ADVERTISEMENT

ಒಳನೋಟ | ಹೆಜ್ಜೆ ಹೆಜ್ಜೆಗೂ ಎಸ್‌ಐಟಿ ತನಿಖೆ

ಸಿಐಡಿ ಅಧೀನದಲ್ಲಿ ಐದು ವಿಶೇಷ ತನಿಖಾ ತಂಡ l ಮತ್ತಷ್ಟು ಹೊಸ ತಂಡ ರಚನೆಗೆ ಪ್ರಸ್ತಾವ

ಸುಬ್ರಹ್ಮಣ್ಯ ವಿ.ಎಸ್‌.
Published 27 ಅಕ್ಟೋಬರ್ 2024, 0:30 IST
Last Updated 27 ಅಕ್ಟೋಬರ್ 2024, 0:30 IST
<div class="paragraphs"><p>ಹೆಜ್ಜೆ ಹೆಜ್ಜೆಗೂ ಎಸ್‌ಐಟಿ ತನಿಖೆ</p></div>

ಹೆಜ್ಜೆ ಹೆಜ್ಜೆಗೂ ಎಸ್‌ಐಟಿ ತನಿಖೆ

   

ಬೆಂಗಳೂರು: ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಅತ್ಯಾಚಾರದ ಆರೋಪ, ಭ್ರಷ್ಟಾಚಾರ, ನೇಮಕಾತಿ ಅಕ್ರಮ, ಬಹುಕೋಟಿ ಲೂಟಿಯ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಇವೆ. ಯಾವುದೇ ದಿಕ್ಕಿನಿಂದ ಇಂತಹ ಸದ್ದು ಎದ್ದು ಅದು ಗದ್ದಲದ ಸ್ವರೂಪ ಪಡೆಯುತ್ತಿದ್ದಂತೆ, ಅದರ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವ ಹೊಸ ಮಾದರಿಯೊಂದನ್ನು ರಾಜ್ಯ ಸರ್ಕಾರ ಚಾಲ್ತಿಯಲ್ಲಿಟ್ಟಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಎದುರಾಗಿತ್ತು. ಆಡಳಿತ ನಡೆಸಿದವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದ ಅಂದಿನ ವಿರೋಧ ಪಕ್ಷ ಕಾಂಗ್ರೆಸ್‌, ಬೃಹತ್ ಆಂದೋಲನವನ್ನೇ ನಡೆಸಿತ್ತು. ಪಿಎಸ್ಐ ಪ್ರಕರಣದ ತನಿಖೆಗೆ ಮಾತ್ರ ಎಸ್‌ಐಟಿ ರಚಿಸಿದ್ದ ಬಿಜೆಪಿ ಸರ್ಕಾರ, ಉಳಿದ ಪ್ರಕರಣಗಳ ಗೊಡವೆಗೆ ಹೋಗಿರಲಿಲ್ಲ. 

ADVERTISEMENT

ಈಚಿನ ತಿಂಗಳುಗಳಲ್ಲಿ ನಾಡಿನಲ್ಲಿ ಅಡಿಗಡಿಗೂ ಎಸ್‌ಐಟಿಗಳ ‘ಕಾರ್ಯಭಾರ’ವೇ ಪ್ರಧಾನ ಚರ್ಚೆಯಲ್ಲಿದೆ. ಎಸ್ಐಟಿ ನಡೆಸುತ್ತಿರುವ ತನಿಖೆಗಳಲ್ಲಾಗುವ ಶೋಧ, ಆಸ್ತಿ–ಹಣ ವಶ, ಬಂಧನ ಇವೇ ಸಾರ್ವಜನಿಕ ವಲಯದಲ್ಲಿ ಚರ್ಚೆಯ ಕೇಂದ್ರವಾಗಿವೆ. ಬಿಜೆಪಿ–ಜೆಡಿಎಸ್‌ನವರ ವಿರುದ್ಧದ ಪ್ರಕರಣಗಳನ್ನು ಎಸ್ಐಟಿ ಮುಟ್ಟಿದಾಗ, ಆ ಪಕ್ಷದ ನಾಯಕರು ‘ಇದು ರಾಜಕೀಯ ಪ್ರೇರಿತ; ವಿರೋಧ ಪಕ್ಷದವರನ್ನು ಬಾಯಿ ಮುಚ್ಚಿಸುವ ಯತ್ನ’ ಎಂದು ಆಪಾದಿಸುವುದು ಉಂಟು. ಆದರೆ, ತನಿಖೆ ನಡೆಸುವವರು ರಾಜಕಾರಣಿಗಳಲ್ಲ; ಯಾವುದೇ ಪಕ್ಷದ ಸರ್ಕಾರ ಇದ್ದಾಗಲೂ ಆಳ್ವಿಕೆ ನಡೆಸುವ ಪೊಲೀಸ್ ಅಧಿಕಾರಿಗಳು ಎಂಬುದನ್ನು ಮರೆಯಾಗದು. ಒಂದಂತೂ ಸತ್ಯ; ಪ್ರಕರಣ–ಹಗರಣವನ್ನು ಮುಚ್ಚಿ ಹಾಕುವ ಬದಲು ಅದರ ಮೂಲ ಬಗೆದು, ಆರೋಪಿಗಳನ್ನು ಕಾನೂನಿಗೆ ಕುಣಿಗೆ ಸಿಲುಕಿಸುವ ಮಾರ್ಗವನ್ನು ತಪ್ಪೆನ್ನಲಾಗದು. ರಾಜಕೀಯ ಪ್ರೇರಿತವಾಗಿ ಏನೇ ಮಾಡಿದರೂ ಕೊನೆಗೆ ಈ ನೆಲದ ನ್ಯಾಯವೇ ಸರ್ವವನ್ನೂ ನಿರ್ಧರಿಸಿರುವುದರಿಂದ ಎಸ್ಐಟಿ ರಚನೆ ಉದ್ದೇಶವನ್ನೇ ಕುಹಕವಾಡುವುದು ಋಜು ಮಾರ್ಗವೂ ಅಲ್ಲ. 

ಹಿಂದಿನ ವರ್ಷಗಳಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದ ಅಪರಾಧ ಪ್ರಕರಣಗಳು, ಬೃಹತ್‌ ಹಗರಣಗಳ ತನಿಖೆಗಷ್ಟೇ ಎಸ್‌ಐಟಿ ರಚಿಸಲಾಗುತ್ತಿತ್ತು. ಈಗ ರಾಜಕೀಯ ನಂಟಿನ ಪ್ರಕರಣಗಳು ಮತ್ತು ಹಗರಣಗಳ ತನಿಖೆಗೆ ಸರಣಿಯೋಪಾದಿಯಲ್ಲಿ ಎಸ್‌ಐಟಿಗಳನ್ನು ರಚಿಸುವ ಹೊಸ ಮಾರ್ಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಡಿದಿದೆ.

2013ರಿಂದ 2018ರವರೆಗೆ ಆಡಳಿತದ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮೂರು ಎಸ್‌ಐಟಿಗಳನ್ನು ರಚಿಸಿತ್ತು. 2015ರಲ್ಲಿ ಆಗಿನ ಲೋಕಾಯುಕ್ತ ವೈ. ಭಾಸ್ಕರ್‌ ರಾವ್‌ ಮತ್ತು ಅವರ ಮಗನ ವಿರುದ್ಧ ಭ್ರಷ್ಟಾಚಾರದ ಆರೋಪಗಳ ಕುರಿತು ತನಿಖೆ ನಡೆಸಲು ಐಪಿಎಸ್‌ ಅಧಿಕಾರಿ ಕಮಲ್‌ ಪಂತ್‌ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿತ್ತು. ಇದು ರಾಷ್ಟ್ರದಲ್ಲೇ ಸಂಚಲನ ಮೂಡಿಸಿದ್ದ ಪ್ರಕರಣವಾಗಿತ್ತು. ಆಳಕ್ಕಿಳಿದು ತನಿಖೆ ನಡೆಸಿದ್ದ ಎಸ್‌ಐಟಿ, ಅಂದಿನ ಲೋಕಾಯುಕ್ತರ ಮಗ ಅಶ್ವಿನ್ ರಾವ್‌ ಸೇರಿದಂತೆ ಹಲವರನ್ನು ಬಂಧಿಸಿತ್ತು. ಬಳಿಕ ಭಾಸ್ಕರ್ ರಾವ್‌ ಲೋಕಾಯುಕ್ತರ ಹುದ್ದೆಯಿಂದ ಕೆಳಗಿಳಿದಿದ್ದರು.

2017ರ ಸೆಪ್ಟೆಂಬರ್‌ನಲ್ಲಿ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ನಡೆದಿತ್ತು. ಆ ಪ್ರಕರಣದ ತನಿಖೆಗೆ ಐಪಿಎಸ್‌ ಅಧಿಕಾರಿ ಬಿ.ಕೆ. ಸಿಂಗ್‌ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿತ್ತು. 2019ರಲ್ಲಿ ಐ ಮಾನಿಟರಿ ಅಡ್ವೈಸರಿ ಹೆಸರಿನ ಕಂಪನಿಯಿಂದ ಸಾವಿರಾರು ಕೋಟಿ ರೂಪಾಯಿ ಮೊತ್ತದ ವಂಚನೆ ಪ್ರಕರಣ ನಡೆದಿತ್ತು. ಅದರ ತನಿಖೆಗೆ ಐಪಿಎಸ್‌ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ನೇತೃತ್ವದಲ್ಲಿ ಮತ್ತೊಂದು ಎಸ್‌ಐಟಿ ರಚಿಸಲಾಗಿತ್ತು. ಗೌರಿ ಲಂಕೇಶ್‌ ಕೊಲೆ ಪ್ರಕರಣದ ಆಳಕ್ಕಿಳಿದು ಆರೋಪಿಗಳನ್ನು ಬಂಧಿಸುವಲ್ಲಿ ಬಿ.ಕೆ. ಸಿಂಗ್‌ ನೇತೃತ್ವದ ಎಸ್‌ಐಟಿ ಯಶಸ್ವಿಯಾದರೆ, ಐಎಂಎ ಪ್ರಕರಣದ ತನಿಖೆ ಅರ್ಧದಲ್ಲೇ ಸಿಬಿಐಗೆ ವರ್ಗಾವಣೆ ಆಗಿತ್ತು.

2018ರಿಂದ 2023ರ ಅವಧಿಯಲ್ಲಿ ಜೆಡಿಎಸ್-‌ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ಪ್ರಕರಣಗಳ ತನಿಖೆಗೂ ಎಸ್‌ಐಟಿ ರಚಿಸಿರಲಿಲ್ಲ. 2023ರ ಮೇ ತಿಂಗಳಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಪುನಃ ಅಧಿಕಾರಕ್ಕೆ ಬಂತು. ಆಗಿನಿಂದ ರಾಜ್ಯದಲ್ಲಿ ಮತ್ತೆ ಎಸ್‌ಐಟಿಗಳು ಸದ್ದು ಮಾಡುತ್ತಿವೆ. ರಾಜ್ಯದಲ್ಲಿ ಶಾಶ್ವತ ಎಸ್‌ಐಟಿ ಸ್ವರೂಪದಲ್ಲೇ ಕೆಲಸ ಮಾಡುತ್ತಿರುವ ಸಿಐಡಿ ಅಧೀನದಲ್ಲಿ ಈಗ ಐದು ವಿಶೇಷ ತನಿಖಾ ತಂಡಗಳು ಇವೆ. ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ, ಅಕ್ರಮಗಳ ತನಿಖೆಗೂ ಹೊಸತೊಂದು ಎಸ್‌ಐಟಿ ರಚಿಸುವ ತೀರ್ಮಾನವನ್ನು ರಾಜ್ಯ ಸರ್ಕಾರ ಮಾಡಿದೆ.

ರಾಜಕೀಯದ ನಂಟು: ರಾಜ್ಯದಲ್ಲಿ ಈಗ ಇರುವ ಐದು ಎಸ್‌ಐಟಿಗಳೆಲ್ಲವೂ ರಾಜಕಾರಣಿಗಳು ಆರೋಪಿಗಳಾಗಿರುವ ಮತ್ತು ರಾಜಕಾರಣದ ಜೊತೆ ತಳಕು ಹಾಕಿಕೊಂಡಿರುವ ಪ್ರಕರಣಗಳ ತನಿಖೆಯನ್ನೇ ನಡೆಸುತ್ತಿವೆ. ಅವುಗಳಲ್ಲಿ ನಾಲ್ಕು ಪ್ರಕರಣಗಳು ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್‌ ನಾಯಕರ ವಿರುದ್ಧ ಇದ್ದರೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಪ್ರಕರಣ ಕಾಂಗ್ರೆಸ್‌ ನಾಯಕರಿಗೆ ಸಂಬಂಧಿಸಿದ್ದು.

ಹಿಂದೆಲ್ಲ ದೇಶದ ಗಮನವನ್ನೇ ಸೆಳೆಯುವಂತಹ, ಹಿರಿಯ ಅಧಿಕಾರಿಗಳ ಮೇಲುಸ್ತುವಾರಿಯಲ್ಲೇ ತನಿಖೆ ನಡೆಸಬೇಕಾದಂತಹ ಅಗತ್ಯ ಇರುವ ಪ್ರಕರಣಗಳಲ್ಲಿ ಮಾತ್ರವೇ ಎಸ್‌ಐಟಿ ರಚಿಸಲಾಗುತ್ತಿತ್ತು. ಸಾಮಾನ್ಯ ಪೊಲೀಸ್‌ ಠಾಣೆಗಳಲ್ಲೇ ತನಿಖೆ ನಡೆಸಬಹುದಾದ ಪ್ರಕರಣಗಳ ತನಿಖೆಗೂ ಎಸ್‌ಐಟಿ ರಚಿಸುವುದರಿಂದ ಗಂಭೀರತೆಯೇ ಕುಸಿಯುತ್ತದೆ. ಹಾಗೆ ಆಗದಂತೆ ಎಚ್ಚರ ವಹಿಸಬೇಕು ಎನ್ನುತ್ತಾರೆ ನಿವೃತ್ತ ಐಪಿಎಸ್‌ ಅಧಿಕಾರಿಗಳು.

ಕೆಲವು ಅಧಿಕಾರಿಗಳಿಗೆ ಬಹುಪಾತ್ರ: 

ಗಂಭೀರ ಸ್ವರೂಪದ ಮತ್ತು ಹಿರಿಯ ಅಧಿಕಾರಿಗಳ ಮೇಲುಸ್ತುವಾರಿಯಲ್ಲೇ ತನಿಖೆ ನಡೆಸಬೇಕಾದಂತಹ ಪ್ರಕರಣಗಳಿಗಾಗಿಯೇ ರಾಜ್ಯದಲ್ಲಿ ಸಿಐಡಿ ಪೊಲೀಸ್‌ ವಿಭಾಗದ ಅಸ್ತಿತ್ವದಲ್ಲಿದೆ. ಈಗ ಅದೇ ಸಿಐಡಿ ಅಧೀನದಲ್ಲಿ ಎಸ್‌ಐಟಿಗಳನ್ನು ರಚಿಸಲಾಗುತ್ತಿದೆ. ಒಬ್ಬ ಅಧಿಕಾರಿಯೇ ಒಂದಕ್ಕಿಂತ ಹೆಚ್ಚು ಎಸ್‌ಐಟಿಗಳ ಮುಖ್ಯಸ್ಥರಾಗುತ್ತಿದ್ದಾರೆ. ಒಂದು ಎಸ್‌ಐಟಿಯಲ್ಲಿರುವ ಅಧಿಕಾರಿಗಳನ್ನೇ ಇನ್ನಷ್ಟು ತಂಡಗಳಿಗೂ ನಿಯೋಜಿಸಲಾಗುತ್ತಿದೆ. ಈ ರೀತಿ ಆದರೆ ಎಸ್‌ಐಟಿ ಎಂಬ ಪರಿಕಲ್ಪನೆಯೇ ಅರ್ಥ ಕಳೆದುಕೊಳ್ಳುತ್ತಿದೆ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರು.

ಹಿಂದೆ ಎಡಿಜಿಪಿ ದರ್ಜೆಯ ಹಿರಿಯ ಅಧಿಕಾರಿಗಳು ಎಸ್‌ಐಟಿ ಮುಖ್ಯಸ್ಥರಾದರೆ, ಎಸ್‌ಪಿ ದರ್ಜೆಯ ಅಧಿಕಾರಿಗಳೇ ತನಿಖಾಧಿಕಾರಿಗಳಾಗಿರುತ್ತಿದ್ದರು. ಆದರೆ, ಈಗ ಕಿರಿಯ ಅಧಿಕಾರಿಗಳನ್ನೇ ತನಿಖಾಧಿಕಾರಿಗಳನ್ನಾಗಿ ಮಾಡಲಾಗುತ್ತಿದೆ. ಹೀಗಾದರೆ ಎಸ್‌ಐಟಿ ಮತ್ತು ಪೊಲೀಸ್‌ ಠಾಣೆಗಳ ಮಧ್ಯೆ
ಯಾವ ವ್ಯತ್ಯಾಸ ಇರುತ್ತದೆ ಎಂಬುದು ಕೆಲವು ಪೊಲೀಸ್ ಅಧಿಕಾರಿಗಳ ಪ್ರಶ್ನೆ.

ಯಾವೆಲ್ಲ ಎಸ್‌ಐಟಿ: ಏನಿದರ ಉದ್ದೇಶ

ಬಿಟ್‌ ಕಾಯಿನ್‌: ಕೋಟಿ ವ್ಯವಹಾರ

ಬಿಟ್‌ ಕಾಯಿನ್‌ ಹ್ಯಾಕಿಂಗ್‌ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ದಾಖಲಾದ ಪ್ರಕರಣ ತನಿಖೆಗಾಗಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ 2023ರ ಜೂನ್‌ 6ರಂದು ಆದೇಶ ಹೊರಡಿಸಲಾಗಿದೆ. ಸಿಐಡಿ ಡಿಐಜಿ ಸಿ. ವಂಶಿಕೃಷ್ಣ ಮತ್ತು ಡಿಸಿಪಿ ಅನೂಪ್‌ ಶೆಟ್ಟಿ ತಂಡದಲ್ಲಿದ್ದಾರೆ.

ಹ್ಯಾಕರ್‌ ಶ್ರೀಕಿ ಅಲಿಯಾಸ್‌ ಶ್ರೀಕೃಷ್ಣ ಪೊಲೀಸ್‌ ಕಸ್ಟಡಿಯಲ್ಲಿದ್ದಾಗ ಆತನನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು ಅಕ್ರಮವಾಗಿ ಯಾರದ್ದೋ ಕ್ರಿಪ್ಟೋ ಕರೆನ್ಸಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬ ಆರೋಪವೂ ಸೇರಿದಂತೆ ಏಳು ಪ್ರಕರಣಗಳ ತನಿಖೆಯನ್ನು ಈ ಎಸ್‌ಐಟಿ ನಡೆಸುತ್ತಿದೆ. ಬೆಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ದಾಖಲಾದ ಆರು, ಸಿಐಡಿಯಲ್ಲಿ ದಾಖಲಿಸಿದ ಎರಡು ಮತ್ತು ತುಮಕೂರಿನಲ್ಲಿ ದಾಖಲಾದ ಒಂದು ಪ್ರಕರಣವನ್ನು ಈ ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಲಾಗಿದೆ.

ಬಿಟ್‌ ಕಾಯಿನ್‌ ಹ್ಯಾಕಿಂಗ್‌ಗೆ ಸಂಬಂಧಿಸಿದಂತೆ ಹಿಂದೆ ತನಿಖೆ ನಡೆಸಿದ್ದ ಸಿಸಿಬಿಯ ಕೆಲವು ಪೊಲೀಸ್‌ ಅಧಿಕಾರಿಗಳನ್ನು ಸಾಕ್ಷ್ಯನಾಶ ಮತ್ತು ಸಾಕ್ಷ್ಯ ತಿರುಚಿದ ಆರೋಪದಡಿ ಎಸ್‌ಐಟಿ ಬಂಧಿಸಿದೆ. ಆದರೆ, ಬಿಟ್‌ ಕಾಯಿನ್‌ಗಳ ಅಕ್ರಮ ವರ್ಗಾವಣೆ ಕುರಿತು ಅಂತರರಾಷ್ಟ್ರೀಯ ಮಟ್ಟದ ಕ್ರಿಪ್ರೋ ಕರೆನ್ಸಿ ಎಕ್ಸ್‌ಚೇಂಜ್‌ಗಳು ತನಿಖಾ ತಂಡಕ್ಕೆ ಅಗತ್ಯ ಮಾಹಿತಿ ಹಂಚಿಕೊಳ್ಳುತ್ತಿಲ್ಲ. ಹೀಗಾಗಿ ತನಿಖೆ ವೇಗವಾಗಿ ಮುಂದಕ್ಕೆ ಸಾಗುತ್ತಿಲ್ಲ.

ಅತ್ಯಾಚಾರ: ಪ್ರಜ್ವಲ್‌, ಸೂರಜ್, ರೇವಣ್ಣ ಪ್ರಕರಣ

ಹಾಸನದ ಮಾಜಿ ಸಂಸದ ಜೆಡಿಎಸ್‌ನ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ, ವಿಡಿಯೊ ಚಿತ್ರೀಕರಿಸಿಕೊಳ್ಳುತ್ತಿದ್ದರು ಎಂಬ ಆರೋಪ, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಎಚ್‌.ಡಿ. ರೇವಣ್ಣ (ಪ್ರಜ್ವಲ್‌ ಅವರ ತಂದೆ) ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದರು ಎಂಬ ಆರೋಪ, ಪ್ರಜ್ವಲ್‌ ಅವರ ಅಣ್ಣ, ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಸೂರಜ್‌, ಯುವಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂಬ ಆರೋಪ ಹಾಗೂ ಅವರ ತಾಯಿ ಕೃತ್ಯಕ್ಕೆ ಸಹಕಾರ ನೀಡಿದ್ದರು ಎಂಬ ಆರೋಪ ಕುರಿತು ತನಿಖೆಗೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಬಿ.ಕೆ. ಸಿಂಗ್‌ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಏಪ್ರಿಲ್‌ 24ರಂದು ಆದೇಶ ಹೊರಡಿಸಲಾಗಿತ್ತು. ಐಪಿಎಸ್‌ ಅಧಿಕಾರಿಗಳಾದ ಸುಮನ್‌ ಡಿ. ಪೆನ್ನೇಕರ್‌ ಮತ್ತು ಸೀಮಾ ಲಾಟ್ಕರ್‌ ಈ ಎಸ್‌ಐಟಿಯ ಸದಸ್ಯರು. ಹಾಸನ ಜಿಲ್ಲೆ ಹೊಳೆನರಸೀಪುರ ಪೊಲೀಸ್‌ ಠಾಣೆ ಹಾಗೂ ಮಂಡ್ಯ ಜಿಲ್ಲೆಯ ಕೆ.ಆರ್.‌ ನಗರ ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ತಲಾ ಒಂದು ಮತ್ತು ಸಿಐಡಿ ಸೈಬರ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಮೂರು ಪ್ರಕರಣಗಳ ತನಿಖೆಯನ್ನು ಈ ಎಸ್‌ಐಟಿ ನಡೆಸುತ್ತಿದೆ. ಪ್ರಜ್ವಲ್‌ ರೇವಣ್ಣ, ಎಚ್.ಡಿ. ರೇವಣ್ಣ ಮತ್ತು ಸೂರಜ್‌ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಎಚ್.ಡಿ. ರೇವಣ್ಣ ಮತ್ತು ಸೂರಜ್‌ ರೇವಣ್ಣ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಪ್ರಜ್ವಲ್‌ ರೇವಣ್ಣ ನ್ಯಾಯಾಂಗ ಬಂಧನ ಮುಂದುವರಿದಿದೆ.

ವಾಲ್ಮೀಕಿ ನಿಗಮದ ಬಹುಕೋಟಿ ಲೂಟಿ

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿ, ವಂಚಿಸಿದ ಪ್ರಕರಣದ ತನಿಖೆಗಾಗಿ ಎಡಿಜಿಪಿ ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಮೇ 31ರಂದು ಆದೇಶ ಹೊರಡಿಸಲಾಗಿದೆ. ಐಪಿಎಸ್‌ ಅಧಿಕಾರಿಗಳಾದ ಶಿವಪ್ರಕಾಶ್‌ ದೇವರಾಜು, ಹರಿರಾಂ ಶಂಕರ್‌ ಮತ್ತು ಸಿಐಡಿ ಎಸ್‌ಪಿ ರಾಘವೇಂದ್ರ ಹೆಗ್ಡೆ ಈ ತಂಡದ ಸದಸ್ಯರು.

ವಾಲ್ಮೀಕಿ ಅಭಿವೃಧ್ಧಿ ನಿಗಮದ ಲೆಕ್ಕಾಧೀಕ್ಷಕ ಪಿ. ಚಂದ್ರಶೇಖರನ್‌ ಆತ್ಮಹತ್ಯೆ ಸಂಬಂಧ ಶಿವಮೊಗ್ಗದ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣ ಮತ್ತು ವಂಚನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ದಾಖಲಾದ ಏಳು ಪ್ರಕರಣಗಳ ತನಿಖೆಯನ್ನು ಈ ಎಸ್‌ಐಟಿ ನಡೆಸುತ್ತಿದೆ.

ಈ ಪ್ರಕರಣದಲ್ಲಿ ಎಸ್‌ಐಟಿ 12 ಆರೋಪಿಗಳನ್ನು ಬಂಧಿಸಿದ್ದು, ಅವರ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಇದೇ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಆದರೆ, ಎಸ್‌ಐಟಿ ಆರೋಪಪಟ್ಟಿಯಲ್ಲಿ ಅವರನ್ನು ಆರೋಪಿ ಎಂದು ಹೆಸರಿಸಿಲ್ಲ.

ಪಿಎಸ್‌ಐ ನೇಮಕಾತಿ ಅಕ್ರಮ

545 ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ಗಳ ಹುದ್ದೆ ಭರ್ತಿಗೆ 2021ರಲ್ಲಿ ನಡೆಸಿದ್ದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬಹಿರಂಗವಾಗಿತ್ತು. ಈ ಕುರಿತು ಸಿಐಡಿ ಪೊಲೀಸರು ತನಿಖೆ ನಡೆಸಿ, ಎಡಿಜಿಪಿ ಅಮ್ರಿತ್‌ ಪಾಲ್‌ ಸೇರಿದಂತೆ 110 ಮಂದಿಯನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿನ ಅಕ್ರಮಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಹೇಳಿಕೆಗಳ ಕುರಿತು ತನಿಖೆ ನಡೆಸಲು ಎಡಿಜಿಪಿ ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಜೂನ್‌ 12ರಂದು ಎಸ್‌ಐಟಿ ರಚಿಸಲಾಗಿದೆ. ಐಪಿಎಸ್‌ ಅಧಿಕಾರಿಗಳಾದ ಸಿ. ವಂಶಿಕೃಷ್ಣ, ಪೃಥ್ವಿಶಂಕರ್‌ ಮತ್ತು ಸಿಐಡಿ ಎಸ್‌ಪಿ ರಾಘವೇಂದ್ರ ಹೆಗ್ಡೆ ಸದಸ್ಯರಾಗಿದ್ದಾರೆ.

ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ

ಬಿಜೆಪಿ ಶಾಸಕ ಮುನಿರತ್ನ ಅವರು ಗುತ್ತಿಗೆದಾರರೊಬ್ಬರಿಗೆ ಜೀವಬೆದರಿಕೆ ಹಾಕಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ವ್ಯಕ್ತಿಯೊಬ್ಬರ ಜಾತಿನಿಂದನೆ ಮಾಡಿದ್ದರು ಮತ್ತು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ಎಡಿಜಿಪಿ ಬಿ.ಕೆ. ಸಿಂಗ್‌ ನೇತೃತ್ವದಲ್ಲಿ ಸೆಪ್ಟೆಂಬರ್‌ 21ರಂದು ಎಸ್‌ಐಟಿ ರಚಿಸಲಾಗಿದೆ. ಐಜಿಪಿ ಲಾಭುರಾಮ್‌, ಐಪಿಎಸ್‌ ಅಧಿಕಾರಿ ಸೌಮ್ಯಲತಾ ಮತ್ತು ಸಿಐಡಿ ಎಸ್‌ಪಿ ಸಿ.ಎ. ಸೈಮನ್‌ ತಂಡದ ಸದಸ್ಯರಾಗಿದ್ದಾರೆ.

ಬೆಂಗಳೂರಿನ ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಎರಡು ಮತ್ತು ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ದಾಖಲಾದ ಒಂದು ಪ್ರಕರಣದ ತನಿಖೆಯನ್ನು ಈ ಎಸ್‌ಐಟಿ ನಡೆಸುತ್ತಿದೆ. ಮುನಿರತ್ನ ಅವರನ್ನು ವೈಯಾಲಿಕಾವಲ್‌ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಎಸ್‌ಐಟಿ ಕೂಡ ಬಂಧಿಸಿ, ವಿಚಾರಣೆ ನಡೆಸಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಅವರು, ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

ಹತ್ತು ವರ್ಷವಾದರೂ ಮುಗಿಯದ ತನಿಖೆ

ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗಾಗಿ ಸುಪ್ರೀಂ ಕೋರ್ಟ್‌ ಆದೇಶದಂತೆ ಲೋಕಾಯುಕ್ತ ಪೊಲೀಸ್‌ ವಿಭಾಗದ ಅಡಿಯಲ್ಲಿ ರಚಿಸಿದ್ದ ವಿಶೇಷ ತನಿಖಾ ತಂಡ ಹತ್ತು ವರ್ಷಗಳು ಕಳೆದರೂ ತನ್ನ ಕೆಲಸವನ್ನು ಪೂರ್ಣಗೊಳಿಸಿಲ್ಲ. ಈವರೆಗೆ 72 ಎಫ್‌ಐಆರ್‌ಗಳನ್ನು ದಾಖಲಿಸಿ ತನಿಖೆ ನಡೆಸಲಾಗಿದೆ. ಇನ್ನೂ ತನಿಖೆ ಬಾಕಿ ಇರುವುದರಿಂದ ಎಸ್‌ಐಟಿಯ ಅವಧಿಯನ್ನು ಒಂದು ವರ್ಷ ವಿಸ್ತರಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಇತ್ತೀಚೆಗಷ್ಟೇ ಅನುಮೋದನೆ ನೀಡಿದೆ.

50,000 ಟನ್‌ಗಿಂತ ಹೆಚ್ಚು ಪ್ರಮಾಣದ ಅದಿರನ್ನು ಅಕ್ರಮವಾಗಿ ಸಾಗಿಸಿದ್ದ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಿತ್ತು. 50,000 ಟನ್‌ಗಿಂತ ಕಡಿಮೆ ಪ್ರಮಾಣದ ಕಬ್ಬಿಣದ ಅದಿರಿನ ಅಕ್ರಮ ಗಣಿಗಾರಿಕೆ ಮತ್ತು ಕಳ್ಳಸಾಗಣೆ ಪ್ರಕರಣಗಳ ತನಿಖೆಗಾಗಿ ಈ ಎಸ್‌ಐಟಿಯನ್ನು 2014ರಲ್ಲಿ ರಚಿಸಲಾಗಿತ್ತು. ಹತ್ತು ವರ್ಷಗಳಿಂದಲೂ ತನಿಖೆ ನಡೆಯುತ್ತಲೇ ಇದೆ. ಇನ್ನೂ ಹೊಸ ಹೊಸ ಪ್ರಕರಣಗಳ ಸೇರ್ಪಡೆ ಆಗುತ್ತಲೇ ಇದೆ.

ಈಗ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರೂ ಆಗಿರುವ ಐಪಿಎಸ್‌ ಅಧಿಕಾರಿ ಎಂ. ಚಂದ್ರಶೇಖರ್‌ ಗಣಿಗಾರಿಕೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸ್‌ ಎಸ್‌ಐಟಿಯ ಮುಖ್ಯಸ್ಥರಾಗಿದ್ದಾರೆ.

ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ, ಶಾಸಕರಾಗಿರುವ ಜಿ. ಜನಾರ್ದನ ರೆಡ್ಡಿ, ಬಿ. ನಾಗೇಂದ್ರ ಸೇರಿದಂತೆ ಹಲವು ಘಟಾನುಘಟಿ ರಾಜಕಾರಣಿಗಳು ಆರೋಪಿಗಳಾಗಿರುವ ಪ್ರಕರಣಗಳು ಈ ಎಸ್‌ಐಟಿ ಮುಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.