ಕಲಬುರ್ಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಮೊದಲಿನ ಹೈ–ಕ ಪ್ರದೇಶ ಅಭಿವೃದ್ಧಿ ಮಂಡಳಿ) ಅಸ್ತಿತ್ವಕ್ಕೆ ಬಂದ ಬಳಿಕ ಈ ಭಾಗದಲ್ಲಿ ಕಣ್ಣಿಗೆ ಕಾಣುವಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿವೆ.
ಈ ಮಂಡಳಿಯು ತನ್ನ ವ್ಯಾಪ್ತಿಯ ಆರು ಜಿಲ್ಲೆಗಳಿಗೆ ಡಿ.ಎಂ.ನಂಜುಂಡಪ್ಪ ವರದಿ ಶಿಫಾರಸಿನಂತೆ ಅನುದಾನವನ್ನು ಬಿಡುಗಡೆ ಮಾಡು ತ್ತದೆ. ಶಿಫಾರಸಿನ ಅನುಸಾರ ಸಮಗ್ರ ಅಭಿವೃದ್ಧಿ ಸೂಚಿಯನ್ವಯ (ಸಿಡಿಐ) ಅತ್ಯಂತ ಹಿಂದುಳಿದ ತಾಲ್ಲೂಕಿನ ಮೂಲಸೌಕರ್ಯ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಹಣವನ್ನು ವ್ಯಯಿಸುತ್ತದೆ.
ಉದಾ ಹರಣೆಗೆ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕು ಉಳಿದ ತಾಲ್ಲೂಕುಗಳ ಪೈಕಿ ಅತ್ಯಂತ ಹಿಂದುಳಿದಿದೆ. ಹೀಗಾಗಿ 2019–20ನೇ ಸಾಲಿನಲ್ಲಿ ಮಂಡಳಿಯು ₹ 450 ಕೋಟಿ ಅನುದಾನವನ್ನು ನಿಗದಿ ಮಾಡಿದೆ. ಕಲಬುರ್ಗಿ ತಾಲ್ಲೂಕಿನಲ್ಲಿ ಈಗಾಗಲೇ ಹಲವು ಮೂಲಸೌಕರ್ಯಗಳ ಅಭಿವೃದ್ಧಿ ಆಗಿರುವುದರಿಂದ ₹162.8 ಕೋಟಿಯನ್ನು ನಿಗದಿ ಮಾಡಿದೆ.
ಕಲಬುರ್ಗಿ ವಿಮಾನ ನಿಲ್ದಾಣ, ಬೀದರ್‌ನ ವರ್ತುಲ ರಸ್ತೆ, ರಾಯಚೂರಿನ ಐಐಐಟಿ ಕಟ್ಟಡ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆರ್ಥಿಕ ನೆರವು, ರಾಯಚೂರಿನ ಉದ್ದೇಶಿತ ವಿಮಾನ ನಿಲ್ದಾಣಕ್ಕೆ ನೆರವು ನೀಡಲಿದ್ದೇವೆ. ಕೊಪ್ಪಳದ ಎಂಜಿನಿಯರಿಂಗ್ ಕಾಲೇಜು, ಯಾದಗಿರಿಯ ಕಡೇಚೂರು, ರಾಯಚೂರು ಜಿಲ್ಲೆ ದೇವ ದುರ್ಗದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಾಕಷ್ಟು ಹಣ ನೀಡಲಾಗಿದೆ ಎನ್ನುವುದು ಸುಬೋಧ್ ಯಾದವ್ ಅವರ ಮಾಹಿತಿ.
ಹಂಚಿಕೆಯಾಗಿದ್ದು ₹5,300 ಕೋಟಿ
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯು 2014ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇಲ್ಲಿಯವರೆಗೆ ಮಂಡಳಿಗೆ ₹ 5,300 ಕೋಟಿ ಹಂಚಿಕೆ ಮಾಡಲಾಗಿದೆ. ಈ ಪೈಕಿ ₹ 3,600 ಕೋಟಿ ಬಿಡುಗಡೆಯಾಗಿದೆ. 2019ರ ಡಿಸೆಂಬರ್ ಅಂತ್ಯದ ವೇಳೆಗೆ ₹ 3,300 ಕೋಟಿ ಖರ್ಚು ಮಾಡಿದ್ದೇವೆ ಎನ್ನುತ್ತಾರೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ್ ಯಾದವ್.
‘2019–20ರ ಸಾಲಿನಲ್ಲಿ ₹ 1,500 ಕೋಟಿ ಅನುದಾನ ಹಂಚಿಕೆ ಆಗಿದೆ. ಅದಕ್ಕೂ ಹಿಂದೆ ಪ್ರತಿವರ್ಷ ₹ 1,000 ಕೋಟಿ ಹಂಚಿಕೆಯಾಗುತ್ತಿತ್ತು. ಆದರೆ, ಕಾಮಗಾರಿಯ ಪ್ರಗತಿಯನ್ನು ನೋಡಿ ಸರ್ಕಾರ ಹಂಚಿಕೆಯಾದ ಹಣ ವನ್ನು ಬಿಡುಗಡೆ ಮಾಡುತ್ತದೆ. ಹೀಗಾಗಿ, ಅಗತ್ಯ ಸಿಬ್ಬಂದಿಯನ್ನು ಮಂಡಳಿಗೆ ನೀಡಿದರೆ ಹೆಚ್ಚು ದಕ್ಷತೆಯಿಂದ ಕೆಲಸ ಮಾಡಬಹುದು. ಕಡಿಮೆ ಸಿಬ್ಬಂದಿಯನ್ನು ಇಟ್ಟು ಕೊಂಡು 2019–20ನೇ ಸಾಲಿನಲ್ಲಿ ₹ 1,200 ಕೋಟಿ ವೆಚ್ಚ ಮಾಡಿದ್ದೇವೆ’ ಎಂದು ಯಾದವ್ ಹೇಳುತ್ತಾರೆ.
2013 :371 ಜೆ ಕಲಂ ಅನುಷ್ಠಾನಗೊಂಡ ವರ್ಷ
20 ಸಾವಿರ:ಮೀಸಲಾತಿ ಬಳಿಕ ಭರ್ತಿಯಾದ ಖಾಲಿ ಹುದ್ದೆಗಳು
6: ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಜಿಲ್ಲೆಗಳು
41:ಕೆಕೆಆರ್‌ಡಿಬಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು
₹ 5,300 ಕೋಟಿ:ಕೆಕೆಆರ್‌ಡಿಬಿಗೆ ಹಂಚಿಕೆಯಾದ ಅನುದಾನ
₹ 3,600 ಕೋಟಿ:ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಯಾದ ಅನುದಾನ
₹ 3,300 ಕೋಟಿ:ಡಿಸೆಂಬರ್‌ವರೆಗೆ 2019ರ ವರೆಗೆ ಖರ್ಚಾದ ಹಣ
₹ 1500 ಕೋಟಿ:2019ರಿಂದ ಕೆಕೆಆರ್‌ಡಿಬಿಗೆ ಹಂಚಿಕೆಯಾಗುತ್ತಿರುವ ವಾರ್ಷಿಕ ಅನುದಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.