ಸರ್ಕಾರದ ಸಬ್ಸಿಡಿ ಹಣ ಕಬಳಿಸುವ ಏಕೈಕ ಉದ್ದೇಶವಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಸಿನಿಮಾಗಳಿಂದಾಗಿ ಕನ್ನಡ ಚಿತ್ರರಂಗದಲ್ಲಿ ಗಟ್ಟಿ ಕಾಳಿಗಿಂತ ಜೊಳ್ಳಿನ ರಾಶಿ ಬೆಳೆಯುತ್ತಿದೆ. ಗುಣಾತ್ಮಕ ಸಿನಿಮಾಗಳ ಸಬ್ಸಿಡಿ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆಯ ಹಣ ಲೂಟಿಯಾಗುತ್ತಿರುವುದರ ಸುತ್ತ ಈ ವಾರದ ಒಳನೋಟ...
ಬೆಂಗಳೂರು: ಒಂದೊಂದು ಸಿನಿಮಾಕ್ಕೆ ಬರೇ ಎರಡರಿಂದ ರಿಂದ ಮೂರು ಲಕ್ಷ ಲಂಚ ಬಿಸಾಡಿದರೆ ಸಾಕು ₹10 ಲಕ್ಷದಿಂದ₹25 ಲಕ್ಷ ಸಬ್ಸಿಡಿ ಗ್ಯಾರೆಂಟಿ ಎನ್ನುವ ಮಾತು ಈಗ ಗಾಂಧಿನಗರದಲ್ಲಿ ಜನಜನಿತವಾಗಿದೆ. ಅಷ್ಟರ ಮಟ್ಟಿಗೆ ‘ಸಿನಿಮಾಕ್ಕಾಗಿ ಸಬ್ಸಿಡಿ’ ಹೋಗಿ, ‘ಸಬ್ಸಿಡಿಗಾಗಿ ಸಿನಿಮಾ’ ಮಾತು ಚಾಲ್ತಿಗೆ ಬಂದಿದೆ.
ಕನ್ನಡ ಚಿತ್ರರಂಗವನ್ನು ಗುಣಾತ್ಮಕವಾಗಿ ಬೆಳೆಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಗುಣಾತ್ಮಕ ಸಿನಿಮಾಗಳಿಗೆ ಸಹಾಯ ಧನ (ಸಬ್ಸಿಡಿ) ನೀಡುತ್ತಾ ಬಂದಿದೆ.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರತಿ ವರ್ಷ ಗುಣಾತ್ಮಕ ಸಿನಿಮಾಗಳನ್ನುಗುರುತಿಸಿ, ಸಬ್ಸಿಡಿ ನೀಡುತ್ತಿದೆ. ಆದರೆ, ಈ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮರೆಯಾಗಿ, ರಾಜಕೀಯ ಲಾಬಿ, ಪ್ರಭಾವ, ಲಂಚ ನುಸುಳಿದೆ.
2005ರವರೆಗೆ ಇಪ್ಪತ್ತು ಸಿನಿಮಾಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿತ್ತು. ಈಗ 125 ಸಿನಿಮಾಗಳಿಗೆ ಸಬ್ಸಿಡಿ ಸಿಗುತ್ತಿದೆ. ಗುಣಾತ್ಮಕ ಚಿತ್ರಗಳ ಸಬ್ಸಿಡಿ ಮೊತ್ತ ₹5 ರಿಂದ₹10 ಲಕ್ಷಕ್ಕೆ, ಮಕ್ಕಳ ಚಲನಚಿತ್ರ ಮತ್ತುಚಾರಿತ್ರಿಕ ಚಿತ್ರಗಳ ಸಬ್ಸಿಡಿ ₹25 ಲಕ್ಷಕ್ಕೆ ಏರಿಕೆಯಾದ ಬಳಿಕ ಸಬ್ಸಿಡಿ ಹಂಚಿಕೆ ದಂಧೆಯ ರೂಪ ಪಡೆದುಕೊಂಡಿದೆ.
ಐದಾರು ದಶಕಗಳ ಹಿಂದೆ ವರ್ಷಕ್ಕೆ ಹೆಚ್ಚೆಂದರೆ ಇಪ್ಪತ್ತೋ, ಮೂವತ್ತೋ ಚಿತ್ರ ನಿರ್ಮಾಣವಾಗುತ್ತಿದ್ದವು. ಈಗ ವರ್ಷಕ್ಕೆ 280 ರಿಂದ 300 ಚಿತ್ರಗಳನ್ನು ನಿರ್ಮಿಸುವ ದೊಡ್ಡ ಚಿತ್ರೋದ್ಯಮವಾಗಿ ಕನ್ನಡ ಚಿತ್ರರಂಗ ಬೆಳೆದಿದೆ. ಇದರಲ್ಲಿ ಶೇ 10ರಷ್ಟು ಚಿತ್ರಗಳು ಯಶಸ್ವಿಯಾದರೆ ಅದೇ ಹೆಚ್ಚು. ಸಬ್ಸಿಡಿ ಪಡೆಯುತ್ತಿರುವ ಒಟ್ಟು ಸಿನಿಮಾಗಳ ಪೈಕಿ ಅರ್ಧಕ್ಕಿಂತ ಕಡಿಮೆ ಚಿತ್ರಗಳು ಮಾತ್ರ ಅರ್ಹವಾಗಿರುತ್ತವೆ. ಉಳಿದವುಗಳು ಲಾಬಿ ಮಾಡಿಯೇ ಸಬ್ಸಿಡಿ ಫಲ ಉಣ್ಣುತ್ತಿವೆ ಎಂಬ ಆರೋಪಗಳು ಗಾಂಧಿ
ನಗರದಲ್ಲೂ ದಟ್ಟವಾಗಿವೆ.
ಸಬ್ಸಿಡಿ ಕೊಡಿಸುವ ಏಜೆಂಟರ ಜಾಲವೂ ಬೇರುಬಿಟ್ಟಿದೆ. ಆ ಜಾಲದ ಪೋಷಕರು ರಾಜಕೀಯ ಅಧಿಕಾರಸ್ಥರು ಮತ್ತು ಅಧಿಕಾರಶಾಹಿಗಳು ಎನ್ನುವುದೂ ಬಹಿರಂಗ ಸತ್ಯ. ಸಬ್ಸಿಡಿಗೆ ಗುಣಾತ್ಮಕ ಸಿನಿಮಾಗಳನ್ನು ಆಯ್ಕೆ ಮಾಡುವ ಸಲಹಾ ಸಮಿತಿಗಳೂ ಈ ಏಜೆಂಟರ ಜಾಲದ ಕಪಿಮುಷ್ಟಿಯಲ್ಲಿ ಬಂದಿ. ಸಮಿತಿಯ ಕೆಲ ಸದಸ್ಯರು ಮತ್ತು ಅಧಿಕಾರಿಗಳು ಲೂಟಿಯಲ್ಲಿ ಪಾಲುದಾರರು ಎನ್ನುತ್ತಾರೆಚಿತ್ರರಂಗದ ಗಣ್ಯರು ಮತ್ತು ಇಲಾಖೆ ಅಧಿಕಾರಿಗಳು.
ಸಬ್ಸಿಡಿ ದಂಧೆಯಆಳ ಕೆದಕಿದರೆ, ಸರ್ಕಾರಿ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿನಾಲ್ಕೈದು ಲಕ್ಷದಲ್ಲಿ ಮಕ್ಕಳ ಚಿತ್ರ, ಚಾರಿತ್ರಿಕ ಹಿನ್ನೆಲೆಯ ಚಿತ್ರಗಳನ್ನು ನಿರ್ಮಿಸಿ ಸಬ್ಸಿಡಿ ಹಣ ದೋಚುತ್ತಿದ್ದಾರೆಎಂದು ಹೆಸರು ಬಯಸದ ಚಿತ್ರರಂಗದ ಗಣ್ಯರೊಬ್ಬರು ಕಿಡಿಕಾರುತ್ತಾರೆ.
ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿ ಪಡೆದ ಸಿನಿಮಾಗಳು ಸಬ್ಸಿಡಿಗೆ ನೇರ ಆಯ್ಕೆಯಾಗುತ್ತವೆ. ಇದಕ್ಕೆ ಮಾನದಂಡ; ಅಂತರರಾಷ್ಟ್ರೀಯ, ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆ ಸಿನಿಮಾಗಳು ಪ್ರದರ್ಶನ ಕಂಡಿರಬೇಕು.
ಚಲನಚಿತ್ರೋತ್ಸವಕ್ಕೆ ಸಿನಿಮಾ ಆಯ್ಕೆ ಮಾಡುವಲ್ಲೂ ಏಜೆಂಟರ ಜಾಲ ಹರಡಿದೆ. ಲಂಚ ಕೊಟ್ಟು, ಪ್ರಭಾವ ಬಳಸಿ ಚಲನಚಿತ್ರಗಳನ್ನುಚಲನಚಿತ್ರೋತ್ಸವಗಳಿಗೆ ಆಯ್ಕೆ ಮಾಡಿಸುವ ದಂಧೆಯೂ ಇದೆ ಎನ್ನುವ ಗಂಭೀರ ಆರೋಪ ಅವರದ್ದು.
‘ಎರಡು ಲಕ್ಷ, ಮೂರು ಲಕ್ಷ ಲಂಚ ಕೊಟ್ಟರೆ ಸಬ್ಸಿಡಿ ಕೊಡುತ್ತಾರೆ’ ಎನ್ನುವ ಮಾತನ್ನು ಗಾಂಧಿನಗರದಲ್ಲಿ ಕೇಳುವಾಗ ತುಂಬಾ ಬೇಸರ, ನೋವು ಆಗುತ್ತದೆ. ಲಂಚ ಕೊಟ್ಟರೆ ಸಬ್ಸಿಡಿ ಕಾಯಂ ಎನ್ನುವ ಮನೋಭಾವ ಚಿತ್ರರಂಗಕ್ಕೆ ಅತ್ಯಂತ ಅಪಾಯಕಾರಿ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಪಾರದರ್ಶಕವಾಗಿ ಕೆಲಸ ಮಾಡುವ ಸಮಿತಿ ರಚಿಸಬೇಕು, ಆ ಸಮಿತಿಯ ಮೇಲೊಂದು ಕಣ್ಣಿಟ್ಟಿರಬೇಕು ಎನ್ನುತ್ತಾರೆ ಹಲವು ನಿರ್ದೇಶಕರು.
ಬೆಳಕಿಗೆ ಬಂದಿದ್ದು ಹೀಗೆ
2009–10ನೇ ಸಾಲಿನಲ್ಲಿ ನಿರ್ದೇಶಕ ಕೋಡ್ಲು ರಾಮಕೃಷ್ಣ ತಮ್ಮ ‘ಬೆಟ್ಟದಪುರದ ದಿಟ್ಟ ಮಕ್ಕಳು’ ಚಿತ್ರಕ್ಕೆ ಸಬ್ಸಿಡಿಗಾಗಿ, ಆಯ್ಕೆ ಸಮಿತಿಯ ಸದಸ್ಯರಾಗಿದ್ದ ಸುರೇಶ್ ಮಂಗಳೂರು ಅವರಿಗೆ ₹2.5 ಲಕ್ಷ ಲಂಚ ಕೊಟ್ಟಿರುವುದಾಗಿ ಆಪಾದಿಸಿದ್ದರು. ಗುಣಾ ತ್ಮಕ ಚಿತ್ರಗಳಿಗೆ ₹10 ಲಕ್ಷ ಸಬ್ಸಿಡಿ ಪಡೆಯಲು ಲಂಚ ಕೊಡಬೇಕಾದ ಪರಿಸ್ಥಿತಿಯ ಬಗ್ಗೆ ಹಲವು ನಿರ್ಮಾಪಕರು, ನಿರ್ದೇಶಕರಿಂದಲೂ ಆಕ್ರೋಶ ವ್ಯಕ್ತವಾಗಿತ್ತು.
2011ರಲ್ಲಿ ಸಿನಿಮಾ ಸಬ್ಸಿಡಿ ದುರ್ಬಳಕೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದು, ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ತನಿಖೆಗೂ ಆದೇಶಿಸಿದ್ದರು. ಸಂಘಸಂಸ್ಥೆಯ ಮುಖಂಡರೊಬ್ಬರು ಈ ದಂಧೆಯ ತನಿಖೆಗೆ ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲು ಸಹ ಹತ್ತಿದ್ದರು. ಆದರೆ, ಇಂದಿಗೂ ಸಬ್ಸಿಡಿ ಸಿನಿಮಾಗಳ ಆಯ್ಕೆಯಲ್ಲಿ ಪಾರದರ್ಶಕತೆ ಬಂದಿಲ್ಲ. ಜನರ ತೆರಿಗೆಯ ಹಣ ಅನರ್ಹರ ಪಾಲಾಗುವುದು ನಿಂತಿಲ್ಲ. ಕಳೆದ ಹತ್ತಾರು ವರ್ಷಗಳ ಸಬ್ಸಿಡಿ ಪಟ್ಟಿ ತೆಗೆದು ನೋಡಿದರೆ ನೂರಾರು ಸಂಖ್ಯೆಯ ಅನರ್ಹ ಚಿತ್ರಗಳು ಸಬ್ಸಿಡಿ ಗಿಟ್ಟಿಸಿಕೊಂಡಿರುವ ನಿದರ್ಶನಗಳು ಇಲಾಖೆಯ ಕಡತಗಳಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.