ADVERTISEMENT

ರಾಜ್ಯದಲ್ಲಿ ನಕಲಿ ವೈದ್ಯರ ವಿಷವರ್ತುಲ

ಗಬ್ಬೆದ್ದಿರುವ ಸರ್ಕಾರಿ ಆರೋಗ್ಯ ಸೇವೆ * ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕ * ತ್ರಿಶಂಕು ಸ್ಥಿತಿಯಲ್ಲಿ ಬಡ ರೋಗಿಗಳು

​ಪ್ರಜಾವಾಣಿ ವಾರ್ತೆ
Published 11 ಮೇ 2019, 20:08 IST
Last Updated 11 ಮೇ 2019, 20:08 IST
   

ರಾಜ್ಯದಾದ್ಯಂತ ಈ ನಕಲಿಗಳ ಹಾವಳಿ ಮೇರೆ ಮೀರಿದೆ. ಐಎಂಎ, ಕೆಎಂಸಿ ಕಣ್ಗಾವಲಿದ್ದರೂ ವ್ಯವಸ್ಥೆಯ ಲೋಪಗಳ ಲಾಭ ಪಡೆಯುತ್ತಿರುವ ನಕಲಿಗಳು ಅಸಲಿ ವೈದ್ಯರೇ ಬೆಚ್ಚಿ ಬೀಳುವಂತೆ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ..!

ಹುಬ್ಬಳ್ಳಿ: ಜ್ವರದಿಂದ ಬಳಲುತ್ತಿದ್ದ ತಮ್ಮ ಮಗನಿಗೆ ಆ ದಂಪತಿ ಕ್ಲಿನಿಕ್‌ವೊಂದರಲ್ಲಿ ಚುಚ್ಚುಮದ್ದು ಹಾಕಿಸಿ, ಔಷಧ ಕುಡಿಸಿದ್ದರು. ಇದಾದ ಮಾರನೇ ದಿನ ಆತನ ಕೈ, ಕಾಲುಗಳು ಸ್ವಾಧೀನ ಕಳೆದುಕೊಂಡವು. ಉಸಿರಾಟದ ಸಮಸ್ಯೆಯಿಂದ ಆತ ಕೊನೆಯುಸಿರೆಳೆದ.

ಹಾವೇರಿ ಜಿಲ್ಲೆಯ ಹೊಸಳ್ಳಿಯಲ್ಲಿ ಸಂಭವಿಸಿದ ಈ ಘಟನೆಗೆ ಕಾರಣ 'ಹೇವಿ ಡೋಸ್' ಚುಚ್ಚುಮದ್ದು ಹಾಗೂ ಔಷಧ. ಅದನ್ನು ನೀಡಿದ್ದು ಪರಮೇಶ್ ಎಂಬ ನಕಲಿ ವೈದ್ಯ.

ADVERTISEMENT

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯನಾಗಿ ನಿಯೋಜನೆಗೊಂಡಿದ್ದ ವಿಕಾಸ್ ಎಂಬಾತ, ರಾತ್ರಿ ಪಾಳಿಯಲ್ಲೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದ. ಆತನ ಚಿಕಿತ್ಸಾ ವಿಧಾನ ಹಾಗೂ ರೋಗಿಗಳಿಗೆ ನೀಡುತ್ತಿದ್ದ ಔಷಧದ ಬಗ್ಗೆ ಅನುಮಾನಗೊಂಡ ಸಹೋದ್ಯೋಗಿಗಳು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ದಾಳಿ ನಡೆಸಿದಾಗ ಆತ ನಕಲಿ ವೈದ್ಯ ಎಂದು ಗೊತ್ತಾಯಿತು.

ಬಿ.ಎಸ್ಸಿ ನರ್ಸಿಂಗ್ ಓದಿದ್ದ ವಿಕಾಸ್, ಬೇರೊಬ್ಬರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಕೆಲಸ ಗಿಟ್ಟಿಸಿಕೊಂಡಿದ್ದ. ತಿಂಗಳಿಗೆ ₹45 ಸಾವಿರ ಎಣಿಸುತ್ತಿದ್ದ. ಸಿಕ್ಕಿಬೀಳುವ ಹೊತ್ತಿಗಾಗಲೇ 36 ಮರಣೋತ್ತರ ಪರೀಕ್ಷೆ ನಡೆಸಿದ್ದ!

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿಗೆ ಈ ಎರಡೂ ಪ್ರಕರಣಗಳು ಕನ್ನಡಿ ಹಿಡಿಯುತ್ತವೆ. ವೈದ್ಯರನ್ನು ‘ವೈದ್ಯೋ ನಾರಾಯಣೋ ಹರಿಃ’ ಎಂದು ದೇವರ ಸಮಾನವಾಗಿ ಕಾಣುವ ನೆಲ ನಮ್ಮದು. ಆದರೆ, ಬದಲಾದ ಕಾಲಮಾನದಲ್ಲಿ ಈ ದೇವರಲ್ಲೂ ನಕಲಿಗಳು ಹುಟ್ಟಿಕೊಂಡಿದ್ದಾರೆ.

ತಾವು ಓದಿದ ವೈದ್ಯ ಪದವಿಗೆ ಬದಲಾಗಿ ಬೇರೊಂದು ವೈದ್ಯ ಪದ್ಧತಿ ಪ್ರ್ಯಾಕ್ಟೀಸ್ ಮಾಡುವವರು, ನಕಲಿ ದಾಖಲೆ ಸಲ್ಲಿಸಿ ವೈದ್ಯರಾಗುವವರು, ಏಳೆಂಟು ಮಾತ್ರೆಗಳ ಹೆಸರಿನ ಜತೆಗೆ ಇಂಜೆಕ್ಷನ್ ಚುಚ್ಚಲು ಗೊತ್ತಿರುವವರು, ಪಾರಂಪರಿಕ ಅಥವಾ ನಾಟಿ ವೈದ್ಯರ ಮುಖವಾಡ ಧರಿಸಿದವರು, ಖಾಸಗಿ ಆಸ್ಪತ್ರೆಗಳಲ್ಲಿ ಕೆಲ ಕಾಲ ಕೆಲಸದಲ್ಲಿದ್ದವರು ಈ ನಕಲಿ ಜಾಲದಲ್ಲಿದ್ದಾರೆ.

ವ್ಯವಸ್ಥೆಯೇ ಬಂಡವಾಳ: ಮೂಲಸೌಕರ್ಯವಿಲ್ಲದ ಸರ್ಕಾರಿ ಆಸ್ಪತ್ರೆಗಳು, ಏರುತ್ತಿರುವ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕ, ಹೊಣೆಗಾರಿಕೆ ಇಲ್ಲದ ವ್ಯವಸ್ಥೆ ಹಾಗೂ ಜನರ ಅಮಾಯಕತೆಯೇ ನಕಲಿ ವೈದ್ಯರ ಬಂಡವಾಳ. ಕಡಿಮೆ ಹಣದಲ್ಲಿ ಚಿಕಿತ್ಸೆ, ಬೇಗನೆ ಸಿಗುತ್ತಾರೆ ಹಾಗೂ ಶೀಘ್ರ ಗುಣಮುಖರಾಗುತ್ತೇವೆ ಅಂದುಕೊಂಡು ಜನ ಇವರತ್ತ ಹೋಗುತ್ತಾರೆ. ಆದರೆ, ನಕಲಿಗಳ ಹಣದ ಹಪಾಹಪಿತನದ ಅಸಲಿಯತ್ತು ಗೊತ್ತಾಗುವುದು ಅನಾಹುತ ಸಂಭವಿಸಿದಾಗಲೇ.

ಗ್ರಾಮೀಣ ಭಾಗಗಳೂ ಸೇರಿದಂತೆ, ನಗರ– ಪಟ್ಟಣಗಳ ಕೊಳೆಗೇರಿ ಪ್ರದೇಶಗಳು, ಹೊರ ವಲಯದ ಬಡಾವಣೆಗಳು, ಆರ್ಥಿಕವಾಗಿ ಹಿಂದುಳಿದ ಜನ ವಾಸಿಸುವ ಪ್ರದೇಶಗಳೇ ನಕಲಿ ವೈದ್ಯರ ಆವಾಸ ಸ್ಥಾನ. ಇದಲ್ಲದೆ, ಹೆಚ್ಚು ಅಪಘಾತ ಸಂಭವಿಸುವ ಹೆದ್ದಾರಿ ಮತ್ತು ಅಕ್ರಮವಾಗಿ ಗರ್ಭಪಾತ ಮಾಡಿಸಲು ಅನುಕೂಲಕರ ವಾತಾವರಣ ಇರುವ ವರ್ತುಲ ರಸ್ತೆ ಆಸುಪಾಸಿನ ಪ್ರದೇಶಗಳನ್ನೇ ಇವರು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. ಸ್ಥಳೀಯ ಪ್ರಭಾವಿಗಳು, ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಜತೆ ಉತ್ತಮ ಸಂಪರ್ಕ ಇಟ್ಟುಕೊಳ್ಳುವ ಇವರು, ತಮ್ಮ ಬಗ್ಗೆ ಅನುಮಾನ ಬಾರದಂತೆ ಎಚ್ಚರ ವಹಿಸುತ್ತಾರೆ.

ತಡೆಗಿಲ್ಲ ಪ್ರಬಲ ಕಾಯ್ದೆ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ (ಕೆಪಿಎಂಇ) ಖಾಸಗಿ ವೈದ್ಯರು, ನರ್ಸಿಂಗ್ ಹೋಂ, ಕ್ಲಿನಿಕ್‌, ಡಯಾಗ್ನಾಸ್ಟಿಕ್ ಲ್ಯಾಬೋರೇಟರಿ ಹಾಗೂ ಎಕ್ಸ್ ರೇ ಕೇಂದ್ರಗಳು ನೋಂದಣಿ ಮಾಡಿಸುವುದು ಕಡ್ಡಾಯ. ಇಲ್ಲದಿದ್ದರೆ ಅವರೆಲ್ಲರೂ ನಕಲಿ ಎನ್ನುವ ಸರ್ಕಾರ, ಅವರ ನಿಯಂತ್ರಣಕ್ಕೆ ಪ್ರತ್ಯೇಕವಾದ ಕಾಯ್ದೆ ಅಥವಾ ನಿಯಮಗಳನ್ನು ರೂಪಿಸಿಲ್ಲ.

ಬದಲಿಗೆ ಜಿಲ್ಲಾ ಮಟ್ಟದಲ್ಲಿ ಆರೋಗ್ಯಾಧಿಕಾರಿ, ಜಿಲ್ಲಾ ಆಯುಷ್ ಅಧಿಕಾರಿ, ಐಎಂಎ (ಭಾರತೀಯ ವೈದ್ಯಕೀಯ ಸಂಘ) ಹಾಗೂ ಕೆಎಯುಪಿ (ಕರ್ನಾಟಕ ಆಯುರ್ವೇದ ಮತ್ತು ಯುನಾನಿ ಪ್ರ್ಯಾಕ್ಟೀಷನರ್ ಬೋರ್ಡ್‌) ಪ್ರತಿನಿಧಿಗಳನ್ನೊಳಗೊಂಡ ತಂಡಕ್ಕೆ ನಕಲಿ ವೈದ್ಯರನ್ನು ತಡೆಯುವ ಜವಾಬ್ದಾರಿ ವಹಿಸಿದೆ. ಅದರಂತೆ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ತಾಲ್ಲೂಕು ವೈದ್ಯಾಧಿಕಾರಿ ನೇತೃತ್ವದ ತಂಡ ಈ ಕೆಲಸ ಮಾಡಬೇಕು. ಪೂರಕವಾಗಿ ಪೊಲೀಸರು ನೆರವು ಪಡೆಯಬೇಕು.

ಅನಾಹುತವಾದಾಗಷ್ಟೇ ದಾಳಿ: ನಕಲಿ ವೈದ್ಯರ ನಿಯಂತ್ರಣದ ಹೊಣೆ ಹೊತ್ತಿರುವ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ತಂಡಗಳು ಸದಾ ಸಕ್ರಿಯವಾಗಿರುವುದಿಲ್ಲ. ನಕಲಿಗಳಿಂದ ಚಿಕಿತ್ಸೆ ಪಡೆದ ರೋಗಿ ಸತ್ತರೆ, ಬೇರೆ ರೀತಿ ತೊಂದರೆಗಳಾದರೆ ಅಥವಾ ರೋಗಿ ಕಡೆಯವರು ದಾಂದಲೆ ನಡೆಸಿದ ವಿಷಯ ಗೊತ್ತಾದಾಗ ಈ ತಂಡಗಳು ಎಚ್ಚೆತ್ತುಕೊಳ್ಳುತ್ತವೆ. ಘಟನೆ ಮಾಸುವವರೆಗೆ ಒಂದಿಷ್ಟು ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ಬಾಗಿಲು ಮುಚ್ಚಿಸುತ್ತವೆ. ಉಳಿದವರಿಗೆ ನೋಟಿಸ್ ಕೊಟ್ಟು ಸುಮ್ಮನಾಗುತ್ತವೆ.

ಸಾರ್ವಜನಿಕರಿಂದ ನಕಲಿ ವೈದ್ಯರ ಕುರಿತು ದೂರುಗಳನ್ನು ಸ್ವೀಕರಿಸುವ ಪ್ರತ್ಯೇಕ ವ್ಯವಸ್ಥೆಯೂ ಇಲ್ಲ. ಇಂತಹ ಅವ್ಯವಸ್ಥೆಯ ಲಾಭ ಪಡೆಯುವ ವೈದ್ಯರು, ಪ್ರತಿ ತಿಂಗಳು ಸರ್ಕಾರಿ ಅಧಿಕಾರಿಗಳ ಕೈ ಬಿಸಿ ಮಾಡಿ, ಅವರನ್ನೇ ತಮ್ಮ ದಂಧೆಗೆ ರಕ್ಷೆಯಾಗಿಸಿಕೊಳ್ಳುತ್ತಾರೆ. ಈ ವ್ಯೂಹವನ್ನು ಮೀರಿ, ನಕಲಿ ವೈದ್ಯರ ಪ್ರಕರಣಗಳು ಬೆಳಕಿಗೆ ಬಂದರೆ ಅಲ್ಲೇನಾದರೂ ಅನಾಹುತವಾಗಿದೆ ಎಂದರ್ಥ.

ಬಲಿಷ್ಠ ಕಾಯ್ದೆ ಬೇಕು

ನಕಲಿ ವೈದ್ಯರ ತಡೆಗಾಗಿ ಇಂಡಿಯನ್ ಮೆಡಿಕಲ್ ಕೌನ್ಸಿಲ್ (ಐಎಂಸಿ) ಒತ್ತಡದಿಂದಾಗಿ, ಸಂಸತ್ತು ಮಸೂದೆಯೊಂದನ್ನು ಸಿದ್ಧಪಡಿಸಿತ್ತು. ಆದರೆ, ಅದು ಮಂಡನೆಯಾಗಲೇ ಇಲ್ಲ. ಇದರ ಹಿಂದೆ ಕಾಣದ ಪ್ರಭಾವಿ ಶಕ್ತಿಗಳು ಕೆಲಸ ಮಾಡಿವೆ. ಬಲಿಷ್ಠ ಕಾಯ್ದೆಯಿಂದ ಮಾತ್ರ ನಕಲಿ ವೈದ್ಯರನ್ನು ಮಟ್ಟ ಹಾಕಲು ಸಾಧ್ಯ. ನಕಲಿಗಳ ತಡೆಗೆ ಐಎಂಎ ಬಳಿ ಯಾವುದೇ ನಿಯಮ ಇಲ್ಲ. ಬದಲಿಗೆ, ಸರ್ಕಾರದ ಪ್ರಯತ್ನಕ್ಕೆ ನಾವು ಕೈ ಜೋಡಿಸುತ್ತೇವೆ.

–ಡಾ. ತಿಮ್ಮಪ್ಪ, ನಕಲಿ ವೈದ್ಯ ವಿರೋಧಿ ಸಮಿತಿ ಮುಖ್ಯಸ್ಥ, ಐಎಂಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.