ADVERTISEMENT

ಪ್ರತಿ ಸಂಬಳಕ್ಕೂ ಲಂಚ ಕಡ್ಡಾಯ! ಅತಿಥಿ ಉಪನ್ಯಾಸಕರ ದುಡಿಮೆಯಲ್ಲೂ ಬೇಕು ಪಾಲು

ಒಳನೋಟ

ಕೆ.ನರಸಿಂಹ ಮೂರ್ತಿ
Published 8 ಜನವರಿ 2022, 19:31 IST
Last Updated 8 ಜನವರಿ 2022, 19:31 IST
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಸದಸ್ಯರು ಮೈಸೂರಿನಲ್ಲಿ ಬಜ್ಜಿ, ಬೋಂಡಾ, ತರಕಾರಿ ಮಾರಾಟ ಮಾಡಿ ಪ್ರತಿಭಟಿಸಿದರು.
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಸದಸ್ಯರು ಮೈಸೂರಿನಲ್ಲಿ ಬಜ್ಜಿ, ಬೋಂಡಾ, ತರಕಾರಿ ಮಾರಾಟ ಮಾಡಿ ಪ್ರತಿಭಟಿಸಿದರು.   

ಮೈಸೂರು: ‘ವರ್ಷಕ್ಕೆ ಒಂದೆರಡು ಬಾರಿಯಷ್ಟೇ ಸಂಬಳ. ಅದಕ್ಕೂ ಲಂಚ ಕೊಡಬೇಕು...’

–ಸೇವೆ ಕಾಯಂ ಮತ್ತು ಉದ್ಯೋಗ ಭದ್ರತೆಗೆ ಸರ್ಕಾರದ ಮೊರೆ ಹೋಗಿರುವ ಅತಿಥಿ ಉಪನ್ಯಾಸಕರ ಸಂಕಟದ ಮಾತಿದು.

‘ಪ್ರತಿ ಬಾರಿ ಸಂಬಳ ಬ್ಯಾಂಕ್‌ ಖಾತೆಗೆ ಜಮೆಯಾಗಬೇಕೆಂದರೆ, ಕಾಲೇಜು ಗುಮಾಸ್ತರಿಗೆ ‘ಇಂತಿಷ್ಟು’ ಲಂಚ ಕೊಡಲೇಬೇಕು. ಅದು ‘ಖಜಾನೆಯ ಪಾಲು’. ಕಾಲೇಜಿನ ಉಪನ್ಯಾಸಕರ ಸಂಖ್ಯೆ, ಒಟ್ಟಾರೆ ವೇತನದ ಪ್ರಮಾಣ ಆಧರಿಸಿ ಲಂಚ ನಿರ್ಧಾರವಾಗುತ್ತದೆ’.

ADVERTISEMENT

‘ವೇತನದ ಅನುದಾನ ಬಿಡುಗಡೆಯಾಗಿದೆ ಎಂಬ ಮಾಹಿತಿ ಬರುತ್ತಿದ್ದಂತೆಯೇ, ಉಪನ್ಯಾಸಕರ ತಂಡ ಜಾಗೃತವಾಗುತ್ತದೆ. ತಂಡದ ಯಾರಾದರೊಬ್ಬರು ನೇತೃತ್ವ ವಹಿಸಿ ಎಲ್ಲರಿಂದಲೂ ಹಣ ಸಂಗ್ರಹಿಸಿ ಗುಮಾಸ್ತರಿಗೆ ಕಾಲೇಜಿನಲ್ಲೇ ಕೊಡಬೇಕು. ಹಾಗೆ ಮಾಡದಿದ್ದರೆ, ಬಿಡುಗಡೆಯಾದ ಸಂಬಳ ಖಾತೆಗೆ ಬರಲು ಅದೆಷ್ಟು ದಿನ ಬೇಕಾಗುತ್ತದೋ ಗುಮಾಸ್ತರಿಗಷ್ಟೇ ಗೊತ್ತಿರುತ್ತದೆ’ ಎಂದು ಮೈಸೂರು ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಅತಿಥಿ ಉಪನ್ಯಾಸಕ ಎಸ್.ಸ್ವಾಮಿ ವಿಷಾದದಿಂದ ಹೇಳಿದರು.

‘ಪ್ರತಿಯೊಬ್ಬರೂ ನೂರು, ಇನ್ನೂರು, ಮುನ್ನೂರು ರೂಪಾಯಿ ಹೀಗೆ ಒಂದು ಲೆಕ್ಕದಲ್ಲಿ ಸಂಗ್ರಹಿಸುತ್ತಾರೆ. ಕೆಲವು ಸಾವಿರ ರೂಪಾಯಿಗಳನ್ನು ಒಟ್ಟುಗೂಡಿಸಿ ಕೊಡುತ್ತಾರೆ. ಇದು ಇವತ್ತಿನದಲ್ಲ. ಹತ್ತಾರು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿರುವ ಅಘೋಷಿತ ಸಂಪ್ರದಾಯ. ಈ ಕುರಿತು ಪ್ರಾಂಶುಪಾಲರದ್ದು ಜಾಣಮೌನ’ ಎಂದರು.

ಹುದ್ದೆಗೆ ಆಯ್ಕೆಯಾದ ಬಳಿಕ ಪ್ರಾಂಶುಪಾಲರ ಮರ್ಜಿಯಲ್ಲಿರಬೇಕು. ಹೆಚ್ಚುವರಿ ಕೆಲಸ ಹೇಳಿದರೆ, ಇಲ್ಲವೆನ್ನುವಂತಿಲ್ಲ. ಮಾಡಿದಷ್ಟು ಕೆಲಸಕ್ಕೆ ಸಂಬಳದ ಅನುಮೋದನೆ ಆಗದಿದ್ದರೆ, ಕೇಳುವಂತೆಯೂ ಇಲ್ಲ. ಕೇಳಿದರೆ, ‘ಅನುಮೋದನೆ ಆಗಿದ್ದಿಷ್ಟೇ. ಬೇಕಾದರೆ ಕಾಲೇಜು ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿ’ ಎಂಬ ಸೂಚನೆ. ಅಲ್ಲಿಯೂ ಸಮರ್ಪಕ ಉತ್ತರ ಅಲಭ್ಯ. ನಂತರ, ಮುಂದಿನ ವರ್ಷ ಆ ಕಾಲೇಜಲ್ಲಿ ಕೆಲಸ ಸಿಗುವುದು ಖಚಿತವಿರುವುದಿಲ್ಲ!

ಹತ್ತಾರು ವರ್ಷದ ಅನುಭವವಿದ್ದರೂ ಪ್ರತಿ ವರ್ಷವೂ ಹೊಸದಾಗಿ ಅರ್ಜಿ ಹಾಕಲೇಬೇಕು. ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿಗಾಗಿ ಅರ್ಜಿ ಕರೆದಿರುವ ಲೋಕಸೇವಾ ಆಯೋಗವು ಅನುಭವವನ್ನು ಪರಿಗಣಿಸದಿರುವುದರಿಂದ ಹೆಚ್ಚುವರಿ ಅಂಕವಿಲ್ಲ. ಬಹುತೇಕರಿಗೆ ವಯೋಮಿತಿ ಮೀರಿರುವುದರಿಂದ ಅರ್ಜಿ ಹಾಕಲೂ ಸಾಧ್ಯವಾಗದೆ ಉದ್ಯೋಗದ ಕನಸು ಚೂರುಚೂರು. ಹೀಗಾಗಿ, ‘ಯಾವುದೋ ಒಂದು ಕೆಲಸ ಕೊಡಿ’ ಎಂಬುದು ಸದ್ಯದ ಹೊಸ ಆಗ್ರಹ.

ಅತಿಥಿ ಉಪನ್ಯಾಸಕರು ಒಂದಕ್ಕಿಂತ ಹೆಚ್ಚು ಕಾಲೇಜಲ್ಲಿ ಪಾಠ ಮಾಡುವಂತಿಲ್ಲ. ಹೀಗಾಗಿ ಮೂರು ದಿನವಷ್ಟೇ ಕೆಲಸ. ಉಳಿದ ದಿನಗಳಲ್ಲಿ ಕೃಷಿ, ಗಾರೆ, ಚಿಲ್ಲರೆ ವ್ಯಾಪಾರವೇ ಗಟ್ಟಿ. ಆಸ್ತಿ ಇದ್ದರೆ, ದಂಪತಿ ಇಬ್ಬರೂ ದುಡಿಯುತ್ತಿದ್ದರಷ್ಟೇ ನಿರಾಳ. ಪತಿಗೂ ಕೆಲಸವಿಲ್ಲದೆ, ಅತಿಥಿ ಉಪನ್ಯಾಸಕರಾಗಿ ಮನೆ ಹೊಣೆ ಹೊತ್ತ ಮಹಿಳೆಯರ ಪರಿಸ್ಥಿತಿ ಇನ್ನೂ ಕಷ್ಟ.

ಸಿಗುವ ಹಿಡಿಯಷ್ಟು ಸಂಬಳದಲ್ಲಿ ಮನೆ ಬಾಡಿಗೆ, ಹೆಂಡತಿ, ಮಕ್ಕಳು, ಅಪ್ಪ–ಅಮ್ಮನ ಯೋಗಕ್ಷೇಮ ನೋಡುವುದಾದರೂ ಹೇಗೆ? ಸ್ವಂತ ಖರ್ಚಿಗೂ ಹಣವಿರುವುದಿಲ್ಲ. ಇಂಥ ಅತಂತ್ರ ಪರಿಸ್ಥಿತಿಯಲ್ಲಿರುವ ಉಪನ್ಯಾಸಕರ ಪೈಕಿ ಶೇ 56ರಷ್ಟು ಮಹಿಳೆಯರಿದ್ದಾರೆ.

ಇಎಸ್‌ಐ, ಪಿಎಫ್‌ ಸೌಲಭ್ಯವಿಲ್ಲ. ಸತ್ತರೆ ಕುಟುಂಬದವರಿಗೆ ಪರಿಹಾರವಿಲ್ಲ. ಕೋವಿಡ್‌ ಬಂದಾಗಿನಿಂದ 68 ಮಂದಿ ಸಾವಿಗೀಡಾಗಿದ್ದಾರೆ. ಅತಿಥಿ ಉಪನ್ಯಾಸಕರ ಆತ್ಮಹತ್ಯೆ ಸರಣಿಯೂ ನಿಂತಿಲ್ಲ.

24 ಸಾವಿರ ಶಿಕ್ಷಕರ ಪೈಕಿ ಈಗ 14ಸಾವಿರ ಶಿಕ್ಷಕರ ನೇಮಕಕ್ಕೆ ಸರ್ಕಾರ ಮುಂದಾಗಿದೆ. ಉಳಿದವರ ಪಾಡೇನು? ಹೇಳೋರೂ ಇಲ್ಲ. ಕೇಳೋರೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.