ADVERTISEMENT

ಒಳನೋಟ | ಉನ್ನತ ಹುದ್ದೆ ಗಿಟ್ಟಿಸಲು ನೆರವಾದ ಮೀಸಲಾತಿ

ಹಲವು ಓರೆಕೋರೆಗಳ ಮಧ್ಯೆಯೂ ಬದುಕು ಬದಲಿಸಿದ 371 ಜೆ ಕಲಂ

ಮನೋಜ ಕುಮಾರ್ ಗುದ್ದಿ
Published 18 ಜನವರಿ 2020, 22:29 IST
Last Updated 18 ಜನವರಿ 2020, 22:29 IST
   

ಕಲಬುರ್ಗಿ: ಆಳಂದ ತಾಲ್ಲೂಕಿನ ವ್ಯಕ್ತಿಯೊಬ್ಬರು ಕಡು ಬಡತನದಲ್ಲಿ ಕಷ್ಟಪಡುತ್ತಲೇ ಕೆಎಎಸ್‌ ಪರೀಕ್ಷೆ ಬರೆದಿದ್ದರು. ಮೀಸಲಾತಿ ಇರದಿದ್ದರೆ ಅವರಿಗೆ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಹುದ್ದೆ ಸಿಗುವುದು ಕಷ್ಟವಿತ್ತು. ಅವರಿಗೀಗ ಪ್ರಮುಖ ಸರ್ಕಾರಿ ಹುದ್ದೆ ಗಿಟ್ಟಿಸಿದ ಖುಷಿ.

ಕೆಪಿಎಸ್ಸಿ ಇತ್ತೀಚೆಗೆ ನಡೆಸಿದ ಪರೀಕ್ಷೆಯಲ್ಲಿ ಕಲಬುರ್ಗಿ ಜಿಲ್ಲೆಯ 24 ಜನ ತೇರ್ಗಡೆ ಆಗಿದ್ದಾರೆ. 371 (ಜೆ) ಮೀಸಲಾತಿಯ ರಕ್ಷೆ ಇರದಿದ್ದರೆ ಅವರಲ್ಲಿ ಕೆಲವರಿಗೆ ಉನ್ನತ ಹುದ್ದೆಯ ಅವಕಾಶವೇ ಸಿಗುತ್ತಿರಲಿಲ್ಲ. ಅಲ್ಲದೇ, ಇತಿಮಿತಿಗಳ ಮಧ್ಯೆಯೇ ಬಡ್ತಿ ನಿಯಮಗಳನ್ನು ಮೀಸಲಾತಿಯನ್ವಯ ಅನು ಷ್ಠಾನಗೊಳಿಸಿದ ಕಾರಣ ಕಲ್ಯಾಣ ಕರ್ನಾಟಕ ಭಾಗದ ಕೆಲ ಅಧಿಕಾರಿಗಳಿಗೆ ಬಡ್ತಿ ಸಿಕ್ಕಿದೆ. ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿದ್ದವರು ಇದೀಗ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

‘2014ಕ್ಕೂ ಮೊದಲು ಕಂದಾಯ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಿಂದ ಸರಾಸರಿ 20 ಜನ ಎ.ಸಿ, ತಹಶೀಲ್ದಾರ್‌ ಹುದ್ದೆಗೆ ನೇರ ನೇಮಕ ಆಗಿದ್ದರು. ಮೀಸಲಾತಿ ಸೌಲಭ್ಯ ಶುರುವಾದ ಬಳಿಕ 2014ರಲ್ಲಿ ನಡೆದ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಿಂದ 52 ಜನ ನೇರ ನೇಮಕಗೊಂಡಿದ್ದಾರೆ. ಅವರ ಪೈಕಿ 12 ಉಪ ವಿಭಾಗಾಧಿಕಾರಿಗಳಾದರೆ 40 ತಹಶೀಲ್ದಾರ್‌ಗಳು’ ಎಂದು ವಿವರಿಸುತ್ತಾರೆ ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ರಜಾಕ್ ಉಸ್ತಾದ್‌.

ADVERTISEMENT

ಸಂಪೂರ್ಣ ಅನುಷ್ಠಾನವಿಲ್ಲ: ‘ಸಾವಿ ರಾರು ಸರ್ಕಾರಿ ಹುದ್ದೆಗಳು ಈಗಲೂ ಖಾಲಿ ಇವೆ. ಈ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆ ಒಪ್ಪಿಗೆ ಪಡೆಯಬೇಕಿಲ್ಲ. ಆದಾಗ್ಯೂ, ಈ ನಿಯಮ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿಲ್ಲ’ ಎನ್ನುತ್ತಾರೆ ಹೈ-ಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ.

‘ಕಾಯ್ದೆ ಜಾರಿಯಾಗಿ ಆರು ವರ್ಷಗಳಾಗುತ್ತಾ ಬಂದರೂ ಈ ಭಾಗದಲ್ಲಿ ಎಲ್ಲ ಹುದ್ದೆಗಳ ಭರ್ತಿ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಮುಖ್ಯವಾಗಿ ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್‌ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಅಂದುಕೊಂಡಷ್ಟು ನೇಮಕ ಪ್ರಕ್ರಿಯೆಗಳು ನಡೆದಿಲ್ಲ. ಕಲ್ಯಾಣ ಕರ್ನಾಟಕ ಭಾಗ ಹೊರತುಪಡಿಸಿ ರಾಜ್ಯದ ಬೇರೆಡೆಯ ಹುದ್ದೆಗಳಲ್ಲಿ ಈ ಭಾಗದವರಿಗೆ ಶೇ 8ರಷ್ಟು ಮೀಸಲಾತಿ ನೀಡುವುದು ಕಡ್ಡಾಯ. ಆದರೆ, ಇದನ್ನು ಪ್ರಶ್ನಿಸಿ ಕೆಲ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್‌ ಮೊರೆ ಹೋಗಿದ್ದವು. ಆ ಸಂಸ್ಥೆಗಳ ವಾದ ತಳ್ಳಿ ಹಾಕಿದ ಹೈಕೋರ್ಟ್‌, ಶೇ 8ರಷ್ಟು ಮೀಸಲಾತಿ ಕೊಡಲೇಬೇಕು ಎಂದು ಕಟ್ಟಪ್ಪಣೆ ನೀಡಿದೆ’ ಎಂದು ವಿವರಿಸುತ್ತಾರೆ.

‘ಖಾಲಿ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆಯ ಒಪ್ಪಿಗೆ ಬೇಕಿಲ್ಲ ಎಂಬುದೇನೋ ನಿಜ. ಆದರೆ, ಅನುಷ್ಠಾನ ಸುಲಭವಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಈ ಆದೇಶ ಕಾಗದದ ಮೇಲಷ್ಟೇ ಉಳಿದಿದೆ’ ಎನ್ನುತ್ತಾರೆ ದಸ್ತಿ.

ಗುಲಬರ್ಗಾ ವಿ.ವಿ: 644 ಹುದ್ದೆ ಖಾಲಿ!
ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿ ಸಾಧಿಸಲು ಆರಂಭವಾದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 644 ಹುದ್ದೆಗಳು (ಬೋಧಕ ಹಾಗೂ ಬೋಧಕೇತರ ಸೇರಿ) ಖಾಲಿ ಇವೆ.

ಒಟ್ಟು 955 ಹುದ್ದೆಗಳಿಗೆ ಮಂಜೂರಾತಿ ದೊರಕಿದ್ದರೂ 312 ಜನ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. 33 ಪ್ರಾಧ್ಯಾಪಕ, 54 ಸಹ ಪ್ರಾಧ್ಯಾಪಕ, 95 ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇವೆ. ಸದ್ಯ 245 ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, 462 ಬೋಧಕೇತರ ಹುದ್ದೆಗಳು ಖಾಲಿ ಇವೆ.

ಗುಲಬರ್ಗಾ ವಿ.ವಿ.ಗೆ ಕಳೆದ ಆರು ತಿಂಗಳಿಂದ ಪೂರ್ಣ ಪ್ರಮಾಣದ ಕುಲಪತಿಯೂ ಇಲ್ಲ. ಪ್ರತಿವರ್ಷವೂ ಪ್ರಾಧ್ಯಾಪಕರು ನಿವೃತ್ತಿ ಹೊಂದುತ್ತಿದ್ದು, ಅದಕ್ಕೆ ಪೂರಕವಾಗಿ ಭರ್ತಿ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಇದರಿಂದ ವಿ.ವಿ.ಯ ಶೈಕ್ಷಣಿಕ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. ಅತಿಥಿ ಉಪನ್ಯಾಸಕರೇ ಆಧಾರ ಎನ್ನುವಂತಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ಪ್ರಮಾಣ

* ‘ಎ’ ಮತ್ತು ‘ಬಿ’ ಗ್ರೂಪ್‌ನ ಹುದ್ದೆಗಳಲ್ಲಿ ಶೇ 75

* ‘ಸಿ‘ ಗ್ರೂಪ್‌ ಹುದ್ದೆಗಳಲ್ಲಿ ಶೇ 80

* ‘ಡಿ’ ಗ್ರೂಪ್‌ ಹುದ್ದೆಗಳಲ್ಲಿ ಶೇ 85

* ರಾಜ್ಯದ ಇತರೆ ಭಾಗದಲ್ಲಿಯ ‘ಎ’ ಗ್ರೂಪ್‌ ಹುದ್ದೆಗಳಲ್ಲಿ ಶೇ 8ರಷ್ಟು

ಇದನ್ನೂ ಓದಿ...ಒಳನೋಟ | ಕಲ್ಯಾಣ ಕರ್ನಾಟಕದಲ್ಲಿ ಕೊರತೆ ನೂರು, ಸಿಕ್ಕಿದ್ದು ಚೂರು

40,000 ಹುದ್ದೆ ಇನ್ನೂ ಖಾಲಿ
ಕಲ್ಯಾಣ ಕರ್ನಾಟಕ ಭಾಗದಲ್ಲಿ 371 ಜೆ ಕಲಂ ಅನ್ವಯ ಮೀಸಲಾತಿ ಸೌಲಭ್ಯ ದಕ್ಕಿದ್ದರಿಂದ 2014ರಿಂದ ಇಲ್ಲಿಯವರೆಗೆ ಸುಮಾರು 20 ಸಾವಿರ ಹುದ್ದೆ ಗಳು ಈ ಭಾಗದವರಿಗೆ ದಕ್ಕಿವೆ. ಇನ್ನೂ ಸುಮಾರು 30ರಿಂದ 40 ಸಾವಿರ ಖಾಲಿ ಹುದ್ದೆಗಳಿದ್ದು, ಅವುಗಳನ್ನು ಶೀಘ್ರ ಭರ್ತಿ ಮಾಡಿದರೆ ಮೀಸಲಾತಿಯ ಪ್ರಯೋಜನ ಪಡೆಯಲು ಸಾಧ್ಯ ಎಂಬುದು ಇಲ್ಲಿನವರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.