ADVERTISEMENT

ಒಳನೋಟ: ರಾಜ್ಯ ಏರಿಗೆ– ಕೇಂದ್ರ ನೀರಿಗೆ! ರಾಜ್ಯದ ಯೋಜನೆಗಳಿಗೆ ಸಿಗದ ನೆರವು-ಸಹಕಾರ

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಯೋಜನೆಗಳ ಅನುಮೋದನೆಯ ವಿಚಾರ ತೆಗೆದುಕೊಂಡರೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಲೇ ಇದೆ.

ಮಂಜುನಾಥ್ ಹೆಬ್ಬಾರ್‌
Published 30 ಜೂನ್ 2024, 0:25 IST
Last Updated 30 ಜೂನ್ 2024, 0:25 IST
<div class="paragraphs"><p>ಸಿಗದ ನೆರವು-ಸಹಕಾರ</p></div>

ಸಿಗದ ನೆರವು-ಸಹಕಾರ

   

ಕಲೆ–ಭಾವು ಪತ್ತಾರ್

ನವದೆಹಲಿ: ಕಾವೇರಿ ನೀರು ಹಂಚಿಕೆಯಲ್ಲಿ ಬ್ರಿಟಿಷ್‌ ಸರ್ಕಾರವು ಕರ್ನಾಟಕಕ್ಕೆ ಮಾಡಿದ್ದ ಐತಿಹಾಸಿಕ ಅನ್ಯಾಯವನ್ನು ಕಾವೇರಿ ಜಲವಿವಾದ ನ್ಯಾಯಮಂಡಳಿ ಮುಂದುವರಿಸಿತ್ತು. ನ್ಯಾಯಮಂಡಳಿಯ ತೀರ್ಪು ಪ್ರಶ್ನಿಸಿ ಕರ್ನಾಟಕವು ಸುಪ್ರೀಂ ಕೋರ್ಟ್‌ ಕದ ತಟ್ಟಿತ್ತು. 2016ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಕ್ಕೆ ಹಿನ್ನಡೆಯಾದಾಗ ರಾಜ್ಯದ ವಕೀಲರ ತಂಡದ ನೇತೃತ್ವ ವಹಿಸಿದ್ದ ಫಾಲಿ ಎಸ್‌. ನರೀಮನ್‌ ವಿರುದ್ಧ ರಾಜಕಾರಣಿಗಳು ನಂಜಿನ ಮಳೆ ಸುರಿಸಿದ್ದರು. ರಾಜ್ಯದ ಗೊಡವೆಯೇ ಬೇಡವೆಂದು ನರೀಮನ್‌ ದೂರ ಸರಿದಿದ್ದರು. ಆಗ ಸರ್ಕಾರದ ಪರವಾಗಿ ಕ್ಷಮೆಯಾಚಿಸಿ ಅವರ ಮನವೊಲಿಸಿದ್ದು ಆಗಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರು. ಕಾವೇರಿ ಜಲವಿವಾದದ ವಿಚಾರಣೆ ಸಂದರ್ಭದಲ್ಲಿ ಪಾಟೀಲ ಅವರು ರಾಷ್ಟ್ರ ರಾಜಧಾನಿಯಲ್ಲಿ ತಿಂಗಳು ಕಾಲ ಠಿಕಾಣಿ ಹೂಡಿ ಕಾನೂನು ತಜ್ಞರೊಂದಿಗೆ ಸರಣಿ ಸಭೆಗಳನ್ನು ನಡೆಸಿ ಹುರುಪು ತುಂಬಿದ್ದರು. ಸರ್ಕಾರ ಹಾಗೂ ಕಾನೂನು ತಂಡ ಸಮನ್ವಯ ಸಾಧಿಸಿ ಹೋರಾಟ ಮಾಡಿದ್ದರಿಂದ ತಮಿಳುನಾಡಿಗೆ ಹರಿಸುವ ನೀರಿನಲ್ಲಿ 14.5 ಟಿಎಂಸಿ ಅಡಿ ಮತ್ತೆ ಕಡಿತ ಮಾಡಿತ್ತು. 

ADVERTISEMENT

ಆಳುವವರು ಹಾಗೂ ಕಾನೂನು ತಜ್ಞರು ಜತೆಗೂಡಿ ರಾಜ್ಯದ ಹಿತ ಕಾಯ್ದ ಉದಾಹರಣೆಯಿದು. ಬೆಂಗಳೂರಿನ ನೀರಿನ ದಾಹ ಈಡೇರಿಸಲು ಹೆಚ್ಚುವರಿ 6 ಟಿಎಂಸಿ ಅಡಿ ಕಾವೇರಿ ನೀರು ಬಳಕೆಗೆ ಅವಕಾಶ ಸಿಕ್ಕಿತು.

ಕಳೆದ ವರ್ಷ ಭೀಕರ ಬರದಿಂದಾಗಿ ರಾಜ್ಯ ಅತಿ ಕಷ್ಟ ಕೋಟಲೆಗಳನ್ನು ಅನುಭವಿಸಿತ್ತು. ಅಂತಹ ಸಂಕಷ್ಟದ ಸಮಯದಲ್ಲಿ ಕಾವೇರಿ ನೀರು ಬಿಡುಗಡೆಗೆ ಪಟ್ಟು ಹಿಡಿದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆಯ ದಿನದಂದು ಜಲಸಂಪನ್ಮೂಲ ಸಚಿವರು ಹಾಜರಿರುವುದು ‘ಸಂಪ್ರದಾಯ’. ಸೆಪ್ಟೆಂಬರ್ 21ರಂದು ಸುಪ್ರೀಂ ಕೋರ್ಟ್‌ ಆದೇಶ ಪ್ರಕಟಿಸುವುದಿತ್ತು. ಅಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಅರ್ಪಿಸಿ ರಾಜ್ಯದ ಹಿತ ಕಾಯುವಂತೆ ಕೋರಿಕೊಂಡರು. ಬಳಿಕ ಸಚಿವರು ಕರ್ನಾಟಕ ಭವನ ಸೇರಿಕೊಂಡರು. ಬೆಳಿಗ್ಗೆಯಿಂದ ಸಂಜೆವರೆಗೆ ಆಪ್ತರೊಂದಿಗೆ ಸಮಾಲೋಚನೆ ಹಾಗೂ ‘ವಿಶ್ರಾಂತಿ’ಗೆ ಸಮಯ ಮೀಸಲಿಟ್ಟರು. ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕೆಂಬ ಕಾವೇರಿ ನೀರು ನಿರ್ವಹಣಾ ಮಂಡಳಿಯ ನಿರ್ದೇಶನದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಯೋಜನೆಗಳ ಅನುಮೋದನೆಯ ವಿಚಾರ ತೆಗೆದುಕೊಂಡರೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಲೇ ಇದೆ. ಕರ್ನಾಟಕವು ಬಿಜೆಪಿಗೆ ದಕ್ಷಿಣ ರಾಜ್ಯಗಳ ಹೆಬ್ಬಾಗಲು ಎಂದೇ ಹೇಳಿಕೊಂಡರೂ, ಹೆಚ್ಚು ಸಂಸದರನ್ನು ನೀಡಿದರೂ ರಾಜ್ಯಕ್ಕೆ ರಾಜಕೀಯ ಅನುಕೂಲ ಆಗಿದ್ದು ಕಡಿಮೆಯೇ ಎನ್ನುವುದಕ್ಕೆ ಸಾಲು ಸಾಲು ಉದಾಹರಣೆ ಕಾಣಬಹುದು.

ಕರ್ನಾಟಕವು ದೇಶದ ಆರ್ಥಿಕತೆಗೆ ಅತಿ ದೊಡ್ಡ ಮಟ್ಟದ ಸಂಪನ್ಮೂಲ ನೀಡುತ್ತಿದೆ. ರಾಜ್ಯದಿಂದ ಕೇಂದ್ರಕ್ಕೆ ಸಲ್ಲಿಕೆಯಾಗುತ್ತಿರುವ ಜಿಎಸ್‌ಟಿ ಮೊತ್ತವೇ ವಾರ್ಷಿಕ ₹1.20 ಲಕ್ಷ ಕೋಟಿಗಳಷ್ಟು. ಆದರೆ, ರಾಜ್ಯದ ಅಭಿವೃದ್ಧಿ ಯೋಜನೆಗಳ ವಿಷಯದಲ್ಲಿ ಕೇಂದ್ರದ ನೆರವು ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ. ಈ ವಿಷಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಂಘರ್ಷಕ್ಕೂ ಕಾರಣವಾಗಿದೆ.

ಅರಣ್ಯ ದಾಟೀತೇ ‘ಮೇಕೆದಾಟು’

ಮೇಕೆದಾಟು ಯೋಜನೆ ಕಾಂಗ್ರೆಸ್‌ ಸರ್ಕಾರದ ಕನಸಿನ ಯೋಜನೆ. ಸಮತೋಲನ ಜಲಾಶಯ ನಿರ್ಮಿಸಿ 64 ಟಿಎಂಸಿ ನೀರು ಸಂಗ್ರಹಿಸುವುದು ಹಾಗೂ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ದಾಹ ತಣಿಸಲು ಆರು ಟಿಎಂಸಿ ಅಡಿಗಳಷ್ಟು ನೀರು ಪೂರೈಸುವುದು ಈ ಯೋಜನೆಯ ಸಾರ. ಎಂ.ಬಿ.ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದ ಹೊತ್ತಿನಲ್ಲೇ ಈ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ್ದು. ಈ ಯೋಜನೆಗಾಗಿ 5,400 ಹೆಕ್ಟೇರ್‌ ಅರಣ್ಯ ಭೂಮಿ ಬಳಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿತು. ಇಷ್ಟೊಂದು ಕಾಡು ನಾಶಗೊಳಿಸಿ ಬೆಂಗಳೂರಿಗೆ ನೀರು ಹರಿಸುವ ಅಗತ್ಯವಿದೆಯೇ. ‘ಈ ಯೋಜನೆಗೆ ಬಳಸುವ ಅರ್ಧಾಂಶ ಹಣವನ್ನು ಬಳಸಿ ಬೆಳ್ಳಂದೂರು, ವರ್ತೂರಿನಂತಹ ದೊಡ್ಡ ಕೆರೆಗಳನ್ನು ಪುನರುಜ್ಜೀವನಗೊಳಿಸಬಹುದಲ್ಲವೇ’ ಎಂಬ ಜಲತಜ್ಞರ ಸಲಹೆಗೆ ಸರ್ಕಾರ ಕಿವಿಗೊಡಲಿಲ್ಲ. 2019ರಲ್ಲಿ ರಾಜ್ಯ ಸರ್ಕಾರ ಡಿಪಿಆರ್ ಸಲ್ಲಿಸಿತು. ಆಯೋಗವು ಅದನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸಾಗ ಹಾಕಿತು. ಈ ವಿಷಯವನ್ನು ಸಭೆಯ ಕಾರ್ಯಸೂಚಿಯಲ್ಲಿ ಸೇರಿಸಬೇಕೇ ಬೇಡವೇ ಎಂದು ಯೋಚಿಸುತ್ತಾ ಪ್ರಾಧಿಕಾರವು ಮೂರು ವರ್ಷಗಳಷ್ಟು ಕಾಲ ಹರಣ ಮಾಡಿತು. ಕೊನೆಗೆ ಯಾವುದೇ ತೀರ್ಮಾನಕ್ಕೆ ಬಾರದೆ ಈ ವರ್ಷದ ಆರಂಭದಲ್ಲಿ ಜಲ ಆಯೋಗಕ್ಕೆ ಕಡತವನ್ನು ವಾಪಸ್‌ ಕಳುಹಿಸಿತು. ಅಲ್ಲಿಗೆ ಐದು ವರ್ಷ ವ್ಯರ್ಥವಾದಂತಾಯಿತು.

ಈ ಯೋಜನೆಗೆ ಪರಿಸರ ಅನುಮೋದನೆಯನ್ನೂ ಪಡೆಯಬೇಕು. ರಾಜ್ಯ ಸರ್ಕಾರವು 2019ರಲ್ಲೇ ಪರಿಸರ ಸಚಿವಾಲಯಕ್ಕೂ ಅರ್ಜಿ ಗುಜರಾಯಿಸಿತು. ಅಂತರ್ ರಾಜ್ಯ ಜಲವಿವಾದದ ನೆಪವೊಡ್ಡಿದ ಸಚಿವಾಲಯವು ಈ ಪ್ರಸ್ತಾವವನ್ನು 2020ರಲ್ಲಿ ಪರಿವೇಷ್‌ ಪೋರ್ಟಲ್‌ನಿಂದ ತೆಗೆದು ಹಾಕಲಾಯಿತು. ರಾಜ್ಯ ಇನ್ನಷ್ಟೇ ಹೊಸದಾಗಿ ಅರ್ಜಿ ಸಲ್ಲಿಸಬೇಕಿದೆ. ನೀರಾವರಿ ಯೋಜನೆಗಾಗಿ 5 ಸಾವಿರ ಹೆಕ್ಟೇರ್‌ಗಳಷ್ಟು ಬೃಹತ್‌ ಪ್ರಮಾಣದ ಕಾಡು ನಾಶಗೊಳಿಸುವ ಪ್ರಸ್ತಾವಕ್ಕೆ ಪರಿಸರ ಸಚಿವಾಲಯ ಒಪ್ಪಿಗೆ ನೀಡಿದ ಉದಾಹರಣೆಯೇ ಈಚಿನ ವರ್ಷಗಳಲ್ಲಿ ಇಲ್ಲ ಎನ್ನಬಹುದು.

ಚುರುಕಿನಿಂದ ಓಡಾಡಿದ ಕಡತಗಳು

ಕಳಸಾ–ಬಂಡೂರಿ ಯೋಜನೆಗೆ ಮಹದಾಯಿ ನ್ಯಾಯಮಂಡಳಿ ನೀರಿನ ಹಂಚಿಕೆ ಮಾಡಿದ್ದು 2018ರಲ್ಲಿ. ರಾಜ್ಯ ಸರ್ಕಾರವು ಅದೇ ವರ್ಷ ಕಾರ್ಯಸಾಧ್ಯತಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿತು. ಈ ಯೋಜನೆಗಾಗಿ 499 ಹೆಕ್ಟೇರ್ ಅರಣ್ಯ ಬಳಕೆ ಮಾಡಲಾಗುತ್ತದೆ ಎಂಬ ಉಲ್ಲೇಖ ಅದರಲ್ಲಿತ್ತು.

ನಾಲ್ಕು ವರ್ಷ ಕಳೆದರೂ ಯೋಜನೆಗೆ ಅಂಕಿತ ಸಿಗಲಿಲ್ಲ. 2022ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಯೋಜನೆ ಸ್ವರೂಪ ಬದಲಿಸುವ ತೀರ್ಮಾನಕ್ಕೆ ಬಂದರು. ಕಾಡು ನಾಶ ಕಡಿಮೆ ಮಾಡಿ ಬೃಹತ್‌ ಪೈಪ್‌ಗಳ ಮೂಲಕ ಮಹದಾಯಿ ನೀರನ್ನು ಹರಿಸಲು ತೀರ್ಮಾನಿಸಿದರು.

ಈ ಪ್ರಸ್ತಾವಕ್ಕೆ ಕೇಂದ್ರದಿಂದ ಮೂರೇ ತಿಂಗಳಲ್ಲಿ ಸಹಿ ಬಿತ್ತು. ವಿಧಾನಸಭಾ ಚುನಾವಣೆಯೊಳಗೆ ಈ ಯೋಜನೆಗೆ ಭೂಮಿ ಪೂಜೆ ಮಾಡಬೇಕೆಂದು ರಾಜ್ಯ ಬಿಜೆಪಿ ಸರ್ಕಾರ ಸಂಕಲ್ಪ ಮಾಡಿತು. ಗುದ್ದಲಿ ಪೂಜೆ ಮಾಡುವ ಮುನ್ನ ಯೋಜನೆಗೆ ಅರಣ್ಯ ಅನುಮೋದನೆ ಪಡೆಯಬೇಕಿತ್ತು. ಈ ಕೆಲಸದ ಮಾಡಲು ಮುಖ್ಯಮಂತ್ರಿ ಸಚಿವಾಲಯವೇ ಮೇಲುಸ್ತುವಾರಿ ವಹಿಸಿಕೊಂಡಿತು. ಮೂರು ತಿಂಗಳ ಅವಧಿಯಲ್ಲಿ ಬೆಳಗಾವಿ, ಬೆಂಗಳೂರು ಹಾಗೂ ನವದೆಹಲಿ ನಡುವೆ ಕಡತಗಳು ಚುರುಕಿನಿಂದ ಓಡಾಡಿದವು. ಆ ಸಮಯದಲ್ಲೇ ಗೋವಾ ಸರ್ಕಾರ ಮತ್ತೊಮ್ಮೆ ತಗಾದೆ ಎತ್ತಿತು. ಆಗ ಕೇಂದ್ರ, ರಾಜ್ಯ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರಗಳಿದ್ದವು.

ಮಾತುಕತೆ ಮೂಲಕ ವಿವಾದ ಬಗೆಹರಿಸುವ ಅವಕಾಶವನ್ನು ಮೂರು ಸರ್ಕಾರಗಳು ಕೈಚೆಲ್ಲಿದವು. ನಂತರ ವಿಧಾನಸಭಾ ಚುನಾವಣಾ ಘೋಷಣೆಯಾಯಿತು. ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರವು ಪ್ರಸ್ತಾವವನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಕಳುಹಿಸಿತು. ‘ಕಳಸಾ ನಾಲಾ ತಿರುವು ಯೋಜನೆಯ ಅನುಷ್ಠಾನಕ್ಕೆ 26.92 ಹೆಕ್ಟೇರ್ ಅರಣ್ಯ ಬಳಸಿಕೊಳ್ಳಲಾಗುತ್ತಿದೆ. ಯೋಜನೆಗಾಗಿ ಕಾಳಿ ಹುಲಿ ಕಾರಿಡಾರ್‌ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ 7.96 ಹೆಕ್ಟೇರ್‌ ಅರಣ್ಯ ಹಾಗೂ 2.71 ಹೆಕ್ಟೇರ್ ಅರಣ್ಯೇತರ ಪ್ರದೇಶ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದೂ ರಾಜ್ಯ ಸರ್ಕಾರವು ಪ್ರಸ್ತಾವದಲ್ಲಿ ತಿಳಿಸಿತ್ತು. ಆದರೆ, ಯೋಜನೆಗೆ ಅನುಮೋದನೆ ನೀಡಲು ಮಂಡಳಿ ನಿರಾಕರಿಸಿದೆ.

ಚಿಕ್ಕಾಸು ಸಿಗದೆ ಭದ್ರಾ ಕಣ್ಣೀರು

ಕೇಂದ್ರದಲ್ಲಿ ಐದು ವರ್ಷಗಳಿಂದ ನಿರ್ಮಲಾ ಸೀತಾರಾಮನ್‌ ಹಣಕಾಸು ಸಚಿವರು. ಅವರು ಕರ್ನಾಟಕದ ರಾಜ್ಯಸಭಾ ಸದಸ್ಯರು. ಆದರೆ, ಅವರ ಅವಧಿಯಲ್ಲೇ ರಾಜ್ಯಕ್ಕೆ ಹೆಚ್ಚು ಅನ್ಯಾಯ ಆಗಿದೆ ಎಂಬುದು ಕಾಂಗ್ರೆಸ್‌ ಸರ್ಕಾರದ ಆರೋಪದ ಸರಮಾಲೆ. ಈ ಕಳಂಕದಿಂದ ಮುಕ್ತರಾಗಲೋ ಎಂಬಂತೆ ನಿರ್ಮಲಾ ಅವರು ಭದ್ರಾ ಮೇಲ್ದಂಡೆ ಯೋಜನೆಗೆ 2023ರ ಬಜೆಟ್‌ನಲ್ಲಿ ₹5,300 ಕೋಟಿ ಪ್ರಕಟಿಸಿದರು. ಇದನ್ನು ನಂಬಿ ಕರ್ನಾಟಕ ಸರ್ಕಾರವೂ ಬಜೆಟ್‌ನಲ್ಲಿ ₹5,300 ಕೋಟಿ ಮೀಸಲಿಟ್ಟಿತು. 2024ರ ಮಧ್ಯಂತರ ಬಜೆಟ್‌ ಮಂಡನೆಯಾಗಿ ನಾಲ್ಕು ತಿಂಗಳು ಕಳೆದಿವೆ. ಈ ಸಲದ ಪೂರ್ಣ ಪ್ರಮಾಣ ಬಜೆಟ್‌ ಮಂಡನೆಗೆ ಕೆಲವೇ ದಿನಗಳಷ್ಟೇ ಬಾಕಿ ಇವೆ. ಆದರೆ, ₹5,300 ಕೋಟಿಯಲ್ಲಿ ಒಂದು ರೂಪಾಯಿಯೂ ರಾಜ್ಯಕ್ಕೆ ಬಂದಿಲ್ಲ. ಹಣ ಬಿಡುಗಡೆ ಮಾಡದಿರಲು ರಾಜ್ಯ ಸರ್ಕಾರದ ‘inadequate technical problem' ಕಾರಣ ಎಂದು ನಿರ್ಮಲಾ ಸೀತಾರಾಮನ್‌ ಅವರು ರಾಜ್ಯದ ಸಂಸದರ ಸಭೆಯಲ್ಲಿ ಸಮಜಾಯಿಷಿ ನೀಡಿದ್ದಾರೆ. ಇದು ಏನೆಂಬುದು ‘ಆರ್ಥಿಕ ತಜ್ಞ’ ಸಿದ್ದರಾಮಯ್ಯ ಅವರಿಗೂ ಅರ್ಥವಾಗಿಲ್ಲ!

ಲಕ್ಕವಳ್ಳಿಯ ಭದ್ರಾ ಜಲಾಶಯ

ಭಿನ್ನ ಹಾದಿಯಲ್ಲಿ ನೂತನ ಸಂಸದರು

ಹಿಂದಿ ಸೀಮೆಯಲ್ಲಿ ಸುಭದ್ರ ನೆಲೆ ಹೊಂದಿರುವ ಬಿಜೆಪಿಗೆ ದಕ್ಷಿಣದಲ್ಲಿ ರಾಜಕೀಯ ಶಕ್ತಿಯನ್ನು ತುಂಬುತ್ತಾ ಬಂದಿರುವ ರಾಜ್ಯ ಕರ್ನಾಟಕ. 1998ರಿಂದ ಕನ್ನಡಿಗರು ಲೋಕಸಭೆಗೆ ಆರಿಸುತ್ತಿರುವ ಸದಸ್ಯರ ಪೈಕಿ ಸಿಂಹಪಾಲು ಬಿಜೆಪಿಯದ್ದೇ. 17ನೇ ಲೋಕಸಭೆಗೆ ಬಿಜೆಪಿಯ 25 ಮಂದಿಯನ್ನು ಆರಿಸಿ ಕಳುಹಿಸಿದ್ದರು. ಈ ಬಾರಿ ಕೂಡಾ ಕರ್ನಾಟಕವು ಬಿಜೆಪಿಯ 17 ಹುರಿಯಾಳುಗಳನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದೆ. ಆದರೆ, ರಾಜ್ಯದ ಹಿತಾಸಕ್ತಿಯ ವಿಷಯಕ್ಕೆ ಬಂದಾಗ ಹೆಚ್ಚಿನ ಸಂಸದರು ಈಚಿನ ದಶಕಗಳಲ್ಲಿ ‘ಮೌನೇಶ್ವರರು’ ಆಗಿದ್ದೇ ಹೆಚ್ಚು. ‘ಕೈ’ ಕಟ್ಟಾಳುಗಳು ಸಹ ಸದನದಲ್ಲಿ ಧ್ವನಿ ಎತ್ತಿದ್ದು ಕಡಿಮೆಯೇ. ನೆಲ–ಜಲದ ವಿಷಯದಲ್ಲಿ ಪ್ರಾದೇಶಿಕ ಪಕ್ಷಗಳು ತಾಳುವ ಗಟ್ಟಿ ನಿಲುವಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಅಪೂರ್ವ ಮಾದರಿ.

ಇಳಿ ವಯಸ್ಸು ಹಾಗೂ ಅನಾರೋಗ್ಯದಿಂದ ಓಡಾಡಲು ಅಸಾಧ್ಯವಾಗಿದ್ದ ಸನ್ನಿವೇಶದಲ್ಲೂ ಸದನಕ್ಕೆ ಹಾಜರಾಗಿ ಕಾವೇರಿ ಹಾಗೂ ಮೇಕೆದಾಟು ಯೋಜನೆಗಳ ಬಗ್ಗೆ ಧ್ವನಿ ಎತ್ತಿದವರು ಅವರು.

ಆದರೆ, 18ನೇ ಲೋಕಸಭೆಗೆ ಆಯ್ಕೆಯಾದ ರಾಜ್ಯದ ಸಂಸದರು ಭಿನ್ನ ಹಾದಿ ತುಳಿಯುವ ಸುಳಿವು ನೀಡಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ವಿ.ಸೋಮಣ್ಣ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರಂತಹ ಹಿರೀಕರು ರಾಜ್ಯದ ಹಿತ ಕಾಯುವತ್ತ ಹೆಜ್ಜೆ ಇಟ್ಟಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಅವರ ನಡವಳಿಕೆಗಳೇ ಇದಕ್ಕೆ ಸಾಕ್ಷಿ. 

ನೆರೆಯವರ ಜಗಳ–ರಾಜ್ಯಕ್ಕೆ ತಾಪ

ಎರಡನೇ ಕೃಷ್ಣಾ ನ್ಯಾಯಾಧೀಕರಣ ಸ್ಥಾಪನೆಯಾಗಿದ್ದು 2004ರಲ್ಲಿ. ಈ ನ್ಯಾಯಾಧೀಕರಣವು 2010ರಲ್ಲಿ ಮಧ್ಯಂತರ ಆದೇಶ ನೀಡಿತ್ತು. ಗೆಜೆಟ್‌ ಅಧಿಸೂಚನೆ ಪ್ರಕಟಿಸದಂತೆ ಸುಪ್ರೀಂ ಕೋರ್ಟ್‌ 2011ರಲ್ಲಿ ನಿರ್ಬಂಧವನ್ನೂ ಹೇರಿತ್ತು. ಕೃಷ್ಣಾ ಕಣಿವೆ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂಧ್ರಪ್ರದೇಶಕ್ಕೆ ಹಂಚಿಕೆ ಮಾಡಿ 2013ರಲ್ಲಿ ಅಂತಿಮ ಪರಿಷ್ಕೃತ ತೀರ್ಪು ನೀಡಿತ್ತು. ಈ ತೀರ್ಪನ್ನು ಕೇಂದ್ರ ಗೆಜೆಟ್‌ನಲ್ಲಿ ಪ್ರಕಟಿಸಿದ್ದರೆ ರಾಜ್ಯಗಳು ನೀರು ಬಳಕೆ ಮಾಡಲು ಸಾಧ್ಯವಾಗುತ್ತಿತ್ತು. ತೀರ್ಪು ಪ್ರಕಟವಾಗಿ 11 ವರ್ಷಗಳು ಕಳೆದರೂ ಅಧಿಸೂಚನೆ ಪ್ರಕಟವಾಗಿಲ್ಲ. ಇದಕ್ಕೆ ತೆಲಂಗಾಣದ ತಕರಾರು ಒಂದು ಕಾರಣವಾದರೆ, ಕೇಂದ್ರ ಸರ್ಕಾರ ಮುಲಾಜಿಗೆ ಬಿದ್ದಿದ್ದು ಮತ್ತೊಂದು ಕಾರಣ. ಆಂಧ್ರಪ್ರದೇಶಕ್ಕೆ ಹಂಚಿಕೆ ಮಾಡಲಾಗಿದ್ದ 1,005 ಟಿಎಂಸಿ ಅಡಿಗಳಷ್ಟು ನೀರನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಹಂಚಿಕೊಡಬೇಕು ಎಂದು ತೆಲಂಗಾಣದ ಬೇಡಿಕೆಯ ತಿರುಳು.

ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಎರಡೂ ರಾಜ್ಯಗಳು ಪರಿಹಾರ ಕಂಡುಕೊಳ್ಳಲು ಅವಕಾಶ ಇತ್ತು. ಈ ವಾಸ್ತವದ ಅರಿವಿದ್ದರೂ ಕೇಂದ್ರ ಸರ್ಕಾರವು ಆಂಧ್ರ ಹಾಗೂ ತೆಲಂಗಾಣಗಳ ವಿರೋಧ ಕಟ್ಟಿಕೊಳ್ಳಲು ಸಿದ್ಧ ಇರಲಿಲ್ಲ. ಈ ನಡುವೆ, ತೆಲಂಗಾಣ ಸರ್ಕಾರವು ಸುಪ್ರೀಂ ಕೋರ್ಟ್‌ ಕದ ತಟ್ಟಿದೆ. ಆಂಧ್ರಪ್ರದೇಶಕ್ಕೆ ಹಂಚಿಕೆಯಾದ ನೀರಿನಲ್ಲಿ ಪಾಲು ಪಡೆಯುವುದನ್ನು ಬಿಟ್ಟು ತೆಲಂಗಾಣವು ಆಂಧ್ರದೊಂದಿಗಿನ ಜಗಳಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರವನ್ನೂ ಎಳೆದು ತಂದಿದೆ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ನಷ್ಟ ಎಂಬಂತಾಗಿದೆ. ಅಧಿಸೂಚನೆ ಪ್ರಕಟಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕವೂ ಉನ್ನತ ನ್ಯಾಯಾಲಯದ ಮೆಟ್ಟಿಲೇರಿದೆ.

ದಕ್ಷಿಣ ಪಿನಾಕಿನಿ: ತ.ನಾ.ಅಡ್ಡಗಾಲು

ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಚೆಕ್‌ ಡ್ಯಾಂ ಕಟ್ಟಿದೆ. ಇದಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ನಲ್ಲಿ 2019ರಲ್ಲಿ ದಾವೆ ಹೂಡಿದೆ. ಸಂಧಾನದ ಮೂಲಕ ಬಗೆಹರಿಸಲು ಕೇಂದ್ರ ಸರ್ಕಾರ 2020ರಲ್ಲಿ ಸಂಧಾನ ಸಮಿತಿ ರಚಿಸಿತ್ತು. ಆದರೆ, ಸಮಿತಿಯು ವಿವಾದ ಬಗೆಹರಿಸಲಿಲ್ಲ. ಬಳಿಕ ಹೊಸದಾಗಿ ಸಂಧಾನ ಸಮಿತಿ ರಚಿಸುವಂತೆ ಸು‍ಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. 

ತೊಡಕು, ಅಡ್ಡಿ ಆತಂಕದ ನಡುವೆ...

*5,225 ಕಿ.ಮೀ. ಉದ್ದದ 39 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮಾರ್ಪಡಿಸಬೇಕು ಎಂದು ಕರ್ನಾಟಕ ಸರ್ಕಾರ ಆರು ವರ್ಷಗಳ ಹಿಂದೆಯೇ ಪ್ರಸ್ತಾವ ಸಲ್ಲಿಸಿದೆ. ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರು ಹಾಗೂ ಸಂಸದರು ಈ ಸಂಬಂಧ ಒತ್ತಡ ಹೇರಿದ್ದಾರೆ. 

*ಮಂಗಳೂರು–ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸುರಂಗ ನಿರ್ಮಿಸಬೇಕು ಎಂಬ ಬೇಡಿಕೆ. ಇದಕ್ಕೆ ಪರಿಸರವಾದಿಗಳ ವಿರೋಧ ಇದೆ. 

*ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ದಟ್ಟಣೆ ಸಮಸ್ಯೆ ನಿವಾರಿಸಲು ನೈಸ್‌ ರಸ್ತೆಯ ಮಾದರಿಯಲ್ಲೇ ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೆ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ನಿರ್ಮಿಸುವ ಯೋಜನೆಗೆ ಕೇಂದ್ರ ಸರ್ಕಾರದಿಂದ ₹6 ಸಾವಿರ ಕೋಟಿ ನೆರವು ಕೇಳಲಾಗಿದೆ. ಈ ಪ್ರಸ್ತಾವಕ್ಕೆ ಹಣಕಾಸು ಸಚಿವಾಲಯ ಸಹಮತ ವ್ಯಕ್ತಪಡಿಸಿಲ್ಲ. 

*ಪಶ್ಚಿಮಘಟ್ಟದ ಜೀವ ವೈವಿಧ್ಯದ ಸಂರಕ್ಷಣೆಗೆ ಉದ್ದೇಶದಿಂದ ಡಾ.ಕೆ.ಕಸ್ತೂರಿ ರಂಗನ್‌ ಸಮಿತಿಯನ್ನು ಕೇಂದ್ರ ಸರ್ಕಾರ ಸಮಿತಿ ರಚಿಸಿತ್ತು. ಪಶ್ಚಿಮಘಟ್ಟದ ಶೇ 37ರಷ್ಟು ಅರಣ್ಯ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಈ ವರದಿಯನ್ನು ತಿರಸ್ಕರಿಸಬೇಕು ಎಂದು ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಿದೆ. 

*ರಾಜ್ಯದ ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಸಚಿವರು ಹಾಗೂ ಸಂಸದರ ನಿಯೋಗವು ಆರೋಗ್ಯ ಸಚಿವರಿಗೆ ಎರಡು ಸಲ ಮನವಿ ಸಲ್ಲಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಎರಡು ಬಾರಿ ಪತ್ರ ಬರೆದಿದ್ದರು. 

*ಹಾಸನ ಅಥವಾ ಮೈಸೂರಿನಲ್ಲಿ ಐಐಟಿ (ಭಾರತೀಯ ತಂತ್ರಜ್ಞಾನ ಸಂಸ್ಥೆ) ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ. ಈ ವಿಷಯದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದೆ. ಅದೂ ಕಾರ್ಯಗತವಾಗಿಲ್ಲ. 

*ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ನಮ್ಮ ಮೆಟ್ರೊ’ ಮೂರನೇ ಹಂತದ ಯೋಜನೆಗೆ ಅನುಮೋದನೆ ಕೋರಿ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸರಿಸುಮಾರು ಒಂದೂವರೆ ವರ್ಷಗಳು ಕಳೆದಿವೆ. ಇದಕ್ಕೆ ಕೇಂದ್ರದಿಂದ ಒಪ್ಪಿಗೆ ಸಿಕ್ಕಿಲ್ಲ. ₹15,611 ಕೋಟಿ ಮೊತ್ತದ ಯೋಜನೆಯ ಎರಡು ಕಾರಿಡಾರ್‌ಗಳಲ್ಲಿ ಒಟ್ಟು 44.65 ಕಿಲೋ ಮೀಟರ್‌ನಷ್ಟು ಮೆಟ್ರೊ ರೈಲು ಮಾರ್ಗ ನಿರ್ಮಿಸುವ ಯೋಜನೆ ಇದಾಗಿದೆ.

ಸಾಂದರ್ಭಿಕ ಚಿತ್ರ

ತೆವಳುತ್ತಾ ಸಾಗಿರುವ ರಾಜ್ಯದ ರೈಲು ಯೋಜನೆಗಳು

ಯೋಜನಾ ಮೊತ್ತ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ನಡುವೆ ಹಗ್ಗಜಗ್ಗಾಟ, ಭೂಸ್ವಾಧೀನ ಸಮಸ್ಯೆ ಮತ್ತಿತರ ಕಾರಣಗಳಿಂದಾಗಿ ಕರ್ನಾಟಕದ ರೈಲು ಯೋಜನೆಗಳು ತೆವಳುತ್ತಾ ಸಾಗಿವೆ.

ಸುಮಾರು ₹10 ಸಾವಿರ ಕೋಟಿ ಮೊತ್ತದಲ್ಲಿ ರಾಜ್ಯದಲ್ಲಿ 9 ಹೊಸ ರೈಲು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗಳಿಗೆ ರಾಜ್ಯ ಸರ್ಕಾರ ಉಚಿತವಾಗಿ ಭೂಮಿ ನೀಡಿ ಶೇ 50 ಅನುದಾನ ನೀಡಬೇಕಿದೆ. ಕೆಲವು ಯೋಜನೆಗಳ ಕಾಮಗಾರಿ ನಿಂತಲ್ಲೇ ನಿಂತಿದೆ. ಬಹುತೇಕ ಯೋಜನೆಗಳಿಗೆ ಭೂಸ್ವಾಧೀನದ ಗ್ರಹಣ ಎದುರಾಗಿದೆ. ಇದರಿಂದಾಗಿ, ಹಳಿಗಳಲ್ಲಿ ರೈಲುಗಳ ಓಡಾಟಕ್ಕೆ ಕಾಲ ಕೂಡಿ ಬಂದಿಲ್ಲ. ರಾಜ್ಯದ ಐದು ಯೋಜನೆಗಳು 10 ವರ್ಷಗಳಷ್ಟು ವಿಳಂಬವಾಗಿದೆ ಎಂದು ಕೇಂದ್ರ ಸರ್ಕಾರ ಪಟ್ಟಿ ಮಾಡಿದೆ.

ರಾಜ್ಯಕ್ಕೊಂದು ನ್ಯಾಯ, ತಮಿಳುನಾಡಿಗೊಂದು...!

ಕಾವೇರಿ ಬಗ್ಗೆ ಪ್ರತಿವರ್ಷವೂ ತಕರಾರು ಎತ್ತಿರುವ ತಮಿಳುನಾಡು ಕಾವೇರಿ ಕಣಿವೆಯ ಹೆಚ್ಚುವರಿ ನೀರಿನ ಬಳಕೆಗೆ ‘ಕಾವೇರಿ– ವೆಲ್ಲಾರ್’ ಯೋಜನೆ ಕೈಗೊಂಡಿದೆ. ಈ ಯೋಜನೆ ಕಾವೇರಿ ನ್ಯಾಯಮಂಡಳಿ ತೀರ್ಪಿನ ಸ್ಪಷ್ಟ ಉಲ್ಲಂಘನೆ. ‘ಸಮುದ್ರ ಸೇರುವ ಕಾವೇರಿಯ ಹೆಚ್ಚುವರಿ ನೀರು ಬಳಸಿಕೊಳ್ಳುತ್ತಿದ್ದೇವೆ’ ಎನ್ನುವುದು ತಮಿಳುನಾಡಿನ ವಾದ. ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸಿ 65 ಟಿಎಂಸಿಗಳಷ್ಟು ನೀರು ಸಂಗ್ರಹಿಸುತ್ತೇವೆ. ಸಂಕಷ್ಟದ ಸಮಯದಲ್ಲಿ ಇದರಿಂದ ತಮಿಳುನಾಡಿಗೂ ಅನುಕೂಲವಾಗುತ್ತದೆ. ಯೋಜನೆಗೆ ಅಡ್ಡಿಪಡಿಸಬೇಡಿ’ ಎಂದು ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಗೆ ತಕರಾರು ಮಾಡದಂತೆ ಗೋಗರೆದರೂ ತಮಿಳುನಾಡು ಒಪ್ಪಲು ಸಿದ್ಧವಿಲ್ಲ. ಯೋಜನೆಗೆ ಅಡ್ಡಗಾಲು ಹಾಕುತ್ತಲೇ ಬಂದಿರುವ ತಮಿಳುನಾಡು ತನ್ನ ಹೊಸ ಯೋಜನೆಗೆ ಅಡಿಗಲ್ಲು ಹಾಕಿ ವರ್ಷಗಳೇ ಕಳೆದಿವೆ. ಈ ಯೋಜನೆ ಬಗ್ಗೆ ಕರ್ನಾಟಕ ‘ಸಾಂಕೇತಿಕ’ವಾಗಿ ಪ್ರತಿಭಟಿಸಿ ಮೌನ ತಳೆದಿದೆ. ಈ ಯೋಜನೆಗೆ ಕೇಂದ್ರದಿಂದಲೂ ಹಣಕಾಸಿನ ನೆರವು ಸಿಕ್ಕಿದೆ. ತಮಿಳುನಾಡಿದ್ದು ಚಾಣಕ್ಯ ನಡೆ. ನಮ್ಮದು ಹೋರಾಟ ಹಾಗೂ ಬದ್ಧತೆ ಕೊರತೆ.

ಜಲ ಯೋಜನೆಗಳ ಕುರಿತು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಮಹದಾಯಿ ಯೋಜನೆಗೆ ಅನುಮೋದನೆ ನೀಡಲು ನ್ಯಾಯಾಲಯದಲ್ಲಿ ಪ್ರಕರಣವಿದೆ ಎಂದು ನೆಪ ಹೇಳುತ್ತಿದ್ದಾರೆ. ರಾಜ್ಯಕ್ಕೆ ಸಿಗಬೇಕಿರುವುದು ಪರಿಸರ ಹಾಗೂ ವನ್ಯಜೀವಿ ಅನುಮೋದನೆ. ಅದನ್ನು ಕೊಡಿಸಿದರೆ ಯೋಜನೆಗೆ ಚಾಲನೆ ನೀಡುತ್ತೇವೆ. ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿಲ್ಲ. ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ಕೊಡಬೇಕು. ಈ ಬಗ್ಗೆ ಕೇಂದ್ರ ಸಚಿವರು ಹಾಗೂ ಸಂಸದರಿಗೆ ಮನವರಿಕೆ ಮಾಡಿಕೊಡಲಾಗಿದೆ. ಪಕ್ಷಭೇದ ಮರೆತು ರಾಜ್ಯದ ಪರ ನಿಲ್ಲುವ ಭರವಸೆ ನೀಡಿದ್ದಾರೆ. 
ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಿದ್ದರಾಮಯ್ಯ, ಮುಖ್ಯಮಂತ್ರಿ

ಅನೇಕ ವಿಷಯಗಳು ಹಾಗೂ ನೀರಾವರಿ ಯೋಜನೆಗಳು ಸುದೀರ್ಘವಾಗಿ ಬಾಕಿ ಇವೆ. ಅವುಗಳ ತ್ವರಿತ ಜಾರಿಗೆ ಎಲ್ಲರೂ ಒಟ್ಟಾಗಿ ಪ್ರಯತ್ನ ಮಾಡಬೇಕು. ಬೆಂಗಳೂರಿಗೆ 15ನೇ ಹಣಕಾಸು ಆಯೋಗ ₹11 ಸಾವಿರ ಕೋಟಿ ಮೀಸಲಿಟ್ಟಿದೆ. ಅದರಲ್ಲಿ ₹6 ಸಾವಿರ ಕೋಟಿ ಬಂದಿಲ್ಲ ಎಂಬುದು ರಾಜ್ಯದ ದೂರು. ಬೆಂಗಳೂರಿನ ಪೆರಿಫೆರಲ್‌ ವರ್ತುಲ ರಸ್ತೆಗೆ ರಾಜ್ಯ ಸರ್ಕಾರ ಮೊದಲು ಹಣ ಮೀಸಲಿಡಬೇಕು. ಬಳಿಕ ಕೇಂದ್ರದ ಬಳಿ ಹಣ ಕೇಳಬೇಕು. ಇದು ₹29 ಸಾವಿರ ಕೋಟಿ ಯೋಜನೆ. ಇದಕ್ಕೆ ರಾಜ್ಯ ಹಣವನ್ನೇ ಮೀಸಲಿಟ್ಟಿಲ್ಲ. ಕೇಂದ್ರ–ರಾಜ್ಯ ಸರ್ಕಾರಗಳ ನಡುವೆ ಬಾಂಧವ್ಯ ಬೇಕು, ಪರಸ್ಪರ ಹೊಂದಾಣಿಕೆ ಬೇಕಿದೆ. ಸಂಘರ್ಷ ಖಂಡಿತಾ ಬೇಡ.
ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ.

ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ.

ಮೂರು ದಶಕಗಳಿಂದ ನಿಧಾನಗತಿಯಲ್ಲಿ ಸಾಗುತ್ತಿರುವ 1,264 ಕಿ.ಮೀ. ಉದ್ದದ 9 ರೈಲು ಯೋಜನೆಗಳನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮುಂಬರುವ ವರ್ಷಗಳಲ್ಲಿ ಎಲ್ಲ ಬಾಕಿ ರೈಲ್ವೆ ಯೋಜನೆಗಳನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಲಾಗುವುದು. ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಚುರುಕುಗೊಳಿಸಲು ಕೈ ರೈಡ್‌ಗೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ತಾಂತ್ರಿಕ ತಜ್ಞರನ್ನೇ ಶೀಘ್ರ ನೇಮಿಸಲಾಗುತ್ತದೆ. ನೀರಾವರಿ ಯೋಜನೆಗಳಿಗೆ ಶೀಘ್ರ ಅನುಮೋದನೆ ಕೊಡಿಸಲು ಪ್ರಯತ್ನ ಪಡುವೆ.
ವಿ.ಸೋಮಣ್ಣ, ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ 
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಸಂಘರ್ಷದ ಮೂಲಕವೇ ರಾಜ್ಯದ ಪಾಲನ್ನು ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಕೋರ್ಟ್‌ ಮೊರೆ ಹೋಗಿದ್ದರಿಂದ ಬರ ಪರಿಹಾರ ಸಿಕ್ಕಿತು. ಹೊಸ ಸರ್ಕಾರದ ನೆಪವೊಡ್ಡಿ ಅದನ್ನೂ ಬಿಡುಗಡೆ ಮಾಡುವ ಅನುಮಾನ ಇತ್ತು. ಜಿಎಸ್‌ಟಿ ಪಾಲು ಹಂಚಿಕೆ, 15ನೇ ಹಣಕಾಸಿನ ಶಿಫಾರಸಿನ ಜಾರಿಯಲ್ಲಿ ದೊಡ್ಡ ಅನ್ಯಾಯ ಮಾಡಿದೆ. ಕೇಂದ್ರ ಸಚಿವರನ್ನು ಹಲವು ಬಾರಿ ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟರೂ ಫಲ ಶೂನ್ಯ.
ಕೃಷ್ಣ ಬೈರೇಗೌಡ, ಕಂದಾಯ ಸಚಿವ 

ಮುಖ್ಯಚಿತ್ರದ ಕಲೆ–ಭಾವು ಪತ್ತಾರ್

********

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.