ಬೆಂಗಳೂರು: ‘ಸರ್ಕಾರ ಮಂಜೂರು ಮಾಡಿದ್ದ ಭೂಮಿ ಉಳ್ಳವರ ಪಾಲಾಯಿತು. ವಾಪಸ್ ಪಡೆಯಲು ಜೀವನವನ್ನೇ ಸವೆಸಿದ ಅಪ್ಪ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದರು. ನಾನು ಸ್ವಿಗ್ಗಿ, ಜೊಮ್ಯಾಟೊ ಸೇಲ್ಸ್ ಬಾಯ್ ಆಗಬೇಕಾಗಿ ಬಂತು. ಹತ್ತಾರು ಕೋಟಿ ಬೆಲೆ ಬಾಳುವ ಆಸ್ತಿಗೆ ಒಡೆಯನಾಗಬೇಕಿದ್ದ ಬದುಕು ಹೀಗೆ ಬೀದಿ ಪಾಲಾಯಿತು...’
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆ(ಪಿಟಿಸಿಎಲ್) ಉಲ್ಲಂಘಿಸಿ ಪರಭಾರೆ ಆಗಿರುವ ಜಮೀನು ವಾಪಸ್ ಪಡೆಯಲು ಹೋರಾಟ ನಡೆಸಿದ ಯಲ್ಲಪ್ಪ ಎಂಬುವವರ ಹತಾಶೆಯ ನುಡಿ ಇದು.
ಜಮೀನು ಮರಳಿ ಪಡೆಯಲು ಕೋರ್ಟು–ಕಚೇರಿ ಅಲೆದಾಡಿ ಸುಸ್ತಾಗಿರುವ ಹೊಸಕೋಟೆ ತಾಲ್ಲೂಕಿನ ಮಲ್ಲಸಂದ್ರದ ಯಲ್ಲಪ್ಪ, ಈಗ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ವೆಚ್ಚ ಭರಿಸಲಾಗದ ಸ್ಥಿತಿಯಲ್ಲಿ ಕುಟುಂಬ ಇದ್ದರೆ, ಹಾಸಿಗೆಯಿಂದ ಮೇಲೇಳಲು ಸಾಧ್ಯವಾಗದ ಸ್ಥಿತಿ ಅವರದ್ದು.
1938ರಲ್ಲಿ 2 ಎಕರೆ 4 ಗುಂಟೆ ಜಮೀನನ್ನು ಸರ್ಕಾರ ಮಂಜೂರು ಮಾಡಿತ್ತು. ಯಲ್ಲಪ್ಪ ಅವರ ತಂದೆ ಅವರಿಂದ 1980ರಲ್ಲಿ ಬೇರೊಬ್ಬರು ಖರೀದಿಸಿದ್ದರು. ಪಿಟಿಸಿಎಲ್ ಕಾಯ್ದೆ ಪ್ರಕಾರ, ಸರ್ಕಾರ ಮಂಜೂರು ಮಾಡಿದ ಜಮೀನು ಮಾರಾಟಕ್ಕೂ ಮುನ್ನ ಬದಲಿ ಜಮೀನು ಖರೀದಿಸಬೇಕು, ಜತೆಗೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕು. ಇದ್ಯಾವುದನ್ನೂ ಮಾಡದೆ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ 1992ರಿಂದ ಯಲ್ಲಪ್ಪ ಹೋರಾಟ ನಡೆಸುತ್ತಾ ಬಂದಿದ್ದಾರೆ.
ಜಮೀನು ಪರರ ಪಾಲಾದ ಬಳಿಕ ಬೀದಿ ಬದಿಯಲ್ಲಿ ಸೊಪ್ಪು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಯಲ್ಲಪ್ಪ, ಪಿಟಿಸಿಎಲ್ ಕಾಯ್ದೆ ಬಗ್ಗೆ ತಿಳಿದುಕೊಂಡು ಹೋರಾಟ ಆರಂಭಿಸಿದರು. 30 ವರ್ಷ ನಿರಂತರವಾಗಿ ಕಚೇರಿಗಳ ಬಾಗಿಲು ಎಡತಾಕಿದರು. ‘ಉಪವಿಭಾಗಾಧಿಕಾರಿ ನ್ಯಾಯಾಲಯ ಜಮೀನು ಮರು ಮಂಜೂರಾತಿಗೆ ಆದೇಶ ನೀಡಿತ್ತು. ಆದರೆ, ಜಾಗ ಸ್ವಾಧೀನ ಮಾಡಿಕೊಳ್ಳಲು ಅವಕಾಶ ಆಗಲಿಲ್ಲ. ಬಿಡಿಸಿಕೊಡಬೇಕಾದ ಪೊಲೀಸರು ಕೂಡ ಖರೀದಿಸಿದವರ ಪರ ನಿಂತರು. ಅಷ್ಟರಲ್ಲಿ ಜಮೀನು ಖರೀದಿ ಮಾಡಿದವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದರು. ಪೊಲೀಸರು ನಮ್ಮಿಂದಲೇ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ’ ಎಂದು ಯಲ್ಲಪ್ಪ ಅವರ ಮಗ ಚಂದ್ರಶೇಖರ್ ಬೇಸರದಿಂದ ಹೇಳುತ್ತಾರೆ.
‘ಕಾಯ್ದೆ ಉಲ್ಲಂಘಿಸಿ ಜಮೀನು ಮಾರಾಟವಾಗಿದ್ದರೂ, ವಾಪಸ್ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಎಕರೆಗೆ ಕನಿಷ್ಠ ₹10 ಕೋಟಿ ಬೆಲೆ ಬಾಳುವ ಆಸ್ತಿ ಈಗ ಬೇರೆಯವರ ಪಾಲಾಗಿದೆ. ನನ್ನ ಸಹೋದರ ಆಟೊರಿಕ್ಷಾ ಓಡಿಸುತ್ತಿದ್ದಾನೆ. ಜಮೀನು ಉಳಿದಿದ್ದರೆ ಜೀವನ ಮಟ್ಟ ಸುಧಾರಿಸುತ್ತಿತ್ತು’ ಎಂದು ಹೇಳಿದರು.
‘ಇದು ನನ್ನೊಬ್ಬನ ಸ್ಥಿತಿಯಲ್ಲ. ನಮ್ಮೂರಿನ ಹಲವರು ಭೂಮಿ ಕಳೆದುಕೊಂಡು ಇದೇ ರೀತಿ ದಯನೀಯವಾಗಿ ಜೀವನ ನಡೆಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ವೈಟ್‌ಫೀಲ್ಡ್‌ನಲ್ಲಿ ₹100 ಕೋಟಿ ಬೆಲೆ ಬಾಳುವ ಜಾಗ ಈಗ ರಿಯಲ್ ಎಸ್ಟೇಟ್ ಮಾಫಿಯಾದವರ ಪಾಲಾಗಿದೆ. ಪಿಟಿಸಿಎಲ್ ಕಾಯ್ದೆಯಡಿ ಅರ್ಜಿ ಸಲ್ಲಿಸಿ ನಡೆಸಿದ ಕಾನೂನು ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ. ಅಲ್ಲಿ ತಲೆ ಎತ್ತಿರುವ ಐ.ಟಿ ಕಂಪನಿಗಳಲ್ಲಿ ಕಾವಲುಗಾರರ ಕೆಲಸ ಮಾಡುತ್ತಿದ್ದೇವೆ. ಅಕ್ಕ ಸ್ವೀಪರ್ ಕೆಲಸ ಮಾಡಿದರೆ, ಅಣ್ಣ ಗಾರ್ಡನ್ ನಿರ್ವಹಣೆ ಕೆಲಸ ಮಾಡುತ್ತಿದ್ದಾರೆ. ಭೂ ಮಾಲೀಕರಾಗಿದ್ದ ನಾವು, ಅದೇ ಜಾಗದಲ್ಲಿ ಕೂಲಿಗಳಾಗಿದ್ದೇವೆ’ ಎಂದು ವೈಟ್‌ಫೀಲ್ಡ್‌ನ ಚಂದ್ರಪ್ಪ ಗದ್ಗದಿತರಾದರು.
‘ಅನಕ್ಷರಸ್ಥನಾಗಿದ್ದ ಅಪ್ಪ ಅದ್ಯಾವ ಕಾರಣಕ್ಕೆ ಊರ ಗೌಡರಿಗೆ ಜಮೀನು ಬರೆದುಕೊಟ್ಟರೊ ಗೊತ್ತಿಲ್ಲ. ಈಗ ನಮ್ಮದು ಬರಿಗೈ. ನಾನು, ನನ್ನ ತಾಯಿ ಅದೇ ಜಮೀನಿನಲ್ಲಿ ಕೂಲಿಕಾರರಾಗಿದ್ದೇವೆ. ನಮ್ಮ ಜಮೀನಿನಲ್ಲಿ ನಾವೇ ಕೂಲಿಗಳಾಗಿದ್ದೇವೆ ಎಂಬುದು ದಿನವೂ ಕಾಡುತ್ತಿದೆ. ಜಮೀನು ವಾಪಸ್ ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂಬುದೇ ನಮಗೆ ಗೊತ್ತಿಲ್ಲ. ಊರ ಗೌಡರ ವಿರುದ್ಧ ನಾವು ಹೋರಾಟ ಮಾಡಿ ಬದುಕುಳಿಯಲು ಸಾಧ್ಯವೇ’ ಎಂದು ಸಕಲೇಶಪುರ ತಾಲ್ಲೂಕಿನ ಉಮೇಶ್ ತಮ್ಮ ಪ್ರಶ್ನೆಗೆ ಬೇಸರವನ್ನೂ ಸವರಿದಂತೆ ಹೇಳಿದರು.
‘ಇಷ್ಟೇ ಅಲ್ಲ, ಅನಕ್ಷರಸ್ಥರಾಗಿದ್ದ ದಲಿತರನ್ನು ಹೆದರಿಸಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡ ಉದಾಹರಣೆಗಳಿವೆ. ಕೈಸಾಲಕ್ಕೆ ಹೆಬ್ಬೆಟ್ಟು ಒತ್ತಿಸಿಕೊಂಡು ಖಾತೆ ಬದಲಾವಣೆ ಮಾಡಿಕೊಂಡಿರುವ ಪ್ರಕರಣಗಳೂ ಇವೆ. ಇದನ್ನು ಪ್ರಶ್ನೆ ಮಾಡುವ ದನಿ ದಲಿತರಲ್ಲಿ ಇರಲಿಲ್ಲ. ಜಮೀನು ವಾಪಸ್ ಪಡೆದುಕೊಳ್ಳಲು ಕಾನೂನು ಇದೆ ಎಂಬ ಅರಿವೂ ಇರಲಿಲ್ಲ. ಇತ್ತೀಚೆಗೆ ಅದು ಅರಿವಿಗೆ ಬರುತ್ತಿದೆ. ಆದರೀಗ ಕಾಯ್ದೆಯೇ ದುರ್ಬಲವಾಗಿದೆ. ಜಮೀನು ವಾಪಸ್ ಪಡೆಯುವುದು ಹೇಗೆ’ ಎಂದು ಪ್ರಶ್ನಿಸುತ್ತಾರೆ ಪಿಟಿಸಿಎಲ್ ಕಾಯ್ದೆ ಸಮಗ್ರ ತಿದ್ದುಪಡಿಗೆ ಒತ್ತಾಯಿಸುತ್ತಿರುವ ಹೋರಾಟಗಾರರು.
ಕಾಯ್ದೆಯ ಉದ್ದೇಶ: 1924ರಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಭೂ ಒಡೆತನದ ಹಕ್ಕನ್ನು ಮೈಸೂರು ಅರಸರು ಕೊಟ್ಟರು. ಸ್ವಾತಂತ್ರ್ಯ ಬರುವ ಮೊದಲು, ಸ್ವಾತಂತ್ರ್ಯ ನಂತರ ಸರ್ಕಾರಗಳು ಮುಫತ್ತಾಗಿ ನೀಡಿದ ಭೂಮಿಯನ್ನು ನಿರ್ದಿಷ್ಟ ಕಾಲದವರೆಗೆ ಪರಭಾರೆ ಮಾಡಬಾರದು ಎಂಬ ಷರತ್ತುಗಳನ್ನು ವಿಧಿಸುತ್ತಿದ್ದರು.
ಮುಖ್ಯಮಂತ್ರಿ ಆಗಿದ್ದ ಡಿ.ದೇವರಾಜ ಅರಸು ಅವರು 1979ರ ಜನವರಿ 1ರಿಂದ ಜಾರಿಗೆ ಬರುವಂತೆ ಪಿಟಿಸಿಎಲ್ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೆ ತಂದರು. ಇದು ಬರುವ ಮುನ್ನ ಮತ್ತು ನಂತರ ಪರಿಶಿಷ್ಟರಿಗೆ ಮಂಜೂರಾದ ಭೂಮಿಗಳ ಪರಭಾರೆ ಮಾಡಲು ಸರ್ಕಾರದ ಪೂರ್ವಾನುಮತಿ ಅತ್ಯವಶ್ಯ ಎಂಬ ಷರತ್ತು ಇತ್ತು.
ಒಂದು ವೇಳೆ ಪೂರ್ವಾನುಮತಿ ಪಡೆದು ಬದಲಿ ಜಮೀನು ಖರೀದಿಸಿದ್ದರೆ, ಮತ್ತೊಮ್ಮೆ ಈ ಕಾಯ್ದೆಯಡಿ ಅರ್ಜಿ ಸಲ್ಲಿಸಿ ಮರು ಮಂಜೂರಾತಿ ಕೋರಲು ಅವಕಾಶ ಇಲ್ಲ. ಕಾಯ್ದೆ ಉಲ್ಲಂಘಿಸಿ ಭೂಮಿ ಪರಭಾರೆ ಆಗಿದ್ದಲ್ಲಿ ಮರು ಮಂಜೂರಾತಿ ಕೋರಿ ಮೂಲ ಮಂಜೂರಾತಿದಾರರು ಅಥವಾ ಅವರ ವಾರಸುದಾರರು ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಬಹುದು. ಜಿಲ್ಲಾಧಿಕಾರಿ ಸ್ವಯಂ ಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡು ಜಮೀನು ಬಿಡಿಸಿಕೊಡಲು ಕಾಯ್ದೆಯಲ್ಲಿ ಅವಕಾಶ ಇದೆ. ಪರಭಾರೆಯಾದ ಇಂತಿಷ್ಟೇ ದಿನಗಳಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಕಾಲಮಿತಿ ಇರಲಿಲ್ಲ.
ಕಾಯ್ದೆ ಇಷ್ಟೊಂದು ಬಲಿಷ್ಠವಾಗಿದ್ದರೂ ದಲಿತರ ಭೂಮಿ ಪರಭಾರೆ ಆಗುವುದನ್ನು ತಪ್ಪಿಸಲು ಆಗಿಲ್ಲ. ದಲಿತರಿಗೆ ಸರ್ಕಾರ ಮಂಜೂರು ಮಾಡಿದ್ದ ಭೂಮಿ ಪರಭಾರೆ ಆಗದಂತೆ ಈ ಕಾಯ್ದೆಯಡಿ ನೋಡಿಕೊಳ್ಳಬೇಕಾದ ಜವಾಬ್ದಾರಿ ಕಂದಾಯ ಇಲಾಖೆಯದ್ದು. ಆದರೂ ಬದಲಿ ಜಮೀನು ಖರೀದಿಸದೆ ಮತ್ತು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯದಿದ್ದರೂ ಖಾತೆ ಬದಲಾವಣೆ ಮಾಡಿಕೊಡುವುದು ಎಗ್ಗಿಲ್ಲದೆ ನಡೆದಿದೆ.
ಕಾಯ್ದೆ ಉಲ್ಲಂಘಿಸಿ ಜಮೀನು ಪರಭಾರೆಯಾಗುತ್ತಿದ್ದರೂ ಸ್ವಯಂ ಪ್ರೇರಿತವಾಗಿಜಿಲ್ಲಾಧಿಕಾರಿ ಪ್ರಕರಣ ದಾಖಲಿಸಿಕೊಂಡ ಒಂದೇ ಒಂದು ಉದಾಹರಣೆಯೂ ರಾಜ್ಯದಲ್ಲಿ ಇಲ್ಲ. ಇದರ ಪರಿಣಾಮ ಭೂಮಿ ಪರಭಾರೆ ಎಗ್ಗಿಲ್ಲದೆ ನಡೆದಿದೆ. ನಗರ ಪ್ರದೇಶದ ಅದರಲ್ಲೂ ಬೆಂಗಳೂರು ಸುತ್ತಮುತ್ತ ದಲಿತರ ಭೂಮಿಯಲ್ಲೇ ಬಡಾವಣೆಗಳನ್ನು ನಿರ್ಮಿಸಿರುವ ರಿಯಲ್ ಎಸ್ಟೇಟ್ ಉದ್ಯಮಿಗಳು, ನಿವೇಶನ ಕೊಳ್ಳುವ ಅಮಾಯಕರಿಗೆ ಮಾರಾಟ ಮಾಡಿ ಕೈತೊಳೆದುಕೊಂಡಿದ್ದಾರೆ. ಪರಿಶಿಷ್ಟರಿಗೆ ಸರ್ಕಾರ ಮಂಜೂರು ಮಾಡಿದ್ದ ಜಾಗಎಂಬ ಅರಿವಿಲ್ಲದೆ ನಿವೇಶನ ಖರೀದಿಸಿದವರೂ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ.
ಇದರ ನಡುವೆ 2017ರ ಅಕ್ಟೋಬರ್ 26ರಲ್ಲಿ ನೆಕ್ಕಂಟಿ ರಾಮಲಕ್ಷ್ಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ‘ಸಮುಚಿತ (ಕಾಲಮಿತಿ) ಸಮಯದೊಳಗೆ ಅರ್ಜಿ ಸಲ್ಲಿಸಬೇಕು’ ಎಂದು ತಿಳಿಸಿತು. ಇದು ಕಂದಾಯ ಇಲಾಖೆ ಪಾಲಿಗೆ ತೂಕಡಿಸುತ್ತಿದ್ದವರಿಗೆ ಹಾಸಿಗೆ ಹಾಸಿ ಕೊಟ್ಟಂತಾಯಿತು.
‘ಪಿಟಿಸಿಎಲ್ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳನ್ನು ತಿರಸ್ಕರಿಸಿ ಕೈತೊಳೆದುಕೊಳ್ಳಲಾಗುತ್ತಿದೆ. ನಿರ್ದಿಷ್ಟ ಸಮಯದೊಳಗೆ ಅರ್ಜಿ ಸಲ್ಲಿಸಿಲ್ಲ ಎಂಬ ಕಾರಣ ನೀಡಲಾಗುತ್ತಿದೆ. ನಿರ್ದಿಷ್ಟ ಸಮಯ ಎಂದರೆ ಎಷ್ಟು ಎಂಬುದನ್ನೂ ಸುಪ್ರೀಂ ಕೋರ್ಟ್ ಸಹ ಹೇಳಿಲ್ಲ. ದಲಿತರ ಭೂಮಿ ಖರೀದಿಸಿರುವ ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಅಧಿಕಾರಿಗಳು ಮಣಿಯುತ್ತಿದ್ದಾರೆ’ ಎಂಬುದು ಅರ್ಜಿದಾರರ ಅಳಲು.
ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ 6 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಜಾಗೊಂಡಿವೆ. ಅದನ್ನು ಪ್ರಶ್ನಿಸಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೊರೆಹೋದರೂ ನೆಕ್ಕಂಟಿ ರಾಮಲಕ್ಷ್ಮಿ ಪ್ರಕರಣದ ತೀರ್ಪು ಉಲ್ಲೇಖಿಸಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಇದರಿಂದ ಭೂಮಿ ಕಳೆದುಕೊಂಡ ದಲಿತರು ಮರು ಮಂಜೂರಾತಿ ಪಡೆಯಲು ಸಾಧ್ಯವೇ ಇಲ್ಲವಾಗಿದೆ. ಪಿಟಿಸಿಎಲ್ ಕಾಯ್ದೆ ಇದ್ದೂ ಇಲ್ಲದಂತಾಗಿದೆ’ ಎಂದು ಹೋರಾಟಗಾರರು ಹೇಳುತ್ತಾರೆ.
‘ಹೋರಾಟಗಾರರ ಕಣ್ಣೊರೆಸಲು ಸುತ್ತೋಲೆಯೊಂದನ್ನು ಹೊರಡಿಸಿ ಕಂದಾಯ ಇಲಾಖೆ ಕೈತೊಳೆದುಕೊಂಡಿದೆ. ಸಮಗ್ರ ತಿದ್ದುಪಡಿ ಪ್ರಸ್ತಾವನೆ ಕಂದಾಯ ಸಚಿವರ ಕಚೇರಿಯಲ್ಲಿ ಎರಡು ವರ್ಷಗಳಿಂದ ಧೂಳು ಹಿಡಿಯುತ್ತಿದೆ. ಇತ್ತ ಪಿಟಿಸಿಎಲ್ ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳು ವಜಾಗೊಳ್ಳುತ್ತಿವೆ. ನಮ್ಮ ಹೋರಾಟದ ಕೂಗು ಸರ್ಕಾರದ ಮುಂದೆ ಅರಣ್ಯ ರೋದನವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
ಭೂ ಮಾಫಿಯಾದಿಂದ ಅನ್ಯಾಯ
ದಲಿತರಿಗೆ ಬಲ ನೀಡಲು ರೂಪಿಸಿದ ಈ ಕಾಯ್ದೆಯನ್ನೇ ಮುಂದಿಟ್ಟುಕೊಂಡು ದಲಿತರ ಜಮೀನಿಗೆ ಕಡಿಮೆ ಬೆಲೆ ನಿಗದಿ ಮಾಡಿ ಕಸಿದುಕೊಳ್ಳುವ ಪ್ರಯತ್ನಗಳೂ ಸದ್ದಿಲ್ಲದೆ ನಡೆಯುತ್ತಿವೆ.
ಬದಲಿ ಜಮೀನು ಖರೀದಿಗೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದುಕೊಂಡರೆ, ಮತ್ತೊಮ್ಮೆ ಈ ಕಾಯ್ದೆಯಡಿ ಅರ್ಜಿ ಸಲ್ಲಿಸಿ ಮರು ಮಂಜೂರಾತಿ ಕೋರಲು ಅವಕಾಶ ಇಲ್ಲ. ಇದು ದಲಿತರಿಗೆ ಸರ್ಕಾರ ಮಂಜೂರು ಮಾಡಿದ್ದ ಭೂಮಿಯನ್ನು ಕಾನೂನುಬದ್ಧವಾಗಿ ಮಾರಾಟ ಮಾಡಲು ಇರುವ ಅವಕಾಶ.
ಆದರೆ, ದಲಿತರ ಭೂಮಿ ಎಂದ ಕೂಡಲೇ ಪಿಟಿಸಿಎಲ್ ಕಾಯ್ದೆಯನ್ನು ತೋರಿಸಿ ಕಡಿಮೆ ಬೆಲೆ ನಿಗದಿ ಮಾಡಿ ಖರೀದಿಸಲಾಗುತ್ತದೆ. ಈ ಕಾಯ್ದೆ ಅನ್ವಯವಾಗುವುದು ಸರ್ಕಾರ ಮಂಜೂರು ಮಾಡಿದ ಜಮೀನಿಗೆ ಮಾತ್ರ. ಪಿತ್ರಾರ್ಜಿತ ಆಸ್ತಿ ಅಥವಾ ಸ್ವಯಾರ್ಜಿತ ಆಸ್ತಿಗೆ ಈ ಕಾಯ್ದೆ ಅನ್ವಯವಾಗುವುದಿಲ್ಲ. ಆದರೆ, ಖಾತೆದಾರ ಪರಿಶಿಷ್ಟ ಜಾತಿ ಅಥವಾ ಪಂಗಡ ಎಂಬುದು ಗೊತ್ತಾದ ಕೂಡಲೇ ಕಡಿಮೆ ಬೆಲೆ ನಿಗದಿ ಮಾಡಲಾಗುತ್ತದೆ. ಈ ಬಗ್ಗೆ ಅರಿವಿಲ್ಲದ ಪರಿಶಿಷ್ಟರು ರಿಯಲ್ ಎಸ್ಟೇಟ್ ಮಾಫಿಯಾಗಳು ನಿಗದಿ ಮಾಡುವ ದರಕ್ಕೆ ಮಾರಾಟ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ದಲಿತರ ಜಮೀನನ್ನು ಈ ರೀತಿಯಾಗಿ ಕಬಳಿಸುತ್ತಿದೆ ಎಂದು ಸಂಘಟನೆಗಳ ಮುಖಂಡರು ವಿವರಿಸುತ್ತಾರೆ.
ಈ ಎಲ್ಲಾ ಅಂಶಗಳನ್ನೂ ಸೂಕ್ಷ್ಮವಾಗಿ ಗಮನಿಸಿ ಸರ್ಕಾರ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಬೇಕು. ಪರಿಶಿಷ್ಟರ ಭೂಮಿ ಹಕ್ಕನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸುತ್ತಾರೆ.
*
‘ಕಾಯ್ದೆ ತಿದ್ದುಪಡಿಯೊಂದೇ ಮಾರ್ಗ’
ದಲಿತರ ಭೂ ಒಡೆತನದ ಹಕ್ಕು ಉಳಿಸಲು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುವುದೊಂದೇ ಮಾರ್ಗ. ಪಿಟಿಸಿಎಲ್ ಕಾಯ್ದೆಯಡಿ ಸಲ್ಲಿಕೆಯಾಗುವ ಎಲ್ಲಾ ಅರ್ಜಿಗಳಿಗೂ ಸುಪ್ರೀಂ ಕೋರ್ಟ್ ಆದೇಶವನ್ನೇ ತೋರಿಸಿ ವಜಾ ಮಾಡಲಾಗುತ್ತಿದೆ. ಇದರಿಂದ ಪರಿಶಿಷ್ಟರಿಗೆ ಅನ್ಯಾಯವಾಗುತ್ತಿದೆ.
–ಡಿ.ವಿ. ಶೈಲೇಂದ್ರ ಕುಮಾರ್,ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ
*
ಮೀಸಲಾತಿಗಿಂತ ಪಿಟಿಸಿಎಲ್ ಕಾಯ್ದೆಯೇ ಮುಖ್ಯ
ಎಸ್‌ಸಿಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಮೀಸಲಾತಿಗಿಂತಲೂ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಮುಖ್ಯ. ಎಲ್ಲವೂ ಖಾಸಗೀಕರಣ ಆಗಿರುವಾಗ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಿದರೆ ಅಷ್ಟೇನು ಪ್ರಯೋಜನವಾಗದು. ಈ ವಿಷಯವನ್ನು ಮುಖ್ಯಮಂತ್ರಿ ಅವರಿಗೆ ಹಲವು ಬಾರಿ ಮನವರಿಕೆ ಮಾಡಲಾಗಿದೆ. ಆದರೂ, ಕಾಯ್ದೆ ತಿದ್ದುಪಡಿಗೆ ಸರ್ಕಾರಮನಸ್ಸು ಮಾಡುತ್ತಿಲ್ಲ. ನಿರ್ಲಕ್ಷ್ಯ ಮಾಡಿದರೆ ಪಕ್ಷ ಬೆಲೆತೆರಬೇಕಾಗುತ್ತದೆ.
–ಎಂ.ಪಿ.ಕುಮಾರಸ್ವಾಮಿ,ವಿಧಾನ ಮಂಡಲ ಎಸ್‌ಸಿಎಸ್‌ಟಿ ಕಲ್ಯಾಣ ಸಮಿತಿ ಅಧ್ಯಕ್ಷ
*
‘ತಿದ್ದುಪಡಿ ಆಗಲೇಬೇಕು’
‘ಈ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಸುಪ್ರೀಂ ಕೋರ್ಟ್ ಈ ರೀತಿಯ ಆದೇಶ ನೀಡಿದಂತಿದೆ. ಕಾಯ್ದೆಗೆ ತಿದ್ದುಪಡಿ ತಂದು ಪೂರ್ವಾನ್ವಯ ಆಗುವಂತೆ ಆದೇಶ ಹೊರಡಿಸಬೇಕು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಹೇಳಿದರು.
ಸ್ವಯಂಪ್ರೇರಿತವಾಗಿ ಜಿಲ್ಲಾಧಿಕಾರಿ ಪ್ರಕರಣ ದಾಖಲಿಸಿಕೊಂಡು ದಲಿತರಿಗೆ ಬಿಡಿಸಿಕೊಡಲು ಅವಕಾಶ ಇದೆ. ಅದನ್ನುಯಾವ ಜಿಲ್ಲಾಧಿಕಾರಿಯೂ ಇದನ್ನು ಮಾಡಿಲ್ಲ. ಕಾಯ್ದೆಗೆ ತಿದ್ದುಪಡಿ ತಂದು ಮತ್ತೆ ಬಲ ನೀಡಬೇಕಾದ ಅನಿವಾರ್ಯ ಇದೆ ಎಂದರು.
*
ಅಭಿಪ್ರಾಯಗಳು
‘ಮುಖ್ಯಮಂತ್ರಿ ಮಾತು ಉಳಿಸಿಕೊಳ್ಳಬೇಕು’
ಮುಖ್ಯಮಂತ್ರಿ ಅವರು ಮಾತು ಕೊಟ್ಟಿರುವಂತೆ ಸುಗ್ರೀವಾಜ್ಞೆ ಮೂಲಕ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಮಾಡಬೇಕು. ಈಗಾಗಲೇ ನ್ಯಾಯಾಲಯಗಳಲ್ಲಿ ವಜಾ ಆಗಿರುವ ಪ್ರಕರಣಗಳಿಗೂ ಮರು ಜೀವ ದೊರಕಬೇಕೆಂದರೆ ಪೂರ್ವಾನ್ವಯ ಆಗುವಂತೆ ತಿದ್ದುಪಡಿಯಾಗಬೇಕು. ಇಲ್ಲದಿದ್ದರೆ ದಲಿತರು ಭೂಮಿಯ ಹಕ್ಕು ಮರಳಿ ಪಡೆಯಲು ಸಾಧ್ಯವೇ ಆಗುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ ಶಾಸಕರೂ ಸರ್ಕಾರದ ಮೇಲೆ ಒತ್ತಡ ಹೇರಬೇಕು.
–ಮಾವಳ್ಳಿ ಶಂಕರ್,ದಸಂಸ(ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ
*
ದಯಾಮರಣ ಕೋರಲು ನಿರ್ಧಾರ
ಪಿಟಿಸಿಎಲ್ ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಗಳೆಲ್ಲವೂ ವಜಾಗೊಳ್ಳುತ್ತಿದ್ದು, ದಲಿತರು ಭೂಮಿ ಇಲ್ಲದೆ ನಿರ್ಗತಿಕರಾಗುತ್ತಿದ್ದಾರೆ. ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ, ತಿದ್ದುಪಡಿ ಮಾಡದೆ ಉದ್ದೇಶಪೂರ್ವಕವಾಗಿಯೇ ಸರ್ಕಾರ ಅನ್ಯಾಯ ಮಾಡುತ್ತಿದೆ. ಭೂಮಿ ಕಳೆದುಕೊಂಡಿರುವ ವಂಚಿತರಿಗೆ ದಯಾ ಮರಣ ನೀಡಬೇಕು ಎಂದು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇವೆ.
–ಎಂ.ಎಚ್.ಮಂಜುನಾಥ್,ಪಿಟಿಸಿಎಲ್ ಹೋರಾಟಗಾರ
*
‘ಡೋಂಗಿ ದಲಿತ ಪ್ರೀತಿ ಆಗಬಾರದು’
ಶೇ 10ರಷ್ಟು ಮೀಸಲಾತಿಯನ್ನು ಯಾರೂ ಕೇಳಿರಲಿಲ್ಲ. ಸರ್ಕಾರವೇ ಇಚ್ಛಾಶಕ್ತಿ ತೋರಿಸಿ ತಂದಿದೆ. ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳ ಪ್ರಯತ್ನವೂ ಚುನಾವಣಾ ರಾಜಕಾರಣವೇ ಆಗಿದೆ. ದಲಿತರ ಮೇಲೆ ಪ್ರೀತಿ ಇದೆ ಎಂಬುದನ್ನು ತೋರ್ಪಡಿಸುವ ತಂತ್ರ. ಭೂಮಿ ಉಳಿಸಿಕೊಟ್ಟರೆ ಇಡೀ ಕುಟುಂಬ ಸ್ವಾಭಿಮಾನದಿಂದ ಬದುಕಲು ಸಾಧ್ಯವಿದೆ. ನಿಜವಾಗಲೂ ದಲಿತರ ಮೇಲೆ ಪ್ರೀತಿ ಇದ್ದರೆ ಸುಗ್ರೀವಾಜ್ಞೆ ಮೂಲಕ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಬೇಕು. ಇಲ್ಲದಿದ್ದರೆ ಡೋಂಗಿ ಪ್ರೀತಿ ಎಂಬುದು ಬಹಿರಂಗವಾಗುತ್ತದೆ.
–ಎ.ಹರಿರಾಮ್,ವಕೀಲ, ರಾಜ್ಯ ಅಧ್ಯಕ್ಷ, ಭಾರತೀಯ ಪರಿವರ್ತನ ಸಂಘ
*
ಮಾಧುಸ್ವಾಮಿ, ಆರ್.ಅಶೋಕ ಅಡ್ಡಿ
ತಿದ್ದುಪಡಿಗೆ ವಿಧಾನ ಮಂಡಲ ಎಸ್‌ಸಿಎಸ್‌ಟಿ ಕಲ್ಯಾಣ ಸಮಿತಿ ಶಿಫಾರಸು ಮಾಡಿ ಒಂದು ವರ್ಷವಾಗಿದ್ದರೂ ಕಂದಾಯ ಸಚಿವ ಆರ್.ಅಶೋಕ ಅವರು ಸಚಿವ ಸಂಪುಟದ ಮುಂದೆ ತರುತ್ತಿಲ್ಲ. ಕಾನೂನು ಸಚಿವ ಮಾಧುಸ್ವಾಮಿ ಮತ್ತು ಆರ್.ಅಶೋಕ್ ಅವರೇ ಕಾಯ್ದೆ ತಿದ್ದುಪಡಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಸಾವಿರಾರು ಎಕರೆ ಭೂಮಿ ದಲಿತರ ಕೈತಪ್ಪಿ ಹೋಗುತ್ತಿದೆ. ಕೂಡಲೇ ಸರ್ಕಾರ ಕಾಯ್ದೆ ತಿದ್ದುಪಡಿಗೆ ಮುಂದಾಗಬೇಕು.
–ಹೆಣ್ಣೂರು ಶ್ರೀನಿವಾಸ್,ರಾಜ್ಯ ಸಂಚಾಲಕ, ದಲಿತ ಸಂಘರ್ಷ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.