ADVERTISEMENT

ಒಳನೋಟ | ‘ಅಕ್ರಮ ವಲಸೆ’: ನೆಲೆ ವಿಸ್ತಾರ

ಮಲೆನಾಡು ಜಿಲ್ಲೆಗಳಲ್ಲಿ ವಲಸಿಗರಿಂದ ಹೆಚ್ಚಿದ ಅಪರಾಧ ಪ್ರಕರಣಗಳು

ಅದಿತ್ಯ ಕೆ.ಎ.
Published 19 ಅಕ್ಟೋಬರ್ 2024, 23:32 IST
Last Updated 19 ಅಕ್ಟೋಬರ್ 2024, 23:32 IST
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ನಾಗೇನಹಳ್ಳಿಯ ಕಾಫಿ ತೋಟಗಳಲ್ಲಿರುವ ವಲಸಿಗ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ, ಲಸಿಕೆ ನೀಡಲಾಯಿತು 
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ನಾಗೇನಹಳ್ಳಿಯ ಕಾಫಿ ತೋಟಗಳಲ್ಲಿರುವ ವಲಸಿಗ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ, ಲಸಿಕೆ ನೀಡಲಾಯಿತು     

ಬೆಂಗಳೂರು: ‘ಕಾಫಿ ತೋಟದ ಕೆಲಸಕ್ಕೆ ಸ್ಥಳೀಯ ಕಾರ್ಮಿಕರೇ ಸಿಗುತ್ತಿಲ್ಲ. ಮಧ್ಯವರ್ತಿ ಬಂದು ಒಂದಷ್ಟು ಮಂದಿಯನ್ನು ಕೆಲಸಕ್ಕೆ ಸೇರಿಸುತ್ತಾರೆ. ಬೆಳೆಗಾರರೂ ಇಂಥ ಕಾರ್ಮಿಕರ ಪೂರ್ವಾಪರ ವಿಚಾರಿಸದೇ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ಅದರ ಪರಿಣಾಮದಿಂದಲೇ ಇತ್ತೀಚೆಗೆ ಕೊಡಗಿನ ಪೊನ್ನಂಪೇಟೆಯಲ್ಲಿ ಹೊಡೆದಾಟ ಪ್ರಕರಣವೊಂದು ನಡೆದಿತ್ತು’ ಎಂದು ಕಾಫಿ ಬೆಳೆಗಾರರ ಸಂಘದ ಸದಸ್ಯರೊಬ್ಬರು ‘ಅಕ್ರಮ ವಲಸಿಗ ಕಾರ್ಮಿಕರ’ ಬಗ್ಗೆ ಸಣ್ಣದೊಂದು ಶಂಕೆಯ ಧ್ವನಿಯೊಂದಿಗೆ ಮಾತು ಆರಂಭಿಸಿದರು.

‘ಕಾಫಿ ತೋಟದಲ್ಲಿ ಕಳೆಯಿಂದ ಬಹಳ ರಗಳೆಯಾಗಿದೆ. ಈ ವರ್ಷ ಮಳೆಯೂ ರಚ್ಚೆ ಹಿಡಿದಂತೆ ಸುರಿದು, ಫಸಲೂ ಹಾಳಾಗಿದೆ. ಈಗ ಸಣ್ಣಪುಟ್ಟ ಕೆಲಸಕ್ಕೂ ವಲಸಿಗ ಕಾರ್ಮಿಕರೇ ಆಸರೆ. ಆದರೆ, ಈ ಪರ್ಯಾಯ ವ್ಯವಸ್ಥೆಯೇ ಹೊಸ ಸಮಸ್ಯೆಯನ್ನೂ ಸೃಷ್ಟಿಸುತ್ತಿದೆ’ ಎಂದು ವಲಸಿಗ ಕಾರ್ಮಿಕರ ಬಗ್ಗೆ ಒಗಟಾಗಿ ಮಾತನಾಡಿದವರು ಸಕಲೇಶಪುರದ ಕಾಫಿ ಬೆಳೆಗಾರ ತಿಮ್ಮೇಗೌಡ.

‘ಹೊರಗಿನಿಂದ ಕಾರ್ಮಿಕರು ಬರಲು ಆರಂಭವಾದ ಮೇಲೆ ಜಿಲ್ಲೆಯ ಚಿತ್ರಣ ಬದಲಾಗಿದೆ’ ಎಂದು ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ಬಲ್ಲಮಾವಟಿಯ ಸುದರ್ಶನ್ ಆತಂಕ ವ್ಯಕ್ತಪಡಿಸುತ್ತಾರೆ. ಇಲ್ಲಿನ ಕೆಲವು ಕೃಷಿಕರು, ಸುದರ್ಶನ್ ಅವರ ಮಾತನ್ನು ಅನುಮೋದಿಸುವಂತೆ ನಾಲ್ಕು ವರ್ಷಗಳಿಂದ ಮಲೆನಾಡು ಪ್ರದೇಶವು ಅಕ್ರಮವಾಗಿ ದೇಶದೊಳಗೆ ನುಸುಳುತ್ತಿರುವ ಬಾಂಗ್ಲಾ ಕಾರ್ಮಿಕರಿಂದ ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನೂ ತೆರೆದಿಡುತ್ತಾರೆ.

ADVERTISEMENT

ಒಟ್ಟಾರೆ ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾ ವಲಸೆ ಕಾರ್ಮಿಕರು ಮಲೆನಾಡು ಜಿಲ್ಲೆಗಳಿಗೆ ಕಾಲಿಟ್ಟ ಮೇಲೆ ಹೊಡೆದಾಟ, ಕಳವು, ದರೋಡೆ, ಮಾದಕ ವಸ್ತುಗಳ ಸಾಗಣೆ, ಪೋಕ್ಸೊದಂಥ(ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ) ಗಂಭೀರ ಪ್ರಕರಣಗಳು ಹೆಚ್ಚಾಗಿವೆ.

‘ಈಶಾನ್ಯ ಹಾಗೂ ಉತ್ತರ ಭಾರತ ರಾಜ್ಯಗಳ ಹೆಸರಿನಲ್ಲಿ ಬೆಂಗಳೂರು ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಬಾಂಗ್ಲಾ ಅಕ್ರಮ ವಲಸಿಗರು ಬೀಡುಬಿಟ್ಟಿದ್ದಾರೆ. ಅಕ್ರಮ ವಲಸೆ ಕಾರ್ಮಿಕರಿಂದ ಕಾಫಿ, ಅಡಿಕೆ, ಟೀ ಬೆಳೆಯುವ ಪ್ರದೇಶಗಳು ಸಮಸ್ಯೆ ಎದುರಿಸುತ್ತಿವೆ’ ಎಂದು ಪೊಲೀಸರೇ ಒಪ್ಪಿಕೊಳ್ಳುತ್ತಾರೆ.

‘ಬೆಂಗಳೂರಿನ ವೈಟ್‌ಫೀಲ್ಡ್ ಹಾಗೂ ಆಗ್ನೇಯ ವಿಭಾಗದಲ್ಲೂ ಅಕ್ರಮ ವಲಸಿಗರ ಹಾವಳಿ ಮಿತಿಮೀರಿದೆ. ನಕಲಿ ನೋಟುಗಳ ಚಲಾವಣೆ, ಕಳ್ಳತನ, ಚಿಂದಿ ಆಯುವ ನೆಪದಲ್ಲಿ ಸುಲಿಗೆ ಪ್ರಕರಣಗಳಲ್ಲಿ ಬಾಂಗ್ಲಾ ವಲಸಿಗರು ಸಿಕ್ಕಿ ಬೀಳುತ್ತಿದ್ದಾರೆ. ಅವರನ್ನೂ ಪತ್ತೆಹಚ್ಚಿ ಅವರ ದೇಶಕ್ಕೆ ಕಳುಹಿಸುವುದೂ ಸವಾಲಿನಿಂದ ಕೂಡಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಉಡುಪಿಯ ಮಲ್ಪೆಯಲ್ಲಿ ಅಕ್ರಮವಾಗಿ ನೆಲಸಿದ್ದ ಏಳು ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಅಕ್ಟೋಬರ್‌ 12ರಂದು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಬಂಧಿತರು ನಕಲಿ ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಹೊಂದಿರುವುದೂ ಪತ್ತೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲೂ ದೊಡ್ಡ ಸಂಖ್ಯೆಯಲ್ಲಿ ಅಕ್ರಮ ವಲಸಿಗರು ಇದ್ದಾರೆ. ಕರಾವಳಿ ಪ್ರದೇಶವು ಸಹ ಅಕ್ರಮ ವಲಸಿಗರು, ಮಾನವ ಕಳ್ಳಸಾಗಣೆ ಏಜೆಂಟರಿಗೆ ಕಾರ್ಯ ಸ್ಥಾನ ಆಗುತ್ತಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ರಾಜ್ಯ ರಾಜಕಾರಣದಲ್ಲಿದ್ದ ಅವಧಿಯಲ್ಲಿ ಅಕ್ರಮ ವಲಸಿಗರ ಬಗ್ಗೆ ಗಮನ ಸೆಳೆದಿದ್ದರು. 

‘ಬಾಂಗ್ಲಾದೇಶ ಪ್ರಜೆಗಳು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲಸಿರುವುದು ರಾಜ್ಯ, ರಾಷ್ಟ್ರ ಎರಡಕ್ಕೂ ಅಪಾಯ ತಂದೊಡ್ಡಿದೆ’ ಎಂದು ಬಸವರಾಜ ಬೊಮ್ಮಾಯಿ ಗುಡುಗಿದ್ದರು. ಇದಕ್ಕೆ ಧ್ವನಿಗೂಡಿಸಿದ್ದ ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್‌, ಬಿಜೆಪಿ ನಾಯಕ ಬಿ.ಭಾಸ್ಕರ್ ರಾವ್ ಅವರೂ ‘ಬಾಂಗ್ಲಾದೇಶದ ಪ್ರಜೆಗಳಿಗೆ ರಾಜಕೀಯ ಬೆಂಬಲ ಇರುವುದರಿಂದ ಅವರನ್ನು ಗಡೀಪಾರು ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. 

ಇನ್ನೊಂದೆಡೆ ಮಲೆನಾಡು ಭಾಗಕ್ಕೆ ಉತ್ತರ ಭಾರತದ ಕಾರ್ಮಿಕರು ವಲಸೆ ಬಂದ ಬಳಿಕ, ಕಾರ್ಮಿಕರ ಸಮಸ್ಯೆ ತಕ್ಕಮಟ್ಟಿಗೆ ನೀಗಿದೆ. ತೋಟಗಳ ನಿರ್ವಹಣೆಯೂ ಸುಲಭವಾಗಿದೆ. ಸ್ಥಳೀಯ ಕಾರ್ಮಿಕರು, ದಿನಕ್ಕೆ ₹500ರಿಂದ ₹600 ಕೂಲಿ ಕೇಳುತ್ತಾರೆ. ಕೆಲಸ ಮಾಡುವ ಅವಧಿಯೂ ಕಡಿಮೆ. ಆದರೆ, ಹೊರರಾಜ್ಯದ ಕಾರ್ಮಿಕರಿಗೆ ದಿನಕ್ಕೆ ₹380 ಕೂಲಿ ನೀಡಲಾಗುತ್ತಿದೆ. ಈ ಕಾರ್ಮಿಕರು ತೋಟಗಳಲ್ಲಿಯೇ ವಾಸ ಇರುವುದರಿಂದ ಹೆಚ್ಚಿನ ಸಮಯ ಕೆಲಸ ಮಾಡುತ್ತಾರೆ. ಹೀಗಾಗಿ, ಕಾಫಿ ತೋಟಗಳ ಮಾಲೀಕರು, ಹೊರರಾಜ್ಯದ ಕಾರ್ಮಿಕರನ್ನೇ ಅವಲಂಬಿಸಿದ್ದಾರೆ. ಅವರಿಗೆ ಪ್ರಾಮುಖ್ಯತೆ ನೀಡುತ್ತಾರೆ. ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ನಡೆಯುತ್ತಿರುವ ಹೈನುಗಾರಿಕೆಯಲ್ಲೂ ಅಸ್ಸಾಂ ಹಾಗೂ ಒಡಿಶಾದ ಕಾರ್ಮಿಕರೂ ನೆರವಾಗುತ್ತಿದ್ದಾರೆ. ಅವರ ವಲಸೆಯಿಂದ ಆಗಿರುವ ಪ್ರಯೋಜನಗಳ ಬಗ್ಗೆಯೂ ಸ್ಥಳೀಯರು ಹೆಮ್ಮೆಯಿಂದ ಮಾತನಾಡುತ್ತಾರೆ. ಆದರೆ, ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಅಷ್ಟೇ ಆಕ್ರೋಶದಿಂದ ಕಿಡಿಕಾರುತ್ತಾರೆ.

‘ಪಶ್ಚಿಮ ಬಂಗಾಳದ ಗಡಿಪ್ರದೇಶದಲ್ಲಿ ಅಕ್ರಮವಾಗಿ ವಲಸಿಗರು ನುಸುಳಿ ದೇಶದ ನಾನಾ ಕಡೆ ನೆಲೆ ಕಂಡುಕೊಂಡಿದ್ದಾರೆ. ಗಡಿಯಲ್ಲಿ ಅವರನ್ನು ಒಳಕ್ಕೆ ಕರೆತರುವ ಮಧ್ಯವರ್ತಿಗಳಿದ್ದಾರೆ. ಅಲ್ಲಿಂದ ರೈಲು ಮೂಲಕ ಬೆಂಗಳೂರಿಗೆ ಬರುತ್ತಾರೆ. ರಾಜ್ಯದ ಮಧ್ಯವರ್ತಿಗಳು ಅವರನ್ನು ಕೆಂಪೇಗೌಡ ಬಸ್‌ ನಿಲ್ದಾಣದಿಂದ ಕೊಡಗು, ಚಿಕ್ಕಮಗಳೂರು, ಹಾಸನಕ್ಕೆ ರಾತ್ರೋರಾತ್ರಿ ಕಳುಹಿಸಿಕೊಡುತ್ತಿದ್ದಾರೆ. ಬಸ್‌ ನಿಲ್ದಾಣಗಳಲ್ಲಿ ಯಾವುದೇ ದಾಖಲೆಗಳ ಪರಿಶೀಲನೆ ನಡೆಯುವುದಿಲ್ಲ. ಇದರಿಂದ ಸುಲಭವಾಗಿ ಬಾಂಗ್ಲಾ ಅಕ್ರಮ ವಲಸಿಗರು ಕಾಫಿ ಎಸ್ಟೇಟ್‌ ಸೇರುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಅಕ್ರಮ ವಲಸಿಗರನ್ನು ಕರೆತರುವುದು, ಅವರಿಗೆ ನಕಲಿ ಆಧಾರ್ ಕಾರ್ಡ್‌ ಮಾಡಿಸಿಕೊಡುವುದು, ಕೂಲಿ ನಿಗದಿ ಮಾಡುವುದು ಎಲ್ಲವನ್ನೂ ಮಧ್ಯವರ್ತಿಗಳೇ ನೋಡಿಕೊಳ್ಳುತ್ತಾರೆ. ಇನ್ನು ಕೊಡಗು, ಚಿಕ್ಕಮಗಳೂರಿನ ದೊಡ್ಡ ಕಂಪನಿ ಎಸ್ಟೇಟ್‌ಗಳಲ್ಲಿ ನೆಲಸಿರುವ ಕಾರ್ಮಿಕರ ಪರಿಶೀಲನೆಯೂ ಕಷ್ಟ’ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಬೆಂಗಳೂರು ಸುತ್ತಮುತ್ತ ಹಾಗೂ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲಸಿರುವ ಅಕ್ರಮ ವಲಸಿಗರಿಗೆ ಆಧಾರ್ ಸೇರಿ ಅಗತ್ಯ ದಾಖಲೆಗಳು ಸುಲಭವಾಗಿ ಸಿಗುತ್ತಿವೆ. ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲೇ ಬಾಂಗ್ಲಾ ವಲಸಿಗರಿಗ ನಕಲಿ ದಾಖಲೆ ಮಾಡಿಕೊಡುತ್ತಿದ್ದ ಕಂಪ್ಯೂಟರ್ ಆಪರೇಟರ್‌ ಅನುಶ್ರೀ ಎಂಬುವವರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಈ ಅಕ್ರಮವನ್ನು ಪತ್ತೆ ಹಚ್ಚಿದ್ದ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಯೇ ಆರೋ‍ಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು.

‘ಹಾಸನಕ್ಕೆ ಬಂದ ಬಾಂಗ್ಲಾ ಅಕ್ರಮ ವಲಸಿಗರಿಗೆ ಅನುಶ್ರೀ ಅವರು ನಕಲಿ ದಾಖಲೆ ಸೃಷ್ಟಿಸಿ ಕೊಡುತ್ತಿದ್ದರು. ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದಲ್ಲಿದ್ದ ಆಧಾರ್‌ ಕೇಂದ್ರದಲ್ಲಿ ಅವರು ಕೆಲಸ ಮಾಡುತ್ತಿದ್ದರು. ಜನ್ಮ ದಿನಾಂಕ ತಿಳಿಸಿದರೆ ಸಾಕು, ಅಕ್ರಮ ವಲಸಿಗರಿಗೆ ಆಧಾರ್‌ ಸೇರಿದಂತೆ ಇತರೆ ದಾಖಲೆಗಳನ್ನು ತಯಾರಿಸಿ ಕೊಡುತ್ತಿದ್ದರು. ತಲಾ ₹5ರಿಂದ ₹10 ಸಾವಿರ ಪಡೆದುಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಬೆಂಗಳೂರಿನಲ್ಲೂ ನಕಲಿ ದಾಖಲೆ ಸೃಷ್ಟಿಸುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈ ರೀತಿ ನಕಲಿ ದಾಖಲೆ ಪಡೆದು ನೆಲಸಿರುವ ಕಾರ್ಮಿಕರ ಅಪರಾಧ ಕೃತ್ಯಗಳಲ್ಲಿ ಭಾಗಿ ಆಗುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

2018ರಲ್ಲಿ ಅಕ್ರಮ ವಲಸಿಗರ ಪತ್ತೆ ಕಾರ್ಯಕ್ಕೆ ಕೊಡಗು ಜಿಲ್ಲೆಯಲ್ಲಿ ಚಾಲನೆ ಸಿಕ್ಕಿತ್ತು. ಆಯಾ ವ್ಯಾಪ್ತಿಯ ಪೊಲೀಸರು, ಕೆಲವು ಎಸ್ಟೇಟ್‌ಗಳಿಗೆ ತೆರಳಿ ಆಧಾರ್‌ ಪರಿಶೀಲನೆ ಕಾರ್ಯಕ್ಕೆ ಮುಂದಾಗಿದ್ದರು. ವಲಸಿಗರ ಹಾವಳಿ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುವ ಮುನ್ಸೂಚನೆ ಲಭಿಸಿತ್ತು. ಆದರೆ, ಇತರೆ ಜಿಲ್ಲೆಗಳಲ್ಲಿ ಆ ಕೆಲಸ ನಡೆಯಲಿಲ್ಲ. ಇದೇ ಕಾರಣಕ್ಕೆ ಸಮಸ್ಯೆ ತೀವ್ರವಾಗಿದೆ ಎನ್ನುವ ಅಭಿಪ್ರಾಯವಿದೆ.

‘ಚಿಕ್ಕಮಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ದಿನದಿಂದ ದಿನಕ್ಕೆ ಅವರ ನೆಲೆ ವಿಸ್ತಾರವಾಗುತ್ತಿದೆ. ಇಡೀ ಮಲೆನಾಡಿನ ಕಾಫಿತೋಟಗಳನ್ನು ಅಸ್ಸಾಂ ರಾಜ್ಯದ ಕಾರ್ಮಿಕರು ಆವರಿಸಿಕೊಂಡಿದ್ದಾರೆ. ಹೆಸರಿಗಷ್ಟೇ ಅವರು ಅಸ್ಸಾಂ ಕಾರ್ಮಿಕರು. ಅವರ ಹೆಸರಿನಲ್ಲಿ ಬಾಂಗ್ಲಾ ವಲಸಿಗರೂ ತೋಟಗಳಿಗೆ ನುಸುಳುತ್ತಿದ್ದಾರೆ ಎಂಬ ಅನುಮಾನ ಸ್ಥಳೀಯರಲ್ಲಿ ವ್ಯಾಪಕವಾಗಿದೆ. ಆದರೆ, ಅಕ್ರಮ ಬಾಂಗ್ಲಾ ವಲಸಿಗರಿಗೆ ಸಂಬಂಧಿಸಿದ ಯಾವುದೇ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೆ ದಾಖಲಾಗಿಲ್ಲ’ ಎಂದು ಪೊಲೀಸರು ತಿಳಿಸಿದರು.

ವಲಸೆ ಕಾರ್ಮಿಕರ ನೋಂದಣಿಗೆ ಚಿಕ್ಕಮಗಳೂರಿನಲ್ಲಿ ಪೊಲೀಸ್ ಇಲಾಖೆ ವೆಬ್‌ಸೈಟ್ ತೆರೆದಿದೆ. ವರ್ಷಕ್ಕೊಮ್ಮೆ ತೋಟಗಳ ಮಾಲೀಕರ ಸಭೆ ನಡೆಸಿ, ಎಲ್ಲ ಕಾರ್ಮಿಕರ ದಾಖಲೆ ಸಹಿತ ವಿಳಾಸ ನೋಂದಾಯಿಸಬೇಕು ಎಂದು ಸೂಚಿಸಲಾಗಿದೆ. ಆದರೆ, ನೋಂದಣಿ ಪ್ರಮಾಣ ಶೇ 1ರಷ್ಟೂ ನಡೆದಿಲ್ಲ. ಇದರ ಬಗ್ಗೆ ಪೊಲೀಸ್‌ ಇಲಾಖೆಯಾಗಲಿ ಅಥವಾ ಕಾರ್ಮಿಕ ಇಲಾಖೆಯಾಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಚಿಕ್ಕಮಗಳೂರು ಜಿಲ್ಲೆಯಲ್ಲಿ 203 ದೊಡ್ಡ ದೊಡ್ಡ ತೋಟಗಳಿವೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಪಟ್ಟಿ ಸಿದ್ಧಪಡಿಸಿದ್ದಾರೆ. ಈ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ. ಆದರೆ, ಪೊಲೀಸ್ ಇಲಾಖೆಯ ವೆಬ್‌ಸೈಟ್‌ನಲ್ಲಿ ನೋಂದಣಿ ಆಗಿರುವುದು 1,843 ಕಾರ್ಮಿಕರು ಮಾತ್ರ.

‘ಕಾಫಿ–ಟೀ ತೋಟಗಳಲ್ಲದೆ, ಟಿಂಬರ್ ಸಾಗಣೆ, ಗಾರೆ ಕೆಲಸ, ಅಡಿಕೆ ತೋಟ, ಹೋಟೆಲ್, ಬಾರ್‌ಗಳಲ್ಲೂ ವಲಸೆ ಕಾರ್ಮಿಕರೇ ಆವರಿಸಿಕೊಂಡಿದ್ದಾರೆ. ಮಲೆನಾಡಿನಲ್ಲಿ ನಡೆಯುವ ಸಂತೆಗಳಲ್ಲಿ ಈಗ ವಲಸೆ ಕಾರ್ಮಿಕರಿಗೆ ಬೇಕಿರುವ ವಸ್ತುಗಳದ್ದೇ ಪ್ರತ್ಯೇಕ ಸಾಲುಗಳು ಕಾಣಿಸಿಕೊಳ್ಳುತ್ತಿವೆ. ನಾಲ್ಕೈದು ವರ್ಷಗಳ ಹಿಂದೆ ಜಿಲ್ಲೆಗೆ ಬಂದವರು ಈಗ ಹಳಬರಾಗಿದ್ದಾರೆ. ಅವರಿಗೆ ತಮ್ಮವರಿಗೆ ಬೇಕಿರುವ ವಸ್ತುಗಳೇನು ಎಂಬುದು ಗೊತ್ತಿದೆ. ಅವನ್ನು ತಂದಿಟ್ಟುಕೊಂಡು ಪ್ರತ್ಯೇಕವಾಗಿ ಮಾರಾಟ ಮಾಡುತ್ತಾರೆ. ಕಳ್ಳತನ, ಅತ್ಯಾಚಾರ, ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಚಿಕ್ಕಮಗಳೂರಿನಲ್ಲಿ ಹೆಚ್ಚಾಗುತ್ತಿವೆ. ಪೋಕ್ಸೊ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶೇ 99ರಷ್ಟು ವಲಸೆ ಕಾರ್ಮಿಕರ ನಡುವೆಯೇ ದೌರ್ಜನ್ಯಗಳು ನಡೆಯುತ್ತಿವೆ. ಇವುಗಳ ನಿಯಂತ್ರಣವೇ ಕಷ್ಟವಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಕಾರ್ಮಿಕರ ಮಧ್ಯೆ ಗಲಾಟೆ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಪ್ರಕರಣಗಳಲ್ಲಿ ಭಾಗಿಯಾದವರು ಬಾಂಗ್ಲಾ ದೇಶದಿಂದ ಅಕ್ರಮವಾಗಿ ಬಂದವರು ಇರಬಹುದು ಎಂಬ ಅನುಮಾನವೂ ಸ್ಥಳೀಯರಲ್ಲಿ ಬಲವಾಗುತ್ತಿದೆ. ಪೊಲೀಸ್‌ ಇಲಾಖೆ, ತೋಟದ ಮಾಲೀಕರು ಹಾಗೂ ಕಾರ್ಮಿಕ ಇಲಾಖೆ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿಲ್ಲ. ಗೋಣಿಕೊಪ್ಪಲಿನಲ್ಲಿ ಇತ್ತೀಚೆಗೆ ವಲಸಿಗರು ಪರಸ್ಪರ ಕಿತ್ತಾಟ ನಡೆಸಿದ್ದರು. ಮಡಿಕೇರಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲೂ ವಲಸಿಗರು ಕೈಚಳಕ ತೋರಿದ್ದರು.

‘ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಬಂದಿದ್ದು, ಅವರು ರಾತ್ರಿ 1 ಗಂಟೆಯವರೆಗೂ ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ನಿರ್ಭೀತಿಯಿಂದ ಸಂಚರಿಸಲು ತೊಂದರೆಯಾಗುತ್ತಿದೆ’  ಎಂದು ಕೊಡ್ಲಿಪೇಟೆಯ ಒಕ್ಕಲಿಗರ ಯುವ ವೇದಿಕೆ ಪದಾಧಿಕಾರಿಗಳು ಪೊಲೀಸರ ಎದುರು ಅಳಲು ತೋಡಿಕೊಂಡಿದ್ದರು. 

‘ಇಬ್ಬರು ಅಕ್ರಮ ಬಾಂಗ್ಲಾ ವಲಸಿಗರನ್ನು ನಾಲ್ಕು ವರ್ಷಗಳ ಹಿಂದೆಯೇ ಕೊಡಗಿನಿಂದ ಗಡೀಪಾರು ಮಾಡಿರುವುದು ಬಿಟ್ಟರೆ ಇಲ್ಲಿಯವರೆಗೂ ಅಂತಹವರು ಸಿಕ್ಕಿಲ್ಲ. ಅಸ್ಸಾಂ ಕಾರ್ಮಿಕರ ವೇಷದಲ್ಲಿ ಬಾಂಗ್ಲಾ ದೇಶದ ಪ್ರಜೆಗಳು ಇರುವುದಕ್ಕೆ ನಮ್ಮಲ್ಲಿ ಯಾವುದೇ ಆಧಾರಗಳೂ ಇಲ್ಲ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ. ಆದರೆ, ಕೆಲವು ವಲಸೆ ಕಾರ್ಮಿಕರ ಭಾಷೆ, ಅವರ ಚಲನವಲನ, ಹಾವಭಾವ ಗಮನಿಸಿದ ಸ್ಥಳೀಯರು ಪೊಲೀಸರ ಮಾತನ್ನು ನಂಬುತ್ತಿಲ್ಲ.

ಎರಡು ವರ್ಷದ ಹಿಂದೆ ರಾಮನಗರ ಜಿಲ್ಲೆಯಲ್ಲಿ ಅಕ್ರಮವಾಗಿ ನೆಲಸಿದ್ದ ಬಾಂಗ್ಲಾದೇಶದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈಶಾನ್ಯ ರಾಜ್ಯದವರೆಂದು ಹೇಳಿಕೊಂಡು ಕಾರ್ಖಾನೆ ಸೇರಿದಂತೆ ವಿವಿಧೆಡೆ ಕೆಲಸಕ್ಕೆ ಬರುವವರ ಮೇಲೆ ವಿಶೇಷ ನಿಗಾ ಇಡಲಾಗಿದೆ ಎಂದು ರಾಮನಗರ ಜಿಲ್ಲಾ ಪೊಲೀಸರು ಹೇಳುತ್ತಾರೆ.

‘ಜಿಲ್ಲೆಯ ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧೆಡೆ ಕೆಲಸ ಮಾಡುವವರಲ್ಲಿ ಹೊರ ರಾಜ್ಯದವರು ಇದ್ದಾರೆ. ಅದರಲ್ಲೂ ಈಶಾನ್ಯ ರಾಜ್ಯದವರು ಎಂದು ಹೇಳಿಕೊಂಡು ಕೆಲಸಕ್ಕೆ ಬರುವವರ ಹಿನ್ನೆಲೆ ಪರಿಶೀಲಿಸಿದ ಬಳಿಕವೇ ಕೆಲಸ ನೀಡಬೇಕೆಂದು ಸೂಚನೆ ನೀಡಲಾಗಿದೆ’ ಎಂದು ರಾಮನಗರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ.ಸುರೇಶ್ ತಿಳಿಸಿದರು.

ಶಿವಮೊಗ್ಗ, ಸಾಗರ, ಭದ್ರಾವತಿ ಸೇರಿದಂತೆ ಜಿಲ್ಲೆಯ ನಗರ ಹಾಗೂ ಪಟ್ಟಣಗಳಲ್ಲಿನ ಹೋಟೆಲ್, ರೆಸಾರ್ಟ್, ಹೋಂ–ಸ್ಟೇ ಹಾಗೂ ಪ್ರವಾಸಿ ತಾಣಗಳ ವಸತಿ ನಿಲಯಗಳಲ್ಲಿ ಹಿಂದಿ ಮಾತನಾಡುವ ಉತ್ತರ ಭಾರತದ ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರು ಮಧ್ಯವರ್ತಿಗಳ ಮೂಲಕವೇ ಕೆಲಸಕ್ಕೆ ಬರುತ್ತಾರೆ. ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಪೂರ್ವಾಪರ, ದಾಖಲೆಗಳ ನಿಖರತೆ ಪರಿಶೀಲಿಸಿಯೇ ತೆಗೆದುಕೊಳ್ಳುವಂತೆ ಸ್ಪಷ್ಟ ನಿರ್ದೇಶನವನ್ನು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳ ಮೂಲಕ ಸಂಬಂಧಿಸಿದವರಿಗೆ ನೀಡಿದ್ದೇವೆ. ಇಲ್ಲಿಯ ಜನರು ಜಾಗೃತಿ ಹೊಂದಿದ್ದಾರೆ. ಹೀಗಾಗಿ, ಅಕ್ರಮ ಬಾಂಗ್ಲಾ ವಲಸಿಗರ ಸಮಸ್ಯೆ ಶಿವಮೊಗ್ಗ ಜಿಲ್ಲೆಯಲ್ಲಿ ಇಲ್ಲ ಎಂದು ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.

ದಿನ ಕಳೆದಂತೆ ಸ್ಥಳೀಯರಿಗೆ ಅಸ್ಸಾಂ ಕಾರ್ಮಿಕರು ಹಾಗೂ ಬಾಂಗ್ಲಾ ವಲಸಿಗರ ವಿರುದ್ಧ ದ್ವೇಷ, ಆತಂಕದ ಭಾವನೆಗಳು ಬಲವಾಗುತ್ತಿವೆ. ಇನ್ನೂ ಸ್ಥಳೀಯ ಕಾರ್ಮಿಕರು, ಆದಿವಾಸಿಗಳಲ್ಲಿ ಅಸ್ಸಾಂನವರು ಬಂದು ನಮ್ಮ ಕೂಲಿ ಕಿತ್ತುಕೊಂಡರು ಎಂಬ ಆಕ್ರೋಶವೂ ಇದೆ. ಕಾಫಿ ಪ್ಲಾಂಟರ್‌ಗಳಲ್ಲಿ ಕಡಿಮೆ ದಿನಗೂಲಿಗೆ ಕಾರ್ಮಿಕರು ಸಿಗುತ್ತಿದ್ದಾರೆ ಎನ್ನುವ ಕಾರಣದಿಂದ ವಲಸಿಗರು ಎಲ್ಲಿಂದ ಬರುತ್ತಿದ್ದಾರೆ ಎನ್ನುವ ತಪಾಸಣೆ ಪೂರ್ಣವಾಗಿ ಮಾಡುತ್ತಿಲ್ಲ ಎನ್ನಲಾಗಿದೆ. ಈ ಸಮಸ್ಯೆಗೆ ರಾಜ್ಯ ಸರ್ಕಾರದ ಪೊಲೀಸ್‌ ಮತ್ತು ಕಾರ್ಮಿಕ ಇಲಾಖೆಯೇ ಪರಿಹಾರ ಕಂಡುಕೊಳ್ಳಬೇಕಿದೆ.

ಪಾಕಿಸ್ತಾನದ ಅಕ್ರಮ ವಾಸಿಗಳನ್ನು ಬಂಧಿಸಿದ್ದ ಜಿಗಣಿ ಪೊಲೀಸರು  
ಅಭಿಪ್ರಾಯಗಳು...

ಆಸ್ತಿ ಹಕ್ಕಿಗೂ ಬೇಡಿಕೆ ಸಾಧ್ಯತೆ ಅಕ್ರಮ ವಲಸಿಗರು ಕಾಫಿ ತೋಟದ ಲೈನ್‌ಮನೆ ತೊರೆದು ನಗರ ಪಟ್ಟಣ ಪ್ರದೇಶದಲ್ಲಿ ಬಾಡಿಗೆ ಮನೆ ಪಡೆಯುತ್ತಿದ್ದಾರೆ. ಮುಂದಿನ ಕೆಲವೇ ವರ್ಷಗಳಲ್ಲಿ ಅವರೂ ಭಾಷೆ ಕಲಿತು ಸ್ಥಳೀಯರಾಗುತ್ತಾರೆ. ಸರ್ಕಾರ ವಿವಿಧ ಯೋಜನೆಗಳಲ್ಲಿ ನೀಡುವ ನಿವೇಶನ ಆಸ್ತಿ ಹಕ್ಕುಗಳಿಗೆ ಬೇಡಿಕೆ ಸಲ್ಲಿಸುತ್ತಾರೆ. ಕ್ರಮೇಣ ಸಂಘಟಿತರಾಗಿ ಹೋರಾಟಕ್ಕೆ ಇಳಿಯುತ್ತಾರೆ

–ಸಂಜಯ್ ಸಾಮಾಜಿಕ ಕಾರ್ಯಕರ್ತ ಕೊಟ್ಟಿಗೆಹಾರ

ಚಿಕ್ಕಮಗಳೂರು ಮಾಲೀಕರಿಗೆ ಸೂಚನೆ ತಮ್ಮ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ದಾಖಲೆಗಳನ್ನು ಮಾಲೀಕರು ಪಡೆದುಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಕಾರ್ಮಿಕರ ಪೂರ್ವಾಪರ ತಿಳಿದಿರಬೇಕು ಎಂದೂ ತಿಳಿಸಲಾಗಿದೆ. ಅನುಮಾನಾಸ್ಪದವಾಗಿ ಓಡಾಡುವವರ ಮೇಲೆ ನಿಗಾ ಇರಿಸಲಾಗಿದೆ

–ಕೆ.ರಾಮರಾಜನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೊಡಗು

ನೋಂದಣಿ ಕಡ್ಡಾಯ ವಲಸೆ ಕಾರ್ಮಿಕರ ನೋಂದಣಿ ಕಡ್ಡಾಯ ಎಂದು ತೋಟಗಳ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು

–ಕೆ.ಎಲ್.ರವಿಕುಮಾರ್ ಸಹಾಯಕ ಕಾರ್ಮಿಕ ಆಯುಕ್ತ ಚಿಕ್ಕಮಗಳೂರು

ಅಕ್ರಮ ವಲಸಿಗರ ಪತ್ತೆ ಕಾರ್ಯ ಜಿಲ್ಲೆಯಲ್ಲಿ ಅಕ್ರಮ ವಲಸಿಗರು ಎಷ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುವುದು. ಸಕಲೇಶಪುರ ಸೇರಿದಂತೆ ವಿವಿಧೆಡೆ ತೋಟದ ಕಾರ್ಮಿಕರಾಗಿ ಹಲವರು ಕೆಲಸ ಮಾಡುತ್ತಿದ್ದು ಅಪರಿಚಿತರ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ‌

–ಸಿ.ಸತ್ಯಭಾಮಾ ಜಿಲ್ಲಾಧಿಕಾರಿ ಹಾಸನ

ದಾಖಲೆಗಳ ಪರಿಶೀಲನೆ ಕಾಫಿ ತೋಟಗಳು ಸೇರಿದಂತೆ ವಿವಿಧ ಕಾರ್ಖಾನೆಗಳಲ್ಲಿ ನೇಮಕ ಮಾಡಿಕೊಂಡಿರುವ ಕಾರ್ಮಿಕರ ಮಾಹಿತಿ ನೀಡುವಂತೆ ಮಾಲೀಕರಿಗೆ ಸೂಚಿಸಲಾಗಿದೆ. ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಮೊದಲು ಅವರ ದಾಖಲೆ ಪರಿಶೀಲಿಸುವಂತೆ ತಿಳಿಸಲಾಗಿತ್ತು. ಇಲಾಖೆ ವತಿಯಿಂದ ದಾಖಲೆಗಳ ಪರಿಶೀಲನೆ ನಿರಂತರವಾಗಿ ನಡೆಯುತ್ತಿದೆ

–ಪ್ರಮೋದ್‌ಕುಮಾರ್ ಡಿವೈಎಸ್ಪಿ ಸಕಲೇಶಪುರ  

2022ರಲ್ಲಿ ಬೆಂಗಳೂರಿನಲ್ಲಿ ನೆಲಸಿದ್ದ ಅಕ್ರಮ ವಾಸಿಗಳ ಪತ್ತೆ 

600ಅಕ್ರಮವಾಗಿ ನೆಲಸಿದ್ದವರ ಪತ್ತೆ 34ತಮ್ಮ ದೇಶಕ್ಕೆ ವಾಪಸ್‌ ಕಳುಹಿಸಿದವರು 50ಅಕ್ರಮವಾಗಿ ನೆಲಸಿದ್ದವರ ಬಂಧನ 2023ರಲ್ಲಿ ನಡೆದ ಕಾರ್ಯಾಚರಣೆ ವಿವರ 92ಅಕ್ರಮವಾಗಿ ನೆಲಸಿದ್ದವರ ವಿರುದ್ಧ ಪ್ರಕರಣ ದಾಖಲು 247ತಮ್ಮ ದೇಶಕ್ಕೆ ವಾಪಸ್‌ ಕಳುಹಿಸಿದವರು 126ಅಕ್ರಮವಾಗಿ ನೆಲಸಿದ್ದವರ ಬಂಧನ

ಗಡೀಪಾರಿಗೆ ಕ್ರಮ: ಗೃಹ ಸಚಿವ

‘ರಾಜ್ಯದಲ್ಲಿ ಅಕ್ರಮವಾಗಿ ನೆಲಸಿರುವ ಬಾಂಗ್ಲಾದೇಶದ ಪ್ರಜೆಗಳನ್ನು ಗುರುತಿಸಿ ಬಂಧನ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ಗಡೀಪಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದ್ದಾರೆ. ‘ಬಾಂಗ್ಲಾದೇಶದಿಂದ ಕರ್ನಾಟಕಕ್ಕೆ ಬರುವವರನ್ನು ಪೊಲೀಸರು ಗುರುತಿಸಲಿದ್ದಾರೆ. ಅವರು ಪಾಸ್‌ಪೋರ್ಟ್ ವೀಸಾದಂತಹ ಅಧಿಕೃತ ದಾಖಲೆಗಳನ್ನು ಹೊಂದಿಲ್ಲದೇ ಇದ್ದರೆ ತಕ್ಷಣ ಬಂಧಿಸಿ ಬಂಧನ ಕೇಂದ್ರಗಳಿಗೆ ಕಳುಹಿಸುತ್ತಾರೆ. ಬಳಿಕ ಈ ಬಗ್ಗೆ ಬಾಂಗ್ಲಾದೇಶದ ರಾಯಭಾರಿಗೆ ಮಾಹಿತಿ ನೀಡುತ್ತೇವೆ. ಜೊತೆಗೆ ಗಡೀಪಾರು ಮಾಡಲು ಅನುಮತಿ ಪಡೆಯುತ್ತೇವೆ’ ಎಂದು ಹೇಳಿದ್ದಾರೆ. ‘ರಾಜ್ಯದಲ್ಲಿ ಅಕ್ರಮವಾಗಿ ತಂಗಿರುವ ಬಾಂಗ್ಲಾದೇಶಿಯರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುವುದು ನಿತ್ಯವೂ ನಡೆಯುತ್ತಿದೆ. ಅವರಿಂದ ನಿತ್ಯ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸುತ್ತಿದ್ದೇವೆ’ ಎಂದೂ ಪರಮೇಶ್ವರ ಮಾಹಿತಿ ನೀಡಿದ್ದಾರೆ.  ‘ಬಾಂಗ್ಲಾ ಗಡಿಯಲ್ಲಿ ನುಸುಳದಂತೆ ಬಂದೋಬಸ್ತ್ ಹೆಚ್ಚಿಸಬೇಕು. ಕೇಂದ್ರ ಸರ್ಕಾರದ ಗಮನಕ್ಕೆ‌ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಪ್ರಜೆಗಳ ಅಕ್ರಮ ವಾಸ: ದೇಶದಾದ್ಯಂತ ಜಾಲ  

ಆನೇಕಲ್‌ನ ಜಿಗಣಿ ಬೆಂಗಳೂರಿನ ಪೀಣ್ಯದ ಕೈಗಾರಿಕಾ ಪ್ರದೇಶ ಹಾಗೂ ದೆಹಲಿ ರಾಜಸ್ತಾನದ ಹಲವೆಡೆ ಮೂಲ ಹೆಸರು ಬದಲಿಸಿಕೊಂಡು ನೆಲಸಿದ್ದ ಪಾಕಿಸ್ತಾನದ 20 ಮಂದಿಯನ್ನು ಜಿಗಣಿ ಪೊಲೀಸರು ಇತ್ತೀಚೆಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಪಾಕಿಸ್ತಾನದಿಂದ ಬಂದಿರುವ ಅಕ್ರಮ ವಾಸಿಗಳ ಜಾಲ ದೇಶದಾದ್ಯಂತ ವ್ಯಾ‍ಪಿಸಿರುವುದು ತನಿಖೆಯಿಂದ ಗೊತ್ತಾಗಿದ್ದು ಅಕ್ರಮ ವಾಸಿಗಳ ಪತ್ತೆ ಕಾರ್ಯವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ನಾಲ್ವರು ಅಕ್ರಮ ವಾಸಿಗಳನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದರು. ಅವರನ್ನು ವಿಚಾರಣೆ ನಡೆಸಿದಾಗ ಅಕ್ರಮ ವಾಸಿಗಳ ಜಾಲ ವಿಸ್ತಾರಗೊಂಡಿರುವುದು ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದರು. ‘ಬಂಧಿತರು ಪಾಕಿಸ್ತಾನದ ಧರ್ಮ ಪ್ರಚಾರಕ ರಶೀದ್‌ ಅಲಿ ಸಿದ್ದಿಕಿ ಅಲಿಯಾಸ್‌ ಶಂಕರ್‌ ಹಾಗೂ ಪರ್ವೇಜ್‌ ಅಹ್ಮದ್‌ ಅವರ ಸಂಪರ್ಕದಲ್ಲಿ ಇರುವುದು ತನಿಖೆಯಿಂದ ಗೊತ್ತಾಗಿದೆ. ಅಲ್ಲದೇ ‘ಮೆಹದಿ ಫೌಂಡೇಶನ್‌’ ಮೂಲಕ ಆರೋಪಿಗಳು ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಫೌಂಡೇಶನ್‌ ಕುರಿತು ಪ್ರಚಾರ ನಡೆಸುತ್ತಿದ್ದರು. ಫೌಂಡೇಶನ್‌ ಅನ್ನು ಭಾರತದಲ್ಲಿ ಗಟ್ಟಿಗೊಳಿಸುವ ಪ್ರಯತ್ನದಲ್ಲಿದ್ದರು. ಧರ್ಮ ಪ್ರಚಾರಕ್ಕೆ ಆರ್ಥಿಕ ಸಂಪನ್ಮೂಲವನ್ನೂ ಕ್ರೋಡೀಕರಿಸುತ್ತಿದ್ದರು. ಇದೇ ಕಾರಣಕ್ಕೆ ಆರೋಪಿಗಳು ಭಾರತದ ವಿವಿಧೆಡೆ ನೆಲಸಿದ್ದರು. ಪ್ರಕರಣದ ತನಿಖೆ ಮುಂದುವರಿದಿದ್ದು ಆರೋಪಿಗಳ ಅನ್ಯ ಉದ್ದೇಶವನ್ನೂ ಪತ್ತೆ ಹಚ್ಚಲಾಗುತ್ತಿದೆ’ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು. ‘ಉತ್ತರ ಪ್ರದೇಶದ ಪರ್ವೇಜ್‌ ಅಹ್ಮದ್‌ ಎಂಬಾತ ಭಾರತದಲ್ಲಿ ಮೆಹದಿ ಫೌಂಡೇಶನ್‌ನ ಉಸ್ತುವಾರಿ ವಹಿಸಿಕೊಂಡಿದ್ದಾನೆ. ಆತನೇ ಪಾಕಿಸ್ತಾನದ ಪ್ರಜೆಗಳನ್ನು ಭಾರತಕ್ಕೆ ಕರೆತಂದು ಅವರಿಗೆ ಆಧಾರ್‌ ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

ಶಿವಮೊಗ್ಗದಲ್ಲಿ 12 ಮಂದಿ ಬಂಧನ

ಬಾಂಗ್ಲಾ ದೇಶದಿಂದ ಅಕ್ರಮವಾಗಿ ವಲಸೆ ಬಂದು ಶಿವಮೊಗ್ಗ ಜಿಲ್ಲೆಯಲ್ಲಿ ನೆಲಸಿದ್ದ 12 ಮಂದಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

‘ಶಿವಮೊಗ್ಗದಲ್ಲಿ ಎಂಟು ಹಾಗೂ ತೀರ್ಥಹಳ್ಳಿಯಲ್ಲಿ ನಾಲ್ವರು ನೆಲಸಿದ್ದರು. ಎಲ್ಲರೂ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ವಿಚಾರಣೆ ವೇಳೆ ಬಾಂಗ್ಲಾ ದೇಶದಿಂದ ಭಾರತಕ್ಕೆ ಉದ್ಯೋಗ ಅರಸಿ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರನ್ನು ಬೆಂಗಳೂರಿನ ನೆಲಮಂಗಲ ಸಮೀಪದ ಸೊಂಡೇಕೊಪ್ಪದಲ್ಲಿರುವ ಅಕ್ರಮ ವಲಸಿಗರ ಕೇಂದ್ರದಲ್ಲಿ ಇರಿಸಲಾಗಿದೆ. ಅವರನ್ನು ಬಾಂಗ್ಲಾಕ್ಕೆ ವಾಪಸ್‌ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ಅಕ್ರಮ ವಲಸಿಗರಿಗೆ ಕೆಲಸ ಕೊಟ್ಟಿದ್ದ ಮೇಸ್ತ್ರಿಗಳನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಅವರನ್ನು ಶಿವಮೊಗ್ಗಕ್ಕೆ ಕರೆತಂದವರು ಯಾರು? ಆಶ್ರಯ ನೀಡಿದ್ದು ಯಾರು? ಎಂಬುದರ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಪೂರಕ ಮಾಹಿತಿ: ವಿಜಯಕುಮಾರ್‌ ಎಸ್‌.ಕೆ., ಕೆ.ಎಸ್‌.ಗಿರೀಶ್, ಚಿದಂಬರ ಪ್ರಸಾದ್‌, ಓದೇಶ ಸಕಲೇಶಪುರ, ಜಿ.ಎಚ್‌.ವೆಂಕಟೇಶ್
ಪರಿಕಲ್ಪನೆ: ಯತೀಶ್‌ ಕುಮಾರ್ ಜಿ.ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.