ಬೆಂಗಳೂರು: ಬಾಡಿಗೆ ಸಿಗದೆ ಮನೆ ಮುಂದೆ ನಿಂತಿರುವ ಲಾರಿ, ಹೊರಗೆ ತೆಗೆಯೋಣವೆಂದರೆ ಡೀಸೆಲ್ ದುಬಾರಿ, ಈ ಹೊರೆ ಗ್ರಾಹಕರಿಗೆ ವರ್ಗಾಯಿಸಲು ಆಗದ ಅಡಕತ್ತರಿ...
ಇದು ಸರಕು ಸಾಗಣೆ ವಾಹನಗಳ ಮಾಲೀಕರನ್ನು ಕಾಡುತ್ತಿರುವ ಚಿಂತೆ. ಕೋವಿಡ್ ಕಾರಣದಿಂದ ಸರಕು ಸಾಗಣೆ ವಹಿವಾಟು ಕುಸಿದು ಬಾಡಿಗೆ ಸಿಕ್ಕರೆ ಸಾಕು ಎನ್ನುವ ಸ್ಥಿತಿಯಲ್ಲಿ ಲಾರಿ ಚಾಲಕರು, ಮಾಲೀಕರಿದ್ದಾರೆ. ಇನ್ನೊಂದೆಡೆ ಡೀಸೆಲ್ ದರ ₹ 100 ಹತ್ತಿರಕ್ಕೆ ಬಂದಿದೆ. ಡೀಸೆಲ್ ದರಕ್ಕೆ ಹೆದರಿ ಮನೆಯಲ್ಲೇ ಕುಳಿತರೆ ಸಾಲದ ಗಂಟಿಗೆ ಬಡ್ಡಿ, ಚಕ್ರಬಡ್ಡಿ ಸೇರಿ ಹೊರೆ ಇನ್ನಷ್ಟು ಭಾರವಾಗುವ ಆತಂಕವೂ ಅವರನ್ನು ಕಾಡುತ್ತಿದೆ.
‘ಲಾರಿಗಳನ್ನು ರಸ್ತೆಗೆ ಇಳಿಸಿದರೆ ಡೀಸೆಲ್, ಟೋಲ್ ಶುಲ್ಕ, ನಿರ್ವಹಣೆ ವೆಚ್ಚ ಸೇರಿ ಪ್ರತಿ ಕಿಲೋ ಮೀಟರ್‌ಗೆ ಕನಿಷ್ಠ ₹ 33 ವೆಚ್ಚವಾಗುತ್ತದೆ. ಆದರೆ, ಸದ್ಯ ಇರುವ ಬಾಡಿಗೆ ಕಿಲೋ ಮೀಟರ್‌ಗೆ ₹ 26. ಅದನ್ನು ಹೆಚ್ಚಿಸುವ ಸ್ಥಿತಿ ಸದ್ಯಕ್ಕೆ ಇಲ್ಲ. ಸಿಗುವ ಒಂದೆರಡು ಬಾಡಿಗೆಗೆ ಲಾರಿ ಮಾಲೀಕರಲ್ಲೇ ಪೈಪೋಟಿ ಇದೆ. ಇಂತಹ ಸಂದರ್ಭದಲ್ಲಿ ಬಾಡಿಗೆ ಹೆಚ್ಚಳ ಮಾಡುವುದಾದರೂ ಹೇಗೆ’ ಎಂಬುದು ಮಾಲೀಕರ ಅಳಲು.
‘10 ಟ್ರಿಪ್ ಬಾಡಿಗೆ ಸಿಗುತ್ತಿದ್ದ ಕಡೆ ಒಂದು ಟ್ರಿಪ್ ಬಾಡಿಗೆ ಸಿಗುತ್ತಿದೆ’ ಎಂದು ಫೆಡರೇಷನ್ ಆಫ್ ಲಾರಿ ಓನರ್ಸ್ ಅಸೋಸಿಯೇಷನ್ಸ್ ಅಧ್ಯಕ್ಷ ಚನ್ನಾರೆಡ್ಡಿ ತಿಳಿಸಿದರು.
‘ಇಷ್ಟೊಂದು ಕಷ್ಟಗಳ ನಡುವೆ ಲಾರಿಗಳನ್ನು ಓಡಿಸುವುದು ಕಷ್ಟವಾಗಲಿದೆ. ಸರ್ಕಾರವೇ ಕಿಲೋ ಮೀಟರ್‌ಗೆ ಇಷ್ಟು ದರ ಪಡೆಯಬೇಕು ಎಂಬುದನ್ನು ನಿಗದಿ ಮಾಡಲಿ. ಡೀಸೆಲ್ ದರ ಏರಿಕೆ ನಿರ್ಧಾರ ಹಿಂದಕ್ಕೆ ಪಡೆಯದಿದ್ದರೆ ಲಾರಿಗಳ ಸಂಚಾರ ನಿಲ್ಲಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.