ADVERTISEMENT

ಒಳನೋಟ: ಪುನೀತ್‌ ರಾಜ್‌ಕುಮಾರ್‌, ಆ ನಿರ್ವಾತ ತುಂಬುವವರಾರು?

ಪುನೀತ್ ರಾಜ್‌ಕುಮಾರ್ ನಿರ್ಮಾಣ ಸಂಸ್ಥೆಯ ಭವಿಷ್ಯದ ಕುರಿತು ಯುವ ಮನಸ್ಸುಗಳ ಕುತೂಹಲ

ಪದ್ಮನಾಭ ಭಟ್ಟ‌
Published 14 ನವೆಂಬರ್ 2021, 3:00 IST
Last Updated 14 ನವೆಂಬರ್ 2021, 3:00 IST
‘ದ್ವಿತ್ವ’ ಚಿತ್ರದ ಪೋಸ್ಟರ್‌
‘ದ್ವಿತ್ವ’ ಚಿತ್ರದ ಪೋಸ್ಟರ್‌   

ಬೆಂಗಳೂರು: ‘ಸದಾ ಸಿನಿಮಾ ಚಟುವಟಿಕೆಗಳಿಂದ ಜೀವಂತವಾಗಿರುತ್ತಿದ್ದ ಜಾಗವದು. ಈಗ ಹೆಪ್ಪುಗಟ್ಟಿದ ವಿಷಾದ, ಬಿಕ್ಕಳಿಕೆ, ಕಣ್ಣೀರುಗಳಿಂದ ಕೂಡಿದ ಜಾಗವನ್ನು ನೋಡಿ ಕರುಳು ಕಿವುಚಿದಂತಾಯ್ತು’–ಪುನೀತ್ ತೀರಿಕೊಂಡ ಹನ್ನೊಂದನೇ ದಿನ ಅವರ ಮನೆಗೆ ಹೋಗಿದ್ದ ಯುವ ನಿರ್ದೇಶಕರೊಬ್ಬರು ಸಂಕಟದಿಂದ ಆಡಿದ ಮಾತಿದು.

ನಲವತ್ತು ವರ್ಷಗಳಾದ ಮೇಲೆ ಬದುಕಿನ ಕುರಿತು ಮನುಷ್ಯನ ಗ್ರಹಿಕೆ ಬದಲಾಗುತ್ತದಂತೆ. ಪುನೀತ್‌ ವಿಷಯದಲ್ಲಿ ಇದು ಹಲವು ರೀತಿಗಳಲ್ಲಿ ನಿಜವಾಗಿತ್ತು. ಪುನೀತ್‌, ‘ಪಾರ್ವತಮ್ಮ ರಾಜ್‌ಕುಮಾರ್‌ ನಿರ್ಮಾಣ ಸಂಸ್ಥೆ’ (ಪಿಆರ್‌ಕೆ ಪ್ರೊಡಕ್ಷನ್ಸ್‌) ಪ್ರಾರಂಭಿಸಿದಾಗ (2017) ಅವರಿಗೆ ವಯಸ್ಸು ನಲ್ವತ್ತೆರಡು. ಇದು ‘ಹೊಸತೇನಾದರೂ ಮಾಡಬೇಕು’ ಎಂಬ ಅವರ ತಹತಹದ ಒಂದು ಮುಖವಷ್ಟೆ.

ಪುನೀತ್ ನಟನೆಯ ಕೊನೆಯ ಸಿನಿಮಾ, ಚೇತನ್‌ ಕುಮಾರ್ ನಿರ್ದೇಶನದ ‘ಜೇಮ್ಸ್’. ಈ ಸಿನಿಮಾದಲ್ಲಿ ಪುನೀತ್‌ ಭಾಗದ ಚಿತ್ರೀಕರಣ ಮುಗಿದಿದೆ. ‘ಜೇಮ್ಸ್‌ ಸಿನಿಮಾ ಖಂಡಿತ ಬಿಡುಗಡೆಯಾಗುತ್ತದೆ. ಪುನೀತ್ ಪಾತ್ರಕ್ಕೆ ಧ್ವನಿಜೋಡಣೆ ಮಾಡುವ ಬಗ್ಗೆ ಚರ್ಚಿಸುತ್ತಿದ್ದೇವೆ. ಮುಂಬೈ ಮೂಲದ ಕಂಪನಿಯೊಂದು ಪುನೀತ್‌ ಧ್ವನಿಯನ್ನು ಕೃತಕವಾಗಿ ಸೃಷ್ಟಿಸಿಕೊಡಲು ಮುಂದೆ ಬಂದಿದೆ. ಶಿವರಾಜ್‌ಕುಮಾರ್ ಕೂಡ ಡಬ್ ಮಾಡಲು ಮುಂದೆ ಬಂದಿದ್ದಾರೆ. ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಮುಂದಿನ ವರ್ಷ, ಪುನೀತ್‌ ಜನ್ಮದಿನದಂದು (ಮಾರ್ಚ್‌ 17) ಚಿತ್ರ ಬಿಡುಗಡೆ ಮಾಡಬೇಕು ಎಂದುಕೊಂಡಿದ್ದೇವೆ’ ಎನ್ನುತ್ತಾರೆ ಚೇತನ್.

ADVERTISEMENT

‘ಜೇಮ್ಸ್‌’ ನಂತರ ಪವನ್‌ ಕುಮಾರ್ ನಿರ್ದೇಶನದ ‘ದ್ವಿತ್ವ’ದಲ್ಲಿ ಪುನೀತ್ ನಟಿಸಬೇಕಾಗಿತ್ತು. ಸೈಕಾಲಜಿಕಲ್ ಥ್ರಿಲ್ಲರ್ ಕಥಾಹಂದರವಿದ್ದ ಚಿತ್ರವಿದು.

‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಜೆ.ಎಸ್‌. ಅವರ ಜೊತೆ ಸೇರಿ ಕರ್ನಾಟಕದ ವನ್ಯಸಂಪತ್ತನ್ನು ಕಾಣಿಸುವ ವಿಶಿಷ್ಟ ಡಾಕ್ಯೂಫಿಲ್ಮ್‌ ನಿರ್ಮಾಣದಲ್ಲಿಯೂ ಪುನೀತ್ ತೊಡಗಿಕೊಂಡಿದ್ದರು.ನಾಗರಹೊಳೆ, ಕಾಳಿನದಿ, ಹೊಸಪೇಟೆ ಸೇರಿ ಕರ್ನಾಟಕದ ಹಲವು ಜಾಗಗಳಲ್ಲಿ ಚಿತ್ರೀಕರಣ ಮಾಡಿದ್ದರು. ಸುಮಾರು ಶೇ 90ರಷ್ಟು ಚಿತ್ರೀಕರಣ ಮುಗಿದಿತ್ತು. ಇದಕ್ಕೆ ‘ಗಂಧದ ಗುಡಿ’ ಎಂದು ಹೆಸರಿಡಬೇಕು ಎಂದುಕೊಂಡಿದ್ದರು.

ದಿನಕರ್‌ ತೂಗುದೀಪ ನಿರ್ದೇಶನದ ಸಿನಿಮಾ, ‘ಪೈಲ್ವಾನ್’ ಕೃಷ್ಣ ನಿರ್ದೇಶನದ ಸಿನಿಮಾಗಳಲ್ಲಿಯೂ ನಟಿಸಲು ಒಪ್ಪಿಕೊಂಡಿದ್ದರು. ಪಿಆರ್‌ಕೆ ಬ್ಯಾನರ್‌ ಅಡಿಯಲ್ಲಿಯೇ ಜೇಕಬ್ ವರ್ಗೀಸ್‌ ನಿರ್ದೇಶನದಲ್ಲಿ ತಾವೇ ನಾಯಕನಾಗಿ ನಟಿಸುವ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಇವೆಲ್ಲವೂ ಪುನೀತ್ ಅಭಿನಯಿಸಬೇಕಿದ್ದಬಿಗ್‌ ಬಜೆಟ್ ಸಿನಿಮಾಗಳ ಪಟ್ಟಿಯಾದರೆ, ಅವರ ನಿರ್ಮಾಣ ಸಂಸ್ಥೆಯಡಿ ಚಿಗುರಿಕೊಳ್ಳುತ್ತಿದ್ದ ಸಣ್ಣ ಸಿನಿಮಾಗಳ ಪಟ್ಟಿ ಮತ್ತೊಂದೇ ದಾರಿಯತ್ತ ಬೊಟ್ಟುಮಾಡುತ್ತವೆ.

ಪುನೀತ್‌ ಅವರಿಗೆ ಒಟಿಟಿ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ದೂರದೃಷ್ಟಿಯಿತ್ತು. ಪಿಆರ್‌ಕೆ ನಿರ್ಮಾಣ ಸಂಸ್ಥೆಯಡಿಯಲ್ಲಿ ಇದುವರೆಗೆ ಬಿಡುಗಡೆಯಾದ ಮೂರು ಸಿನಿಮಾಗಳಲ್ಲಿ ಎರಡು ಅಮೆಜಾನ್‌ ಪ್ರೈಮ್‌ನಲ್ಲಿಯೇ ನೇರವಾಗಿ ಬಿಡುಗಡೆಯಾಗಿವೆ. ಡಿ. ಸತ್ಯಪ್ರಕಾಶ್‌ ನಿರ್ದೇಶನದ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಸಿನಿಮಾ ನ. 12ಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಬೇಕಾಗಿತ್ತು. ಈಗ ಮುಂದಕ್ಕೆ ಹೋಗಿದೆ. ಈ ಸಿನಿಮಾದ ವ್ಯವಹಾರಗಳೆಲ್ಲವೂ ಪುನೀತ್ ಇರುವಾಗಲೇ ಮುಗಿದಿರುವುದರಿಂದ ಬಿಡುಗಡೆಯಾಗುವುದರಲ್ಲಿ ಸಂದೇಹವಿಲ್ಲ. ಡ್ಯಾನಿಶ್‌ ಸೇಟ್ ಅವರ ‘ಒನ್‌ ಕಟ್ ಟು ಕಟ್’ ಸಿನಿಮಾ ಕೂಡ ಪೂರ್ತಿಗೊಂಡು ಬಿಡುಗಡೆಗೆ ಸಜ್ಜಾಗಿತ್ತು.

ಅರ್ಜುನ್‌ ಕುಮಾರ್ ಎಸ್‌. ಅವರ ‘ಫ್ಯಾಮಿಲಿ ಪ್ಯಾಕ್‌’, ರಾಘವ ನಾಯಕ್–ಪ್ರಶಾಂತ್‌ ರಾಜ್ ನಿರ್ದೇಶನದ ‘02’ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿವೆ.ಈ ಚಿತ್ರಗಳನ್ನು ಹೊರತುಪಡಿಸಿ ಏಳು ಸಿನಿಮಾಗಳು ನಿರ್ಮಾಣಪೂರ್ವ ಹಂತದಲ್ಲಿದ್ದವು.

‘ಈ ಎಲ್ಲ ಸಿನಿಮಾಗಳ ಮುಂದಿನ ಕಥೆ ಏನು?’–ಈ ಪ್ರಶ್ನೆಗೆ ಉತ್ತರದ ಜಾಗದಲ್ಲೀಗ ಪುನೀತ್‌ ಪತ್ನಿ ಅಶ್ವಿನಿ ನಿಂತಿದ್ದಾರೆ.

ಪಿಆರ್‌ಕೆ ಶುರುಮಾಡಿದಾಗಿನಿಂದಲೂ ಪುನೀತ್, ತಮ್ಮ ಪತ್ನಿ ಅಶ್ವಿನಿ ಅವರಿಗೂ ಸಿನಿಮಾ ಪ್ರಪಂಚವನ್ನು–ಅದರ ಒಳಹೊರಗನ್ನು ಪರಿಚಯಿಸಲು ಪ್ರಾರಂಭಿಸಿದ್ದರು. ಪಿಆರ್‌ಕೆ ಸಂಸ್ಥೆಯ ಸಿನಿಮಾ ಚರ್ಚೆಗಳಲ್ಲಿಯೂ ಅಶ್ವಿನಿಯ ಹಾಜರಿ ಇರಲೇಬೇಕಿತ್ತು. ಕಳೆದ ಆರು ತಿಂಗಳಿಂದಂತೂ ಸಂಸ್ಥೆಯ ಲೆಕ್ಕಾಚಾರಗಳ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಅವರನ್ನು ಸಿದ್ಧಗೊಳಿಸುತ್ತಿದ್ದರು.

ಪುನೀತ್ ಅನುಪಸ್ಥಿತಿಯಲ್ಲಿ ಸಂಸ್ಥೆಯ ಜವಾಬ್ದಾರಿಯನ್ನು ಹೊರಲು ಅಶ್ವಿನಿ ಸಿದ್ಧರಾಗಬಹುದೇ ಎಂಬ ಪ್ರಶ್ನೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.