ಬಾಗಲಕೋಟೆ: ಮೂರು ತಿಂಗಳ ಹಿಂದಷ್ಟೇ 45 ಕೆ.ಜಿ ತೂಗುವ ಹತ್ತಿಕಾಳಿನ ಹಿಂಡಿಯ ಚೀಲಕ್ಕೆ ₹1,400 ಇತ್ತು. ಈಗ ಏಕಾಏಕಿ ₹1,800 ಆಗಿದೆ.ಪೆಟ್ರೋಲ್–ಡೀಸೆಲ್ ಸೇರಿ ಎಲ್ಲವೂ ಬೆಲೆ ಜಾಸ್ತಿ ಆಗಿದೆ. ಹತ್ತಿಕಾಳಿನ ಹಿಂಡಿ ದರವೂ ಹೆಚ್ಚಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ. ನಾವು ಡೇರಿಗೆ ಹಾಕುವ ಹಾಲಿನ ದರವೂ ಹೆಚ್ಚಬೇಕಲ್ಲವೇ? ಎಂದುಜಮಖಂಡಿ ತಾಲ್ಲೂಕಿನ ಆಲಗೂರಿನ ರೈತ ಅಣ್ಣೇಶ ಪರಮಗೊಂಡ ಪ್ರಶ್ನಿಸುತ್ತಾರೆ.
ಬಾಗಲಕೋಟೆ ಜಿಲ್ಲೆಯ ಬಹುತೇಕ ಭಾಗದಲ್ಲಿ ಈಗ ರೈತರು ವಾಣಿಜ್ಯ ಬೆಳೆ ಕಬ್ಬು ಹೆಚ್ಚಾಗಿ ಬೆಳೆಯುತ್ತಾರೆ. ದ್ರಾಕ್ಷಿ, ದಾಳಿಂಬೆ ತೋಟಗಳು ಕಾಣಸಿಗುತ್ತಿವೆ. ಹೀಗಾಗಿ ದನಗಳಿಗೆ ಹಿಂಡಿ, ಬೂಸಾ ಮಾತ್ರವಲ್ಲ, ನಿತ್ಯ ಹಾಕುವ ಮೇವನ್ನೂ ಹೊರಗಿನಿಂದ ಖರೀದಿಸಿ ತರಬೇಕು. ಜೋಳ, ಮೆಕ್ಕೆಜೋಳ, ಕಡಲೆಹೊಟ್ಟು ಖರೀದಿಸಬೇಕು. ಕಳೆದ ಮೂರು ವರ್ಷಗಳಿಂದ ಸತತವಾಗಿ ಆಲಗೂರು ಪ್ರವಾಹಕ್ಕೆ ಸಿಲುಕಿದೆ. ಇದ್ದ ಮೇವು ಕೃಷ್ಣೆಯಲ್ಲಿ ಕೊಚ್ಚಿ ಹೋಗಿದೆ. ತಮ್ಮ ಬಾಳು (ರೈತರದ್ದು) ಬರೀ ನಷ್ಟದ ಬಾಬತ್ತೇ ಆಗಿದೆ ಎಂದು ಅಣ್ಣೇಶ ನೊಂದುಕೊಂಡರು.
ಡೇರಿಯವರ ಮರ್ಜಿ!: ‘ಹಳ್ಳಿಯಲ್ಲಿ ಪಶುಪಾಲಕರ ಬದುಕು ಡೇರಿಯಲ್ಲಿ ಹಾಲು ಅಳೆಯುವವರ ಮರ್ಜಿಯನ್ನು ಅವಲಂಬಿಸಿದೆ. ಹಾಲಿಗೆ ಲ್ಯಾಕ್ಟೊಮೀಟರ್‌ನಲ್ಲಿ ಒಂದು ಪ್ರಮಾಣಕ್ಕೆಬರಬೇಕಿದ್ದರೂ, ಕೊಬ್ಬಿನ ಅಂಶ ನಿಗದಿ ಆಗಿ ಅದಕ್ಕೆ ದರ ಹೆಚ್ಚಬೇಕಿದ್ದರೂ ನಾವು ಒಂಟಿ ಕಾಲಲ್ಲಿ ನಿಲ್ಲಬೇಕು. ನಾನು, ಬೆಳಿಗ್ಗೆ ಹಾಗೂ ಸಂಜೆ ಹಾಲು ಹಾಕುತ್ತೇನೆ. ಅದೇ ಹಾಲಿಗೆ ಮುಂಜಾನೆ ಒಂದು ದರ, ಸಂಜೆಗೆ ಮತ್ತೊಂದು ದರ ನಿಗದಿಯಾಗುತ್ತದೆ’ ಎಂದು ಮುಗುಳ್ನಗುತ್ತಾರೆ.
ಜವಾರಿ ಎಮ್ಮೆ ದಿನಕ್ಕೆ ಐದಾರು ಲೀಟರ್ ಹಾಲು ಕೊಟ್ಟರೆ, ಮುರ‍್ರಾ, ಜಾಫ್ರಾಬಾದಿ, ಮೋಳಿ ತಳಿ 18 ಲೀಟರ್ ಹಿಂಡುತ್ತವೆ. ಆ ರಾಸುಗಳ ಬೆಲೆಯೂ ₹1.30 ಲಕ್ಷದಿಂದ 1.50 ಲಕ್ಷ ಆಗಿದೆ. ಆದರೆ ಇವನ್ನು ಸಾಕಲೆಂದೇ ಒಬ್ಬರು ಪೂರ್ಣಾವಧಿಗೆ ಮೀಸಲಿರಬೇಕು. ವಾತಾವರಣದಲ್ಲಿ ಸ್ವಲ್ಪ ಏರುಪೇರಾದರೂ ಮೇವು–ನೀರು ಬಿಟ್ಟು ಮಲಗುತ್ತವೆ. ಜ್ವರ ಬಂದರೂ ಹಾಲಿನ ಇಳುವರಿ ತಗ್ಗುತ್ತದೆ. ಔಷಧೋಪಚಾರ ಸಿಗದಿದ್ದರೆ ಸಾವು ನಿಶ್ಚಿತ. ಅತ್ತ ಎಮ್ಮೆ ಕೊಳ್ಳಲು ಮಾಡಿದ ಸಾಲದ ಬಡ್ಡಿ ಮಾತ್ರ ಏರುತ್ತಲೇ ಇರುತ್ತದೆ. ಇದೊಂಥರಾ ಜೂಜಾಟ ಎನ್ನುತ್ತಾರೆ ಅವರು.
ಮಳೆಗಾಲದಲ್ಲಿ ಪ್ರವಾಹದಿಂದ ಮೇವಿನ ಕೊರತೆ ಆಗಲಿದೆ ಎಂದು ₹34 ಸಾವಿರಕ್ಕೆ ಎಮ್ಮೆ ಮಾರಾಟ ಮಾಡಿದ್ದೆ. ಈಗ ಅಂಥದ್ದನ್ನೇಕೊಳ್ಳಬೇಕೆಂದರೂ ₹65 ಸಾವಿರ ಹೇಳುತ್ತಿದ್ದಾರೆ. ಹೈನುಗಾರರ ಅಸಹಾಯಕತೆಯೂ ದಲ್ಲಾಳಿಗಳಿಗೆ ಲಾಭದ ಪಾಲು. ಪಶುಸಾಕಾಣಿಕೆ ಖಂಡಿತವಾಗಿಯೂ ಹೊರೆಯಾಗುತ್ತಿದೆ ಎನ್ನುತ್ತಾರೆ.
ರೈತರ ಅಭಿಪ್ರಾಯ ಅಗತ್ಯ ಸಿಬ್ಬಂದಿ ಕೊರತೆ
ಸರ್ಕಾರಿ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು, ಸಕಾಲಕ್ಕೆ ಚಿಕಿತ್ಸೆ ಸಿಗದೇ ಜಾನುವಾರು ಸಾವನ್ನಪ್ಪುತ್ತಿವೆ. ಇನ್ನೊಂದೆಡೆ ಅವುಗಳನ್ನೇ ನಂಬಿಕೊಂಡ ರೈತರೂ ಸಂಕಷ್ಟದಲ್ಲಿದ್ದಾರೆ. ಆಸ್ಪತ್ರೆಗಳಿಗೆ ಅಗತ್ಯ ಸಿಬ್ಬಂದಿ ಹಾಗೂ ಜಾನುವಾರುಗಳಿಗೆ ಔಷಧಿ ಮತ್ತು ಲಸಿಕೆ ಒದಗಿಸಬೇಕು.
ಚೀಲೂರು ಮುನಿರಾಜು, ಅಧ್ಯಕ್ಷ, ಜಿಲ್ಲಾ ರೈತ ಸಂಘದ ಘಟಕ, ರಾಮನಗರ
***
ಗದಾಪ್ರಹಾರ ಸರಿಯಲ್ಲ
ರೈತರು ಹೈನುಗಾರಿಕೆ ನಂಬಿ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಸರ್ಕಾರ ಅನ್ನದಾತರ ಹಿತ ಕಾಯುವುದನ್ನು ಬಿಟ್ಟು ತುಘಲಕ್ ದರ್ಬಾರ್ ನಡೆಸುತ್ತಿದೆ.
ಕೆ. ನಾರಾಯಣಗೌಡ, ರೈತ ಮುಖಂಡ, ಕೋಲಾರ
***
ಜನತಂತ್ರ ವಿರೋಧಿ ನೀತಿ
ಎಲ್ಲಾ ಸೇವೆಗಳನ್ನೂ ಶುಲ್ಕ ಪಾವತಿಸಿಯೇ ಪಡೆಯುವುದಾದರೆ ಸರ್ಕಾರ ಇರುವುದಾದರು ಏಕೆ? ರೈತರು ಪಾವತಿಸುವಷ್ಟು ಪರೋಕ್ಷ ತೆರಿಗೆಯನ್ನು ಇತರೆ ಬೇರಾವ ವರ್ಗವೂ ಪಾವತಿಸುವುದಿಲ್ಲ. ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಸಾಧ್ಯವಾಗಿಲ್ಲ. ಗ್ರಾಮೀಣರ ಆರ್ಥಿಕತೆ ನಿಂತಿರುವುದೇ ಹೈನುಗಾರಿಕೆಯ ಮೇಲೆ. ಆಸ್ಪತ್ರೆ ಹಾಗೂ ವೈದ್ಯರನ್ನು ನೇಮಿಸಲಿ.
ಮುತ್ತೇಗೌಡ, ರೈತ ಸಂಘದ ಮುಖಂಡ, ದೊಡ್ಡಬಳ್ಳಾಪುರ.
***
ವೈದ್ಯರ ನೇಮಕಕ್ಕೆ ಕ್ರಮವಹಿಸಿ
ಈಗ, ರಾಸುಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಔಷಧಿಗಳನ್ನು ಅಂಗಡಿಗಳಿಂದ ತರುವಂತೆ ವೈದ್ಯರು ಸೂಚಿಸುತ್ತಿದ್ದಾರೆ. ಗ್ರಾಮೀಣ ಭಾಗದ ಪಶು ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲ. ಇಂತಹ ಹೊತ್ತಿನಲ್ಲಿ ಯಾವುದು ಆದ್ಯತೆ ಆಗಬೇಕು ಎನ್ನುವುದನ್ನು ಮೊದಲು ಮನಗಾಣಬೇಕು.
ಅಶ್ವತ್ಥನಾರಾಯಣಬಾಬು, ನಿರ್ದೇಶಕ, ಕೋಚಿಮುಲ್, ಚಿಂತಾಮಣಿ.
****
ಮೊದಲು ವೈಜ್ಞಾನಿಕ ಬೆಲೆ ನೀಡಿ
ರೈತರು ಬೆಳೆದ ಬೆಳೆಗೆ ಮೊದಲು ವೈಜ್ಞಾನಿಕ ಬೆಲೆ ಕೊಡಲಿ. ಪಶುಗಳು ಕೃಷಿಯ ಭಾಗವೇ ಆಗಿದ್ದು, ಅವುಗಳಿಲ್ಲದೆ ರೈತರು ಬದುಕು ಕಂಡುಕೊಳ್ಳಲು ಸಾಧ್ಯವಿಲ್ಲ. ಪಶುಪಾಲನಾ ಇಲಾಖೆಯನ್ನು ಮುಂದಿಟ್ಟುಕೊಂಡು ಸರ್ಕಾರ ಲಾಭ ಮಾಡುವ ಕೆಲಸಕ್ಕೆ ಕೈಹಾಕಬಾರದು. ಇದು ಲಾಭ ಮಾಡುವ ಇಲಾಖೆಯೂ ಅಲ್ಲ. ಎಲ್ಲ ಮೂಲಸೌಕರ್ಯ ಹಾಗೂ ಸಿಬ್ಬಂದಿಯನ್ನು ಒದಗಿಸಬೇಕು.
ಎ. ಗೋವಿಂದರಾಜು, ರೈತ ಮುಖಂಡ, ತುಮಕೂರು
ಇವುಗಳನ್ನೂ ಓದಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.