ADVERTISEMENT

ಒಳನೋಟ: ಎಪಿಎಂಸಿ ಆದಾಯ ಕುಸಿತ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 22:30 IST
Last Updated 6 ನವೆಂಬರ್ 2021, 22:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಂಗಳೂರು: ಎಪಿಎಂಸಿ ಕಾಯ್ದೆ ತಿದ್ದುಪಡಿಯ ಪರಿಣಾಮ ನಿಧಾನವಾಗಿ ಗೋಚರಿಸತೊಡಗಿದೆ. ರಾಜ್ಯದ ವಿವಿಧೆಡೆ ಎಪಿಎಂಸಿ ಮೂಲಕ ಮಾರಾಟವಾಗುತ್ತಿದ್ದ ಕೃಷಿ ಉತ್ಪನ್ನಗಳು ಖಾಸಗಿ ವ್ಯಾಪಾರಸ್ಥರ ಕೈ ಸೇರುತ್ತಿವೆ.

ಕಲಬುರಗಿ ತೊಗರಿ ಮಾರುಕಟ್ಟೆಯಲ್ಲಿ, ಸರ್ಕಾರದ ಬೆಂಬಲ ಬೆಲೆಗಿಂತ ಹೆಚ್ಚಿನ ದರ ಖಾಸಗಿ ಮಾರುಕಟ್ಟೆಯಲ್ಲಿ ಸಿಗುತ್ತಿರುವುದರಿಂದ ರೈತರು ಅತ್ತ ಹೊರಳಿದ್ದಾರೆ. ಪರಿಣಾಮ, ಎಪಿಎಂಸಿಯ ಆದಾಯ ಕುಸಿದಿದೆ.

ಮಂಡ್ಯದ ಬೆಲ್ಲದ ಮಾರುಕಟ್ಟೆಯಲ್ಲೂ ಉತ್ಪನ್ನದ ದರ ಕುಸಿತವಾಗಿದೆ. ಕ್ವಿಂಟಲ್‌ಗೆ ಸರಾಸರಿ ₹ 1,800ಕ್ಕೆ ದೊರೆಯುತ್ತಿದ್ದ ಬೆಲ್ಲ ಈಗ ₹ 1,200ಕ್ಕೆ ಮಾರಾಟವಾಗುತ್ತಿದೆ. ಆನ್‌ಲೈನ್ ವಹಿವಾಟು ವ್ಯವಸ್ಥೆ ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿರುವ ಎಪಿಎಂಸಿ ಮತ್ತೆ ಹಳೆಯ ಪದ್ಧತಿಗೆ ಮರಳಿದೆ.

ADVERTISEMENT

ಅಕ್ಕಿಯ ಕಣಜವಾದ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ರೈತರು ವ್ಯಾಪಾರ ವಹಿವಾಟಿಗೆ ಎಪಿಎಂಸಿಯನ್ನೇ ನೆಚ್ಚಿಕೊಂಡಿದ್ದಾರೆ. ಇಲ್ಲಿನ ಅಕ್ಕಿ ವಿದೇಶಕ್ಕೆ ರಫ್ತಾಗುತ್ತದೆ. ಹೀಗಾಗಿ, ಭದ್ರತೆಯ ದೃಷ್ಟಿಯಿಂದ ಎಪಿಎಂಸಿಯಲ್ಲಿ ರೈತರು ಹೆಚ್ಚು ವಹಿವಾಟು ನಡೆಸುತ್ತಾರೆ. ಆದರೆ, ಕೊಪ್ಪಳ ಜಿಲ್ಲೆಯ ಇತರ ಕೆಲವೆಡೆ ರೈತರ ಉತ್ಪನ್ನಗಳನ್ನು ಖಾಸಗಿಯರೇ ಹೆಚ್ಚಾಗಿ ಖರೀದಿಸುತ್ತಿದ್ದು, ಎಪಿಎಂಸಿಗಳು ನಷ್ಟ ಅನುಭವಿಸುತ್ತಿವೆ.

‘ಬ್ಯಾಡಗಿ ಮೆಣಸಿನಕಾಯಿಗೆ ಕ್ವಿಂಟಲ್‌ ಒಂದಕ್ಕೆ ಸರಾಸರಿ ₹15 ಸಾವಿರ ದರ ಸಿಗುತ್ತಿತ್ತು. ಮೂರ್ನಾಲ್ಕು ತಿಂಗಳಿಂದ
₹ 10 ಸಾವಿರಕ್ಕೆ ಇಳಿಕೆಯಾಗಿದೆ. ಕೋವಿಡ್ ಕಾರಣಕ್ಕೆ ರೈತರ ಬಳಿ ಉತ್ಪನ್ನಗಳ ಸಂಗ್ರಹ ಹೆಚ್ಚಿರುವುದೂ ಕಾರಣವಾಗಿರಬಹುದು. ಕಾಯ್ದೆ ತಿದ್ದುಪಡಿ ರೈತರಿಗೆ ಅಷ್ಟಾಗಿ ಅರಿವಿಗೆ ಬಂದಿಲ್ಲ’ ಎನ್ನುತ್ತಾರೆ ಬ್ಯಾಡಗಿಯ ರೈತ ತಿಮ್ಮಾರೆಡ್ಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.