ADVERTISEMENT

ಶಿಕ್ಷಣ ಹಕ್ಕು ಕಾಯ್ದೆಯ ಮೂಲ ಆಶಯ ಮೂಲೆಗುಂಪು

ಡಾ.ನಿರಂಜನಾರಾಧ್ಯ ವಿ.ಪಿ
Published 11 ಜನವರಿ 2020, 22:53 IST
Last Updated 11 ಜನವರಿ 2020, 22:53 IST
ಡಾ. ವಿ.ಪಿ. ನಿರಂಜನಾರಾಧ್ಯ
ಡಾ. ವಿ.ಪಿ. ನಿರಂಜನಾರಾಧ್ಯ   

ಸಮ ಹಾಗೂ ಮಾನವೀಯ ಸಮಾಜವನ್ನು ರೂಪಿಸಬೇಕಾದರೆ ಎಲ್ಲರನ್ನೂ ಒಳಗೊಂಡ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆ ಕಲ್ಪಿಸಬೇಕು ಎಂಬ ಉದ್ದೇಶದೊಂದಿಗೆ ರಾಜ್ಯದಲ್ಲಿ ಜಾರಿಗೆ ಬಂದ ಆರ್‌ಟಿಇಗೆ ಈಗ 8 ವರ್ಷಗಳಾಗಿವೆ.

ಈ ಕಾಯ್ದೆ ಜಾರಿಗೆ ಬಂದ ನಂತರದ ಈ ವರ್ಷಗಳನ್ನು ಒಮ್ಮೆ ಅವಲೋಕಿಸಿದರೆ, ರಾಜ್ಯದಲ್ಲಿ ಕಾಯ್ದೆಯ ಮೂಲ ಆಶಯವೇ ಮೂಲೆಗುಂಪಾದಂತಿದೆ. ಶಿಕ್ಷಣ ಮೂಲಭೂತ ಹಕ್ಕಾದ ನಂತರ ಕಾಯ್ದೆಯಲ್ಲಿನ ಪ್ರಮುಖ ಅವಕಾಶಗಳನ್ನು ಸಾಕಾರಗೊಳಿಸಲು ಸರ್ಕಾರ ತನ್ನ ಶಾಲೆಗಳನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಬೇಕಿತ್ತು. ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಬೇಕಿತ್ತು. ಕಾಯ್ದೆ ಜಾರಿಗಾಗಿ 5 ಅಥವಾ 10 ವರ್ಷಗಳ ಕಾಲ ಏನು ಮಾಡಬೇಕು ಎನ್ನುವ ನೀಲ ನಕ್ಷೆ ಹಾಕಿಕೊಳ್ಳಬೇಕಿತ್ತು. ಆದರೆ, ಇದ್ಯಾವುದೂ ಸಾಧ್ಯವಾಗಿಲ್ಲ.

ಈ ಕಾಯ್ದೆ ಪ್ರಕಾರ 6 ರಿಂದ 14 ವರ್ಷದ ಎಲ್ಲಾ ಮಕ್ಕಳು ಶಿಕ್ಷಣ ಪಡೆಯಬೇಕಾಗಿತ್ತು. ಆದರೆ, ಇಂದಿಗೂ ಸಾವಿರಾರು ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಸರ್ಕಾರಗಳಾದ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿಗಳ ಸದಸ್ಯ ರಿಗೆ ಕಾಯ್ದೆಯ ಅರಿವೇ ಇಲ್ಲ.

ADVERTISEMENT

ಮೂರು ವರ್ಷ ಮೇಲ್ಪಟ್ಟ ಮಕ್ಕಳನ್ನು ಪ್ರಾಥಮಿಕ ಶಿಕ್ಷಣಕ್ಕೆ ಅಣಿಗೊಳಿಸಲು ಶಾಲಾ-ಪೂರ್ವ ಶಿಕ್ಷಣವನ್ನು ಒದಗಿಸುವುದು ಸರ್ಕಾರದ ಕಾನೂನುಬದ್ಧ ಜವಾಬ್ದಾರಿಯಾಗಿತ್ತು. ಆದರೆ 43,492 ಶಾಲೆಗಳ ಪೈಕಿ ಇದು ಜಾರಿಯಾಗಿರುವುದು ಕೇವಲ 176 ಶಾಲೆಗಳಲ್ಲಿ ಮಾತ್ರ

ವಂತಿಕೆ ವಸೂಲಿ ಮಾಡುವ, ಪ್ರವೇಶ ನಿರಾಕರಿಸುವ, ಮಕ್ಕಳನ್ನು ಏಕಾಏಕಿ ಶಾಲೆಯಿಂದ ಹೊರಹಾಕುವ, ಮಾನಸಿಕ–ದೈಹಿಕ ಹಿಂಸೆ ನೀಡುವ ಖಾಸಗಿ ಶಾಲೆಗಳ ಅಟ್ಟಹಾಸಕ್ಕೆ ಕೊನೆ ಹಾಡಲು ಕಾಯ್ದೆಯಲ್ಲಿ ಕಾನೂನು ಅವಕಾಶಗಳಿದ್ದವು. ಆದರೆ, ಇದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.

ಕಾಯ್ದೆಯ ಅನ್ವಯ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯವನ್ನು ಒದಗಿಸಿರುವುದನ್ನು ಖಾತರಿಗೊಳಿಸಿ ಶಾಲೆಗಳು ಹೊಸದಾಗಿ ಅಂಗೀಕೃತ ಪತ್ರ ಪಡೆಯಬೇಕಿತ್ತು. ಆದರೆ ಈ ಪ್ರಕ್ರಿಯೆ ಎಲ್ಲಿದೆ ಎಂಬುದು ತಿಳಿದಿಲ್ಲ. ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯ ಸಲಹಾ ಮಂಡಳಿಯನ್ನು ರಚಿಸಿ, ಸಭೆಗಳನ್ನು ನಡೆಸಿ, ಅದರ ಆಧಾರದಲ್ಲಿ ಕಾಯ್ದೆ ಜಾರಿಗೆ ತರಬೇಕಿತ್ತು. ಈ 8 ವರ್ಷದಲ್ಲಿ ಆಂಥ ಸಭೆಗಳೇ ನಡೆದಿಲ್ಲ.

-ಲೇಖಕರು: ಶಿಕ್ಷಣ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.