ADVERTISEMENT

ಒಳನೋಟ: ‘ಅಡವಿ‘ಗೆ ಸೋಲಿಗರೇ ಮಾಲೀಕರು

ಸೂರ್ಯನಾರಾಯಣ ವಿ.
Published 21 ಸೆಪ್ಟೆಂಬರ್ 2024, 22:49 IST
Last Updated 21 ಸೆಪ್ಟೆಂಬರ್ 2024, 22:49 IST
ಬಿಳಿಗಿರಿರಂಗನಬೆಟ್ಟದಲ್ಲಿ ಕಂಡು ಬರುವ ಸೋಲಿಗರ ಕಾಫಿ ತೋಟ
ಬಿಳಿಗಿರಿರಂಗನಬೆಟ್ಟದಲ್ಲಿ ಕಂಡು ಬರುವ ಸೋಲಿಗರ ಕಾಫಿ ತೋಟ   

ಬೆಂಗಳೂರು: ‘ರಾಸಾಯನಿಕ ಹಾಕದೆ ನಾವು ಕಾಫಿ, ಕರಿಮೆಣಸು ಬೆಳೆಯುತ್ತೇವೆ. ಮೊದಲೆಲ್ಲ ಮಧ್ಯವರ್ತಿ ಗಳು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದರು. ಇದರಿಂದ ನಮಗೆ ಹೆಚ್ಚು ಆದಾಯ ಬರುತ್ತಿರಲಿಲ್ಲ. ಈಗ ನಮ್ಮದೇ ಉತ್ಪಾದಕ ಕಂಪನಿಗಳು ಇರುವುದರಿಂದ ಕಾಫಿ, ಕರಿಮೆಣಸು ಸೇರಿದಂತೆ ಅರಣ್ಯ ಉಪ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತಿದೆ. ಸಂಸ್ಥೆಗೆ ಬರುವ ಲಾಭಾಂಶದ ಪಾಲು ಸದಸ್ಯರಿಗೂ ನೀಡಲಾಗುತ್ತಿದೆ. ಇದರಿಂದ ಸಮುದಾಯದ ಜನರು ಒಂದಷ್ಟು ಕಾಸು ನೋಡುವಂತಾಗಿದೆ’.

–ಇದು ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನಬೆಟ್ಟದ ಸೋಲಿಗ ಸಮುದಾಯದ ಮುಖಂಡ, ಕಾಫಿ ಬೆಳೆಗಾರ ಸಿ.ಮಾದೇಗೌಡರ ಮಾತು.

ಮಾದೇಗೌಡರು ಒಬ್ಬರೇ ಅಲ್ಲ, ಬಿಳಿಗಿರಿರಂಗನಬೆಟ್ಟದಲ್ಲಿ ಕಾಫಿ, ಕರಿ ಮೆಣಸು ಬೆಳೆಯುವ ಬಹುತೇಕ ಸೋಲಿಗರು ಕೂಡ ಇದೇ ಮಾತನ್ನು ಹೇಳುತ್ತಾರೆ.

ADVERTISEMENT

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ನೆರವಿನಿಂದ ಬಿಳಿಗಿರಿರಂಗನಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಎರಡು ರೈತ ಉತ್ಪಾದಕ ಕಂಪನಿಗಳು (ಬಿಳಿಗಿರಿ ರಂಗಸ್ವಾಮಿ ಸೋಲಿಗರ ಸಂಸ್ಕರಣಾ ಸಂಘ ಮತ್ತು ಬಿಳಿಗಿರಿ ಸೋಲಿಗರ ಉತ್ಪಾದಕ ಕಂಪನಿ) ಗಿರಿಜನರಿಗೆ ವರವಾಗಿ ಪರಿಣಮಿಸಿವೆ. ಎರಡೂ ಸಂಸ್ಥೆಗಳು ಯಶಸ್ಸಿನ ಪಥದಲ್ಲಿ ಮುನ್ನಡೆ ಯುತ್ತಿದ್ದು, ಇಲ್ಲಿನ ಪ್ರಯೋಗ ರಾಜ್ಯದ ಇತರ ಕಡೆಗಳಿಗೂ ಮಾದರಿ ಆಗುವಂತಿದೆ. ಗಿರಿಜನರೇ ಮುಂದಾಳತ್ವ ವಹಿಸಿ ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪನೆ ಮಾಡಿರುವುದು ರಾಜ್ಯದಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದಲ್ಲೇ ಮೊದಲ ಪ್ರಯತ್ನ ಎಂದೂ ಹೇಳಲಾಗುತ್ತಿದೆ.

ಬಿಳಿಗಿರಿ ಸೋಲಿಗರ ಉತ್ಪಾದಕ ಕಂಪನಿಯು ಕಾಫಿ ಬೆಳೆಗೆ ಹೆಚ್ಚು ಒತ್ತು ನೀಡಿದರೆ ಬಿಳಿಗಿರಿರಂಗಸ್ವಾಮಿ ಸೋಲಿಗರ ಸಂಘವು ಕಾಫಿ, ಕರಿಮೆಣಸು ಹಾಗೂ ಅರಣ್ಯ ಉತ್ಪನ್ನಗಳ ಸಂಗ್ರಹ ಮತ್ತು ಮೌಲ್ಯವರ್ಧನೆಗೆ ಆದ್ಯತೆ ನೀಡುತ್ತಿದೆ.

ಕಾಫಿ ಬೆಳೆಗೆ ರಾಜ್ಯದಲ್ಲಿ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳು ಹೆಸರುವಾಸಿ ಯಾಗಿವೆ. ಆದರೆ ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟದಲ್ಲಿ ಕಾಫಿ ಬೆಳೆಯೇ! ಪಶ್ಚಿಮ ಮತ್ತು ಪೂರ್ವ ಘಟ್ಟಗಳನ್ನು ಬೆಸೆಯುವ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಕಾಫಿ ಬೆಳೆಯುವುದಕ್ಕೆ ಸೂಕ್ತವಾಗಿದೆ. ಅರಣ್ಯ ವ್ಯಾಪ್ತಿಯ ಪುಣಜನೂರು–ಬೇಡಗುಳಿ ಪ್ರದೇಶದಲ್ಲಿ 1886ರಿಂದಲೇ ಕಾಫಿ ತೋಟಗಳಿವೆ. ಬ್ರಿಟಿಷ್‌ ಆಡಳಿತದ ಸಂದರ್ಭದಲ್ಲಿ ಬಂದಿದ್ದ ಸ್ಕಾಟ್ಲೆಂಡ್‌ನ ರಾಂಡಾಫ್‌ ಹೇಟನ್‌ ಮೋರಿಸ್‌ ಎಂಬಾತ ಈ ಪ್ರದೇಶದಲ್ಲಿ 2,000 ಎಕರೆ ಅರಣ್ಯ ಪ್ರದೇಶವನ್ನು ಗುತ್ತಿಗೆ ಪಡೆದು ಕಾಫಿ ತೋಟ ಮಾಡಿದ್ದ. ಈಗಲೂ ಅಲ್ಲಿ ಖಾಸಗಿ ಕಂಪನಿಗಳ ಮಾಲೀಕತ್ವದ ಕಾಫಿ ತೋಟಗಳಿವೆ. ಭೂ ಮಾಲೀಕತ್ವದ ವಿಚಾರದಲ್ಲಿ ಅರಣ್ಯ ಇಲಾಖೆ ಮತ್ತು ಕಂಪನಿಗಳ ನಡುವೆ ವ್ಯಾಜ್ಯವೂ ನಡೆಯುತ್ತಿದೆ.

ಇದೇ ಅರಣ್ಯ ಪ್ರದೇಶದ ಮೂಲ ನಿವಾಸಿಗಳಾದ ಸೋಲಿಗರು ಕೂಡ ಬಿಳಿಗಿರಿರಂಗನಬೆಟ್ಟ, ಬೇಡಗುಳಿ, ಪುಣಜನೂರು ವ್ಯಾಪ್ತಿಯಲ್ಲಿ ಮೂರ್ನಾಲ್ಕು ದಶಕಗಳಿಂದ ಕಾಫಿ ಬೆಳೆಯುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಅಂದಾಜು 750ರಿಂದ 800 ಎಕರೆ ಪ್ರದೇಶದಲ್ಲಿ 700ರಿಂದ 800ರಷ್ಟು ಬುಡಕಟ್ಟು ಕುಟುಂಬಗಳು ಕಾಫಿ ಬೆಳೆಯುತ್ತಿವೆ. ಬಿಳಿಗಿರಿರಂಗನಬೆಟ್ಟ ದಲ್ಲಿರುವ 16 ‍ಪೋಡುಗಳ 550ಕ್ಕೂ ಹೆಚ್ಚು ಕುಟುಂಬಗಳು 600 ಎಕರೆ ಪ್ರದೇಶದಲ್ಲಿ ಕಾಫಿಯನ್ನು ಬೆಳೆಯುತ್ತಿವೆ. ಅರ್ಧ ಎಕರೆಯಿಂದ ಹಿಡಿದು ಮೂರು ಎಕರೆಯಷ್ಟು ವಿಸ್ತೀರ್ಣದ ಕಾಫಿ ತೋಟಗಳನ್ನು ಸೋಲಿಗರು ಹೊಂದಿದ್ದಾರೆ. ಸೋಲಿಗರು ಬೆಳೆಯುವ ಕಾಫಿಯ ವೈಶಿಷ್ಟ್ಯ ಎಂದರೆ ಇದು ಇದು ರಾಸಾಯನಿಕ ಮುಕ್ತ.

ಇವರು ಕಾಫಿ ಗಿಡಗಳಿಗೆ ರಾಸಾಯನಿಕಗಳು, ರಸಗೊಬ್ಬರ ಹಾಕುವುದಿಲ್ಲ. ಹಟ್ಟಿಗೊಬ್ಬರ, ಹಸಿರೆಲೆಗಳನ್ನೇ ಗೊಬ್ಬರವನ್ನಾಗಿ ಬಳಸುತ್ತಾರೆ.

‘ರಾಸಾಯನಿಕ, ರಸಗೊಬ್ಬರಗಳನ್ನು ಬಳಸಿದರೆ ಇಳುವರಿ ಜಾಸ್ತಿ. ಎಕರೆಗೆ 500ರಿಂದ 800 ಕೆಜಿಯವರೆಗೂ ಇಳುವರಿ ಬರುತ್ತದೆ. ನಾವು ಸಾಂಪ್ರದಾಯಿಕ ವಿಧಾನದಲ್ಲಿ ಬೆಳೆಯುವುದರಿಂದ ಎಕರೆಗೆ 300ರಿಂದ 350 ಕೆಜಿಯಷ್ಟೇ ಫಸಲು ಕೈಸೇರುತ್ತದೆ. ನಾವು ಹಿಂದಿನಿಂದಲೂ ಇದೇ ವಿಧಾನದಲ್ಲಿ ಬೆಳೆಯುತ್ತಿದ್ದು, ಅದೇ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದೇವೆ’ ಎಂದು ಕಾಫಿ ಬೆಳೆಗಾರರೂ ಆಗಿರುವ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ದಿ ಸಂಘದ ಕಾರ್ಯದರ್ಶಿಯೂ ಆಗಿರುವ ಸಿ.ಮಾದೇಗೌಡ ತಿಳಿಸಿದರು.

ಕಾಫಿ ಬೆಳೆ ಆರಂಭಿಸುವುದಕ್ಕೂ ಮುನ್ನ, ಕಾಡಿನಿಂದ ಸಂಗ್ರಹಿಸಿದ ಜೇನು, ನೆಲ್ಲಿಕಾಯಿ ಸೇರಿದಂತೆ ಇತರೆ ಉತ್ಪನ್ನಗಳ ಮಾರಾಟದಿಂದ ಬರುವ ಹಣವೇ ಸೋಲಿಗರ ಪ್ರಮುಖ ಆದಾಯವಾಗಿತ್ತು.

‘ಕಾಫಿ ಬೆಳೆಯಲು ಶುರು ಮಾಡಿದ ನಂತರ ಸಂಪಾದನೆ ಕೊಂಚ ಜಾಸ್ತಿಯಾಯಿತಾದರೂ ಅವರ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿರಲಿಲ್ಲ. ಬೆಳೆಯುವ ವಿಧಾನ, ಸಂಸ್ಕರಣೆ, ಮಾರುಕಟ್ಟೆಯ ಬಗ್ಗೆ ಮಾಹಿತಿಯೂ ಇರಲಿಲ್ಲ. ಸಾವಯವ ವಿಧಾನದಲ್ಲಿ ಕಾಫಿ ಬೆಳೆಯುವುದರಿಂದ ಇಳುವರಿ ಕಡಿಮೆ. ಮಧ್ಯವರ್ತಿಗಳೇ ಖರೀದಿ ಮಾಡುತ್ತಿದ್ದರು. ಮಧ್ಯವರ್ತಿಗಳು ಬೆಲೆ ಹೆಚ್ಚು ಕೊಡುತ್ತಿರಲಿಲ್ಲ. ಹಾಗಾಗಿ, ಉತ್ತಮ ಸಂಪಾದನೆ ಆಗುತ್ತಿರಲಿಲ್ಲ’ ಎಂದು ಹೇಳುತ್ತಾರೆ ಸೋಲಿಗ ಮುಖಂಡರು.

‘ಅಡವಿ’ ಬ್ರ್ಯಾಂಡ್‌ನಡಿ ತರಹೇವಾರಿ ಉತ್ಪನ್ನಗಳು

ಕಾಫಿ ಬಿಟ್ಟು, ತಾವು ಸಂಗ್ರಹಿಸುತ್ತಿದ್ದ ಅರಣ್ಯ ಉಪ ಉತ್ಪನ್ನಗಳನ್ನು ಜಿಲ್ಲೆಯಲ್ಲಿರುವ ನಾಲ್ಕು (ಚಾಮರಾಜನಗರ) ಗಿರಿಜನರ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘಗಳಿಗೆ (ಲ್ಯಾಂಪ್ಸ್‌ ಸೊಸೈಟಿ) ಮಾರಾಟ ಮಾಡುತ್ತಿದ್ದರು. ಸಂಘದ ಆಡಳಿತ ಮಂಡಳಿಗಳು ಟೆಂಡರ್‌ ಕರೆದು ಉತ್ಪನ್ನಗಳನ್ನು ಬೇರೆ ಸಂಸ್ಥೆಗಳಿಗೆ ಮಾರಾಟ ಮಾಡುತ್ತವೆ. ಇದರಿಂದ ಜಿಲ್ಲೆಯ ಗಿರಿಜನರಿಗೆ ಕೂಲಿ ಬಿಟ್ಟು ಹೆಚ್ಚಿನ ಆರ್ಥಿಕ ಪ್ರಯೋಜನವಾಗುತ್ತಿರಲಿಲ್ಲ. ಇದನ್ನು ಮನಗಂಡ ಬಿಳಿಗಿರಿರಂಗನಬೆಟ್ಟದ ಸಮುದಾಯದ ಪ್ರಮುಖರು 2016ರಲ್ಲಿ ತಮ್ಮದೇ ಆದ ಉತ್ಪಾದಕ ಕಂಪನಿಯನ್ನು ಆರಂಭಿಸಿದರು. ಆ ರೀತಿ ಸ್ಥಾಪನೆಗೊಂಡ ಮೊದಲ ಸಂಸ್ಥೆಯೇ ಬಿಳಿಗಿರಿರಂಗಸ್ವಾಮಿ ಸೋಲಿಗರ ಸಂಸ್ಕರಣ ಸಂಘ. ಈ ಕಾರ್ಯಕ್ಕೆ ಸೋಲಿಗರಿಗೆ ಬೆಂಬಲವಾಗಿ ನಿಂತಿದ್ದು, ಏಟ್ರೀ (ಅಶೋಕ ಟ್ರಸ್ಟ್‌ ಫಾರ್‌ ರಿಸರ್ಚ್‌ ಇನ್‌ ಇಕಾಲಜಿ ಮತ್ತು ಎನ್ವಿರಾನ್‌ಮೆಂಟ್‌) ಸಂಸ್ಥೆ. 2018ರಲ್ಲಿ ಕಂಪನಿಯು ಅಧಿಕೃತವಾಗಿ ನೋಂದಣಿಯಾಯಿತು. ಆ ಬಳಿಕ ಅರಣ್ಯ ಉತ್ಪನ್ನಗಳ ಮೌಲ್ಯವರ್ಧನೆ ಆರಂಭಿಸಿತು.

2018ರಲ್ಲಿ ಸಮಾಜಕಲ್ಯಾಣ ಇಲಾಖೆ, ಕಾಫಿ ಮಂಡಳಿಯ ನೆರವಿನೊಂದಿಗೆ ಈ ಸಂಘವು ‘ಅಡವಿ’ ಬ್ರ್ಯಾಂಡ್‌ನಡಿ ಕಾಫಿ ಪುಡಿ ಸೇರಿದಂತೆ ವಿವಿಧ ಅರಣ್ಯದ ಉಪಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಲು ಆರಂಭಿಸಿತು. ಈಗ ಸಂಘವು ಜೇನುತುಪ್ಪ, ಕಾಫಿಪುಡಿ ಸೇರಿದಂತೆ 17 ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ.

ಕಾಫಿಗಿಂತಲೂ ಹೆಚ್ಚಾಗಿ ಜೇನುತುಪ್ಪ ಸಂಗ್ರಹ, ಅದರ ಮೌಲ್ಯವರ್ಧನೆ ಮಾರಾಟಕ್ಕೆ ಸಂಸ್ಥೆ ಹೆಚ್ಚು ಒತ್ತು ನೀಡುತ್ತಿದೆ. ಐದು ಬಗೆಯ ಜೇನುತುಪ್ಪಗಳು (ಹೆಜ್ಜೇನು, ತುಡುವೆ ಜೇನು, ಕಡ್ಡಿ ಜೇನು, ಸೆಸರೆ ಜೇನು ಮತ್ತು ನೇರಳೆ ಜೇನು (ಸೀಸನ್‌ನಲ್ಲಿ ಮಾತ್ರ) ಸಂಘದಲ್ಲಿ ಲಭ್ಯವಿದೆ. ಇದಲ್ಲದೇ, ಅರಿಸಿನ ಪುಡಿ, ಕಾಳು ಮೆಣಸು, ಸೀಗೆಕಾಯಿ ಪುಡಿ, ಅಂಟುವಾಳ ಪುಡಿ, ನೇರಳೆ ಹಣ್ಣಿನ ಷರಬತ್ತು, ನೇರಳೆ ಬೀಜ ಪುಡಿ (ಸೀಸನ್‌ ಸಮಯದಲ್ಲಿ ಮಾತ್ರ), ನೆಲ್ಲಿಕಾಯಿಯ ವಿವಿಧ ಉತ್ಪನ್ನಗಳು (ನೆಲ್ಲಿಕಾಯಿ ಉಪ್ಪಿನಕಾಯಿ, ನೆಲ್ಲಿಕಾಯಿ ಪುಡಿ, ನೆಲ್ಲಿಕಾಯಿ ಷರಬತ್ತು, ನೆಲ್ಲಿಕಾಯಿ ಉಪ್ಪು, ಸಿಹಿ ಅಡಿಕೆ), ಮಾವಿನಕಾಯಿ ಉಪ್ಪಿನಕಾಯಿ, ಜೇನು ಮೇಣದಿಂದ ಮೊಂಬತ್ತಿ, ಲಿಪ್‌ ಬಾಮ್‌ಗಳನ್ನು ತಯಾರಿಸಿ ನೇರವಾಗಿ ಗ್ರಾಹಕರ ಕೈಗಿಡುತ್ತಿದೆ.

ʼನಮ್ಮ ಸಂಘದಲ್ಲಿ 750 ಮಂದಿ ಸದಸ್ಯರಾಗಿದ್ದಾರೆ. ಬಿಳಿಗಿರಿರಂಗನಬೆಟ್ಟದ 13 ಪೋಡುಗಳು, ಹನೂರು, ಯಳಂದೂರು ತಾಲ್ಲೂಕಿನ ಸೋಲಿಗರು ಕೂಡ ಇದರ ಸದಸ್ಯರಾಗಿದ್ದಾರೆ. ನಾವು ಸದಸ್ಯರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸುತ್ತೇವೆ. ಕಡಿಮೆಯಾದರೆ ಲ್ಯಾಂಪ್ಸ್‌ ಸೊಸೈಟಿಯಿಂದಲೂ ಖರೀದಿ ಮಾಡುತ್ತೇವೆ’ ಎಂದು ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಹೇಳಿದರು.

‘ಉತ್ಪನ್ನಗಳ ಖರೀದಿ ಮಾತ್ರವಲ್ಲ, ಸಮುದಾಯದ ಸುಸ್ಥಿರ ಅಭಿವೃದ್ಧಿಯ ಧ್ಯೇಯವೂ ಈ ಸಂಘದ ಹಿಂದಿದೆ. ಅರಣ್ಯ ಉತ್ಪನ್ನಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸುವುದು, ಜೇನು ಸಾಕಣೆ, ಸಂಸ್ಕರಣೆ ಮಾಡುವ ಉಪಕರಣಗಳ ಬಳಕೆ, ಅರಣ್ಯ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಸದಸ್ಯರಿಗೆ ನಿರಂತರವಾಗಿ ತರಬೇತಿ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದೇವೆ. ಜೇನು ಸಾಕಣೆಗಾಗಿ ಪೆಟ್ಟಿಗೆಗಳು, ಸಂಸ್ಕರಣೆಗಾಗಿ ಉಪಕರಣಗಳನ್ನು ವಿತರಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದೇವೆʼ ಎಂದು ಅವರು ವಿವರಿಸಿದರು.

‘ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಉತ್ಪಾದನೆಯಾಗುವ ಕಾಫಿ, ಕಿರು ಆಹಾರ ಉತ್ಪನ್ನಗಳನ್ನು ಉತ್ಪಾದಕ ಸಂಘಗಳಿಗೆ ಮಾರಾಟ ಮಾಡುವುದರಿಂದ ಮಧ್ಯವರ್ತಿಗಳ ಕಾಟ ತಪ್ಪಿದೆ. ಕಾಫಿ ಬೆಳೆಗೆ ಸಂಬಂಧಿಸಿದಂತೆ ಕಾಫಿ ಬೋರ್ಡ್‌ ರೈತರಿಗೆ ತರಬೇತಿ ಮತ್ತು ನೆರವು ನೀಡುತ್ತಿರುವುದರಿಂದ ಅನುಕೂಲವಾಗಿದೆ. ಇದರಿಂದ ಸೋಲಿಗರ ಆದಾಯ ಏರಿಕೆಯಾಗಿದೆ. ಆರ್ಥಿಕವಾಗಿ ಸಬಲೀಕರಣವಾಗುತ್ತ ಹೆಜ್ಜೆಹಾಕುತ್ತಿದ್ದಾರೆ’ ಎಂದು ಸಂಘದ ಸದಸ್ಯ ಚಾರಿ ಶಿವಣ್ಣ ಹೇಳಿದರು.

ಅತ್ಯಾಧುನಿಕ ಸಂಸ್ಕರಣ ಘಟಕ

ಕೇಂದ್ರ ಸರ್ಕಾರದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ (ಎಂಎಸ್‌ಎಂಇ) ‘ಸ್ಫೂರ್ತಿʼ ಯೋಜನೆಯ ಪ್ರೋತ್ಸಾಹದಿಂದ ಸಂಘವು ಬಿಳಿಗಿರಿರಂಗನಬೆಟ್ಟದಲ್ಲಿ ಅತ್ಯಂತ ವ್ಯವಸ್ಥಿತವಾದ ಜೇನು ಸಂಸ್ಕರಣಾ ಘಟಕವನ್ನೂ ಸ್ಥಾಪಿಸಿದೆ. ಸಂಘದ ಪ್ರಯತ್ನಕ್ಕೆ ಜಿಲ್ಲಾಡಳಿತವೂ ಸಹಕಾರ ನೀಡಿದೆ. ಸಂಸ್ಕರಣಾ ಘಟಕಕ್ಕಾಗಿ ಅರ್ಧ ಎಕರೆ ಜಾಗ ನೀಡಿದೆ. ಈ ಯೋಜನೆಗೆ ₹3.50 ಕೋಟಿ ವೆಚ್ಚವಾಗಿದ್ದು, ಕೇಂದ್ರ ಸರ್ಕಾರ ₹3.20 ಕೋಟಿ ನೀಡಿದೆ. ಏಟ್ರೀ ಸಂಸ್ಥೆ ₹30 ಲಕ್ಷ ನೆರವು ಕೊಟ್ಟಿದೆ.

ಸಂಘವು ವಾರ್ಷಿಕವಾಗಿ ಸದಸ್ಯರು, ಲ್ಯಾಂಪ್ಸ್‌ನಿಂದ 5,000 ಕೆ.ಜಿಯಷ್ಟು ಜೇನು ತುಪ್ಪ ಖರೀದಿಸುತ್ತಿದೆ. ಅದನ್ನು ಘಟಕದಲ್ಲಿ ಸಂಸ್ಕರಿಸಿ, 250 ಗ್ರಾಂ, 500 ಗ್ರಾಂ ಬಾಟಲಿ ಪ್ಯಾಕಿಂಗ್‌ ಮಾಡಿ ಮಾರಾಟ ಮಾಡುತ್ತಿದೆ. ವಾರ್ಷಿಕವಾಗಿ 3,000ದಿಂದ 4,000 ಕೆ.ಜಿ ಜೇನುತುಪ್ಪವನ್ನು ಮಾರಾಟ ಮಾಡುತ್ತಿದೆ.

ಕರಿಮೆಣಸು (ಸರಾಸರಿ ಐದು ಕ್ವಿಂಟಲ್‌), ಅರಿಸಿನ (ಎಂಟು ಕ್ವಿಂಟಲ್‌), ಸೀಗೆಕಾಯಿ (ನಾಲ್ಕು ಕ್ವಿಂಟಲ್‌), ಅಂಟುವಾಳ ಕಾಯಿ (ಮೂರು ಕ್ವಿಂಟಲ್‌) ನೆಲ್ಲಿಕಾಯಿಗಳನ್ನು (ಸರಾಸರಿ ಐದು ಕ್ವಿಂಟಲ್‌) ವಾರ್ಷಿಕವಾಗಿ ಖರೀದಿಸಿ, ವಿವಿಧ ಉತ್ಪನ್ನಗಳನ್ನು ತಯಾರಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿದೆ.

₹50 ಲಕ್ಷ ವಹಿವಾಟು

ಸಂಘ ಸ್ಥಾಪನೆಗೊಂಡ ಆರಂಭದ ಕೆಲವು ವರ್ಷಗಳಲ್ಲಿ ಅದರ ವಾರ್ಷಿಕ ವಹಿವಾಟು ₹5ರಿಂದ ₹8 ಲಕ್ಷದವರೆಗೆ ಇತ್ತು. ಅದೀಗ ₹40 ಲಕ್ಷದಿಂದ ₹50 ಲಕ್ಷದವರೆಗೆ ಏರಿದೆ. ವಾರ್ಷಿಕವಾಗಿ ₹6 ಲಕ್ಷದಿಂದ ₹8 ಲಕ್ಷ ನಿವ್ವಳ ಲಾಭ ಗಳಿಸುತ್ತಿದೆ.

ʼಅರಣ್ಯ ಸಂರಕ್ಷಣೆಯನ್ನು ಮಾಡುವುದರ ಜೊತೆಗೆ ಸೋಲಿಗರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಆರಂಭಮಾಡಿರುವ ಸಂಸ್ಥೆ ಇದು. ತಕ್ಕ ಮಟ್ಟಿಗೆ ಚೆನ್ನಾಗಿಯೇ ನಡೆಯುತ್ತಿದೆ. ಸರ್ಕಾರ, ಜಿಲ್ಲಾಡಳಿತದ ಸಹಕಾರವನ್ನೂ ನಾವು ನೆನೆಯುತ್ತೇವೆ. ಸೋಲಿಗರೇ ನಿರ್ವಹಿಸುವ ಸಂಸ್ಥೆ ಇದು. ಸಂಘದ ಸಿಬ್ಬಂದಿ, ಸಂಸ್ಕರಣ ಘಟಕದ ಸಿಬ್ಬಂದಿ ಎಲ್ಲರೂ ಸೋಲಿಗರೇ. ಅವರಿಗೆ ವೇತನವನ್ನೂ ನೀಡುತ್ತಿದ್ದೇವೆ. ಉತ್ಪನ್ನಗಳನ್ನು ಖರೀದಿಸುವಾಗ ಸದಸ್ಯರಿಗೆ ಉತ್ತಮ ಬೆಲೆ ನೀಡುತ್ತಿದ್ದೇವೆ. ಬಂದ ಲಾಭದಲ್ಲಿ ಸದಸ್ಯರಿಗೆ ಬೋನಸ್‌ ಕೂಡ ನೀಡುತ್ತಿದ್ದೇವೆ, ಕಳೆದ ವರ್ಷ ₹2 ಲಕ್ಷ ಬೋನಸ್‌ ಕೊಟ್ಟಿದ್ದೇವೆ. ಸದ್ಯ ಉತ್ಪನ್ನಗಳನ್ನು ಬಿಳಿಗಿರಿರಂಗನಬೆಟ್ಟ, ಮೈಸೂರು ಬಂಡೀಪುರಗಳಲ್ಲಿ ನಮ್ಮದೇ ಆದ ಮಳಿಗೆಗಳನ್ನು ತೆರೆದು ಮಾರಾಟ ಮಾಡುತ್ತಿದ್ದೇವೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಲ್ಲೂ ನಮಗೆ ಗ್ರಾಹಕರಿದ್ದಾರೆ. ಅಂಚೆ, ಕೊರಿಯರ್‌ ಮೂಲಕವೂ ಉತ್ಪನ್ನಗಳನ್ನು ತಲುಪಿಸುತ್ತಿದ್ದೇವೆ. ಮಾರುಕಟ್ಟೆ ವಿಸ್ತರಣೆ ಮಾಡಲು ಇನ್ನೂ ಅವಕಾಶ ಇದೆ. ಹಂತ ಹಂತವಾಗಿ ಸಂಘವನ್ನು ಅಭಿವೃದ್ಧಿಗೊಳಿಸಲು ಯೋಜನೆಗಳನ್ನು ಹಾಕಿಕೊಂಡಿದ್ದೇವೆʼ ಎಂದು ಮಾದೇಗೌಡ ಹೇಳಿದರು.

ಬಿಳಿಗಿರಿರಂಗನಬೆಟ್ಟದಲ್ಲಿರುವ ಬಿಳಿಗಿರಿ ರಂಗಸ್ವಾಮಿ ಸೋಲಿಗರ ಸಂಸ್ಕರಣಾ ಸಂಘದ ‘ಅಡವಿ’ ಮಳಿಗೆ

ಕಾಫಿ ಬೆಳೆಗಾಗಿ ಮತ್ತೊಂದು ಸಂಸ್ಥೆ

ಬಿಳಿಗಿರಿರಂಗನಬೆಟ್ಟದಲ್ಲಿ ಸೋಲಿಗರು ಬೆಳಯುವ ಕಾಫಿಯನ್ನೇ ಗುರಿಯಾಗಿಸಿಕೊಂಡು ಆರಂಭಗೊಂಡ ಮತ್ತೊಂದು ಸಂಸ್ಥೆ ಬಿಳಿಗಿರಿ ಸೋಲಿಗರ ಉತ್ಪಾದಕ ಕಂಪನಿ. ಕರ್ನಾಟಕ ರಾಜ್ಯ ವಾಲ್ಮೀಕಿ ನಿಗಮ, ನಬಾರ್ಡ್‌ ಮತ್ತು ಕೇಂದ್ರ ಸರ್ಕಾರಗಳ ನೆರವಿನಿಂದ 2020ರಲ್ಲಿ ಆರಂಭಗೊಂಡ ಈ ಕಂಪನಿ ನಾಲ್ಕು ವರ್ಷಗಳ ಅವಧಿಯಲ್ಲೇ ಉತ್ತಮವಾಗಿ ಪ್ರಗತಿ ಕಾಣುತ್ತಿದೆ. ಕಾಫಿ ಮಂಡಳಿಯ ಮಾರ್ಗದರ್ಶನ ತಾಂತ್ರಿಕ ಸಹಕಾರವೂ ಈ ಕಂಪನಿಗಿದೆ. ಸದ್ಯ ಈ ಸಂಸ್ಥೆಯು ತನ್ನ ಸದಸ್ಯರಿಂದ ಕಾಫಿ ಬೀಜ ಖರೀದಿಸಿ, ಅದರಿಂದ ಕಾಫಿ ಪುಡಿ ತಯಾರಿಸುತ್ತಿದೆ. ‘ಟ್ರೈ’ ಎಂಬ ಬ್ರ್ಯಾಂಡ್‌ ಅಡಿಯಲ್ಲಿ ಕಾಫಿ ಪುಡಿಯನ್ನು ಮಾರಾಟ ಮಾಡಲಾಗುತ್ತಿದೆ. ಕಾಫಿ ಬೀಜ ಸಂಸ್ಕರಿಸಲು, ಪುಡಿ ಮಾಡಲು, ಪ್ಯಾಕಿಂಗ್‌ ಮಾಡಲು ಸ್ವಂತ ಘಟಕ ಇಲ್ಲದಿರುವುದರಿಂದ ಈ ಕೆಲಸಗಳನ್ನು ಹೊರಗಡೆ ಮಾಡಿಸುತ್ತಿದೆ.

‘ಸಮುದಾಯದವರು ಬೆಳೆಯುವ ಕಾಫಿ ಯಾವಾಗಲೂ ಮಧ್ಯವರ್ತಿಗಳ ಪಾಲಾಗುತ್ತಿತ್ತು. ಹೆಚ್ಚು ಬೆಲೆಯೂ ಸಿಗುತ್ತಿರಲಿಲ್ಲ. ತೂಕದಲ್ಲೂ ಮೋಸವಾಗುತ್ತಿತ್ತು. ಸಾವಯವ ಕಾಫಿ ಬೀಜಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಉದ್ದೇಶ ಮತ್ತು ಅದನ್ನು ಮೌಲ್ಯವರ್ಧನೆ ಮಾಡಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಧ್ಯೇಯದೊಂದಿಗೆ ಕಂಪನಿ ಸ್ಥಾಪನೆ ಮಾಡಿದ್ದೇವೆ. ಆಡಳಿತ ಮಂಡಳಿಯಲ್ಲಿ 10 ಜನ ನಿರ್ದೇಶಕರಿದ್ದಾರೆ’ ಎಂದು ಬಿಳಿಗಿರಿ ಸೋಲಿಗರ ಉತ್ಪಾದಕ ಕಂಪನಿಯ ಕಾರ್ಯದರ್ಶಿ ನಂಜೇಗೌಡ ಹೇಳಿದರು.

ಸದಸ್ಯರಿಂದ ಖರೀದಿಸಿದ ಜೇನನ್ನು ಸಂಸ್ಕರಣಾ ಘಟಕದಲ್ಲಿ ಸಂಗ್ರಹಿಸಿಟ್ಟಿರುವುದು

‘ಸೋಲಿಗ ಕುಟುಂಬಗಳ ಮೂಲಕ 160ರಿಂದ 200 ಟನ್‌ಗಳಷ್ಟು ಕಾಫಿ ಬೀಜ ಉತ್ಪಾದನೆಯಾಗುತ್ತದೆ. ಕಂಪನಿಯಲ್ಲಿ 500 ಸದಸ್ಯರಿದ್ದು, ನಾವು ವಾರ್ಷಿಕವಾಗಿ 90ರಿಂದ 100 ಟನ್‌ಗಳಷ್ಟು ಕಾಫಿ ಬೀಜ ಖರೀದಿಸುತ್ತೇವೆ. ಸದಸ್ಯರಿಗೆ ಉತ್ತಮ ಬೆಲೆಯನ್ನು ನೀಡುತ್ತೇವೆ. ಕಂಪನಿಗೆ ಬಂದ ಲಾಭಾಂಶವನ್ನು ಬೋನಸ್‌ ರೂಪದಲ್ಲಿ ಹಂಚುತ್ತೇವೆ’ ಎಂದು ಹೇಳಿದರು.

ಬಿಳಿಗಿರಿರಂಗನಬೆಟ್ಟದಲ್ಲಿ ಸೋಲಿಗರು ರಾಸಾಯನಿಕ ಮುಕ್ತವಾಗಿ, ಸಾವಯವ ವಿಧಾನದಿಂದ ಬೆಳೆಯುವ ಕಾಫಿಯನ್ನು ಪ್ರತ್ಯೇಕ ಬ್ರ್ಯಾಂಡಿಂಗ್‌ ಮಾಡುವ ಯತ್ನವನ್ನೂ ಕಂಪನಿ ನಡೆಸುತ್ತಿದೆ. ಒಟ್ಟಾರೆ ಕಾಫಿ ಕೃಷಿ ಹಾಗೂ ಅಡವಿ ಜೇನು ಮಾರಾಟವು ಸೋಲಿಗರ ಆರ್ಥಿಕತೆಯನ್ನು ಉತ್ತಮ ಸ್ಥಿತಿಗೆ ತರುವಲ್ಲಿ ಯಶಸ್ವಿ ಪ್ರಯತ್ನವಾಗಿದೆ.

ದಕ್ಷಿಣ ಭಾರತದಲ್ಲೇ ಮೊದಲ ಪ್ರಯತ್ನ

ಬಿಳಿಗಿರಿರಂಗನಬೆಟ್ಟದ ಗಿರಿಜನರು ಅರಣ್ಯದ ಮೇಲೆ ಅವಲಂಬಿಸಿದ್ದಾರೆ. ಜೀವನಾಧಾರಕ್ಕಾಗಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ. ಸುಸ್ಥಿರ ರೀತಿಯಲ್ಲಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹ ಮಾಡುವುದು, ಉತ್ಪನ್ನಗಳು ನಿರಂತರವಾಗಿ ಲಭ್ಯವಿರಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಸಂಸ್ಕರಣಾ ಘಟಕವನ್ನು ಆರಂಭಿಸಲಾಗಿದೆ. ಅರಣ್ಯ ಉತ್ಪನ್ನಗಳನ್ನು ಸಂಘವು ಬೆಂಬಲ ಬೆಲೆಗೆ ಖರೀದಿಸಿ, ಅವುಗಳ ಮೌಲ್ಯವರ್ಧನೆ ಮಾಡಿ, ಬಂದ ಲಾಭದಿಂದ ಸೋಲಿಗ ಸಮುದಾಯಕ್ಕೆ ಅನುಕೂಲ ಕಲ್ಪಿಸುವುದರ ಜೊತೆಗೆ, ಆ ಹಣವನ್ನು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೂ ಬಳಸುವ ಉದ್ದೇಶ ಈ ಕಾರ್ಯಕ್ರಮದ್ದು. ನಮ್ಮ ರಾಜ್ಯ ಮಾತ್ರವಲ್ಲ, ದಕ್ಷಿಣ ಭಾರತದಲ್ಲೇ ಇದು ಮೊದಲ ಪ್ರಯತ್ನ

- ಪ್ರೊ.ಸಿದ್ದಪ್ಪ ಶೆಟ್ಟಿ, ಏಟ್ರೀ ಸಂಶೋಧಕ

ಕಾಫಿ ಸಂಸ್ಕರಣ ಘಟಕದ ಕೊರತೆ

ಎರಡೂ ರೈತ ಉತ್ಪಾದಕ ಕಂಪನಿಗಳು ಸದಸ್ಯರಿಂದ ಖರೀದಿಸಿದ ಕಾಫಿ ಬೀಜಗಳನ್ನು ಸಂಸ್ಕರಿಸಿ ಪುಡಿ ಮಾಡುವ ಘಟಕ ಬಿಳಿಗಿರಿರಂಗನಬೆಟ್ಟದಲ್ಲಿ ಇಲ್ಲ. ಸದ್ಯ ಬೆಂಗಳೂರಿನಲ್ಲಿ ಖಾಸಗಿ ಘಟಕವೊಂದರಲ್ಲಿ ಪುಡಿ ಮಾಡಿ ನಂತರ ಪ್ಯಾಕಿಂಗ್‌ ಮಾಡಲಾಗುತ್ತಿದೆ. ಸ್ವಂತ ಸಂಸ್ಕರಣ ಘಟಕ ಸ್ಥಾಪಿಸಬೇಕು ಎಂಬ ಉದ್ದೇಶ ಸಂಘಗಳಿಗಿವೆ. ಆದರೆ ಅದಕ್ಕೆ ಅನುದಾನ ಮತ್ತು ಜಾಗದ ಅಗತ್ಯವಿದೆ.  ʼಸುಸಜ್ಜಿತ ಸಂಸ್ಕರಣ ಘಟಕಗಳ ಸ್ಥಾಪನೆಗಾಗಿ ಜಿಲ್ಲಾಡಳಿತಕ್ಕೆ ಎರಡು ಎಕರೆ ಜಾಗ ನೀಡುವಂತೆ ಮನವಿ ಮಾಡಿದ್ದೇವೆ. ಜಿಲ್ಲಾಡಳಿತ ಜಾಗ ಕೊಟ್ಟರೆ ನಮಗೆ ಅನುಕೂಲವಾಗುತ್ತದೆ’ ಎಂದು ನಂಜೇಗೌಡ ಹೇಳಿದರು. ‌

ಸೋಲಿಗರಿಗೆ ಅನುಕೂಲ

ಸೋಲಿಗರು ಕಾಫಿ ಹಾಗೂ ಅರಣ್ಯದ ಉತ್ಪನ್ನಗಳನ್ನು ನೇರವಾಗಿ ಕಂಪನಿಗಳಿಗೆ ಮಾರಾಟ ಮಾಡುತ್ತಿರುವುದರಿಂದ ಉತ್ತಮ ವರಮಾನ ಸಿಗುತ್ತಿದೆ. ಕಾಫಿ ಮಂಡಳಿಯು ತರಬೇತಿ ಮತ್ತು ಬೆಳೆ ನಿರ್ವಹಣೆಯ ಬಗ್ಗೆ ತಾಂತ್ರಿಕ ನೆರವು ಕೂಡ ನೀಡುತ್ತಿದೆ. ಅರಣ್ಯ ಉತ್ಪನ್ನಗಳನ್ನು ಹೆಚ್ಚು ವ್ಯವಸ್ಥಿತವಾಗಿ ಸಂಗ್ರಹಿಸುವ ಬಗ್ಗೆ ತಜ್ಞರ ಮಾರ್ಗದರ್ಶನವೂ ಸಿಗುತ್ತಿದೆ. ನಮ್ಮಲ್ಲಿರುವ ಎರಡು ಕಂಪನಿಗಳಿಂದ ಸಮುದಾಯದವರಿಗೆ ಅನುಕೂಲವಾಗಿದೆ.

– ತಂಟ್ರಿ ಕೇತಮ್ಮ ಬಿಳಿಗಿರಿರಂಗನಬೆಟ್ಟ

ಪರಿಕಲ್ಪನೆ: ಯತೀಶ್‌ ಕುಮಾರ್‌ ಜಿ.ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.