ಚಿಕ್ಕಮಗಳೂರು: ‘2019ರ ವೇಳೆಗಾಗಲೇ ಅಕ್ರಮವಾಗಿ ಸಾಗುವಳಿ ಚೀಟಿ ಮುದ್ರಿಸಿಕೊಡುವ ವ್ಯೂಹವೊಂದು ತಲೆಯೆತ್ತಿತ್ತು. ₹2 ಲಕ್ಷ ಹಣ ಕೊಟ್ಟು ಮೂಡಿಗೆರೆ ತಾಲ್ಲೂಕು ಕಚೇರಿಗೆ ಅಲೆದಾಡಿ ಸುಸ್ತಾಗಿದ್ದ ರೈತ, ನನ್ನ ಬಳಿ ಬಂದು ಕಷ್ಟ ಹೇಳಿಕೊಂಡಿದ್ದರು. ಆ ಒಬ್ಬ ರೈತನಿಗೆ ನ್ಯಾಯ ಕೊಡಿಸಲು ಹೊರಟಾಗ ಸಾವಿರಾರು ಎಕರೆ ಅಕ್ರಮ ಭೂಮಂಜೂರಾತಿ ಪತ್ತೆಯಾಯಿತು!’
ಹೀಗೆಂದು ಹೇಳಿದ್ದು, ರಾಜ್ಯದಲ್ಲೇ ಅತೀ ದೊಡ್ಡ ಅಕ್ರಮ ಭೂಮಂಜೂರಾತಿ ಪ್ರಕರಣ ಬಯಲಿಗೆ ಬರಲು ಕಾರಣರಾದ ಕಂದಾಯ ಇಲಾಖೆಯ ಬೆನ್ನು ಹತ್ತಿದ ರೈತ ಮುಖಂಡ ಎಂ.ಮಂಜುನಾಥ.
‘ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಡುವ ಎಜೆಂಟರು ಅಷ್ಟೊತ್ತಿಗಾಗಲೇ ಹುಟ್ಟಿಕೊಂಡಿದ್ದರು. ಹಣ ಕೊಟ್ಟರೆ ಸರ್ಕಾರಿ ಭೂಮಿ ಬರೆದುಕೊಡುವ ಕೆಲಸವನ್ನು ಅಧಿಕಾರಿಗಳ ತಂಡ ಮಾಡುತ್ತಿದೆ ಎಂಬ ಮಾತುಗಳು ಕಿವಿಗೆ ಬಿದ್ದಿದ್ದವು. ಹಂತೂರು ಗ್ರಾಮದಲ್ಲಿ ಸರ್ಕಾರಿ ಜಾಗ ಉಳುಮೆ ಮಾಡುತ್ತಿದ್ದ ರೈತ ಸಾಗುವಳಿ ಚೀಟಿ ಪಡೆಯಲು ಕಚೇರಿಗೆ ಎಡತಾಕಿದ್ದರು. ಹಣ ಕೊಟ್ಟರೂ ಹಕ್ಕು ಪತ್ರ ಸಿಗದೆ ಅವರು ನನ್ನ ಸಂಪರ್ಕ ಮಾಡಿದರು’.
‘ತಾಲ್ಲೂಕು ಕಚೇರಿಯಲ್ಲಿ ಹಣ ಪಡೆದಿದ್ದ ಸಿಬ್ಬಂದಿಯ ಬಳಿ ಕರೆದೊಯ್ದುರು. ರೈತ ಸಂಘದ ಶಾಲು ನೋಡಿದ್ದರಿಂದ ಕೂಡಲೇ ಹಕ್ಕುಪತ್ರ ನೀಡುವ ಭರವಸೆ ನೀಡಿದರು. ಹಕ್ಕುಪತ್ರ ಪಡೆದ ಬಳಿಕ ಆ ರೈತ ನನ್ನ ಸಂಪರ್ಕಕ್ಕೆ ಬರಲೇ ಇಲ್ಲ. ಹಕ್ಕುಪತ್ರವನ್ನೂ ತೋರಿಸಲಿಲ್ಲ.
ಎದುರಿಗೆ ಸಿಕ್ಕಿದಾಗ ಕೇಳಿದರೆ ಒಂದಿಲ್ಲೊಂದು ಸುಳ್ಳು ಹೇಳಿ ಹೋಗುತ್ತಿದ್ದರು. ಏನೋ ಅಕ್ರಮ ನಡೆದಿದೆ ಎಂದು ಎನಿಸಿತು. ಕಚೇರಿಯಲ್ಲೇ ಹೋಗಿ ಸಾಗುವಳಿ ಚೀಟಿಯ ಪ್ರತಿ ನೀಡಲು ಕೇಳಿದೆ. ಅವರು ಕೊಡಲಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೂ ಸಿಗಲಿಲ್ಲ. ಜಿಲ್ಲಾಧಿಕಾರಿಗೆ ದೂರು ಕೊಟ್ಟರೆ ಪ್ರಯೋಜನ ಆಗಲಿಲ್ಲ, ಪ್ರಾದೇಶಿಕ ಆಯುಕ್ತರನ್ನು ನೇರವಾಗಿ ಸಂಪರ್ಕ ಮಾಡಿ ವಿವರಿಸಿದೆ. ಅವರು ಜಿಲ್ಲಾಧಿಕಾರಿಯಿಂದ ವರದಿ ಕೇಳಿದರು. ಅಲ್ಲಿಂದ ಪ್ರಾಥಮಿಕ ತನಿಖೆ ಆರಂಭವಾಯಿತು. ಆಗ ಎಲ್ಲವೂ ಹೊರಗೆ ಬಂತು’ ಎಂದು ಮಂಜುನಾಥ್ ವಿವರಿಸಿದರು.
ಈ ಪ್ರಕರಣದ ಬೆನ್ನು ಹತ್ತಿ ನಡೆದಿರುವ ತನಿಖೆಯಲ್ಲಿ ಹಲವು ರೀತಿಯ ಅಕ್ರಮಗಳು ಬಯಲಿಗೆ ಬಂದಿವೆ. ಸರ್ಕಾರಿ ಭೂಮಿ ಎಂಬುದು ಭೂಗಳ್ಳರು ಮತ್ತು ಕಂದಾಯ ಇಲಾಖೆಯ ಕೆಲ ಸಿಬ್ಬಂದಿ ಪಾಲಿಗೆ ಹಣ ಮಾಡಿಕೊಳ್ಳುವ ತೆರೆದ ಖಜಾನೆಯಂತಾಗಿದೆ. ಅರಣ್ಯ ಮತ್ತು ಕಂದಾಯ ಕಾಯ್ದೆಗಳು ಎಷ್ಟೇ ಬಲಿಷ್ಠವಾಗಿದ್ದರೂ ಸರಾಗವಾಗಿ ವಂಚಿಸಬಲ್ಲ ನುಸುಳಕೋರರು ಕಂದಾಯ ಇಲಾಖೆಯಲ್ಲೇ ಇದ್ದಾರೆ ಎಂಬುದು ಪತ್ತೆಯಾಗಿದೆ. ಕಂದಾಯ ಭೂಮಿ ಮಾತ್ರವಲ್ಲ, ಹುಲಿ ಕಾಡು, ಅರಣ್ಯ, ಪರಿಭಾವಿತ ಅರಣ್ಯ ಪ್ರದೇಶಗಳ ಭೂಮಿ ಭೂಗಳ್ಳರ ಪಾಲಾಗಿವೆ.
ತಾವಿರುವ ಗುಡಿಸಲಿನ ನಿವೇಶನವೂ ತಮ್ಮ ಹೆಸರಿನಲ್ಲಿ ಇಲ್ಲದ ಲಕ್ಷಾಂತರ ಕುಟುಂಬಗಳು ರಾಜ್ಯದಲ್ಲಿವೆ. ನಮೂನೆ(ಫಾರಂ) 50, 53, 57ರ ಅಡಿಯಲ್ಲಿ ಸಲ್ಲಿಕೆಯಾಗಿರುವ 10.49 ಲಕ್ಷ ಅರ್ಜಿಗಳು ಸರ್ಕಾರದ ಮುಂದಿವೆ. ಹಲವು ವರ್ಷಗಳಿಂದ ಭೂಮಿ ಹಕ್ಕಿಗಾಗಿ ಭೂರಹಿತರು ಹಲುಬುತ್ತಿದ್ದಾರೆ. ಶಾಲೆ, ಆಸ್ಪತ್ರೆ, ಸ್ಮಶಾನಕ್ಕೆ ಜಾಗವಿಲ್ಲದ ಸ್ಥಿತಿ ಹಳ್ಳಿಗಳಲ್ಲಿದೆ. ಇನ್ನೊಂದೆಡೆ ಸಾವಿರಾರು ಎಕರೆ ಸರ್ಕಾರಿ ಜಮೀನು ಉಳ್ಳವರ ಪಾಲಾಗುತ್ತಿದೆ.
ಕಂದಾಯ ಕಾಯ್ದೆ ಪ್ರಕಾರ, ನಮೂನೆ 50, 53 ಮತ್ತು 57ರಲ್ಲಿ ಭೂಮಂಜೂರಾತಿ ಕೋರಿರುವವರು ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿರಬೇಕು. ಅಷ್ಟರಲ್ಲಿ ಅರ್ಜಿದಾರನಿಗೆ 18 ವರ್ಷ ಪೂರ್ಣಗೊಂಡಿರಬೇಕು, ಅರ್ಜಿದಾರನೇ ಸಾಗುವಳಿ ಮಾಡುತ್ತಿರಬೇಕು. ಒಂದು ಕುಟುಂಬಕ್ಕೆ 4 ಎಕರೆ 38 ಗುಂಟೆಗೂ ಹೆಚ್ಚು ಆಸ್ತಿ ಮಂಜೂರು ಮಾಡುವಂತಿಲ್ಲ. ಸಾಗುವಳಿ ಮಾಡುತ್ತಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಯ ವರದಿ ಪಡೆಯಬೇಕು, ನಕ್ಷೆ ಸಿದ್ಧಪಡಿಸಬೇಕು, ಶಾಸಕರ ಅಧ್ಯಕ್ಷತೆಯ ಬಗರ್ ಹುಕುಂ ಸಮಿತಿ ಮುಂದೆ ದಾಖಲೆ ಮಂಡಿಸಬೇಕು.
ಸಮಿತಿ ಸಭೆಯ ಬಯೋಮೆಟ್ರಿಕ್ ಹಾಜರಾತಿ, ಸಭೆಯ ಫೋಟೊ, ಸಾಗುವಳಿ ಜಾಗದ ಚಿತ್ರಗಳನ್ನು ಆ್ಯಪ್‍ನಲ್ಲಿ ಅಪ್‌ಲೋಡ್ ಮಾಡಬೇಕು. ನಂತರ ಸ್ಥಳ ಪರಿಶೀಲನೆ ನಡೆಸಿ ಜಾಗ ಮಂಜೂರಾತಿ ಮಾಡಬೇಕು. ಕಂದಾಯ ಜಾಗವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು, ಅರಣ್ಯ ಜಾಗವಾಗಿದ್ದರೆ ಯಾವುದೇ ಕಾರಣಕ್ಕೂ ಮಂಜೂರು ಮಾಡುವಂತಿಲ್ಲ ಎಂಬ ನಿಯಮ ಇವೆ. ಆದರೆ, ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನಸೋಇಚ್ಛೆ ಭೂ ಮಂಜೂರು ಮಾಡಿಕೊಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮ ಭೂಮಂಜೂರಾತಿ ಪ್ರಕರಣವೇ ಇದಕ್ಕೆ ಉದಾಹರಣೆ. ಇದೇ ಜಿಲ್ಲೆಯ ಕಡೂರು ತಾಲ್ಲೂಕಿನಲ್ಲೂ ಇದೇ ರೀತಿಯ ದೂರೊಂದನ್ನು ಆಧರಿಸಿ ತನಿಖೆ ಆರಂಭಿಸಲಾಯಿತು. ಎರಡೂ ತಾಲ್ಲೂಕಿನ ಅಕ್ರಮಗಳ ತನಿಖೆಗೆ 15 ತಹಶೀಲ್ದಾರ್‌ಗಳ ವಿಶೇಷ ತಂಡವನ್ನು ಸರ್ಕಾರ ಮಾಡಿತ್ತು. ಕೋಟ್ಯಂತರ ರೂಪಾಯಿ ಬೆಲೆ ಬಾಳುವ 6500 ಎಕರೆಯಷ್ಟು ಸರ್ಕಾರಿ ಭೂಮಿಯನ್ನು ಯಾವುದೇ ಪ್ರಕ್ರಿಯೆಗಳನ್ನು ಪಾಲಿಸದೆ ಮಂಜೂರು ಮಾಡಿಕೊಟ್ಟಿರುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ.
ಒಂದೇ ಕುಟುಂಬದಲ್ಲಿ ಹಲವರ ಹೆಸರಿಗೆ ತಲಾ 4 ಎಕರೆ 38 ಗುಂಟೆಯಂತೆ ನೂರಾರು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಅನುಸರಿಸಿದ ಪ್ರಕ್ರಿಯೆಗಳ ಬಗ್ಗೆ ಕಡತ ಕೆದಕಿದ ತನಿಖಾ ಅಧಿಕಾರಿಗಳೇ ಅಚ್ಚರಿಗೊಂಡಿದ್ದಾರೆ. ಕಂದಾಯ ಅಧಿಕಾರಿ ವರದಿ ಇಲ್ಲ, ನಕ್ಷೆ ಇಲ್ಲ, ಬಗರ್ ಹುಕುಂ ಸಮಿತಿ ಮುಂದೆ ಮಂಡನೆಯೇ ಆಗಿಲ್ಲ. ಪ್ರಿಂಟಿಂಗ್ ಪ್ರೆಸ್‌ಗಳಲ್ಲಿ ಸಾಗುವಳಿ ಚೀಟಿ ಮುದ್ರಿಸಿ ಮನಸೋಇಚ್ಛೆ ಹಂಚಲಾಗಿದೆ. ರಾಜ್ಯದವರೇ ಅಲ್ಲದವರಿಗೆ, ವಿದೇಶಗಳಲ್ಲಿ ವಾಸ ಮಾಡುತ್ತಿರುವವರ ಹೆಸರಿಗೂ ಸರ್ಕಾರಿ ಭೂಮಿ ಅಕ್ರಮವಾಗಿ ಮಂಜೂರು ಮಾಡಿರುವುದು ಪತ್ತೆಯಾಗಿದೆ. ಇಷ್ಟೆಲ್ಲಾ ಅಕ್ರಮ ಗುರುತಿಸಿ 2023ರ ಸೆಪ್ಟೆಂಬರ್‌ನಲ್ಲಿ ಒಂದು ತಿಂಗಳ ಕಾಲ ತನಿಖೆ ನಡೆಸಿ ಸಲ್ಲಿಕೆಯಾಗಿರುವ 2 ಸಾವಿರ ಪುಟಗಳ ವರದಿ ಸರ್ಕಾರದ ಮುಂದೆ ಧೂಳು ಹಿಡಿಯುತ್ತಿದೆ.
ಇನ್ನೊಂದೆಡೆ ಮೂಡಿಗೆರೆ ತಾಲ್ಲೂಕೊಂದರಲ್ಲೇ ಕೇವಲ ಎರಡು ವರ್ಷಗಳ ಅವಧಿಯಲ್ಲಿ (2019–2021) ಮಂಜೂರಾಗಿದ್ದ 472 ಪ್ರಕರಣಗಳನ್ನು ಈ ಹಿಂದಿನ ಉಪವಿಭಾಗಾಧಿಕಾರಿ ಎಚ್.ಡಿ.ರಾಜೇಶ್ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದರು. ಶೇ 99ರಷ್ಟು ಪ್ರಕರಣಗಳಲ್ಲಿ ಅಕ್ರಮ ಮಂಜೂರಾತಿ ಎಂಬುದು ಪತ್ತೆಯಾಯಿತು. ಒಂದು ಸಾವಿರ ಎಕರೆಯಷ್ಟು ಮಂಜೂರಾತಿ ರದ್ದುಗೊಳಿಸಿದರು. ಸರ್ಕಾರಿ ಭೂಮಿಯನ್ನು ತಮ್ಮ ಸ್ವಂತ ಭೂಮಿ ಎಂಬಂತೆ ಕಂದಾಯ ಇಲಾಖೆ ಸಿಬ್ಬಂದಿ ಸಾಗುವಳಿ ಚೀಟಿ ಮುದ್ರಿಸಿಕೊಟ್ಟು ಅಕ್ಷರಶಃ ಮಾರಾಟ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಿದ್ದರು.
ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಾಯಿತು. ಕಡೂರಿನಲ್ಲಿ ಈ ಹಿಂದೆ ಇದ್ದ ತಹಶೀಲ್ದಾರ್ ಬಂಧನವೂ ಆಯಿತು. ಅವರೆಲ್ಲರೂ ಜಾಮೀನು ಪಡೆದಿದ್ದಾರೆ. ಇನ್ನೂ 230 ಪ್ರಕರಣಗಳು ವಿಚಾರಣೆಗೆ ಬಾಕಿ ಇರುವಾಗಲೇ ರಾಜೇಶ್ ಅವರ ಎತ್ತಂಗಡಿಯಾಯಿತು. ಉಪವಿಭಾಗಾಧಿಕಾರಿಯನ್ನೇ ವರ್ಗಾವಣೆ ಮಾಡಿಸುವಷ್ಟು ರಾಜಕೀಯ ಪ್ರಭಾವವನ್ನು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಹೊಂದಿದ್ದಾರೆ ಎಂಬುದನ್ನು ಹಿರಿಯ ಅಧಿಕಾರಿಗಳೇ ಹೇಳುತ್ತಾರೆ.
ಅವರು ವರ್ಗಾವಣೆಯಾದ ಬಳಿಕ ಮಂಜೂರಾತಿ ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತರುತ್ತಿದ್ದಾರೆ. ಪ್ರತಿ ಪ್ರಕರಣದ ವಿಚಾರಣೆಗೆ ಸರ್ಕಾರದ ಪರ ವಕೀಲರು ಹಾಜರಾಗಿ ಸರಿಯಾದ ಮಾಹಿತಿ ನೀಡದಿದ್ದರೆ ಮಂಜೂರಾದ ಭೂಮಿ ಮತ್ತೆ ಭೂಗಳ್ಳರ ಪಾಲಾಗುವ ಆತಂಕ ಇದೆ ಎಂದು ತನಿಖೆ ನಡೆಸಿದ ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಕಂದಾಯ ಕಾಯ್ದೆಯ ನಡುವೆ ನುಸುಳುವ ಹಲವು ದಾರಿಯನ್ನು ಸಿಬ್ಬಂದಿ ಕರಗತ ಮಾಡಿಕೊಂಡಿದ್ದಾರೆ. ಮತ್ತೊಂದು ದಾರಿ ಎಂದರೆ ಆನ್‌ಲೈನ್ ಪಹಣಿ ಹೆಸರಿನಲ್ಲಿ ಅಕ್ರಮ ಮಾಡುವುದು. 2000ನೇ ಇಸವಿಯಿಂದ ಆನ್‌ಲೈನ್ ಪಹಣಿ ವ್ಯವಸ್ಥೆ ಇದೆ. ಬಹುತೇಕ ಆಸ್ತಿಗಳ ಪಹಣಿ ಆನ್‌ಲೈನ್‌ನಲ್ಲಿ ದೊರಕುತ್ತಿದೆ. ಕೆಲವೇ ಕೆಲವು ಜಮೀನಿಗೆ ಸಂಬಂಧಿಸಿದ ಪಹಣಿ ಅಪ್‌ಡೇಟ್ ಆಗಿಲ್ಲ. ಅಂತವರು ಅರ್ಜಿ ಸಲ್ಲಿಸಿದರೆ ಎಲ್ಲಾ ಮೂಲ ದಾಖಲೆಗಳನ್ನು ಪರಿಶೀಲಿಸಿ ಆನ್‌ಲೈನ್ ಪಹಣಿ ಮಾಡಿಕೊಡಲಾಗುತ್ತಿದೆ.
ಈ ಅವಕಾಶವನ್ನು ಬಳಸಿ ಸರ್ಕಾರಿ ಜಾಗ ಲಪಟಾಯಿಸಿರುವ ಪ್ರಕರಣಗಳು ತರೀಕೆರೆಯಲ್ಲಿ ಈಗ ಬೆಳಕಿಗೆ ಬಂದಿವೆ. ಸರ್ಕಾರಿ ಜಮೀನು ಖಾಲಿ ಇರುವುದನ್ನು ಗುರುತಿಸಿ, ಇದು 1982ರಲ್ಲೇ ಮಂಜೂರಾಗಿದೆ ಎಂಬಂತೆ ದಾಖಲೆಗಳನ್ನು ಸೃಷ್ಟಿಸಿಕೊಡುವ ಕೆಲಸವನ್ನು ಕಂದಾಯ ಇಲಾಖೆ ಸಿಬ್ಬಂದಿಯೇ ಮಾಡಿದ್ದಾರೆ. 42 ವರ್ಷಗಳ ಹಿಂದಿನ ದಿನಾಂಕ ನಮೂದಿಸಿ ಸಾಗುವಳಿ ಚೀಟಿ, ನಕ್ಷೆ, ಕೈ ಬರಹದ ಪಹಣಿ ಎಲ್ಲವನ್ನೂ ಸೃಷ್ಟಿಸಿದ್ದಾರೆ. ಮೂಲ ದಾಖಲೆ ಪರಿಶೀಲಿಸದೆ ಉಪವಿಭಾಗಾಧಿಕಾರಿ ಪಹಣಿ ಇಂಡೀಕರಿಸಿದ್ದಾರೆ. ಬಳಿಕ ಇಂತಹದ್ದೇ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾದಾಗ ಅನುಮಾನಗೊಂಡು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಆರು ಜನರ ಪ್ರತ್ಯೇಕ ತಂಡ ರಚನೆ ಮಾಡಿ ತನಿಖೆಗೆ ಆದೇಶಿಸಿದ್ದಾರೆ.
ಒಂದೊಂದು ಜಿಲ್ಲೆಯಲ್ಲೂ ಒಂದೊಂದು ರೀತಿಯ ಅಕ್ರಮ ಭೂಮಂಜೂರಾತಿ ಇದೆ. ಹಾಸನ ಜಿಲ್ಲೆಯಲ್ಲಿ ಹೇಮಾವತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟ ಜಮೀನನ್ನು ಬಗರ್‌ಹುಕುಂ ಸಮಿತಿಯಿಂದ ಅಕ್ರಮವಾಗಿ ಭೂ ಮಂಜೂರಾತಿ ಮಾಡಿರುವ ದೂರುಗಳಿವೆ. ಹೇಮಾವತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟ ಜಮೀನಿನ ಪೈಕಿ 2015 ರಿಂದ 2019 ರವರೆಗಿನ ಎಲ್ಲ 977 ಪ್ರಕರಣಗಳ ಮಂಜೂರಾತಿ ರದ್ದು ಮಾಡಲಾಗಿದೆ. ಇದರಲ್ಲಿ ಈಗಾಗಲೇ 135 ಪ್ರಕರಣಗಳ ಎಂಅರ್(ಮಂಜೂರಾತಿ ಪತ್ರ) ರದ್ದು ಮಾಡಲಾಗಿದೆ. 2005 ರಿಂದ 2015 ರ ವರೆಗಿನ 288 ಪ್ರಕರಣಗಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಯಾರ ಮೇಲೂ ಕ್ರಮ ಆಗಿಲ್ಲ. ಇನ್ನು ಬೇಲೂರು ತಾಲ್ಲೂಕಿನ ಬಗರ್ ಹುಕುಂ ಸಮಿತಿಯಿಂದ 2,750 ಎಕರೆ ಭೂ ಮಂಜೂರಾತಿ ಮಾಡಲಾಗಿದೆ ಎನ್ನುವ ಆರೋಪ ಸ್ಥಳೀಯವಾಗಿ ಕೇಳಿ ಬರುತ್ತಿದ್ದು, ಜನಪ್ರತಿನಿಧಿಗಳ ನ್ಯಾಯಾಲಯದ ಸೂಚನೆ ಮೇರೆಗೆ ತನಿಖೆ ನಡೆಯುತ್ತಿದೆ.
ಹಾಸನ ಜಿಲ್ಲೆಯಲ್ಲಿ ಒಟ್ಟು 1,077 ಪ್ರಕರಣಗಳಲ್ಲಿ 4,308 ಎಕರೆ ಅಕ್ರಮವಾಗಿ ಮಂಜೂರಾತಿ ಆಗಿದ್ದು, 596 ಪ್ರಕರಣಗಳಲ್ಲಿ 2343.19 ಎಕರೆ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮಂಜೂರು ಮಾಡಿರುವುದು ಪತ್ತೆಯಾಗಿದೆ.
ಹುಲಿ ಕಾಡಿಗೂ ಕನ್ನ: ರಕ್ಷಿತಾರಣ್ಯ, ಮೀಸಲು ಅರಣ್ಯ, ಹುಲಿ ಸಂರಕ್ಷಿತ ಪ್ರದೇಶದಲ್ಲೂ ಅಕ್ರಮವಾಗಿ ಭೂಮಂಜೂರಾತಿ ಮಾಡಿರುವ ಉದಾಹರಣೆಗಳಿವೆ. ಪರಿಭಾವಿತ ಅರಣ್ಯ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಲು ಅರಣ್ಯ ಇಲಾಖೆ ಸೆಕ್ಷನ್ 4ರಿಂದ ಸೆಕ್ಷನ್ 17ರ ತನಕ ಪ್ರಕ್ರಿಯೆಗಳನ್ನು ನಡೆಸುತ್ತದೆ. 30–40 ವರ್ಷಗಳಿಂದ ಈ ಪ್ರಕ್ರಿಯೆ ಬಾಕಿ ಉಳಿದುಕೊಂಡಿವೆ.
ಸೆಕ್ಷನ್ 4 ಜಾರಿಯಾಗಿದ್ದರೆ ಆ ಭೂಮಿಯನ್ನು ಕಂದಾಯ ಇಲಾಖೆ ಸಾಗುವಳಿದಾರರಿಗೆ ಮಂಜೂರು ಮಾಡಲು ಅರಣ್ಯ ಕಾಯ್ದೆಯಲ್ಲಿ ಅವಕಾಶ ಇಲ್ಲ. ಅದರೆ, ಹಲವೆಡೆ ಅರಣ್ಯ ಜಾಗವನ್ನೇ ಮಂಜೂರು ಮಾಡಿಕೊಡಲಾಗಿದೆ.
ಕಂದಾಯ ಭೂಮಿ ಎಂದು ನಕ್ಷೆ ಸಿದ್ಧಪಡಿಸಿ, ಕಂದಾಯ ಅಧಿಕಾರಿಗಳ ವರದಿ ಪಡೆದು ತಹಶೀಲ್ದಾರ್‌ಗಳು ಮಂಜೂರು ಮಾಡಿಕೊಟ್ಟಿರುವ ಪ್ರಕರಣಗಳಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಅಕ್ರಮವಾಗಿ ಮಂಜೂರು ಮಾಡಿಕೊಟ್ಟಿರುವ ಉದಾಹರಣೆಗಳಿವೆ. ಈ ಪ್ರಕರಣದಲ್ಲಿ ಕಡೂರಿನ ಹಿಂದಿನ ತಹಶೀಲ್ದಾರ್ ಒಬ್ಬರ ಬಂಧನ ಕೂಡ ಆಯಿತು.
ಕಂದಾಯ ಭೂಮಿ ಎಂಬ ನೆಪದಲ್ಲಿ ಅರಣ್ಯದ ಒಳಗಿನ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಿರುವ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹೆಚ್ಚಾಗಿಯೇ ಇವೆ. ಬೆಳ್ತಂಗಡಿ ತಾಲ್ಲೂಕೊಂದರಲ್ಲೇ ಈ ಅಕ್ರಮ ಅವ್ಯಾಹತವಾಗಿ ನಡೆದಿದೆ.
ಭೂ ರಹಿತರು ಎಂದು ಹೇಳಿಕೊಂಡು ಅನೇಕರಿಗೆ ಜಾಗವನ್ನು ಮಂಜೂರು ಮಾಡಲಾಗಿದೆ. ಆದರೆ, ಈ ಪೈಕಿ ಯಾರೂ ‘ಅರ್ಹತೆ’ ಹೊಂದಿದವರು ಇಲ್ಲ. ಕೆಳಭಾಗದಲ್ಲಿ ಎಕರೆಗಟ್ಟಲೆ ಅಡಿಕೆ ತೋಟ ಇದ್ದವರು ಮೇಲ್ಭಾಗದ ಕಾನನದಲ್ಲಿ ಭೂಮಿ ಪಡೆದುಕೊಂಡು ಅರಣ್ಯ ನಾಶಕ್ಕೆ ಮುಂದಾಗಿದ್ದಾರೆ ಎಂದು ಹೇಳುತ್ತಾರೆ ಪರಿಸರ ಹೋರಾಟಗಾರರು. ಕಂದಾಯ ಮತ್ತು ಅರಣ್ಯ ಭೂಮಿಯಯ ಅಕ್ರಮ ಮಂಜೂರಾತಿ ಪ್ರಕರಣಗಳಲ್ಲಿ ತನಿಖೆ ಚುರುಕುಗೊಳಿಸಬೇಕು. ಅಕ್ರಮಗಳಲ್ಲಿ ಭಾಗಿಯಾದ ಅಧಿಕಾರಿಗಳು ಹಾಗೂ ವ್ಯಕ್ತಿಗಳಿಗೆ ಶಿಕ್ಷೆ ಆಗದಿದ್ದರೆ ಕಂದಾಯ ಇಲಾಖೆ ಈಗಿರುವ ಅಪಖ್ಯಾತಿಯ ಜೊತೆಗೆ ಮತ್ತಷ್ಟು ಕುಖ್ಯಾತಿಗೆ ಗುರಿಯಾಗುತ್ತದೆ.
ಕಂದಾಯ, ಅರಣ್ಯ ಭೂಮಿ ಗೊಂದಲಕ್ಕಿಲ್ಲ ಪರಿಹಾರ
ದಶಕಗಳ ಹಿಂದೆ ಸಾಗುವಳಿ ಉದ್ದೇಶಕ್ಕೆ ನಿರ್ದಿಷ್ಟ ಸಮುದಾಯಗಳು, ರೈತರಿಗೆ ಹಂಚಿಕೆ ಮಾಡಿರುವ ಅರಣ್ಯ ಭೂಮಿಯ ಮಾಲೀಕತ್ದವ ಗೊಂದಲ ರಾಜ್ಯದಾದ್ಯಂತ ಇದೆ. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ನಡುವಿನ ಸಮನ್ವಯ ಕೊರತೆಯಿಂದ ಈ ಸಮಸ್ಯೆ ಬಗೆಹರಿಯುತ್ತಿಲ್ಲ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಅರಣ್ಯ ಒತ್ತುವರಿಯಾಗಿರುವುದನ್ನು ಜಂಟಿ ಸರ್ವೆ ನಡೆಸಿ ಗುರುತಿಸಿ ಎರಡು ವರ್ಷಗಳಾಗುತ್ತಾ ಬಂದರೂ ಯಾವುದೇ ಕ್ರಮವಾಗಿಲ್ಲ. 2021ರ ಆಗಸ್ಟ್‌ನಲ್ಲಿ ಜಿಲ್ಲಾಡಳಿತವು ಅರಣ್ಯ ಹಾಗೂ ಕಂದಾಯ ಇಲಾಖೆಯ ಮೂಲಕ ಜಂಟಿ ಸರ್ವೆ ನಡೆಸಿತ್ತು. ಬಿಳಿಗಿರಿರಂಗನಬೆಟ್ಟದ ಸರ್ವೆ ನಂಬರ್ 1, 2, 3 ಮತ್ತು 4ರಲ್ಲಿ ಒಟ್ಟು 605.26 ಎಕರೆ ಪ್ರದೇಶದ ಸರ್ವೆ ನಡೆಸಲಾಗಿತ್ತು. ಸರ್ವೆ ನಂಬರ್ 4ರಲ್ಲೇ 147.28 ಎಕರೆ ಜಮೀನು ಒತ್ತುವರಿಯಾಗಿರುವುದನ್ನು ಸರ್ವೆ ಪತ್ತೆ ಹಚ್ಚಿತ್ತು. ಜಂಟಿ ಸರ್ವೆ ವರದಿ ಬಂದರೂ ಇನ್ನೂ ಒತ್ತುವರಿ ತೆರವು ನಡೆದಿಲ್ಲ. ಒತ್ತುವರಿ ಮಾಡಿಕೊಂಡವರಲ್ಲಿ ಪ್ರಭಾವಿಗಳಿದ್ದಾರೆ. ಸೋಲಿಗರ ಅಭಿವೃದ್ಧಿಯಲ್ಲಿ ತೊಡಗಿದ್ದವರ ಹೆಸರೂ ಇದೆ. ಈ ಮಧ್ಯೆ, ಪ್ರಭಾವಿಗಳನ್ನು ಬಿಟ್ಟು, ತಮ್ಮನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಸೋಲಿಗರು ಹೋರಾಟ ಆರಂಭಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೀಗ ಜಂಟಿ ಸರ್ವೆ ಕಾರ್ಯ ಆರಂಭವಾಗಿದೆ. ಸದ್ಯಕ್ಕೆ ಪೂರ್ಣಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆ ನಡುವಿನ ಗೊಂದಲ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇತ್ಯರ್ಥ ಆಗಲಿಲ್ಲ.
ವರದಿ ಈಗ ಧೂಳು ಹಿಡಿಯುತ್ತಿದೆ
‘ನಾನು ಕೊಟ್ಟ ದೂರು ಆಧರಿಸಿ ನಡೆದಿರುವ ತನಿಖಾ ವರದಿ ಈಗ ಸರ್ಕಾರದ ಮುಂದೆ ಧೂಳು ಹಿಡಿಯುತ್ತಿದೆ’ ಎಂದು ರೈತ ಮುಖಂಡ ಎನ್.ಮಂಜುನಾಥ್ ಹೇಳಿದರು.
‘ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ಕುಮಾರ್ ಕಟಾರಿಯಾ ಆರಂಭದಲ್ಲಿ ಶೂರತ್ವ ತೋರಿಸಿದ್ದರು. ಮೂಡಿಗೆರೆ ಮತ್ತು ಕಡೂರು ತಾಲ್ಲೂಕಿನ ಅಕ್ರಮಗಳ ಬಗ್ಗೆ ತಹಶೀಲ್ದಾರ್‌ಗಳ ತಂಡ ಕಳುಹಿಸಿ ತನಿಖೆ ಮಾಡಿಸಿದರು’ ಎಂದರು. ‘ಅಕ್ರಮ ಮಂಜೂರಾತಿ ಮಾಡಿಸಿಕೊಂಡವರಲ್ಲಿ ಪ್ರಭಾವಿಗಳೇ ಹೆಚ್ಚಿದ್ದಾರೆ. ಆದ್ದರಿಂದ ಮುಚ್ಚಿಹಾಕುವ ಪ್ರಯತ್ನ ಈಗ ನಡೆದಿದೆ. ಪ್ರಮಾಣಿಕವಾಗಿ ವಿಚಾರಣೆ ನಡೆಸುತ್ತಿದ್ದ ಉಪವಿಭಾಗಾಧಿಕಾರಿ ರಾಜೇಶ್ ಅವರನ್ನೂ ಪ್ರಭಾವಿಗಳು ವರ್ಗಾವಣೆ ಮಾಡಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೆಕ್ಷನ್ 17 ಎಂದರೇನು?
ಅರಣ್ಯ ಕಾಯ್ದೆ ಸೆಕ್ಷನ್ 4ನಲ್ಲಿರುವ ಅಧಿಕಾರ ಬಳಸಿ ಕಂದಾಯ ಭೂಮಿಯನ್ನು ಅರಣ್ಯ ವ್ಯಾಪ್ತಿಗೆ ಪಡೆದುಕೊಳ್ಳುವ ಪ್ರಾಥಮಿಕ ಅಧಿಸೂಚನೆಯನ್ನು ಅರಣ್ಯ ಇಲಾಖೆ ಪ್ರಕಟಿಸುತ್ತದೆ. ಒಮ್ಮೆ ಸೆಕ್ಷನ್ 4 ಜಾರಿಯಾದರೆ ಆ ಜಾಗವನ್ನು ಕಂದಾಯ ಇಲಾಖೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಮಂಜೂರು ಮಾಡುವಂತಿಲ್ಲ.
ಬಳಿಕ ಸೆಕ್ಷನ್ 5ರ ಪ್ರಕಾರ ಆಕ್ಷೇಪಣೆಗಳನ್ನು ಅರಣ್ಯ ವ್ಯವಸ್ಥಾಪನ ಅಧಿಕಾರಿ(ಎಫ್‌ಎಸ್‌ಒ) ಕೋರುತ್ತಾರೆ. ಆಕ್ಷೇಪಣೆಗಳಿದ್ದರೆ ದಾಖಲೆಗಳನ್ನು ತರೆಸಿ ವಿಚಾರಣೆ ನಡೆಸುತ್ತಾರೆ. ಹಂತ –ಹಂತವಾಗಿ ವಿಚಾರಣೆ ನಡೆಸಿ ಅಂತಿಮವಾಗಿ ಯಾವೆಲ್ಲಾ ಕಾರಣಗಳಿಂದ ಕಂದಾಯ ಭೂಮಿಯನ್ನು ಅರಣ್ಯ ವ್ಯಾಪ್ತಿಗೆ ಪಡೆದುಕೊಳ್ಳಲಾಗುತ್ತಿದೆ ಎಂಬುದುನ್ನು ವಿವರಿಸಿ ಸೆಕ್ಷನ್ 17 ಜಾರಿಗೊಳಿಸುತ್ತಾರೆ. ಒಮ್ಮೆ ಸೆಕ್ಷನ್ 17ರ ಪ್ರಕಾರ ಅಧಿಸೂಚನೆ ಹೊರಡಿಸಿರೆ ಅದು ಸಂಪೂರ್ಣವಾಗಿ ಅರಣ್ಯ ವ್ಯಾಪ್ತಿಗೆ ಸೇರ್ಪಡೆಯಾದಂತೆ.
ಈಗ ತನಿಖೆ ನಡೆದಿರುವ ಕಡೆ ಮಾತ್ರವಲ್ಲ, ಎಲ್ಲಾ ಕಡೆಯೂ ಅಕ್ರಮ ಮಂಜೂರಾತಿ ನಡೆದಿವೆ. ಹಿಂದಿನ ಹತ್ತು ವರ್ಷಗಳ ಅವಧಿಯ ಮಂಜೂರಾತಿ ಬಗ್ಗೆ ಕಂದಾಯ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಆಗ ಎಲ್ಲವೂ ಬಹಿರಂಗವಾಗಲಿದೆ.–ಗುರುಶಾಂತಪ್ಪ, ರೈತ ಸಂಘದ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ
ಪೂರಕ ಮಾಹಿತಿ: ಚಿದಂಬರ ಪ್ರಸಾದ, ವಿಕ್ರಂ ಕಾಂತಿಕೆರೆ, ಮನೋಜಕುಮಾರ್ ಗುದ್ದಿ, ಸೂರ್ಯನಾರಾಯಣ ವಿ.,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.