ರಾಜ್ಯದಾದ್ಯಂತ ಈ ನಕಲಿಗಳ ಹಾವಳಿ ಮೇರೆ ಮೀರಿದೆ. ಐಎಂಎ, ಕೆಎಂಸಿ ಕಣ್ಗಾವಲಿದ್ದರೂ ವ್ಯವಸ್ಥೆಯ ಲೋಪಗಳ ಲಾಭ ಪಡೆಯುತ್ತಿರುವ ನಕಲಿಗಳು ಅಸಲಿ ವೈದ್ಯರೇ ಬೆಚ್ಚಿ ಬೀಳುವಂತೆ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ..!
ಬಾಗಲಕೋಟೆ:ಮದ್ದು ಕುಡಿದ ತಕ್ಷಣ ಎದ್ದು ಕೂರಬೇಕು. ಕಾಯಿಲೆ ಎಂದು ವಿಶ್ರಾಂತಿ ಪಡೆದಷ್ಟು ದಿನ ದುಡಿಮೆ ಹಾಳು ಎಂಬ ಜನಸಾಮಾನ್ಯರ ಅಸಹಾಯಕ ಭಾವವೇ ನಕಲಿ ವೈದ್ಯರಿಗೆ ಬಂಡವಾಳ.
ಇವರು ಕೊಡುವ ಹೈಡೋಸ್ ಔಷಧ ಹಾಸಿಗೆಯಿಂದ ತಕ್ಷಣ ಎದ್ದು ಕೂರಿಸುತ್ತದೆ. ಅದರಿಂದ ಆಗಬಹುದಾದ ಅಡ್ಡಪರಿಣಾಮಗಳ (ಸೈಡ್ ಎಫೆಕ್ಟ್) ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಚಿಕಿತ್ಸೆ ಪಡೆಯುವವರಿಗೂ ಆ ಬಗ್ಗೆ ಅರಿವು ಇರುವುದಿಲ್ಲ. ‘ವೈದ್ಯರ ಕೈಗುಣ ಚಲೋ ಐತಿ. ಅವರು ಮುಟ್ಟಿದ್ದಕ್ಕೆ ಕಾಯಿಲೆ ದೂರವಾಯಿತು’ ಎಂಬ ಶ್ಲಾಘನೆ ಮಾತು ಬಾಯಿಂದ ಬಾಯಿಗೆ ಹರಡಿ ನಕಲಿಗಳ ಜೇಬು ತುಂಬುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿ ಕೃಷಿಕರು, ಕೃಷಿ ಕೂಲಿಕಾರ್ಮಿಕರು, ನಗರದಲ್ಲಿ ಬಡತನ ರೇಖೆಗಿಂತ ಕೆಳಗಿರುವವರೇ ನಕಲಿ ವೈದ್ಯರಿಗೆ ದೊಡ್ಡ ಸಂಖ್ಯೆಯ ಅವಲಂಬಿತರು. ಇವರೆಲ್ಲಾ ಮುಂಜಾನೆ ದುಡಿಯಲು ಹೋಗಿ ಸಂಜೆಗೆ ಮನೆಗೆ ಮರಳುವ ಜನ. ಅಷ್ಟೊತ್ತಿಗೆ ಊರ ಆಸ್ಪತ್ರೆಯಲ್ಲಿನ ಎಂಬಿಬಿಎಸ್ ಡಾಕ್ಟರು ಕೆಲಸ ಮುಗಿಸಿ ಮನೆಗೆ ಹೋಗಿರುತ್ತಾರೆ. ಕೆಲವೊಂದು ಕಡೆ ಆಸ್ಪತ್ರೆ ಇದ್ದರೂ ವೈದ್ಯರು ಇರುವುದಿಲ್ಲ.
ಚಿಕಿತ್ಸೆ ಪಡೆಯಲು ದೂರದ ಪಟ್ಟಣ, ಇಲ್ಲವೇ ನಗರಕ್ಕೆ ಹೋಗಬೇಕು. ಅದಕ್ಕಾಗಿ ಕೆಲಸಕ್ಕೆ ರಜೆ ಹಾಕಬೇಕು. ಕಾಯಿಲೆ ಗಂಭೀರತೆ ಅವಲಂಬಿಸಿ ಅಲ್ಲಿನ ವೈದ್ಯರು ಒಂದೆರಡು ದಿನ ವಿಶ್ರಾಂತಿಗೂ ಸಲಹೆ ನೀಡುತ್ತಾರೆ. ಆಗ ಅಷ್ಟು ದಿನದ ಕೂಲಿ ಕೂಡ ನಷ್ಟ. ಆದರೆ ನಕಲಿ ವೈದ್ಯರ ಚಿಕಿತ್ಸಾ ಕ್ರಮ ಅದಕ್ಕೆ ವ್ಯತಿರಿಕ್ತ. 24x7 ರೋಗಿಗಳಿಗೆ ಲಭ್ಯವಿರುತ್ತಾರೆ. ಅದೂ ಸಂಜೆ ವಿರಾಮದ ಅವಧಿಯಲ್ಲೇ ಸಿಗುತ್ತಾರೆ. ಕೊಟ್ಟಷ್ಟು ಹಣ ತೆಗೆದುಕೊಂಡು ಆಪತ್ತಿಗೆ ಒದಗಿ ಬರುವ ಈ ನೆಂಟರೇ ರೋಗಿಗಳಿಗೆ ಆಪ್ತರು.
ಬದಲಾದ ಕಾರ್ಯಶೈಲಿ: ತಮ್ಮ ಬಗ್ಗೆ ಚರ್ಚೆ, ಮಾಧ್ಯಮಗಳ ವರದಿಯ ನಂತರ ಅಧಿಕಾರಿಗಳು ನಡೆಸುವ ದಾಳಿ, ಪೊಲೀಸ್ ಕೇಸ್‌ಗಳಾದ ನಂತರ ನಕಲಿ ವೈದ್ಯರು ಜಿಲ್ಲೆಯಲ್ಲಿ ತಮ್ಮ ಕಾರ್ಯಶೈಲಿಯನ್ನೇ ಬದಲಾಯಿಸಿದ್ದಾರೆ.
ಮೊದಲಿನಂತೆ ಕ್ಲಿನಿಕ್ ತೆರೆದು ಬೋರ್ಡ್ ಹಾಕಿ ರೋಗಿಗಳು ಬರುವಿಕೆಗೆ ಕಾದು ಕುಳಿತುಕೊಳ್ಳುವುದಿಲ್ಲ. ಬದಲಿಗೆ ಬ್ಯಾಗ್ ತುಂಬಾ ಔಷಧಿ, ಸಿರಿಂಜ್, ಐವಿ ಸೆಟ್ ಇಟ್ಟುಕೊಂಡು ಮನೆ ಮನೆಗೆ ಎಡತಾಕುತ್ತಿದ್ದಾರೆ. ಕೆಲವರು ಕಾರು, ಟೆಂಪೊಗಳನ್ನೇ ಮೊಬೈಲ್ ಕ್ಲಿನಿಕ್ ರೀತಿ ಬಳಕೆ ಮಾಡುತ್ತಿದ್ದಾರೆ. ಪರಿಚಯಸ್ಥರ ಮನೆಯ ಕೊಠಡಿಯೂ ತಾತ್ಕಾಲಿಕ ಕ್ಲಿನಿಕ್ ಆಗುತ್ತಿದೆ.
‘ಬದಲಾದ ಈ ಕಾರ್ಯಶೈಲಿಯಿಂದಾಗಿ ಅವರನ್ನು ಪ್ರಶ್ನೆ ಮಾಡಲು ಆಗುತ್ತಿಲ್ಲ. ನಿರ್ದಿಷ್ಟ ದೂರು ಬಂದಲ್ಲಿ ಇಲ್ಲವೇ ಸ್ಟಿಂಗ್ ಆಪರೇಶನ್ ಮೂಲಕ ಪತ್ತೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ 14 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ಹೇಳುತ್ತಾರೆ.
ಇದನ್ನೂ ಓದಿ:ರಾಜ್ಯದಲ್ಲಿ ನಕಲಿ ವೈದ್ಯರ ವಿಷವರ್ತುಲ
ಬಿಜೆಪಿ – ಕಾಂಗ್ರೆಸ್ ಡಾಕ್ಟರ್! : ಹಳ್ಳಿ ಜನರೊಂದಿಗೆನಿರಂತರ ಒಡನಾಟದ ಕಾರಣ ನಕಲಿ ವೈದ್ಯರು ಬಹಳ ಬೇಗ ರಾಜಕೀಯ ಪಕ್ಷಗಳ ಸಂಪರ್ಕಕ್ಕೂ ಬರುತ್ತಿದ್ದಾರೆ. ಜನರ ನಾಡಿಮಿಡಿತ, ಒಲವು– ನಿಲುವು ಅರಿತಿರುವ ಅವರನ್ನು ತಮ್ಮ ಪರ ‘ಪ್ರಭಾವ ಗುಂಪು’ಗಳಾಗಿಯೂರಾಜಕೀಯ ಮುಖಂಡರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಕಷ್ಟ ಕಾಲದಲ್ಲಿಅವರ ಕೈ ಹಿಡಿಯುತ್ತಾರೆ.
ಗುಳೇದಗುಡ್ಡ ಸಮೀಪದ ಹಳ್ಳಿಯೊಂದಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡ ನಕಲಿ ವೈದ್ಯರಿಬ್ಬರು ಚಿಕಿತ್ಸೆ ನೀಡಲು ಬರುತ್ತಾರೆ. ಆಯಾ ಪಕ್ಷದ ಬೆಂಬಲಿಗರು ಅವರ ಬಳಿ ಹೋಗುತ್ತಾರೆ. ತಮ್ಮವರಿಗೆ ಕೆಲವೊಮ್ಮೆ ಉಚಿತವಾಗಿ ಔಷಧಿಕೊಟ್ಟರೆ, ಸಾಲ ಬರೆಸಿಯೂ ಚಿಕಿತ್ಸೆ ಪಡೆಯಲು ಅವಕಾಶ ಕೊಟ್ಟಿದ್ದಾರೆ. ಆದರೆ ಎದುರಾಳಿ ಪಕ್ಷದಲ್ಲಿ ಗುರುತಿಸಿಕೊಂಡವರು ಮಾತ್ರ ಚಿಕಿತ್ಸೆ ಪಡೆದು ಸಂಪೂರ್ಣ ಹಣ ತೆರಬೇಕು.
ತಮ್ಮ ವೃತ್ತಿಗೆ ತೊಂದರೆ ಎದುರಾಗುವುದನ್ನು ತಡೆಯಲು ಈ ನಕಲಿ ವೈದ್ಯರು ಇತ್ತೀಚೆಗೆ ಸಂಘಟಿತರಾಗಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಘಟನೆ ಹುಟ್ಟುಹಾಕಿದ್ದಾರೆ. ಅದು ಜಿಲ್ಲಾ ಮಟ್ಟದಲ್ಲೂ ಶಾಖೆ ಹೊಂದಿದೆ.
ತಮ್ಮ ತಂಟೆಗೆ ಯಾರೂ ಬಾರದಂತೆ ನೋಡಿಕೊಳ್ಳಲು ಆಯಕಟ್ಟಿನವರಿಗೆ ಪ್ರತಿ ತಿಂಗಳು ಮಾಮೂಲಿ ನಿಗದಿಪಡಿಸಿದ್ದಾರೆ. ಇದಕ್ಕಾಗಿ ಸಂಘಟನೆಯ ಸದಸ್ಯರ ಪ್ರಾಕ್ಟೀಸ್ ಅವಲಂಬಿಸಿ ₹500ರಿಂದ ₹5 ಸಾವಿರವರೆಗೆ ವಂತಿಗೆ ಸಂಗ್ರಹಿಸಲಾಗುತ್ತಿದೆ. ‘ನಮ್ಮವರು ನಾಳೆ ಅವರ ವಿರುದ್ಧ ದಾಳಿ ಸಂಘಟಿಸಿದಲ್ಲಿ, ಅವರಿಗೆಇಂದೇ ಮಾಹಿತಿ ದೊರೆಯುತ್ತದೆ. ಅಷ್ಟೊಂದು ಪ್ರಾಬಲ್ಯ ಸಾಧಿಸಿದ್ದಾರೆ. ಜನ ಬೆಂಬಲ, ರಾಜಕೀಯ ಶ್ರೀರಕ್ಷೆ ಹೊಂದಿರುವ ಕಾರಣ ಅವರನ್ನು ಮುಟ್ಟುವುದು ಜೇನುಗೂಡಿಗೆ ಕೈ ಹಾಕಿದಂತೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.
ಮಧ್ಯವರ್ತಿಯಾಗಿಯೂ ಕೆಲಸ: ಯಾವುದಾದರೂ ಸಾಮಾನ್ಯ ಪದವಿ ಓದಿ ಇಲ್ಲವೇ ಎಸ್‌ಎಸ್‌ಎಲ್‌ಸಿ, ಪಿಯುಸಿ ಮುಗಿಸಿದವರು ಪಟ್ಟಣದ ಖಾಸಗಿ ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್ ಹೋಂಗಳಲ್ಲಿ ಕೆಲಕಾಲ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಅಲ್ಲಿ ಇಂಜೆಕ್ಷನ್ ಮಾಡುವುದು ಕಲಿತು, ಜ್ವರ, ಕೆಮ್ಮು, ಶೀತ, ನೆಗಡಿ, ವಾಂತಿ– ಭೇದಿಗೆ ಸಾಮಾನ್ಯವಾಗಿ ಕೊಡುವ ಔಷಧಿ ಬಗ್ಗೆ ತಿಳಿದುಕೊಂಡು ಹಳ್ಳಿಗಳಿಗೆ ವೈದ್ಯರ ವೇಷದಲ್ಲಿ ಬರುತ್ತಾರೆ. ಹೀಗೆ ಬಂದವರು ತಾವು ಕೆಲಸ ಮಾಡಿದ್ದ ಆಸ್ಪತ್ರೆಗಳೊಂದಿಗೆ ನಂಟು ಮುಂದುವರೆಸಿ ಅಲ್ಲಿಗೆ ರೋಗಿಗಳನ್ನು ಕಳುಹಿಸುವ ‘ಮಧ್ಯವರ್ತಿ’ ಕೆಲಸ ಮಾಡುತ್ತಾರೆ.
ನಾಡಿ ಹಿಡಿದು ಕ್ಯಾನ್ಸರ್, ಏಡ್ಸ್‌ಗೆ ಚಿಕಿತ್ಸೆ!
ಬಾಗಲಕೋಟೆ ಸಮೀಪದ ಸೀಮಿಕೇರಿಯಲ್ಲಿ ವರ್ಷದ ಹಿಂದೆ ಹೊಸಪೇಟೆಯಿಂದ ಬಂದು ಬಾಡಿಗೆ ಕೊಠಡಿಯಲ್ಲಿ ಕ್ಲಿನಿಕ್ ತೆಗೆದಿದ್ದ ಸ್ವಯಂಘೋಷಿತ ನಾಡಿ ವೈದ್ಯನೊಬ್ಬನ ಕ್ಲಿನಿಕ್ ಎದುರು ರೋಗಿಗಳು ಸಾಲುಗಟ್ಟುತ್ತಿದ್ದರು. ಫೀಸು ಎಂದು ₹200 ಪಡೆಯುತ್ತಿದ್ದ ಆತ ರೋಗಿಯ ನಾಡಿ ಹಿಡಿದು ಔಷಧ, ಊಟೋಪಚಾರದ ಪಥ್ಯ ಹೇಳುತ್ತಿದ್ದ.
ವಿಷಯ ತಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ಕ್ಲಿನಿಕ್ ಮೇಲೆ ದಾಳಿ ನಡೆಸಿದರು. ಅಲ್ಲಿ ರೋಗಿಗಳ ಸಾಲು ಕಂಡು ಅವರಿಗೆ ಅಚ್ಚರಿಯಾಗಿತ್ತು. ಎಚ್‌ಐವಿ, ಕ್ಯಾನ್ಸರ್ ಸೇರಿದಂತೆ ವಿವಿಧ ಮಾರಕ ರೋಗಗಳಿಂದ ಬಳಲುತ್ತಿರುವವರು ಅಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದರು.
ಕ್ಲಿನಿಕ್‌ಗೆ ಬಾಗಿಲು ಹಾಕಿಸಿದ ಡಿಎಚ್‌ಒ, ವೈದ್ಯನನ್ನು ವಿಚಾರಣೆಗೊಳಪಡಿಸಿದಾಗ ಆತನ ಬಳಿ ಇದ್ದ ಚೆನ್ನೈನ ಸಂಸ್ಥೆಯೊಂದರ ಸರ್ಟಿಫಿಕೇಟ್ ಕೂಡ ಖೊಟ್ಟಿ ಎಂಬುದು ಗೊತ್ತಾಯಿತು. ವಿಶೇಷವೆಂದರೆ ಸೀಮಿಕೇರಿಯಿಂದ ಒಕ್ಕಲೆದ್ದ ಆ ನಾಡಿ ವೈದ್ಯ ಕೆಲ ದಿನಗಳ ನಂತರ ಬೀಳಗಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಮತ್ತೆ ಪ್ರಾಕ್ಟೀಸ್ ಆರಂಭಿಸಿದ್ದ. ಡಿಎಚ್‌ಒ ಅಲ್ಲಿಗೆ ತೆರಳಿದರೆ ಜನಪ್ರತಿನಿಧಿಯೊಬ್ಬರ ನೇತೃತ್ವದಲ್ಲಿ ಊರಿನವರೇ ಆ ವೈದ್ಯನ ಪರ ನಿಂತಿದ್ದರು.
‘ನಿಮ್ಮ ಅನುಮತಿಯ ಅಗತ್ಯವಿಲ್ಲ. ನಮ್ಮ ರಿಸ್ಕ್‌ನಲ್ಲಿಯೇ ನಾವು ಚಿಕಿತ್ಸೆ ಪಡೆಯುತ್ತೇವೆ’ ಎಂದು ಡಿಎಚ್‌ಒಗೆ ದಬಾಯಿಸಿ ಊರಿನವರು ವಾಪಸ್ ಕಳುಹಿಸಿದ್ದರು. ಇದು ನಕಲಿ ವೈದ್ಯರ ಹಾವಳಿಗೆ ಚಿಕ್ಕ ಸ್ಯಾಂಪಲ್.
ವೈದ್ಯ ಪದವೀಧರರಿಗೆ ಮಾತ್ರ ಅವಕಾಶ
ಬಾಗಲಕೋಟೆ: ‘ಅಲೋಪಥಿ ಪದ್ಧತಿಯಡಿ ಚಿಕಿತ್ಸೆ ನೀಡಲು ಕನಿಷ್ಠ ಎಂಬಿಬಿಎಸ್ ಪದವಿ ಪಡೆದಿರಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ಹೇಳುತ್ತಾರೆ.
‘ಅವರೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಅಡಿ (ಕೆಪಿಎಂ) ನೋಂದಣಿ ಮಾಡಿಸಿಕೊಂಡಿರಬೇಕು. ಅಲ್ಲಿ ಕೊಟ್ಟ ಪ್ರಮಾಣ ಪತ್ರವನ್ನು ಚಿಕಿತ್ಸೆ ನೀಡುವ ಸ್ಥಳದಲ್ಲಿ ಸಾರ್ವಜನಿಕವಾಗಿ ಕಾಣುವಂತೆ ಪ್ರದರ್ಶಿಸಬೇಕು’ ಎನ್ನುತ್ತಾರೆ.
‘ಆಯುರ್ವೇದ, ಯುನಾನಿ, ಹೋಮಿಯೋಪಥಿ ಓದಿರುವವರಿಗೂ ಅಲೋಪಥಿಯಡಿ ಚಿಕಿತ್ಸೆ ನೀಡಲು ಅವಕಾಶವಿಲ್ಲ’ ಎಂದು ಹೇಳುವ ಡಾ.ದೇಸಾಯಿ, ‘ಕೆಪಿಎಂ ಕಾಯ್ದೆಯಡಿ ನೋಂದಾಯಿತ ವೈದ್ಯಕೀಯ ವೃತ್ತಿನಿರತರಿಗೆ (ಆರ್‌ಎಂಪಿ) ಮನ್ನಣೆಯೇ ಇಲ್ಲ’ ಎಂದು ಸ್ಪಷ್ಟಪಡಿಸುತ್ತಾರೆ.
‘ಈ ಹಿಂದೆ ಎಂಬಿಬಿಎಸ್ ವೈದ್ಯರು ಅಗತ್ಯ ಸಂಖ್ಯೆಯಲ್ಲಿ ಇಲ್ಲದ ಕಾರಣಕ್ಕೆ ಆರ್‌ಎಂಪಿಗಳಿಗೆ ಅವಕಾಶ ನೀಡಲಾಗಿತ್ತು.ಈಗ ಕಾನೂನಾತ್ಮಕವಾಗಿ ಆ ಪದಕ್ಕೆ ಮನ್ನಣೆಯೇ ಇಲ್ಲ’ ಎಂದು ತಿಳಿಸಿದರು.
ದೇಶದ ಗಮನ ಸೆಳೆದಿದ್ದ ಅಸ್ಲಂ ಬಾಬಾ!
ಬಾಗಲಕೋಟೆ: ನಕಲಿ ವೈದ್ಯರ ಹಾವಳಿ ಬಗ್ಗೆ ಮಾತಾಡುವಾಗ ನಗರದಲ್ಲಿ 16 ವರ್ಷಗಳ ಹಿಂದೆ ಅಸ್ಲಂ ಬಾಬಾ ನೀಡುತ್ತಿದ್ದ ಚಿಕಿತ್ಸಾ ಪದ್ಧತಿಯು ಚರ್ಚೆಯ ಮುನ್ನೆಲೆಗೆ ಬರುತ್ತದೆ.
ಇಲ್ಲಿನ ಹಳೆಪೇಟೆಯಲ್ಲಿ ಕಸಾಯಿಖಾನೆ ನಡೆಸುತ್ತಿದ್ದ ಅಸ್ಲಂ ಬಾಬಾ, ನಂತರ ಆ ಕೆಲಸ ಬಿಟ್ಟು ಇಲ್ಲಿನ ರೈಲು ನಿಲ್ದಾಣದ ಹಿಂಭಾಗದ ಸಣ್ಣ ಕೋಲಿಯಲ್ಲಿ ಕ್ಲಿನಿಕ್ ತೆರೆದು ತನ್ನದೇ ರೀತಿಯ ಚಿಕಿತ್ಸಾ ಪದ್ಧತಿ ಆರಂಭಿಸಿದ್ದ.
ಬ್ಲೇಡ್‌ನಿಂದ ಹೊಟ್ಟೆಯ ಮೇಲೆ ಸಣ್ಣ ಗೀರು ಎಳೆದಂತೆ ಮಾಡಿ ಒಳಗಿನಿಂದ ರಕ್ತ ತುಂಬಿದ ಮಾಂಸದ ಗೆಡ್ಡೆ ತೆಗೆಯುತ್ತಿದ್ದ. ಬೆನ್ನು ನೋವು ಎಂದವರಿಗೆ ಮಂತ್ರ ಪಠಿಸಿ ಕುರ್ಚಿಯಿಂದ ಬೆನ್ನ ಮೇಲೆ ಬಾರಿಸಿ ಚಿಕಿತ್ಸೆ ನೀಡುತ್ತಿದ್ದ. 2001ರಿಂದ 2003ರವರೆಗೆ ದೇಶದ 20 ರಾಜ್ಯಗಳ ಸಾವಿರಾರು ಜನರು ಅಸ್ಲಂ ಬಾಬಾನ ಬಳಿ ಬಂದಿದ್ದರು. ಬಾಗಲಕೋಟೆಯ ಲಾಡ್ಜ್‌ಗಳಲ್ಲಿ ಉಳಿಯಲು ಕೊಠಡಿ ಸಿಗುವುದೇ ದುಸ್ತರವಾಗಿತ್ತು. ಆಗ ಖ್ಯಾತಿಯ ಉತ್ತುಂಗದಲ್ಲಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಚಿಕಿತ್ಸೆಗಾಗಿ ತನ್ನ ಅಮ್ಮನೊಂದಿಗೆ ಬಾಬಾನ ಹುಡುಕಿಕೊಂಡು ಬಂದಿದ್ದರು. ಅದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.
ಬಾಬಾನ ಚಿಕಿತ್ಸಾ ಪದ್ಧತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಬೆಂಗಳೂರಿನ ವಕೀಲರೊಬ್ಬರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸ್ಥಳೀಯರಿಂದಲೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಯಾವುದೇ ವೈಜ್ಞಾನಿಕ ಉಪಕರಣದ ನೆರವು ಇಲ್ಲದೇ ಬಹಿರಂಗವಾಗಿ ಆಪರೇಷನ್ ಮಾಡಿ ತೋರಿಸುವಂತೆ ಜಿಲ್ಲಾಡಳಿತ ಕೂಡ ಅಸ್ಲಂ ಬಾಬಾನಿಗೆ ಸವಾಲು ಒಡ್ಡಿತ್ತು. ಅದಕ್ಕಾಗಿ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಸಮಯ ಕೂಡ ನಿಗದಿಪಡಿಸಿತ್ತು. ಮೊದಲು ಅದಕ್ಕೆ ಒಪ್ಪಿಕೊಂಡಿದ್ದ ಬಾಬಾ ಕೊನೆಗೆ ಹಿಂದೆ ಸರಿದಿದ್ದ. ವಂಚನೆ ಆರೋಪದ ಮೇಲೆ ಮುಂದೆ ಪೊಲೀಸರು ಬಂಧಿಸಿದ್ದರು. ನಂತರ ಆತನ ಆಸ್ತಿ ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ಬಾಬಾ ಈಗಲೂ ಅಜ್ಞಾತ ವಾಸದಲ್ಲಿಯೇ ಇದ್ದಾನೆ.
ನಿಯಂತ್ರಣಕ್ಕೆ ಸರ್ಕಾರ ಏನು ಮಾಡಬೇಕು?
*ಆರೋಗ್ಯ ಇಲಾಖೆ, ಪೊಲೀಸ್ ಹಾಗೂ ಖಾಸಗಿ ವೈದ್ಯರ ಸಂಘದ ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆಯನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ರಚಿಸಿ, ನಕಲಿ ವೈದರ ಮೇಲೆ ಸದಾ ಕಣ್ಣೀಡಬೇಕು.
*ಗ್ರಾಮ ಪಂಚಾಯ್ತಿಯಿಂದ ಜಿಲ್ಲಾ ಮಟ್ಟದವರೆಗೆ ನಕಲಿ ವೈದ್ಯರ ವಿರುದ್ಧ ಸಾರ್ವಜನಿಕರು ದೂರು ನೀಡುವ ವ್ಯವಸ್ಥೆ ಜಾರಿಯಾಗಬೇಕು. ಅವುಗಳ ಪರಿಶೀಲನೆ ನಿರಂತರವಾಗಿ ನಡೆಯಬೇಕು.
*ವೈದ್ಯರ ಪ್ರಾಕ್ಟೀಸ್‌ಗೆ ಪರವಾನಗಿ ನೀಡುವಾಗ ಹಾಗೂ ಐದು ವರ್ಷಕ್ಕೊಮ್ಮೆ ನವೀಕರಣ ಮಾಡುವಾಗ ವೈದ್ಯರ ಎಲ್ಲಾ ಪ್ರಮಾಣ ಪತ್ರಗಳನ್ನು ಮರುಪರಿಶೀಲನೆ ನಡೆಸಬೇಕು.
*ಹೊರ ರಾಜ್ಯಗಳ ವೈದ್ಯ ಪ್ರಮಾಣ ಪತ್ರ ಪಡೆದು, ಕರ್ನಾಟಕದಲ್ಲಿ ಪ್ರಾಕ್ಟೀಸ್ ಮಾಡುವವರ ಮೇಲೆ ನಿಗಾ ವಹಿಸಬೇಕು. ಆ ದಾಖಲೆಗಳ ಸಾಚಾತನ ಪರಿಶೀಲಿಸಬೇಕು.
*ನಕಲಿ ವೈದರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಜೈಲಿಗೆ ಕಳಿಸಬೇಕು. ಮುಂದೆ ಪ್ರಾಕ್ಟೀಸ್ ಮಾಡದಂತೆ ಆಜೀವ ನಿಷೇಧ ಹೇರಬೇಕು.
ಸಾರ್ವಜನಿಕರು ಏನು ಮಾಡಬೇಕು?
*ವೈದ್ಯರ ಚಿಕಿತ್ಸಾ ವಿಧಾನ ಹಾಗೂ ನೀಡುವ ಔಷಧಗಳ ಬಗ್ಗೆ ಅನುಮಾನವಿದ್ದಲ್ಲಿ ತಾಲ್ಲೂಕು/ಜಿಲ್ಲಾ ವೈದ್ಯಾಧಿಕಾರಿಗೆ ದೂರು ನೀಡಬೇಕು.
*ಕ್ಲಿನಿಕ್ ಅಥವಾ ಆಸ್ಪತ್ರೆಯಲ್ಲಿ ವೈದ್ಯನು ಕೆಪಿಎಂಇ ಕಾಯ್ದೆಯಡಿ ನೋಂದಣಿ ಮಾಡಿಸಿದ ಪ್ರಮಾಣ ಪತ್ರ ಸೇರಿದಂತೆ, ಕ್ಲಿನಿಕ್ ನಡೆಸಲು ಸ್ಥಳೀಯ ಆಡಳಿತದಿಂದ ಪಡೆದಿರುವ ಪರವಾನಗಿಯನ್ನು ಆಸ್ಪತ್ರೆಯಲ್ಲಿ ಕಾಣುವಂತೆ ಪ್ರದರ್ಶಿಸಿದ್ದಾನೆಯೇ ಇಲ್ಲವೇ ಎಂಬುದನ್ನು ಗಮನಿಸಬೇಕು.
*ಖಾಸಗಿ ವೈದ್ಯರು ಬರೆದುಕೊಡುವ ಚೀಟಿಯನ್ನು ಜೋಪಾನವಾಗಿಟ್ಟುಕೊಳ್ಳಬೇಕು. ಸರ್ಕಾರಿ ವೈದ್ಯರ ಬಳಿಗೆ ಹೋದಾಗ, ಆ ಚೀಟಿಯನ್ನು ತೋರಿಸಬೇಕು.
*ವೈದ್ಯನೆಂದು ಹೇಳಿಕೊಂಡು ಹಳ್ಳಿಗೆ ಬಂದು ಚಿಕಿತ್ಸೆ ನೀಡುವವರಿಂದ ದೂರವಿರಬೇಕು. ಅಂತಹವರ ಪೂರ್ವಾಪರ ವಿಚಾರಿಸಿ, ತಾಲ್ಲೂಕು ವೈದ್ಯಾಧಿಕಾರಿಗೆ ದೂರು ಕೊಡಬೇಕು.
*ರ‍್ಯಾಪರ್ ಇಲ್ಲದ ಮಾತ್ರೆ ಸೇರಿದಂತೆ ಯಾವುದೇ ರೀತಿಯ ಔಷಧಗಳನ್ನು ಸ್ವೀಕರಿಸಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.