ಶಿವಮೊಗ್ಗ: ಪ್ರವಾಹಕ್ಕೆ ಸಿಲುಕಿ ಸಂಕಷ್ಟ ಅನುಭವಿಸುತ್ತಿರುವ, ರಾಜ್ಯದ ವಿವಿಧ ಪ್ರದೇಶಗಳ ಜನರಿಗೆ ಹಲವು ಕಾರ್ಪೊರೇಟ್ ಕಂಪನಿಗಳು ನೆರವಿನ ಹಸ್ತ ಚಾಚಿವೆ. ಸಾಮಾಜಿಕ ಹೊಣೆಗಾರಿಕೆಯಡಿ, ನೆಲೆ ಕಳೆದುಕೊಂಡ ಬಡವರಿಗೆ ಮನೆ, ಕೆಲವೆಡೆ ಶಾಲಾ ಕಟ್ಟಡಗಳನ್ನು ನಿರ್ಮಿಸಿಕೊಟ್ಟು ಮಾನವೀಯತೆ ತೋರಿವೆ.
ತುಂಗಾ ನದಿಯ ಪ್ರವಾಹದಿಂದ,ಮೂರು ವರ್ಷಗಳ ಹಿಂದೆ ಶಿವಮೊಗ್ಗ ನಗರದ ಹಲವು ಸರ್ಕಾರಿ ಶಾಲೆಗಳಿಗೆ ಹಾನಿಯಾಗಿತ್ತು. ಇಂತಹ 87 ಸರ್ಕಾರಿ ಶಾಲೆಗಳನ್ನು ₹ 15 ಕೋಟಿ ವೆಚ್ಚದಲ್ಲಿ ದುರಸ್ತಿ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಲಿಮಿಟೆಡ್ ಜತೆ ಹಲವು ಕಾರ್ಪೊರೇಟ್ ಕಂಪನಿಗಳು ಕೈಜೋಡಿಸಿದ ಕಾರಣ, 45 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲಾಗಿದೆ. 92 ಡಿಜಿಟಲ್ ಕೊಠಡಿಗಳನ್ನು ನಿರ್ಮಿಸಲಾಗಿದೆ. 460 ಕಂಪ್ಯೂಟರ್, ಪ್ರೊಜೆಕ್ಟರ್, ಲ್ಯಾಪ್‌ಟಾಪ್‌ಗಳನ್ನು ಒದಗಿಸಲಾಗಿದೆ.
ಸೊರಬ ತಾಲ್ಲೂಕು ನಿಸರಾಣಿಯ ಶಾಲೆಗೆ ಬಿಇಎಲ್ ಕಂಪನಿ ₹ 1 ಕೋಟಿ ನೀಡಿದೆ. ಬಿ.ಬಿ.ರಸ್ತೆ, ಸೀಗೆಹಟ್ಟಿ, ಕೆ.ಆರ್.ಪುರಂ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಸಚಿವ ಈಶ್ವರಪ್ಪ ಒಡೆತನದ ಕಂಪನಿ ನೆರವಿನ ಹಸ್ತ ಚಾಚಿದೆ. ಬೆಂಗಳೂರಿನ ಕೇರ್ ವರ್ಕ್ಸ್ ಕಂಪನಿ ತೀರ್ಥಹಳ್ಳಿ ತಾಲ್ಲೂಕು ಗಡ್ಡೇಕೇರಿ ಪ್ರೌಢಶಾಲೆಗೆ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದೆ. ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಪ್ರವಾಹಕ್ಕೆ ಸಿಲುಕಿ, ಬಹುತೇಕ ಗುರುತು ಸಿಗದಂತಾಗಿದ್ದ ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ಏಳು ಸರ್ಕಾರಿ ಶಾಲೆಗಳು ಹಾಗೂ ಎರಡು ಅಂಗನವಾಡಿಗಳಿಗೆಬೆಂಗಳೂರಿನ ಪ್ರೊ.ಎಂ.ಆರ್. ದೊರೆಸ್ವಾಮಿ ಅವರ ಪಿಇಎಸ್ ಶಿಕ್ಷಣ ಸಂಸ್ಥೆ ಮರುಜೀವ ನೀಡಿದೆ. ಹೊಸ ಕೊಠಡಿಗಳೊಂದಿಗೆ ಸುಣ್ಣ–ಬಣ್ಣಗಳಿಂದ ಅಲಂಕೃತಗೊಂಡಿರುವ ಶಾಲೆಗಳು ನಳನಳಿಸುತ್ತಿವೆ. ಕೆಲವು ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಹಸ್ತಾಂತರಗೊಂಡಿವೆ.
ಘಟಪ್ರಭಾ ನದಿಯ ಆರ್ಭಟಕ್ಕೆ ತತ್ತರಿಸಿದ ಮುಧೋಳ ತಾಲ್ಲೂಕಿನ ಒಂಟಿಗೋಡಿ, ಬಿ.ಕೆ.ಬುದ್ನಿಯ ಸರ್ಕಾರಿ ಶಾಲೆ, ಅಂಗನವಾಡಿ ಕಟ್ಟಡಗಳು; ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಕ್ಕ ಬಾದಾಮಿ ತಾಲ್ಲೂಕಿನ ಕರ್ಲಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಕೊಠಡಿಗಳನ್ನು ಮರುನಿರ್ಮಿಸಿಕೊಡುವಲ್ಲಿ, ಪಿಇಎಸ್ ಸಂಸ್ಥೆಯು ಸಾರ್ವಜನಿಕ ಶಿಕ್ಷಣ ಇಲಾಖೆಗೆ ನೆರವಾಗಿದೆ.
ನಾಲ್ಕು ಶಾಲೆಗಳ ಮರುನಿರ್ಮಾಣ: ಬೆಳಗಾವಿ ವಿಭಾಗದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳನ್ನು ಹೊಸದಾಗಿ ಕಟ್ಟಲಾಗುತ್ತಿದೆ. ರಾಯಬಾಗ ತಾಲ್ಲೂಕು ನಿಲಜಿಯ ಹಸರೆತೋಟದ ಕೆಪಿಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ನದಿಇಂಗಳಗಾಂವ ಪೇರಲತೋಟದ ಪ್ರಾಥಮಿಕ ಶಾಲೆಗೆ ತಲಾ ಐದು ಹಾಗೂ ಅದೇ ತಾಲ್ಲೂಕಿನ ತೀರ್ಥ ಗ್ರಾಮದ ಶಾಲೆಗೆ ಮೂರು ಕೊಠಡಿಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಮಹಿಷವಾಡಗಿ ಗ್ರಾಮದಲ್ಲಿ ಎಂಟು ಕೊಠಡಿಗಳನ್ನು ಕಟ್ಟಿಸಲಾಗುತ್ತಿದೆ.
ಧಾರವಾಡದಲ್ಲಿ ಕೋಲ್ ಇಂಡಿಯಾ ಕಂಪನಿ, ₹ 15 ಕೋಟಿ ವೆಚ್ಚದಲ್ಲಿ 120 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ನೆರವಾಗಿದೆ. ಎಂಟಿಪಿಸಿ ಕಂಪನಿ 2 ಸಾವಿರ ಡೆಸ್ಕ್‌ಗಳನ್ನು ನೀಡಿದೆ. ಮೈಸೂರು ಜಿಲ್ಲೆಯಲ್ಲೂ ಶಾಲೆಗಳ ನಿರ್ಮಾಣ, ದುರಸ್ತಿಗೆ ಸಿಎಸ್‌ಆರ್ ನಿಧಿ ಬಂದಿದೆ. ಆದರೆ, ಇದು ಪ್ರವಾಹದಿಂದ ಹಾನಿಗೀಡಾದ ಶಾಲೆಗಳಿಗಷ್ಟೇ ಸೀಮಿತವಾಗಿಲ್ಲ.
‘ಶಿಥಿಲಗೊಂಡ ಕಟ್ಟಡ ಕೆಡವಿ, ಹೊಸದಾಗಿ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. ಕಾಂಪೌಂಡ್, ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ, ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಆರ್‌ಬಿಐ ಮೈಸೂರು, ಎಲ್ ಅಂಡ್ ಟಿ, ಕಲಿಸು ಫೌಂಡೇಷನ್, ಆಟೊಮೋಟಿವ್ ಆ್ಯಕ್ಸೆಲ್ಸ್, ಇನ್ಫೊಸಿಸ್, ಐಟಿಸಿ ಸೇರಿದಂತೆ ಹಲವು ಸಂಸ್ಥೆಗಳು ನೆರವು ನೀಡಿವೆ’ ಎಂದು ಡಿಡಿಪಿಐ ಪಾಂಡುರಂಗ ಮಾಹಿತಿ ನೀಡಿದರು.
ಇನ್ಫೊಸಿಸ್ ಫೌಂಡೇಷನ್, ಕೊಡಗಿನ ಜಂಬೂರಿನಲ್ಲಿ 200 ಮನೆಗಳನ್ನು ನಿರ್ಮಿಸುತ್ತಿದೆ. ಅಮೆರಿಕದ ಅಕ್ಕ ಸಂಘಟನೆಯೂ ಶಾಲಾ ನಿರ್ಮಾಣಕ್ಕೆ ನೆರವು ನೀಡಿದೆ.
ಇವನ್ನೂ ಓದಿ
*ಒಳನೋಟ: ಮೋಹಕ ಮಳೆಗಾಲ ಮಾರಕವಾಯಿತು
*ಒಳನೋಟ: ಇನ್ನೂ ಕೈ ಸೇರಿಲ್ಲ ಪರಿಹಾರದ ಹಣ
*ಒಳನೋಟ: ಪುನರ್ವಸತಿಗೆ ಸರ್ಕಾರದ ನಿರ್ಲಕ್ಷ್ಯ
*ಒಳನೋಟ: ಈಗಲೂ ಸಮುದಾಯ ಭವನವೇ ಆಸರೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.