ಬೆಂಗಳೂರು: ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಕ್ಯಾನ್ಸರ್, ಹೃದಯ ಸಮಸ್ಯೆ, ಮಧುಮೇಹ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು ರಾಜ್ಯದಲ್ಲೂ ಹೆಚ್ಚುತ್ತಿವೆ.
ಇತ್ತೀಚಿನ ವರ್ಷಗಳಲ್ಲಿ ಎಲ್ಲ ವಯೋಮಾನದವರಲ್ಲೂ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡುತ್ತಿವೆ. ಈ ವರ್ಷ ಕೋವಿಡ್ ನಡುವೆಯೂ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ 12.80 ಲಕ್ಷ ಮಂದಿ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಸಾಂಕ್ರಾಮಿಕವಲ್ಲದ ರೋಗಗಳ ಸಂಬಂಧ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಎನ್‌ಸಿಡಿ ಕ್ಲಿನಿಕ್‌ಗಳಿಗೆ ಭೇಟಿ ನೀಡಿದ್ದಾರೆ. 2019–20ನೇ ಸಾಲಿನಲ್ಲಿ ಈ ಸಂಖ್ಯೆ 36.07 ಲಕ್ಷವಿತ್ತು.
ಕ್ಯಾನ್ಸರ್, ಮಧುಮೇಹದಂಥ ಕಾಯಿಲೆ ಹೆಚ್ಚಳಕ್ಕೆ ಪಾಶ್ಚಿಮಾತ್ಯ ಆಹಾರ ಪದ್ಧತಿಯೂ ಕಾರಣ ಎಂದು ಕಳವಳ ವ್ಯಕ್ತಪಡಿಸುವ ಆಹಾರ ತಜ್ಞರು, ಆರೋಗ್ಯ ವೃದ್ಧಿ ಹಾಗೂ ರೋಗಗಳ ನಿಯಂತ್ರಣಕ್ಕೆ ಅಧಿಕ ಪೌಷ್ಟಿಕಾಂಶ ಒಳಗೊಂಡ ರಾಗಿ, ಜೋಳ, ಸಜ್ಜೆ, ನವಣೆ ಸೇರಿದಂತೆ ವಿವಿಧ ಸಿರಿಧಾನ್ಯಗಳನ್ನು ದೈನಂದಿನ ಆಹಾರದಲ್ಲಿ ಬಳಸಬೇಕೆಂದು ಸೂಚಿಸುತ್ತಾರೆ.
‘ಸರಿಯಾದ ಆಹಾರ ಪದ್ಧತಿ ಅಳವಡಿಸಿಕೊಳ್ಳದ ಪರಿಣಾಮ ಮನುಷ್ಯನಲ್ಲಿ ಹೊಸ ಹೊಸ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ದಿನಕ್ಕೆ ಒಂದು ಹೊತ್ತು ಸಿರಿಧಾನ್ಯದ ಆಹಾರವನ್ನು ಸೇವಿಸಿದರೆ ಸಾಕಾಗುತ್ತದೆ. ಅದರೊಂದಿಗೆ ಹಾಲು ಮತ್ತು ಮೊಸರಿಗೆ ಪ್ರಾಮುಖ್ಯತೆ ನೀಡಿದರೆ ಒಳ್ಳೆಯದು. ಮೊಳಕೆ ಬರಿಸಿ, ಹುರಿದು, ಹುಳಿ ಬರಿಸುವುದು ಸೇರಿದಂತೆ ವಿವಿಧ ಬಗೆಯಲ್ಲಿ ಸಿರಿಧಾನ್ಯ ಉಪಯೋಗಿಸಬಹುದು’ ಎಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಪ್ರಾಧ್ಯಾಪಕಿ ಡಾ. ಉಷಾ ರವೀಂದ್ರ ವಿವರಿಸಿದರು.
‘ಸಿರಿಧಾನ್ಯ ಎಲ್ಲ ರೋಗಗಳಿಗೆ ರಾಮಬಾಣ ಎನ್ನಲಾಗದು. ಇವುಗಳನ್ನು ಪಾಲಿಶ್ ಮಾಡಿ, ಸೇವಿಸಿದರೆ ಉತ್ತಮ ಫಲಿತಾಂಶ ಸಿಗದು. ಒಳ್ಳೆಯ ಆಹಾರ ಪದ್ಧತಿಯಿಂದ ಕಾಯಿಲೆ ಬರುವುದನ್ನು ಶೇ 90 ರಷ್ಟು ಕಡಿಮೆ ಮಾಡಬಹುದು’ ಎನ್ನುತ್ತಾರೆ ಆಹಾರ ತಜ್ಞ ಡಾ.ಕೆ.ಸಿ. ರಘು.
****
ಸಿರಿಧಾನ್ಯದಲ್ಲಿಯೂ ಸಕ್ಕರೆ ಅಂಶ ಇರುತ್ತದೆ. ಆದರೆ, ನಾರಿನಾಂಶ ಹೇರಳ ಇರುವುದರಿಂದ ರೋಗಗಳ ತಡೆಗೆ ಸಹಕಾರಿ. ಎಲ್ಲ ವಯೋಮಾನದವರು ಸೇವಿಸಬಹುದು
-ಡಾ. ಉಷಾ ರವೀಂದ್ರ, ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಪ್ರಾಧ್ಯಾಪಕರು, ಜಿಕೆವಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.