ಚಿತ್ರದುರ್ಗ: ‘ಮಗ–ಸೊಸಿ ಕಾಫಿದೇಶಕ್ಕೆ ಹೋಗಿ ತಿಂಗ್ಳಾತು. ಓದೋ ಮೊಮ್ಮಕ್ಳನ್ನ ಸಾಲಿಗೆ ಕಳಿಸ್ಕಂಡು ಹಟ್ಟೀಲ್ಲಿದೇನಿ. ಮುಂದಿನ ತಿಂಗ್ಳು ಹಬ್ಬಕ್ಕೆ ಅವ್ರು ಊರಿಗೆ ಬರ್ತಾರೆ. ಇಲ್ಲೇ ಕೂಲಿ ಸಿಕ್ಕಿದ್ರೆ ದುಡಿಯೋಕೆ ಮಗ ಯಾಕೆ ದೂರ ಹೋಗ್ತಿದ್ದ...?’
ಮೊಳಕಾಲ್ಮುರು ತಾಲ್ಲೂಕಿನ ಸೂರಮ್ಮನಹಳ್ಳಿಯ ಸಣ್ಣಕ್ಕನ ಪ್ರಶ್ನೆಯಲ್ಲಿ ಬೇಸರವಿತ್ತು. ಮಾಗಿ ಚಳಿಯಲ್ಲಿ ಬೆಳಗಿನ ಬಿಸಿಲಿಗೆ ಮೈವೊಡ್ಡಿ ಕುಳಿತಿದ್ದ 75 ವರ್ಷದ ವೃದ್ಧೆ ನಿಧಾನವಾಗಿ ಮೇಲೆದ್ದರು. ಆಗಷ್ಟೇ ಅಡುಗೆ ಮುಗಿಸಿದ ಮೊಮ್ಮಗಳು ಪ್ರೌಢಶಾಲೆಗೆ ಹೊರಡಲು ಅಣಿಯಾದಳು. ತಡವರಿಸುತ್ತ ಅಜ್ಜಿ ಒಳಗೆ ಹೆಜ್ಜೆ ಇಡುವುದನ್ನು ಕಂಡು ಆಸರೆಯಾದಳು.
ಅರ್ಧ ಎಕರೆ ಭೂಮಿ ಹೊಂದಿರುವ ಸಣ್ಣಮ್ಮನ ಕುಟುಂಬಕ್ಕೆ ಕೂಲಿಯೇ ಆಧಾರ. ಸಕಾಲಕ್ಕೆ ಮಳೆ ಸುರಿಯದಿರುವುದರಿಂದ ಬಿತ್ತಿದ ಜೋಳ ಮೊಳಕೆಯಲ್ಲಿಯೇ ಕಮರಿದೆ. ಬಿ.ಜಿ.ಕೆರೆ ಸಮೀಪದ ತೆಂಗಿನ ತೋಟಗಳಲ್ಲಿ ಮಗ ರುದ್ರೇಶ ಒಂದಷ್ಟು ದಿನ ಕೆಲಸ ಮಾಡಿಕೊಂಡಿದ್ದ. ನಿರಂತರ ಕೂಲಿ ಅರಸಿ ನವೆಂಬರ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಾಫಿತೋಟಕ್ಕೆ ಪತ್ನಿಯೊಂದಿಗೆ ತೆರಳಿದ್ದಾರೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳು ಈ ಭಾಗದಲ್ಲಿ ಕಾಫಿದೇಶವೆಂದು
ಜನಜನಿತ.
ಸೂರಮ್ಮನಹಳ್ಳಿಯ ಪರಿಶಿಷ್ಟ ಜಾತಿ ಕಾಲೊನಿಯ ಬಹುತೇಕ ಕುಟುಂಬಗಳಿಗೆ ತುಂಡು ಭೂಮಿ ಇದೆ. ಆದರೂ, ಕೆಲಸ ಹುಡುಕಿಕೊಂಡು ಕಾಲೊನಿ ಜನರು ಗುಳೆ ಹೋಗಿದ್ದಾರೆ. ಬಿ.ಜಿ.ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸಹೋದರ ಕೂಡ ಕೂಲಿ ಅರಸಿ ‘ಕಾಫಿದೇಶ’ ಸೇರಿದ್ದಾರೆ. ಶಿಕ್ಷಕರು, ಗ್ರಾಮದ ವಿದ್ಯಾವಂತ ಯುವಕರ ಮನವೊಲಿಕೆಯ ಪರಿಣಾಮವಾಗಿ ಶಾಲೆಗೆ ತೆರಳುವ ಮಕ್ಕಳು ಗ್ರಾಮದಲ್ಲಿ ಉಳಿಯುವಂತಾಗಿದೆ. ಈ ಮಕ್ಕಳ ಆರೈಕೆಯ ಹೊಣೆ ವೃದ್ಧರ ಹೆಗಲೇರಿದೆ.
ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಯಲ್ಲಿ ಗುಳೆ ಸಾಮಾನ್ಯ. ಕೂಲಿ ಕೆಲಸ ಅರಸಿ ಬೆಂಗಳೂರು, ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ವಲಸೆ ಹೋಗುತ್ತಾರೆ. ಮುಂಗಾರು ಹಾಗೂ ಹಿಂಗಾರು ಹಂಗಾಮು ಕೃಷಿ ಕಾರ್ಯ ಮುಗಿಸಿಕೊಂಡು ಜನವರಿ ವೇಳೆಗೆ ಗುಳೆ ಹೋಗುವ ವಾಡಿಕೆ ಹಲವೆಡೆ ಇದೆ. ಈ ವರ್ಷ ಮಳೆ ಕೈಕೊಟ್ಟು ಬರ ಪರಿಸ್ಥಿತಿ ಎದುರಾಗಿದ್ದರಿಂದ ಅಕ್ಟೋಬರ್ ತಿಂಗಳಿಂದಲೇ ಗುಳೆ ಶುರುವಾಗಿದೆ. ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕಿನ ಗ್ರಾಮಗಳು ಬಹುತೇಕ ಖಾಲಿಯಾಗಿವೆ.
‘ಕೂಲಿ ಕೆಲಸಕ್ಕೆ ಗುತ್ತಿಗೆದಾರ ಮುಂಗಡವಾಗಿಯೇ ಹಣ ನೀಡಿದ್ದ. ಇದನ್ನು ಬಡ್ಡಿ ಸಮೇತ ತೀರಿಸಲು ಕೂಲಿಗೆ ಹೋಗಬೇಕು. ಮಳೆಗಾಲದಲ್ಲಿ ಸ್ಥಳೀಯವಾಗಿ ಕೂಲಿ ಕೆಲಸ ಸಿಗಲಿಲ್ಲ. ಕಬ್ಬು ಕಡಿಯಲು ಮಂಡ್ಯ, ಮೈಸೂರು ಭಾಗಕ್ಕೆ ತೆರಳಿದವರು ಉಗಾದಿ ಹಬ್ಬಕ್ಕೆ ವಾಪಸಾಯ್ತಾರೆ. ಮೊನ್ಮೊನ್ನೆ ಸತ್ತ ಸಂಬಂಧಿ ಶಾರದಾಬಾಯಿ ಅಂತ್ಯಕ್ರಿಯೆಗೆ ಬರಲು ಅನೇಕರಿಗೆ ಸಾಧ್ಯವಾಗಲಿಲ್ಲ’ ಎಂದು ತುಪ್ಪದಕ್ಕನಹಳ್ಳಿ ತಾಂಡಾದ ಕಮಲಾಬಾಯಿ ಕಣ್ಣಾಲೆಗಳನ್ನು ಒರೆಸಿಕೊಂಡರು.
ಮೊಳಕಾಲ್ಮುರು ತಾಲ್ಲೂಕಿನ ಮಾರಮ್ಮನಹಳ್ಳಿ, ಲಂಬಾಣಿಹಟ್ಟಿ, ತುಮಕೂರ್ಲಹಳ್ಳಿ, ರಾಯಾಪುರ ಮ್ಯಾಸರಹಟ್ಟಿ, ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿ, ದೇವಸಮುದ್ರ, ಕಣಕುಪ್ಪೆ, ಕೋನಸಾಗರ, ನೇರಲಹಳ್ಳಿ ಗ್ರಾಮಗಳಲ್ಲಿ ಸಾಕಷ್ಟು ಜನರು ಊರು ತೊರೆದಿದ್ದಾರೆ. ಕಾಟನಾಯಕನಹಳ್ಳಿ, ಹುಚ್ಚಂಗಿದುರ್ಗ, ರಾಯಪುರದಿಂದಲೂ ಜನ ಗುಳೆ ಹೋಗಿದ್ದಾರೆ. ಪಕ್ಕದ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.
ಮಳೆಯಾಶ್ರಿತ ಪ್ರದೇಶದಲ್ಲಿ ಗುಳೆ ಸಾಮಾನ್ಯ. ಮುಂಗಾರು ಹಂಗಾಮಿನ ಬೆಳೆಯನ್ನೇ ಬಹುತೇಕ ರೈತರು ಅವಲಂಬಿತರಾಗಿದ್ದಾರೆ. ಶೇಂಗಾ, ಮೆಕ್ಕೆಜೋಳ, ಜೋಳ, ರಾಗಿ, ಹುರುಳಿಯಂತಹ ಬೆಳೆಗಳು ಕೂಡ ಪ್ರಸಕ್ತ ವರ್ಷ ರೈತರ ಕೈಹಿಡಿದಿಲ್ಲ. ಕೂಲಿ ಕಾರ್ಮಿಕರೊಂದಿಗೆ ಸಣ್ಣ ಹಿಡುವಳಿ ಹೊಂದಿರುವ ರೈತರು ಗುಳೆ ಹೋಗಿರುವುದು ಬರದ ತೀವ್ರತೆಯನ್ನು ಬಿಂಬಿಸುವಂತಿದೆ. ಗುಳೆ ಹೋದವರಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕುಟುಂಬಗಳ ಸಂಖ್ಯೆಯೇ ಹೆಚ್ಚು.
ಕಲ್ಯಾಣ ಕರ್ನಾಟಕದಲ್ಲಿ ಗುಳೆ ಜನಜೀವನದ ಭಾಗವಾಗಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಸಾವಿರಾರು ಜನರು ಜೀವನ ಕಟ್ಟಿಕೊಳ್ಳಲು ಮುಂಬೈ, ಪುಣೆ, ಹೈದರಾಬಾದ್, ಬೆಂಗಳೂರಿಗೆ ಹೋಗುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ, ಕಮಲಾಪುರ, ಚಿಂಚೋಳಿ, ಕಾಳಗಿ ತಾಲ್ಲೂಕುಗಳಲ್ಲಿ ಗುಳೆ ಈಗಾಗಲೇ ಆರಂಭವಾಗಿದೆ. ಚಿಂಚೋಳಿ ತಾಲ್ಲೂಕು ಒಂದರಿಂದಲೇ 15,000ಕ್ಕೂ ಹೆಚ್ಚು ಜನ ಗುಳೆ ಹೋಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಹಾವೇರಿ ಜಿಲ್ಲೆಯಲ್ಲಿ ದೀಪಾವಳಿ ಬಳಿಕ ಕುಟುಂಬ ಸಮೇತ ಊರು ತೊರೆದವರು ಮಳೆ ಬಿದ್ದ ಬಳಿಕವೇ ಮರಳುವುದು. ಗೋವಾ, ಬೆಂಗಳೂರು ಹಾಗೂ ಕಾಫಿಸೀಮೆ ಇಲ್ಲಿನ ಜನರನ್ನು ಪೊರೆಯುತ್ತಿವೆ. ಚಾಮರಾಜನಗರ ಜಿಲ್ಲೆಯ ಕೂಲಿ ಕಾರ್ಮಿಕರ ಕುಟುಂಬಗಳು ಕೊಡಗು ಹಾಗೂ ನೆರೆಯ ಕೇರಳಕ್ಕೆ ಪ್ರತಿ ವರ್ಷ, ಐದಾರು ತಿಂಗಳು ವಲಸೆ ಹೋಗುವುದು ಸಾಮಾನ್ಯ. ಕಾಫಿ ಕೊಯ್ಲಿನ ಸಂದರ್ಭದಲ್ಲಿ ಹನೂರು ಮತ್ತು ಗುಂಡ್ಲುಪೇಟೆ ತಾಲ್ಲೂಕಿನಿಂದ ವಲಸೆ ಹೆಚ್ಚಾಗುತ್ತದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ, ಇಳಕಲ್, ಬಾದಾಮಿ ತಾಲ್ಲೂಕಿನ ಜನರು ದುಡಿಮೆಗಾಗಿ ಮಂಗಳೂರು, ಉಡುಪಿ ಹಾಗೂ ಗೋವಾಗೆ ದುಡಿಯಲು ಹೋಗುತ್ತಾರೆ. ಜಿಲ್ಲೆಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸಿದ ಬಸ್‌ಗಳು ನಿತ್ಯವೂ ಭರ್ತಿಯಾಗುತ್ತಿವೆ. ಬಸ್ ಮೇಲೆ ಬಿಗಿಯಾಗಿ ಕಟ್ಟಿದ ಸಾಮಗ್ರಿ ಗುಳೆಯ ಸಂಕೇತವಾಗಿ ಕಾಣುತ್ತಿದೆ.
ಹೀಗೆ ಕೂಲಿ ಅರಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಬರುವವರ ಪೈಕಿ ಬಹುತೇಕರು ಬಾಗಲಕೋಟೆ, ವಿಜಯಪುರ, ಕೊಪ್ಪಳ, ಹಾವೇರಿ ಮತ್ತು ರಾಯಚೂರು ಜಿಲ್ಲೆಯವರು. ನೆರೆಯ ಕೇರಳದ ಕಾಸರಗೋಡು ಜಿಲ್ಲೆವರೆಗೂ ಗುಳೆ ವಿಸ್ತರಿಸಿದೆ. ಮಲ್ಪೆ, ಮಂಗಳೂರು ಬಂದರಿನಲ್ಲಿ ನೂರಾರು ಮಂದಿ ದುಡಿಯುತ್ತಿದ್ದಾರೆ.
ಮಂಗಳೂರು, ಉಡುಪಿ ಮತ್ತು ಮಣಿಪಾಲ ನಗರದಲ್ಲಿ ಮಹಿಳೆಯರು ಮನೆಕೆಲಸದಲ್ಲೂ, ಪುರುಷರು ನಿರ್ಮಾಣ ಕಾಮಗಾರಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಸಣ್ಣ ಶೆಡ್‌ಗಳು, ಹೆಂಚಿನ ಮನೆಗಳು ಇವರ ನೆಲೆ. ಮೂಲಸೌಲಭ್ಯಗಳಿಲ್ಲದ ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರೂ ಇದ್ದಾರೆ.
ಗುಳೆ ತಡೆಯದ ಮನರೇಗಾ:
ಗುಳೆ ತಡೆಯುವ ಉದ್ದೇಶದಿಂದ ಅನುಷ್ಠಾನಗೊಂಡಿರುವ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಕೂಲಿ ಕೆಲಸ ನೀಡುವಲ್ಲಿ ಸಂಪೂರ್ಣ ಸಫಲವಾಗಿಲ್ಲ. ಕೆಲಸದ ಅನಿಶ್ಚಿತತೆ, ಕಡಿಮೆ ಕೂಲಿ, ಸಕಾಲಕ್ಕೆ ಬಾರದ ಹಣ, ಆಧಾರ್ ಲಿಂಕ್ ಮಾಡುವಲ್ಲಿನ ತೊಂದರೆ, ರಾಜಕೀಯ ಮೇಲಾಟ, ಯಂತ್ರಗಳ ಬಳಕೆ... ಹೀಗೆ ಹಲವು ಕಾರಣಗಳಿಂದಾಗಿ ಜನರು ಮನರೇಗಾ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಸರ್ಕಾರಿ ದಾಖಲೆಗಳಿಗೂ ಬದುಕಿನ ವಾಸ್ತವಕ್ಕೂ ವ್ಯತ್ಯಾಸ ಇರುವುದು ಗ್ರಾಮೀಣ ಭಾಗದಲ್ಲಿ ಕಣ್ಣಾಡಿಸಿದರೆ ದಿಟವಾಗುತ್ತದೆ.
‘ಅಳಿಯ 30 ದಿನ ಮನರೇಗಾ ಕೆಲಸಕ್ಕೆ ಹೋಗಿದ್ದ. ಖಾತ್ರಿ ಯೋಜನೆಯ ಕೆಲಸ ಮುಗಿದು ಎರಡೂವರೆ ತಿಂಗಳು ಕಳೆದಿದೆ. ಈವರೆಗೆ ಕೂಲಿ ಬಂದಿಲ್ಲ. ಕೂಲಿ ನೀಡುವಂತೆ ಗ್ರಾಮ ಪಂಚಾಯಿತಿಗೆ ಅಲೆದು ಬೇಸರಗೊಂಡು ಪತ್ನಿಯೊಂದಿಗೆ ಕಾಫಿದೇಶಕ್ಕೆ ಗುಳೆ ಹೋಗಿದ್ದಾನೆ. ನಾನು ಮೊಮ್ಮಕ್ಕಳ ಆರೈಕೆ ಮಾಡಿಕೊಂಡು ಮನೆಯಲ್ಲಿದ್ದೇನೆ’ ಎನ್ನುವಾಗ ಮ್ಯಾಸರಹಟ್ಟಿಯ ಬೋರಮ್ಮ ದುಃಖಿತರಾದರು. ಇಳಿ ವಯಸ್ಸಿನಲ್ಲಿ ಮನೆ ನೋಡಿಕೊಳ್ಳುವ ಜವಾಬ್ದಾರಿಯ ಭಾರಕ್ಕೆ ಅವರ ದೇಹ ಸ್ಪಂದಿಸುತ್ತಿಲ್ಲ ಎಂಬುದನ್ನು ಅವರು ಕುಳಿತ ಸ್ಥಿತಿಯೇ ಹೇಳುತ್ತಿತ್ತು.
ಮೊಳಕಾಲ್ಮುರು ತಾಲ್ಲೂಕಿನ ರಾಯಪುರ ಮ್ಯಾಸರಹಟ್ಟಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ಬಳ್ಳಾರಿ– ಚಿಕ್ಕಮಗಳೂರು ನಡುವೆ ಸಂಚರಿಸುವ ಬಸ್‌ನಲ್ಲಿ ಇಲ್ಲಿಯ ಜನ ಗುಳೆ ಹೋಗುತ್ತಾರೆ. ಜನರ ಸಂದೇಶ, ಸಾಮಗ್ರಿಗಳು ಇದೇ ಬಸ್ ಮೂಲಕ ವಿನಿಮಯವಾಗುತ್ತವೆ. ಜನರ ಒತ್ತಾಯದ ಮೇರೆಗೆ ಕೆಲ ದಿನ ‘ಮನರೇಗಾ’ ಕೆಲಸ ನೀಡಿದ ಗ್ರಾಮ ಪಂಚಾಯಿತಿಗಳು, ಮಾಡಿದ ಕೆಲಸಕ್ಕೆ ಕೂಲಿ ನೀಡುವುದನ್ನು ಮರೆತಿದೆ. ರಾಜ್ಯದ ಹಲವು ಗ್ರಾಮಗಳಲ್ಲಿ ಇದಕ್ಕಿಂತ ಭಿನ್ನ ಸ್ಥಿತಿ ಇಲ್ಲ. ಮನರೇಗಾ ಯೋಜನೆಯಡಿ ನಿತ್ಯ ₹ 316 ಕೂಲಿ ನಿಗದಿಪಡಿಸಲಾಗಿದೆ. ಕಾಫಿ ಎಸ್ಟೇಟ್, ಅಡಿಕೆ ತೋಟ ಹಾಗೂ ನಗರ ಪ್ರದೇಶದ ಕಟ್ಟಡ ಕಾರ್ಮಿಕರ ಕೂಲಿ ಇದಕ್ಕಿಂತ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದ ರೈತರು, ಕೂಲಿ ಕಾರ್ಮಿಕರಿಗೆ ಇದು ಆಕರ್ಷಕವಾಗಿ ಕಾಣುತ್ತಿದೆ. ವಾಸ್ತವ್ಯಕ್ಕೆ ಮನೆ, ಊಟ–ತಿಂಡಿ ನೀಡುವ ಕಾಫಿ ಎಸ್ಟೇಟ್ ಮಾಲೀಕರು, ನಿತ್ಯ ₹ 400ರಿಂದ ₹ 500 ಕೂಲಿ ನಿಗದಿಪಡಿಸಿದ್ದಾರೆ.
2022ರ ಏಪ್ರಿಲ್‌ವರೆಗೆ ಮನರೇಗಾ ಕೂಲಿ ₹ 289 ಇತ್ತು. ಆ ಬಳಿಕ ಇದನ್ನು ₹ 309ಕ್ಕೆ ಏರಿಕೆ ಮಾಡಲಾಯಿತು. 2023ರ ಮಾರ್ಚ್‌ನಲ್ಲಿ ಕೂಲಿಯನ್ನು ₹ 316ಕ್ಕೆ ಹೆಚ್ಚಿಸಲಾಗಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಕೂಲಿ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ
ಮುಂದಿಡಲಾಗುತ್ತಿದೆ. ಬರ ಅಧ್ಯಯನಕ್ಕಾಗಿ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ತಂಡದ ಎದುರು ಮನರೇಗಾ ಕೂಲಿ ಏರಿಕೆಯ ಬಗ್ಗೆ ಕಾರ್ಮಿಕರು ಗಮನ ಸೆಳೆದಿದ್ದರು.
ಕಲ್ಯಾಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮನರೇಗಾ ಯೋಜನೆಯಡಿ ಗರಿಷ್ಠ ಕೆಲಸ ನೀಡಲಾಗಿದೆ. ಜಾಬ್
ಕಾರ್ಡ್‌ವೊಂದಕ್ಕೆ ನಿಗದಿಯಾದ 100 ಮಾನವ ದಿನ ಕೆಲವೆಡೆ ಮುಗಿದು ಹೋಗಿವೆ. ಗರಿಷ್ಠ ಮಿತಿ ಪೂರೈಸಿದವರು ಹೆಚ್ಚುವರಿಯಾಗಿ ಇನ್ನೂ 50 ದಿನ ಕೆಲಸ ಸಿಗಬಹುದು ಎಂಬ ಆಸೆಗಣ್ಣಿನಿಂದ ಎದುರು ನೋಡಿ ಬೇಸತ್ತಿದ್ದಾರೆ.
‘ಉದ್ಯೋಗ ಖಾತ್ರಿಯಲ್ಲಿ ಕೇವಲ 100 ದಿನ ಕೆಲಸ ನೀಡಲಾಗುತ್ತಿದೆ. ಇದನ್ನು 200 ದಿನಗಳಿಗೆ ಹೆಚ್ಚಿಸಿದರೆ ಅನುಕೂಲವಾಗುತ್ತದೆ. ಸಕಾಲದಲ್ಲಿ ಕೂಲಿ ಪಾವತಿಯಾಗದ ಹಾಗೂ ಕಡಿಮೆ ವೇತನದ ಕಾರಣಕ್ಕೆ ಕಾರ್ಮಿಕರು ಅನ್ಯ ಕೆಲಸಗಳನ್ನು ಅರಸುತ್ತಾ ದೂರದ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ’ ಎನ್ನುತ್ತಾರೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ವನಸಿರಿ ಸಂಸ್ಥೆಯ ನಿರ್ದೇಶಕ ಎಸ್.ಡಿ. ಬಳಿಗಾರ.
ಮಕ್ಕಳ ಶಿಕ್ಷಣ ಮೊಟಕು:
ಗುಳೆ ಹೊರಟ ಪಾಲಕರು ಮಕ್ಕಳನ್ನು ಜೊತೆಗೆ ಕರೆದೊಯ್ದಿದ್ದಾರೆ. ಕಾಫಿ, ಅಡಿಕೆ ತೋಟ ಅಥವಾ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮಕ್ಕಳು ನೆರವಾದರೆ ಹೆಚ್ಚುವರಿ ಕೂಲಿ ಸಿಗುವ ಆಸೆ ಪಾಲಕರದು. ಗುಳೆ ಹೊರಟವರು ಮಕ್ಕಳನ್ನು ಕರೆದೊಯ್ಯದಂತೆ ಶಿಕ್ಷಣ ಇಲಾಖೆ ಮೂಡಿಸಿದ ಅರಿವು ಅಷ್ಟಾಗಿ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ಯಾದಗಿರಿ ಹಾಗೂ ಬೀದರ್ ಜಿಲ್ಲೆಯ ತಾಂಡಾಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತವೇ ಗುಳೆ ಹೋಗಿದ್ದಾರೆ. ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆಯಾಗಿದೆ.
‘ರಾಜ್ಯದ ಬೇರೆ ಜಿಲ್ಲೆಯಲ್ಲಿ ಪಾಲಕರೊಂದಿಗೆ ಮಕ್ಕಳು ಗುಳೆ ಹೋಗಿದ್ದರೆ ಸಮೀಪದ ಶಾಲೆಗಳ ಮುಖ್ಯ ಶಿಕ್ಷಕರೊಂದಿಗೆ ಮಾತನಾಡಿ ತರಗತಿಗಳಿಗೆ ಕುಳಿತುಕೊಳ್ಳಲು ಅವಕಾಶ ಕೊಡಿಸಬಹುದು. ಆದರೆ, ಬೇರೆ ರಾಜ್ಯದಲ್ಲಿ ಹೀಗೆ ಸಂಪರ್ಕ ಸಾಧಿಸುವುದು ಕಷ್ಟ’ ಎನ್ನುತ್ತಾರೆ ಕಲಬುರಗಿ ಜಿಲ್ಲೆಯ ಗುಂಜ ಬಬಲಾದ ಶಾಲೆಯ ಮುಖ್ಯ ಶಿಕ್ಷಕ ನಿಂಗಪ್ಪ ಮಂಗೊಂಡಿ.
ಉತ್ತರ ಕರ್ನಾಟಕದ ಜಿಲ್ಲೆಗಳಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಬರುವ ಕಾರ್ಮಿಕರ ಪೈಕಿ ಹೆಚ್ಚಿನವರು ಸರ್ಕಾರಿ ಶಾಲೆ ಮತ್ತು ಆಶ್ರಯ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಿದ್ದಾರೆ. ಕೆಲವರು ಊರಲ್ಲಿ ಅಜ್ಜ–ಅಜ್ಜಿಯ ಜೊತೆ ಮಕ್ಕಳನ್ನು ಬಿಟ್ಟು ಬಂದಿದ್ದಾರೆ.
‘ನಿರ್ದಿಷ್ಟ ಜಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ಸೌಲಭ್ಯ ಕಲ್ಪಿಸಿಕೊಡಬೇಕಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಥ ಪರಿಸ್ಥಿತಿ ಇಲ್ಲ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಜಯರಾಮ ಕೆ.ಇ.
ಆದರೂ, ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಹೊರ ಜಿಲ್ಲೆಗಳ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿರುವುದು ಬೆಳಕಿಗೆ ಬಂದಿದೆ. ಕಾರ್ಮಿಕ ಇಲಾಖೆ ನಡೆಸುವ ದಾಳಿಯಲ್ಲಿ ಇಂತಹ ಮಕ್ಕಳು ಹೆಚ್ಚಾಗಿ ಪತ್ತೆಯಾಗುತ್ತಿದ್ದಾರೆ.
ಮುಂಗಾರು, ಹಿಂಗಾರು ಕೈಕೊಟ್ಟು ರೈತರು, ಕೂಲಿಕಾರರು ಕಂಗಾಲಾಗಿ ಸಂಸಾರ ಸಮೇತವಾಗಿ ಊರು ತೊರೆಯುವಾಗ ಕೈಹಿಡಿಯಬೇಕಿದ್ದ ಸ್ಥಳೀಯವಾಗಿ ಹೆಚ್ಚು ದಿನಗಳ ಕಾಲ ಉದ್ಯೋಗ ನೀಡುವ ಯೋಜನೆ ಮನರೇಗ ಕೇಂದ್ರದ ಅಸಹಕಾರ ನೀಡುತ್ತಿದೆ. ರಾಜ್ಯದ ಮನವಿಗೂ ಉತ್ತರವಿಲ್ಲ ಎಂದು ರಾಜ್ಯದ ಸಚಿವರೇ ಆಪಾದಿಸುತ್ತಾರೆ. ಇಂತಹ ಜ್ವಲಂತ ಸಮಸ್ಯೆಗೆ ಉತ್ತರದ ಬದಲು ಪರಿಹಾರ ಬೇಕಾಗಿದೆ.
ಮನರೇಗಾ: ಕೇಂದ್ರ, ರಾಜ್ಯದ ಜಟಾಪಟಿ
ಬೆಂಗಳೂರು: ಮನರೇಗಾ ಯೋಜನೆಯಡಿ ಕುಟುಂಬವೊಂದಕ್ಕೆ ನೀಡುತ್ತಿರುವ ಕೆಲಸದ ದಿನಗಳನ್ನು ವಾರ್ಷಿಕ 100ರಿಂದ 150ಕ್ಕೆ ಹೆಚ್ಚಿಸಬೇಕೆಂಬ ರಾಜ್ಯ ಸರ್ಕಾರದ ಬೇಡಿಕೆಗೆ ಕೇಂದ್ರ ಸರ್ಕಾರ ಮೂರು ತಿಂಗಳಾದರೂ ಸ್ಪಂದಿಸಿಲ್ಲ.
ರಾಜ್ಯದಲ್ಲಿ ತೀವ್ರ ಬರಗಾಲ ಇರುವ ಕಾರಣದಿಂದ ಪ್ರತಿ ಕುಟುಂಬಕ್ಕೆ 50 ದಿನಗಳ ಹೆಚ್ಚುವರಿ ಕೆಲಸದ ಅವಕಾಶ ಒದಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರಕ್ಕೆ ಮೂರು ಬಾರಿ ಪತ್ರ ಬರೆದಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಪ್ರಿಯಾಂಕ್ ಅವರು 2023ರ ಸೆಪ್ಟೆಂಬರ್ 20ರಿಂದ ಮೂರು ಬಾರಿ ಪತ್ರ ಬರೆದಿದ್ದಾರೆ. ರಾಜ್ಯಕ್ಕೆ ನಿಗದಿಪಡಿಸಿರುವ ಮಾನವ ದಿನಗಳ ಸಂಖ್ಯೆಯನ್ನು 13 ಕೋಟಿಯಿಂದ 18 ಕೋಟಿಗೆ ಹೆಚ್ಚಿಸುವಂತೆ ಹಾಗೂ ಕೂಲಿಯನ್ನೂ ಏರಿಕೆ ಮಾಡುವಂತೆ ಬೇಡಿಕೆ ಇಟ್ಟಿದ್ದರು.
‘ನಾನು ಮೂರು ಬಾರಿ ಪತ್ರ ಬರೆದಿದ್ದೇನೆ. ಖುದ್ದಾಗಿ ಸಚಿವರನ್ನು ಭೇಟಿ ಮಾಡಲು ಪ್ರಯತ್ನಿಸಿದರೂ ಸಮಯಾವಕಾಶ ನೀಡಲಿಲ್ಲ. ನಮ್ಮ ಅಧಿಕಾರಿಗಳೂ ಪತ್ರ ಬರೆದಿದ್ದಾರೆ. ಮೊದಲ ಪತ್ರ ಬಂದಿರುವುದನ್ನು ಖಚಿತಪಡಿಸಿ ಕೇಂದ್ರ ಸಚಿವರು ನನಗೆ ಪತ್ರ ಬರೆದಿದ್ದರು. ಆದರೆ, ನಮ್ಮ ಬೇಡಿಕೆಗೆ ಯಾವ ಸ್ಪಂದನೆಯೂ ಸಿಕ್ಕಿಲ್ಲ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಸ್ತಾವ ಬಂದಿಲ್ಲ ಎಂದ ಕೇಂದ್ರ:
ಕೆಲಸದ ದಿನಗಳು, ಒಟ್ಟು ಮಾನವ ದಿನಗಳ ಸಂಖ್ಯೆ ಹಾಗೂ ಕೂಲಿ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದ್ದರೂ, ಅಂತಹ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು ಲೋಕಸಭೆಗೆ ತಿಳಿಸಿದ್ದಾರೆ.
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರ ಪ್ರಶ್ನೆಗೆ ಡಿಸೆಂಬರ್ 12ರಂದು ಉತ್ತರ ನೀಡಿರುವ ಗಿರಿರಾಜ್ ಸಿಂಗ್, ‘ಕೆಲಸದ ದಿನಗಳನ್ನು ಹೆಚ್ಚಳ ಮಾಡುವಂತೆ ಕರ್ನಾಟಕ ಸರ್ಕಾರದಿಂದ ಯಾವುದೇ ಪ್ರಸ್ತಾವ ಬಂದಿಲ್ಲ’ ಎಂದು ಉತ್ತರ ನೀಡಿದ್ದರು.
ಕೆಲಸ ಒದಗಿಸುವುದು ಅಸಾಧ್ಯ:
‘ಮನರೇಗಾ ಯೋಜನೆಯು ಕೇಂದ್ರ ಸರ್ಕಾರದ ಕಾಯ್ದೆಯಡಿ ಅನುಷ್ಠಾನದಲ್ಲಿದೆ. ರಾಜ್ಯ ಸರ್ಕಾರ ಬದಲಾವಣೆ ಮಾಡುವುದು ಸಾಧ್ಯವಿಲ್ಲ. ಕುಟುಂಬವೊಂದಕ್ಕೆ 100ಕ್ಕಿಂತ ಹೆಚ್ಚು ಮಾನವ ದಿನಗಳ ಕೆಲಸವನ್ನು ರಾಜ್ಯ ಸರ್ಕಾರವೇ ಒದಗಿಸುವುದು ಅಸಾಧ್ಯ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
‘ಕುಟುಂಬಕ್ಕೆ 50 ದಿನಗಳ ಹೆಚ್ಚುವರಿ ಕೆಲಸ ಒದಗಿಸಲು ದೊಡ್ಡ ಪ್ರಮಾಣದ ವೆಚ್ಚವಾಗುತ್ತದೆ. ಅಷ್ಟೊಂದು ಹಣವನ್ನು ರಾಜ್ಯ ಸರ್ಕಾರದಿಂದ ಭರಿಸುವುದು ಸಾಧ್ಯವಿಲ್ಲ’ ಎಂದರು.
****
ತುಮಕೂರು ಜಿಲ್ಲೆಯ ಹೆಬ್ಬೂರಿನಲ್ಲಿ ಮೂರು ತಿಂಗಳು ಕೆಲಸ ಮಾಡಿದೆ. ಮನೆಯಲ್ಲಿದ್ದ ಮಕ್ಕಳನ್ನು ನೋಡಿಕೊಂಡು ಹೋಗಲು ಬಂದಿದ್ದೆ. ಕೆಲಸ ಅರಸಿ ಮತ್ತೆ ಬೆಂಗಳೂರಿಗೆ ಹೊರಡಬೇಕಿದೆ.
-ಭೀಮಪ್ಪ, ಕೂಲಿ ಕಾರ್ಮಿಕ, ಸೂರಮ್ಮನಹಳ್ಳಿ, ಚಿತ್ರದುರ್ಗ ಜಿಲ್ಲೆ
****
ಇಬ್ಬರು ಪುತ್ರರು, ಸೊಸೆಯಂದಿರು ಮೈಸೂರು ಭಾಗಕ್ಕೆ ಕಬ್ಬು ಕಡಿಯಲು ಹೋಗಿದ್ದಾರೆ. ಯುಗಾದಿಗೆ ಮರಳಿ ಬರುತ್ತಾರೆ. ಹೀಗೆ ದುಡಿದು ತಂದ ಹಣದಲ್ಲಿಯೇ ವರ್ಷವಿಡೀ ಜೀವನ.
-ಕಮಲಾಬಾಯಿ, ತುಪ್ಪದಕ್ಕನಹಳ್ಳಿ ತಾಂಡಾ, ಚಿತ್ರದುರ್ಗ ಜಿಲ್ಲೆ
****
ಕೃಷಿ ಕೆಲಸಕ್ಕೆ ₹ 200, ಬಂಡೆ ಒಡೆಯಲು ₹ 300 ಕೂಲಿ ಇದೆ. ನರೇಗಾ ಕೆಲಸಕ್ಕೆ ಸರಿಯಾಗಿ ಕೂಲಿ ನೀಡುತ್ತಿಲ್ಲ. ‘ಕಾಫಿದೇಶ’ದ ಕೂಲಿ ಕೊಂಚ ಕೈಹಿಡಿಯುವುದರಿಂದ ಗುಳೆ ಹೋಗುತ್ತೇವೆ.
-ಆರ್.ಪಾಲಯ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮ್ಯಾಸರಹಟ್ಟಿ, ಚಿತ್ರದುರ್ಗ ಜಿಲ್ಲೆ
****
(ಪೂರಕ ಮಾಹಿತಿ: ವಿ.ಎಸ್. ಸುಬ್ರಹ್ಮಣ್ಯ, ಬಸವರಾಜ ಹವಾಲ್ದಾರ, ವಿಕ್ರಂ ಕಾಂತಿಕೆರೆ, ಮನೋಜ್ ಕುಮಾರ್ ಗುದ್ದಿ, ವಿ.ಸೂರ್ಯನಾರಾಯಣ, ಸಿದ್ದು ಆರ್.ಜಿ.ಹಳ್ಳಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.