ಗದಗ: ಇಲ್ಲಿನ ಎಪಿಎಂಸಿ ರಾಜ್ಯದಲ್ಲೇ ಹೆಸರುಕಾಳು ಮತ್ತು ಈರುಳ್ಳಿಯ ಅಗ್ರ ಮಾರುಕಟ್ಟೆ. ಹಂಗಾಮಿನಲ್ಲಿ ಪ್ರತಿನಿತ್ಯ ಸರಾಸರಿ 7 ಸಾವಿರ ಕ್ವಿಂಟಲ್‌ನಷ್ಟು ಹೆಸರು ಮತ್ತು 5 ಸಾವಿರ ಕ್ವಿಂಟಲ್‌ನಷ್ಟು ಈರುಳ್ಳಿ ಆವಕವಾಗುತ್ತದೆ. ಪ್ರತಿ ವರ್ಷ ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ವರ್ತಕರಿಗೆ ಲಾಭದ ಕೊಯ್ಲಿನ ಸಮಯ.
ಎಪಿಎಂಸಿ ಇ–ಹರಾಜಿನಲ್ಲಿ ಈರುಳ್ಳಿ ಮತ್ತು ಹೆಸರುಕಾಳಿಗೆ ಅತ್ಯಂತ ಕಡಿಮೆ ದರ ನಮೂದಿಸುವ ಮೂಲಕ ಈ ಉತ್ಪನ್ನಗಳಿಗೆ ಬೇಡಿಕೆ ಇಲ್ಲ ಎನ್ನುವ ಕೃತಕ ವಾತಾವರಣ ಸೃಷ್ಟಿಸಲಾಗುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಈರುಳ್ಳಿಗೆ ₹1500 ದರ ಇದ್ದರೆ, ಇ–ಹರಾಜಿನಲ್ಲಿ ಕ್ವಿಂಟಲ್‌ಗೆ ಕನಿಷ್ಠ ₹200ರಿಂದ ಗರಿಷ್ಠ ₹500 ನಮೂದಿಸುತ್ತಾರೆ. ಹೆಸರುಕಾಳಿಗೆ ಕ್ವಿಂಟಲ್‌ಗೆ ₹4 ಸಾವಿರ ದರ ಇದ್ದರೆ ಗರಿಷ್ಠ ₹2,500 ನಮೂದಿಸುತ್ತಾರೆ. ರೈತ 1 ಕ್ವಿಂಟಲ್ ಹೆಸರುಕಾಳು ಮಾರಾಟ ಮಾಡಿದಾಗ, ಏನಿಲ್ಲವೆಂದರೂ ಕನಿಷ್ಠ ₹1 ಸಾವಿರ ಲಾಭ ವರ್ತಕನ ಜೇಬು ಸೇರುತ್ತದೆ.ಎಪಿಎಂಸಿಗೆ ಮಾರಾಟಕ್ಕೆ ತಂದಿರುವ ಸರಕನ್ನು ಬೆಳೆಗಾರ ವಾಪಸ್ ಮನೆಗೆ ತೆಗೆದುಕೊಂಡು ಹೋಗಬೇಕು, ಇಲ್ಲವೇ ರಸ್ತೆಗೆ ಸುರಿಯಬೇಕು, ಎಂಬ ಅಸಹಾಯಕ ಸ್ಥಿತಿಯನ್ನು ವರ್ತಕರೇ ಸೃಷ್ಟಿಸುತ್ತಾರೆ.
ಇದನ್ನೂ ಓದಿ:ಮೆಣಸಿನಕಾಯಿಗೂ 3 ಪರ್ಸೆಂಟ್ ಕಮಿಷನ್ !
ಬೆಂಬಲ ಬೆಲೆಯಿಂದಲೂ ಲಾಭ: ಪ್ರತಿ ವರ್ಷ ಹೆಸರುಕಾಳು ಮತ್ತು ಈರುಳ್ಳಿಗೆ ಬೆಂಬಲ ಬೆಲೆ ಪ್ರಕಟಗೊಳ್ಳುವ ವೇಳೆಗೆ ಬಹುತೇಕ ರೈತರು ಈ ಉತ್ಪನ್ನಗಳನ್ನು ಮಾರಾಟ ಮಾಡಿರುತ್ತಾರೆ. ಈಗ ಮತ್ತೆ ವರ್ತಕರ ಸರದಿ. ರೈತರಿಂದ ಮೊದಲೇ ಈ ಉತ್ಪನ್ನಗಳನ್ನು ಖರೀದಿಸಿ ದಾಸ್ತಾನು ಮಾಡಿಕೊಂಡಿ ರುವ ಅವರು, ರೈತರ ಭೂ ದಾಖಲೆಗಳನ್ನು ಬಳಸಿಕೊಂಡು ಸರ್ಕಾರ ತೆರೆದಿರುವ ಬೆಂಬಲ ಬೆಲೆ ಕೇಂದ್ರಗಳಲ್ಲಿ ಮರು ಮಾರಾಟ ಮಾಡುತ್ತಾರೆ. ದಾಖಲೆಯಲ್ಲಿ ಮಾತ್ರ ರೈತ ಬೆಂಬಲ ಬೆಲೆಯ ‘ಫಲಾನುಭವಿ’ ಆಗಿರುತ್ತಾನೆ. ಲಾಭವು ವರ್ತಕನ ಜೇಬು ಸೇರುತ್ತದೆ.
ಇದನ್ನೂ ಓದಿ:ಕಳಪೆ ಅಡಿಕೆ ಮಿಶ್ರಣ: ಅಧಿಕಾರಿಗಳ ಮೌನ
‘ಬೆಂಬಲ ಬೆಲೆಯ ಪ್ರಯೋಜನ ರೈತರಿಗೆ ಲಭಿಸುವುದೇ ಇಲ್ಲ. ಸರ್ಕಾರ ವನ್ನೇ ಮಣಿಸುವಷ್ಟರ ಮಟ್ಟಿಗೆ ಎಪಿಎಂಸಿಗಳಲ್ಲಿ ವರ್ತಕರ ಲಾಬಿ ಕೆಲಸ ಮಾಡುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೃಷಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.
ರದ್ದುಗೊಂಡ ಇ–ಪಾವತಿ
ರೈತರ ಕೃಷಿ ಉತ್ಪನ್ನದ ಮೊತ್ತವನ್ನು, ಆತನ ಖಾತೆಗೆ ಪಾವತಿಸುವ ಇ–ಪಾವತಿ ವ್ಯವಸ್ಥೆಯನ್ನು ವರ್ಷದ ಹಿಂದೆ ಗದಗ ಜಿಲ್ಲೆಯ 5 ಎಪಿಎಂಸಿಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು.ಇದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳುತ್ತಿತ್ತು. ಆದರೆ, ವರ್ತಕರು ಈ ವ್ಯವಸ್ಥೆ ವಿರುದ್ಧ ಪ್ರತಿಭಟಿಸಿದ್ದರು. ಬಳಿಕ ಸರ್ಕಾರ ಈ ಆದೇಶ ವಾಪಸ್ ಪಡೆದಿತ್ತು.
2017ರಲ್ಲಿ ಬೆಂಬಲ ಬೆಲೆ
ಯೋಜನೆಯಡಿ ಜಿಲ್ಲೆಯ 5 ಕಡೆ ಖರೀದಿ ಕೇಂದ್ರ ತೆರೆದು, ಜಿಲ್ಲಾಡಳಿತವು ರೈತರಿಂದ ಕ್ವಿಂಟಲ್‌ಗೆ ₹ 624 ದರದಲ್ಲಿ ಈರುಳ್ಳಿ ಖರೀದಿಸಿತ್ತು. ಇದೇ ಈರುಳ್ಳಿಯನ್ನು ಮತ್ತೆ ಎಪಿಎಂಸಿ ವರ್ತಕರಿಗೆ ಹರಾಜಿನಲ್ಲಿ ಕ್ವಿಂಟಲ್‌ಗೆ ₹ 175ರಿಂದ ₹ 225 ದರದಲ್ಲಿ ಮರು ಮಾರಾಟ ಮಾಡಿತ್ತು. ಇದರಿಂದ ಜಿಲ್ಲಾಡಳಿತಕ್ಕೆ ಅಂದಾಜು ₹ 8 ಕೋಟಿ ನಷ್ಟವಾಗಿತ್ತು.
ಇವನ್ನೂ ಓದಿ
ಒಳಒಪ್ಪಂದದ ಏಟು: ಹೊರಗೇ ವಹಿವಾಟು
ಕೊಬ್ಬರಿ: ಅರಳಿ ಮರದ ಕೆಳಗೆ ಪಿಸುಗುಡುವ ಬೆಲೆ!
ಹೊರ ಭಾಗದ ರೈತರೇ ಇಲ್ಲಿ ಟಾರ್ಗೆಟ್!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.