಡಲು ಸೂಚಿಸಿದೆ. ಆದರೂ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿಲ್ಲ.
ಹಲವು ರೈತರು ಈಗಾಗಲೇ ಜಾನುವಾರು ಖರೀದಿಸುವುದನ್ನು ನಿಲ್ಲಿಸಿದ್ದಾರೆ. ಕೆಲವರು ಆತಂಕದಿಂದ ತಮ್ಮ ಜಾನುವಾರುಗಳನ್ನು ಪಶು ಆಸ್ಪತ್ರೆಗಳಿಗೆ ಕರೆತಂದು ತಪಾಸಣೆಗೆ ಒಳಪಡಿಸುತ್ತಿದ್ದಾರೆ.
ರೋಗ ಲಕ್ಷಣಗಳು, ಹರಡುವಿಕೆ ಹಾಗೂ ಮುಂಜಾಗ್ರತೆಯ ಬಗ್ಗೆ ಅರಿವು ಮೂಡಿಸಲು ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಅಧಿಕಾರಿಗಳ ಶ್ರಮ ಇನ್ನೂ ತಳಮಟ್ಟಕ್ಕೆ ತಲುಪಿಲ್ಲ. ಇದುವರೆಗೆ ತಮ್ಮನ್ನು ಯಾವ ಅಧಿಕಾರಿಯೂ ಭೇಟಿಯಾಗಿಲ್ಲ, ಯಾವ ಮಾಹಿತಿಯನ್ನೂ ನೀಡಿಲ್ಲ ಎನ್ನುತ್ತಾರೆ ದಾವಣಗೆರೆ ಜಿಲ್ಲೆಯ ಕುಣೆಬೆಳಕೆರೆಯ ರೈತ ಚಂದ್ರು ಪೂಜಾರ.
ಸಿಬ್ಬಂದಿ ಕೊರತೆ: ರೋಗದ ಬಗ್ಗೆ ಅರಿವು ಮೂಡಿಸಲು, ಲಸಿಕೆ ಹಾಕಲು ಹಾಗೂ ಜಾನುವಾರುಗಳ ಆರೋಗ್ಯ ಪರೀಕ್ಷಿಸಲು ಸಮರ್ಪಕ ಸಿಬ್ಬಂದಿಗಳಿಲ್ಲ. ಹಲವು ಜಿಲ್ಲೆಗಳಲ್ಲಿ ಪಶು ವೈದ್ಯರು ಹಾಗೂ ಸಹಾಯಕ ಸಿಬ್ಬಂದಿಯ ಕೊರತೆ ಸಾಕಷ್ಟಿದೆ. ಇದರಿಂದಾಗಿ ಲಸಿಕಾಕರಣ ಪ್ರಕ್ರಿಯೆಯು ನಿಧಾನಗತಿಯಲ್ಲಿ ಸಾಗುತ್ತಿದೆ.
ಲಸಿಕೆ ಕೊರತೆ: ಈ ಕಾಯಿಲೆಗೆ ನಿರ್ದಿಷ್ಟವಾದ ಲಸಿಕೆಯನ್ನು ಇನ್ನೂ ಕಂಡುಹಿಡಿದಿಲ್ಲ. ಪ್ರಯೋಗಗಳು ಇನ್ನೂ ನಡೆಯುತ್ತಲೇ ಇವೆ. ತಾತ್ಕಾಲಿಕ ಶಮನಕ್ಕಾಗಿ ವೈದ್ಯಾಧಿಕಾರಿಗಳು ಗೋಟ್‌ಪಾಕ್ಸ್ ಲಸಿಕೆಗೆ ಮೊರೆಹೋಗಿದ್ದಾರೆ. ಕುರಿ ಜ್ವರ (ಶೀಪ್ ಪಾಕ್ಸ್), ಮೇಕೆ ಜ್ವರಕ್ಕೆ (ಗೋಟ್ ಪಾಕ್ಸ್) ಕಾರಣವಾಗುವ ವೈರಾಣುವೇ ಚರ್ಮಗಂಟು ರೋಗಕ್ಕೂ ಕಾರಣ ಎಂಬುದು ಸಂಶೋಧನೆಯಿಂದ ದೃಢಪಟ್ಟಿದ್ದರಿಂದ ಅದೇ ಲಸಿಕೆಯನ್ನು ನೀಡಲಾಗುತ್ತಿದೆ ಎನ್ನುತ್ತಾರೆ ತಜ್ಞರು.
ಈ ಲಸಿಕೆಯೂ ಈಗ ಸಮರ್ಪಕವಾಗಿ ಲಭ್ಯವಿಲ್ಲ. ರಾಜ್ಯದಲ್ಲಿ 1.10 ಕೋಟಿ ಜಾನುವಾರುಗಳಿವೆ. ಇವುಗಳಲ್ಲಿ ಇದುವರೆಗೆ 6.42 ಲಕ್ಷ ಜಾನುವಾರುಗಳಿಗೆ ಮಾತ್ರ ಲಸಿಕೆ ನೀಡಲಾಗಿದೆ. ಲಸಿಕೆಯು ಕೇಂದ್ರ ಸರ್ಕಾರದಿಂದ ಪೂರೈಕೆಯಾಗಬೇಕಾಗಿದ್ದು, ಪೂರೈಕೆಯಲ್ಲಿ ವಿಳಂಬವಾಗಿದೆ ಎನ್ನುತ್ತವೆ ಪಶುಸಂಗೋಪನಾ ಇಲಾಖೆಯ ಮೂಲಗಳು.
ನಾಟಿ ಔಷಧ ಮೊರೆ ಹೋದ ರೈತರು: ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವೆಡೆ ರೈತರು ನಾಟಿ ಔಷಧಕ್ಕೆ ಮೊರೆಹೋಗಿದ್ದಾರೆ. ವಿಳ್ಯೆದೆಲೆ, ಮೆಣಸು, ಉಪ್ಪು ಮತ್ತು ಬೆಲ್ಲವನ್ನು ರುಬ್ಬಿ ತಿನ್ನಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎನ್ನುವುದು ಸಾಬೀತಾಗಿಲ್ಲ.
ಸಾಕಿದ ಜಾನುವಾರುಗಳ ಬಗ್ಗೆ ರೈತರು ಎಚ್ಚರ ವಹಿಸುತ್ತಾರೆ. ಆದರೆ, ದೇವರಿಗೆ ಬಿಟ್ಟ ಹೋರಿಗಳಿಗೆ ರೋಗ ಬರುತ್ತಿದೆ. ಈ ಹೋರಿಯಿಂದ ಸುತ್ತಮುತ್ತಲ ಜಾನುವಾರುಗಳಿಗೆ ರೋಗ ಹರಡುವ ಅಪಾಯವಿದೆ. ಈ ಬಗ್ಗೆಯೂ ಸ್ಥಳೀಯ ಗ್ರಾಮ ಪಂಚಾಯಿತಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಮಲ್ಲನಾಯಕನಹಳ್ಳಿಯ ರೇವಣಸಿದ್ದಪ್ಪ ಅವರ ಒತ್ತಾಯ.
ಪರಿಹಾರ ಸಾಕಾಗದು:ರೋಗ ನಿವಾರಣೆಗೆ ಲಸಿಕೆ, ಚಿಕಿತ್ಸೆ ನೀಡಲು ಹಾಗೂ ಮೃತಪಟ್ಟ ರಾಸುಗಳ ಮಾಲೀಕರಿಗೆ ಪರಿಹಾರ ಒದಗಿಸಲು ₹ 13 ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್ಥಿಕ ಇಲಾಖೆಗೆ ಸೂಚಿಸಿದ್ದಾರೆ. ರೋಗದಿಂದ ಸತ್ತ ಹಸುವಿಗೆ ₹ 20 ಸಾವಿರ ಹಾಗೂ ಸತ್ತ ಎತ್ತಿಗೆ ₹ 30 ಸಾವಿರ ಪರಿಹಾರವನ್ನು ಘೋಷಿಸಿದ್ದಾರೆ. ಆದರೆ, ಈ ಪರಿಹಾರ ಸಾಕಾಗುವುದಿಲ್ಲ. ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು. ರೋಗ ತಡೆಯಲು ಸೂಕ್ತ ಲಸಿಕೆ ಕಂಡುಹಿಡಿಯಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೇಕೆ ಜ್ವರ ಲಸಿಕೆಗೆ ಮೊರೆ
ದಾವಣಗೆರೆ: ಜಾನುವಾರುಗಳಲ್ಲಿ ಒಂದೇ ಸಮನೆ ಹರಡುತ್ತಿರುವ ಚರ್ಮಗಂಟು ರೋಗ ತಡೆಗಟ್ಟಲು ಗೋಟ್‌ಪಾಕ್ಸ್ ಲಸಿಕೆಯೇ ಸದ್ಯ ಲಭ್ಯವಿರುವ ಔಷಧ ಎಂದು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ತಿಳಿಸಿದೆ.
ರಾಜ್ಯಕ್ಕೆ ಈಗಾಗಲೇ 10 ಲಕ್ಷ ಡೋಸ್ ಲಸಿಕೆ ಬಂದಿದೆ. ಶೀಘ್ರವೇ 30 ಲಕ್ಷ ಡೋಸ್ ಲಸಿಕೆ ಬರುವ ನಿರೀಕ್ಷೆ ಇದೆ. ನವೆಂಬರ್ 15ರೊಳಗೆ ಮತ್ತೆ 50 ಲಕ್ಷ ಡೋಸ್ ಲಸಿಕೆ ಪೂರೈಕೆಯಾಗಲಿದ್ದು, ಬಹುತೇಕ ಜಾನುವಾರುಗಳಿಗೆ ಲಸಿಕೆ ನೀಡುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಿರ್ದೇಶಕ ಡಾ. ಮಂಜು ಪಾಳೇಗಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ವಿಮೆಯ ಅರಿವಿಲ್ಲ: ಮೃತಪಟ್ಟ ಎತ್ತಿನ ಮಾಲೀಕರಿಗೆ ₹ 30,000, ಹಸುಗಳ ಮಾಲೀಕರಿಗೆ ₹ 20,000 ಪರಿಹಾರವನ್ನು ಸರ್ಕಾರ ಘೋಷಿಸಿದೆ. ಇದು ಸಾಕಾಗುವುದಿಲ್ಲ. ವಿಮೆ ಇದ್ದಿದ್ದರೆ ಆಕಳು ಕಳೆದುಕೊಂಡಿದ್ದರಿಂದ ಆಗುವ ನಷ್ಟವು ವಿಮೆಯಿಂದ ಬರುತ್ತಿತ್ತು. ಆದರೆ, ನಮ್ಮಲ್ಲಿರುವ ಶೇ 2ರಷ್ಟು ಜಾನುವಾರುಗಳಿಗೂ ವಿಮೆ ಮಾಡಿಸಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ 3.28 ಲಕ್ಷ ಜಾನುವಾರು ಇದ್ದರೂ 4,053 ಹಸುಗಳಿಗಷ್ಟೇ ವಿಮೆ ಇದೆ ಎಂದು ಹರಿಹರದ ರೈತ ಕುಮಾರ್ ದೂರಿದರು.
‘ವಿಮೆಯ ಒಟ್ಟು ಮೊತ್ತದ ಶೇ ಎರಡರಷ್ಟು ಮೊತ್ತ ಪ್ರೀಮಿಯಂ ಆಗಿರುತ್ತದೆ. ಅಂದರೆ, ಒಂದು ಜಾನುವಾರಿಗೆ ₹ 50,000 ವಿಮೆ ಮಾಡಿಸುವುದಾದರೆ, ವರ್ಷಕ್ಕೆ ₹ 1,000 ಪ್ರೀಮಿಯಂ ಇರಲಿದೆ. ಈ ಪ್ರೀಮಿಯಂನಲ್ಲಿ ಎಸ್‌ಸಿ/ ಎಸ್‌ಟಿ ಸಮುದಾಯದವರು ಶೇ 25ರಷ್ಟು, ಉಳಿದವರು ಶೇ 50ರಷ್ಟು ಭರಿಸಬೇಕು. ಉಳಿದ ಮೊತ್ತವನ್ನು ಸರ್ಕಾರ ಭರಿಸುತ್ತದೆ. ಜಾನುವಾರು ಸತ್ತರಷ್ಟೇ ಸಿಗುವ ವಿಮೆ ಇದಾಗಿರುವುದರಿಂದ ಎಷ್ಟೇ ಒತ್ತಾಯಿಸಿದರೂ ರೈತರು ವಿಮೆ ಮಾಡಲು ಮುಂದಾಗುತ್ತಿಲ್ಲ’ ಎಂದು ಡಾ. ಚಂದ್ರಶೇಖರ್ ಸುಂಕದ ವಿವರಿಸಿದರು.
ರೋಗ ನಿಯಂತ್ರಣ ಮತ್ತು ತಡೆಗಟ್ಟುವುದು
lರೋಗ ಪೀಡಿತ ರಾಸುಗಳನ್ನು ಆರೋಗ್ಯವಂತ ರಾಸುಗಳಿಂದ ಬೇರ್ಪಡಿಸಿ ಕೂಡಲೇ ಪಶುವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಗೊಳಪಡಿಸಬೇಕು. ದನಗಳ ಕೊಟ್ಟಿಗೆಯನ್ನು ನಿತ್ಯ ಶುಚಿಗೊಳಿಸಬೇಕು.
lಸೊಳ್ಳೆಗಳು, ನೊಣಗಳ ಹಾವಳಿಯನ್ನು ತಡೆಯಲು ನೊಣ, ಕೀಟ ನಿವಾರಣೆ ಮುಲಾಮು ಹಚ್ಚಿ ಹತೋಟಿಯಲ್ಲಿಡಬೇಕು. ದನಗಳಿಗೆ ಹರ್ಬಲ್ ಆಯಿಲ್ ಹಚ್ಚಬಹುದು ಅಥವಾ ಕೊಟ್ಟಿಗೆಯೊಳಗೆ ಸೊಳ್ಳೆಗಳು ಹೋಗದಂತೆ ದೊಡ್ಡ ನೆಟ್ ಹಾಕಬೇಕು. ಸಂಜೆ ವೇಳೆ ಬೇವಿನ ಎಲೆಗಳ ಹೊಗೆ ಹಾಕಿ ಸೊಳ್ಳೆ, ನೊಣಗಳನ್ನು ಓಡಿಸಬೇಕು.
lರೋಗ ಕಾಣಿಸಿಕೊಂಡಿರುವ ಪ್ರದೇಶದಲ್ಲಿ ಜಾನುವಾರು ಸಾಗಾಣಿಕೆಯ ಮೇಲೆ ನಿರ್ಬಂಧ ವಿಧಿಸಬೇಕು. ರೋಗ ಕಂಡುಬಂದ ಪ್ರದೇಶದಿಂದ 5 ಕಿ.ಮೀ. ವ್ಯಾಪ್ತಿಯ ಗ್ರಾಮಗಳಲ್ಲಿನ ಜಾನುವಾರುಗಳಿಗೆ ಲಸಿಕೆ ಹಾಕಬೇಕು.
lದನದ ಕೊಟ್ಟಿಗೆ ಸ್ವಚ್ಛಗೊಳಿಸಿ ಸೂಕ್ತವಾದ, ಅಂಟು ಜಾಡ್ಯ ನಿವಾರಕಗಳಾದ ಶೇ 2ರಿಂದ ಶೇ3ರಷ್ಟು ಸೋಡಿಯಂ ಹೈಪೋಕ್ಲೋರೈಡ್, ಶೇ 1ರಷ್ಟು ಫಾರ್ಮಲಿನ್, ಶೇ 2ರಷ್ಟು ಫಿನಾಲ್ ದ್ರಾವಣಗಳನ್ನು ಪಶುವೈದ್ಯರ ಸಲಹೆಯ ಮೇರೆಗೆ ಸಿಂಪಡಿಸಬೇಕು.
lಸೋಂಕು ಕಾಣಿಸಿಕೊಂಡ ಜಾನುವಾರುಗಳು ನರಳುವುದು ಸಹಜ. ಅವುಗಳಿಗೆ ನೋವು ನಿವಾರಕ, ರೋಗ ನಿರೋಧಕ, ಶಕ್ತಿವರ್ಧಕ ಔಷಧಿ, ಪೋಷಕಾಂಶ ಹಾಗೂ ಖನಿಜಾಂಶದ ಮಾತ್ರೆಗಳನ್ನು ಕೊಡಬೇಕು. ಏಳು ದಿನ ನಿರಂತರ ಉಪಚಾರ ಮಾಡಬೇಕು. ಗಂಟು ಒಡೆದರೆ ಗುಣಮುಖವಾಗಲು ಕನಿಷ್ಠ 15 ದಿನ ಬೇಕು. ಗುಳ್ಳೆ ಒಡೆದ ಜಾಗದಲ್ಲಿ ಅರಿಶಿನ ಹಚ್ಚಬಹುದು. ಬೇಗ ವಾಸಿಯಾಗುತ್ತದೆ. ಈ ರೋಗ ಮನುಷ್ಯರಿಗೆ ಹರಡುವುದಿಲ್ಲ.
ಪೂರಕ ಮಾಹಿತಿ: ಚಂದ್ರಕಾಂತ ಮಸಾನಿ, ಬಾಲಕೃಷ್ಣ ಪಿ.ಎಚ್., ಓಂಕಾರಮೂರ್ತಿ, ಸಚ್ಚಿದಾನಂದ ಕುರಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.