ADVERTISEMENT

ಬೆಳ್ಳಿಬೆಟ್ಟ ಕಾವಲು | ಸಂತ್ರಸ್ತರಿಗೆ ಪ್ರವೇಶವಿಲ್ಲ, ದಯಾಮರಣ ಕೇಳಿದ ನಿರಾಶ್ರಿತರು

ರಾತ್ರೋರಾತ್ರಿ ಪಾದಯಾತ್ರೆ l ಮರೀಚಿಕೆಯಾದ ನ್ಯಾಯ

ಎಂ.ಎನ್.ಯೋಗೇಶ್‌
Published 24 ಆಗಸ್ಟ್ 2019, 20:15 IST
Last Updated 24 ಆಗಸ್ಟ್ 2019, 20:15 IST
ರಾಜ್ಯಪಾಲರನ್ನು ಭೇಟಿಯಾಗಲು ರಾತ್ರೋರಾತ್ರಿ ಮಹಿಳೆಯರು, ಮಕ್ಕಳೊಂದಿಗೆ ಪಾದಯಾತ್ರೆ ನಡೆಸಿದ್ದ ಬೆಳ್ಳಿಬೆಟ್ಟ ಕಾವಲು ಪ್ರದೇಶದ ಮುಳುಗಡೆ ಸಂತ್ರಸ್ತರು (ಸಂಗ್ರಹ ಚಿತ್ರ)
ರಾಜ್ಯಪಾಲರನ್ನು ಭೇಟಿಯಾಗಲು ರಾತ್ರೋರಾತ್ರಿ ಮಹಿಳೆಯರು, ಮಕ್ಕಳೊಂದಿಗೆ ಪಾದಯಾತ್ರೆ ನಡೆಸಿದ್ದ ಬೆಳ್ಳಿಬೆಟ್ಟ ಕಾವಲು ಪ್ರದೇಶದ ಮುಳುಗಡೆ ಸಂತ್ರಸ್ತರು (ಸಂಗ್ರಹ ಚಿತ್ರ)   

ಮಂಡ್ಯ: ಕೆ.ಆರ್‌.ಪೇಟೆ ತಾಲ್ಲೂಕು ಬೆಳ್ಳಿಬೆಟ್ಟ ಕಾವಲು ಪ್ರದೇಶದ ಬೆಲೆಬಾಳುವ ಮರಗಳು ಹಾಗೂ ಜಾಗದ ಮೇಲೆ ಕಣ್ಣಿಟ್ಟಿರುವ ದುಷ್ಕರ್ಮಿಗಳು, ಹೇಮಾವತಿ ಜಲಾಶಯದಿಂದ ನಿರಾಶ್ರಿತರಾದ 118 ಕುಟುಂಬಗಳಿಗೆ ಪ್ರವೇಶ ನಿರಾಕರಿಸುತ್ತಾ ಬಂದಿದ್ದಾರೆ.

ಹೇಮಾವತಿ ಜಲಾಶಯ ನಿರ್ಮಾಣ ವೇಳೆ ನೆಲೆ ಕಳೆದುಕೊಂಡವರಿಗೆ ಬೆಳ್ಳಿಬೆಟ್ಟ ಕಾವಲು ಗ್ರಾಮದ ಕಾಡಂಚಿನಲ್ಲಿ 500 ಎಕರೆ ಭೂಮಿ ಮೀಸಲಿಡಲಾಗಿತ್ತು. ಭೂಮಿ ಹಂಚಿಕೆ, ಹಕ್ಕುಪತ್ರ ವಿತರಣೆ ಪ್ರಕ್ರಿಯೆ ಆರಂಭವಾದ ನಂತರ ನಿರಾಶ್ರಿತರು ಗ್ರಾಮಕ್ಕೆ ವಲಸೆ ಬಂದರು. ಒಟ್ಟು ಭೂಮಿಯಲ್ಲಿ 26 ಎಕರೆಯನ್ನು ಗ್ರಾಮ ಠಾಣೆ ಭೂಮಿ ಎಂದು ಗುರುತಿಸಿ ಗುಡಿಸಲು ಹಾಕಿಕೊಳ್ಳಲು ಯತ್ನಿಸಿದರು.

ಆದರೆ, ಅಲ್ಲಿ ವಾಸ ಮಾಡಲು ನಿರಾಶ್ರಿತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಭೂಮಿಯು ಅರಣ್ಯ ಇಲಾಖೆಗೆ ಸೇರಿದೆ ಎಂಬ ನೆಪದಲ್ಲಿ ನಿರಾಶ್ರಿತರು ಅಲ್ಲಿಗೆ ಕಾಲಿಡುವುದನ್ನೇ ತಡೆದರು. ಅರಣ್ಯ ಹಾಗೂ ಕಂದಾಯ ಇಲಾಖೆ ನಡುವಿನ ಸಮನ್ವಯದ ಕೊರತೆಯಿಂದಾಗಿ ಹಲವು ದಶಕ ನಿರಾಶ್ರಿತರು ನಿರಾಶ್ರಿತರಾಗಿಯೇ ಉಳಿಯಬೇಕಾಯಿತು.

ADVERTISEMENT

ಸಂತ್ರಸ್ತರ ಹೆಸರಿನಲ್ಲಿ ಆರ್‌ಟಿಸಿ ಇದೆ, ಕೆಲವರು ಬ್ಯಾಂಕ್‌ ಸಾಲವನ್ನೂ ಪಡೆದಿದ್ದಾರೆ. ಆದರೂ ಭೂಮಿ ಅನುಭವಿಸುವ ಹಕ್ಕು ಮರೀಚಿಕೆಯಾಗಿಯೇ ಉಳಿಯಿತು. ನಿರಾಶ್ರಿತರಿಗೆ ಮಂಜೂರು ಮಾಡಿರುವ ಭೂಮಿಯಲ್ಲಿ ಮರಗಳು ಇಲ್ಲ, ಅವರಿಗೆ ಭೂಮಿ ಬಿಟ್ಟುಕೊಡಲು ಅಡ್ಡಿ ಇಲ್ಲ ಎಂದು ಪಿಸಿಸಿಎಫ್‌ ಷರಾ ಬರೆದಿದ್ದಾರೆ. ರಾಜ್ಯ ಹೈಕೋರ್ಟ್‌ ಕೂಡ ಭೂಮಿ ಬಿಟ್ಟುಕೊಡಬೇಕು ಎಂದು ಆದೇಶ ನೀಡಿದೆ. ಇಷ್ಟಾದರೂ ಬೆಳ್ಳಿ ಬೆಟ್ಟದ ಕಾವಲು ಪ್ರದೇಶಕ್ಕೆ ಅವರಿಗೆ ಈವರೆಗೆ ಪ್ರವೇಶ ಇಲ್ಲದಂತಾಗಿದೆ.

ಇದರ ಹಿಂದಿನ ಕಾರಣ ಹುಡುಕುತ್ತಾ ಹೋದರೆ ಮರಗಳ್ಳರು ಹಾಗೂ ಭೂಗಳ್ಳರ ಆಟಾಟೋಪ ತೆರೆದುಕೊಳ್ಳುತ್ತದೆ. ಬೆಳ್ಳಿ ಬೆಟ್ಟ ಕಾವಲಿನಲ್ಲಿ ನೀಲಗಿರಿ ಮರ ಬೆಳೆಸಲಾಗಿದೆ. ಮರ ಕಡಿದಾಗ ಅರಣ್ಯ ಇಲಾಖೆ ಅಧಿಕಾರಿಗಳು ಕೇವಲ ಶೇ 10ರಷ್ಟು ಹಣವನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ. ಉಳಿದ ಶೇ 90ರಷ್ಟು ವಹಿವಾಟು ಮರಗಳ್ಳರ ಪಾಲಾಗುತ್ತದೆ. ಇದಕ್ಕೆ ಅರಣ್ಯಾಧಿಕಾರಿಗಳೇ ಬೆಂಗಾವಲಾಗಿ ನಿಂತಿದ್ದಾರೆ. ಸಂತ್ರಸ್ತರು ಬೆಳ್ಳಿಬೆಟ್ಟದ ಆಸುಪಾಸಿನಲ್ಲಿ ವಾಸ ಮಾಡಿದರೆ ಅಕ್ರಮ ಚಟುವಟಿಕೆ ಬಯಲಿಗೆ ಬರುತ್ತದೆ ಎಂಬ ಕಾರಣದಿಂದಲೇ ಅವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂಬ ಕತೆ ಕುತೂಹಲ ಮೂಡಿಸುತ್ತದೆ. ಜೊತೆಗೆ ಕೆಲ ಪ್ರಭಾವಿಗಳು ನಿರಾಶ್ರಿತರ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ನಾಲ್ಕೈದು ಸಂತ್ರಸ್ತರ ಭೂಮಿ ಒತ್ತುವರಿ ಮಾಡಿಕೊಂಡಿದ್ದು ಅವರ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಗಿದೆ.

ದಯಾಮರಣಕ್ಕೆ ಮನವಿ

ಭೂಮಿ ಬಿಡಿಸಿಕೊಡುವಂತೆ ಒತ್ತಾಯಿಸಿ ಸಂತ್ರಸ್ತರು 2019, ಜನವರಿಯಲ್ಲಿ ಬೆಳ್ಳಿಬೆಟ್ಟ ಕಾವಲು ಪ್ರದೇಶದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಕೆ.ಆರ್‌.ಪೇಟೆ ಠಾಣೆಗೆ ಕರೆತಂದು ಮಧ್ಯರಾತ್ರಿ ಬಿಡುಗಡೆ ಮಾಡಿದರು. ಇದರಿಂದ ಕೆರಳಿದ ನಿರಾಶ್ರಿತರು ರಾತ್ರೋರಾತ್ರಿ ಮಕ್ಕಳು, ಮಹಿಳೆಯರೊಂದಿಗೆ ಬೆಂಗಳೂರಿಗೆ ಪಾದಯಾತ್ರೆಯಲ್ಲಿ ಹೊರಟರು. ರಾಜ್ಯಪಾಲರನ್ನು ಭೇಟಿಯಾಗಿ, ಕೂಡಲೇ ಭೂಮಿ ಬಿಡಿಸಿಕೊಡಬೇಕು, ಇಲ್ಲವೇ ದಯಾಮರಣ ನೀಡಬೇಕು ಎಂದು ಒತ್ತಾಯಿಸಿದ್ದರು.

‘ಹೇಮಾವತಿ ಅಣೆಕಟ್ಟೆ ನಿರ್ಮಾಣದ ವೇಳೆ ಕಳೆದುಹೋದ ಬದುಕು ನಮಗೆ ಇನ್ನೂ ಸಿಕ್ಕಿಲ್ಲ. ಎಷ್ಟೋ ನಿರಾಶ್ರಿತರು ಈಗಾಗಲೇ ಮೃತಪಟ್ಟಿದ್ದಾರೆ. ನ್ಯಾಯ ಎಂಬುದು ನಮ್ಮ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿದೆ’ ಎಂದು ನಿರಾಶ್ರಿ ತರ ಸಂಘದ ಸಂಚಾಲಕ ಎಸ್‌.ಎಂ.ರವಿ ಹೇಳಿದರು.

* ಭೂಮಿಯ ವಿಸ್ತೀರ್ಣದ ಬಗ್ಗೆ ಗೊಂದಲವಿದೆ. ಸರ್ವೆ ಮಾಡಿಸಿ ಅರಣ್ಯ ಇಲಾಖೆಯ ಜಮೀನು ಬಿಟ್ಟು ಉಳಿದ ಜಾಗವನ್ನು ನಿರಾಶ್ರಿತರಿಗೆ ಬಿಟ್ಟುಕೊಡಲಾಗುವುದು.

–ಎಂ.ಶಿವಮೂರ್ತಿ, ಕೆ.ಆರ್‌.ಪೇಟೆ ತಹಶೀಲ್ದಾರ್‌

* ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.